ಆಂಧ್ರ ಪ್ರದೇಶ: ಸರಕಾರಿ ವೆಬ್ ಸೈಟ್ ನಲ್ಲಿ ಮುಕ್ತವಾಗಿ ಲಭಿಸುತ್ತಿದೆ ಜನರ ಧರ್ಮ, ವಿಳಾಸದ ಮಾಹಿತಿ
ಖಾಸಗಿತನದ ಭದ್ರತೆಯಲ್ಲಿ ಗಂಭೀರ ಲೋಪ
ಆಂಧ್ರಪ್ರದೇಶ ಸರಕಾರ ನಿರ್ವಹಿಸುವ ವೆಬ್ ಸೈಟ್ ಒಂದರಲ್ಲಿ ರಾಜ್ಯದ ಯಾವುದೇ ವ್ಯಕ್ತಿಯ ಮಾಹಿತಿಯನ್ನು, ಜಾತಿ, ಧರ್ಮವನ್ನು ಹಾಗು ಆತ ವಾಸಿಸುತ್ತಿರುವ ಪ್ರದೇಶದ ಬಗ್ಗೆ ಮಾಹಿತಿ ಪಡೆಯಬಹುದು ಎನ್ನುವ ಆಘಾತಕಾರಿ ಮಾಹಿತಿಯೊಂದು ಹೊರಬಿದ್ದಿದೆ. ಶ್ರೀನಿವಾಸ ಕೊಡಲಿ ಎಂಬ ಭದ್ರತಾ ಸಂಶೋಧಕ ವಿಷಯವನ್ನು ಪತ್ತೆಹಚ್ಚಿದ್ದು, ಈ ವೆಬ್ ಸೈಟ್ ಮೂಲಕ 13 ಜಿಲ್ಲೆಗಳ ಎಲ್ಲ 51.66 ಲಕ್ಷ ಕುಟುಂಬಗಳ ಧರ್ಮ ಜಾತಿಗಳನ್ನು ಹಾಗು ವಾಸ ಪ್ರದೇಶವನ್ನು ಗುರುತಿಸಬಹುದು ಎನ್ನಲಾಗಿದೆ.
ಈ ವೆಬ್ ಸೈಟ್ ನ ಡ್ಯಾಶ್ ಬೋರ್ಡ್ ಬಳಸಿಕೊಂಡು, ಮುಸ್ಲಿಂ, ದಲಿತ ಹಾಗೂ ಹಿಂದೂಗಳ ಮನೆಗಳನ್ನು ಅವರು ವಾಸಿಸುವ ಸ್ಥಳವನ್ನು ನಿಖರವಾದ ಅಕ್ಷಾಂಶ ಹಾಗೂ ರೇಖಾಂಶಗಳ ಸಹಾಯದಿಂದ ಗುರುತಿಸಬಹುದಾಗಿದೆ ಎಂದು 'ಹಫ್ಪೋಸ್ಟ್ ಇಂಡಿಯಾ' ಸ್ವತಃ ಪರಿಶೀಲನೆ ಮಾಡಿ ದೃಢೀಕರಿಸಿದೆ. ಇದನ್ನು ಮತ್ತೊಮ್ಮೆ ಪರಿಶೀಲಿಸುವಾಗ ನೋಂದಣಿಯಾದ ಕುಟುಂಬಗಳ ಸಂಖ್ಯೆ ಹೆಚ್ಚಿದೆ. ಅಂದರೆ ಈ ಮಾಹಿತಿ ಪರಿಷ್ಕರಣೆಯಾಗುತ್ತಿದೆ. ಖಾಸಗಿತನದ ವಿಚಾರಕ್ಕೆ ಸಂಬಂಧಿಸಿ ಇದು ಬಹುದೊಡ್ಡ ಲೋಪವಾಗಿದೆ.
