ಕಾಡುವ ನೆನಪುಗಳ ಸಿಜಿಕೆ..
ಸಿಜಿಕೆಯವರ ವೈಚಾರಿಕ ನಿಲುವುಗಳಷ್ಟೇ ಮೊನಚಾದುದು ಅವರ ಪ್ರತಿಭೆಯ ಪ್ರಖರತೆಯೂ. ಅವರು ರಂಗಭೂಮಿಯ ಒಳಹೊರಗುಗಳನ್ನೆಲ್ಲ ಬಲ್ಲವರಾಗಿದ್ದರು. ಸಾಹಿತ್ಯ, ರಂಗಕೃತಿ, ಅಭಿನಯ ಕಲೆ, ಬೆಳಕು, ಪ್ರಸಾಧನ, ಪರಿಕರ, ಸಂಗೀತ, ಪ್ರೇಕ್ಷಕರು-ಹೀಗೆ ರಂಗಭೂಮಿಯ ಒಳಗುಹೊರಗುಗಳಲ್ಲೆಲ್ಲ ಸುಳಿದಾಡಿ ಅವುಗಳ ನಾಡಿಮಿಡಿತ ಕಂಡುಕೊಂಡಿದ್ದ ಸಿಜಿಕೆ ರಂಗಭೂಮಿಯ ನವಮಾಂತ್ರಿಕನಂತಿದ್ದರು. ಮಾಂತ್ರಿಕನೆಂದರೆ ಇಂದ್ರಜಾಲದಿಂದ ಪ್ರೇಕ್ಷಕರನ್ನು ಸಮ್ಮೋಹಿತರನ್ನಾಗಿಸುವ ಜಾದೂಗಾರನಾಗಿರಲಿಲ್ಲ. ಪ್ರೇಕ್ಷಕರನ್ನು ಸಾಂಪ್ರದಾಯಿಕ ರಸಪ್ರಜ್ಞೆಯ ರಾಗರಂಜನೆಗಳ ಸ್ತರದಿಂದ ಮೇಲೆತ್ತಿ ಜಾಗೃತರನ್ನಾಗಿಸುವ, ವಿಚಾರವಂತರನ್ನಾಗಿಸುವಂಥ ರಂಗಪ್ರಯೋಗಗಳ ನವಮಾಂತ್ರಿಕರಾಗಿದ್ದರು ಅವರು.
‘‘ರೈಲು ಸೇತುವೆಯ ಮೇಲೆ ಬಂದಿತ್ತು. ಕೆಳಗೆ ಕಾವೇರಿ ಜುಳುಜುಳು ನಿನಾದ ಮಾಡುತ್ತ ಹರಿಯುತ್ತಿದ್ದಳು. ತಾಯಿ ಸೊಂಟದಿಂದ ಎಲೆಅಡಿಕೆ ಸಂಚಿ ತೆಗೆದು ಅದರೊಳಗಿಂದ ನಾಲ್ಕಾಣೆಯ ಒಂದು ಪಾವಲಿಯನ್ನು ಪಕ್ಕದಲ್ಲಿ ಕುಳಿತಿದ್ದ ಮಗನ ಕೈಯಲ್ಲಿತ್ತು- ‘ಮಗ, ಕಾವೇರಮ್ಮಂಗೆ ಮುಡುಪಾಕೋ’ ಎಂದು ಮಗನ ಕೈಯಿಂದ ಪಾವಲಿಯನ್ನು ನದಿಗೆ ಹಾಕಿಸಿದಳು. ಆ ತಾಯಿ ಮಗುವನ್ನು ಪೋಲಿಯೊ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗುತ್ತಿದ್ದಳು.’’
