ಶಿಕಾರಿಪುರ ವಿಧಾನಸಭಾ ಕ್ಷೇತ್ರ: ಬಿಜೆಪಿಯತ್ತ ಸರ್ವರ ಚಿತ್ತ
ಕಾಂಗ್ರೆಸ್, ಜೆಡಿಎಸ್‍ನಲ್ಲಿ ಯಡಿಯೂರಪ್ಪಗೆ ಯಾರಾಗಲಿದ್ದಾರೆ ಪ್ರತಿಸ್ಪರ್ಧಿ?
ಶಿವಮೊಗ್ಗ, ಮೇ 1: ಬಿಜೆಪಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಘೋಷಿತವಾಗಿರುವ ಬಿ.ಎಸ್.ಯಡಿಯೂರಪ್ಪ ಅಖಾಡಕ್ಕಿಳಿಯುತ್ತಿರುವ ಕಾರಣದಿಂದ, ಜಿಲ್ಲೆಯ ಶಿಕಾರಿಪುರ ಕ್ಷೇತ್ರ ಇಡೀ ರಾಷ್ಟ್ರ ಹಾಗೂ ರಾಜ್ಯದ ಗಮನ ತನ್ನತ್ತ ಸೆಳೆದಿದೆ. ಆದರೆ 2008 ರ ಸಾರ್ವತ್ರಿಕ ಚುನಾವಣೆ ಹಾಗೂ 2014 ರ ಉಪ ಚುನಾವಣೆಯಲ್ಲಿ ಕಂಡುಬಂದ ಜಿದ್ದಾಜಿದ್ದಿನ ಹೋರಾಟ, ಈ ಚುನಾವಣೆಯಲ್ಲಿ ಕಾಣದಿದ್ದರೂ ನಾನಾ ಕಾರಣಗಳಿಂದ ಕ್ಷೇತ್ರ ಕುತೂಹಲ ಕೆರಳಿಸಿದೆ.
ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಭರ್ಜರಿಯಾಗಿಯೇ ಪ್ರಚಾರ ಕಾರ್ಯದಲ್ಲಿ ತಲ್ಲೀನವಾಗಿವೆ. ಚುನಾವಣಾ ಕಣ ಕಾವೇರಿದ್ದು, ರಾಜ್ಯ ಸುತ್ತಾಟದ ಒತ್ತಡದ ನಡುವೆಯೂ ಬಿ.ಎಸ್.ವೈ. ಆಗಾಗ್ಗೆ ಕ್ಷೇತ್ರ ಸುತ್ತಾಡುತ್ತಿದ್ದಾರೆ. ಅತ್ಯದಿಕ ಲೀಡ್‍ನಲ್ಲಿ ಗೆಲ್ಲಿಸುವಂತೆ ಮತದಾರರಿಗೆ ಮನವಿ ಮಾಡುತ್ತಿದ್ದಾರೆ. ಮತ್ತೊಂದೆಡೆ ಜೆಡಿಎಸ್ ಅಭ್ಯರ್ಥಿ ಹೆಚ್.ಟಿ.ಬಳಿಗಾರ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಗೋಣಿ ಮಾಲತೇಶ್ ಕೂಡ ಬಿರುಸಿನ ಪ್ರಚಾರದಲ್ಲಿ ತಲ್ಲೀನರಾಗಿದ್ದಾರೆ. ಕಾಲಿಗೆ ಚಕ್ರ ಕಟ್ಟಿಕೊಂಡವರ ರೀತಿಯಲ್ಲಿ ಕ್ಷೇತ್ರ ಸುತ್ತಾಡುತ್ತಿದ್ದಾರೆ. ಕೆಲ ಪಕ್ಷೇತರ ಅಭ್ಯರ್ಥಿಗಳು ಕೂಡ ಬಿರುಸಿನ ಪ್ರಚಾರದ ಮೂಲಕ ಗಮನ ಸೆಳೆಯುತ್ತಿದ್ದಾರೆ.
