ನಮ್ಮ ಮಾಸ್ತಿ
ಡಾ. ಮಾಸ್ತಿ ವೆಂಕಟೇಶ್ ಅಯ್ಯಂಗಾರ್
ಜ್ಞಾನಪೀಠ ಪ್ರಶಸ್ತಿ ಪಡೆದ ಹೆಸರಾಂತ ಬರಹಗಾರ ಡಾ. ಮಾಸ್ತಿ ವೆಂಕಟೇಶ್ ಅಯ್ಯಂಗಾರೊಂದಿಗಿನ ಶೂದ್ರ ಶ್ರೀನಿವಾಸರ ಮಾತುಕತೆ ರೂಪದ ಈ ಬರಹವನ್ನು ಶೂದ್ರರ ಕನಸಿಗೊಂದು ಕಣ್ಣು ಕೃತಿಯಿಂದ ಆರಿಸಲಾಗಿದೆ.
ಒಬ್ಬ ವ್ಯಕ್ತಿ ತನ್ನ ಬರವಣಿಗೆಯ ಮೂಲಕ ವ್ಯಕ್ತವಾಗುವುದು ಬೇರೆ. ಸ್ವಂತ ಬದುಕಿನ ಮೂಲಕ ವ್ಯಕ್ತವಾಗುವುದು ಬೇರೆ. ಇವೆರಡೂ ಸದಾ ಒಂದರ ಕೊಂಡಿಯನ್ನು ಒಂದು ಬಿಡದೆ ನಿರಂತರ ಅಪ್ಪಿಕೊಂಡಿರುತ್ತೆ ಎಂದು ಹೇಳಲಾಗುವುದಿಲ್ಲ. ಈ ದೃಷ್ಟಿಯಿಂದ ನಾವು ಒಬ್ಬ ಮಹಾನ್ ಸಾಹಿತಿ ಅಥವಾ ವ್ಯಕ್ತಿಯ ಬಗ್ಗೆ ಪೂರ್ವ ರೂಪಿತ ಕಲ್ಪನೆಗಳು ಆದರ್ಶದ ಚೌಕಟ್ಟಿನಲ್ಲಿಯೇ ಸಜೀವವಾಗಿರುತ್ತೆ ಎಂದು ಹೇಳಲಾಗುವುದಿಲ್ಲ. ಹಾಗೆಯೇ ಯಾವ ಮನುಷ್ಯನೂ ನನ್ನಂತೆಯೇ ಬದುಕಬೇಕಾಗಿಲ್ಲ ಎಂದುಕೊಂಡಾಗ ನಮ್ಮ ಮುಂದಿರುವ ವ್ಯಕ್ತಿ ಇಲ್ಲವೇ ನಮ್ಮ ನಡುವೆ ಬರೆಯುವ ವ್ಯಕ್ತಿ ಎಸೆಯುವ ಸವಾಲುಗಳು ಒಬ್ಬನ ಮನಸ್ಥಿತಿಯನ್ನು ಜಾಗೃತವಾಗಿಡಲು ಸಾಧ್ಯವಿರಬಹುದು.
ಮಾಸ್ತಿಯವರ ಬಗ್ಗೆ ವಿಚಾರ ಸಂಕಿರಣದಲ್ಲಿ ಚರ್ಚೆ ನಡೆಯುವಾಗಲೆಲ್ಲ ನನ್ನ ಮೆದುಳಿನ ಒಂದು ಭಾಗ ಎರಡು ವರ್ಷಗಳ ಹಿಂದೆ ಮೂರು ದಿನ ಮಾಸ್ತಿಯವರೊಡನೆ ಅನುಭವಿಸಿದ ನೆನಪಿನ ಜೊತೆ ಕಸರತ್ತು ನಡೆಸಿತ್ತು. ಬಿಡಿಸಬೇಕೆಂದರೆ: ಮುದುಡಿಕೊಂಡಿದ್ದ ರೆಕ್ಕೆ ಪುಕ್ಕಗಳಿಗೆ ಜೀವ ಬಂದು ಹಾರಾಡತೊಡಗಿತ್ತು.
ನವೆಂಬರ್ ತಿಂಗಳ ಒಂದು ಸಂಜೆ ಸಾಕಷ್ಟು ಚಳಿ ಇತ್ತು. ಹಿರಿಯ ಗೆಳೆಯರಾದ ನೀಲಿಯವರ ಮನೆಗೆ ಹೋದೆ..
ನೀಲಿಯವರ ಮನೆಯಲ್ಲಿ ಟೀ ಕುಡಿದು ಬಸವನಗುಡಿ ಕ್ಲಬ್ಗೆ ಬಂದಾಗ ಏಳು ಗಂಟೆಯಾಗಿತ್ತು. ಮಾಸ್ತಿಯವರ ನೆನಪಾಯಿತು. 94 ವರ್ಷದ ಮುದುಕ ಈಗೆಲ್ಲಿ ಕಾರ್ಡ್ಸ್ ಆಡಲು ಬಂದಿರುತ್ತೆ ಎಂದು ನನ್ನ ಪಾಡಿಗೆ ನಾನು ಅಂದುಕೊಂಡರೂ; ಯಾಕೆ ಬಂದಿರಬಾರದು ಎಂಬ ಮತ್ತೊಂದು ಪ್ರಶ್ನೆ ಜೊತೆಯೇ ಇತ್ತು.