ಆ ಮಗುವೇ ಮುಂದೆ ಪುಟಿವ ಜೀವನೋತ್ಸಾಹದಿಂದ ಕನ್ನಡ ರಂಗಭೂಮಿಯಲ್ಲಿ ತ್ರಿವಿಕ್ರಮನಾಗಿ ಬೆಳೆದ ಸಿಜಿಕೆ ಕಳೆದ ಶತಮಾನದ ಎಂಬತ್ತರ ದಶಕದ ಕೊನೆಯಲ್ಲಿ ಈ ಅಂಕಣಕಾರ ಪತ್ರಿಕೆಯೊಂದರ ಸಂದರ್ಶನಕ್ಕೆ ಹೋದಾಗ ಸಿಜಿಕೆ ತಮ್ಮ ಬಾಲ್ಯವನ್ನು ನೆನಪಿಸಿಕೊಂಡದ್ದು ಹೀಗೆ. ಮಗನಿಗೆ ಗುಣವಾಗಲೆಂದು ತಾಯಿ ಈ ರೀತಿ ಕಾವೇರಿಗೆ ಹರಕೆ ಹೊತ್ತಿದ್ದಳಂತೆ. ತಿಂಗಳು, ಮೂರು ತಿಂಗಳಿಗೊಮ್ಮೆ ಬೆಂಗಳೂರಿಗೆ ಚಿಕಿತ್ಸೆಗಾಗಿ ಕರೆದೊಯ್ಯುವಾಗಲೆಲ್ಲ ತಾಯಿ ಹೀಗೆ ಮಾಡುತ್ತಿದ್ದಳಂತೆ.
ಅಂದು ಆ ಮಾತುಗಳನ್ನಾಡುವಾಗ ಸಿಜಿಕೆ ಹೆಬ್ಬೆರಳು-ತೋರು ಬೆರಳುಗಳ ಮಧ್ಯೆ ನಿಗಿ ಬೆಂಕಿಯ ಸಿಗರೇಟು ಹಿಡಿದು ಎಂದಿನ ಧ್ಯಾನ ಮುದ್ರೆಯಲ್ಲೇ ಬಾಲ್ಯದಲ್ಲಿ ಕಳೆದುಹೋಗಿದ್ದರು. ಆ ವೇಳೆಗೆ ಅವರು ಬಹುದೂರ ಸಾಗಿ ಬಂದಿದ್ದರು. ‘‘ನೋಡಿ ಈಗ ಜ್ಞಾಪಿಸಿಕೊಂಡರೆ ಅದೆಲ್ಲ ಮೂಢನಂಬಿಕೆ ಅನ್ಸುತ್ತೆ. ನನ್ನ ತಾಯಿ ಹಳ್ಳಿ ಹೆಂಗಸು. ನನ್ನ ಮೇಲಿನ, ಮಗ ಚೆನ್ನಾಗಿ ಆಗಬೇಕು ಅನ್ನೋ ಅವಳ ಪ್ರೀತಿ ಮುಂದೆ ನಮ್ಮ ಈ ವಿಚಾರಗಳೆಲ್ಲ ಢೋಂಗಿ ಅನ್ಸುತ್ತೆ....’’
ಕಳೆದ ವಾರ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾದ ಹಳೆಯ ಗೆಳೆಯ ಲೋಕೇಶ್ ಸಿಜಿಕೆ ರಾಷ್ಟ್ರೀಯ ರಂಗೋತ್ಸವದ ವಿಷಯ ತಿಳಿಸಿದಾಗ ಸಿಜಿಕೆ ಅವರೊಂದಿಗೆ ಒಂದೆರಡು ಸಂದರ್ಭಗಳಲ್ಲಿ ಕಳೆದ ಕೆಲವು ಗಂಟೆಗಳು ಮರುಕಳಿಸಿದಾಗ ಅವರ ತಾಯಿ ನೆನಪಾದದ್ದು ಹೀಗೆ. ಬ್ರೆಕ್ಟನ ‘ತಾಯಿ’ಯ ಹಾಗೆ, ಗಾರ್ಕಿಯ ‘ತಾಯಿ’ಯ ಹಾಗೆ ಸಿಜಿಕೆ ತಾಯಿಯೂ...
