ತಮ್ಮಲ್ಲಿ ಅಡಗಿರುವ ಬ್ರಾಹ್ಮಣ ನಿಲುವನ್ನು ಮರೆಯಬಾರದು
ಅಮರಾವತಿಯ ಕೆಲವು ಮಾದಿಗರು ಅಮರಾವತಿಯಿಂದ ಬಿಡುಗಡೆಯಾಗುವ ‘ಉದಯ್’ ಅನ್ನುವ ಪತ್ರಿಕೆಯಲ್ಲಿ ಬರೆದಿರುವ ಒಂದು ಪತ್ರದ ಪ್ರಕಾರ ಅಲ್ಲಿಯ ಮಾದಿಗರು ಬಹುಶಃ ಈ ಸತ್ಯಾಗ್ರಹದಲ್ಲಿ ಭಾಗವಹಿಸುವುದಿಲ್ಲ ಅನಿಸುತ್ತದೆ. ‘ತಾ.28ರಂದು ಇಲ್ಲಿಯ ದಲಿತರ ಜಾಹೀರು ಸಭೆಯಲ್ಲಿ ಹಂಚಲಾದ ಒಂದು ಪ್ರಕಟನಾ ಪತ್ರ (ಹಸ್ತ ಪತ್ರಿಕೆ). ‘‘ಎಲ್ಲ ಅಮರಾವತಿ ನಗರವಾಸಿಗಳಿಗೆ ಕೆಳಗೆ ಸಹಿ ಮಾಡಿರುವ ಕೆಲವು ಮಾದಿಗರು ವಿನಯದಿಂದ ತಿಳಿಸುವುದೇನೆಂದರೆ, ಇಲ್ಲಿಯ ಹೊಲೆಯರ ಕೆಲವು ನೇತಾರರು ಜಾತಿ ಸುಧಾರಣೆಗೆ ಸಂಬಂಧಿಸಿದೆ ಎಂದು ಹೇಳಿ ಒಂದು ಕಾಗದದ ಮೇಲೆ ನಮ್ಮ ಹಸ್ತಾಕ್ಷರಗಳನ್ನು ಪಡೆದರು. ಅದರಂತೆ ನಾವು ಗಣೇಶ ಥಿಯೇಟರ್ನಲ್ಲಿ ಸಭೆಗೆ ಹೋದಾಗ ಅಲ್ಲಿ ಜಾತಿಗೆ ಸಂಬಂಧಿಸಿದಂತಹ ಯಾವುದೇ ವಿಷಯವಿರಲಿಲ್ಲ. ಅಲ್ಲಿ, ಶ್ರೀ ಅಂಬೆಯ ದೇವಸ್ಥಾನದಲ್ಲಿ ಪ್ರವೇಶಿಸಿ ದರ್ಶನ ಪಡೆಯಬೇಕು ಅನ್ನುವ ಚರ್ಚೆಗಳಾಗುತ್ತಿರುವುದನ್ನು ನೋಡಿ ನಮಗೆ ಆಶ್ಚರ್ಯವಾಯಿತು. ಇದರಿಂದ ತಲೆತಲಾಂತರದಿಂದ ನಡೆದುಕೊಂಡು ಬಂದಿರುವಂತಹ ಸನಾತನ ಧರ್ಮಕ್ಕೆ ಧಕ್ಕೆಯುಂಟಾಗುವುದರಿಂದ ನಾವು ಈ ಸಭೆಯ ನಿರ್ಧಾರವನ್ನು ಒಪ್ಪುವುದಿಲ್ಲ. ನಾವು ಮಾದಿಗರು ತಲೆತಲಾಂತರದಿಂದ ನಮ್ಮ ತಾತ ಮುತ್ತಾತ, ತಂದೆಯಂದಿರು ನಡೆದುಬಂದ ಹಾದಿಯನ್ನೇ ತುಳಿಯಲು, ಹಾಗೇ ವರ್ತಿಸಲು ಸಿದ್ಧರು. ಮೇಲೆ ಹೇಳಿದ ಹೊಲೆಯರು ನಮ್ಮಿಂದ ಪಡೆದುಕೊಂಡ ಹಸ್ತಾಕ್ಷರಗಳು ಬರೀ ಮೋಸ’’.
