ಸುಡು ಬಿಸಿಲ ಬೇಗೆಗೆ ರಾಜಕಾರಣಿಗಳು ತತ್ತರ!
ಸಾಂದರ್ಭಿಕ ಚಿತ್ರ
ಶಿವಮೊಗ್ಗ, ಮೇ 5: ಈ ಬಾರಿಯ ವಿಧಾನಸಭೆ ಚುನಾವಣೆಯು ಜಿಲ್ಲೆಯ ರಾಜಕಾರಣಿಗಳ ಪಾಲಿಗೆ ಅಕ್ಷರಶಃ 'ಬಿಸಿ'ಯೇರುವಂತೆ ಮಾಡಿದೆ. ಹೌದು. ಈ ಬಾರಿ ಬೀಳುತ್ತಿರುವ ಬೇಸಿಗೆಯ ಸುಡು ಬಿಸಿಲು ರಾಜಕಾರಣಿಗಳನ್ನು ತತ್ತರಿಸಿ ಹೋಗುವಂತೆ ಮಾಡಿದೆ. ಸಾಕಷ್ಟು ಬೆವರು ಸುರಿಸುವುದರ ಜೊತೆಗೆ ಎದುಸಿರು ಬಿಡುವಂತೆ ಮಾಡಿದೆ.
ಕಳೆದ ಕೆಲ ವಾರಗಳಿಂದ ಮಲೆನಾಡು ಭಾಗ ಸೇರಿದಂತೆ ಜಿಲ್ಲೆಯ ಬಹುತೇಕ ಎಲ್ಲೆಡೆ ತಾಪಮಾನದ ಪ್ರಮಾಣದಲ್ಲಿ ದಿಢೀರ್ ಹೆಚ್ಚಳ ಉಂಟಾಗಿದೆ. ಬಯಲು ಸೀಮೆಯ ರೀತಿಯಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಆಸುಪಾಸು ದಾಖಲಾಗುತ್ತಿದೆ. ಬಿಸಿ ಗಾಳಿ ಬೀಸುತ್ತಿದ್ದು, ಬೆಳಿಗ್ಗೆ 11 ಗಂಟೆಯ ನಂತರ ಹೊರಗಡೆ ಹೋಗಲಾರದ ಮಟ್ಟಕ್ಕೆ ಬಿಸಿಲು ರಾಚುತ್ತಿರುವುದು ಕಂಡುಬರುತ್ತದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಪ್ರಸ್ತುತ ಮೇ ತಿಂಗಳಲ್ಲಿ ಕಂಡುಬರುತ್ತಿರುವ ಬಿಸಿಲ ಬೇಗೆ ತೀವ್ರ ಸ್ವರೂಪದಲ್ಲಿದೆ.
ಏರುತ್ತಿರುವ ತಾಪಮಾನವು ರಾಜಕಾರಣಿಗಳ ಪಾಲಿಗೆ ಕರಾಳವಾಗಿ ಪರಿಣಮಿಸುತ್ತಿದ್ದು, ಅವರ ಪ್ರಚಾರ ಕಾರ್ಯದ ಮೇಲೆಯೂ ಪರಿಣಾಮ ಬೀರುವಂತೆ ಮಾಡಿದೆ. ಜೊತೆಗೆ ಖರ್ಚು ಹೆಚ್ಚಾಗುವಂತಾಗಿಸಿದೆ. ಮಧ್ಯಾಹ್ನದ ವೇಳೆ ಆಯೋಜಿಸುವ ಪ್ರಚಾರ ಕಾರ್ಯಕ್ಕೆ ಆಗಮಿಸುವವರಿಗೆ ಅಭ್ಯರ್ಥಿಗಳು ಹಾಗೂ ಅವರ ಕಡೆಯ ಬೆಂಬಲಿಗರು ಊಟದ ಜೊತೆಗೆ ಕುಡಿಯುವ ನೀರು, ತಂಪು ಪಾನೀಯ, ತಲೆಗೆ ಟೋಪಿಯ ವ್ಯವಸ್ಥೆ ಮಾಡುತ್ತಿರುವುದು ಕಂಡುಬರುತ್ತಿದೆ.