ಭಾರೀ ಪ್ರಚಾರ ಪಡೆದಿದ್ದ ಸರ್ಕಾರಿ ಸಬ್ಸಿಡಿ ಯೋಜನೆಯ ಫಲಾನುಭವಿಗಳ ಮಾಹಿತಿಯನ್ನು ಕ್ರೋಢೀಕರಿಸಲಾಗಿದ್ದು, ಆಧಾರ್ ಸಂಖ್ಯೆಯನ್ನು ನಮೂದಿಸಿದರೆ ಸಂಪೂರ್ಣ ವಿವರ ಬಹಿರಂಗವಾಗುತ್ತದೆ. ರಾಜ್ಯ ಸರ್ಕಾರಗಳಿಗೆ ಆಧಾರ್ ವಾಸ್ತವ ದೃಢೀಕರಣವು ಸಾಮಾನ್ಯವಾಗಿ ನಾವು ತಿಳಿದಂತೆ ಬಯೋಮೆಟ್ರಿಕ್ (ಬೆರಳಚ್ಚು) ಆಗಿರದೆ ಆಧಾರ್ ಸಂಖ್ಯೆಯೇ ಆಗಿದೆ. ಇದು ನಾಗರಿಕರ ಖಾಸಗಿತನಕ್ಕೆ ನೈಜ ಅಪಾಯವಾಗಿದ್ದು, ಯುಐಡಿಎಐ ಬಯೋಮೆಟ್ರಿಕ್ ಮಾಹಿತಿ ಸುಭದ್ರವಾಗಿಲ್ಲ ಎಂಬುದನ್ನು ಸೂಚಿಸುತ್ತದೆ. ಆದಾಯ ತೆರಿಗೆ, ಆಸ್ತಿ ದಾಖಲೆ, ಬ್ಯಾಂಕ್ ಸಾಲ, ಫೋನ್, ಬ್ಯಾಂಕ್ ಖಾತೆ ಮತ್ತು ಫಲಾನುಭವಿ ದಾಖಲೆಗಳಿಗೆ ಆಧಾರ್ ಸೀಡಿಂಗ್ ಕಡ್ಡಾಯ ಮಾಡಲಾಗಿದ್ದು, ಈ ಎಲ್ಲಾ ವಿಷಯಗಳು ಸುರಕ್ಷಿತವಲ್ಲವೇ ಎನ್ನುವ ಅನುಮಾನ ಮೂಡಲಾರಂಭಿಸಿದೆ.
ಖಾಸಗಿತನದ ಪ್ರತಿಪಾದಕರ ಪ್ರಕಾರ, ಆಧಾರ್ ಸೀಡಿಂಗ್ ಎನ್ನುವುದು ವಿಸ್ತೃತ ಹಾಗೂ ಹುಡುಕಲು ಸಾಧ್ಯವಾಗುವ ನಾಗರಿಕ ಮಾಹಿತಿಯನ್ನು ಸೃಷ್ಟಿಸಲು ಮಾರ್ಗವನ್ನು ತೋರಿಸಿಕೊಟ್ಟಿದೆ. ನಾಗರಿಕರನ್ನು ಗುರಿ ಮಾಡಲು ಈ ಬೃಹತ್ ಮಾಹಿತಿ ನಿರ್ವಹಣೆಯನ್ನು ದುರುಪಯೋಗ ಮಾಡಬಹುದು ಎಂಬ ಭೀತಿಯನ್ನು ಅವರು ದೃಢಪಡಿಸುತ್ತಾರೆ.