ಇದು ತುಂಬ ದುಃಖದ ವಿಷಯ. ಭಾರತದ ಬ್ರಾಹ್ಮಣರಿಗಷ್ಟೇಯಲ್ಲ ಜಗತ್ತಿನ ಎಲ್ಲರಿಗೂ ಅಸ್ಪಶ್ಯತೆಯಿಂದಾಗುತ್ತಿರುವ ಅನ್ಯಾಯದ ಬಗ್ಗೆ ಸಿಟ್ಟಿರುವ ಭಂಗಿಗಳನ್ನು ಬಿಟ್ಟರೆ ಉಳಿದೆಲ್ಲರಿಂದಲೂ ಹೀನರೆಂದು ಕರೆಯಿಸಿಕೊಳ್ಳುವ ಮಾದಿಗರ ಕೆಲವು ಜನ ತಮ್ಮ ಪೂರ್ವಜರಿಗೆ ಸಿಗುತ್ತಿದ್ದ ವರ್ತನೆ ತಮಗೂ ಸಿಕ್ಕರೂ ಚಿಂತೆಯಿಲ್ಲ ಎಂದು ತಮ್ಮ ಬಾಯಿಯಿಂದಲೇ ಹೇಳುವುದು ಎಷ್ಟು ಖೇದದ ಸಂಗತಿ. ಈ ಘಟನೆಗೆ ಸ್ವತಃ ಮಾದಿಗರೇ ಕಾರಣರು ಎಂದೆನಿಸುತ್ತಿಲ್ಲ. ದಲಿತರ ಅಧೋಗತಿಯಾಗಿದೆ ಅನ್ನುವುದು ನಿಜವಾದರೂ ತಮ್ಮ ಅಧೋಗತಿಯನ್ನು ಅರ್ಥಮಾಡಿಕೊಳ್ಳದಂತಹ ಜನ ಅವರಲ್ಲಿ ಬಹಳ ಕಡಿಮೆ. ಹಾಗಾಗಿಯೇ ಮೇಲೆ ಹೇಳಿದಂತೆ ಹಕ್ಕುಗಳನ್ನು ಬಿಟ್ಟುಕೊಡುವ ಜನ ದಲಿತರಲ್ಲಿ ಕಾಣಿಸಿಕೊಂಡಿದ್ದರೆ ಅದು ಯಾರದ್ದೋ ಪ್ರೇರಣೆಯಿಂದಲೇ ಇರಬೇಕು ಅನ್ನುವ ಅನುಮಾನ ಕಾಡುವುದು ಸಹಜ. ಅಲ್ಪಕಾಲಿಕ ಸ್ವಾರ್ಥಕ್ಕೆ ಕಟ್ಟು ಬಿದ್ದು ತಮ್ಮ ಶಾಶ್ವತ ಹಕ್ಕುಗಳನ್ನು ಕಳೆದುಕೊಳ್ಳುತ್ತಿದ್ದೇವೆ ಅನ್ನುವ ಅರಿವಿದ್ದರೂ ತಮ್ಮನ್ನು ಮಾರಿಕೊಳ್ಳುವ ಜನ ದಲಿತರಲ್ಲಿ ಸಿಗಲಿಕ್ಕಿಲ್ಲ ಎಂದು ಹೇಳುವುದು ನಮ್ಮಿಂದಾಗುತ್ತಿಲ್ಲ. ಮೇಲಿನ ಪತ್ರಿಕೆಯ ಮೇಲೆ ಹಸ್ತಾಕ್ಷರ ಮಾಡಿರುವ ಮಾದಿಗರೇನಾದರೂ ಇಂತಹ ಜನರೇ ಆಗಿದ್ದರೆ ಅವರು ತಾವೇ ತಮ್ಮ ಮನುಷ್ಯತ್ವವನ್ನು ಮಣ್ಣುಪಾಲು ಮಾಡುತ್ತಿದ್ದಾರೆ ಅನ್ನುವುದನ್ನು ನೋಡಿ ಎಲ್ಲರೂ ಅವರನ್ನು ಧಿಕ್ಕರಿಸುತ್ತಾರೆ.