ಕನ್ನಡ ಹವ್ಯಾಸಿ ರಂಗಭೂಮಿಯ ಸುವರ್ಣಾಕ್ಷರದ ದಿನಗಳು ಎನ್ನಬಹುದಾದ ಕಳೆದ ಶತಮಾನದ 70-80ರ ದಶಕಗಳ ಕನ್ನಡ ರಂಗಭೂಮಿ ಇತಿಹಾಸದ ಬಂಗಾರದ ಪುಟ ಸಿಜಿಕೆ. ಇದು ಅವರ ರಂಗಪ್ರಯೋಗಗಳು ಮತ್ತು ರಂಗ ಚಳವಳಿಯ ಕಾರ್ಯಚಟುವಟಿಕೆಗಳನ್ನಷ್ಟೆ ಗಮನಿಸಿದ ಅಭಿಪ್ರಾಯವಲ್ಲ. ಅವರ ವ್ಯಕ್ತಿತ್ವ ಮತ್ತು ಪ್ರತಿಭೆ ಒಟ್ಟಾಗಿಯೇ ಆ ದಿನಗಳಲ್ಲಿ ಬೀರಿದ ಪ್ರಭಾವ ಮತ್ತು ಯುವಮನಸ್ಸುಗಳಲ್ಲಿ ಉಂಟುಮಾಡಿದ ಜಾಗೃತಿಯಿಂದ ಹೆಚ್ಚು ಮುಖ್ಯವಾಗುತ್ತದೆ. ಮಾನವೀಯತೆ ಮುಖ್ಯವಾಗಿದ್ದ ಅವರ ವ್ಯಕ್ತಿತ್ವವನ್ನು ಕುರಿತು ಇವತ್ತು ಯೋಚಿಸಿದಾಗ ಆ ತಾಯಿಯ ಹರಕೆ, ಕಾವೇರಿ ಎಲ್ಲವೂ ಸಿಜಿಕೆ ಬದುಕಿನ ರೂಪಕಗಳಂತೆ ಕಾಣುತ್ತವೆ. ಮಂಡ್ಯದಲ್ಲಿ ಹುಟ್ಟಿ (27 ಜೂನ್ 1950) ಮೈಸೂರು, ಬೆಂಗಳೂರು ಗಳಲ್ಲಿ ವಿದ್ಯಾಭ್ಯಾಸ ಮಾಡಿದ ಸಿ.ಜಿ.ಕೃಷ್ಣಸ್ವಾಮಿಯವರ ಪಠ್ಯದ ಓದು ವಿಶೇಷವಾಗಿ ಅರ್ಥ ಶಾಸ್ತ್ರ.
ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅರ್ಥ ಶಾಸ್ತ್ರದ ಅಧ್ಯಾಪಕರೂ ಆದರು. ಅಧ್ಯಾಪನ ಸೀಮಿತ ಕಾರ್ಯಕ್ಷೇತ್ರವಾದರೆ ರಂಗಭೂಮಿಯನ್ನು ವಿಶಾಲ ಕಾರ್ಯಕ್ಷೇತ್ರವಾಗಿಸಿಕೊಂಡರು. ಪಾಠ ಮಾಡುತ್ತಿದ್ದ ವಿಶ್ವವಿದ್ಯಾನಿಲಯದ ಪ್ರಾಕಾರಕ್ಕಿಂತ ರವೀಂದ್ರ ಕಲಾಕ್ಷೇತ್ರದ ಪ್ರಾಕಾರದೊಳಗಿರುತ್ತಿದ್ದುದೇ ಹೆಚ್ಚು. ಅವರೊಳಗಣ ಮಾನವೀಯ ತುಡಿತಗಳ ಅಭಿವ್ಯಕ್ತಿಗೆ ರಂಗಭೂಮಿಯಂಥ ಎರಡು ಕೈಗಳ ಬೀಸು ಹರಹು ಅಗತ್ಯವೆನಿಸಿರ ಬೇಕು. ಹಿಂದುಳಿದ ವರ್ಗದ ಕುಟುಂಬದಲ್ಲಿ ಜನಿಸಿದ ಸಿಜಿಕೆ ಬಾಲ್ಯದಲ್ಲಿ ಆ ನೋವುಗಳನ್ನೆಲ್ಲ ಕಂಡುಂಡು ಬೆಳೆದವರು. ಮಾನವ ಘನತೆ, ಆತ್ಮಗೌರವ ಅವರಿಗೆ ಪ್ರಿಯವಾಗಿದ್ದ ಜೀವನ ಮೌಲ್ಯಗಳು. ಎಂದೇ ವರ್ಗಮುಕ್ತ, ಜಾತಿಮುಕ್ತ ಸಮಾಜದ ಕನಸು ಕಂಡವರು. ಮಾನವೀಯತೆ ಪರ ದನಿ ಎತ್ತಿದ ಹೋರಾಟಗಾರರು. ಚಿಂತನೆಯಲ್ಲೂ ರಂಗಭೂಮಿಯ ಕೆಲಸದಲ್ಲೂ ಎಡಪಂಥದತ್ತ ಹೆಚ್ಚು ಒಲವು.
