ಮೊಟ್ಟೆ ಹೃದಯಕ್ಕೆ ಹಾನಿಕಾರಕವೇ?
ಮೊಟ್ಟೆ ಸೇವನೆಯು ಆರೋಗ್ಯಕರ ಎನ್ನುವದು ಸಾಮಾನ್ಯ ಅಭಿಪ್ರಾಯ. ಆದರೆ ಅವುಗಳ ಸೇವನೆಯಿಂಂದ ಹೃದಯದ ಮೇಲೆ ದುಷ್ಪರಿಣಾಮವೇನಾದರೂ ಆಗುತ್ತದೆಯೇ? ಈ ಪ್ರಶ್ನೆಗೆ ಉತ್ತರ ಇಲ್ಲಿದೆ.....ಸಾಮಾನ್ಯವಾಗಿ ಮೊಟ್ಟೆಗಳು ರಕ್ತದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತವೆ. ಹೀಗಾಗಿ ಅಗತ್ಯಕ್ಕಿಂತ ಹೆಚ್ಚು ಮೊಟ್ಟೆಗಳನ್ನು ಸೇವಿಸುವುದರಿಂದ ವ್ಯಕ್ತಿಯು ಹೃದ್ರೋಗಕ್ಕೆ ಗುರಿಯಾಗುವ ಅಪಾಯವಿದೆ.
ಮೊಟ್ಟೆಗಳು ಅಧಿಕ ಕ್ಯಾಲೊರಿಗಳನ್ನು ಒಳಗೊಂಡಿವೆ ಮತ್ತು ಅತಿಯಾಗಿ ಮೊಟ್ಟೆಗಳನ್ನು ಸೇವಿಸುವುದರಿಂದ ಶರೀರದ ತೂಕ ಹೆಚ್ಚುತ್ತದೆ. ಹೀಗೆ ಮೊಟ್ಟೆಗಳು ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲೊರಿಗಳು,ಕೊಲೆಸ್ಟ್ರಾಲ್ ಮತ್ತು ಕೊಬ್ಬನ್ನು ಒಳಗೊಂಡಿರುವುದರಿಂದ ಇವೆಲ್ಲ ಒಟ್ಟು ಸೇರಿ ಹೃದಯದ ಕಾಯಿಲೆಗಳಿಗೆ ಕಾರಣವಾಗುತ್ತವೆ.
► ಮೊಟ್ಟೆಯು ಒಳ್ಳೆಯದೂ ಹೌದು,ಕೆಟ್ಟದ್ದೂ ಹೌದು
ಒಂದು ಪೂರ್ಣ ಮೊಟ್ಟೆಯು 210 ಮಿ.ಗ್ರಾಂ ಕೊಲೆಸ್ಟ್ರಾಲ್ ಅನ್ನು ಒಳಗೊಂಡಿದ್ದು, ಇದು ವ್ಯಕ್ತಿಯ ದೈನಂದಿನ ಕೊಲೆಸ್ಟ್ರಾಲ್ ಅಗತ್ಯದ ಅರ್ಧಕ್ಕೂ ಹೆಚ್ಚಾಗಿದೆ. ಒಂದು ಮೊಟ್ಟೆಯು 1.6 ಗ್ರಾಂ ಸ್ಯಾಚುರೇಟೆಡ್ ಫ್ಯಾಟ್ ಸೇರಿದಂತೆ ಸುಮಾರು ಐದು ಗ್ರಾಂ ಕೊಬ್ಬನ್ನೂ ಒಳಗೊಂಡಿದೆ. ಹೆಚ್ಚುಕಡಿಮೆ ಈ ಎಲ್ಲ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಮೊಟ್ಟೆಯ ಹಳದಿ ಭಾಗದಲ್ಲಿ ಇರುತ್ತವೆ.