"ಅಲ್ಪಸಂಖ್ಯಾತರ ಸಾರ್ವಜನಿಕ, ಹುಡುಕಬಹುದಾದ, ಡಿಜಿಟಲ್ ಪ್ರೊಫೈಲ್ಗಳನ್ನು ಸೃಷ್ಟಿಸುವ ಮೂಲಕ, ಅವರನ್ನು ದಾಳಿಗೆ ಸುಲಭವಾಗಿ ಗುರಿ ಮಾಡಬಹುದು" ಎಂದು ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ನ ರಾಷ್ಟ್ರೀಯ ಕಾರ್ಯದರ್ಶಿ ಕವಿತಾ ಶ್ರೀವಾಸ್ತವ ಅಭಿಪ್ರಾಯಪಡುತ್ತಾರೆ. ಇವರು ಕೋಮು ಗಲಭೆಗಳ ಅಂಕಿ ಸಂಖ್ಯೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
"ಹಿಂದೆಲ್ಲ ದೊಂಬಿಕೋರರು ದಾಳಿಗೆ ಗುರಿ ಮಾಡಲು ಬೇರೆ ಬೇರೆ ವಿಧಾನ ಬಳಸುತ್ತಿದ್ದರು" ಎಂದು ಶ್ರೀವಾಸ್ತವ ಹೇಳುತ್ತಾರೆ. 1984ರ ಸಿಖ್ ವಿರೋಧಿ ಗಲಭೆ ವೇಳೆ ಸಿಖ್ ಕುಟುಂಬಗಳು ತಮ್ಮ ಮನೆಯ ಮುಂದಿದ್ದ ನಾಮಫಲಕಗಳನ್ನು ಕಿತ್ತುಹಾಕಿ ಹೇಗೆ ನೆರೆಯವರ ಜತೆ ಬೆರೆತಿದ್ದರು ಎನ್ನುವುದನ್ನು ಅವರು ನೆನಪಿಸಿಕೊಳ್ಳುತ್ತಾರೆ. ಮಾರಕಾಸ್ತ್ರಗಳನ್ನು ಹೊಂದಿದ್ದ ಜನ ಮುಸ್ಲಿಂ ಮನೆಗಳನ್ನು ಗುರುತಿಸುವ ಸಲುವಾಗಿ ಮತದಾರರ ಪಟ್ಟಿಯೊಂದಿಗೆ ಬಂದಿದ್ದರು ಎಂದು 2002ರ ಗುಜರಾತ್ ಗಲಭೆ ಸಂತ್ರಸ್ತರು ಹೇಳುತ್ತಾರೆ.
ಡಿಜಿಟಲ್, ಜಿಯೊ ಟ್ಯಾಗ್ ಹೊಂದಿದ ಸಾರ್ವಜನಿಕ ಮಾಹಿತಿಯನ್ನು ಧರ್ಮ ಹಾಗೂ ಜಾತಿ ಮಾನದಂಡದಲ್ಲಿ ಆಂಧ್ರಪ್ರದೇಶದಂತೆ ಎಲ್ಲಿ ಬೇಕಾದರೂ ಹುಡುಕಲು ಅವಕಾಶವಿದ್ದು, ಸಂಭಾವ್ಯ ಸಂತ್ರಸ್ತರನ್ನು ಗುರಿ ಮಾಡಲು ಇದು ಅತ್ಯಂತ ಸರಳ ವಿಧಾನವಾಗಿದೆ. ಇಂತಹ ಕೋಮು ಧ್ರುವೀಕರಣದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಇಂತಹ ಮಾಹಿತಿಯನ್ನು ಮುಕ್ತಗೊಳಿಸುವುದು 'ಮೂರ್ಖತನ' ಎಂದು ಶ್ರೀವಾಸ್ತವ ಹೇಳುತ್ತಾರೆ. ಆದರೆ 1978 ಮತ್ತು 2002ರ ನಿದರ್ಶನಗಳಿಂದ ತಿಳಿದುಬರುವಂತೆ, ಈ ಮಾಹಿತಿಯ ವಿಚಾರದಲ್ಲಿ ಸರ್ಕಾರಗಳ ಮೇಲೆ ಕೂಡಾ ವಿಶ್ವಾಸ ಇಡುವಂತಿಲ್ಲ. ಈ ಬಗೆಯ ಮಾಹಿತಿಯಿಂದ ಯಾರು ಬೇಕಾದರೂ ಸರಳವಾಗಿ ವಾಟ್ಸಪ್ ಮೂಲಕ ಸಂತ್ರಸ್ತರ ಮನೆಗಳನ್ನು ದೊಂಬಿಕೋರರಿಗೆ ಕಳುಹಿಸಲು ಅವಕಾಶವಾಗುತ್ತದೆ. ಇದು ನಿಜಕ್ಕೂ ಭೀತಿ ಹುಟ್ಟಿಸುವಂಥದ್ದು ಎಂದು ಶ್ರೀವಾಸ್ತವ ಅಭಿಪ್ರಾಯಪಡುತ್ತಾರೆ.
