ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ: 'ಹೈ ಸ್ಪೀಡ್'ನಲ್ಲಿರುವ ಜೆಡಿಎಸ್-ಬಿಜೆಪಿಯನ್ನು ಓವರ್ ಟೇಕ್ ಮಾಡಲಿದೆಯಾ ಕಾಂಗ್ರೆಸ್?
ಶಿವಮೊಗ್ಗ, ಎ. 29: 'ಒಂದೆಡೆ 'ಹುಲ್ಲಿನ ಹೊರೆ ಹೊತ್ತ ಮಹಿಳೆ'ಯ ಓವರ್‍ಟೇಕ್ ಮಾಡಿ, ಮತ್ತೆ ಕ್ಷೇತ್ರದಲ್ಲಿ ಅಸ್ತಿತ್ವ ಕಾಯ್ದುಕೊಳ್ಳಲು 'ಕಮಲ'ದ ಕಸರತ್ತು. ಮತ್ತೊಂದೆಡೆ 'ಹೈ ಸ್ಪೀಡ್'ನಲ್ಲಿರುವ ಇವರಿಬ್ಬರನ್ನು ಹಿಂದಿಕ್ಕಿ ಕ್ಷೇತ್ರ ವಶ ಮಾಡಿಕೊಳ್ಳಲು 'ಕೈ' ಪಾಳೇಯದ ಹೋರಾಟ.
ಇದು, ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಜಿಲ್ಲೆಯ ಏಕೈಕ ವಿಧಾನಸಭಾ ಕ್ಷೇತ್ರವಾದ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಸದ್ಯದ ರಾಜಕೀಯ ಸ್ಥಿತಿ. ಇತರೆಡೆಯಂತೆ ಈ ಕ್ಷೇತ್ರದಲ್ಲಿಯೂ ಚುನಾವಣಾ ಪ್ರಚಾರದ ಕಾವು ಸಖತ್ ಜೋರಾಗಿದೆ. ಪ್ರಮುಖ ರಾಜಕೀಯ ಪಕ್ಷಗಳಾದ ಜೆಡಿಎಸ್, ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ಅಖಾಡಕ್ಕೆ ವೇದಿಕೆ ಸಿದ್ದವಾಗುತ್ತಿದೆ. ಮೂರು ಪಕ್ಷಗಳ ಅಭ್ಯರ್ಥಿಗಳು ಕೂಡ ಕ್ಷೇತ್ರದಾದ್ಯಂತ ಭರ್ಜರಿ ಪ್ರಚಾರ ಕಾರ್ಯದಲ್ಲಿ ತಲ್ಲೀನವಾಗಿದ್ದು, ಮತದಾರರ ಮನವೊಲಿಕೆಗೆ ಸಾಕಷ್ಟು ಕಸರತ್ತು ನಡೆಸುತ್ತಿದ್ದಾರೆ.
ಶೇ. 95 ರಷ್ಟು ಗ್ರಾಮೀಣ ಪ್ರದೇಶ ಹೊಂದಿರುವ ಈ ಕ್ಷೇತ್ರದ, ಮತದಾರರ ನಡೆ ನಿಗೂಢವಾಗಿದೆ. ಮತದಾರರ ಚಿತ್ತ ಯಾರತ್ತ ಎಂಬುವುದು ಊಹೆಗೂ ನಿಲುಕುತ್ತಿಲ್ಲ. ಕಳೆದ ಚುನಾವಣೆ ರೀತಿಯಲ್ಲಿ, ಈ ಬಾರಿ ಕ್ಷೇತ್ರದಲ್ಲಿ ಯಾವುದೇ ಪಕ್ಷದ ಪರ - ವಿರುದ್ದ 'ಅಲೆ'ಗಳೂ ಕಂಡುಬರುತ್ತಿಲ್ಲ. ವ್ಯಕ್ತಿ, ಪಕ್ಷದ ಆಧಾರದ ಮೇಲೆ ಅಭ್ಯರ್ಥಿಗಳು ಮತಯಾಚನೆಯಲ್ಲಿ ತೊಡಗಿದ್ದಾರೆ. ಆದರೆ ಒಳಗೊಳಗೆ ಜಾತಿ ಸಮೀಕರಣದ ಲೆಕ್ಕಾಚಾರವೂ ಜೋರಾಗಿದೆ. ಈ ಕಾರಣದಿಂದಲೇ ಪ್ರಬಲ ಮತದಾರ ವರ್ಗಗಳ ಓಲೈಕೆ ಸದ್ದಿಲ್ಲದೆ ನಡೆಯುತ್ತಿರುವುದು ಸುಳ್ಳಲ್ಲ.