ಸಿಜಿಕೆಯವರ ವೈಚಾರಿಕ ನಿಲುವುಗಳಷ್ಟೇ ಮೊನಚಾದುದು ಅವರ ಪ್ರತಿಭೆಯ ಪ್ರಖರತೆಯೂ. ಅವರು ರಂಗಭೂಮಿಯ ಒಳಹೊರಗುಗಳನ್ನೆಲ್ಲ ಬಲ್ಲವರಾಗಿದ್ದರು. ಸಾಹಿತ್ಯ, ರಂಗಕೃತಿ, ಅಭಿನಯ ಕಲೆ, ಬೆಳಕು, ಪ್ರಸಾಧನ, ಪರಿಕರ, ಸಂಗೀತ, ಪ್ರೇಕ್ಷಕರು-ಹೀಗೆ ರಂಗಭೂಮಿಯ ಒಳಗುಹೊರಗುಗಳಲ್ಲೆಲ್ಲ ಸುಳಿದಾಡಿ ಅವುಗಳ ನಾಡಿಮಿಡಿತ ಕಂಡುಕೊಂಡಿದ್ದ ಸಿಜಿಕೆ ರಂಗಭೂಮಿಯ ನವಮಾಂತ್ರಿಕನಂತಿದ್ದರು. ಮಾಂತ್ರಿಕನೆಂದರೆ ಇಂದ್ರಜಾಲದಿಂದ ಪ್ರೇಕ್ಷಕರನ್ನು ಸಮ್ಮೋಹಿತರನ್ನಾಗಿಸುವ ಜಾದೂಗಾರನಾಗಿರಲಿಲ್ಲ. ಪ್ರೇಕ್ಷಕರನ್ನು ಸಾಂಪ್ರದಾಯಿಕ ರಸಪ್ರಜ್ಞೆಯ ರಾಗರಂಜನೆಗಳ ಸ್ತರದಿಂದ ಮೇಲೆತ್ತಿ ಜಾಗೃತರನ್ನಾಗಿಸುವ, ವಿಚಾರವಂತರನ್ನಾಗಿಸುವಂಥ ರಂಗಪ್ರಯೋಗಗಳ ನವಮಾಂತ್ರಿಕರಾಗಿದ್ದರು ಅವರು. ‘‘ರಂಗಭೂಮಿ ಪ್ರಗತಿಪರ ಧೋರಣೆಯನ್ನು ಬಿಂಬಿಸಬೇಕು, ಆದರೆ ಅದು ರಾಜಕೀಯ ಪಕ್ಷಗಳ ಘೋಷಣೆಯ ಕೂಗುಮಾರಿಯಾಗಬಾರದು’’ ಎನ್ನುತ್ತಿದ್ದ ಸಿಜಿಕೆ ವೈಯಕ್ತಿಕ ಬದುಕು ಮತ್ತು ಕಲೆ ಎರಡನ್ನೂ ಪ್ರತ್ಯೇಕಿಸಿ ನೋಡಿದವರಲ್ಲ.