ಮೊಟ್ಟೆಯ ಬಿಳಿಯ ಭಾಗದಲ್ಲಿ ಕೇವಲ 0.06 ಗ್ರಾ. ಕೊಬ್ಬು ಇರುತ್ತದೆ ಮತ್ತು ಸ್ಯಾಚುರೇಟೆಡ್ ಫ್ಯಾಟ್ ಆಗಲೀ ಕೊಲೆಸ್ಟ್ರಾಲ್ ಆಗಲೀ ಇರುವುದಿಲ್ಲ. ಮೊಟ್ಟೆಯ ಹಳದಿ ಭಾಗದಲ್ಲಿ ಸ್ಯಾಚುರೇಟೆಡ್ ಫ್ಯಾಟ್ ಮತ್ತು ಕೊಲೆಸ್ಟ್ರಾಲ್ ಜೊತೆಗೆ ಹೃದಯಕ್ಕೆ ಆರೋಗ್ಯಕರವಾದ ಒಮೆಗಾ-3 ಫ್ಯಾಟಿ ಆ್ಯಸಿಡ್‌ಗಳೂ ಇರುತ್ತವೆ. ಬಿಳಿಯ ಭಾಗದಲ್ಲಿ ಒಮೆಗಾ-3 ಫ್ಯಾಟಿ ಆ್ಯಸಿಡ್‌ಗಳಿರುವುದಿಲ್ಲ. ಹೀಗಾಗಿ ಒಂದು ರೀತಿಯಲ್ಲಿ ಅತಿಯಾದ ಪ್ರಮಾಣದಲ್ಲಿ ಮೊಟ್ಟೆಗಳನ್ನು ಸೇವಿಸುವುದು ಮಾನವ ಹೃದಯಕ್ಕೆ ಅನಾರೋಗ್ಯಕಾರಿಯಾಗಿದೆ,ಆದರೆ ಸೀಮಿತ ಪ್ರಮಾಣದಲ್ಲಿ ಸೇವನೆಯು ಆರೋಗ್ಯಲಾಭಗಳನ್ನು ನೀಡುತ್ತದೆ.
ಮೊಟ್ಟೆಗಳು ಕೊಲೆಸ್ಟ್ರಾಲ್ ಅನ್ನು ಒಳಗೊಂಡಿವೆಯಾದರೂ ಆರೋಗ್ಯಯುತ ವ್ಯಕ್ತಿಯು ದಿನಕ್ಕೆ ಒಂದು ಮೊಟ್ಟೆಯನ್ನು ಸೇವಿಸುವುದರಿಂದ ಹೃದ್ರೋಗಕ್ಕೆ ಗುರಿಯಾಗುವ ಅಪಾಯವಿಲ್ಲ.
ಆದರೆ ಮಧುಮೇಹಿಗಳು ಪ್ರತಿದಿನ ಒಂದು ಮೊಟ್ಟೆಯನ್ನು ಸೇವಿಸಿದರೆ ಹೃದಯ ಕಾಯಿಲೆಗಳಿಗೆ ಗುರಿಯಾಗುವ ಅಪಾಯವಿದೆ. ಹೀಗಾಗಿ ಅವರು ವಾರಕ್ಕೆ ಮೂರು ಮೊಟ್ಟೆಗಳ ಸೇವನೆಗೆ ಸೀಮಿತವಾಗಿದ್ದರೆ ಒಳ್ಳೆಯದು.
ಒಂದು ಇಡಿಯ ಮೊಟ್ಟೆಯು 71 ಕ್ಯಾಲೊರಿಗಳನ್ನೊಳಗೊಂಡಿದ್ದು, 6.3 ಗ್ರಾಂ ಪ್ರೋಟಿನ್ ಅನ್ನು ಒದಗಿಸುತ್ತದೆ. ಈ ಪೈಕಿ 3.6 ಗ್ರಾಂ ಪ್ರೋಟಿನ್ ಬಿಳಿಯ ಭಾಗದಲ್ಲಿ ಮತ್ತು 2.7 ಗ್ರಾಂ ಹಳದಿ ಭಾಗದಲ್ಲಿ ಇರುತ್ತವೆ. ಹಳದಿ ಭಾಗವು ವಿಟಾಮಿನ್ ಬಿ-12,ಎ,ಡಿ,ಇ ಮತ್ತು ಕೆ,ಕ್ಯಾಲ್ಸಿಯಂ,ಕಬ್ಬಿಣ ಮತ್ತು ಕ್ಯಾರೊಟೆನಾಯ್ಡಾಗಳಂತಹ ಹಲವಾರು ಪೌಷ್ಟಿಕಾಂಶಗಳನ್ನು ಹೊಂದಿದ್ದರೆ,ಬಿಳಿಯ ಭಾಗವು ಫಾಲೇಟ್, ವಿಟಾಮಿನ್ ಬಿ-12,ಕೋಲಿನ್,ಕ್ಯಾಲ್ಸಿಯಂ ಮತ್ತು ಕಬ್ಬಿಣಗಳನ್ನು ಅಲ್ಪ ಪ್ರಮಾಣದಲ್ಲಿ ಹೊಂದಿದೆ.
