ಅಟ್ಟೆಯ ಚುಚ್ಚುವ ಉಳಿ
ಅಟ್ಟೆಯ ಚುಚ್ಚುವ ಉಳಿಯ ಮೊನೆಯಲ್ಲಿ,
ಪ್ರತ್ಯಕ್ಷವಾದ ಪರಮೇಶ್ವರನ ಕಂಡು,
ಇತ್ತಲೇಕಯ್ಯ, ಕಾಯದ ತಿತ್ತಿಯ ಹೊತ್ತಾಡುವವನ ಮುಂದೆ?
ನಿನ್ನ ಭಕ್ತರ ಠಾವಿನಲ್ಲಿಗೆ ಹೋಗಿ ಮುಕ್ತಿಯ ಮಾಡು.
ನೀ ಹೊತ್ತ ಬಹುರೂಪದಿ ತಪ್ಪದೆ
ರಜತಬೆಟ್ಟದ ಮೇಲಕ್ಕೆ ಹೋಗು,
ನಿನ್ನ ಭಕ್ತರ ಮುಕ್ತಿಯ ಮಾಡು.
ಕಾಮಧೂಮ ಧೂಳೇಶ್ವರನ ಕರುಣದಿಂದ ನೀನೆ ಬದಕು.
-ಮಾದಾರ ಧೂಳಯ್ಯ
ಪಾದರಕ್ಷೆ ಹೊಲಿಯುವ ಕಾಯಕದಲ್ಲಿ ತಲ್ಲೀನನಾಗಿ ವಚನ ರಚನೆ ಮಾಡಿದಾತ ಮಾದಾರ ಧೂಳಯ್ಯ. ದೇವರು ಒಬ್ಬನೇ. ಆತ ಸಕಲ ಚರಾಚರಗಳಲ್ಲಿ ಇರುವ ಹಾಗೆ ನಮ್ಮಳಗೂ ಇದ್ದಾನೆ. ಅವನನ್ನು ಕಾಯಕ ದಾಸೋಹದ ಮೂಲಕ ನಮ್ಮಾಳಗೇ ಕಂಡುಕೊಳ್ಳಬೇಕು ಎಂಬುದು ಆತನ ದೃಢನಿರ್ಧಾರವಾಗಿದೆ. ನಮ್ಮಾಳಗಿನ ದೇವರೇ ನಿಜವಾದ ದೇವರು. ಉಳಿದ ದೇವರುಗಳು ಮುಕ್ತಿ ಹೊಂದಿ ಸ್ವರ್ಗ ಸೇರುವ ಆಸೆಯುಳ್ಳ ಭಕ್ತರ ದೇವರುಗಳು. ಶರಣ ಸಂಕುಲದಲ್ಲಿನ ಭಕ್ತರು ಸ್ವರ್ಗ, ನರಕಗಳನ್ನು ನಂಬುವುದಿಲ್ಲ. ಕೈಲಾಸ ಎಂಬುದು ಕಲ್ಲುಗುಡ್ಡ ಎಂದು ಬಸವಣ್ಣನವರು ಹೇಳಿದರೆ, ಅಲ್ಲಿರುವ ಚಂದ್ರಶೇಖರ ಹೆಡ್ಡ ಎಂದು ಸಿದ್ಧರಾಮ ತಿಳಿಸಿದ್ದಾರೆ. ಹೀಗೆ ಶರಣರು ಹೊರಗಿನ ದೇವರುಗಳನ್ನು ತಿರಸ್ಕರಿಸಿ ಒಳಗಿನ ದೇವರನ್ನು ಆರಾಧಿಸಿದ್ದಾರೆ. ಮಾದಾರ ಧೂಳಯ್ಯನ ಉದ್ದೇಶ ಕೂಡ ಇದೇ ಆಗಿತ್ತು.
