ಪ್ರಮುಖ ಪಕ್ಷಗಳ ಅಭ್ಯರ್ಥಿಗಳ ನಿದ್ದೆಗೆಡುವಂತೆ ಮಾಡಿದ 'ಬಂಡಾಯಗಾರರು'!
ಶಿವಮೊಗ್ಗ, ಎ. 26: ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಕಾರ್ಯ ಪೂರ್ಣಗೊಂಡ ಬೆನ್ನಲ್ಲೆ, ಬುಧವಾರ ಉಮೇದುವಾರಿಕೆ ಅರ್ಜಿಗಳ ಪರಿಶೀಲನೆ ಕೂಡ ಕೊನೆಗೊಂಡಿದೆ. ಈ ನಡುವೆ ಜಿಲ್ಲೆಯ ಕೆಲ ಕ್ಷೇತ್ರಗಳಲ್ಲಿ ನಾನಾ ಕಾರಣಗಳಿಂದ ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ-ಕಾಂಗ್ರೆಸ್-ಜೆಡಿಎಸ್ನ ಅದಿಕೃತ ಅಭ್ಯರ್ಥಿಗಳೆದುರು ಚುನಾವಣಾ ಕಣಕ್ಕಿಳಿದಿರುವ 'ಬಂಡಾಯಗಾರರು' ಸಾಕಷ್ಟು ಕುತೂಹಲ ಕೆರಳಿಸಿದ್ದಾರೆ.
ಎ. 27 ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದು, ಪಕ್ಷದ ಅದಿಕೃತ ಅಭ್ಯರ್ಥಿಗಳೆದುರು ತೊಡೆ ತಟ್ಟಿ ನಿಂತಿರುವ 'ಬಂಡಾಯಗಾರರು' ತಾವು ಸಲ್ಲಿಸಿರುವ ನಾಮಪತ್ರ ಹಿಂಪಡೆದು ಚುನಾವಣಾ ಕಣದಿಂದ ಹಿಂದೆ ಸರಿಯಲಿದ್ದಾರಾ? ಇಲ್ಲ, ಅಖಾಡದಲ್ಲಿ ಉಳಿಯಲಿದ್ದಾರಾ? ಎಂಬಿತ್ಯಾದಿ ಪ್ರಶ್ನೆಗಳು ಪ್ರಮುಖ ರಾಜಕೀಯ ಪಕ್ಷಗಳ ವಲಯದಲ್ಲಿ ಬಿರುಸಿನಿಂದ ನಡೆಯಲಾರಂಭಿಸಿದೆ.
ಇದೆಲ್ಲದರ ನಡುವೆ 'ಬಂಡಾಯಗಾರರ' ಮುನಿಸು ಶಮನಕ್ಕೆ ಪಕ್ಷಗಳ ನಾಯಕರ ತಂಡಗಳು ಕಾರ್ಯೋನ್ಮುಖವಾಗಿವೆ. ಭಿನ್ನರ ಜೊತೆ ಸಮಾಲೋಚನೆ ನಡೆಸಿ, ಭಿನ್ನಾಭಿಪ್ರಾಯ ಶಮನಗೊಳಿಸಲು ಮುಂದಾಗಿವೆ. ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನ ಕಲ್ಪಿಸುವ ಭರವಸೆ ನೀಡುತ್ತಿದ್ದಾರೆ. ಬಿಗಿ ಪಟ್ಟು ಹಿಡಿದಿರುವ ಬಂಡಾಯಗಾರರ ಮನವೊಲಿಕೆಗೆ ಪಕ್ಷದ ವರಿಷ್ಠರು ಹಾಗೂ ಇತರೆ ತಂತ್ರಗಳ ಮೂಲಕ, ನಾಮಪತ್ರ ಹಿಂಪಡೆಯುವಂತೆ ಮನವೊಲಿಸುವ ಯತ್ನಗಳು ನಡೆಯುತ್ತಿರುವ ಮಾಹಿತಿಗಳು ಕೇಳಿಬರುತ್ತಿವೆ.
ಬಿಸಿತುಪ್ಪ: ಕೆಲ ಕ್ಷೇತ್ರಗಳಲ್ಲಿ ಕಣಕ್ಕಿಳಿದಿರುವ ಬಂಡಾಯಗಾರರು, ಮುಂದಿನ ದಿನಗಳಲ್ಲಿ ಪಕ್ಷಗಳ ಅದಿಕೃತ ಅಭ್ಯರ್ಥಿಗಳಿಗೆ ಅಕ್ಷರಶಃ ಬಿಸಿ ತುಪ್ಪವಾಗಿ ಪರಿಣಮಿಸುವುದರ ಜೊತೆಗೆ ಸಾಕಷ್ಟು ಎಡರುತೊಡರಾಗುವುದು ಹಾಗೂ ಗೊಂದಲ ಉಂಟು ಮಾಡುವುದು ಖಚಿತವಾಗಿದೆ. ಮತ್ತೆ ಕೆಲವೊಮ್ಮೆ ಬಂಡಾಯಗಾರರು, ಪಕ್ಷದ ಅಭ್ಯರ್ಥಿಗಳ ಮತಗಳಿಕೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳು ಅಲ್ಲಗಳೆಯುವಂತಿಲ್ಲವಾಗಿದೆ.