►ಮೊಟ್ಟೆ ಸೇವನೆಯ ಕೆಡಕುಗಳನ್ನು ನಿವಾರಿಸುವುದು ಹೇಗೆ?
ಪ್ರತಿದಿನ ಒಂದು ಮೊಟ್ಟೆ ಅಥವಾ ವಾರದಲ್ಲಿ ಕೆಲವೇ ಮೊಟ್ಟೆಗಳ ಸೇವನೆಯು ಹೆಚ್ಚಿನ ಆರೋಗ್ಯಯುತ ಜನರಿಗೆ ಬೇಕಾದಷ್ಟಾಗುತ್ತದೆ. ವ್ಯಕ್ತಿಯು ಮೊಟ್ಟೆಯನ್ನು ಸೇವಿಸಿದರೆ ಅಧಿಕ ಕೊಬ್ಬು ಮತ್ತು ಕೊಲೆಸ್ಟ್ರಾಲ್‌ಗಳನ್ನು ಒಳಗೊಂಡಿರುವ ಬೆಣ್ಣೆ, ತುಪ್ಪ,ಕೆಂಪುಮಾಂಸ,ಬಟಾಟೆ ಮತ್ತು ಸಾಸೇಜ್‌ಗಳಂತಹ ಇತರ ಆಹಾರಗಳನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು. ಮಧುಮೇಹ ಮತ್ತು ಹೃದ್ರೋಗಗಳಿಂದ ಬಳಲುತ್ತಿರುವವರು ಮೊಟ್ಟೆಯ ಬಿಳಿಯ ಭಾಗವನ್ನು ವಾರಕ್ಕೆ ಮೂರು ಅಥವಾ ಅದಕ್ಕಿಂತ ಕಡಿಮೆ ಸಲ ಸೇವಿಸುವುದು ಒಳ್ಳೆಯದು ಎನ್ನುವದನ್ನು ಸಂಶೋಧನೆಗಳು ತೋರಿಸಿವೆ.
ಪ್ರತಿದಿನ ಮಿತಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮೊಟ್ಟೆಗಳನ್ನು ಸೇವಿಸಿದರೆ ಬಿಳಿಯ ಭಾಗಕ್ಕಿಂತ ಹಳದಿ ಭಾಗವು ಆರೋಗ್ಯಕ್ಕೆ ಹೆಚ್ಚಿನ ಹಾನಿಯನ್ನು ಮಾಡುತ್ತದೆ ಎನ್ನುವುದು ಸಾಬೀತಾಗಿದೆ.
ಹೆಚ್ಚಿನ ವೈದ್ಯರು ಹೃದಯ ಸಮಸ್ಯೆಗಳು,ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರಿಗೆ ಮೊಟ್ಟೆಯ ಹಳದಿ ಭಾಗವನ್ನು ಸೇವಿಸದಂತೆ ಶಿಫಾರಸು ಮಾಡುತ್ತಾರೆ.