ಆಕಸ್ಮಿಕವಾಗಿ ತಲೆಯೆತ್ತಿ ಹೊರಗೆ ನೋಡಿದೆ. ಆಶ್ಚರ್ಯವಾಯಿತು. ಅದೇ ಉದ್ದನೆಯ ಕೋಟಿನ, ಕಪ್ಪು ಟೋಪಿಯ ಕುತ್ತಿಗೆಗೆ ಒಂದು ಸುತ್ತು ಬಂದಿರುವ ಮಫ್ಲರ್ ಹಾಗೂ ಕೈಯಲ್ಲಿ ಸಾಮಾನ್ಯ ಬೆತ್ತ ಹಿಡಿದು ಕಾರಿನ ಹತ್ತಿರ ನಿಂತಿದ್ದರು ಮಾಸ್ತಿ. ಸಮಯ ನೋಡಿಕೊಂಡೆ, ಎಂಟೂ ಕಾಲು ಆಗಿತ್ತು.
ಎರಡು ವರ್ಷಗಳ ಹಿಂದಿನ ಮಾತು. ಬೆಳಗ್ಗೆ ಹತ್ತು ಘಂಟೆಯ ಸಮಯ. ಎಳೆ ಬಿಸಿಲು ಟ್ರಿಮ್ಮಾಗಿ ಓಡಾಡುವುದಕ್ಕೆ ಅವಕಾಶವನ್ನು ಉಳಿಸಿಕೊಂಡಿತ್ತು. ಮಾಸ್ತಿಯವರನ್ನು ನೋಡಲು ಹೊಟೆ. ಹನುಮಂತನಗರ ತಲುಪಿದೆ.
ಬಸ್ಸಿಳಿದು ಸ್ವಲ್ಪ ದೂರ ಹೋಗಿದ್ದೆ. ದೂರದಲ್ಲಿ ಹನುಮಂತರಾಯನ ಗುಡ್ಡದ ಕಡೆಯಿಂದ ಬರುತ್ತಿದ್ದರು. ಅದೇ ಮಾಮೂಲಿ ಉಡುಪು. ಮಾಮೂಲಿ ಬೆತ್ತ. ಮೇಸ್ಟ್ರು ಹುಡುಗರನ್ನು ಬಡಿಯುವ, ಯಜಮಾನ ಸೇವಕನನ್ನು ಬಡಿಯುವ ಅಥವಾ ಗಂಡ ಹೆಂಡತಿಯನ್ನು ಬಡಿಯುವ ಬೆತ್ತವಾಗಿರಲಿಲ್ಲ, ವೃದ್ಧಾಪ್ಯದಲ್ಲಿ ಸದಾ ಆತ್ಮೀಯ ಗೆಳೆಯನಂತಿರುವ ಬೆತ್ತ ಅದಾಗಿತ್ತು. ಬೆನ್ನು ಬಗ್ಗದ ಮಾಸ್ತಿ ಬೆತ್ತದ ಮೇಲೆ ತೂಕವನ್ನೇನು ಬಿಟ್ಟು ನಡೆದು ಬರುತ್ತಿರಲಿಲ್ಲ.