ಮಾಹಿತಿ ಅಪಾಯ
ಆಂಧ್ರಪ್ರದೇಶ ಸರ್ಕಾರಿ ವೆಬ್ಸೈಟ್ನ ಡ್ಯಾಷ್ಬೋರ್ಡ್ನ ಮಾಹಿತಿಗಳನ್ನು ಹುಡುಕಿದಾಗ, ಎಲ್ಲ ಫಲಾನುಭವಿಗಳ ದೂರವಾಣಿ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ, ಐಎಫ್ಎಸ್ಸಿ ಸಂಕೇತಗಳು ಲಭ್ಯವಾಗಿವೆ. ಈ ವೆಬ್ಸೈಟ್ ಸುಮಾರು ಒಂದು ಲಕ್ಷ ಫಲಾನುಭವಿಗಳ ಆಧಾರ್ ಸಂಖ್ಯೆಯನ್ನು ಕೂಡಾ ಪ್ರಕಟಿಸಿದೆ ಎಂದು ಕೊಡಲಿ ಹೇಳುತ್ತಾರೆ. ಭಾರತದ ಆಧಾರ್ ಕಾಯ್ದೆ ಅನ್ವಯ ಆಧಾರ್ ಸಂಖ್ಯೆಯನ್ನು ಪ್ರಕಟಿಸುವುದು ಅಪರಾಧ. ಈ ಬಗ್ಗೆ ಯುಐಎಡಿಐ, ರಾಷ್ಟ್ರೀಯ ಪ್ರಮುಖ ಮಾಹಿತಿ ಮೂಲಸೌಕರ್ಯ ಸಂರಕ್ಷಣಾ ಕೇಂದ್ರ ಮತ್ತು ಸರ್ಕಾರದ ಸೈಬರ್ ಸ್ಪಂದನೆ ಕೋಶಕ್ಕೆ ಮಾಹಿತಿ ನೀಡಿ ಎಚ್ಚರಿಸಿದ್ದಾಗಿ ಅವರು ಹೇಳುತ್ತಾರೆ.
"ಅವರಿಗೆ ಮಾಹಿತಿ ನೀಡಿದ ಬಳಿಕ ಆಧಾರ್ ಸಂಖ್ಯೆಗಳನ್ನು ಮಬ್ಬುಗೊಳಿಸಿದ್ದಾರೆ. ಆದರೆ 50 ಲಕ್ಷ ದೂರವಾಣಿ ಸಂಖ್ಯೆಗಳು ಇಂದಿಗೂ ಈ ಸೈಟ್ನಲ್ಲಿ ಸಾರ್ವಜನಿಕರಿಗೆ ಲಭ್ಯ. ಹೊಸ ಮಾಹಿತಿಗಳನ್ನು ವೆಬ್ಸೈಟ್ಗೆ ಅಪ್ಲೋಡ್ ಮಾಡಿದಾಗ ಸಾಮಾನ್ಯವಾಗಿ ಅಧಿಕಾರಿಗಳು ಆಧಾರ್ ಸಂಖ್ಯೆ ಮಬ್ಬುಗೊಳಿಸಲು ಮರೆಯುತ್ತಾರೆ" ಎಂದವರು ವಿವರಿಸುತ್ತಾರೆ. ವೆಬ್ಸೈಟ್ನಲ್ಲಿ ಸದ್ಯಕ್ಕೆ ಇರುವ ಮಾಹಿತಿ ಆಧಾರದಲ್ಲಿ ಬ್ಯಾಂಕ್ ಖಾತೆಗಳ ಮಾಹಿತಿ ತಿಳಿಯಬಹುದು.
