ತಂಗಿಯನ್ನು ವೈದ್ಯೆಯನ್ನಾಗಿಸಿದ ತೃಪ್ತಿಯಲ್ಲಿ ಮರೆಯಾದ ಜಬ್ಬಾರ್
ಯುವ ಬರಹಗಾರ, ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಜಬ್ಬಾರ್ ಪೊನ್ನೋಡಿ(31)ಬುಧವಾರ ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ರಾದರು. ಬಂಟ್ವಾಳ ತಾಲೂಕಿನ ಕೈಕಂಬ ಸಮೀಪದ ಪೊನ್ನೋಡಿ ನಿವಾಸಿ ಮುಹಮ್ಮದ್ ಹಾಗೂ ಜೈನಬಾ ದಂಪತಿಯ ಹಿರಿಯ ಮಗನಾಗಿರುವ ಜಬ್ಬಾರ್, ಸುಮಾರು 11 ವರ್ಷಗಳಿಂದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದು, ಕೀಮೋಥೆರಪಿ ಚಿಕಿತ್ಸೆಗೆ ಒಳಗಾಗುತ್ತಿದ್ದರು.
ಮೃತರು ತಂದೆ-ತಾಯಿ, ಪತ್ನಿ ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ. ಸಂತಾಪ: ಅಬ್ದುಲ್ ಜಬ್ಬಾರ್ ಪೊನ್ನೋಡಿ ನಿಧನಕ್ಕೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ದ.ಕ. ಜಿಲ್ಲಾ ಸಮಿತಿ ಸಂತಾಪ ಸೂಚಿಸಿದೆ.
ತಂದೆ-ತಾಯಿಗೆ ಮಗನೊಬ್ಬ ಹುಟ್ಟುವುದಾದರೆ ಜಬ್ಬಾರ್ನಂತಿರಬೇಕು. ತಂಗಿಗೆ ಅಣ್ಣನೊಬ್ಬ ಇರುವುದಾದರೆ ಜಬ್ಬಾರ್ನಂತಹ ಅಣ್ಣನಿರಬೇಕು. ಗೆಳೆಯನೊಬ್ಬ ಸಿಗುವುದಾದರೆ ಜಬ್ಬಾರ್ ನಂತಹ ಗೆಳೆಯನಿರಬೇಕು. ಹೌದು ಅಬ್ದುಲ್ ಜಬ್ಬಾರ್ ಪೊನ್ನೋಡಿ ಎಂಬ ಯುವಕನ ನಡವಳಿಕೆಯೇ ಹಾಗೆ. ಮಾತಿರಲಿ, ಕೃತಿಯಿರಲಿ, ಉದ್ಯೋಗ ವಿರಲಿ, ಸಲಹೆ ಸೂಚನೆಯಿರಲಿ ಎಲ್ಲದರಲ್ಲೂ ಆತ ಭಿನ್ನವಾಗಿಯೇ ಕಾಣುತ್ತಿದ್ದ. ಬುಧವಾರ ಮಧ್ಯರಾತ್ರಿ ಕೊನೆಯುಸಿರೆಳೆದ ಉತ್ಸಾಹದ ಚಿಲುಮೆ ಜಬ್ಬಾರ್ ಪೊನ್ನೋಡಿಗೆ ಮರಣ ಹತ್ತಿರದಲ್ಲೇ ಇದೆ ಎಂಬುದು ಗೊತ್ತಿತ್ತು. ಆತನಿಗೆ 18ನೇ ವರ್ಷದಲ್ಲೇ ಬಾಧಿತವಾದ ಕ್ಯಾನ್ಸರ್ ಕಾಯಿಲೆ, ಅದರೊಂದಿಗೆ ಆತ ಸೆಣಸಿದ ಪರಿ ನಿಜಕ್ಕೂ ಅದ್ಭುತವಾದುದು. ಕ್ಯಾನ್ಸರ್ ಪೀಡಿತನೊಬ್ಬ ಈ ಬಗೆಯಲ್ಲಿ ಬದುಕನ್ನು ಪ್ರೀತಿಸಿದ ಮತ್ತು ಅದರೊಂದಿಗೆ ಆತ್ಮವಿಶ್ವಾಸದೊಂದಿಗೆ ಹೋರಾಡಿದ ಜೊತೆಯಲ್ಲೇ ಇತರರೊಂದಿಗೆ ಬೆರೆತು ಹೋದ ಉದಾಹರಣೆಗಳು ಅಪರೂಪ.
