ಪ್ರೀತಿಯನ್ನು ಉಸಿರಾಡುವ ‘ಜಟಾಯು ಪಕ್ಷಿ’
ಈ ಹೊತ್ತಿನ ಹೊತ್ತಿಗೆ
ಪ್ರೀತಿ ಅರಳಿದ ಮೇಲೆ
ಅರಳಲು ಇನ್ನೇನೂ ಬಾಕಿಯಿರುವುದಿಲ್ಲ
ಹೂವಿನ ಜೀವಿತೋದ್ದೇಶ ಈಡೇರಿದ ಮೇಲೆ
ಅರಳುವ ಮುನ್ನ ಮೊಗ್ಗು
ದಳದಳ ಮುಚ್ಚಿಕೊಂಡು
ಸಂಭ್ರಮವೋ ಸಂಕೋಚವೋ
ಯಾವುದನ್ನೂ ಬಾಯ್ಬಿಡದೆ
ಒಳಗೊಳಗೆ ಧ್ಯಾನಸ್ಥಲೀಯ....
ಇಂತಹ ಪರಿಮಳದ ಸಾಲುಗಳ ಮೂಲಕ ಕವಯಿತ್ರಿಯಾಗಿ ಈಗಾಗಲೇ ಗುರುತಿಸಿಕೊಂಡವರು ಜ್ಯೋತಿ ಗುರುಪ್ರಸಾದ್. ‘ಜಟಾಯು ಪಕ್ಷಿಗೆ ಶ್ರದ್ಧಾಂಜಲಿ’ ಅವರ 2017ರ ಮುದ್ದಣ ಕಾವ್ಯ ಪುರಸ್ಕೃತ ಕವನಸಂಕಲನ. ಒಟ್ಟು 103 ಕವಿತೆಗಳನ್ನು ಹೊಂದಿರುವ ಈ ಕಾವ್ಯ ಕೃತಿಗೆ ಜ್ಯೋತಿ ಗುರುಪ್ರಸಾದರು ತಮ್ಮ ಪ್ರತಿಭೆಗಳನ್ನೆಲ್ಲ ಧಾರೆಯೆರೆದಿದ್ದಾರೆ. ಅವರ ಕವಿತೆಗಳ ಪ್ರತಿ ಸಾಲುಗಳೂ ಪ್ರೀತಿಯನ್ನು ತುಂಬಿಕೊಂಡಿವೆ. ವರ್ತಮಾನದ ಕ್ರೌರ್ಯಗಳನ್ನು ನೋಡುತ್ತಾ, ಅದಕ್ಕೆ ಸಿನಿಕರಾಗಿ ಪ್ರತಿಕ್ರಿಯಿಸದೆ ಆಶಾಭಾವದಿಂದ ಅವರು ಬರೆಯುತ್ತಾರೆ. ಆದುದರಿಂದಲೇ ಪ್ರಿತಿಯ ಇಟ್ಟಿಗೆಗಳಿಂದ ಹೊಸ ನಾಡನ್ನು ಕಟ್ಟುವ ತುಡಿದ ಅವರ ಪ್ರತಿ ಕವಿತೆಗಳಲ್ಲಿವೆ.
‘ಕತ್ತಲೆಯ ತಪ್ತ ಹೃದಯವನ್ನು
ಸಂತೈಸಲು ಇರುವ ಏಕೈಕ
ಪ್ರಾಣ ದೀಪದಂತೆ
ಈ ದೀಪಾವಳಿಯ ಬೆಳಕು....’ ದೀಪಾವಳಿ ಪದ್ಯದಲ್ಲಿ ಕತ್ತಲು-ಬೆಳಕಿನ ನಡುವಿನ ಸಂಬಂಧವನ್ನು ಕವಯಿತ್ರಿ ಕಟ್ಟಿಕೊಡುತ್ತಾರೆ.
ಪದ್ಯದ ಸಾಂಗತ್ಯವನ್ನು ವಿವರಿಸುವ ‘ಪದ್ಯ’, ಒದ್ದೆ ಭಾಷೆಯಲ್ಲಿ ಮಾತನಾಡುವ, ಶುದ್ಧವಾಗುವ ‘ಕಣ್ಣಂಚಿನ ನೀರು’, ಜೋಡಿ ಹಕ್ಕಿಗಳು ಜೊತೆಯಾಗಿರಲಿ ಎಂದು ಹಾರೈಸುವ ‘ಪುರಾಣದ ನೆನಪು’, ಜಟಾಯುವಿನ ಮೂಲಕ ರಾಮನನ್ನು ನೋಡುವ ‘ಜಟಾಯು ಪಕ್ಷಿಗೆ ಶ್ರದ್ಧಾಂಜಲಿ’, ಮಗುವಿನ ಮುಗ್ಧತೆಯ ಅಗಾಧತೆಯನ್ನು ಹೇಳುವ ‘ಜ್ಞಾನ ಚಂದ್ರ’ ಬದುಕಿನ ಹತ್ತು ಹಲವು ಮುಖಗಳಿಗೆ ಮುಖಾಮುಖಿಯಾಗುವ ಹೃದ್ಯ ಕವಿತೆಗಳಿವೆ. ಬದುಕನ್ನು ಇನ್ನೂ ಗಾಢವಾಗಿ ಅಪ್ಪಿಕೊಳ್ಳಲು ಏಕೈಕ ದಾರಿ ಎಂದರೆ ಪ್ರೀತಿಯನ್ನು ಕೊಡುವುದು ಮತ್ತು ಪಡೆಯುವುದು ಎನ್ನುವುದನ್ನು ಇಲ್ಲಿರುವ ಎಲ್ಲ ಕವಿತೆಗಳು ಸಾರಿ ಸಾರಿ ಹೇಳುತ್ತದೆ.
ಸೃಷ್ಟಿ ಬೆಂಗಳೂರು ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 208. ಮುಖಬೆಲೆ 160 ರೂ.