ಪೈಪೋಟಿ: ಸದ್ಯದ ಮಟ್ಟಿಗೆ ಜೆಡಿಎಸ್ ಹಾಗೂ ಬಿಜೆಪಿಯ ನಡುವೆ ತುರುಸಿನ ಸ್ಪರ್ಧೆ ಕಂಡುಬರುತ್ತಿದೆ. ಎರಡೂ ಪಕ್ಷಗಳೂ 'ಓವರ್ ಸ್ಪೀಡ್'ನಲ್ಲಿದ್ದು, ಒಬ್ಬರು ಮತ್ತೊಬ್ಬರನ್ನು ಓವರ್ ಟೇಕ್ ಮಾಡುವ ಯತ್ನದಲ್ಲಿದ್ದಾರೆ. ತಂತ್ರಕ್ಕೆ - ಪ್ರತಿತಂತ್ರ ರೂಪಿಸುತ್ತಿರುವುದು ಕಂಡುಬರುತ್ತಿದೆ. ಆದರೆ ಈ ಎರಡೂ ಪಕ್ಷಗಳೂ, ಕಾಂಗ್ರೆಸ್ ತಂತ್ರಗಾರಿಕೆಯ ಬಗ್ಗೆ ಅಷ್ಟೊಂದು ತಲೆ ಕೆಡಿಸಿಕೊಳ್ಳದಿರುವುದು ವಿಶೇಷವಾಗಿದೆ.
ಇನ್ನೊಂದೆಡೆ ಟಿಕೆಟ್ ವಂಚಿತರ ಅಸಮಾಧಾನ, ಪಕ್ಷದ ಅಭ್ಯರ್ಥಿಯು ಸರ್ಕಾರಿ ಹುದ್ದೆಗೆ ರಾಜೀನಾಮೆ ನೀಡಿದ ಪ್ರಕರಣದಿಂದ ಗೊಂದಲದ ಗೂಡಾಗಿ ಪರಿಣಮಿಸಿದ್ದ ಕಾಂಗ್ರೆಸ್ ಪಕ್ಷದಲ್ಲಿನ ವಾತಾವರಣ ತಿಳಿಗೊಂಡಿದೆ. ಭಿನ್ನಮತೀಯ ನಾಯಕರು ಅಭ್ಯರ್ಥಿಗೆ ಕೈ ಜೋಡಿಸಿದ್ದಾರೆ. ಕ್ಷೇತ್ರದಲ್ಲಿ ತನ್ನದೆ ಆದ ಓಟ್ ಬ್ಯಾಂಕ್ ಹೊಂದಿರುವ ಕಾಂಗ್ರೆಸ್ ಸೋಲಿಸುವುದು ಸುಲಭದ ತುತ್ತಲ್ಲ. ಜೆಡಿಎಸ್ - ಬಿಜೆಪಿ ನಡುವೆ ನೇರ ಹಣಾಹಣಿ ಕಂಡುಬಂದರೂ ತನ್ನದೆ ಆದ ಓಟ್‍ಬ್ಯಾಂಕ್ ಹೊಂದಿರುವ ಕಾಂಗ್ರೆಸ್ ಪಕ್ಷದ ಪೈಪೋಟಿ ಅಲ್ಲಗಳೆಯುವಂತಿಲ್ಲ. ಕಾಂಗ್ರೆಸ್ ಲೆಕ್ಕಾಚಾರದಂತೆ ಮುನ್ನಡೆದರೆ ಕ್ಷೇತ್ರದಲ್ಲಿ 'ತ್ರಿಕೋನ' ಸ್ಪರ್ಧೆ ಏರ್ಪಡುವ ಸಾಧ್ಯತೆಗಳು ಅಲ್ಲಗಳೆಯುವಂತಿಲ್ಲ. ಎರಡೂ ಪಕ್ಷಗಳು ಹೊಂದಿರುವ ನಿರ್ಲಕ್ಷ್ಯದ ಲಾಭವನ್ನೇ ಬಂಡವಾಳವಾಗಿಸಿಕೊಂಡರೂ ಅಚ್ಚರಿಯಿಲ್ಲವಾಗಿದೆ.