ಆಧಾರ್ ಮಾಹಿತಿಯ ಉಸ್ತುವಾರಿ ಹೊಂದಿರುವ ಯುನಿವರ್ಸೆಲ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (ಯುಐಡಿಎಐ) ಸಮರ್ಥಿಸುವಂತೆ, ವ್ಯಕ್ತಿಗಳ ಮಾಹಿತಿ ಕಲೆಹಾಕಲು ಆಧಾರ್ ಬಳಸುವಂತಿಲ್ಲ. ಪ್ರಾಧಿಕಾರ ಪದೇ ಪದೇ ಸಾರ್ವಜನಿಕ ಹೇಳಿಕೆ ನೀಡುವಂತೆ, ಇದು ಕೇವಲ ಜನಸಂಖ್ಯಾ ಮಾಹಿತಿ ಮತ್ತು ಬಯೋಮೆಟ್ರಿಕ್ಸ್ ಮಾತ್ರ. ಯಾವುದೇ ಗ್ರಾಹಕರ ಅಥವಾ ಫಲಾನುಭವಿಗಳ ಸಮಗ್ರ ಮಾಹಿತಿಯನ್ನು ನಾವು ಹೊಂದುವುದೂ ಇಲ್ಲ ಅಥವಾ ಬೇರೆಯವರಿಗೆ ಹೊಂದಲು ಅವಕಾಶವನ್ನೂ ನೀಡುವುದಿಲ್ಲ ಎಂದು ಯುಐಡಿಎಐ ಹೇಳಿತ್ತು.
ಯುಐಡಿಎಐ ಹೇಳುವಂತೆ ಆಧಾರ್ ಮಾಹಿತಿಯನ್ನು ಹಲವು ಸಂದರ್ಭಗಳಲ್ಲಿ ವಿಕೇಂದ್ರೀಕರಣಗೊಳಿಸಲಾಗಿದೆ ಅಥವಾ ವಿವಿಧ ಡಾಟಾಬೇಸ್ಗಳಲ್ಲಿ ಚದುರಿಸಲಾಗಿದೆ. ಒಂದೇ ಕಡೆ ಈ ಮಾಹಿತಿ ದೊರೆಯುವುದಿಲ್ಲ ಎನ್ನುವುದು ಅವರ ವಾದ. ಆದರೆ ಈ ವಾದವನ್ನು ಖಾಸಗಿತನದ ಸಂಶೋಧಕರು ಅಲ್ಲಗಳೆಯುತ್ತಾರೆ. "ನೀವು ವಿಶಿಷ್ಟ ಗುರುತಿನ ಸಂಖ್ಯೆಯನ್ನು ಪಡೆದು, ವಿವಿಧ ವಲಯಗಳ ಮಾಹಿತಿಗಳನ್ನು ಸಂಗ್ರಹಿಸಲು ಅದನ್ನು ಬಳಸಿಕೊಂಡಲ್ಲಿ, ವಿಕೇಂದ್ರೀಕೃತ ಮಾಹಿತಿ ತನ್ನ ಅರ್ಥ ಕಳೆದುಕೊಳ್ಳುತ್ತದೆ" ಎಂದು ಅಮೆರಿಕದ ಸಾರ್ವಜನಿಕ ಹಿತಾಸಕ್ತಿ ಸಂಶೋಧನೆ ಸಮೂಹವಾದ ವರ್ಲ್ಡ್ ಪ್ರೈವಸಿ ಫೋರಂ ಆಡಳಿತ ನಿರ್ದೇಶಕ ಪಾಮ್ ಡಿಕ್ಸನ್ ಹೇಳುತ್ತಾರೆ.