ಇವೆರಡರಲ್ಲಿ ಯಾವುದೇ ವಿಷಯ ನಿಜವಾಗಿದ್ದರೂ ಮಾದಿಗರು ಅಂಬಾದೇವಿಯ ಸತ್ಯಾಗ್ರಹದಲ್ಲಿ ಭಾಗವಹಿಸುವುದಿಲ್ಲ ಅನ್ನುವ ಕಾರಣಕ್ಕೆ ಸತ್ಯಾಗ್ರಹ ನಿಲ್ಲಿಸುವ ಕಾರಣವಿಲ್ಲ. ಸತ್ಯಾಗ್ರಹವನ್ನು ಯಶಸ್ವಿಯಾಗಿಸಲು ಬೇಕಿರುವ ಬಲ ಸತ್ಯಾಗ್ರಹಗಳ ನಿರ್ಧಾರವನ್ನವಲಂಬಿಸಿದೆ ಅವರ ಜಾತಿಯನ್ನಲ್ಲ. ಯಾವುದೇ ಸತ್ಯಾಗ್ರಹ ಮಾಡುವ ಜನ ಸಂಖ್ಯೆಯಲ್ಲಿ ಎಷ್ಟೇ ಕಡಿಮೆಯಿದ್ದರೂ ಅವರದನ್ನು ಮಾಡಿ ತೋರಿಸಬಲ್ಲರು. ಆದರೆ ಅವರ ನಿರ್ಧಾರ ಮಾತ್ರ ದೃಢವಾಗಿರಬೇಕು. ಹಾಗಾಗಿ ಅಮರಾವತಿಯ ದಲಿತರಿಗೆ ನಮ್ಮದೊಂದು ಸೂಚನೆ, ದಲಿತರೆಲ್ಲ ಒಗ್ಗಟ್ಟಾಗಿ ಸತ್ಯಾಗ್ರಹದಲ್ಲಿ ಪಾಲ್ಗೊಂಡರೆ ಆಗುವಷ್ಟು ಸಂತೋಷ ಮತ್ತೊಂದಿಲ್ಲ. ಆದರೆ ಕಾರಣಾಂತರಗಳಿಂದ ಸಿಟ್ಟಿನಲ್ಲಿ ಕೆಲವು ಜನ ಬಾರಲು ಸಿರಾಕರಿಸಿದರೆ ಸತ್ಯಾಗ್ರಹ ಮಾಡುವವರು ಅವರನ್ನು ಕಾಯುತ್ತ ಕೂರುವ ಅಗತ್ಯವಿಲ್ಲ, ಸಮಯದ ಜೊತೆಗೂಡಿ ಕೆಲಸ ಮಾಡುವುದು ಅಗತ್ಯವಾಗಿದೆ ಅನ್ನುವುದನ್ನು ದಲಿತರು ಮರೆಯಬಾರದು.
