ಈ ವರ್ಷ ಯಾಕೆ ಈ ಗೊಂದಲ...?
ಮಾನ್ಯರೇ,
ಮೊನ್ನೆಯಷ್ಟೇ ಪಿಯುಸಿ ಫಲಿತಾಂಶ ಬಂದಿದೆ. ಎಸೆಸೆಲ್ಸಿ ಫಲಿತಾಂಶ ಇನ್ನಷ್ಟೇ ಬರಬೇಕು. ಜೊತೆಗೆ ರಾಜ್ಯದಲ್ಲಿ ಚುನಾವಣಾ ಸಮಯ. ಈ ಸಮಯದಲ್ಲೇ ಅವಧಿಗಿಂತ ಮುಂಚೆಯೇ ಪಿಯು ಕಾಲೇಜು ತರಗತಿಗಳು ಆರಂಭವಾಗಿವೆ. ಇದರಿಂದಾಗಿ ಹೆಚ್ಚಿನ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಹೆತ್ತವರು ಗೊಂದಲಕ್ಕೀಡಾಗಿದ್ದಾರೆ. ಇದರ ಬೆನ್ನಲ್ಲಿ ತಜ್ಞರ ಅಭಿಪ್ರಾಯ ಸಂಗ್ರಹಿಸದೆ ಈ ವರ್ಷದ ಶೈಕ್ಷಣಿಕ ವೇಳಾಪಟ್ಟಿ ತಯಾರಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಇದಕ್ಕೆ ಇಲಾಖೆಯೇ ಸೂಕ್ತ ಉತ್ತರ ಕೊಡಬೇಕು.
ಮೇ 2ಕ್ಕೆ ಕಾಲೇಜು ಆರಂಭವಾಗಿದ್ದರಿಂದ ಹಲವು ಸಮಸ್ಯೆಗಳು ಎದುರಾಗಿವೆ ಎಂಬ ಮಾತನ್ನು ಒಪ್ಪಬೇಕಾದದ್ದೇ. ವಿದ್ಯಾರ್ಥಿಗಳಿಗೆ ಜೂನ್ ಬರದೆ ಬಸ್ಪಾಸ್ ಸಿಗಲಾರದು. ಈ ಕುರಿತು ಕೆಎಸ್ಸಾರ್ಟಿಸಿ ಕೂಡಾ ಬಸ್ಪಾಸ್ ಪ್ರಿಂಟ್ ಹಾಗೂ ವಿತರಣೆಗೆ ಒಂದು ತಿಂಗಳಾದರೂ ಬೇಕು ಅಂತಿದೆ. ಹೀಗಾಗಿ ಬಸ್ ಟಿಕೆಟ್ಗೆ ಹೆಚ್ಚು ಹಣ ಪಾವತಿಸಿ ವಿದ್ಯಾರ್ಥಿಗಳು ಕಾಲೇಜಿಗೆ ಹೋಗಬೇಕಾದ ಪರಿಸ್ಥಿತಿ. ಇನ್ನೊಂದು ಕಡೆ ಚುನಾವಣೆ ಸಮಯವಾದ್ದರಿಂದ ಹೆಚ್ಚಿನ ಉಪನ್ಯಾಸಕರಿಗೆ ಎಲೆಕ್ಷನ್ಡ್ಯೂಟಿ ಇದೆ. ಇನ್ನೊಂದೆಡೆ ಪಿಯುಸಿ ಮರುಪರೀಕ್ಷೆ ಇದೆ. ಈ ಎಲ್ಲಾ ಹೆಚ್ಚುವರಿ ಕೆಲಸಗಳನ್ನು ತರಗತಿ ನಡೆಸುವುದರ ಜೊತೆಗೆ ಮಾಡಲು ಅಸಾಧ್ಯ ಎಂಬ ಮಾತುಗಳು ಕೇಳಿ ಬರುತ್ತಿವೆ. ಹೀಗಾಗಿ ಉಪನ್ಯಾಸಕರ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೂಡಲೇ ಈ ಗೊಂದಲಕ್ಕೆ ಪರಿಹಾರ ನೀಡಬೇಕಾಗಿದೆ.