ಕುತೂಹಲ: ಎರಡು ಬಾರಿ ಚುನಾವಣಾ ಕಣಕ್ಕಿಳಿದು ಒಮ್ಮೆ ಸೋತು ಮತ್ತೊಮ್ಮೆ ಜಯ ಸಾಧಿಸಿರುವ ಜೆಡಿಎಸ್ ಅಭ್ಯರ್ಥಿ, ಹಾಲಿ ಶಾಸಕಿ ಶಾರದಾ ಪೂರ್ಯನಾಯ್ಕ್‍ರವರು ಕ್ಷೇತ್ರದಲ್ಲಿ ತಮ್ಮದೆ ಆದ ಹಿಡಿತ ಹೊಂದಿದ್ದಾರೆ. ಚಿರ ಪರಿಚಿತರಾಗಿದ್ದಾರೆ. ಇವರೆದುರು ಅಖಾಡಕ್ಕಿಳಿಯುತ್ತಿರುವ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳಿಗಿಬ್ಬರಿಗೂ ಇದು ಪ್ರಥಮ ವಿಧಾನಸಭೆ ಚುನಾವಣೆಯಾಗಿದೆ.
ಆದರೆ ಬಿಜೆಪಿ ಅಭ್ಯರ್ಥಿ ಕೆ.ಬಿ.ಅಶೋಕ್‍ನಾಯ್ಕ್‍ರವರು ರಾಜಕೀಯ ರಂಗಕ್ಕೆ ಹಳಬರಾಗಿದ್ದಾರೆ. ಈ ಹಿಂದೆ ಅವರು ಕ್ಷೇತ್ರ ವ್ಯಾಪ್ತಿಯ ಹಸೂಡಿ ಜಿ.ಪಂ. ಕ್ಷೇತ್ರದಿಂದ, ಜಿಲ್ಲಾ ಪಂಚಾಯತ್ ಗೆ ಆಯ್ಕೆಯಾಗಿದ್ದರು. ಕ್ಷೇತ್ರಕ್ಕೆ ಹೊಸ ಮುಖವೇನಲ್ಲ. ರಾಜಕೀಯ ಕ್ಷೇತ್ರದಲ್ಲಿದ್ದುಕೊಂಡೇ ಇದೀಗ ಶಿಕ್ಷಣ ಕ್ಷೇತ್ರದಲ್ಲಿಯೂ ಹೆಜ್ಜೆಯಿಟ್ಟಿದ್ದಾರೆ.
ಉಳಿದಂತೆ ಕಾಂಗ್ರೆಸ್‍ನ ಡಾ. ಎಸ್. ಕೆ. ಶ್ರೀನಿವಾಸ್ ಕರಿಯಣ್ಣರವರು ಕ್ಷೇತ್ರಕ್ಕೆ ಹೊಸ ಮುಖವಾಗಿದ್ದಾರೆ. ಸರ್ಕಾರಿ ವೈದ್ಯ ವೃತ್ತಿ ತೊರೆದು ರಾಜಕೀಯ ರಂಗ ಪ್ರವೇಶಿಸಿದ್ದಾರೆ. ಆದರೆ ಇವರ ತಂದೆ, ಮಾಜಿ ಶಾಸಕರಾದ ಕರಿಯಣ್ಣರವರು ಕ್ಷೇತ್ರದ ಚಿರ ಪರಿಚಿತ ವ್ಯಕ್ತಿಯಾಗಿದ್ದಾರೆ. ತಂದೆಯ ನಾಮ ಬಲವೇ ಡಾ. ಎಸ್. ಕೆ. ಶ್ರೀನಿವಾಸ್‍ರವರಿಗೆ ಶ್ರೀರಕ್ಷೆಯಾಗಿದೆ. ಒಟ್ಟಾರೆ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಚುನಾವಣಾ ರಾಜಕಾರಣ ಕುತೂಹಲ ಕೆರಳಿಸುತ್ತಿದೆ. ಮುಂದಿನ ದಿನಗಳಲ್ಲಿ ಇನ್ಯಾವ ದಿಕ್ಕು ಪಡೆದುಕೊಳ್ಳಲಿದೆ ಎಂಬುವುದನ್ನು ಕಾದು ನೋಡಬೇಕಾಗಿದೆ.
2008 ರಲ್ಲಿ ಬಿಜೆಪಿ, 2013 ರಲ್ಲಿ ಜೆಡಿಎಸ್..!