ಕಲೆಯಲ್ಲಿ ಬದುಕನ್ನೂ ಬದುಕಿನಲ್ಲಿ ಕಲೆಯನ್ನೂ, ಅದರ ಸ್ಥಾನವನ್ನೂ, ತಮ್ಮ ಪ್ರಯೋಗಗಳ ಮುಖೇನ ನಿರಂತರವಾಗಿ ಅನ್ವೇಷಿಸುತ್ತಿದ್ದ ಸಿಜಿಕೆ ಕರ್ನಾಟಕದ ಹಲವಾರು ರಂಗತಂಡಗಳೊಂದಿಗೆ ತಮ್ಮೀ ತುಡಿತಗಳನ್ನು ಹಲವು ಸ್ತರಗಳಲ್ಲಿ ಹಂಚಿಕೊಂಡು ಕೆಲಸ ಮಾಡಿದ್ದಾರಾದರೂ ಅವರು ಹೆಚ್ಚಾಗಿ ‘ಸಮುದಾಯ’ದ ಸಿಜಿಕೆ ಎಂದೇ ಆದರಣೀಯರು. ರಂಗಭೂಮಿಯನ್ನು ಸಮುದಾಯದ ಮಾಧ್ಯಮವಾಗಿ ಬೆಳೆಸುವ ನಿಟ್ಟಿನಲ್ಲಿ ಅವರಿಟ್ಟ ಮೊದಲ ಹೆಜ್ಜೆ ‘ಸಮುದಾಯ’ ನಾಟಕ ತಂಡದಿಂದಲೇ. ‘ಸಮುದಾಯ’ದ ಸಾಂಘಿಕ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ, ರಂಗಭೂಮಿಯನ್ನು ಸಮುದಾಯದ ಮಾಧ್ಯಮವಾಗಿ ಜನಸಮುದಾಯದ ಹತ್ತಿರಕ್ಕೆ ಕೊಂಡೊಯ್ದ ಕೀರ್ತಿಯಲ್ಲಿ ಪ್ರಸನ್ನ ಮತ್ತು ಸಿಜಿಕೆ ಇಬ್ಬರೂ ಸಮಭಾಜನರು. ಸಮುದಾಯ ತಂಡದ ಸಂಸ್ಥಾಪಕ ಕಾರ್ಯದರ್ಶಿಯಾದ ಸಿ.ಜಿ.ಕೆ ರಂಗಭೂಮಿಯನ್ನು ಪ್ರೊಸೀನಿಯಂಬದ್ಧ ನಾಟಕಪ್ರಯೋಗಗಳ ಸೀಮಿತತೆಯಿಂದ ಮುಕ್ತಗೊಳಿಸಿ ಒಂದು ಚಳವಳಿಯನ್ನಾಗಿ ರೂಪಿಸುವ ಕಾಯಕದಲ್ಲಿ ಮುಂಚೂಣಿಯಲ್ಲಿದ್ದವರು. ಇಂದಿರಾ ಗಾಂಧಿಯವರು ಚಿಕ್ಕಮಗಳೂರು ಚುನಾವಣೆ ಸಂದರ್ಭದಲ್ಲಿ ಫ್ಯಾಶಿಸ್ಟ್ ವಿರೋಧಿ ರ್ಯಾಲಿ, ಪ್ರಗತಿಪರ ವೈಜ್ಞಾನಿಕ ಸಂಸ್ಕೃತಿ ಬೆಳೆಸಲು ಮುವತ್ತು ದಿನಗಳ ಕಾಲ ಕರ್ನಾಟಕದಾದ್ಯಂತ ಜಾಥಾ ಏರ್ಪಡಿಸಿದ್ದು, ರಂಗ ನಿರಂತರ ಕಟ್ಟಿದ್ದು-ಹೀಗೆ ರಂಗಭೂಮಿಯನ್ನು ಅದರ ಪ್ರೊಸೀನಿಯಂ ಸ್ಥಾವರದಿಂದ ಹೊರಕ್ಕೆಳೆದು ಅದಕ್ಕೊಂದು ಜಂಗಮ ಸ್ವರೂಪ ತಂದುಕೊಟ್ಟು ಸಂಚಲನವುಂಟುಮಾಡಿದವರು.
ಸಿಜಿಕೆ ವ್ಯಕ್ತಿತ್ವದ ಪ್ರಧಾನ ಧಾರೆಯಾದ ಶೋಷಣೆ ವಿರೋಧಿ ಬಂಡಾಯ ಪ್ರವೃತ್ತಿ ಹಾಗೂ ಅವರ ರಂಗಪ್ರಯೋಗಗಳ ನಡುವಣ ಒಂದು ಅವಿನಾಭಾವ ಸಂಬಂಧ ವಿಸ್ಮಯಕಾರಿಯಾದುದು. ಅವರ ಈ ನಾಟಕಗಳನ್ನೇ ನೋಡಿ:
1ಬೆಲ್ಚಿ- ಇನ್ನೂರಕ್ಕೂ ಹೆಚ್ಚು ಪ್ರದರ್ಶನ ಕಂಡ ಈ ನಾಟಕ ಬಿಹಾರದ ದಲಿತರ ಮೇಲಿನ ಹಲ್ಲೆಯನ್ನು ಆಧರಿಸಿದ ರಚನೆ.