ಬಿ.ಸಿ.ರೋಡ್ನ ಸಮೀಪದ ರಾಷ್ಟ್ರೀಯ ಹೆದ್ದಾರಿಯ ಬಳಿಯ ಪೊನ್ನೋಡಿಯ ಮುಹಮ್ಮದ್- ಜೈನಾಬಿ ದಂಪತಿಯ ಪ್ರಥಮ ಪುತ್ರ ಜಬ್ಬಾರ್ಗೆ ಮರಣ ಹೊಂದುವಾಗ ಸುಮಾರು ಮೂವತ್ತರ ಹರೆಯ. ಆದರೆ ಆತ ಸಣ್ಣ ಪ್ರಾಯದಲ್ಲಿ ಗಳಿಸಿಕೊಂಡ ಗೆಳೆತನ, ವಿಶ್ವಾಸ, ನಂಬಿಕೆ ಶತವರ್ಷಕ್ಕೂ ಮಿಗಿಲಾದುದು. ಪಿಯುಸಿ ಶಿಕ್ಷಣ ಪಡೆದಿದ್ದ ಜಬ್ಬಾರ್ ಉತ್ತಮ ಮಾತು ಗಾರನಾಗಿದ್ದ. ನಿರೂಪಕನಾಗಿದ್ದ. ಮಾತೃಭಾಷೆ ಬ್ಯಾರಿ ಯಾದರೂ ಕನ್ನಡವನ್ನು ಶುದ್ಧವಾಗಿ ಮಾತನಾಡಬಲ್ಲ ಹುಡುಗ. ಕಲಿಸಿದ-ಕಲಿಸದ ಗುರುಗಳೊಂದಿಗೆ ಆತನಿಗಿದ್ದ ಸಂಬಂಧ ವಿಶಿಷ್ಟವಾಗಿತ್ತು. ಒಮ್ಮೆ ಆತನಲ್ಲಿ ಮಾತನಾಡಿದ ವ್ಯಕ್ತಿ ಮತ್ತೊಮ್ಮೆ ಆತನನ್ನು ಹುಡುಕಿಕೊಂಡು ಹೋಗಬೇಕು. ಅಂತಹ ಸೂಜಿಗಲ್ಲಿನ ವ್ಯಕ್ತಿತ್ವ. ಬಡ ಕುಟುಂಬದಿಂದ ಬಂದ ಜಬ್ಬಾರ್ ತನ್ನ ಕಾಯಿಲೆಗೆ ವ್ಯಯಿಸಿದ ಹಣವೇ ಅಪಾರ. ಯಾರಲ್ಲೂ ಕೇಳಿದವನಲ್ಲ. ಯಾರಿಗೂ ಪೀಡಿಸಿದವನಲ್ಲ. ಅವನಿಗೆ ನೆರವಾದವರೂ ಅವನ ವ್ಯಕ್ತಿತ್ವದಿಂದ ಮರುಳಾದವರೇ ಆಗಿದ್ದಾರೆ. ಹೆದ್ದಾರಿ ಬದಿಯಲ್ಲಿ ತಾತ್ಕಾಲಿಕ ಕ್ಯಾಂಟೀನನ್ನು ನಡೆಸಿ ಬದುಕು ಸಾಗಿಸುತ್ತಿದ್ದ ಮುಹಮ್ಮದ್ರ ಮಗಳು ಡಾಕ್ಟರ್ ಆಗುವುದು