ಜಿದ್ದಾಜಿದ್ದಿನ ಅಖಾಡಕ್ಕೆ ಸಾಕ್ಷಿಯಾಗಲಿದೆ ಶಿವಮೊಗ್ಗ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳು
ಶಿವಮೊಗ್ಗ, ಎ. 24: ವಿಧಾನಸಭೆ ಚುನಾವಣೆ ನಾಮಪತ್ರ ಸಲ್ಲಿಕೆ ಕಾರ್ಯಕ್ಕೆ ಮಂಗಳವಾರ ಅಂತಿಮ ತೆರೆ ಬಿದ್ದಿದೆ. ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಮುಖ ಪಕ್ಷಗಳಾದ ಬಿಜೆಪಿ-ಕಾಂಗ್ರೆಸ್-ಜೆಡಿಎಸ್‍ನಿಂದ ಕಣಕ್ಕಿಳಿಯುತ್ತಿರುವ ಅಭ್ಯರ್ಥಿಗಳ ಸ್ಪಷ್ಟ ಚಿತ್ರಣ ಲಭ್ಯವಾಗುತ್ತಿದೆ. ಬಹುತೇಕ ಎಲ್ಲ ಕ್ಷೇತ್ರಗಳಲ್ಲಿಯೂ ಜಿದ್ದಾಜಿದ್ದಿನ ಅಖಾಡಕ್ಕೆ ವೇದಿಕೆ ನಿರ್ಮಾಣವಾಗಿದ್ದು, ಭಾರೀ ಪೈಪೋಟಿ ಏರ್ಪಡುವುದು ಖಚಿತವಾಗಿದೆ.
ಕೆಲವೆಡೆ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ನಡುವೆ 'ಫೋಟೋ ಫಿನಿಷ್' ಪೈಪೋಟಿಯಿದೆ. ಹಲವೆಡೆ ನೇರ ಹಣಾಹಣಿಯ ಲಕ್ಷಣಗಳು ಕಂಡುಬರುತ್ತಿದ್ದು, ಈ ಹಿಂದಿನ ಚುನಾವಣೆಗಿಂತ ಈ ಬಾರಿ ಅಭ್ಯರ್ಥಿಗಳ ನಡುವೆ ಜಿದ್ದಾಜಿದ್ದಿನ ಫೈಟ್ ಗೋಚರಿಸುತ್ತಿದೆ. ಇದು ಸಾಕಷ್ಟು ಕುತೂಹಲ ಕೆರಳಿಸಿದೆ.
ಕಳೆದ ಚುನಾವಣೆಯಲ್ಲಿ ಬಿಜೆಪಿ-ಕೆಜೆಪಿ ಕಿತ್ತಾಟ, ಆಡಳಿತ ವಿರೋಧಿ ಅಲೆ ಚುನಾವಣೆಯ ಪ್ರಮುಖ ಟ್ರೆಂಡ್‍ಗಳಾಗಿದ್ದವು. ಆದರೆ ಈ ಚುನಾವಣೆಯಲ್ಲಿ ಆ ರೀತಿಯ ಯಾವುದೇ 'ಟ್ರೆಂಡ್', 'ಅಲೆ' ಮತದಾರರ ವಲಯದಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತಿಲ್ಲ. ಇದರಿಂದ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿಯೂ ಅಭ್ಯರ್ಥಿ, ಪಕ್ಷ, ಸ್ಥಳೀಯ ವಿಷಯಗಳೇ ಸದ್ಯದವರೆಗೂ ಮಹತ್ವ ಪಡೆದುಕೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ 'ಅಲೆ'ಗಳು ಸೃಷ್ಟಿಯಾಗುವ ಸಾಧ್ಯತೆಗಳು ಕಂಡುಬರುತ್ತಿವೆ.
ಶಿವಮೊಗ್ಗ ನಗರ: ಈ ಕ್ಷೇತ್ರದಲ್ಲಿ ಕಳೆದ ಕೆಲ ದಿನಗಳವರೆಗೂ ಬಿಜೆಪಿ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಪ್ರಸನ್ನಕುಮಾರ್ ನಡುವೆಯೇ ಪೈಪೋಟಿ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಮಂಗಳವಾರ ಜೆಡಿಎಸ್ ಅಭ್ಯರ್ಥಿ ಹೆಚ್.ಎನ್.ನಿರಂಜನ್‍ರವರ ನಾಮಪತ್ರ ಸಲ್ಲಿಕೆಗೆ ಸೇರಿದ್ದ ಭಾರೀ ಜನಸ್ತೋಮವು ನೇರ ಸ್ಪರ್ಧೆ ಅಲ್ಲಗಳೆಯುವಂತೆ ಮಾಡಿದೆ. ಬಹುತೇಕ ತ್ರಿಕೋನ ಅಖಾಡಕ್ಕೆ ಕ್ಷೇತ್ರ ಸಾಕ್ಷಿಯಾಗುವ ಲಕ್ಷಣಗಳು ಗೋಚರವಾಗುತ್ತಿವೆ. ಈ ನಡುವೆ ಕಾಂಗ್ರೆಸ್, ಜೆಡಿಎಸ್‍ಗೆ ಬಂಡಾಯ ಅಭ್ಯರ್ಥಿಗಳು ಎದುರಾಗಿದ್ದಾರೆ.
ಭದ್ರಾವತಿ: ವ್ಯಕ್ತಿಗತ ಕಣವೆಂದೇ ಬಿಂಬಿತವಾಗಿರುವ ಈ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಅಪ್ಪಾಜಿಗೌಡ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ.ಸಂಗಮೇಶ್ವರ್ ನಡುವೆ ನೇರ ಸ್ಪರ್ಧೆ ಏರ್ಪಡುವ ಲಕ್ಷಣಗಳಿವೆ. ಆದರೆ ಬಿಜೆಪಿ ಅಭ್ಯರ್ಥಿ ಜಿ.ಆರ್.ಪ್ರವೀಣ್ ಪಟೇಲ್ ನಾನಾ ಕಾರಣಗಳಿಂದ ಕ್ಷೇತ್ರದಲ್ಲಿ ಗಮನ ಸೆಳೆದಿದ್ದಾರೆ. ವ್ಯಕ್ತಿಯಾಧಾರಿತ ಕಣದಲ್ಲಿ ಪಕ್ಷಾಧಾರಿತ ಚುನಾವಣೆಗೆ ಬಿಜೆಪಿ ಮುಂದಾಗಿದೆ. ತ್ರಿಕೋನ ಸ್ಪರ್ಧೆ ಅಲ್ಲಗಳೆಯುವಂತಿಲ್ಲ.
ಶಿವಮೊಗ್ಗ ಗ್ರಾಮಾಂತರ: ಎಸ್.ಸಿ. ವರ್ಗಕ್ಕೆ ಮೀಸಲಾಗಿರುವ ಈ ಕ್ಷೇತ್ರದಲ್ಲಿ ಸದ್ಯ ಜೆಡಿಎಸ್‍ನ ಶಾರದಾ ಪೂರ್ಯನಾಯ್ಕ್ ಹಾಗೂ ಬಿಜೆಪಿಯ ಕೆ.ಬಿ.ಅಶೋಕ್‍ನಾಯ್ಕ್ ನಡುವೆ ಜಿದ್ದಾಜಿದ್ದಿನ ಹೋರಾಟ ಕಂಡುಬರುತ್ತಿದೆ. ಆದರೆ ಈ ಹಿಂದಿನ ಚುನಾವಣೆಗಳನ್ನು ಗಮನಿಸಿದರೆ ಕಾಂಗ್ರೆಸ್ ಪಕ್ಷ ಈ ಕ್ಷೇತ್ರದಲ್ಲಿ ತನ್ನದೆ ಆದ 'ವೋಟ್ ಬ್ಯಾಂಕ್' ಹೊಂದಿರುವುದು ಕಂಡುಬರುತ್ತದೆ. ಇದರಿಂದ ಆ ಪಕ್ಷದ ಅಭ್ಯರ್ಥಿ ಡಾ. ಎಸ್.ಕೆ.ಶ್ರೀನಿವಾಸ್ ಸುಲಭದ ತುತ್ತಲ್ಲ. ಬಿಜೆಪಿ, ಕಾಂಗ್ರೆಸ್‍ಗೆ ಬಂಡಾಯಗಾರರು ಎದುರಾಗಿದ್ದಾರೆ. ಈ ಕ್ಷೇತ್ರದಲ್ಲಿ ನೇರ ಹೋರಾಟವಾ? ತ್ರಿಕೋನ ಸ್ಪರ್ಧೆಯಾ? ಎಂಬುವುದು ಇನ್ನಷ್ಟೆ ಸ್ಪಷ್ಟವಾಗಬೇಕಾಗಿದೆ.
