ಮಾನವನ ತೊಡೆ ಮೂಳೆಯ ಕಠಾರಿ!
ಪ್ರಪಂಚೋದ್ಯ
ನ್ಯೂ ಗಿನಿಯಾದ ಯೋಧರು ತಮ್ಮ ಮೃತಪಟ್ಟ ತಂದೆಯ ತೊಡೆ ಮೂಳೆಗಳನ್ನು ಸಂಗ್ರಹಿಸಿ ಆಭರಣಗಳನ್ನು ಮಾತ್ರ ತಯಾರಿಸುತ್ತಿರಲಿಲ್ಲ. ಬದಲಾಗಿ ಕಠಾರಿಗಳನ್ನು ಕೂಡ ತಯಾರಿಸುತ್ತಿದ್ದರು ಎಂಬುದು ಈಗ ಬೆಳಕಿಗೆ ಬಂದಿದೆ.
ಹೇರಳವಾಗಿ ಸಿಗುವ ಹಾಗೂ ಸುಲಭವಾಗಿ ಹಿಡಿದು ಕೊಲ್ಲಬಹುದಾದ ಹಾರಲು ಸಾಧ್ಯವಿಲ್ಲದ ಕ್ಯಾಸ್ಸೋವಾರಿಸ್ ಎಂದು ಕರೆಯಲಾಗುವ ಹಕ್ಕಿಯ ಮೊಣಕಾಲಿನ ಎಲುಬಿನಿಂದ ಅಪಾಯಕಾರಿ ಕಠಾರಿಗಳನ್ನು ತಯಾರಿಸುವ ಸಾಧ್ಯತೆ ಇರುವಾಗ ಮಾನವ ಮೂಳೆಗಳನ್ನು ಬಳಸುವ ಅಗತ್ಯತೆ ಏನಿತ್ತು? ಎಂಬ ಪ್ರಶ್ನೆ ತಜ್ಞರಿಗೆ ಮೂಡಿತ್ತು. ಮೂಳೆಯ ಒರಟುತನ ಹಾಗೂ ಸಾಂಕೇತಿಕತೆ ಮಾನವ ಮೂಳೆಯ ಬಗ್ಗೆ ಒಲವು ಹೊಂದಲು ಕಾರಣವಾಗಿರಬಹುದು ಎಂದು ತಜ್ಞರು ಹೇಳಿದ್ದಾರೆ.
ಬುಧವಾರ ಅಂತ್ಯಗೊಂಡ ವಿಶೇಷ ಅಧ್ಯಯನ ಕಠಾರಿ ತಯಾರಿಕೆಗೆ ಮಾನವನ ತೊಡೆ ಮೂಳೆ ಸೂಕ್ತವಾದ ವಸ್ತುವಲ್ಲ. ಆದರೆ, ಇದು ಗೌರವದ ಸಂಕೇತ ಎಂದು ಹೇಳಿದೆ. ಹಕ್ಕಿಯ ಎಲುಬಿನಿಂದ ತಯಾರಿಸುವ ಕಠಾರಿಗಿಂತ ಮಾನವನ ತೊಡೆಯ ಮೂಳೆಯಿಂದ ತಯಾರಿಸುವ ಕಠಾರಿಯ ವಿನ್ಯಾಸ ವಿಭಿನ್ನವಾಗಿರುತ್ತದೆ ಎಂದು ಜರ್ನಲ್ ರಾಯಲ್ ಸೊಸೈಟಿ ಓಪನ್ ಸಯನ್ಸ್‌ನಲ್ಲಿ ಪ್ರಕಟವಾದ ಪ್ರಬಂಧದ ಸಹ ಲೇಖಕರಾಗಿರುವ ಅಮೆರಿಕದ ಡಾರ್ಟ್‌ವೌತ್ ಕಾಲೇಜಿನ ನಥಾನಿಯಲ್ ಡೊಮಿನಿ ಹೇಳಿದ್ದಾರೆ.
ಡೊಮಿನಿ ತಂಡ ಕ್ಯಾಸ್ಸೋವಾರಿಸ್ ಹಕ್ಕಿಯ ಮೊಣಕಾಲಿನ ಮೂಳೆ ಹಾಗೂ ಮಾನವನ ತೊಡೆಯ ಮೂಳೆಯ ಸಾಮರ್ಥ್ಯವನ್ನು ಹೋಲಿಕೆ ಮಾಡಿದೆ ಹಾಗೂ ಇದೆರೆಡರ ಸಾಮರ್ಥ್ಯ ಸಮಾನವಾಗಿದೆ. ಆದುದರಿಂದ ಈ ಎರಡೂ ಎಲುಬುಗಳೂ ಕಠಾರಿ ತಯಾರಿಸಲು ಉತ್ತಮವಾಗಿದೆ. ಆದರೆ, ಮಾನವ ಮೂಳೆಯ ಕಠಾರಿಯ ಮೇಲಿನ ವಿನ್ಯಾಸ ಬಹುಕಾಲ ಉಳಿಯುತ್ತದೆ ಎಂದು ತಂಡ ಹೇಳಿದೆ.
ಮಾನವ ಮೂಳೆ ಬಲಿಷ್ಠವಾಗಿದೆ. ಅದರ ಆಕಾರ ಸ್ವಲ್ಪ ವಕ್ರವಾಗಿರುವುದೇ ಇದಕ್ಕೆ ಕಾರಣ ಎಂದು ಸಂಶೋಧಕರು ಹೇಳಿದ್ದಾರೆ. ‘‘ಈ ವಕ್ರತೆಯ ಕಾರಣದಿಂದ ಮಾನವ ಮೂಳೆಯ ಕಠಾರಿ ಹೋರಾಟದ ಸಂದರ್ಭ ತುಂಡಾಗುವ ಸಾಧ್ಯತೆ ತುಂಬಾ ಕಡಿಮೆ. ಅಲ್ಲದೆ ವ್ಯಕ್ತಿ ಮಾನವ ಮೂಳೆಯಿಂದ ಮಾಡಿದ ಕಠಾರಿಯನ್ನು ತುಂಡಾಗದಂತೆ ಕಾಪಾಡಿಕೊಳ್ಳುತ್ತಾನೆ. ಯಾಕೆಂದರೆ ಆ ಕಠಾರಿ ತಂದೆಯ ಎಲುಬಿನಿಂದ ಮಾಡಲಾಗಿದೆ ಹಾಗೂ ಅದಕ್ಕೆ ಸಾಮಾಜಿಕ ಗೌರವ ಇದೆ.’’ ಎಂದು ಅವರು ಹೇಳಿದ್ದಾರೆ.