ಕನಸಿನ ಮಾತಾಗಿತ್ತು. ಆದರೆ ಕನ್ನಡ ಮಾಧ್ಯಮದಲ್ಲಿ ಕಲಿತ ಹಸೀನಾಳನ್ನು ವೈದ್ಯಳನ್ನಾಗಿ ಮಾಡಲೇಬೇಕೆಂದು ಹಠ ತೊಟ್ಟ ಜಬ್ಬಾರ್ ಅವಳನ್ನು ಬೀದರ್ನಂತಹ 800 ಕಿ.ಮೀ. ದೂರವಿರುವ ಪ್ರದೇಶದ ಶಾಹಿನ್ ಎಂಬ ಶಿಕ್ಷಣ ಸಂಸ್ಥೆಗೆ ಸೇರಿಸಿದ. ಅಲ್ಲಿ ಸಿಇಟಿ ತರಬೇತಿ ಕೊಡಿಸಿ ಸರಕಾರಿ ಕೋಟಾದಲ್ಲಿ ಎಂಬಿಬಿಎಸ್ ಸೀಟು ಸಿಗುವ ಹಾಗೆ ಮಾಡಿದ ಛಲಗಾರ. ಅಣ್ಣನ ಆಸೆಗೆ ತಕ್ಕಂತೆ ಸ್ಪಂದಿಸಿದ ತಂಗಿ ಹಸೀನಾ ಸರಕಾರಿ ಕೋಟಾದಲ್ಲೇ ಎಂಬಿಬಿಎಸ್ ಸೀಟು ಪಡೆದು ಬೆಂಗಳೂರಿನ ಪ್ರತಿಷ್ಠಿತ ವೈ.ಎಸ್. ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಾಯನ್ಸ್ನಲ್ಲಿ ಇತ್ತೀಚೆಗೆ ತಾನೆ ಎಂಬಿಬಿಎಸ್ ಉತ್ತೀರ್ಣರಾಗಿದ್ದಾಳೆ
ತಂಗಿಗೆ ಆತ ನೀಡುತ್ತಿದ್ದ ಆತ್ಮವಿಶ್ವಾಸ, ಧೈರ್ಯ, ಪ್ರೋತ್ಸಾಹ ಆಕೆ ಕಲಿತ ಶಾಲಾ ಕಾಲೇಜಿನಿಂದಲೂ ಲಭಿಸಿರದು. ಈ ಕಾಲದಲ್ಲಿ ತಮ್ಮ ಮಕ್ಕಳನ್ನು ಡಾಕ್ಟರ್ ಮಾಡಲು ಇನ್ನಿಲ್ಲದ ಕಸರತ್ತು ಮಾಡುವ ಲಕ್ಷಾಧಿಪತಿ ಪಾಲಕರ ಮುಂದೆ ಕಡಿಮೆ ಖರ್ಚಿನಲ್ಲಿ ಕನ್ನಡ ಮಾಧ್ಯಮದ ಹುಡುಗಿಯನ್ನು ಡಾಕ್ಟರ್ ಮಾಡಿಸಿದ ಜಬ್ಬಾರ್ ಒಂದು ಕೌತುಕವಾಗಿಯೇ ಕಾಣುತ್ತಾನೆ.