ಶಿಕಾರಿಪುರ: ಬಿಜೆಪಿ ಅಭ್ಯರ್ಥಿಯಾಗಿ ಅಖಾಡಕ್ಕಿಳಿದಿರುವ ಬಿ.ಎಸ್.ಯಡಿಯೂರಪ್ಪ ಕಾರಣದಿಂದ ಈ ಕ್ಷೇತ್ರ ರಾಷ್ಟ್ರ-ರಾಜ್ಯದ ಗಮನ ತನ್ನತ್ತ ಸೆಳೆದಿದೆ. ಜೆಡಿಎಸ್‍ನಿಂದ ವಿ.ಪಿ.ಬಳಿಗಾರ್ ಹಾಗೂ ಕಾಂಗ್ರೆಸ್‍ನಿಂದ ಗೋಣಿ ಮಾಲತೇಶ್ ಕಣದಲ್ಲಿದ್ದಾರೆ. ಮೇಲ್ನೋಟಕ್ಕೆ ಬಿಜೆಪಿ ಮುಂದಿರುವಂತೆ ಭಾಸವಾಗುತ್ತಿದೆ. ಆದರೆ 'ಜೆಡಿಎಸ್ ವೇಗ' ಅಲ್ಲಗಳೆಯುವಂತಿಲ್ಲ. ಕಳೆದ ಬೈ ಎಲೆಕ್ಷನ್‍ನಲ್ಲಿ ಭಾರೀ ಪೈಪೋಟಿವೊಡ್ಡಿದ್ದ ಕಾಂಗ್ರೆಸ್ ನಡೆ ಕುತೂಹಲ ಮೂಡಿಸಿದೆ. ಬಿಜೆಪಿಯ ಎದುರಾಳಿ ಯಾರಾಗಲಿದ್ದಾರೆಂಬುವುದು ಸದ್ಯದ ಚರ್ಚೆಯಾಗಿದೆ.
ತೀರ್ಥಹಳ್ಳಿ: ಜಿಲ್ಲೆಯಲ್ಲಿ 'ತ್ರಿಕೋನ ಹಣಾಹಣಿ' ಏರ್ಪಟ್ಟಿರುವ ಕ್ಷೇತ್ರ ಯಾವುದೆಂದು ಯಾರಾದರೂ ಪ್ರಶ್ನೆ ಮುಂದಿಟ್ಟರೆ, ಎರಡೂ ಮಾತಿಲ್ಲದೆ ಥಟ್ಟನೇ ಉತ್ತರಿಸಬಹುದಾದ ಏಕೈಕ ಕ್ಷೇತ್ರ ಇದಾಗಿದೆ. ಹೌದು. ಕಾಂಗ್ರೆಸ್‍ನ ಕಿಮ್ಮನೆ ರತ್ನಾಕರ್, ಬಿಜೆಪಿಯ ಆರಗ ಜ್ಞಾನೇಂದ್ರ ಹಾಗೂ ಜೆಡಿಎಸ್‍ನ ಆರ್.ಎಂ.ಮಂಜುನಾಥಗೌಡ ನಡುವೆ ಜಿದ್ದಾಜಿದ್ದಿನ ಪೈಪೋಟಿ ಕಂಡುಬರುತ್ತಿದೆ. ಕಳೆದ ಎಲೆಕ್ಷನ್ ರೀತಿಯಲ್ಲಿ ಈ ಕ್ಷೇತ್ರದಲ್ಲಿ ಯಾರೇ ಗೆದ್ದರೂ, ಮತಗಳ ಅಂತರ ಒಂದೆರೆಡು ಸಾವಿರದಷ್ಟು ಎಂಬ ವಾತಾವರಣವಿದೆ.
