varthabharthi


Social Media

ಮಧ್ಯ ಏಷ್ಯಾದಿಂದ ಬಂದ ಮುಧೋಳ ನಾಯಿ ದೇಶಭಕ್ತ ಎಂದಾದರೆ, ಜರ್ಮನ್ ಶೆಫರ್ಡ್ ದೇಶದ್ರೋಹಿಯೇ ?

ವಾರ್ತಾ ಭಾರತಿ : 8 May, 2018
ರವೀಶ್ ಕುಮಾರ್

ಉತ್ತರ ಕರ್ನಾಟಕದಲ್ಲಿ ಕಂಡು ಬರುವ ಹಾಗೂ ಭಾರತೀಯ ಸೇನೆಯ ಭಾಗವಾಗಿರುವ ಮುಧೋಳ ನಾಯಿಗಳಿಂದ ಕಾಂಗ್ರೆಸ್ ಪಕ್ಷ ದೇಶ ಭಕ್ತಿ ಕಲಿಯಬೇಕಾಗಿದೆಎಂದು ಭಾರತದ ಪ್ರಧಾನ ಮಂತ್ರಿ ಹೇಳಿದ್ದಾರೆ. ಪ್ರಧಾನ ಮಂತ್ರಿ ಅವರು ರಾಹುಲ್ ಗಾಂಧಿಯ ಹೆಸರಿತ್ತಿಲ್ಲ. ಆದರೆ ಜೆ ಎನ್ ಯು ಗೆ ಅಂದು ಹೋಗಿದ್ದು ರಾಹುಲ್ ಗಾಂಧಿಯವರೇ. ಅಲ್ಲಿ ಹಾಕಿದ್ದರೆಂದು ಪ್ರಧಾನಿಯವರು ಹೇಳಿರುವ ಘೋಷಣೆಗಳ ಕುರಿತ ಸತ್ಯ ಇವತ್ತಿನವರೆಗೂ ಬಯಲಾಗಿಲ್ಲ. ಆ ಘೋಷಣೆಗಳನ್ನು ಹಾಕಿದವರು ಯಾರು ಎಂಬುದೂ ಇಂದಿಗೂ ನಿಗೂಢ. 

ಅವರ ಪಕ್ಷ ಕೆಲವೊಮ್ಮೆ ಟ್ಯಾಂಕ್ ನಿಂದ ದೇಶಭಕ್ತಿ ಕಲಿಯಬೇಕೆಂದು ಹೇಳುತ್ತಿದ್ದರೆ ಮಗದೊಮ್ಮೆ ಬೇರೆ ಯಾವುದೋ ವಸ್ತುವಿನಿಂದ ದೇಶಭಕ್ತಿ ಕಲಿಯಬೇಕೆನ್ನುತ್ತದೆ. ಭಾರತೀಯ ಸೇನೆಯಲ್ಲಿ ಕುದುರೆಗಳೂ ಇವೆ. ಅವುಗಳಿಂದಲೂ ದೇಶಭಕ್ತಿ ಕಲಿಯಬೇಕೆನ್ನುವ ಪಠ್ಯ ಜಾರಿ ಮಾಡಬಹುದು. ಯಾರಾದರೂ ವಿಪಕ್ಷದ ನಾಯಕರ ವಿರುದ್ಧ ಈ ರೀತಿ ಅಪಹಾಸ್ಯ ಮಾಡಿದಾಗ ಅದು ಪ್ರಜಾಪ್ರಭುತ್ವ ದೇಶವೊಂದಕ್ಕೆ ಒಳ್ಳೆಯದಲ್ಲ. ಪ್ರಧಾನಿ ಇಂತಹ ಒಂದು ಮಾತನ್ನು ಇದೇ ಮೊದಲ ಬಾರಿ ಆಡಿದ್ದಾರೆಂದೇನೂ ಅಲ್ಲ. ಜಗತ್ತಿನಲ್ಲಿಯೂ ಇಂತಹ ಅನೇಕ ಉದಾಹರಣೆಗಳಿವೆ. ಆದರೆ ಅಧಿಕಾರಕ್ಕೆ ಬಂದ ನಾಯಕರು ಈ ರೀತಿ ಅಪಹಾಸ್ಯ ಮಾಡುತ್ತಾರೆಂದಾದರೆ ಅದು  ಆ ದೇಶದ ಪ್ರಜಾಪ್ರಭುತ್ವದ ಭವಿಷ್ಯ ಅಷ್ಟೊಂದು ಉತ್ತಮವಾಗಿಲ್ಲವೆಂದು ಅರ್ಥ. ವಿಪಕ್ಷವನ್ನು ಟಾರ್ಗೆಟ್ ಮಾಡುವ ಒಂದು ವಿಧಾನವೇ ಇಲ್ಲಿದೆ. ತನಿಖಾ ಏಜನ್ಸಿಗಳು ಹಾಗೂ ಆದಾಯ ತೆರಿಗೆ ಇಲಾಖೆಯನ್ನೂ ಈ ನಿಟ್ಟಿನಲ್ಲಿ ಉಪಯೋಗಿಸಲಾಗುತ್ತದೆ, ಇದು ಬಹಳ ದೇಶಗಳಲ್ಲಿ ನಡೆದಿದೆ.