ಮಾಸ್ತಿ ಹತ್ತಿರ ಹತ್ತಿರ ಬಂದರು. ನನ್ನ ಮಾಮೂಲಿ ಸಂಕೋಚಗಳಿಂದ ದೇಹ ಬಿಗಿಯಾಯಿತು. ಮಾಸ್ತಿ ಹತ್ತಿರ ಬಂದೇಬಿಟ್ಟರು. ನಮಸ್ಕರಿಸಿದೆ. ಕೈಯೆತ್ತಿ ನಮಸ್ಕರಿಸಿದರು. ಹೆಸರು ಕೇಳಿದರು, ಶೂದ್ರ ಶ್ರೀನಿವಾಸ್ ಎನ್ನಲಿಲ್ಲ. ಶ್ರೀನಿವಾಸ್ ಎಂದೆ. ಕೆಲಸ ಕೇಳಿದರು. ಶೂದ್ರ ತರುತ್ತಿರುವ ವಿಷಯ ತಿಳಿಸಿದೆ. ಸೆಟೆದು ನಿಂತರು. ನನ್ನನ್ನೇ ದಿಟ್ಟಿಸಿ ನೋಡಿದರು. ಬ್ರಾಹ್ಮಣ ದ್ವೇಷದ ಯಾವ ಪಳೆಯುಳಿಕೆಗಳು ನನ್ನ ಮುಖದಲ್ಲಿ ಗೋಚರಿಸಲಿಲ್ಲ ಎಂದು ಕಾಣುತ್ತೆ. ಬೆನ್ನಮೇಲೆ ಕೈಯಾಡಿಸುತ್ತ: ಈ ಬ್ರಾಹ್ಮಣ-ಶೂದ್ರ ಯಾಕಪ್ಪ? ಎಂದರು. ನಗುತ್ತ ಅವರೊಡನೆ ನಡೆದಿದ್ದೆ. ರಾಜಕೀಯ ವ್ಯಕ್ತಿಗಳ ರೀತಿಯಲ್ಲಿ ನಾವು ಜಾತಿಯ ಬಗ್ಗೆ ಯೋಚಿಸಬಾರದು ಎಂದರು. ಹೌದು ಎಂದು ನಡೆದಿದ್ದೆ. ರಸ್ತೆಯಲ್ಲಿ ಗಾಜಿನ ಚೂರುಗಳು ಸಾಕಷ್ಟು ಬಿದ್ದಿದ್ದುವು. ಬಗ್ಗಿ ಒಂದೊಂದನ್ನೇ ತೆಗೆಯತೊಡಗಿದರು. ಆ ಚೂರುಗಳಿಗೆ ನಾನೂ ಕೈಹಾಕಲು ಮನಸ್ಸು ಸಿದ್ಧವಾಗುವ ಸಮಯಕ್ಕೆ ಮಾಸ್ತಿ ಸಾಕಷ್ಟು ತೆಗೆದಿದ್ದರು. ನಾಚಿಕೆಯಾಯಿತು. ಗಾಂಧೀಜಿಯವರು ಮೊದಲನೆಯ ಬಾರಿಗೆ ಹೋರಾಟದ ಪಾಠಗಳಲ್ಲಿ ಸ್ವಯಂ ಸೇವಕರಿಗೆ ಹೇಳದೆ ತಾವೇ ಕಕ್ಕಸ್ಸು ಗುಂಡಿಗಳನ್ನು ಶುದ್ಧಿ ಮಾಡಲು ಹೋದಾಗ: ಸ್ವಯಂಸೇವಕರು ನಾಚಿಕೆಪಟ್ಟುಕೊಂಡು ಮುನ್ನುಗ್ಗಿದ ದೃಶ್ಯ ಮುಂದೆ ನಿಂತಿತ್ತು.
ಮುಂದೆ ನಡೆದಿದ್ದರೂ ಮಾಸ್ತಿ ಹಳ್ಳಿಯಲ್ಲಿ ಯಾರೂ ಜಾತೀಯತೆಯ ಮೇಲೆ ಬದುಕುವುದಿಲ್ಲ. ಇತ್ತೀಚೆಗೆ ನಮ್ಮ ರಾಜಕೀಯದೋರು ಹೋಗಿ ಜಾತೀನ ಬಿತ್ತಿದ್ದಾರೆ ಎನ್ನುವ ಸಮಯಕ್ಕೆ ಪುಟ್ಟ ಹುಡುಗನೊಬ್ಬ ಓಡಿ ಬಂದ. ಮಾಸ್ತಿಯವರು ಆ ಹುಡುಗನ ತಲೆ ಸವರಿ ಜೇಬಿಗೆ ಕೈಯಿಟ್ಟು ಚಾಕಲೇಟ್ ತೆಗೆದುಕೊಟ್ಟರು. ಹುಡುಗ ಬೈ ಬೈ ಹೇಳಿ ಓಡಿದ. ಇನ್ನೂ ಸ್ವಲ್ಪ ದೂರ ಹೋದಮೇಲೆ ಹುಡುಗಿಯೊಬ್ಬಳು ಓಡಿ ಬಂದಳು. ಅವಳಿಗೊಂದು ಚಾಕಲೇಟ್ ಸಿಕ್ಕಿತು. ಮತ್ತಷ್ಟು ದೂರ ಹೋದಾಗ ಮತ್ತೊಂದು ಪುಟ್ಟ ಹುಡುಗಿ ತಾತಾ ಎನ್ನುತ್ತ ಬಂದು ಕೈಹಿಡಿಯಿತು. ಜೇಬಿಗೆ ಕೈಯಿಟ್ಟರು. ಚಾಕಲೇಟ್ ಮುಗಿದಿತ್ತು ಎಂದು ಕಾಣುತ್ತೆ; ಅವಳ ಕೆನ್ನೆ ಸವರಿ ನಾಳೆ ಕೊಡುತ್ತೇನೆಂದರು. ಆ ಮಗು ಪ್ರೀತಿಯಿಂದ ಆಗಲಿ ತಾತಾ ಎಂದು ಓಡಿತು. ಪಾಪ ಮುದ್ದು ಮಕ್ಕಳು ಎಂದರು ಮಾಸ್ತಿ.
