ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ: ಯಾರು ಹಿತವರು ಈ ಮೂವರೊಳಗೆ?
ಕಾಂಗ್ರೆಸ್-ಬಿಜೆಪಿ-ಜೆಡಿಎಸ್ ನಡುವೆ ಜಿದ್ದಾಜಿದ್ದಿ
ಆರಗ ಜ್ಞಾನೇಂದ್ರ, ಆರ್.ಎಂ.ಮಂಜುನಾಥಗೌಡ, ಕಿಮ್ಮನೆ ರತ್ನಾಕರ್
ಶಿವಮೊಗ್ಗ, ಮೇ.02: ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ, ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್-ಬಿಜೆಪಿ-ಜೆಡಿಎಸ್ ನಡುವೆ ತೀವ್ರ ಜಿದ್ದಾಜಿದ್ದಿನ ಅಖಾಡಕ್ಕೆ ಸಾಕ್ಷಿಯಾಗಿರುವ ಏಕೈಕ ಕ್ಷೇತ್ರವಾಗಿದೆ ತೀರ್ಥಹಳ್ಳಿ. ಹೌದು. ತ್ರಿಕೋನ ಹಣಾಹಣಿ ಏರ್ಪಟ್ಟಿರುವ ಈ ಕ್ಷೇತ್ರದಲ್ಲಿ, ಪ್ರಚಾರದ ಅಬ್ಬರ ತಾರಕಕ್ಕೇರಿದೆ. ಮೂರು ಪಕ್ಷಗಳ ಅಭ್ಯರ್ಥಿಗಳು ಮತದಾರರ ಮನವೊಲಿಕೆಗೆ ಪೈಪೋಟಿ ನಡೆಸುತ್ತಿದ್ದಾರೆ. ಇದು ಸಾಕಷ್ಟು ಕುತೂಹಲ ಕೆರಳುವಂತೆ ಮಾಡಿದೆ.
ಕಳೆದ ಚುನಾವಣೆಯಲ್ಲಿ ಎದುರಾದವರೇ ಈ ಬಾರಿಯೂ ಮುಖಾಮುಖಿಯಾಗುತ್ತಿದ್ದಾರೆ. ಕಾಂಗ್ರೆಸ್ನಿಂದ ಹಾಲಿ ಶಾಸಕ ಕಿಮ್ಮನೆ ರತ್ನಾಕರ್, ಬಿಜೆಪಿಯಿಂದ ಮಾಜಿ ಶಾಸಕ ಆರಗ ಜ್ಞಾನೇಂದ್ರ ಹಾಗೂ ಕಳೆದ ಬಾರಿ ಕೆಜೆಪಿ ಅಭ್ಯರ್ಥಿಯಾಗಿದ್ದ ಆರ್.ಎಂ.ಮಂಜುನಾಥಗೌಡ ಈ ಬಾರಿ ಜೆಡಿಎಸ್ನಿಂದ ಕಣಕ್ಕಿಳಿಯುತ್ತಿದ್ದಾರೆ.
ನಾನಾ ಕಾರಣಗಳಿಂದ ಮೂರು ಪಕ್ಷದ ಅಭ್ಯರ್ಥಿಗಳಿಗೂ ಈ ಚುನಾವಣೆ ಅತ್ಯಂತ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಸತತ ಎರಡು ಬಾರಿ ಜಯ ಸಾಧಿಸಿರುವ ಕಾಂಗ್ರೆಸ್ ಅಭ್ಯರ್ಥಿಗೆ ಹೋಲಿಸಿದರೆ ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳಿಗೆ ಈ ಚುನಾವಣೆ ನಿರ್ಣಾಯಕವಾಗಿದೆ. ಈ ಹಿಂದಿನ ಮೂರು ಚುನಾವಣೆಗಳಲ್ಲಿ ಜಯ ಸಂಪಾದಿಸಿ, ನಂತರ ಸತತ ಎರಡು ಬಾರಿ ಸೋಲು ಕಂಡಿರುವ ಬಿಜೆಪಿ ಅಭ್ಯರ್ಥಿಗೆ ಗೆಲುವಿನ ಅನಿವಾರ್ಯತೆಯಿದೆ. ಇದು ಅವರ ರಾಜಕೀಯ ಜೀವನದಲ್ಲಿ ಅತ್ಯಂತ ಮಹತ್ವದ ಚುನಾವಣೆಯಾಗಿದೆ.
