varthabharthi


ಚಿತ್ರ ವಿಮರ್ಶೆ

ಹಿಂದಿ ಸಿನೆಮಾ

ಒಳ ಸಂಘರ್ಷಗಳನ್ನು ಹಿಡಿದಿಡಲು ಸೋಲುವ ‘ರಾಝಿ’

ವಾರ್ತಾ ಭಾರತಿ : 13 May, 2018
-ಮುಸಾಫಿರ್

‘ಬೋರ್ಡರ್’ ಚಿತ್ರದ ಬಳಿಕ, ಬಾಲಿವುಡ್‌ನಲ್ಲಿ ಯುದ್ಧ ಮತ್ತು ಸೈನಿಕರ ಕತಾ ವಸ್ತುವನ್ನೊಳಗೊಂಡ ಚಿತ್ರಗಳು ಸಾಲುಸಾಲಾಗಿ ಬರತೊಡಗಿತು. ಆದರೆ ‘ಬಾರ್ಡರ್’ ಚಿತ್ರದಂತೆ ಅವುಗಳು ಬಾಕ್ಸ್ ಆಫೀಸ್‌ನಲ್ಲಿ ಗೆಲ್ಲಲಿಲ್ಲ. ಇದಾದ ಬಳಿಕ, ಭಯೋತ್ಪಾದಕರನ್ನು ಮಟ್ಟ ಹಾಕಲು, ಭಾರತದ ಏಜೆಂಟರ್‌ಗಳು ನಡೆಸುವ ಸಾಹಸಗಳನ್ನು ವಸ್ತುವಾಗಿಟ್ಟು ಒಂದಿಷ್ಟು ಚಿತ್ರಗಳು ಬಂದವು. ಅಕ್ಷಯ್ ಕುಮಾರ್ ನೇತೃತ್ವದ ‘ಬೇಬಿ’ ಅದರಲ್ಲಿ ಗಮನಸೆಳೆಯಿತು. ಅಂತೆಯೇ ಸಲ್ಮಾನ್ ಖಾನ್ ನಾಯಕನಾಗಿ ನಟಿಸಿದ ‘ಏಕ್ ಥಾ ಟೈಗರ್’, ತಾಪ್ಸಿ ನಾಯಕಿಯಾಗಿ ನಟಿಸಿದ ‘ನಾಮ್ ಶಬಾನಾ’ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲೂ ಗೆದ್ದಿತು. ಇದೀಗ ಬಂದಿರುವ ಮೇಘನಾ ಗುಲ್ಝಾರ್ ನಿರ್ದೇಶಿಸಿದ ‘ರಾಝಿ’ ಅದರ ಮುಂದುವರಿದ ಭಾಗದಂತಿದೆ. 1971ರಲ್ಲಿ ಪಾಕಿಸ್ತಾನ-ಬಾಂಗ್ಲಾ ನಡುವಿನ ಯುದ್ಧದಲ್ಲಿ ಭಾರತ ಸೇನೆ ಬಾಂಗ್ಲಾದ ಜೊತೆಗೂಡಿತು. ಬಾಂಗ್ಲಾ ಸ್ವಾತಂತ್ರಕ್ಕೆ ಪೂರ್ಣ ಬೆಂಬಲವನ್ನು ನೀಡಿತು ಮತ್ತು ಬಾಂಗ್ಲಾವನ್ನು ಭಾರತದಿಂದ ಬೇರ್ಪಡಿಸುವಲ್ಲಿ ಸಂಪೂರ್ಣ ಯಶಸ್ಸನ್ನು ಪಡೆಯಿತು. ಈ ಯಶಸ್ಸನ್ನು ಹಿನ್ನೆಲೆಯಾಗಿಟ್ಟುಕೊಂಡು ‘ರಾಝಿ’ ಚಿತ್ರವನ್ನು ಮಾಡಲಾಗಿದೆ. ವಿಶೇಷವೆಂದರೆ, ಇದು ಯುದ್ಧದ ಕತೆಯಲ್ಲ. ಒಂದು ಯುದ್ಧದ ಗೆಲುವಿಗಾಗಿ ರಣರಂಗದಲ್ಲಿ ಯೋಧರಷ್ಟೇ ಹೋರಾಡುವುದಲ್ಲ. ಅವರ ಜೊತೆಗೆ ತೆರೆಮರೆಯಲ್ಲಿ ನೂರಾರು ಅಮಾಯಕರು ಕೈ ಜೋಡಿಸುತ್ತಾರೆ. ಪಾಕ್ ಜೊತೆಗಿನ ಯುದ್ಧದ ತಿರುವನ್ನು ಬದಲಾಯಿಸಲು ಕಾರಣಳಾದ ಸೆಹ್‌ಮತ್(ಆಲಿಯಾ ಭಟ್) ಎನ್ನುವ ಗೂಢಚಾರಿಣಿಯ ಕತೆಯನ್ನು