ಅಭ್ಯರ್ಥಿ ಲೆಕ್ಕಾಚಾರ: ಕಳೆದ ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಅಖಾಡಕ್ಕಿಳಿದಿದ್ದ ಬಿ.ವೈ.ರಾಘವೇಂದ್ರರವರು, ಕಾಂಗ್ರೆಸ್ ಅಭ್ಯರ್ಥಿಯೆದುರು ಸುಮಾರು ಆರೂವರೆ ಸಾವಿರ ಲೀಡ್‍ನಲ್ಲಿ ಜಯ ಸಾಧಿಸಿದ್ದರು. ಈ ಕಾರಣದಿಂದ ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಬಿ.ಎಸ್.ಯಡಿಯೂರಪ್ಪರ ಮತಗಳಿಕೆ ಎಷ್ಟಿರಲಿದೆ? ಎದುರಾಳಿ ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಯಾವ ರೀತಿ ಸ್ಪರ್ಧೆಯೊಡ್ಡಲಿದ್ದಾರೆ? ಎಂಬಿತ್ಯಾದಿ ಕುತೂಹಲ ರಾಜಕೀಯ ವಲಯದಲ್ಲಿ ಮನೆ ಮಾಡಿದೆ.
ಮೂರು ಪಕ್ಷಗಳಿಂದ ಕಣಕ್ಕಿಳಿದಿರುವ ಅಭ್ಯರ್ಥಿಗಳ ಬಲಾಬಲ ಗಮನಿಸಿದರೆ, ಬಿ.ಎಸ್.ವೈ. ಹೆಚ್ಚು ಪ್ರಬಲರಂತೆ ಗೋಚರಿಸುತ್ತಾರೆ. ಕಾಂಗ್ರೆಸ್ ಅಭ್ಯರ್ಥಿ ಗೋಣಿ ಮಾಲತೇಶ್‍ಗೆ ಇದು ಮೊದಲ ವಿಧಾನಸಭೆ ಚುನಾವಣೆಯಾಗಿದೆ. ಬಿ.ಎಸ್.ವೈ. ವಿರುದ್ದ ಕಾಂಗ್ರೆಸ್ ದುರ್ಬಲ ಅಭ್ಯರ್ಥಿ ಕಣಕ್ಕಿಳಿಸಿದೆ ಎಂಬ ಆರೋಪವಿದೆ. ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಗೋಣಿ ಮಾಲತೇಶ್, ಕ್ಷೇತ್ರದಾದ್ಯಂತ ಬಿರುಸಿನ ಪ್ರಚಾರ ಕಾರ್ಯದಲ್ಲಿ ತಲ್ಲೀನರಾಗಿದ್ದಾರೆ.
ಉಳಿದಂತೆ ಜೆಡಿಎಸ್‍ನಿಂದ ಎರಡನೇ ಬಾರಿ ಚುನಾವಣಾ ಕಣಕ್ಕಿಳಿಯುತ್ತಿರುವ ಹೆಚ್.ಟಿ.ಬಳಿಗಾರ್, ಕುತೂಹಲದ ಕೇಂದ್ರಬಿಂಧುವಾಗಿದ್ದಾರೆ. ಸಾಕಷ್ಟು ಗಮನ ಸೆಳೆಯುತ್ತಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ಕ್ಷೇತ್ರದಲ್ಲಿ ಓಡಾಡಿಕೊಂಡು ಪಕ್ಷ ಸಂಘಟನೆ ಮಾಡುತ್ತಿರುವ ಹೆಚ್.ಟಿ.ಬಳಿಗಾರ್, ಈ ಬಾರಿ ಬಿಜೆಪಿಗೆ ಪ್ರಬಲ ಸ್ಪರ್ಧಿಯಾಗಲಿದ್ದಾರೆಂಬ ಮಾತುಗಳು ಕ್ಷೇತ್ರ ವ್ಯಾಪ್ತಿಯಲ್ಲಿ ಕೇಳಿಬರುತ್ತಿವೆ.