ಹಾಗೆಯೇ ಕಳೆದ ಬಾರಿ ಚುನಾವಣಾ ಅಖಾಡಕ್ಕಿಳಿದು ಕೆಲವೇ ಸಾವಿರ ಮತಗಳ ಅಂತರದಲ್ಲಿ ಪರಾಭವಗೊಂಡಿರುವ ಜೆಡಿಎಸ್ ಅಭ್ಯರ್ಥಿಗೆ, ಈ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಕ್ಷೇತ್ರದಲ್ಲಿ ತಮ್ಮ ಅಸ್ತಿತ್ವ ಸಾಬೀತುಪಡಿಸುವ ಒತ್ತಡದಲ್ಲಿದ್ದಾರೆ. ಈ ಎಲ್ಲ ಕಾರಣದಿಂದ ಮೂವರು ಅಭ್ಯರ್ಥಿಗಳು ಗೆಲ್ಲಲೇಬೇಕಾದ ಅನಿವಾರ್ಯ ಒತ್ತಡದಲ್ಲಿದ್ದಾರೆ.
ಜಿಲ್ಲೆಯ ಇತರೆಡೆ ಕಂಡುಬರುತ್ತಿರುವಂತೆ ಈ ಕ್ಷೇತ್ರದಲ್ಲಿಯೂ ಯಾವುದೇ ಪಕ್ಷ-ಅಭ್ಯರ್ಥಿಯ ಪರ-ವಿರುದ್ದವಾದ 'ಅಲೆ' ಕಂಡುಬರುತ್ತಿಲ್ಲ. ಆದರೆ ಈ ಮೂವರು ಅಭ್ಯರ್ಥಿಗಳು ಕ್ಷೇತ್ರದಲ್ಲಿ ತಮ್ಮದೆ ಆದ ಹಿಡಿತ, ಪ್ರಭಾವ, ವರ್ಚಸ್ಸು, ಬೆಂಬಲಿಗ ಪಡೆ ಹೊಂದಿದವರಾಗಿದ್ದಾರೆ. ಇದರಿಂದ ಇಲ್ಲಿ ಯಾರೇ ಆಯ್ಕೆಯಾದರೂ ಅತ್ಯಲ್ಪ ಮತಗಳ ಅಂತರ ಮಾತ್ರವಾಗಿದೆ ಎಂಬ ಮಾತುಗಳು ಕ್ಷೇತ್ರದೆಲ್ಲೆಡೆ ಕೇಳಿಬರುತ್ತಿದೆ.
ಹ್ಯಾಟ್ರಿಕ್?!: ಆರಗ ಜ್ಞಾನೇಂದ್ರ ಹಾಗೂ ಕಿಮ್ಮನೆ ರತ್ನಾಕರ್ ರವರು ಸತತ ನಾಲ್ಕು ಚುನಾವಣೆಗಳಲ್ಲಿ ಎದುರಾಳಿಗಳಾಗಿ ಕಣಕ್ಕಿಳಿದಿದ್ದಾರೆ. ಇಬ್ಬರು ತಲಾ ಎರಡು ಬಾರಿ ಜಯ ಸಂಪಾದಿಸಿದ್ದಾರೆ. ಐದನೇ ಬಾರಿಯೂ ಇವರಿಬ್ಬರು ಮುಖಾಮುಖಿಯಾಗುತ್ತಿದ್ದಾರೆ. 1994, 1999 ಹಾಗೂ 2004 ರ ವಿಧಾನಸಭೆ ಚುನಾವಣೆಗಳಲ್ಲಿ ಜ್ಞಾನೇಂದ್ರರವರು ಸತತ ಜಯ ಸಾಧಿಸುವ ಮೂಲಕ 'ಹ್ಯಾಟ್ರಿಕ್' ಸಾಧನೆ ಮಾಡಿದ್ದರು. ಈ ಮೂರು ಚುನಾವಣೆಗಳಲ್ಲಿ ಅವರಿಗೆ ಎರಡು ಬಾರಿ ಕಿಮ್ಮನೆ ಹಾಗೂ ಒಮ್ಮೆ ಡಿ.ಬಿ.ಚಂದ್ರೇಗೌಡ ಎದುರಾಳಿಗಳಾಗಿದ್ದರು.
ಆದರೆ 2008 ಹಾಗೂ 2013 ರ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಿಮ್ಮನೆ ರತ್ನಾಕರ್ರವರು ಸತತ ಜಯ ಸಂಪಾದಿಸಿದ್ದಾರೆ. 2018 ರ ಚುನಾವಣೆಯಲ್ಲಿಯೂ ಜಯ ಸಾಧಿಸುವ ಮೂಲಕ ಬಿಜೆಪಿಯ ಹ್ಯಾಟ್ರಿಕ್ ಸಾಧನೆ ಬ್ರೇಕ್ ಮಾಡುವ ತವಕದಲ್ಲಿ ಅವರಿದ್ದಾರೆ.