ಹೊಳೆಹೊನ್ನೂರು ಕ್ಷೇತ್ರ ಮರೆಯಾಗಿ, ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ಅಸ್ತಿತ್ವ ಬಂದ ನಂತರ ಎರಡು ಚುನಾವಣೆಗಳು ನಡೆದಿದೆ. ಪ್ರಸ್ತುತ ನಡೆಯುತ್ತಿರುವುದು ಮೂರನೇಯ ಚುನಾವಣೆಯಾಗಿದೆ. ಈ ಹಿಂದಿನ ಎರಡು ಚುನಾವಣೆಗಳ ಚಿತ್ರಣ ಗಮನಿಸಿದರೆ, ಒಮ್ಮೆ ಬಿಜೆಪಿ ಹಾಗೂ ಮತ್ತೊಮ್ಮೆ ಜೆಡಿಎಸ್ ಈ ಕ್ಷೇತ್ರದಲ್ಲಿ ಅಧಿಪತ್ಯ ಸಾಧಿಸಿರುವುದು ಕಂಡುಬರುತ್ತದೆ. 2008 ರಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಜೆ.ಕುಮಾರಸ್ವಾಮಿಯವರು 56,979 ಮತ ಪಡೆದು ಆಯ್ಕೆಯಾಗಿದ್ದರು. ಇವರ ಪ್ರತಿಸ್ಪರ್ಧಿಯಾಗಿದ್ದ ಕಾಂಗ್ರೆಸ್ ಅಭ್ಯರ್ಥಿ ಕರಿಯಣ್ಣರವರು 32,714 ಹಾಗೂ 3 ನೇ ಸ್ಥಾನ ಪಡೆದುಕೊಂಡಿದ್ದ ಜೆಡಿಎಸ್ ಅಭ್ಯರ್ಥಿ ಶಾರದಾ ಪೂರ್ಯನಾಯ್ಕ್‍ರವರು 26,644 ಮತ ಗಳಿಸಿದ್ದರು.
2013 ರಲ್ಲಿ ಜೆಡಿಎಸ್ ಅಭ್ಯರ್ಥಿ ಶಾರದಾ ಪೂರ್ಯನಾಯ್ಕ್‍ರವರು 48,639 ಮತ ಪಡೆದು ವಿಧಾನಸಭೆಗೆ ಆಯ್ಕೆಯಾಗಿದ್ದರು. ಇವರ ಪ್ರತಿ ಸ್ಪರ್ಧಿ ಕೆಜೆಪಿಯ ಬಸವಣ್ಯೆಪ್ಪರವರು 38,530 ಮತ ಪಡೆದಿದ್ದರು. 3 ನೇ ಸ್ಥಾನ ಪಡೆದುಕೊಂಡಿದ್ದ ಕಾಂಗ್ರೆಸ್ ಅಭ್ಯರ್ಥಿ ಕರಿಯಣ್ಣರವರು 35,640 ಮತ ಗಳಿಸಿದ್ದರು. ಆದರೆ ಬಿಜೆಪಿ ಅಭ್ಯರ್ಥಿ ಕೆ.ಜಿ.ಕುಮಾರಸ್ವಾಮಿಯವರು ಕೇವಲ 12,435 ಮತ ಪಡೆದಿದ್ದರು.
ಕಣದಲ್ಲಿದ್ದಾರೆ 7 ಅಭ್ಯರ್ಥಿಗಳು
ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಕನಿಷ್ಠ ಅಭ್ಯರ್ಥಿಗಳು ಅಖಾಡದಲ್ಲಿರುವುದು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರವಾಗಿದ್ದು, 7 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಶಾರದಾ ಪೂರ್ಯನಾಯ್ಕ್ (ಜೆಡಿಎಸ್), ಕೆ.ಬಿ.ಅಶೋಕ್‍ನಾಯ್ಕ್ (ಬಿಜೆಪಿ), ಡಾ. ಎಸ್. ಕೆ. ಶ್ರೀನಿವಾಸ್ ಕರಿಯಣ್ಣ (ಕಾಂಗ್ರೆಸ್), ಎಲ್. ರಂಗಸ್ವಾಮಿ (ರಿಪಬ್ಲಿಕ್ ಸೇನಾ), ಎಸ್.ಕೃಷ್ಣ (ಎಂಇಪಿ), ಸ್ವತಂತ್ರ ಅಭ್ಯರ್ಥಿಗಳಾಗಿ ಬಿ.ಎಲ್.ಮಣಿಕಂಠ, ಡಿ. ಮಮತಾ ರಾಣಿಯವರು ಕಣದಲ್ಲಿದ್ದಾರೆ.