ಅಷ್ಟಕ್ಕೂ ಪ್ರಧಾನಿ ಪ್ರಧಾನಿಯೇ ಆಗಿದ್ದಾರೆ. ಅವರು ಮಾತನಾಡುತ್ತಾರೆ ಮತ್ತು ಚುನಾವಣೆ ಗೆಲ್ಲುತ್ತಾರೆ. ಅವರ ಕೆಲಸಗಳ ವಿಚಾರವಾಗಿ ಜಗತ್ತು ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತದೆ ಹಾಗೂ ಪ್ರಧಾನಿ ಏನನ್ನೋ ಮಾತನಾಡಿ ಚುನಾವಣೆ ಗೆದ್ದು ಬಿಡುತ್ತಾರೆ. ಆದುದರಿಂದ ಅವರಿಗೆ ಮಾತನಾಡುವುದೇ ಕೆಲಸವೆಂದೇ ತಿಳಿಯಬೇಕಾಗುತ್ತದೆ. ಇದೀಗ ಅವರು ಮುಧೋಳ ನಾಯಿಗಳಿಂದ ದೇಶಭಕ್ತಿ ಕಲಿಯಬೇಕೆಂದು ಹೇಳಿರುವುದರಿಂದ ಆ ನಾಯಿಗಳ ಬಗ್ಗೆ ಸ್ವಲ್ಪ ತಿಳಿದುಕೊಳ್ಳುವ. ತಾವು ನೀಡಿದ ಆಶ್ವಾಸನೆಗಳ ಬಗ್ಗೆ ಮಾತನಾಡದೇ ಇರಲು ಪ್ರಧಾನಿ ಎಷ್ಟೊಂದು ಸಂಶೋಧನೆ ನಡೆಸುತ್ತಾರೆ ? ಅವರ ಟೀಮ್ ನಿಜವಾಗಿಯೂ ಅದ್ಭುತ.