2.ಸೈಕ್ಲೋನ್-ದಕ್ಷಿಣ ಭಾರತದಲ್ಲಿ ಚಂಡಮಾರುತದಿಂದ ಆದ ಹಾನಿಯನ್ನು ಬಿಂಬಿಸುವ ನಾಟಕ.
3.ಪಂಚ ತಂತ್ರ-ಹೋಟೆಲ್ ಕಾರ್ಮಿಕರ ಬದುಕನ್ನು ಚಿತ್ರಿಸುವ ಈ ನಾಟಕವನ್ನು ಹೋಟೆಲ್ ಕಾರ್ಮಿಕರಿಂದಲೇ ಆಡಿಸಿದರು.
4.ಭಾರತ ದರ್ಶನ-ನಕ್ಸಲೀಯರ ಹತ್ಯೆ ಕುರಿತಂತೆ ನ್ಯಾಯಮೂರ್ತಿ ತಾರ್ಕುಂಡೆಯವರ ವರದಿಯನ್ನಾಧರಿಸಿದ ನಾಟಕ.
5.ಮೇ ಡೇ-ಕೆಂಬಾವುಟ ಉದಯದ ಕಥೆಯ ರಂಗರೂಪ.
ಇವಲ್ಲದೆ, ಪಂಚಮ, ಮಹಾಚೈತ್ರ, ಸುಲ್ತಾನ್ ಟಿಪ್ಪು, ನೀಗಿಕೊಂಡ ಸಂಸ, ಚಿಕ್ಕದೇವ ಭೂಪ, ಮದರ್ ಕರೇಜ್, ಹೀಗೆ ಸಿಜಿಕೆನಿರ್ದೇಶನದ ನಾಟಕಗಳ ಯಾದಿ ಬೆಳೆಯುತ್ತದೆ. ‘ಬೆಲ್ಚಿ’, ‘ಪಂಚತಾರ’, ‘ಅಲ್ಲೆ ಇದ್ದೋರು’ ಬೀದಿ ನಾಟಕಗಳ ಗುಂಪಿಗೆ ಸೇರಿದವು. ನಾಟಕ ‘ಘೋಷಣೆ’ಯಾಗಬಾರದು,‘ಪ್ರಚಾರದ ಸರಕಾಗಬಾರದು’ ಎಂದು ಖಾಸಗಿ ಬೈಠಕ್ಕುಗಳಲ್ಲಿ ಸಿಜಿಕೆಹೇಳುತ್ತಿದ್ದ ರಾದರೂ ಈ ಕೆಲವು ರಂಗಪ್ರಯೋಗಗಳು ಅವರ ಒಳಮನಸ್ಸಿನ ಆ ಆಶಯದಿಂದ ಮುಕ್ತವಾಗಿರಲಿಲ್ಲ.