ಗೇಮ್‍ಪ್ಲ್ಯಾನ್: ಸದ್ಯಕ್ಕೆ ಬಿಜೆಪಿ ಪಕ್ಷವು ಲೀಡ್ ಲೆಕ್ಕಾಚಾರದಲ್ಲಿದೆ. ಬಿ.ಎಸ್.ವೈ. ಗೆದ್ದೆ ಗೆಲ್ಲುತ್ತಾರೆಂಬ ವಿಶ್ವಾದಲ್ಲಿರುವ ಆ ಪಕ್ಷದ ನಾಯಕರು, ಸಿಎಂ ಅಭ್ಯರ್ಥಿಯಾಗಿರುವ ಕಾರಣದಿಂದ ಬಿ.ಎಸ್.ವೈ.ರನ್ನು ಅತ್ಯಧಿಕ ಮತಗಳ ಅಂತರದಲ್ಲಿ ಆಯ್ಕೆ ಮಾಡಬೇಕೆಂಬ ಕಾರ್ಯತಂತ್ರ ರೂಪಿಸುತ್ತಿದ್ದಾರೆ. 40 ಸಾವಿರಕ್ಕೂ ಅಧಿಕ ಮತಗಳ ಲೀಡ್ ದೊರಕಿಸಿಕೊಡಬೇಕೆಂಬ ಗೇಮ್‍ಪ್ಲ್ಯಾನ್ ನಡೆಸುತ್ತಿದ್ದು, ಬಿ.ಎಸ್.ವೈ. ಕೂಡ ಪಕ್ಷದ ಸ್ಥಳೀಯ ನಾಯಕರಿಗೆ ಇದೇ ಸೂಚನೆ ರವಾನಿಸಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ.
ಆದರೆ ಈ ಹಿಂದಿನ ಎರಡು ಚುನಾವಣೆಯಲ್ಲಿ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದ ಬಿ.ಎಸ್.ವೈ. ಹಾಗೂ ಅವರ ಪುತ್ರ ಬಿ.ವೈ.ರಾಘವೇಂದ್ರರವರ ಗೆಲುವಿನ ಅಂತರ ಗಮನಿಸಿದರೆ ಲೀಡ್ ಕಡಿಮೆಯಾಗುತ್ತಿರುವುದು ಕಂಡುಬರುತ್ತದೆ. 2013 ರಲ್ಲಿ ಕೆಜೆಪಿ ಅಭ್ಯರ್ಥಿಯಾಗಿದ್ದ ಬಿ.ಎಸ್.ವೈ. 69,126, ಕಾಂಗ್ರೆಸ್ ಅಭ್ಯರ್ಥಿ ಶಾಂತವೀರಪ್ಪಗೌಡರವರು 44,071, ಜೆಡಿಎಸ್ ಅಭ್ಯರ್ಥಿ ಹೆಚ್.ಬಳಿಗಾರ್‍ರವರು 15,007, ಬಿಜೆಪಿ ಅಭ್ಯರ್ಥಿ ಎಸ್.ಹೆಚ್.ಮಂಜುನಾಥ್‍ರವರು ಕೇವಲ 2383 ಮತ ಗಳಿಸಿದ್ದರು. ಬಿ.ಎಸ್.ವೈ.ರವರ ಲೀಡ್ 25,055 ಆಗಿತ್ತು.
ತದನಂತರ ಬಿ.ಎಸ್.ವೈ. ಮತ್ತೆ ಬಿಜೆಪಿ ಸೇರ್ಪಡೆಯಾಗಿದ್ದರು. ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದು ಆಯ್ಕೆಯಾಗಿದ್ದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಕಾರಣದಿಂದ 2014 ರಲ್ಲಿ ಶಿಕಾರಿಪುರಕ್ಕೆ ಉಪ ಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿದ್ದ ಅವರ ಪುತ್ರ ಬಿ.ವೈ.ರಾಘವೇಂದ್ರ 71,547 ಹಾಗೂ ಕಾಂಗ್ರೆಸ್‍ನಿಂದ ಕಣಕ್ಕಿಳಿದಿದ್ದ ಶಾಂತವೀರಪ್ಪಗೌಡರವರು 65,117 ಮತ ಗಳಿಸಿದ್ದರು. ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಸದೆ ಕಾಂಗ್ರೆಸ್‍ಗೆ ಬೆಂಬಲ ವ್ಯಕ್ತಪಡಿಸಿತ್ತು. ರಾಘವೇಂದ್ರ ಲೀಡ್ ಕೇವಲ 6430 ಮಾತ್ರವಾಗಿತ್ತು.
ಈ ಕಾರಣದಿಂದ ಪ್ರಸ್ತುತ ಬಿಜೆಪಿ ನಿರೀಕ್ಷಿಸುತ್ತಿರುವ ಭಾರೀ ಲೀಡ್ ಅಸಾಧ್ಯ ಎಂಬ ಮಾತು ಕೇಳಿಬರುತ್ತಿದೆ. ಆದರೆ ಬಿಜೆಪಿಯು ಹೆಚ್ಚಿನ ಲೀಡ್ ವಿಶ್ವಾಸ ವ್ಯಕ್ತಪಡಿಸುತ್ತಿದೆ. ಉಪ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಈ ಬಾರಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಇದರಿಂದ ಮತ ವಿಭಜನೆಯಾಗಲಿದೆ. ಇದರಿಂದ ಬಿ.ಎಸ್.ವೈ. ಹೆಚ್ಚಿನ ಲೀಡ್ ಪಡೆಯಲಿದ್ದಾರೆ ಎಂದು ಆ ಪಕ್ಷದ ಮೂಲಗಳು ಹೇಳುತ್ತವೆ.