ನಾವು ವಿಕಿಪೀಡಿಯಾದ ಮೊರೆ ಹೋದೆವು. ವೀಕಿಪೀಡಿಯಾ ಮಾಹಿತಿ ಬಗ್ಗೆ ಸ್ವಲ್ಪ ಜಾಗರೂಕತೆ ಅಗತ್ಯ. ಮುಧೋಳ ಜಾತಿಯ ನಾಯಿಗಳನ್ನು ಕೆರವಾನ್ ನಾಯಿ ಎಂದೂ ಕರೆಯಲಾಗುತ್ತದೆಯಂತೆ. ನ್ಯಾಯಾಧೀಶ ಲೋಯಾ ಸಾವಿನ ಸಂಬಂಧ ಹಲವಾರು ವರದಿಗಳನ್ನು ಪ್ರಕಟಿಸಿದ ಕೆರವಾನ್ ಪತ್ರಿಕೆಗೂ ಇದಕ್ಕೂ ಸಂಬಂಧವಿಲ್ಲ.  ಪ್ರಧಾನಿಗೂ ಈ ನಂಟು ಕಲ್ಪಿಸುವ ಉದ್ದೇಶವಿರಲಿಕ್ಕಿಲ್ಲ. ವಿಕಿಪೀಡಿಯಾದ ಮಾಹಿತಿ ಪ್ರಕಾರ ಡೆಕ್ಕನ್ ಪ್ರಾಂತ್ಯದಲ್ಲಿ ಮನೆಮನೆಗಳಲ್ಲಿ ಈ ಜಾತಿಯ ನಾಯಿಗಳನ್ನು ಸಾಕಲಾಗುತ್ತದೆ. ಈ ನಾಯಿಗಳನ್ನು ಬೇಟೆ ಹಾಗೂ ಕಾವಲು ಉದ್ದೇಶಕ್ಕೆ ಬಳಸಲಾಗುತ್ತದೆ.

ಜನವರಿ 2005ರಲ್ಲಿ ಭಾರತೀಯ ಅಂಚೆ ಇಲಾಖೆ  5 ರೂಪಾಯಿ ಮುಖಬೆಲೆಯ ಅಂಚೆ ಚೀಟಿಗಳಲ್ಲಿ ಈ ನಾಯಿಯ ಚಿತ್ರ ಪ್ರಕಟಿಸಿತ್ತು. ಇದರ ಜತೆಗೆ ಹಿಮಾಲಯನ್ ಶೀಪ್, ರಾಮಪುರ್ ಹೌಂಡ್, ರಾಜಾಪಲಾಯಂ ಜಾತಿಯ ನಾಯಿಗಳ ಚಿತ್ರಗಳೂ ಅಂಚೆ ಚೀಟಿಗಳಲ್ಲಿ ಮೂಡಿವೆ. ರಾಹುಲ್ ಗಾಂಧಿಯವರ ಆಲಸ್ಯ ಹೊಂದಿರುವ ತಂಡದಲ್ಲಿ ಮೋದಿ ತಂಡದ ಯಾರಾದರೊಬ್ಬರು ಇದ್ದಿದ್ದರೆ ಕೂಡಲೇ ಗೂಗಲ್ ಹುಡುಕಿ ಅದೇ ಕಾರಣಕ್ಕೆ 2005ರಲ್ಲಿ ನಮ್ಮ ಸರಕಾರ ಮುಧೋಳ ನಾಯಿ ಮಾತ್ರವಲ್ಲ ಮೂರು ಇತರ ಭಾರತೀಯ ಜಾತಿಯ ನಾಯಿಗಳ ಚಿತ್ರಗಳ ಅಂಚೆ ಚೀಟಿ ಹೊರತಂದಿದ್ದಾಗಿ ಹೇಳುತ್ತಿದ್ದರು. ಆದರೆ ರಾಹುಲ್ ತಂಡದಲ್ಲಿ ಅಂಥವರು ಇಲ್ಲವಲ್ಲ.

ವಿಕಿಪೀಡಿಯಾ ಪ್ರಕಾರ ಮಧ್ಯ ಏಷ್ಯಾದಿಂದ ಈ ಜಾತಿಯ ನಾಯಿಗಳು ಪಶ್ಚಿಮ ಭಾರತದ ಡೆಕ್ಕನ್ ಪ್ರದೇಶಕ್ಕೆ ತಲುಪಿದ್ದವು. ಹೇಗೆ ಬಂದವು ಎಂಬುದು ತಿಳಿದಿಲ್ಲ. ಇದೀಗ ಪ್ರಧಾನಿ ಈ ನಾಯಿಗಳ ಬಗ್ಗೆ ಮಾತೆತ್ತಿದ್ದರಿಂದ ಪ್ರಾಯಶಃ ಯಾವುದಾದರೂ ಸಂಘಟನೆಯವರು ಈ ನಾಯಿಯ ಸಂಬಂಧವನ್ನು ಬಾಬರ್ ಜತೆ ಜೋಡಿಸಬಹುದು.

