ಆತ್ಮಾಭಿಮಾನಕ್ಕೆ ಕುಂದು ಬಾರದಿರಲಿ
ಮಾನ್ಯರೇ
ಪ್ರತೀ ಬಾರಿಯೂ ಚುನಾವಣಾ ಕೆಲಸಕ್ಕೆಂದು ಸರಕಾರಿ ನೌಕರರನ್ನು ಮತಗಟ್ಟೆ ಅಧಿಕಾರಿಗಳನ್ನಾಗಿ ನಿಯೋಜಿಸುವುದು ಸರಿಯಷ್ಟೆ. ಆದರೆ ಹೀಗೆ ನಿಯೋಜಿಸುವಾಗ ಹಿರಿಯ ಅನುಭವಿ ನೌಕರರನ್ನು ಕೆಳಗಿನ ಹಂತದ ಮತಗಟ್ಟೆ ಅಧಿಕಾರಿಗಳನ್ನಾಗಿ ನೇಮಿಸುವುದು ಹಾಗೂ ಅವರಿಗಿಂತ ಕಿರಿಯ ನೌಕರರನ್ನು ಹೆಚ್ಚಿನ ಜವಾಬ್ದಾರಿಯುಳ್ಳ ಸ್ಥಾನಗಳಿಗೆ ನೇಮಕ ಮಾಡುವುದು ಸಮಂಜಸವಲ್ಲ. ಈ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದರೆ ‘‘ಒಂದೆರಡು ದಿನದ ಕೆಲಸವಲ್ಲವೇ? ಏನೂ ಆಗುವುದಿಲ್ಲ, ಮಾಡಿ’’ ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ಸಾಗಹಾಕುತ್ತಾರೆ. ಹೌದು ಅದು ಒಂದೆರಡು ದಿನದ ಕೆಲಸವೇ ಆದರೂ ಐದು ವರ್ಷದ ಪ್ರಕ್ರಿಯೆಗೆ ಸಂಬಂಧಿಸಿದ್ದಲ್ಲವೇ? ನೌಕರರ ಆತ್ಮಾಭಿಮಾನ, ಮನೋಬಲಕ್ಕೆ ಉಂಟಾದ ಕುಂದು ಅವರ ಕಾರ್ಯ ನಿರ್ವಹಣೆಯ ಮೇಲೆ ಪರಿಣಾಮ ಬೀರುವುದಿಲ್ಲವೇ? ಇಷ್ಟಕ್ಕೂ ಉನ್ನತ ಅಧಿಕಾರಿಗಳು ತಮಗಿಂತ ಕೆಳಗಿನ ಶ್ರೇಣಿಯ ಹುದ್ದೆಗಳನ್ನು ಕೆಳಗಿನ ಹಂತದ ಅಧಿಕಾರಿಗಳ ನಾಯಕತ್ವದಲ್ಲಿ ಒಂದೆರಡು ದಿನ ನಿಭಾಯಿಸಲು ಸಿದ್ಧರಿದ್ದಾರೆಯೇ? ಚುನಾವಣಾ ಆಯೋಗ ಈ ಬಗ್ಗೆ ಗಂಭೀರವಾಗಿ ಆಲೋಚಿಸಿ ಮುಂದಿನ ಚುನಾವಣೆಗಳಲ್ಲಾದರೂ ಸೂಕ್ತ ಕ್ರಮ ಕೈಗೊಳ್ಳಲಿ.