ಸಾಗರ: ಇಲ್ಲಿ ಕಾಂಗ್ರೆಸ್‍ನ ಕಾಗೋಡು ತಿಮ್ಮಪ್ಪ ಹಾಗೂ ಬಿಜೆಪಿಯ ಹರತಾಳು ಹಾಲಪ್ಪ ನಡುವೆ ನೇರ ಪೈಪೋ ಟಿ ಏರ್ಪಟ್ಟಿದೆ. ಟಿಕೆಟ್ ಸಿಗದ ಕಾರಣದಿಂದ ಕಡೇ ಗಳಿಗೆಯಲ್ಲಿ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಬಿಜೆಪಿ ತೊರೆದು 'ಕೈ' ಹಿಡಿದಿರುವುದು ಚುನಾವಣಾ ಚಿತ್ರಣ ಬದಲಾಗುವಂತೆ ಮಾಡಿದೆ. ಜೊತೆಗೆ ಬಿಜೆಪಿ ಸಾಕಷ್ಟು ಬೆವರು ಹರಿಸುವಂತಾಗಿದೆ. ಕ್ಷೇತ್ರದಲ್ಲಿ 'ಮಾವ (ಕಾಗೋಡು) - ಅಳಿಯ (ಬೇಳೂರು)'ನ ಜೋಡಿ ಮೋಡಿ ಮಾಡಲಿದೆಯಾ? ಎಂಬುವುದು ಈ ಕ್ಷೇತ್ರದ ಸದ್ಯದ ಪ್ರಶ್ನೆಯಾಗಿದೆ.
ಸೊರಬ: 'ಸಹೋದರರ ಸವಾಲ್'ಗೆ ಸಾಕ್ಷಿಯಾಗಿರುವ ಈ ಕ್ಷೇತ್ರದಲ್ಲಿ 'ಕೈ' ಪಾತ್ರವೇನು? ಎಂಬುವುದು ಯಕ್ಷಪ್ರಶ್ನೆಯಾಗಿದೆ. ಜೆಡಿಎಸ್‍ನಿಂದ ಮಧು ಬಂಗಾರಪ್ಪ, ಬಿಜೆಪಿಯಿಂದ ಕುಮಾರ್ ಬಂಗಾರಪ್ಪ, ಕಾಂಗ್ರೆಸ್‍ನಿಂದ ರಾಜು ಎಂ. ತಲ್ಲೂರು ಅಭ್ಯರ್ಥಿಯಾಗಿದ್ದಾರೆ. ಸದ್ಯ ಜೆಡಿಎಸ್-ಬಿಜೆಪಿ ಹೋರಾಟ ಜೋರಿದೆಯಾದರೂ ಕಾಂಗ್ರೆಸ್‍ನ್ನು ಅಲ್ಲಗಳೆಯುವಂತಿಲ್ಲ. ಭಾರೀ ಕಸರತ್ತು ನಡೆಸಿ 'ಕೈ' ಹಿಡಿದು ಟಿಕೆಟ್ ಗಿಟ್ಟಿಸಿಕೊಂಡಿರುವ ರಾಜು ತಲ್ಲೂರುರವರು 'ಸಹೋದರರ ಸವಾಲ್'ನ್ನು ಯಾವ ರೀತಿ ಮೆಟ್ಟಿ ನಿಲ್ಲುತ್ತಾರೆಂಬ ಕುತೂಹಲವಿದೆ.