ಟಿಕೆಟ್ ಲಾಬಿ: ಇಂಧನ ಸಚಿವ ಡಿ.ಕೆ.ಶಿವಕುಮಾರ್ ಸಹಕಾರದೊಂದಿಗೆ ಕಾಂಗ್ರೆಸ್ ಸೇರ್ಪಡೆಯಾಗಿದ್ದ ಆರ್.ಎಂ.ಎಂ. ತೀರ್ಥಹಳ್ಳಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಕಲ ಸಿದ್ದತೆ ಮಾಡಿಕೊಂಡಿದ್ದರು. ಟಿಕೆಟ್ಗಾಗಿ ತೀವ್ರ ಲಾಬಿ ನಡೆಸಿದ್ದರು. ಆದರೆ ಹಾಲಿ ಶಾಸಕ ಕಿಮ್ಮನೆಗೆ ಟಿಕೆಟ್ ಸಿಗುವುದು ಖಚಿತವಾಗಿತ್ತು. ಟಿಕೆಟ್ 'ಕೈ' ತಪ್ಪುವುದು ಖಚಿತವಾಗುತ್ತಿದ್ದಂತೆ, ಕಳೆದ ಕೆಲ ತಿಂಗಳ ಹಿಂದೆ ಆರ್.ಎಂ.ಎಂ. ಜೆಡಿಎಸ್ ಸೇರ್ಪಡೆಯಾಗಿದ್ದರು.
ಒಟ್ಟಾರೆ ತೀರ್ಥಹಳ್ಳಿಯಲ್ಲಿ 'ಯಾರು ಹಿತವರು ಈ ಮೂವರೊಳಗೆ' ಎಂಬ ಮಾತು ಚರ್ಚೆಯ ಮುನ್ನೆಲೆಗೆ ಬಂದಿದೆ. ಮತದಾರರ ಚಿತ್ತ ಯಾರತ್ತ ಎಂಬುವುದು ಮೇ 15 ರಂದು ಗೊತ್ತಾಗಲಿದೆ.
ಅಳಿವು-ಉಳಿವಿನ ಪ್ರಶ್ನೆ..!
ಕಾಂಗ್ರೆಸ್ನಿಂದ ಕಣಕ್ಕಿಳಿಯುತ್ತಿರುವ ಶಾಸಕ ಕಿಮ್ಮನೆ ರತ್ನಾಕರ್ ಗೆ ಈ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಹ್ಯಾಟ್ರಿಕ್ ಜಯದ ತವಕದಲ್ಲಿದ್ದಾರೆ. ಈ ಹಿಂದಿನ ಎರಡೂ ಚುನಾವಣೆಗಳಿಗೆ ಹೋಲಿಸಿದರೆ, ಈ ಚುನಾವಣೆಯು ಕಿಮ್ಮನೆಯವರಿಗೆ ಅಕ್ಷರಶಃ ಅಗ್ನಿ ಪರೀಕ್ಷೆಯಾಗಿದೆ ಎಂದರೆ ತಪ್ಪಾಗಲಾರದು. ಈ ಕಾರಣದಿಂದಲೇ ಸಚಿವ ಸ್ಥಾನ ಕಳೆದುಕೊಂಡ ನಂತರ ತಮ್ಮ ಸಂಪೂರ್ಣ ಗಮನವನ್ನು ಕ್ಷೇತ್ರದತ್ತ ಕೇಂದ್ರೀಕರಿಸಿದ್ದರು. ಶತಾಯಗತಾಯ ಈ ಚುನಾವಣೆಯಲ್ಲಿಯೂ ಜಯ ಸಾಧಿಸುವ ಮೂಲಕ ಕ್ಷೇತ್ರದಲ್ಲಿ ಪ್ರಾಬಲ್ಯ ಮುಂದುವರಿಸಿಕೊಂಡು ಹೋಗುವ ಯೋಜನೆ ಅವರದ್ದಾಗಿದೆ.
ಕಳೆದೆರೆಡು ಚುನಾವಣೆಗಳಲ್ಲಿ ಪರಾಭವಗೊಂಡಿರುವ ಬಿಜೆಪಿ ಅಭ್ಯರ್ಥಿ ಆರಗ ಜ್ಞಾನೇಂದ್ರಗೆ ಈ ಚುನಾವಣೆಯು ಅತ್ಯಂತ ನಿರ್ಣಾಯಕವಾಗಿದೆ. ಗೆಲ್ಲಲೇ ಬೇಕಾದ ಒತ್ತಡದಲ್ಲಿದ್ದಾರೆ. ಈ ಚುನಾವಣೆಯು ಅವರ ರಾಜಕೀಯ ಜೀವನದಲ್ಲಿ ಅತ್ಯಂತ ಮಹತ್ವದ ತಿರುವಾಗಿದೆ. ಜಯಕ್ಕಾಗಿ ಇನ್ನಿಲ್ಲದ ಕಸರತ್ತು ನಡೆಸಲಾರಂಭಿಸಿರುವ ಅವರು, ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಗಳಿಗೆ ಹೋಲಿಸಿದರೆ ಕಳೆದ ಹಲವು ವರ್ಷಗಳಿಂದ ಚುನಾವಣೆಗೆ ಸಕಲ ಪೂರ್ವಭಾವಿ ಸಿದ್ದತೆ ಮಾಡಿಕೊಂಡು ಬಂದಿದ್ದಾರೆ.