ಸಿಜಿಕೆ ಪ್ರಯೋಗಶೀಲತೆ ಕನ್ನಡ ಕಥಾ ಪ್ರಪಂಚದತ್ತ ಕಣ್ಣುಹಾಯಿಸಿರುವುದೂ ಉಂಟು. ಕನ್ನಡದಲ್ಲಿ ನಾಟಕಗಳಿಲ್ಲ ಎಂಬ ಒಂದು ಕಾಲಘಟ್ಟದಲ್ಲಿ ಅವರು ಯಶವಂತ ಚಿತ್ತಾಲರ ‘ಅಬೋಲಿನಾ’, ಕುಂವೀ ಅವರ ‘ಬೇಲಿ ಮತ್ತು ಹೊಲ’, ತೇಜಸ್ವಿಯವರ ‘ತಬರನ ಕಥೆ’, ಕೇಶವ ರೆಡ್ಡಿ ಹಂದ್ರಾಳರ ‘ಕಳ್ಳಿಯಲ್ಲಿ ಕೆಂಪು ಹೂವು’, ದೇವನೂರ ಮಹಾದೇವ ಅವರ ‘ಒಡಲಾಳ’ ಮತ್ತು ‘ಕುಸುಮ ಬಾಲೆ’ ಇವೆಲ್ಲವೂ ಸಿಜಿಕೆಯವರ ಕಥೆ/ಕಾದಂಬರಿ ಆಧರಿತ ಯಶಸ್ವೀ ರಂಗಪ್ರಯೋಗಗಳು. ‘ಒಡಲಾಳ’ ನಿರ್ದೇಶಕರಾಗಿ ಸಿಜಿಕೆಯವರ ಮೇರು ಪ್ರಯೋಗ. ಸಿಜಿಕೆಯವರ ಪ್ರತಿಭೆ-ಸಾಮರ್ಥ್ಯಗಳನ್ನು, ಅವರ ಅಂತರಂಗದ ದಲಿತರ ಪರ ತುಡಿತಗಳನ್ನು ಪೂರ್ತಿಯಾಗಿ ಹೀರಿಕೊಂಡ ಈ ನಾಟಕ ಅವರ ಆತ್ಮಾಭಿವ್ಯಕ್ತಿಯೇನೋ ಎನ್ನುವ ಮಟ್ಟಿಗೆ ಅವರ ವ್ಯಕ್ತಿತ್ವದೊಂದಿಗೆ ತಳಕುಹಾಕಿಕೊಂಡ ಪ್ರಯೋಗ.ಇದಕ್ಕೆ ಅವರ ಕೆಳಗಿನ ಮಾತುಗಳಿಗಿಂತ ಬೇರ ಸಮರ್ಥನೆ ಬೇಕಿಲ್ಲ:
‘‘ಈ ಕಥೆ ಹೆಚ್ಚುಕಡಿಮೆ ನನ್ನ ಕುಟುಂಬದ ಕಥೆಯಂತೆ ಇದೆ ಅನ್ನಿಸಿತು. ‘ಒಡಲಾಳ’ದ ಅನುಭವಗಳು ನನ್ನ ಅನುಭವಗಳೂ ಹೌದು. ಸಾಕವ್ವನಲ್ಲಿ ನನ್ನ ತಾಯಿಯನ್ನು ಗುರುತಿಸಿದೆ. ಶಿವು ಪಾತ್ರದಲ್ಲಿ ನನ್ನನ್ನೇ ಗುರುತಿಸಿಕೊಂಡೆ.’’
ಹೀಗೊಂದು ವೈಯಕ್ತಿಕ ಸ್ಪರ್ಶದಿಂದ ದಲಿತರ ಜೀವನದ ವಿರಾಡ್ರೂಪವನ್ನು ರಂಗಕ್ಕೆ ಅತ್ಯಂತ ಪರಿಣಾಮಕಾರಿಯಾಗಿ ತಂದದ್ದು, ಆಗಿನ ಛಮಕ್ ಛಮಕ್ ಉಮಾಶ್ರೀಯೊಳಗಿದ್ದ ಸಾಕವ್ವನನ್ನು ಹೊರತಂದದ್ದು ಸಿಜಿಕೆಯವರ ಪ್ರತಿಭೆಯ ಮೇರು. ‘ಮಹಾಚೈತ್ರ’ ಮತ್ತು ‘ನೀಗಿಕೊಂಡ ಸಂಸ’, ‘ಸುಲ್ತಾನ್ ಟಿಪ್ಪು’ ಸಿಜಿಕೆಯ ಇನ್ನೆರಡು ಮೂರು ಮಹತ್ವದ ಪ್ರಯೋಗಗಳು. ಇವುಗಳಲ್ಲಿ ನಾವು ಕಾಣುವುದು ತುಳಿತಕ್ಕೊಳಗಾದವರಿಗೆ ದನಿಯಾಗುವ ಆಶಯವನ್ನೇ. ಸಿಜಿಕೆಯವರೇ ಹೇಳಿರುವಂತೆ ‘‘ಮಹಾಚೈತ್ರ ದುಡಿಯುವ ವರ್ಗದ ಪರವಾದ ನಾಟಕ. ಶ್ರಮಜೀವಿಗಳೇ ಆ ನಾಟಕದ ನಾಯಕರು. ನಾಡಿನ/ರಾಷ್ಟ್ರದ ಇತಿಹಾಸವನ್ನು ಮುನ್ನಡೆಸಿದವರು ಎಂದರೆ ಈ ಶ್ರಮಜೀವಿ ವರ್ಗದಿಂದ ಬಂದ ನೇತಾರರೇ. ಕಾಲಜ್ಞಾನಿ ಕನಕನೇ ಆಗಲಿ, ಸುಲ್ತಾನ್ ಟಿಪ್ಪುವೇ ಆಗಲಿ ಇವರೆಲ್ಲ ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವರ್ಗದಿಂದ ಬಂದ ಮಹಾನ್ ನಾಯಕರು/ಸಾವಿರ ವರ್ಷ ಕಳೆದರೂ ಅವರು ಹೀರೋಗಳಾಗಿಯೇ ಜನಜೀವನದ ನಡುವೆ ಉಳಿಯುತ್ತಾರೆ.ಅದಕ್ಕಾಗಿ ಆ ನಾಟಕಗಳನ್ನು ನಿರ್ದೇಶಿಸಿದೆ.’’