►ಮೊಟ್ಟೆಗಳು ಕೊಲೆಸ್ಟ್ರಾಲ್ ಮಟ್ಟವನ್ನು ಅಪಾಯಕಾರಿಯಾಗಿ ಹೆಚ್ಚಿಸುತ್ತವೆ
ಮೊಟ್ಟೆಗಳು ಅಧಿಕ ಪ್ರಮಾಣದಲ್ಲಿ ಕೊಲೆಸ್ಟ್ರಾಲ್ ಅನ್ನು ಒಳಗೊಂಡಿರುವುದರಿಂದ ಅವುಗಳ ಸೇವನೆ ಒಳ್ಳೆಯದಲ್ಲ ಎನ್ನುವುದು ಕೆಲವು ಸಂಶೋಧಕರ ವಾದವಾಗಿದೆ. ಕೊಲೆಸ್ಟ್ರಾಲ್ ನಮ್ಮ ರಕ್ತದಲ್ಲಿ ಹರಿಯುತ್ತಿರುವ ನೈಸರ್ಗಿಕ ಕೊಬ್ಬು ಆಗಿದೆ. ಆರೋಗ್ಯಯುತವಾಗಿರಲು ನಾವು ಸೇವಿಸುವ ಆಹಾರದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಕೊಬ್ಬು ಇರುವುದು ಅಗತ್ಯವಾಗಿದೆ. ಉದಾಹರಣೆಗೆ ಕೊಲೆಸ್ಟ್ರಾಲ್ ನಮ್ಮ ಶರೀರದಲ್ಲಿ ರಕ್ಷಣಾ ಗೋಡೆಗಳ ನಿರ್ಮಾಣಕ್ಕೆ ಅಗತ್ಯವಾಗಿದೆ. ವ್ಯಕ್ತಿಯ ರಕ್ತದಲ್ಲಿ ಅತಿಯಾದ ಕೊಲೆಸ್ಟ್ರಾಲ್ ಇದ್ದರೆ ರಕ್ತವು ದಪ್ಪವಾಗುತ್ತದೆ ಮತ್ತು ಅದನ್ನು ಪಂಪ್ ಮಾಡಲು ಹೃದಯಕ್ಕೆ ಕಷ್ಟವಾಗುತ್ತದೆ. ಇದು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ ಮತ್ತು ಕೊಲೆಸ್ಟ್ರಾಲ್ ಮಟ್ಟ ಅತಿಯಾಗಿ ಹೆಚ್ಚಿದರೆ ಹೃದಯ ಕಾಯಿಲೆಗಳನ್ನು ತರುತ್ತದೆ.
ಅಂತಿಮವಾಗಿ ಹೇಳಬೇಕೆಂದರೆ ಮೊಟ್ಟೆಗಳ ಸೇವನೆಯು ಒಳ್ಳೆಯ ಮತ್ತು ಕೆಟ್ಟ ಪರಿಣಾಮಗಳೆರಡನ್ನೂ ಹೊಂದಿದೆ. ವ್ಯಕ್ತಿಯು ತನ್ನ ಆಹಾರದಲ್ಲಿ ಮೊಟ್ಟೆಗಳ ಲಾಭಗಳನ್ನು ಕಡೆಗಣಿಸಿದರೆ ಆತ ಶರೀರದಲ್ಲಿಯ ಮೂಳೆಗಳು ಸದೃಢಗೊಳ್ಳಲು ಅಗತ್ಯವಾದ ಪ್ರೋಟಿನ್‌ನಿಂದ ವಂಚಿತನಾಗುತ್ತಾನೆ. ಆದರೆ ಮೊಟ್ಟೆಗಳು ಅಧಿಕ ಕೊಲೆಸ್ಟ್ರಾಲ್ ಅನ್ನೂ ಒಳಗೊಂಡಿರುವುದರಿಂದ ಹೃದ್ರೋಗವಿರುವ ವ್ಯಕ್ತಿಯಲ್ಲಿ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುತ್ತವೆ. ಹೀಗಾಗಿ ಯಾವುದೇ ಡಯಟ್ ಆರಂಭಿಸುವ ಮುನ್ನ ವೈದ್ಯರ ಸಲಹೆ ಪಡೆದುಕೊಳ್ಳುವುದು ಮತ್ತು ಅಗತ್ಯ ಸಂಖ್ಯೆಯಲ್ಲಷ್ಟೇ ಮೊಟ್ಟೆಗಳ ಸೇವನೆಯನ್ನು ಖಚಿತಪಡಿಸಿಕೊಳ್ಳುವುದು ಒಳ್ಳೆಯದು.