ಇದಾದನಂತರ ನಾಲ್ಕು ಮಾರು ದೂರ ಹೋಗಿರಲಿಲ್ಲ. ಯೌವನ ತುಂಬಿ ತುಳುಕುತ್ತಿದ್ದ ಹುಡುಗಿಯೊಬ್ಬಳು ಗಡಿಬಿಡಿಯಿಂದ ಬಂದು ಕಾಲಿಗೆ ನಮಸ್ಕರಿಸಿದಳು. ಹೊಸದಾಗಿ ಮದುವೆಯಾದ ಹುಡುಗಿ ಎಂದು ಕಾಣುತ್ತೆ; ಜೀವನೋತ್ಸಾಹ ಆ ಹುಡುಗಿಯಲ್ಲಿ ತುಂಬಿತ್ತು, ಯಾಕೆಂದರೆ ಮದುವೆಯ ಹೊಸದರಲ್ಲಿ ನಮ್ಮ ಹುಡುಗಿಯರು ಸದಾ ಜೀವನ ಹೀಗೆಯೇ ಇರುತ್ತದೆಂದು ತಿಳಿದಿರುತ್ತಾರೆ. (ಇತ್ತೀಚೆಗೆ ಕಾದಂಬರಿಗಳನ್ನು ಓದಿಕೊಂಡ ಅಥವಾ ಚಲನಚಿತ್ರ ನೋಡಿದ ಹುಡುಗಿಯರಂತಲ್ಲ) ಅಷ್ಟರಲ್ಲಿ ಹುಡುಗಿಯ ಅಮ್ಮ ಎಂದು ಕಾಣುತ್ತೆ: ಹೊರ ಬಾಗಿಲಲ್ಲಿ ನಿಂತಿದ್ದರು. ಮಾಸ್ತಿಯವರನ್ನು ಒಳಗೆ ಕರೆದರು. ನನ್ನ ಹೆಗಲ ಮೇಲೆ ಕೈ ಹಾಕಿ ಮಾಸ್ತಿಯವರು ಕರೆದರು. ನಡೆದೆ. ಆ ಹುಡುಗಿ ಉತ್ಸಾಹದಿಂದ ಒಳ ನಡೆದರು. ಅವಳ ಕಾಲಿನಲ್ಲಿದ್ದ ಇನ್ನೂ ಮಾಸದ ಚೈನಿನ ಗೆಜ್ಜೆಗಳು, ಆ ನಡಿಗೆಗೆ ಅಥವಾ ಓಟಕ್ಕೆ ಮತ್ತಷ್ಟು ಜೀವ ತುಂಬಿತ್ತು.
ಆ ಹುಡುಗಿ ತಟ್ಟೆಯಲ್ಲಿ ಹಣ್ಣುಹಂಪಲನ್ನು ತಂದು ಮಾಸ್ತಿಯವರ ಮುಂದಿಟ್ಟು ಕಾಲಿಗೆ ನಮಸ್ಕರಿಸಿದಳು, ಹುಡುಗಿಯ ತಲೆಯ ಮೇಲೆ ಕೈಯಿಟ್ಟು ಆಶೀರ್ವದಿಸಿದರು. ನನಗೂ ಹಣ್ಣು ಕೊಟ್ಟರು. ಒಂದು ಒಳ್ಳೆಯ ಮಾತನ್ನು ನನ್ನಿಂದ ಹೇಳಲಾಗಲಿಲ್ಲ. ಆದರೆ ಆ ಹಣ್ಣಿಗೆ ಪ್ರತಿಫಲವಾಗಿ ಯಾವುದೇ ಸ್ವರೂಪದ ಥ್ಯಾಂಕ್ಸ್ಗೆ ತತ್ಸಮಾನವಾದ ಶಬ್ದ ಹೊರಗೆ ಬರಬೇಕಾಗಿತ್ತು. ಬರಲಿಲ್ಲ.
ಮಾಸ್ತಿಯವರ ಮನೆ ತಲುಪಿದಾಗ ಹತ್ತೂವರೆಯಾಗಿತ್ತು. ಗೇಟಿನ ಶಬ್ದಕ್ಕೆ ಅವರ ಅಳಿಯ ಬಾಗಿಲು ತೆಗೆದರು. ಮಗಳಿಗೆ ಮತ್ತು ಅಳಿಯನಿಗೆ ನನ್ನನ್ನು ಪರಿಚಯ ಮಾಡಿಕೊಟ್ಟರು. ಕಾಫಿ ಬಂತು, ಒಂದು ಗಂಟೆ ಮಾತು ಸಾಗಿತು. ಮತ್ತೆ ಜಾತಿ ಬಂತು, ರಾಜಕೀಯ ಬಂತು, ಸಾಹಿತ್ಯ ಬಂತು. ಶೂದ್ರಕ್ಕೆ ಸಂದರ್ಶನ ತೆಗೆದುಕೊಳ್ಳಲು ಒಪ್ಪಿಗೆ ಪಡೆದು ಹೊರಬಂದೆ. ಆದರೆ ಸಂಜೆ ಮಾತ್ರ ಬೇಡಪ್ಪ. ಯಾಕೆಂದರೆ ನಾನು ಕ್ಲಬ್ಗೆ ಹೋಗಬೇಕಾಗುತ್ತೆ ಎಂದರು. ನಗುತ್ತ. ಆಗಲಿ ಎಂದೆ. ಮತ್ತೆ ಗೇಟಿನ ಹತ್ತಿರ ಹತ್ತು ನಿಮಿಷ ಮಾತುಕತೆ. ನಿಮ್ಮ ಟಾಲ್ಸ್ಟಾಯ್ ಮಹರ್ಷಿಯ ಬೂರ್ಜಾ ವೃಕ್ಷಗಳು ಕತೆ ತುಂಬ ಇಷ್ಟವಾಯಿತು ಸಾರ್ ಎಂದೆ. ಅದರ ಸಂತೋಷವನ್ನು ವ್ಯಕ್ತಪಡಿಸಲು ಹೆಗಲ ಮೇಲೆ ಕೈಹಾಕಿ ಅಪ್ಪಿಕೊಂಡರು.
ಮಾಸ್ತಿಯವರು ‘‘ಟಾಲ್ಸ್ಟಾಯ್ ದೊಡ್ಡ ಸಾಹಿತಿ ನಿಜ. ಆದರೆ ಆ ವಾರ್ ಆ್ಯಂಡ್ ಪೀಸ್ ಇದೆಯಲ್ಲ ಅದು ಅಷ್ಟೊಂದು ದೊಡ್ಡ ಕೃತಿಯಲ್ಲ. ಅನಗತ್ಯವಾಗಿ ಬೆಳೆಸಿದ್ದಾರೆ’’ ಎಂದರು. ಕೊನೆಯದಾಗಿ ಸಂಕೋಚದಿಂದ ನನ್ನ ಜಾತಿ ಕೇಳಿದರು. ರೆಡ್ಡಿ ಎಂದೆ. ನಗುತ್ತಾ ಶ್ರೀನಿವಾಸರೆಡ್ಡಿ. ರಾಘವೇಂದ್ರ ರಾವ್ ಜೊತೆಯಲ್ಲಿ ನಾಳೆ ಬೆಳಗ್ಗೆನೇ ಬಾಪ್ಪ. ಸಂಜೆ ಮಾತ್ರ ಬರಬೇಡ ಎಂದು ಮತ್ತೊಮ್ಮೆ ನೆನಪುಮಾಡಿ ನನ್ನನ್ನು ಕಳುಹಿಸಿಕೊಟ್ಟರು.
ಮಾರನೆಯ ದಿನ ಬೆಳಗ್ಗೆ ಗೆಳೆಯ ರಾಘವೇಂದ್ರರಾವ್ ಜೊತೆಯಲ್ಲಿ ಮಾಸ್ತಿಯವರ ಮನೆಗೆ ಹೋದಾಗ ಹತ್ತೂವರೆಯಾಗಿತ್ತು. ವಾಕಿಂಗ್ಗೆ ಹೋಗಿ ಆಗ ತಾನೆ ವಾಪಸು ಬಂದಿದ್ದರು. ಹೋದಾಕ್ಷಣ ಮಗಳಿಗೆ ನೋಡಮ್ಮ ಶ್ರೀನಿವಾಸರೆಡ್ಡಿ ಬಂದ್ರು ಕಾಫಿ ತಂದು ಕೊಡಮ್ಮ ಎಂದವರೇ ಮಗಳು ಬಂದಾಗ ರಾಘವೇಂದ್ರರಾವ್ ರವರನ್ನು ಪರಿಚಯಿಸಿದರು.
ಕಾಫಿ ಬಂತು. ರಾಘವೇಂದ್ರರಾವ್ರವರ ಹಿನ್ನೆಲೆಯೆಲ್ಲ ಕೇಳಿ ತಿಳಿದುಕೊಂಡರು. ಆಗಲಪ್ಪ ಒಳ್ಳೆಯದಾಗಲಿ ಎಂದರು. ಮಾತು ಬೆಳೆಯಿತು. ತಮ್ಮ ಸಾಹಿತ್ಯದ ಬಗ್ಗೆ ಹೆಚ್ಚು ಒತ್ತುಕೊಡದೆ ಅವರ ವಿಚಾರ ಸಾಹಿತ್ಯದ ಬಗ್ಗೆಯೇ ಹೆಚ್ಚು ಹೆಚ್ಚು ಮಾತನಾಡತೊಡಗಿದರು. ಕೆಲವು ಬಾರಿಯಂತೂ ಮೂರುನಾಲ್ಕು ಪುಟಗಳಷ್ಟು ಓದಿ ವಿದ್ಯಾರ್ಥಿಗಳಿಗೆ ವಿವರಿಸುವಂತೆ ನಮಗೆ ಹೇಳತೊಡಗಿದರು. ಇಷ್ಟೆಲ್ಲ ಅವರಿಗೆ ತಮ್ಮ ವಿಚಾರಗಳ ಬಗ್ಗೆ ಸಾಕಷ್ಟು ಚರ್ಚೆಯಾಗಿಲ್ಲ ಎಂಬ ಗುಮ್ಮನನ್ನು ತಲೆಯಲ್ಲಿ ತುಂಬಿಕೊಂಡಿದ್ದರೇನೋ ಅನ್ನಿಸುತ್ತಿತ್ತು. ಹಾಗೆ ನೋಡಿದರೆ ನಮ್ಮಲ್ಲಿ ಯಾವುದರ ಬಗ್ಗೆಯೂ ಇನ್ನು ಗಂಭೀರವಾದ ಚರ್ಚೆ ನಡೆದಿಲ್ಲ. ಎಷ್ಟೋ ಜನ ನಮ್ಮ ಮುಖ್ಯ ಲೇಖಕರ ಬಗ್ಗೆಯೂ ಎಷ್ಟು ಚರ್ಚೆಯಾಗಬೇಕೋ ಅಷ್ಟು ಚರ್ಚೆಯಾಗಿಲ್ಲ ಎಂಬುದನ್ನು ಹೇಳಲು ಮನಸ್ಸು ಬಂದರೂ ಹೇಳಲಾಗಲಿಲ್ಲ.