ಜಾತಿ ಲೆಕ್ಕಾಚಾರ: ಕ್ಷೇತ್ರದಲ್ಲಿ ಲಿಂಗಾಯತ, ಕುರುಬ, ಬಣಜಾರ್, ಮುಸ್ಲಿಂ, ದಲಿತ-ಹಿಂದುಳಿದ ವರ್ಗಕ್ಕೆ ಸೇರಿದ ಮತದಾರರ ಸಂಖ್ಯೆ ಹೆಚ್ಚಿದೆ. ಯಾವುದೇ ಅಭ್ಯರ್ಥಿಯ ಸೋಲು-ಗೆಲುವಿನಲ್ಲಿ ಈ ಮತಗಳು ಪ್ರಮುಖ ಪಾತ್ರವಹಿಸುತ್ತವೆ. ಈ ಹಿಂದಿನಂತೆ ಬಿಜೆಪಿ ಎಲ್ಲ ವರ್ಗಗಳ ಮತ ಗಳಿಕೆಯ ನಿರೀಕ್ಷೆಯಲ್ಲಿದೆ. ಆದರೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಕೂಡ ಬಿಜೆಪಿ ರೀತಿಯಲ್ಲಿ ಎಲ್ಲ ವರ್ಗಗಳ ಮತಗಳತ್ತ ಚಿತ್ತ ಹರಿಸಿವೆ. ಬಿಜೆಪಿ ವಿರೋಧಿ ಮತ ಸೆಳೆದುಕೊಳ್ಳುವ ತಂತ್ರಗಾರಿಕೆ ನಡೆಸುತ್ತಿವೆ.
ಸಂಚಲನ ಸೃಷ್ಟಿಸಿದ್ದ ಬಂಗಾರಪ್ಪ ಸ್ಪರ್ಧೆ...!
ಶಿಕಾರಿಪುರ ಕ್ಷೇತ್ರದ ವಿಧಾನಸಭಾ ಚುನಾವಣಾ ಇತಿಹಾಸದಲ್ಲಿ 2008 ರ ಚುನಾವಣೆಯು ಇತಿಹಾಸದ ಪುಟದಲ್ಲಿ ಅಚ್ಚಳಿಯದೆ ಉಳಿದುಕೊಂಡಿದೆ. ಈ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಬಂಗಾರಪ್ಪರವರು ಶಿಕಾರಿಪುರ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಮಾಜಿ ಸಿಎಂಗಳಾಗಿದ್ದ ಬಂಗಾರಪ್ಪ - ಯಡಿಯೂರಪ್ಪ ಸ್ಪರ್ಧೆಯು ಇಡೀ ರಾಷ್ಟ್ರದ ಗಮನ ಸೆಳೆದಿತ್ತು. ಸಾಕಷ್ಟು ಕುತೂಹಲ ಮೂಡಿಸಿತ್ತು. ವಿಶೇಷವಾಗಿ ಬಿಜೆಪಿ ಸಿಎಂ ಅಭ್ಯರ್ಥಿಯಾಗಿ ಘೋಷಿತವಾಗಿದ್ದ ಬಿ.ಎಸ್.ವೈ.ಗೆ ಬಂಗಾರಪ್ಪ ಸ್ಪರ್ಧೆಯು ದೊಡ್ಡ ತಲೆನೋವಾಗಿ ಪರಿಣಮಿಸುವಂತೆ ಮಾಡಿತ್ತು. ಆದರೆ ಈ ಚುನಾವಣೆಯಲ್ಲಿ ಎಲ್ಲರ ಲೆಕ್ಕಾಚಾರ ತಲೆಕೆಳಗಾಗುವಂತೆ ಮಾಡಿದ ಬಿ.ಎಸ್.ವೈ. ಭಾರೀ ಮತಗಳ ಅಂತರದಲ್ಲಿ ಜಯ ಸಾಧಿಸಿದ್ದರು. ಬಿ.ಎಸ್.ವೈ.ರವರು 83,491 ಮತ ಪಡೆದರೆ, ಬಂಗಾರಪ್ಪರವರು 37,564 ಮತ ಪಡೆಯಲಷ್ಟೆ ಶಕ್ತರಾಗಿದ್ದರು. 45,927 ಮತಗಳ ಅಂತರದಲ್ಲಿ ಜಯ ಸಾಧಿಸಿದ್ದರು.