ಎಲ್ಲೇ ಇದ್ದರೂ ಬ್ರಾಹ್ಮಣ ನಿಲುವನ್ನು ಚಚ್ಚಲೇಬೇಕು
ಅಮರಾವತಿಯ ಮಾದಿಗರ ಜಾಹೀರುಪತ್ರವನ್ನು ಓದಿದ ಮೇಲೆ ಕಳೆದ ತಿಂಗಳು ಮುಂಬೈಯಲ್ಲಿ ಮಾದಿಗರು ಹೊಲೆಯರಲ್ಲಿ ಬ್ರಾಹ್ಮಣರ ಭಕ್ತಿಯ ವಿರುದ್ಧ ಎರಡು ಬೇರೆಬೇರೆ ಕಡೆಗಳಿಂದ ಮಾಡಿದ ನಿಷೇಧವನ್ನು ನೋಡಿ ಒಬ್ಬರ ಬಗ್ಗೆ ತಿರಸ್ಕಾರ ಹುಟ್ಟಿದರೆ ಮತ್ತೊಬ್ಬರ ಮೇಲೆ ಧನ್ಯತಾ ಭಾವನೆ ಮೂಡುತ್ತದೆ. ಈ ನಿಷೇಧ ತೋರಿಸುವಾಗ ಮಾದಿಗರ ಉದ್ದೇಶ ಕೇವಲ ಹೊಲೆಯರ ಕಣ್ಣು ತೆರೆಸುವುದಷ್ಟೇ ಇದ್ದಿದ್ದರೆ ನಮಗೆ ಸಂತೋಷವಾಗುತ್ತಿತ್ತು. ಆದರೆ ಅವರ ಉದ್ದೇಶ ಹಾಗಿಲ್ಲ ಅನಿಸುತ್ತದೆ, ಏಕೆಂದರೆ ತಮ್ಮ ದೃಷ್ಟಿ ಕೇವಲ ಹೊಲೆಯರ ಮೇಲಷ್ಟೇಯಿದೆ ಎಂದು ಮಾದಿಗರಿಗೆ ಅನಿಸಿದ್ದರೆ ತಮ್ಮ ನಿಷೇಧವನ್ನವರು ವರಾಡ ಪ್ರಾಂತದ ಕಟ್ಟರ್ ಬ್ರಾಹ್ಮಣರ ಪತ್ರಿಕೆಯಲ್ಲಿ ಪ್ರಕಟಿಸದೆ ದಲಿತರಲ್ಲಿ ಹೆಚ್ಚು ಮಾರಾಟವಾಗುವ ಸಾಧಾರಣ ಪತ್ರಿಕೆಗಳಲ್ಲಿ ಪ್ರಕಟಿಸುತ್ತಿದ್ದರು. ಆದರೆ ಅವರ ಉದ್ದೇಶ ಕೇವಲ ಹೊಲೆಯರ ಕಣ್ಣು ತೆರೆಸುವುದಿರದೆ ಬ್ರಾಹ್ಮಣರನ್ನು ಹೊಲೆಯರ ವಿರುದ್ಧ ಎತ್ತಿ ಕಟ್ಟುವ ಒಂದು ಸಂಚಾಗಿತ್ತು ಅನ್ನುವುದಕ್ಕೆ ನಮಗೆ ದುಃಖವಾಗುತ್ತದೆ. ಎಲ್ಲೇ ಇದ್ದರೂ ಬ್ರಾಹ್ಮಣ ನಿಲುವನ್ನು ಚಚ್ಚಿ ಹಾಕಲೇಬೇಕು ಅನ್ನೋದು ನಮ್ಮ ನಿಲುವು ಆಗಿರುವುದರಿಂದ ಬ್ರಾಹ್ಮಣರ ನಿಲುವನ್ನು ವಿರೋಧಿಸುವ ಮಾದಿಗರನ್ನು ನಾವು ಅಭಿನಂದಿಸುತ್ತೇವೆ.
ಬ್ರಾಹ್ಮಣ ನಿಲುವನ್ನು ಸಮರ್ಥಿಸುವ ಜನರೊಡನೆ ಸಹಕರಿಸುವ ದಲಿತರ ನೇತಾರರೊಡನೆ ಅಸಹಕಾರ
ಈ ವಿರೋಧ ಎಷ್ಟರ ಮಟ್ಟಿಗೆ ಯೋಗ್ಯವಾಗಿದೆ ಎಂದು ಯೋಚಿಸಿದಾಗ ಯಾವ ಹೊಲೆಯರ ವಿರುದ್ಧ ದೂರು ಕೊಡಲಾಗಿದೆಯೋ ಅವರುಗಳು ಅಪರಾಧಿಗಳೆಂದು ನಮಗನಿಸಿತು. ದೂರುಗಳಲ್ಲಿ ಮೊದಲನೆಯ ದೂರು ಕೆ.ಕೆ. ಸಕಟ್ ಅವರದ್ದಾಗಿದೆ. ಅವರ ಪ್ರಕಾರ ತಾ. 28.8.1927ರಂದು ಪುಣೆಯ ಕಾಮಾಟಿಪುರದಲ್ಲಿ ಹೊಲೆಯರ ಮರಿಆಯಿ ದೇವಸ್ಥಾನದಲ್ಲಿ ಅವರಿಗೆ ಕಾಲಿಡಲು ಹೊಲೆಯರು ಅನುಮತಿ ಕೊಡಲಿಲ್ಲ. ಹೊಲೆಯರು ಸಕಟ್ ಅವರನ್ನು ದೇವಸ್ಥಾನದಲ್ಲಿ ಪ್ರವೇಶ ನಿರಾಕರಿಸಿದ್ದಕ್ಕೆ ಅವರಿಗೆ ದುಃಖವಾಗಿದೆ ಎಂದವರು ಹೇಳುತ್ತಾರೆ ಅವರ ದುಃಖಕ್ಕೆ ನಾವು ಸ್ಪಂದಿಸುತ್ತೇವೆ. ಅದನ್ನವರು ನಂಬಲಿ. ಆದರೆ ಈ ವಿಷಯದ ಬಗ್ಗೆ ಹೆಚ್ಚೇನು ಮಾತನಾಡಲಾರೆವು. ಏಕೆಂದರೆ ಇದರ ಬಗ್ಗೆ ನಾವು ಎಲ್ಲ ವಿಷಯಗಳನ್ನು ಕಲೆ ಹಾಕಿದಾಗ ಕೇವಲ ಸಕಟ್ ಅವರನ್ನಷ್ಟೇ ದೇವಸ್ಥಾನದಲ್ಲಿ ಪ್ರವೇಶಿಸಲು ನಿರಾಕರಿಸಿದ್ದು, ಉಳಿದ ಮಾದಿಗರಿಗಲ್ಲ ಎನ್ನುವುದು ಗೊತ್ತಾಯಿತು.
ಸಕಟ್ ಅವರನ್ನು ತಡೆದವರು ‘‘ಸಕಟ್ ಅವರನ್ನು ಬಿಟ್ಟು ನಾವು ಉಳಿದ ಯಾವುದೇ ಮಾದಿಗರನ್ನು ಪ್ರವೇಶಿಸಲು ತಡೆಯುವುದಿಲ್ಲ’’ ಅನ್ನುತ್ತಾರೆ. ಅದಕ್ಕವರು ಕೊಟ್ಟ ಕಾರಣವನ್ನು ಸಕಟ್ ಅವರು ಗಮನದಲ್ಲಿಡಬೇಕು. ಹೊಲೆಯರು ಕೊಟ್ಟ ಕಾರಣ ಹೀಗಿದೆ: ‘‘ಬ್ರಾಹ್ಮಣರ ನಿಲುವನ್ನು ಸಮರ್ಥಿಸುವವರ ಜೊತೆ ಯಾವ ಮಾದಿಗ ನೇತಾರನು ಸಹಕರಿಸುತ್ತಾನೋ, ಅವರು ಹೇಳಿದಂತೆ ಕೇಳುತ್ತಾನೋ ಹಾಗೂ ಹೊಲೆಯರ ಮತ್ತು ಚಮ್ಮಾರರ ತಪ್ಪನ್ನು ಹುಡುಕಿ ಹುಡುಕಿ ತೆಗೆದು ಬ್ರಾಹ್ಮಣರ ಪರ ವಹಿಸುತ್ತಾನೋ ಅವನನ್ನು ನಾವು ನಮ್ಮವನೆಂದು