ಸೊರಬ ವಿಧಾನಸಭಾ ಕ್ಷೇತ್ರ: ಅಣ್ಣ-ತಮ್ಮಂದಿರ ಜಂಗೀಕುಸ್ತಿಗೆ ಸಿದ್ಧವಾಗಿದೆ ಅಖಾಡ
ಶಿವಮೊಗ್ಗ, ಮೇ.02: ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಬಂಗಾರಪ್ಪ ಪುತ್ರರ ಜಂಗೀಕುಸ್ತಿಗೆ ಮತ್ತೊಮ್ಮೆ ವೇದಿಕೆಯಾಗಿರುವ ಸೊರಬ ವಿಧಾನಸಭಾ ಕ್ಷೇತ್ರ, ಇಡೀ ರಾಜ್ಯದ ಗಮನ ಸೆಳೆದಿದೆ. ಜಿಲ್ಲೆಯ ಇತರೆ ಕ್ಷೇತ್ರಗಳಂತೆ ಇಲ್ಲಿಯೂ ಪ್ರಮುಖ ರಾಜಕೀಯ ಪಕ್ಷಗಳಾದ, ಬಿಜೆಪಿ-ಜೆಡಿಎಸ್-ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದೆ. ಪ್ರಚಾರ ಕಣ ದಿನದಿಂದ ದಿನಕ್ಕೆ ರಂಗೇರ ತೊಡಗಿದೆ.
ಮೇಲ್ನೋಟಕ್ಕೆ ಜೆಡಿಎಸ್ ಅಭ್ಯರ್ಥಿ, ಹಾಲಿ ಶಾಸಕ ಮಧು ಬಂಗಾರಪ್ಪ ಹಾಗೂ ಬಿಜೆಪಿ ಅಭ್ಯರ್ಥಿ ಕುಮಾರ್ ಬಂಗಾರಪ್ಪ ನಡುವೆ ನೇರ ಪೈಪೋಟಿ ಏರ್ಪಡುವ ಲಕ್ಷಣಗಳು ಗೋಚರವಾಗುತ್ತಿವೆ. ಇದರಿಂದ ಅಣ್ಣ-ತಮ್ಮನ ಜಿದ್ದಾಜಿದ್ದಿನ ಹಣಾಹಣಿಗೆ ಅಖಾಡ ಸಜ್ಜಾಗುತ್ತಿದ್ದು, ಜೆಡಿಎಸ್ - ಬಿಜೆಪಿ ನಡುವೆ ನೇರ ಸ್ಪರ್ಧೆಯ ಸಾಧ್ಯತೆಗಳು ಕಂಡುಬರುತ್ತಿವೆ. ಮತ್ತೊಂದೆಡೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಜು ತಲ್ಲೂರು ಕೂಡ 'ಸಹೋದರರಿಗೆ' ತಕ್ಕ ಎದಿರೇಟು ನೀಡಲು ತಯಾರಿ ನಡೆಸುತ್ತಿರುವುದು ಕುತೂಹಲ ಮೂಡಿಸಿದೆ.
2008 ರ ವಿಧಾನಸಭೆ ಚುನಾವಣೆಯಲ್ಲಿ ಸಹೋದರರ ಕಲಹದ ಲಾಭ ಪಡೆದು ಮಾಜಿ ಸಚಿವ ಹರತಾಳು ಹಾಲಪ್ಪ ಆಯ್ಕೆಯಾದಂತೆ, ಈ ಚುನಾವಣೆಯಲ್ಲಿ ಆಯ್ಕೆಯಾಗುವ ಲೆಕ್ಕಾಚಾರ ಕಾಂಗ್ರೆಸ್ ಅಭ್ಯರ್ಥಿಯದ್ದಾಗಿದೆ. ಆದರೆ ಕ್ಷೇತ್ರದ ಮತದಾರರು ಅಷ್ಟು ಸುಲಭವಾಗಿ ರಾಜುರವರ 'ಕೈ' ಹಿಡಿಯುತ್ತಾರಾ? ಎಂಬುವುದು ಯಕ್ಷ ಪ್ರಶ್ನೆಯಾಗಿದೆ. ಆದರೆ ರಾಜುರವರು ಕ್ಷೇತ್ರದಾದ್ಯಂತ ಬಿರುಸಿನ ಓಡಾಟ ನಡೆಸುತ್ತಿರುವುದನ್ನು ಗಮನಿಸಿದರೆ, ಜೆಡಿಎಸ್-ಬಿಜೆಪಿ-ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಸಾಧ್ಯತೆ ಅಲ್ಲಗಳೆಯಲು ಸಾಧ್ಯವಿಲ್ಲವಾಗಿದೆ.