ಜೆಡಿಎಸ್ನಿಂದ ಕಣಕ್ಕಿಳಿಯುತ್ತಿರುವ ಆರ್.ಎಂ.ಮಂಜುನಾಥಗೌಡರಿಗೆ ಈ ಚುನಾವಣೆಯು ರಾಜಕೀಯ ಜೀವನದ ಅಳಿವು-ಉಳಿವಿನ ಸಂಗತಿಯಾಗಿದೆ. ಕಳೆದ ಬಾರಿ ಸ್ಪರ್ಧಿಸಿ ಉತ್ತಮ ಪೈಪೋಟಿ ನೀಡಿ ಸುಮಾರು ಒಂದೂವರೆ ಸಾವಿರ ಮತಗಳ ಅಂತರದಲ್ಲಿ ಪರಾಭವಗೊಂಡಿದ್ದ ಅವರು, ಈ ಬಾರಿಯ ಚುನಾವಣೆಯಲ್ಲಿ ಜಯ ಸಾಧಿಸುವ ಉಮೇದಿನಲ್ಲಿದ್ದಾರೆ.
2013 ರ ಎಲೆಕ್ಷನ್ ಮತಗಳಿಕೆ
2013 ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಿಮ್ಮನೆ ರತ್ನಾಕರ್ ರವರು 37,160 ಮತಗಳಿಸಿ ಆಯ್ಕೆಯಾಗಿದ್ದರು. ಇವರ ಸಮೀಪದ ಪ್ರತಿಸ್ಪರ್ಧಿ ಕೆಜೆಪಿಯ ಆರ್.ಎಂ.ಮಂಜುನಾಥಗೌಡಗೆ 35,817 ಬಿಜೆಪಿಯ ಆರಗ ಜ್ಞಾನೇಂದ್ರಗೆ 34,446 ಜೆಡಿಎಸ್ನ ಆರ್. ಮದನ್ಗೆ 21,295 ಮತಗಳು ಬಂದಿದ್ದವು. ಉಳಿದಂತೆ ಬಿಎಸ್ಆರ್ ಪಕ್ಷದಿಂದ ಕಣಕ್ಕಿಳಿದಿದ್ದ ಅಶೋಕ ಮೂರ್ತಿಯವರು 5161 ಬಿಎಸ್ಪಿಯ ಕುಣಜೆ ಮಂಜುನಾಥ ಗೌಡರವರು 1062 ಪಕ್ಷೇತರವಾಗಿ ಕಣಕ್ಕಿಳಿದಿದ್ದ ಹೆಚ್.ಬಿ.ಕಿರಣ್ಕುಮಾರ್ 1627 ನಿಶ್ಚಲ ವಿ. ಶೆಟ್ಟಿಯವರು 1363 ಮತ ಗಳಿಸಿ ಗಮನ ಸೆಳೆದಿದ್ದರು.
ಈ ಬಾರಿ ಕಣದಲ್ಲಿರುವ ಅಭ್ಯರ್ಥಿಗಳು
ಈ ಬಾರಿಯ ಚುನಾವಣೆಯಲ್ಲಿ ಒಟ್ಟಾರೆ 8 ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ. ಕಿಮ್ಮನೆ ರತ್ನಾಕರ್ (ಕಾಂಗ್ರೆಸ್), ಆರಗ ಜ್ಞಾನೇಂದ್ರ (ಬಿಜೆಪಿ), ಆರ್.ಎಂ.ಮಂಜುನಾಥಗೌಡ (ಜೆಡಿಎಸ್), ಎ. ಪುಟ್ಟಬ್ಬ (ಎಂಇಪಿ), ಉಳಿದಂತೆ ಪಕ್ಷೇತರರಾಗಿ ರತ್ನಾಕರ, ಎನ್.ಎಸ್.ಶ್ರೀನಿವಾಸ, ಟಿ.ಮುನೀರ್, ಶ್ರೀಲತಾ ಶೆಟ್ಟಿಯವರು ಅಭ್ಯರ್ಥಿಗಳಾಗಿದ್ದಾರೆ.