ಮಾಸ್ತಿಯವರಿಗೆ ಕುವೆಂಪು ಹೆಸರಿನ ಭೂತ ಗಾಢವಾಗಿರುವಂತೆ ಗೊತ್ತಾಗುತ್ತಿತ್ತು. ಕುವೆಂಪುರವರಿಗೆ ಬ್ರಾಹ್ಮಣ್ಯದ ಭೂತ ಬೆಳೆದಂತೆ. ಇದನ್ನು ಒಂದು ಮುಖ್ಯ ಕಾರಣಕ್ಕಾಗಿ ಪ್ರಸ್ತಾಪಿಸುತ್ತಿರುವುದು: ಶೂದ್ರ ತಪಸ್ವಿಯ ನಂತರ ಮಾಸ್ತಿ ಮತ್ತು ಕುವೆಂಪುರವರ ನಡುವಿನ ಚರ್ಚೆ ಸಾಂಸ್ಕೃತಿಕ ಸಂದರ್ಭದ ದಾಖಲಾತಿ ದೃಷ್ಟಿಯಿಂದ ಅತ್ಯಂತ ಮಹತ್ವಪೂರ್ಣವಾದದ್ದು. ಆದರೆ ಕುವೆಂಪುರವರು ಉಪಕುಲಪತಿಗಳಾದ ಮೇಲೆ ಅವರನ್ನು ಬೆಲೆಕಟ್ಟಲಾರದವರೆಲ್ಲ ಬರೆಯುತ್ತ ಹೋದರು. ತನಗಿಂತ ಕಿರಿಯರಾದ ಕುವೆಂಪುರವರ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದ್ದುದು ಚರ್ಚೆಯೆನ್ನುವುದಕ್ಕಿಂತ ಪ್ರಚಾರ ಎಂದರೆ ಸಮಂಜಸವಾದೀತು. ಇದು ನಿಜವಾಗಿಯೂ ಮಾಸ್ತಿಯಂಥ ಲೇಖಕರಿಗೆ ಇರಿಸುಮುರಿಸು ಆಗಿರಲು ಸಾಧ್ಯ. ಕಳೆದ ಇಪ್ಪತ್ತೈದು ಮೂವತ್ತು ವರ್ಷಗಳಿಂದ ತಮ್ಮ ಬಗ್ಗೆ ಬರೆದ ಏನನ್ನೂ ಓದಿಲ್ಲ ಎಂದು ಹೇಳುವ ಮಾಸ್ತಿ; ತನ್ನ ಕಾಲದಲ್ಲಿ ಬರೆಯುತ್ತಿರುವ ಹೊಸಬರಹಗಾರರ ಬಗ್ಗೆಯೂ ಕುತೂಹಲ ಬೆಳೆಸಿಕೊಂಡವರಲ್ಲ. ಇದು ನಿಜವಾಗಿಯೂ ಆಶ್ಚರ್ಯದ ಸಂಗತಿ. ಅದರ ಹಿಂದಿರುವ ಮನೋಭಿಲಾಷೆಯ ಸಂಘರ್ಷ ಎಂಥದೆಂದು ಹೇಳಲು ನಾನು ಹೊರಟಿಲ್ಲ. ಆದರೆ ತನ್ನನ್ನು ಕಡೆಗಣಿಸಿದ್ದಾರೆ ಎಂಬ ಅಂತರಂಗದ ಗುಸು ಗುಸುವಿಗೆ ಅವರು ಕಂಡುಕೊಳ್ಳಬಹುದಾದ ಉತ್ತರವಾಗಿತ್ತು. ಅದೇನೆ ಇರಲಿ ಅನಂತಮೂರ್ತಿ ನನ್ನ ಬಗ್ಗೆ ಚೆನ್ನಾಗಿ ಬರೆದಿದ್ದಾರಂತೆ-ಒಳ್ಳೆಯ ಮನುಷ್ಯ ಎಂದು ಹೇಳುವಲ್ಲಿಯೂ 94 ವರ್ಷದ ಮಾಸ್ತಿಯವರ ಒಳಗಿನ ಅಭೀಪ್ಸೆಯನ್ನು ಗುರುತಿಸುವುದು ಕಷ್ಟವಾಗಲಾರದು.