ಮುಖಾಮುಖಿ: ಸೊರಬ ಕ್ಷೇತ್ರದಲ್ಲಿ ಮಧು ಹಾಗೂ ಕುಮಾರ್ ಒಟ್ಟಾರೆ ಮೂರು ಬಾರಿ ಪರಸ್ಪರ ಮುಖಾಮುಖಿಯಾಗಿದ್ದಾರೆ. ಇದರಲ್ಲಿ ಇಬ್ಬರು ತಲಾ ಒಂದು ಬಾರಿ ಜಯ ಸಾಧಿಸಿದ್ದಾರೆ. ಮತ್ತೊಂದು ಚುನಾವಣೆಯಲ್ಲಿ ಇವರಿಬ್ಬರು ಸೋಲನುಭವಿಸಿದ್ದರು. 1967 ರಿಂದ 1994 ರವರೆಗೆ ಎಸ್.ಬಂಗಾರಪ್ಪರವರೇ ಸತತವಾಗಿ ಈ ಕ್ಷೇತ್ರ ಪ್ರತಿನಿಧಿಸಿಕೊಂಡು ಬಂದಿದ್ದರು. 1999 ರಲ್ಲಿ ತಂದೆಯ ಬೆಂಬಲದೊಂದಿಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಕುಮಾರ್ 38,773 ಮತ ಗಳಿಸಿ ವಿಧಾನಸಭೆಗೆ ಪ್ರವೇಶಿಸಿದ್ದರು.
ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಬಂಗಾರಪ್ಪ ಬಿಜೆಪಿ ಸೇರ್ಪಡೆಯಾಗಿದ್ದರು. ಆದರೆ ಕುಮಾರ್ ಮಾತ್ರ ಕಾಂಗ್ರೆಸ್‍ನಲ್ಲಿಯೇ ಉಳಿದುಕೊಂಡಿದ್ದರು. 2004 ರಲ್ಲಿ ನಡೆದ ಚುನಾವಣೆಯಲ್ಲಿ ಕುಮಾರ್ ಮತ್ತೆ ಕಾಂಗ್ರೆಸ್‍ನಿಂದ ಕಣಕ್ಕಿಳಿದರು. ತಂದೆಯ ಬೆಂಬಲದೊಂದಿಗೆ ಮಧು ಬಂಗಾರಪ್ಪ ಬಿಜೆಪಿ ಅಭ್ಯರ್ಥಿಯಾಗಿದ್ದರು. ಕುಮಾರ್ 44,677 ಮತ ಪಡೆದು ಆಯ್ಕೆಯಾದರೆ, ಮಧು 32,748 ಮತ ಪಡೆದು ಪರಾಭವಗೊಂಡಿದ್ದರು.