'ಟಿಕೆಟ್ ಸಿಗದೆ ಅಥವಾ ಇತರೆ ಕಾರಣ ಮುಂದಿಟ್ಟು ಕೆಲವರು ಪಕ್ಷದ ಅದಿಕೃತ ಅಭ್ಯರ್ಥಿಗಳೆದುರು ಕಣಕ್ಕಿಳಿಯುವ ನಿರ್ಧಾರ ಮಾಡುತ್ತಾರೆ. ಇಂತಹವರನ್ನು ಹೇಗಾದರೂ ಮಾಡಿ ಮನವೊಲಿಸಿ, ಕಣದಿಂದ ದೂರ ಉಳಿಸುವ ಕೆಲಸ ಮಾಡಬಹುದು. ಅವರು ಹಾಕಿರುವ ನಾಮಪತ್ರ ಹಿಂಪಡೆಸಬಹುದು. ಆದರೆ ಕೆಲವೊಮ್ಮೆ ಬಂಡಾಯಗಾರರ ಸ್ಪರ್ಧೆಯ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿರುತ್ತವೆ. ಎದುರಾಳಿಗಳ ಹಸ್ತಕ್ಷೇಪವಿರುತ್ತವೆ. ರಾಜಕೀಯ ತಂತ್ರಗಾರಿಕೆಗಳಿರುತ್ತವೆ.
ಇಂತಹ ಬಂಡಾಯಗಾರರ ಮನವೊಲಿಸುವುದು ಕಷ್ಟ ಸಾಧ್ಯವಾಗುತ್ತದೆ. ಒಟ್ಟಾರೆ ಬಂಡಾಯಗಾರರು ಪಕ್ಷದ ಅದಿಕೃತ ಅಭ್ಯರ್ಥಿಗಳಿಗೆ ಮಗ್ಗಲ ಮುಳ್ಳಾಗಿ ಪರಿಣಮಿಸುತ್ತಾರೆ. ಪಕ್ಷಕ್ಕೆ ಸಾಕಷ್ಟು ಅಡೆತಡೆ ಉಂಟು ಮಾಡುತ್ತಾರೆ. ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟ ವೇಳೆಯಂತೂ ಇವರು ಗಳಿಸುವ ಮತಗಳು ಪಕ್ಷದ ಅಭ್ಯರ್ಥಿಯ ಸೋಲು ಹಾಗೂ ಎದುರಾಳಿಯ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂಬುವುದರಲ್ಲಿ ಎರಡು ಮಾತಿಲ್ಲವಾಗಿದೆ' ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.
ಬಂಡಾಯದ ಬಾವುಟ: ಶಿವಮೊಗ್ಗ ಗ್ರಾಮಾಂತರ, ಶಿವಮೊಗ್ಗ, ಭದ್ರಾವತಿ ಕ್ಷೇತ್ರಗಳಲ್ಲಿ ಪ್ರಮುಖ ಪಕ್ಷಗಳಿಗೆ ಬಂಡಾಯಗಾರರು ಎದುರಾಗಿದ್ದಾರೆ. ಶಿವಮೊಗ್ಗ ಗ್ರಾಮಾಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಎಸ್.ಕೆ.ಶ್ರೀನಿವಾಸ್ ಕರಿಯಣ್ಣಗೆ ದೊಡ್ಡ ಪ್ರಮಾಣದಲ್ಲಿ ಸ್ವ ಪಕ್ಷೀಯರು ಎದುರಾಗಿದ್ದಾರೆ. ಆ ಪಕ್ಷದ ಜಿಲ್ಲಾ ಪರಿಶಿಷ್ಟ ವಿಭಾಗದ ಜಿಲ್ಲಾಧ್ಯಕ್ಷೆ ಜಿ. ಪಲ್ಲವಿ, ಪ್ರಮುಖ ನಾಯಕರಾದ ರವಿಕುಮಾರ್ ಹಾಗೂ ಬಲದೇವ್ಕೃಷ್ಣರವರು ನಾಮಪತ್ರ ಸಲ್ಲಿಸಿದ್ದಾರೆ. ಬಂಡಾಯದ ಬಾವುಟ ಹಾರಿಸಿದ್ದಾರೆ. ಮತ್ತೊಂದೆಡೆ ಇದೇ ಕ್ಷೇತ್ರದಲ್ಲಿ ಬಿಜೆಪಿ ಪಕ್ಷಕ್ಕೂ ಬಂಡಾಯ ಎದುರಾಗಿದ್ದು, ಆ ಪಕ್ಷದ ಮುಖಂಡ ಧೀರರಾಜ್ ಹೊನ್ನವಿಲೆಯವರು ನಾಮಪತ್ರ ಸಲ್ಲಿಸಿದ್ದಾರೆ.
ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ.ಬಿ.ಪ್ರಸನ್ನಕುಮಾರ್ ಎದುರು ಆ ಪಕ್ಷದ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಇಮ್ತಿಯಾಜ್ ಖಾನ್ ಹಾಗೂ ಎಂ. ಖಾಜಾ ಗರೀಬ್ ನವಾಬ್ರವರು ನಾಮಪತ್ರ ಸಲ್ಲಿಸಿದ್ದಾರೆ. ಇದೇ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷಕ್ಕೂ ಬಂಡಾಯದ ಬಿಸಿ ತಾಗಿದ್ದು, ಆ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದ ನರಸಿಂಹಮೂರ್ತಿಯವರು ಉಮೇದುವಾರಿಕೆ ಅರ್ಜಿ ಸಲ್ಲಿಸಿದ್ದಾರೆ. ಭದ್ರಾವತಿಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡ ಸನಾವುಲ್ಲಾರವರು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಒಟ್ಟಾರೆ ಪ್ರಮುಖ ರಾಜಕೀಯ ಪಕ್ಷಗಳಿಂದ ಕಣಕ್ಕಿಳಿದಿರುವ ಬಂಡಾಯ ಅಭ್ಯರ್ಥಿಗಳು ಹಾಗೂ ಅವರ ಮುಂದಿನ ನಡೆ ಸಾಕಷ್ಟು ಕುತೂಹಲ ಕೆರಳುವಂತೆ ಮಾಡಿದೆ. ಎ. 27 ರಂದು ಚುನಾವಣಾ ಆಯೋಗ ಪ್ರಕಟಿಸಲಿರುವ ಕಣದಲ್ಲಿ ಉಳಿದಿರುವ ಅಂತಿಮ ಅಭ್ಯರ್ಥಿಗಳ ಪಟ್ಟಿಯತ್ತ ರಾಜಕೀಯ ಕುತೂಹಲಿಗಳ ಚಿತ್ತ ನೆಟ್ಟಿದೆ.
'ಮುನಿದವರ' ತಲೆನೋವು..!
'ಬಂಡಾಯಗಾರರ' ಜೊತೆಗೆ ನಾನಾ ಕಾರಣಗಳಿಂದ 'ಮುನಿಸಿಕೊಂಡು' ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿರುವ ಹಾಗೂ ಬೇರೆ ಪಕ್ಷಗಳ ಕದ ತಟ್ಟುತ್ತಿರುವ ನಾಯಕರು ಕೂಡ ಕೆಲ ಅಭ್ಯರ್ಥಿ ಮತ್ತವರ ಪಕ್ಷಗಳಿಗೆ ತಲೆನೋವಾಗಿ ಪರಿಣಮಿಸಿದ್ದಾರೆ. ಇಂತಹ ನಾಯಕರ ಮುನಿಸು ಶಮನಕ್ಕೆ ಅಭ್ಯರ್ಥಿಗಳು ಹಾಗೂ ಹಿರಿಯ ನಾಯಕರು ಸಾಕಷ್ಟು ಕಸರತ್ತು ನಡೆಸುತ್ತಿದ್ದಾರೆ. ಗುಪ್ತ ಸ್ಥಳಗಳಲ್ಲಿ ಅವರನ್ನು ಭೇಟಿಯಾಗಿ ಗೊಂದಲ ಸರಿಪಡಿಸುವ ಕೆಲಸ ನಡೆಸುತ್ತಿದ್ದಾರೆ. ಪಕ್ಷ ತೊರೆಯದಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ.
ಒಂದೆಡೆ ಅಭ್ಯರ್ಥಿ ಮತ್ತು ರಾಜಕೀಯ ಪಕ್ಷಗಳು ಮತದಾರರ ಮನವೊಲಿಸಿಕೊಳ್ಳಲು ನಾನಾ ಕಾರ್ಯತಂತ್ರ ನಡೆಸುತ್ತಿದ್ದಾರೆ. ಬೆವರು ಹರಿಸುತ್ತಿದ್ದಾರೆ. ಇದರ ಜೊತೆ ಜೊತೆಗೆ ಬಂಡಾಯಗಾರರು, ಮುನಿಸಿಕೊಂಡವರನ್ನು ಒಲಿಸಿಕೊಳ್ಳುವ ಕಸರತ್ತು ನಡೆಸಬೇಕಾಗಿದೆ. ಇದು ಬಹುತೇಕ ಅಭ್ಯರ್ಥಿಗಳಿಗೆ ಅತ್ಯಂತ ಸವಾಲಿನ ಕಾರ್ಯವಾಗಿ ಪರಿಣಮಿಸಿದೆ.