ವಸ್ತುವಾಗಿಟ್ಟುಕೊಂಡ ಚಿತ್ರ ‘ರಾಝಿ’. ಎಲ್ಲರಿಗೂ ಅವರವರ ತಾಯ್ನೆಲ ಶ್ರೇಷ್ಠ. ಭಾರತೀಯರಿಗೆ ತಮ್ಮ ನೆವಾದರೆ, ಪಾಕಿಸ್ತಾನಿಯರಿಗೆ ಅವರ ನೆಲ. ಆದರೆ ಮನುಷ್ಯ ಸಂಬಂಧವೆನ್ನುವುದು ಈ ಎಲ್ಲ ಗಡಿಗಳನ್ನು ಮೀರಿರುವಂತಹದು. ಪಾಕಿಸ್ತಾನಕ್ಕೆ ಸೊಸೆಯಾಗಿ ಹೋಗುವ ತರುಣಿಯ ಎದೆಯಲ್ಲಿ ಭಾರತೀಯತೆಯಿರುತ್ತದೆ. ಪ್ರೀತಿಸುವ ಪತಿ, ಮಾವ ಎಲ್ಲ ಸಂಬಂಧಗಳನ್ನೂ ತನ್ನ ಹೊಣೆಗಾರಿಕೆಗಳಿಗಾಗಿ ದುರುಪಯೋಗ ಪಡಿಸುವ ಸೆಹ್‌ಮತ್ ಮತ್ತು ಅವನ ಮಾನಸಿಕ ಸಂಘರ್ಷಗಳನ್ನು ತೋರಿಸುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡಲಾಗಿದೆ. ಶ್ರೀನಗರದ ಹಿದಾಯತ್ ಖಾನ್ (ರಜಿತ್ ಕಪೂರ್) ಭಾರತದ ಪರವಾಗಿ ಪಾಕಿಸ್ತಾನದಲ್ಲಿ ಗೂಢಚಾರನಾಗಿ ಕೆಲಸ ಮಾಡುತ್ತಿರುವವನು. ಕ್ಯಾನ್ಸರ್ ರೋಗಕ್ಕೆ ತುತ್ತಾಗುವ ಈತ, ತನ್ನ ಹೊಣೆಗಾರಿಕೆಯನ್ನು ತನ್ನ ಮಗಳು ಸೆಹ್‌ಮತ್‌ಗೆ ಹೊರಿಸುತ್ತಾನೆ. ಆಕೆಯನ್ನು ಪಾಕಿಸ್ತಾನದ ಹಿರಿಯ ಸೇನಾಧಿಕಾರಿಯ ಪುತ್ರ ಇಕ್ಬಾಲ್ ಸೈಯದ್(ವಿಕಿ ಕೌಶಲ್)ಗೆ ಮದುವೆ ಮಾಡಿಕೊಡುತ್ತಾನೆ. ಸೇನಾಧಿಕಾರಿಯ ಮನೆಗೆ ಸೊಸೆಯಾಗಿ ಹೋಗುವ ಆಕೆ, ನಿಧಾನಕ್ಕೆ ಗುಪ್ತ ಮಾಹಿತಿಗಳನ್ನು ಭಾರತಕ್ಕೆ ರವಾನಿಸತೊಡಗುತ್ತಾಳೆ. ಇಕ್ಬಾಲ್‌ನ ಪ್ರೀತಿಯ ಸೆಲೆಗೆ ಸಿಕ್ಕಿದರೂ, ದೇಶಕ್ಕಾಗಿ ಸಂಬಂಧವನ್ನು ಬಲಿಕೊಡುತ್ತಾ, ಅದರ ಪಾಪಪ್ರಜ್ಞೆಯಲ್ಲಿ ನರಳುತ್ತಾಳೆ. ಸಣ್ಣ ಪುಟ್ಟ ಅಪಾಯದಿಂದ ಕೂದಲೆಳೆಯ ಅಂತರದಲ್ಲಿ ಪಾರಾಗುತ್ತಾಳೆ. ಅನಿವಾರ್ಯವಾಗಿ ಆಕೆ ಕುಟುಂಬದ ಸದಸ್ಯರಿಬ್ಬರನ್ನು ಕೊಂದು ಹಾಕುವಂತಹ ಸ್ಥಿತಿಯೂ ನಿರ್ಮಾಣವಾಗುತ್ತದೆ. ಅಂತಿಮವಾಗಿ, ಇವೆಲ್ಲ ಬಲಿ ಯಾರಿಗಾಗಿ? ಎನ್ನುವ ಪ್ರಶ್ನೆಯೊಂದಿಗೆ ಚಿತ್ರ ಮುಕ್ತಾಯವಾಗುತ್ತದೆ. ಮನುಷ್ಯ ಸಂಬಂಧ ಮತ್ತು ತಾನು ಹುಟ್ಟಿದ ನೆಲ ಇವರೆಡರ ನಡುವಿನ ತಿಕ್ಕಾಟ ಕಥೆಯ ಕೇಂದ್ರವಾಗಿದೆ.