2008 ರ ಚುನಾವಣೆಯಲ್ಲಿಯೂ ಸಹೋದರರು ಮುಖಾಮುಖಿಯಾಗಿದ್ದರು. ಆದರೆ ಸಹೋದರರ ಕಲಹದ ಲಾಭ ಬೇರೆ ಪಕ್ಷಕ್ಕೆ ದಕ್ಕಿದ್ದು ಈ ಚುನಾವಣೆಯ ವಿಶೇಷವಾಗಿದೆ. ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಹರತಾಳು ಹಾಲಪ್ಪರವರು 53,552 ಮತ ಪಡೆದು ಆಯ್ಕೆಯಾಗಿದ್ದರು. ಆದರೆ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಕುಮಾರ್ 32,499 ಹಾಗೂ ಜೆಡಿಎಸ್ ಅಭ್ಯರ್ಥಿಯಾದ ಮಧು 31,135 ಮತಗಳಿಸಿ ಪರಾಭವಗೊಂಡಿದ್ದರು.
2013 ರ ಚುನಾವಣೆಯಲ್ಲಿ 58,541 ಮತ ಪಡೆದ ಮಧು, ಗೆಲುವಿನ ನಗೆ ಬೀರಿದ್ದರು. ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಕುಮಾರ್ ಬಂಗಾರಪ್ಪ 22,176, ಕೆಜೆಪಿ ಅಭ್ಯರ್ಥಿಯಾಗಿದ್ದ ಹರತಾಳು ಹಾಲಪ್ಪರವರು 37,316 ಹಾಗೂ ಬಿಜೆಪಿಯ ನಾಗರಾಜಗೌಡರವರು 5226 ಮತ ಗಳಿಸಿದ್ದರು.
ಬದಲಾದ ರಾಜಕಾರಣ: ಕಾಂಗ್ರೆಸ್ ಪಕ್ಷದಿಂದ ಸತತ ಮೂರು ಬಾರಿ ಕಣಕ್ಕಿಳಿದಿದ್ದ ಕುಮಾರ್, ಬದಲಾದ ರಾಜಕಾರಣದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಜೆಡಿಎಸ್ ಅಭ್ಯಥಿಯಾಗಿ ಮಧು ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಎಂದಿನಂತೆ ಸಹೋದರರ ನಡುವೆ ಆರೋಪ - ಪ್ರತ್ಯಾರೋಪಗಳ ವಿನಿಮಯವಾಗಲಾರಂಭಿಸಿದೆ.
ಮತ್ತೊಂದೆಡೆ ಚುನಾವಣೆ ಸ್ಪರ್ಧೆಯ ಕಾರಣದಿಂದಲೇ ಕಳೆದ ಹಲವು ವರ್ಷಗಳಿಂದ ಕ್ಷೇತ್ರದಲ್ಲಿಯೇ ಬೀಡುಬಿಟ್ಟು, ವಿವಿಧ ಜನಪರ ಕಾರ್ಯಗಳ ಮೂಲಕ ಗಮನ ಸೆಳೆದಿರುವ ರಾಜು ತಲ್ಲೂರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿ, ಆ ಪಕ್ಷದ ಅಭ್ಯರ್ಥಿಯಾಗಿದ್ದಾರೆ.
ಈ ಹಿಂದಿನ ಚುನಾವಣೆ ರೀತಿಯಲ್ಲಿ ಕ್ಷೇತ್ರದಲ್ಲಿ, ಯಾವುದೇ ಪಕ್ಷದ ಪರ - ವಿರುದ್ದ ಅಲೆಗಳು ಕಂಡುಬರುತ್ತಿಲ್ಲ. ವ್ಯಕ್ತಿ, ಪಕ್ಷಾಧಾರಿತ ಆಧಾರದಲ್ಲಿ ಮತಯಾಚನೆ ಬಿರುಸುಗೊಂಡಿದೆ. ಮತದಾರರ ಚಿತ್ತ ಯಾರತ್ತ ಎಂಬುವುದು ನಿಗೂಢವಾಗಿದೆ. ಒಟ್ಟಾರೆ ಸೊರಬ ಕ್ಷೇತ್ರದಲ್ಲಿ ನೇರನಾ ಅಥವಾ ತ್ರಿಕೋನ ಹಣಾಹಣಿಯಾ? ಎಂಬುವುದು ಸ್ಪಷ್ಟವಾಗಿ ಹೇಳಲಾಗದ ಮಟ್ಟಕ್ಕೆ ರಾಜಕೀಯ ಅಖಾಡವಿದ್ದು, ಮುಂದಿನ ದಿನಗಳಲ್ಲಿ ಎಲ್ಲವೂ ಸ್ಪಷ್ಟವಾಗಲಿದೆ.