ಚರ್ಚೆ ನಡೆದೇ ಇತ್ತು. ರಾಘವೇಂದ್ರರಾವ್ರವರ ಪ್ರಶ್ನೆಗಳಿಗೆ ದೀರ್ಘವಾಗಿಯೇ ಉತ್ತರಕೊಡುತ್ತಿದ್ದರು. ಉತ್ತರ ಎನ್ನುವುದಕ್ಕಿಂತ ಲೋಕಾಭಿರಾಮದ ಮಾತುಕತೆಯಾಗಿತ್ತು. ಕಥೆಯನ್ನು ಹೇಳುವ ಕ್ರಮದಲ್ಲಿ ಹೇಳುತ್ತಿದ್ದುದರಿಂದ ಮತ್ತು ಮಧ್ಯೆ ಅದಕ್ಕೆ ಸಂಬಂಧಿಸಿದ ಉಪಕಥೆಗಳನ್ನು ಹೇಳುತ್ತಿದ್ದುದರಿಂದ ಆರಾಮವಾಗಿ ಕುಳಿತಿದ್ದೆವು.
ಒಂದು ಗಂಟೆಯಾಯಿತು. ನಮಗೂ ಅಡುಗೆ ಮಾಡಿಸಿದ್ದರು. ಮಾಸ್ತಿಯವರ ಜೊತೆ ಅವರ ಅಳಿಯನೂ ಕೂತಿದ್ದರು. ಮಾಸ್ತಿಯವರ ಪುಸ್ತಕಗಳ ಮಾರಾಟದ ಜವಾಬ್ದಾರಿಯನ್ನು ಆತನೇ ತೆಗೆದುಕೊಂಡಿದ್ದನೆಂದು ಕಾಣುತ್ತೆ. ಅಂತೂ ಮಾತುಕತೆಯ ನಡುವೆ ಆರಾಮವಾಗಿ ಊಟಮಾಡಿದರು. ಮಧ್ಯೆ ಮಧ್ಯೆ ಸಂಕೋಚಪಟ್ಟುಕೊಳ್ಳಬೇಡಿ ಊಟ ಮಾಡಿ ಎನ್ನುತ್ತಿದ್ದರು. ನಮ್ಮಷ್ಟೇ ಊಟಮಾಡಿದರು. ನನಗೆ ಖುಷಿಯಾಯಿತು. ಈ ವಯಸ್ಸಿನಲ್ಲೂ ಇಷ್ಟು ಆರಾಮವಾಗಿ ಬದುಕುವುದನ್ನು ಕಂಡು, ನಂತರ ಗೌಡರ ರೀತಿಯಲ್ಲಿ ಕಡ್ಡಿ ತೆಗೆದುಕೊಂಡು ಹಲ್ಲುಗಳ ನಡುವೆ ಚುಚ್ಚುತ್ತ ಕೂತರು. ಸ್ವಲ್ಪ ಸಮಯದ ನಂತರ ಎದ್ದು ಬಂದು ಓದಲು ಕೂತರು. ತಮ್ಮ ಮಾಮೂಲಿ ಜಾಗದಲ್ಲಿ ಪುಟ್ಟದಾದ ಮಂಚವಿತ್ತು. ಅಲ್ಲಿಯೇ ನೇತು ಹಾಕಿದ್ದ ಅವರ ತಾಯಿಯ ಭಾವ ಚಿತ್ರವಿತ್ತು. ಅವರ ಓದಿನ ನಡುವೆ ದೂರದಲ್ಲಿ ಕೂತಿದ್ದ ಅಳಿಯ ಗೊರಕೆ ಹೊಡೆಯುತ್ತಿದ್ದರು.