ಒಪ್ಪಿಕೊಳ್ಳಲಾರೆವು ಹಾಗೂ ಅವನನ್ನು ನಾವು ನಮ್ಮ ದೇವಸ್ಥಾನದೊಳಗೆ ಬರಗೊಡೆವು’’. ಇವರು ಯೋಚಿಸುವ ರೀತಿ ಸರಿಯಾಗಿರುವುದರಿಂದ ಈ ಸಕಟರು ಎಷ್ಟೇ ಹೇಳಿದರೂ ನಾವು ಹೊಲೆಯರನ್ನು ನಿಷೇಧಿಸಲಾರೆವು. ಅದಕ್ಕಿಂತ ನಾವೇ ಸಕಟರಿಗೆ ‘‘ನೀವು ಮೇಲೆ ಹೇಳಿದ ಆರೋಪವನ್ನು ಹಿಂದೆಗೆದುಕೊಳ್ಳಿ. ಆಮೇಲೆ ಶುದ್ಧ ಮನಸ್ಸಿನಿಂದ ಮರಿಆಯಿಯ ದೇವಸ್ಥಾನದಲ್ಲಿ ಕಾಲಿಡಲು ಅನುಮತಿ ಪಡೆಯಿರಿ’’ ಎಂದು ಸೂಚಿಸುತ್ತೇವೆ. ಆಗ ಹೊಲೆಯರು ಇತರ ಮಾದಿಗರಿಗೆ ದೇವಸ್ಥಾನದಲ್ಲಿ ಕಾಲಿಡಲು ಅನುಮತಿ ಕೊಡುವಂತೆ ಅವರಿಗೂ ಕೊಟ್ಟಾರು. ತಮ್ಮಲ್ಲಿರುವ ಬ್ರಾಹ್ಮಣ ನಿಲುವನ್ನು ಎಲ್ಲರೆದುರು ಮೆರೆಯಬಾರದು
ಎರಡನೇ ದೂರು ಲೋನಾವಾಲದ ಮಾದಿಗರದ್ದಾಗಿದೆ. ಅದರಲ್ಲಿ ಅವರು ಹೊಲೆಯರ ಬಗ್ಗೆ ಆರೋಪಿಸಿದ್ದಾರೆ. ಅಲ್ಲಿಯ ಹೊಲೆಯರು ಲೋನಾವಾಲದ ಚಹಾ ಅಂಗಡಿಯ ಮಾಲಕರಾದ ಮಾದಿಗನನ್ನು ಹೊಟೇಲ್ನೊಳಗೆ ಪ್ರವೇಶಿಸಲು ನಿರಾಕರಿಸಿದರಂತೆ. ದೂರು ಕೊಟ್ಟಿರುವ ಮಾದಿಗರ ಜೊತೆ ಒಂದು ಕಾಲದಲ್ಲಿ ಇದೇ ಹೊಲೆಯರು ಒಂದೇ ಕಪ್ಪು ಬಸಿಯಲ್ಲಿ ಮೈಲಿಗೆಯ ಬಗ್ಗೆ ಯೋಚಿಸದೆ ಚಹಾ ಕುಡಿದಿರುವಾಗ ಈಗ ಒಮ್ಮಿಂದೊಮ್ಮೆ ತಿರುಗಿಬಿದ್ದು ಹಳೆಯ ದಾರಿಗಳನ್ನು ಮರೆತು ‘‘ನಮಗೆ ಮಾದಿಗರ ಮೈಲಿಗೆಯಾಗುತ್ತದೆ’’ ಎಂದು ಹೇಳುವ ಕಾರಣವನ್ನಾದರೂ ಕೊಟ್ಟಿದ್ದರೆ ಇದರಲ್ಲಿ ದೋಷ ಯಾರದ್ದು ಅನ್ನುವುದನ್ನು ಕಂಡು ಹಿಡಿಯುವುದು ಸುಲಭವಾಗುತ್ತಿತ್ತು. ಪುಣೆಯ ಹಾಗೂ ಲೋನಾವಾಲದ ಎರಡೂ ಘಟನೆಗಳಲ್ಲಿ ನಾವು ಮಾಡಬೇಕಿದ್ದ ಎಲ್ಲಾ ವಿಚಾರಣೆಗಳನ್ನು ಮಾಡಿಯಾಯಿತು. ಇದರಿಂದ ಲೋನಾವಾಲದಲ್ಲಿ ಹೊಲೆಯರ ಹಾಗೂ ಮಾದಿಗರ ನಡುವೆ ಆರಂಭವಾದ ವೈಮನಸ್ಸಿಗೆ ಕಾರಣ ಕೆಲವು ಮಾದಿಗ ನೇತಾರರ ಮೂರ್ಖತನ ಎಂದು ತಿಳಿಯಿತು. ಒಂದು ಕಾಲದಲ್ಲಿ ಲೋನಾವಾಲದ ಮಾದಿಗರ ಹಾಗೂ ಹೊಲೆಯರ ನಡುವೆ ಒಗ್ಗಟ್ಟಿದ್ದು ದಿನೇ ದಿನೇ ಆ ಒಗ್ಗಟ್ಟು ಎಷ್ಟರ ಮಟ್ಟಿಗೆ ಬೆಳೆಯಿತು ಎಂದರೆ ಎಲ್ಲ ಸಾರ್ವಜನಿಕ ಹಬ್ಬ ಹರಿದಿನಗಳಲ್ಲಿ ಅಥವಾ ಏನಾದರೂ ಕಾರ್ಯಕ್ರಮವನ್ನಿಟ್ಟುಕೊಂಡಲ್ಲಿ ಹೊಲೆಯರು ಮಾದಿಗರನ್ನು ಆಮಂತ್ರಿಸಿ ಅವರೊಂದಿಗೆ ಸಹಪಾನ ಮಾಡುವುದಿತ್ತು. ಆದರೆ ಹಾಲಿನಲ್ಲಿ ಮೊಸರು ಬಿದ್ದು ಹಾಲು ಒಡೆಯುವಂತೆ ಮಾದಿಗರ ಕೆಲವು ನೇತಾರರು ಲೋನಾವಾಲಗೆ ಬಂದು ಈ ಒಗ್ಗಟ್ಟನ್ನು ಒಡೆದು ‘‘ಹೊಲೆಯರ ಕೈ ಅಡುಗೆ ತಿನ್ನಬೇಡಿ’’ ಎಂದು ಹೇಳಿಕೊಟ್ಟು ಹೋದರು.
ಅಷ್ಟೇ ಅಲ್ಲ, ಈ ನಿಯಮವನ್ನು ಪಾಲಿಸಬೇಕೆಂದು ಅವರು ಮಾದಿಗರಿಗೆ ಆಣೆ ಕೊಟ್ಟರು. ಇದರ ಪರಿಣಾಮವಾಗಿ ಹೊಲೆಯರು ಕೊಟ್ಟದ್ದು ತಿಂದರೆ ತಮ್ಮ ಜಾತಿಯವರು ತಮಗೆ ತೊಂದರೆ ಕೊಡುತ್ತಾರೆ ಅನ್ನುವ ಕಾರಣಗಳನ್ನು ಕೊಡುತ್ತಾ ಮಾದಿಗರು ಹೊಲೆಯರ ಆಮಂತ್ರಣವನ್ನು ನಿರಾಕರಿಸ ತೊಡಗಿದರು. ಮಾದಿಗರು ತಮ್ಮನ್ನು ಹೀನಾಯವಾಗಿ ಕಾಣುವುದನ್ನು ಕಂಡು ಹೊಲೆಯರಿಗೆ ದುಃಖವಾಗುವುದು ಸಹಜ. ಹಾಗಾಗಿಯೇ ಅವರು ಮಾದಿಗರನ್ನು ಚಹಾದ ಅಂಗಡಿಗೆ ಕಾಲಿಡಲು ನಿರಾಕರಿಸಿದ್ದು ಬಿಟ್ಟರೆ ಬೇರೆ ಕಾರಣವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮಾದಿಗರಿಗೆ ವ್ಯವಹಾರದ ಎರಡು ಮಾತುಗಳನ್ನು ಹೇಳಬೇಕು ಅನ್ನಿಸುತ್ತದೆ. ಮಾದಿಗರಿಗೆ ಹೊಲೆಯರಲ್ಲಿರುವ ಬ್ರಾಹ್ಮಣ ನಿಲುವು ನಷ್ಟವಾಗಬೇಕು ಅನ್ನಿಸುತ್ತಿದ್ದರೆ ಅವರು ತಮ್ಮಲ್ಲಿ ಅಡಗಿರುವ ಬ್ರಾಹ್ಮಣ ನಿಲುವನ್ನು ಮರೆಯಬಾರದು.
(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)