ಸತತ ಏಳು ಬಾರಿ ಆಯ್ಕೆಯಾಗಿದ್ದ ಎಸ್.ಬಂಗಾರಪ್ಪ!
ಸೊರಬ ಕ್ಷೇತ್ರ ಅಸ್ತಿತ್ವಕ್ಕೆ ಬಂದ ನಂತರ ನಡೆದ ಏಳು ವಿಧಾನಸಭೆ ಚುನಾವಣೆಗಳಲ್ಲಿ ಸತತವಾಗಿ ಆಯ್ಕೆಯಾಗುವ ಮೂಲಕ, ಮಾಜಿ ಸಿಎಂ ದಿವಂಗತ ಎಸ್.ಬಂಗಾರಪ್ಪ ಹೊಸ ದಾಖಲೆ ನಿರ್ಮಿಸಿದ್ದರು. 'ಸೋಲಿಲ್ಲದ ಸರದಾರ' ಎಂಬ ಬಿರುದಿಗೂ ಭಾಜನರಾಗಿದ್ದರು. 1967, 1972, 1978, 1983, 1985, 1989, 1994 ರ ಚುನಾವಣೆಗಳಲ್ಲಿ ಈ ಕ್ಷೇತ್ರದಿಂದ ವಿವಿಧ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದು ಜಯ ಸಾಧಿಸಿದ್ದರು. ಆ ಮಟ್ಟಕ್ಕೆ ಕ್ಷೇತ್ರದಲ್ಲಿ ಪ್ರಾಬಲ್ಯ ಹೊಂದಿದ್ದರು. ಆದರೆ 2008 ರ ಚುನಾವಣೆಯಲ್ಲಿ ಸೊರಬ ಪಕ್ಕದ ಶಿಕಾರಿಪುರ ಕ್ಷೇತ್ರದಲ್ಲಿ ಬಿ.ಎಸ್.ಯಡಿಯೂರಪ್ಪ ವಿರುದ್ದ ಬಂಗಾರಪ್ಪ ಕಣಕ್ಕಿಳಿದು ಪರಾಭವಗೊಂಡಿದ್ದರು.
ಅಖಾಡದಲ್ಲಿರುವ ಅಭ್ಯರ್ಥಿಗಳು
ಮಧು ಬಂಗಾರಪ್ಪ (ಜೆಡಿಎಸ್), ಕುಮಾರ್ ಬಂಗಾರಪ್ಪ (ಬಿಜೆಪಿ), ರಾಜು ಎಂ. ತಲ್ಲೂರು (ಕಾಂಗ್ರೆಸ್), ಗಂಗಾಧರಪ್ಪ ಹುನವಳ್ಳಿ (ಸ್ವರಾಜ್ ಇಂಡಿಯಾ), ಟಿ,ಕೆ.ಅಸಾದುಲ್ಲಾ (ಎಂಇಪಿ), ಪಕ್ಷೇತರ ಅಭ್ಯರ್ಥಿಗಳಾಗಿ ಎಸ್.ಶಕುಂತಲಾ ಶಿವಮೂರ್ತಿ, ಜೆ.ಎಸ್.ಚಿದಾನಂದಗೌಡ, ಪ್ರಕಾಶ ಶಿವಪ್ಪ ತಲವಾರ್ ರವರು ಸ್ಪರ್ಧಿಸಿದ್ದಾರೆ.