ತಾಯಿಯ ಹರಕೆ ನಿಷ್ಫಲವಾಗಲಿಲ್ಲ. ದೈಹಿಕ ನ್ಯೂನತೆಗೆ ಇಚ್ಛಾಶಕ್ತಿ ಮಣಿಯಲಿಲ್ಲ. ಮನಸ್ಸು, ಹೃದಯಗಳನ್ನು ಕಾವೇರಿ ಯಂತೆಯೇ ಚಲನಶೀಲವಾಗಿಟ್ಟುಕೊಂಡು, ಕೊನೆಯವರೆಗೂ ಕ್ರೀಯಾಶೀಲರಾಗಿದ್ದುಕೊಂಡು ಬೆಳೆದರು. ಸಿಜಿಕೆ ರಂಗಭೂಮಿ ಕಟ್ಟಿದರು, ಮನರಂಜನೆಯ ರಂಗಭೂಮಿಯನ್ನಲ್ಲ, ಪ್ರತಿಭಟನೆಯ ರಂಗಭೂಮಿಯನ್ನು. ಈಗ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಿಜಿಕೆ ರಾಷ್ಟ್ರೀಯ ರಂಗೋತ್ಸವ ನಡೆಯುತ್ತಿದೆ. ರಂಗೋತ್ಸವದ ಸುದ್ದಿ ತಿಳಿದೊಡನೆಯೇ ಮನಸ್ಸಿನಲ್ಲಿ ನಾ ಕಂಡ ಸಿಜಿಕೆ ಮೆಲುಕು ಶುರುವಾಯಿತು. ಸಾಹಿತಿ-ಕಲಾವಿದರು ಅಪ್ರಿಯವಾದ ಸತ್ಯವನ್ನು ನುಡಿಯಲೇ ಬಾರದು ಎನ್ನುವ ಫ್ಯಾಶಿಸ್ಟ್ ಪ್ರವೃತ್ತಿಯ ಆಡಳಿತದ ಈ ದಿನಗಳಲ್ಲಿ, ದಲಿತರ ಮೇಲೆ, ಅಲ್ಪಸಂಖ್ಯಾತರ ಮೇಲೆ ಬೆಲ್ಚಿಯಂಥ ಘಟನೆಗಳು ಹೆಚ್ಚುತ್ತಿರುವ ಈ ದಿನಗಳಲ್ಲಿ, ಸಾಹಿತಿ ಕಲಾವಿರು ಪ್ರಶಸ್ತಿ ಹಿಂದಿರುಗಿಸಿದ ಈ ಸಂದರ್ಭದಲ್ಲಿ ನಮ್ಮ ರಂಗಭೂಮಿ ತಟಸ್ಥವಾಯಿತಲ್ಲ, ಪ್ರಸನ್ನರದು ಒಂಟಿ ದನಿಯಾಯಿತಲ್ಲ ಎಂದೆನಿಸುತ್ತಿರುವ ಈ ದಿನಗಳಲ್ಲಿ ಸಿಜಿಕೆ ಕಾಡುವ ನೆನಪು...