ಪಾದರಕ್ಷೆಯ ಅಟ್ಟೆಯನ್ನು ಚುಚ್ಚುವ ಉಳಿಯ ತುದಿಯಲ್ಲಿ ಕೈಲಾಸವೆಂಬ ರಜತಗಿರಿಯ ಪರಮೇಶ್ವರ ಪ್ರತ್ಯಕ್ಷವಾದುದನ್ನು ಮಾದಾರ ಧೂಳಯ್ಯ ಕಾಣುತ್ತಾನೆ. ಇಂಥ ಕಾಣುವ ದೇವರುಗಳ ಅವಶ್ಯಕತೆ ತಮಗಿಲ್ಲ ಎನ್ನುವ ರೀತಿಯಲ್ಲಿ ‘‘ಇತ್ತಲೇಕಯ್ಯಾ, ಕಾಯದ ತಿತ್ತಿಯ ಹೊತ್ತಾಡುವವನ ಮುಂದೆ?’’ ಎಂದು ಕೇಳುತ್ತಾನೆ. (ಕಾಯವನ್ನು ‘ಚರ್ಮದ ತಿದಿ’ ಎಂದು ಕರೆಯುವಲ್ಲಿ ಆತನ ಕಲ್ಪನಾಶಕ್ತಿಯನ್ನು ಅರಿತುಕೊಳ್ಳಬಹುದು. ಉಸಿರಾಡುವ ಜೀವಿಗಳ ಶರೀರವೆಂಬುದೊಂದು ಕಮ್ಮಾರನ ತಿದಿ ಇದ್ದ ಹಾಗೆಯೆ.) ಇಂಥ ಶರೀರವನ್ನು ಹೊತ್ತು ತಿರುಗುತ್ತ ಹೊಟ್ಟೆಹೊರೆಯುವ ತನ್ನ ಮುಂದೆ ಬಂದ ಕಾರಣವೇನೆಂದು ಮಾದಾರ ಧೂಳಯ್ಯ ದೇವರನ್ನು ಪ್ರಶ್ನಿಸುವುದರ ಮೂಲಕ ಅಗಮ್ಯ, ಅಗೋಚರ, ಅಪ್ರತಿಮ, ಅಪ್ರಮೇಯ ಶೂನ್ಯದೇವನಲ್ಲಿ ನಿಷ್ಠೆ ವ್ಯಕ್ತಪಡಿಸಿದ್ದಾನೆ. ‘ನಿನ್ನ ಆಸೆಬುರುಕ ಭಕ್ತರಿರುವ ಕಡೆ ಹೋಗಿ ಮುಕ್ತಿಯನ್ನು ದಯಪಾಲಿಸು ಎಂದು ವ್ಯಂಗ್ಯವಾಡಿದ್ದಾನೆ. ಬಹುರೂಪಗಾರನಾದ ನೀನು ಕೈಲಾಸಕ್ಕೆ ಹೋಗಿ ಭಕ್ತರು ಮುಕ್ತರಾಗುವಂತೆ ಮಾಡು’ ಎಂದು ಹೇಳುತ್ತ, ‘ನನ್ನೊಳಗೆ ನಿರಾಕಾರ ದೇವನಾದ ಕಾಮಧೂಮ ಧೂಳೇಶ್ವರನ ಕರುಣದಿಂದ ನೀನೆ ಬದಕು’ ಎಂದು ಹೊರಗಿನ ದೇವರನ್ನು ಮೂದಲಿಸಿದ್ದಾನೆ.
‘‘ಸತ್ಯಶುದ್ಧಕಾಯಕವ ಮಾಡಿ ತಂದು, ವಂಚನೆಯಿಲ್ಲದೆ ಪ್ರಪಂಚಳಿದು, ನಿಚ್ಚಜಂಗಮಕ್ಕೆ ದಾಸೋಹವ ಮಾಡುವ ಸದ್ಭಕ್ತನ ಹೃದಯದೊಳಗೆ ಅಚ್ಚೊತ್ತಿದಂತಿಪ್ಪಕಾಮಧೂಮ ಧೂಳೇಶ್ವರ.’’ ಎಂದು ಇನ್ನೊಂದು ವಚನದಲ್ಲಿ ನಿಜವಾದ ದೇವರು ಕಾಯಕ-ದಾಸೋಹಿಗಳ ಒಳಗೇ ಇರುವುದಾಗಿ ತಿಳಿಸಿದ್ದಾನೆ.