ಮಾಸ್ತಿಯವರು ಕಳೆದ ಮೂವತ್ತು ವರ್ಷಗಳಿಂದ ಅಪ್ಪಿ ತಪ್ಪಿ ಒಬ್ಬರನ್ನೂ ಒಂದು ಮಾತು ಬೈದಿಲ್ಲವಂತೆ. ಕಾರಣ; ಒಮ್ಮೆ ಅವರ ತಾಯಿಗೆ ಮನ ನೋಯುವಂತೆ ಮಾತಾಡಿದ್ದರಂತೆ ಪೂಜೆಯ ಸಮಯದಲ್ಲಿ ಇದೆಲ್ಲವನ್ನು ನೆನೆಸಿಕೊಂಡಾಗ ಆಶ್ಚರ್ಯವಾಗದಿರಲಾರದು. ಮಾಸ್ತಿಯವರು ವಿಮರ್ಶೆಯಿಂದ ದೂರ ಉಳಿದಿದ್ದು ಈ ಕಾರಣಕ್ಕಾಗಿಯೇ ಇರಬಹುದು. ಒಮ್ಮೆ ಯಾವುದೋ ಒಂದು ವೇದಿಕೆಯ ಮೇಲೆ ಇವರೊಡನೆ ಕಟ್ಟೀಮನಿಯವರೂ ಇದ್ದರಂತೆ, ಆಗ ಕಟ್ಟಿಮನಿಯವರು ನಿಮ್ಮನ್ನು ತೆಗಳಿ ಬಹಳ ವರ್ಷಗಳ ಹಿಂದೆ ಒಂದು ಪತ್ರ ಬರೆದಿದ್ದೆ. ನಿಮಗೆ ಬೇಸರವಾಗಿಲ್ಲ ತಾನೇ ಎಂದಾಗ ಅದಕ್ಕೆ ಮಾಸ್ತಿಯವರು ಆ ಪತ್ರವನ್ನು ನಾನು ತೆರೆದೇ ಇಲ್ಲ, ಹಾಗೆಯೇ ಇದೆ ಎಂದರಂತೆ.
ಇದೇ ಸಂದರ್ಭದಲ್ಲಿ ಸಾಹಿತ್ಯ ಪರಿಷತ್ತಿನ ಚುನಾವಣೆಗೆ ಸಂಬಂಧಿಸಿದ ಗಲಾಟೆ ನಡೆದಿತ್ತು. ನಾವು ಅದರ ಬಗ್ಗೆ ಅಭಿಪ್ರಾಯ ಕೇಳಿದೆವು. ಮೊದಲ ದಿನ ಏನನ್ನೂ ಹೇಳಲಿಲ್ಲ. ಮತ್ತೆ ಮಾರನೆಯ ದಿನ ಮಾತಿನ ನಡುವೆ ಜವರೇ ಗೌಡರಿಗಿಂತ ಹಂಪಾ ನಾಗರಾಜಯ್ಯ ಒಳ್ಳೆಯವನೆನಿಸುತ್ತೆ ಎಂದರು. ಮುಂದೆ ಅದನ್ನು ಬೆಳೆಸಲು ಹೋಗಲಿಲ್ಲ. ಆದರೆ ಆ ಕ್ಷಣ ಜವರೇಗೌಡರು ಕುವೆಂಪು ಅಧ್ಯಯನ ಟ್ರಸ್ಟಿನ ಅಧ್ಯಕ್ಷರಾಗಿರುವುದರಿಂದ ಹಳೆಯ ವಾಸನೆ ಕಾಡುತ್ತಿರಬಹುದು ಅಂದುಕೊಂಡೆ. ಇದಕ್ಕಿಂತ ಮಿಗಿಲಾಗಿ ಮಾಸ್ತಿಯವರಿಗೆ ಗೌಡರ ಬಗ್ಗೆ ಮತ್ತು ಲಿಂಗಾಯತರ ಬಗ್ಗೆ ವಿಚಿತ್ರ ರೀತಿಯ ಅಭಿಪ್ರಾಯ ಇದ್ದಂತೆ ಕಾಣುತ್ತಿತ್ತು. ಇದರ ತಪ್ಪುನೆಪ್ಪಿನ ಬಗ್ಗೆ ಷರಾ ಎಳೆಯಲು ಹೋಗುತ್ತಿಲ್ಲ. ಇದರ ಹಿನ್ನೆಲೆಯನ್ನು ತಿಳಿಯುವ ಕುತೂಹಲ ನನಗಿತ್ತು. ಅದನ್ನು ಮೂರು ದಿನಗಳಲ್ಲಿ ಕೊಟ್ಟರು.
ಇವರ ಜೀವನ ಸಿದ್ಧಾಂತದ ಬಗ್ಗೆ ಪಟ್ಟಿ ಮಾಡುತ್ತ ಹೋದಂತೆಲ್ಲ ಕೊನೆಗೂ ನನ್ನಂಥವರಿಗೆ ಅನ್ನಿಸುವುದು: ಇಷ್ಟು ಮಾತ್ರ ಗ್ರಹಿಸಲು ಸಾಧ್ಯ ಎಂಬುದು. ಯಾಕೆಂದರೆ ಇವರ ವ್ಯಕ್ತಿತ್ವದ ಹಿಂದಿರುವ ಗಾಢವಾದ ಶಿಸ್ತಿನ ಮುಂದೆ ನಾವು ಸಣ್ಣವರು ಅಥವಾ ದೊಡ್ಡವರು ಎಂದು ಹೇಳಲಾಗದವರು. ನೇರವಾಗಿ ನನ್ನ ಮಟ್ಟಿಗೆ ಹೇಳಬೇಕೆಂದರೆ ಆ ರೀತಿಯಲ್ಲಿ ಬದುಕಲಾರದವನು. ಕಾರಣವಿಷ್ಟೆ : ನಮ್ಮ ಹುಚ್ಚು ತನಗಳು ಆ ರೀತಿ ಇರುತ್ತವೆ.