ಆಂಧ್ರಪ್ರದೇಶದಲ್ಲಿ ಅಧಿಕಾರಿಗಳು 'ಪೀಪಲ್ಸ್ ಹಬ್' ಎಂಬ ಸಾಫ್ಟ್ ವೇರ್ ಪ್ಲಾಟ್ಫಾರಂ ರಚಿಸಿದ್ದು, ಇದು ವಿವಿಧ ಮಾಹಿತಿ ಪಡೆಯಲು ಆಧಾರ್ ಸಂಖ್ಯೆಯನ್ನು ಬಳಸಿಕೊಂಡಿದೆ. ಅಂದರೆ 29 ವಿಭಿನ್ನ ಇಲಾಖೆಗಳ ಮಾಹಿತಿಗಳನ್ನು ವಿಲೀನಗೊಳಿಸಿದೆ ಎಂದು ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ. ಈ ಇಲಾಖೆಗಳ ಪೈಕಿ ಶಾಲಾ ವಿದ್ಯಾರ್ಥಿ ವೇತನ ಕುರಿತ ಮಾಹಿತಿ, ನಾಗರಿಕರ ಜಾತಿಯ ಮಾಹಿತಿ ಒಳಗೊಂಡಿದ್ದರೆ, ಇನ್ನೊಂದು ಇಲಾಖೆ ಪಿಂಚಣಿ ಮಾಹಿತಿ ಹೊಂದಿದೆ. ಮತ್ತೊಂದು, ಧರ್ಮದ ಮಾಹಿತಿ ಹೊಂದಿದೆ. ಅಂತಿಮವಾಗಿ ಸರ್ಕಾರ ಸ್ಮಾರ್ಟ್ ಪ್ಲಸ್ ಸಮೀಕ್ಷೆ ನಡೆಸಿದ್ದು, ಇದರಲ್ಲಿ ಎಲ್ಲ ಸರ್ಕಾರಿ ಯೋಜನೆಗಳ ಫಲಾನುಭವಿಗಳ ಮನೆಯ ಜಿಯೊಟ್ಯಾಗ್ ರಚಿಸಲಾಗಿದೆ. ಇದನ್ನು ಆ ಮನೆಯಲ್ಲಿ ವಾಸಿಸುವ ವ್ಯಕ್ತಿಗಳ ಆಧಾರ್ ಸಂಖ್ಯೆಯ ಜತೆ ಸಂಪರ್ಕಿಸಲಾಗಿದೆ.
ಅಂದರೆ ಆಧಾರ್ ಸಂಖ್ಯೆಯು ಎಲ್ಲ ವಿಭಿನ್ನ ಮಾಹಿತಿಗಳನ್ನು ಒಂದೆಡೆ ಸೇರಿಸಿ, ಮಾಸ್ಟರ್ ಡಾಟಾಬೇಸ್ ಸೃಷ್ಟಿಸುತ್ತದೆ. ಯಾವುದೇ ವ್ಯಾಖ್ಯಾನಿತ ಮಾನದಂಡವನ್ನು ಬಳಸಿ ಒಂದೇ ಕ್ಲಿಕ್ನಲ್ಲಿ ಅಧಿಕಾರಿಗಳು ಮಾಹಿತಿಗಳನ್ನು ಹುಡುಕಲು ಇದು ಅವಕಾಶ ಮಾಡಿಕೊಡುತ್ತದೆ. ಅದು ಜಾತಿ, ಧರ್ಮ, ಲಿಂಗ, ವಯಸ್ಸು ಅಥವಾ ಭೌತಿಕ ಸ್ಥಳ ಹೀಗೆ ಯಾವ ಅಂಶದ ಬಗ್ಗೆಯೂ ಆಗಿರಬಹುದು. ಈ ಮಾಹಿತಿ ಕಣಜವನ್ನು ಸಾರ್ವಜನಿಕರಿಗೆ ಮುಕ್ತವಾಗಿಸುವ ಮೂಲಕ ಇಂಟರ್ ನೆಟ್ ಸಂಪರ್ಕ ಹೊಂದಿದ ಯಾರು ಬೇಕಾದರೂ ಇದನ್ನು ಬಳಸಲು ಅಧಿಕಾರ ನೀಡಿದಂತಾಗುತ್ತದೆ.