ಮುಧೋಳ ಜಾತಿಯ ನಾಯಿಗಳು ಕರ್ನಾಟಕ, ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ಕಾಣ ಸಿಗುತ್ತವೆ.  ಕರ್ನಾಟಕದಲ್ಲಿ ಮುಧೋಳ ಜಾತಿ ನಾಯಿಗಳು ಜನಪ್ರಿಯವಾಗಿವೆ, ಇಲ್ಲಿನ ಒಂದು ತಾಲೂಕಿನ ಹೆಸರೂ ಮುಧೋಳ ಆಗಿದೆ. ಹಿಂದಿನ ಮುಧೋಳ ರಾಜ್ಯದ ಶ್ರೀಮಂತ ರಾಜೇಸಾಹಬ್ ಮಾಲೋಜಿರಾವ್ ಘೋರ್ಪಡೆ ಎಂಬವರು ಈ ಜಾತಿಯ ನಾಯಿಗಳನ್ನು ಜನಪ್ರಿಯಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದಿವಾಸಿಗಳ ಬಳಿ ಈ ನಾಯಿಗಳು ಬಹಳ ಹಿಂದೆಯೇ ಜನಪ್ರಿಯವಾಗಿದ್ದವು. ಆದಿವಾಸಿಗಳು ಈ ನಾಯಿಗಳನ್ನು ಬೇಟೆಗೆ ಉಪಯೋಗಿಸುತ್ತಾರೆ ಎಂದು ಘೋರ್ಪಡೆ ಕಂಡುಕೊಂಡಿದ್ದರು. ಈ ನಾಯಿಗಳು ಕೂಗುವುದಿಲ್ಲ. 1900ರಲ್ಲಿ ಅವರು ಇಂಗ್ಲೆಂಡ್ ಗೆ ಹೋಗಿದಾಗ ಈ ಜಾತಿಯ ಒಂದು ಜೊತೆ ನಾಯಿಯನ್ನು ಐದನೇ ಕಿಂಗ್ ಜಾರ್ಜ್ ಗೆ ಉಡುಗೊರೆಯಾಗಿ ಅವರು ನೀಡಿದ್ದರು. ಇದೇ ಕಾರಣದಿಂದ ಅವುಗಳು ಜನಪ್ರಿಯವಾಗಿದ್ದವು.

ಕಳೆದ ವರ್ಷ ಈ ಜಾತಿಯ ಆರು ನಾಯಿಗಳು ಭಾರತೀಯ ಸೇನೆಗೆ ಸೇರ್ಪಡೆಗೊಂಡಿದ್ದವು. ಸೇನೆಗೆ ಸೇರ್ಪಡೆಗೊಂಡ ಮೊದಲ ದೇಶೀಯ ತಳಿಯ ನಾಯಿಗಳು ಇವಾಗಿವೆ. ಇವುಗಳಿಗೆ ಮೀರತ್ ನಲ್ಲಿ ತರಬೇತಿ ನೀಡಲಾಗಿತ್ತು. ಆದರೆ ದೇಶಭಕ್ತಿಯನ್ನು ಇವುಗಳಿಂದ ಹೇಗೆ ಕಲಿಯಬಹುದೆಂದು ಅರ್ಥವಾಗುತ್ತಿಲ್ಲ. ಇನ್ನು ಸೇನೆಯಲ್ಲಿ ಬಹಳ ಹಿಂದಿನಿಂದಲೇ ಜನಪ್ರಿಯವಾಗಿರುವ ಜರ್ಮನ್ ಶೆಪರ್ಡ್ ಜಾತಿಯ ನಾಯಿಯನ್ನು ದೇಶದ್ರೋಹಿ ಎಂದು ಕರೆಯಲಾಗುವುದೇ ?

(ಹಿರಿಯ ಪತ್ರಕರ್ತ ರವೀಶ್ ಕುಮಾರ್ ಅವರ ಫೇಸ್ ಬುಕ್ ಪೋಸ್ಟ್ ನ ಕನ್ನಡ ಅನುವಾದ)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)