ಜಬ್ಬಾರ್ಗೆ ಬಹುಮುಖಿ ಹವ್ಯಾಸಗಳಿದ್ದವು. ಸಾಮಾಜಿಕ ಸದಾ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದ. ದೇಶ ವಿದೇಶಗಳ ನೋವು-ನಲಿವುಗಳಿಗೆ ಬಹುಬೇಗ ಸಂವೇದನಾಶೀಲನಾಗುತ್ತಿದ್ದ. ತನ್ನೂರಿನ ಮಕ್ಕಳು ಕಲಿಯಬೇಕೆಂಬ ತುಡಿತ ಹೊಂದಿದ್ದ. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲು ಕಾರ್ಯಕ್ರಮ ಸಂಘಟಿಸುತ್ತಿದ್ದ. ವೃತ್ತಿ ಮಾರ್ಗದರ್ಶನ ನಡೆಸಲು ಯೋಜನೆ ರೂಪಿಸುತ್ತಿದ್ದ. ನಾಯಕತ್ವ, ವ್ಯಕ್ತಿತ್ವ ವಿಕಸನದ ತರಬೇತಿಗೆ ಹಾಜರಾಗುತ್ತಿದ್ದ. ಕವನಗಳನ್ನು ಗೀಚಿ ಫೇಸ್ಬುಕ್ನಲ್ಲಿ ಪ್ರಕಟಿಸುತ್ತಿದ್ದ. ಜಾಲತಾಣಗಳನ್ನು ಜಾಲಾಡಿ ಮೊಗೆದು ಅತ್ಯುತ್ತಮವಾದುದನ್ನು ಇತರರಿಗೆ ಹಂಚುತ್ತಿದ್ದ.
ಪಿಯುಸಿ ಓದುತ್ತಿದ್ದಾಗಲೇ ಎಲುಬಿನ ಕ್ಯಾನ್ಸರ್ಗೆ ಒಳಗಾದ ಜಬ್ಬಾರ್ ತನ್ನ ಕಾಲಿನ ಸ್ವಾಧೀನ ಕಳೆದುಕೊಂಡಿದ್ದ. ಆದರೂ ಸ್ತೈರ್ಯ ಕಳೆದುಕೊಳ್ಳದೆ ತನ್ನ ಪಾಲಕರನ್ನು ತಾನೇ ಸಮಾಧಾನ ಪಡಿಸಿಕೊಂಡಿದ್ದ. ಕೆಲವು ವರ್ಷ ಆ ಮಾರಕ ಕಾಯಿಲೆಯೊಂದಿಗೆ ಹೋರಾಡಿ ಅದನ್ನು ತನ್ನ ದೇಹದಿಂದ ಹೊರಗಟ್ಟುವಲ್ಲಿ ಯಶಸ್ವಿಯೂ ಆಗಿದ್ದ. ಮಾರಕ ಕಾಯಿಲೆಯಿಂದ ಮುಕ್ತನಾದೆ ಎಂದು ಸಮಾಧಾನದಿಂದಿರುವಾಗಲೇ ಅದು ಕಾಣಿಸಿಕೊಂಡಿತ್ತು. ಈ ಬಾರಿ ಜಬ್ಬಾರ್ನ ಹೃದಯವನ್ನೇ ಅದುಮಿದ ಕ್ಯಾನ್ಸರ್ನ ವಿರುದ್ಧ ಎದೆಗುಂದದೆ ಸತತ ಏಳು ವರ್ಷಗಳಿಂದ ಹೋರಾಡಿದ. ‘ಕ್ಯಾನ್ಸರ್ ಬಂದಿರುವುದು ನನ್ನ ದೇಹಕ್ಕೆ ಮಾತ್ರ ಮನಸ್ಸಿಗಲ್ಲ’ ಎಂದು ಹೇಳುತ್ತಿದ್ದ ಜಬ್ಬಾರ್ ವೈದ್ಯರನ್ನೇ ತಮಾಷೆಯ ಮಾತುಗಳಿಂದ ನಗಿಸುತ್ತಿದ್ದ. ಈತನ ಧೈರ್ಯಕ್ಕೆ ಆತನ ವೈದ್ಯರೇ ದಂಗಾಗಿದ್ದರು. ಕೊನೆಗೇ ಆತನ ಸ್ನೇಹಿತರಾಗಿಯೇ ಬಿಟ್ಟಿದ್ದರು. ಜಬ್ಬಾರ್ ಆಸ್ಪತ್ರೆಗೆ ದಾಖಲಾದುದಕ್ಕೆ ಲೆಕ್ಕವಿಲ್ಲ. ವೈದ್ಯರು ಶುಶ್ರೂಷಕಿಯವರು, ಪರಿಚಾರಕರು ಎಲ್ಲರೂ ಚಿರಪರಿಚಿತರೇ. ಪಕ್ಕದ ಹಾಸಿಗೆಯಲ್ಲಿ ಮಲಗಿದ ರೋಗಿಗಳಿಗೆ ತಾನೇ ಉಚಿತ ಸಲಹೆ ನೀಡುತ್ತಿದ್ದ, ಸರಕಾರದ ನೆರವು ಪಡೆಯಲು ಅಲ್ಲೂ ನೆರವಾಗುತ್ತಿದ್ದ. ಬಿ.ಸಿ.ರೋಡ್ ಸರಕಾರಿ ಬಸ್ ಡಿಪೋದ ಎದುರೇ ಮನೆಯನ್ನು ಹೊಂದಿರುವ ಜಬ್ಬಾರ್ ತನ್ನ ತಾಯಿಯಲ್ಲಿ ಈ ರೀತಿ ಹೇಳುತ್ತಿದ್ದ, ‘ನೋಡಮ್ಮ ನಮ್ಮ ಬಸ್ಗಳೆಲ್ಲ ಬಂದಿವೆಯಾ? ಲೆಕ್ಕ ಮಾಡು’ ಎಂದು. ನೋವಿನ ನಡುವೆಯೂ ತಾಯಿಯೊಂದಿಗೆ ತಮಾಷೆಯ ಕ್ಷಣಗಳನ್ನು ಕಳೆಯುತ್ತಿದ್ದ ಜಬ್ಬಾರ್ನ ಮೊಬೈಲಲ್ಲಿ ತನ್ನ ತಂದೆ ತಾಯಿಯ ಫೋಟೋನೆ ಇದೆ.
ಜಬ್ಬಾರ್ ಮರಣ ಹೊಂದುವ ಎರಡು ದಿನ ಮೊದಲು ನನಗೆ ಸಂದೇಶ ಕಳುಹಿಸಿ ನಿಮ್ಮ ಸಂಸ್ಥೆಯ ಫಲಿತಾಂಶ ಎಷ್ಟು ಎಂದು ಕೇಳಿದ್ದ, ನಾನು ಸ್ವಲ್ಪತಡವಾಗಿ ಪ್ರತಿಕ್ರಿಯೆ ಕಳುಹಿಸಿದ್ದೆ. ಯಾವತ್ತೂ ಫಲಿತಾಂಶಕ್ಕಾಗಿ ಅಭಿನಂದಿಸುವ ಜಬ್ಬಾರ್ನಿಂದ ಈ ಬಾರಿ ಯಾವುದೇ ಪ್ರತಿಕ್ರಿಯೆಗಳು, ಸೂಚಕಗಳು ಬರಲಿಲ್ಲ! ಕೊನೆಗೂ ಬರಲೇ ಇಲ್ಲ!.
ನನಗೆ ಗೊತ್ತು, ಜಬ್ಬಾರ್ ಮತ್ತೆ ಹುಟ್ಟಿ ಬರಲಾರ! ಏಕೆಂದರೆ ಅವನು ಬರಲಾರದ ಲೋಕಕ್ಕೆ ಪಯಣಿಸಿದ್ದಾನೆ. ಆದರೆ ಜಬ್ಬಾರ್ನಂತವರು ಮತ್ತೆ ಮತ್ತೆ ಹುಟ್ಟಿ ಬರಬೇಕು! ಬರಲೇಬೇಕು! ನಾನು ಅವನ ತಂಗಿ ಡಾ.ಹಸೀನಾಳಲ್ಲಿ ಜಬ್ಬಾರ್ ನನ್ನು ಕಾಣಬಯಸುತ್ತೇನೆ.