ಬಿಸಿಲಿನ ವೇಳೆ ಜನ ಸೇರಿಸುವುದು ಕಷ್ಟ ಹಾಗೂ ಖರ್ಚಿನ ವೆಚ್ಚದ ಕಾರಣದಿಂದಲೇ, ಕೆಲ ರಾಜಕಾರಣಿಗಳು ಮಧ್ಯಾಹ್ನದ ವೇಳೆ ಹೆಚ್ಚಿನ ಪ್ರಮಾಣದಲ್ಲಿ ಬಹಿರಂಗ ಸಭೆಗಳನ್ನು ಆಯೋಜಿಸುತ್ತಿಲ್ಲ. ಸಭೆ ಆಯೋಜಿಸಿದರೂ ಪೆಂಡಾಲ್ನ ವ್ಯವಸ್ಥೆ ಮಾಡಲಾಗುತ್ತಿದೆ. ಇಲ್ಲವೇ ಸಮುದಾಯ ಭವನ ಇತರೆ ಕಟ್ಟಡಗಳಲ್ಲಿ ಸಭೆಗಳನ್ನು ಹಮ್ಮಿಕೊಳ್ಳುತ್ತಿರುವುದು ಕಂಡುಬರುತ್ತಿದೆ. ಇದು ನಾಯಕರಿಗೆ ಸಾಕಷ್ಟು ಹೊರೆಯಾಗಿ ಪರಿಣಮಿಸುತ್ತಿದೆ.
ಮತ್ತೊಂದೆಡೆ ಬಿಸಿಲ ಕಾರಣದಿಂದಲೇ ಕೆಲ ರಾಜಕಾರಣಿಗಳು ಪ್ರಚಾರದ ವೇಳಾಪಟ್ಟಿಯನ್ನು ಬದಲಾಯಿಸಿಕೊಂಡಿದ್ದಾರೆ. ಮಧ್ಯಾಹ್ನದ ವೇಳೆ ರಸ್ತೆಗಿಳಿಯುವ ಗೋಜಿಗೆ ಹೋಗದೆ, ಬೆಳ್ಳಂಬೆಳಗ್ಗೆ ಹಾಗೂ ಸಂಜೆಯ ನಂತರ ಪ್ರಚಾರ ಕಾರ್ಯ ಕೈಗೊಳ್ಳುತ್ತಿರುವುದು ಕಂಡುಬರುತ್ತಿದೆ.
ಸೇರುತ್ತಿಲ್ಲ ಜನ: ಪ್ರಮುಖ ಪಕ್ಷಗಳ ಸ್ಟಾರ್ ಪ್ರಚಾರಕರ ಭಾಗವಹಿಸುವ ಸಭೆ - ಸಮಾರಂಭಗಳಿಗೆ ಜನ ಸೇರಿಸಲು ಅಭ್ಯರ್ಥಿ ಹಾಗೂ ಪಕ್ಷಗಳು ಹರಸಾಹಸ ನಡೆಸುವಂತಾಗಿದೆ. ಬಹುತೇಕ ಸ್ಟಾರ್ ಪ್ರಚಾರಕರ ಸಭೆಯು ಹಗಲು ವೇಳೆಯೇ ಆಯೋಜನೆಯಾಗುತ್ತಿವೆ. ಬಿಸಿಲು, ಸೆಕೆಯ ಬೇಗೆಯ ಕಾರಣದಿಂದ ಜನರು ಕೂಡ ಸಭೆ-ಸಮಾರಂಭಗಳಿಗೆ ಆಗಮಿಸಲು ಉತ್ಸುಕತೆ ತೋರುತ್ತಿಲ್ಲ. ಇನ್ನೊಂದೆಡೆ ಸ್ಟಾರ್ ನಾಯಕರ ಸಭೆಗಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ಜನ ಸೇರಿಸದಿದ್ದರೆ, ಪಕ್ಷದ ನಾಯಕರ ಕೆಂಗಣ್ಣಿಗೆ ಗುರಿಯಾಗುವುದರ ಜೊತೆಗೆ ಕ್ಷೇತ್ರದಲ್ಲಿನ ಎದುರಾಳಿಗಳ ಟೀಕೆಗೆ ಆಹಾರವಾಗಬೇಕಾಗುತ್ತದೆ ಎಂಬ ಚಿಂತೆ ಅಭ್ಯರ್ಥಿ ಹಾಗೂ ಸ್ಥಳೀಯ ನಾಯಕರದ್ದಾಗಿದೆ. ಈ ಕಾರಣದಿಂದ ಹಗಲು ವೇಳೆ ಆಯೋಜನೆಯಾಗುವ ಕೆಲ ಪ್ರಚಾರ ಸಭೆಗಳಿಗೆ ಹಣ ಕೊಟ್ಟು ಜನ ಸೇರಿಸುವಂತಹ ಸ್ಥಿತಿಯಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಒಟ್ಟಾರೆ ಪ್ರಸ್ತುತ ಜಿಲ್ಲೆಯಾದ್ಯಂತ ಬೀಳುತ್ತಿರುವ ಸುಡು ಬಿಸಿಲು ರಾಜಕಾರಣಿಗಳನ್ನು ಕಾವೇರುವಂತೆ ಮಾಡುವುದರ ಜೊತೆಗೆ ತತ್ತರಿಸಿ ಹೋಗುವಂತಾಗಿಸಿದ್ದು, ನಾನಾ ರೀತಿಯ ಸಮಸ್ಯೆಗಳನ್ನು ಎದುರು ಹಾಕಿಕೊಳ್ಳುವಂತಾಗಿರುವುದಂತೂ ಸತ್ಯವಾಗಿದೆ.
ಗುಪ್ತವಾಗಿ ನಡೆಯುತ್ತಿದೆ ಬಾಡೂಟ, ಔತಣಕೂಟ!
ಚುನಾವಣೆಯ ವೇಳೆ ಮತದಾರರಿಗೆ ಆಮಿಷವೊಡ್ಡುವುದಕ್ಕೆ ಕಡಿವಾಣ ಹಾಕಲು ಚುನಾವಣಾ ಆಯೋಗ ವ್ಯಾಪಕ ಕ್ರಮಕೈಗೊಂಡಿದೆ. ಇದಕ್ಕಾಗಿಯೇ ಪ್ರತ್ಯೇಕ ತಂಡಗಳ ರಚನೆ ಮಾಡಿದೆ. ಆದರೆ ಚುನಾವಣಾ ಆಯೋಗದ ಕಣ್ತಪ್ಪಿಸಿ ಕೆಲ ರಾಜಕೀಯ ಪಕ್ಷ ಹಾಗೂ ಅಭ್ಯರ್ಥಿಗಳು ಬಾಡೂಟ, ಔತಣಕೂಟ ಆಯೋಜಿಸುತ್ತಿರುವ ಮಾಹಿತಿಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿವೆ. ಇನ್ನೊಂದೆಡೆ ಬಾರ್-ರೆಸ್ಟೋರೆಂಟ್, ಕ್ಲಬ್, ವೈನ್ಶಾಪ್ಗಳಲ್ಲಿ ಮದ್ಯ ಮಾರಾಟದ ಪ್ರಮಾಣ ಕೂಡ ಏರುಗತಿಯಲ್ಲಿ ಸಾಗಿದೆ. ಇದಕ್ಕೆ ಚುನಾವಣೆಯೇ ಮುಖ್ಯ ಕಾರಣವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಚುನಾವಣಾ ಪ್ರೇರಿತ ಮದ್ಯ ಸಮಾರಾಧನೆಯೂ ಜೋರಾಗಿ ನಡೆಯುತ್ತಿರುವ ದೂರುಗಳು ಕೂಡ ದೊಡ್ಡ ಸಂಖ್ಯೆಯಲ್ಲಿ ಕೇಳಿಬರುತ್ತಿದೆ.