ಕಣದಲ್ಲಿರುವ ಅಭ್ಯರ್ಥಿಗಳು
ಈ ಚುನಾವಣೆಯಲ್ಲಿ ಶಿಕಾರಿಪುರ ಕ್ಷೇತ್ರದಲ್ಲಿ 9 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿ.ಎಸ್.ಯಡಿಯೂರಪ್ಪ (ಬಿಜೆಪಿ), ಹೆಚ್.ಟಿ.ಬಳಿಗಾರ್ (ಜೆಡಿಎಸ್), ಗೋಣಿ ಮಾಲತೇಶ್ (ಕಾಂಗ್ರೆಸ್), ಚಂದ್ರಕಾಂತ್ ರೇವಣಕರ್ (ಎಎಪಿ), ಸ್ವತಂತ್ರ ಅಭ್ಯರ್ಥಿಗಳಾಗಿ ಎಂ.ಆರ್.ಅನಿಲ್, ಕೋಟೇಶ್ವರ, ಕೊಪ್ಪಲು ಮಂಜಣ್ಣ, ವಿನಯ್ ಕೆ.ಸಿ.ರಾಜಾವತ್, ಎನ್.ಹನುಮೇಗೌಡರವರು ಅಭ್ಯರ್ಥಿಗಳಾಗಿದ್ದಾರೆ.
ತಂತ್ರ ಕೈಬಿಟ್ಟ ಸಿದ್ದರಾಮಯ್ಯ?
ಪ್ರಸ್ತುತ ಚುನಾವಣೆಯಲ್ಲಿ ಬಿ.ಎಸ್.ಯಡಿಯೂರಪ್ಪ ವಿರುದ್ದ ಶಿಕಾರಿಪುರದಲ್ಲಿ ಕಾಂಗ್ರೆಸ್‍ನಿಂದ ಪ್ರಬಲ ಅಭ್ಯರ್ಥಿ ಅಖಾಡಕ್ಕಿಳಿಸಲು ಸಿಎಂ ಸಿದ್ದರಾಮಯ್ಯ ತಂತ್ರಗಾರಿಕೆ ನಡೆಸಿದ್ದರು. ಈ ಕಾರಣದಿಂದ ಕಳೆದ ಕೆಲ ತಿಂಗಳ ಹಿಂದಿನಿಂದಲೂ ಶಿಕಾರಿಪುರ ಕ್ಷೇತ್ರದತ್ತ ಹೆಚ್ಚಿನ ಗಮನಹರಿಸಿದ್ದರು ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬಂದಿತ್ತು. ಸಿಎಂ ತಂತ್ರಗಾರಿಕೆಯ ಮಾಹಿತಿ ತಿಳಿದಿದ್ದ ಬಿ.ಎಸ್.ವೈ. ಕೂಡ ಸಿದ್ದರಾಮಯ್ಯ ಕಣಕ್ಕಿಳಿಯುವ ಕ್ಷೇತ್ರಗಳಲ್ಲಿ ಪ್ರತಿತಂತ್ರ ರೂಪಿಸಲಾರಂಭಿಸಿದ್ದರು. ಆದರೆ ಅಂತಿಮ ಕ್ಷಣದಲ್ಲಿ ಸಿದ್ದರಾಮಯ್ಯ ಶಿಕಾರಿಪುರದಿಂದ ಪ್ರಬಲ ಅಭ್ಯರ್ಥಿ ಅಖಾಡಕ್ಕಿಳಿಸುವ ನಿರ್ಧಾರದಿಂದ ಹಿಂದೆ ಸರಿದಿದ್ದು ರಾಜಕೀಯ ವಲಯದಲ್ಲಿ ಹಲವು ರೀತಿಯ ಚರ್ಚೆಗಳಿಗೆ ಎಡೆ ಮಾಡಿಕೊಟ್ಟಿದೆ.