  ವಿಭಿನ್ನ ಕತೆಯೇನೋ ಸರಿ. ಕಥಾನಾಯಕಿಯ ಮಾನಸಿಕ ತೊಳಲಾಟವನ್ನು ಅಷ್ಟೇ ಪರಿಣಾಮಕಾರಿಯಾಗಿ ಕಟ್ಟಿ ಕೊಡಲು ಚಿತ್ರಕತೆಗೆ ಸಾಧ್ಯವಾಗಿಲ್ಲ. ಮುಖ್ಯವಾಗಿ ಆ ಪಾತ್ರಕ್ಕೆ ಆಲಿಯಾ ಭಟ್ ಆಯ್ಕೆಯೇ ತಪ್ಪಾಯಿತೇನೋ ಅನ್ನಿಸುತ್ತದೆ. ಏಕಕಾಲದಲ್ಲಿ ಒಬ್ಬ ಗೃಹಿಣಿ ಮತ್ತು ಗೂಢಚಾರಳಾಗಿ ನಿಭಾಯಿಸಬಹುದಾದ ಕಲಾತ್ಮಕ ಪಾತ್ರವೊಂದನ್ನು ನಿರ್ವಹಿಸಲು ಆಲಿಯಾ ಇನ್ನೂ ಪ್ರಬುದ್ಧಳಾಗಿಲ್ಲ. ಕಾಲೇಜು ವಿದ್ಯಾರ್ಥಿನಿ ಏಕಾಏಕಿ ಗೂಢಚಾರಳಾಗಿ ಹೋಗಲು ಒಪ್ಪುವುದು, ಅದಕ್ಕಾಗಿ ನಡೆಯುವ ತರಬೇತಿ ಇವೆಲ್ಲವೂ ವಾಸ್ತವವಾಗಿ ಹೆಚ್ಚು ತಟ್ಟುವುದಿಲ್ಲ. ದೃಶ್ಯಗಳು ಕೃತಕವಾಗಿವೆ ಅನಿಸುತ್ತದೆ. ಚಿತ್ರ ಹೇಗೆ ಸಾಗಬಹುದು ಎನ್ನುವುದನ್ನು ನಾವು ಮೊದಲೇ ಊಹಿಸಬಹುದು. ಆದುದರಿಂದಲೇ ನಿರೂಪಣೆ ನಮ್ಮನ್ನು ಹಿಡಿದಿಡುವುದಿಲ್ಲ. ಸೆಹ್‌ಮತ್‌ನ ಪತಿಯಾಗಿ ವಿಕಿ ಕೌಶಲ್ ತನ್ನ ಪಾತ್ರವನ್ನು ಪರಿಣಾಮಕಾರಿಯಾಗಿ ನಿಭಾಯಿಸಿದ್ದಾರೆ. ಒಬ್ಬ ಸೇನಾಧಿಕಾರಿಯ ಗಾಂಭೀರ್ಯವನ್ನು ಕೊನೆಯವರೆಗೂ ಉಳಿಸಿಕೊಳ್ಳುತ್ತಾರೆ. ಜೊತೆಗೆ ಒರಟು ಮುಖಭಾವದೊಳಗಿರುವ ಪ್ರೇಮಮಯ ಮನಸ್ಸನ್ನು ಅಭಿವ್ಯಕ್ತಿಸುವಲ್ಲೂ ಯಶಸ್ವಿಯಾಗಿದ್ದಾರೆ. ಚಿತ್ರದಲ್ಲಿ ಬಹುಮುಖ್ಯ ಪಾತ್ರ ಇದಲ್ಲದಿದ್ದರೂ, ಚಿತ್ರ ಮುಗಿದ ಬಳಿಕವೂ ವಿಕಿ ಕೌಶಲ್ ಮುಖ ನಮ್ಮನ್ನು ಕಾಡುತ್ತದೆ. ಉಳಿದಂತೆ ಹೆಚ್ಚಿನ ಪಾತ್ರಗಳು ಪೋಷಣೆಯಿಲ್ಲದೆ ಸೊರಗಿವೆ. ಚಿತ್ರದ ಕೆಲವು ದೃಶ್ಯಗಳು ನಮ್ಮನ್ನು ಹಿಡಿದಿಡುತ್ತವೆ. ಆದರೆ ಪೂರ್ಣ ಸಿನೆಮಾ ಆಗಿ ‘ರಾಝಿ’ ಪೇಲವವಾಗಿದೆ. ಸಂಗೀತ, ಹಾಡು ಸಿನೆಮಾವನ್ನು ಹಳಿಗೆ ತರಲು ಸಾಕಷ್ಟು ಶ್ರಮಿಸಿದೆ. ಶಂಕರ್ ಎಹ್ಸಾನ್ ಅವರ ಸಂಗೀತ ನಮ್ಮಾಳಗಿನ ದೇಶಭಕ್ತಿಯನ್ನು ಮೃದುವಾಗಿ ತಟ್ಟಿ ಎಚ್ಚರಿಸುತ್ತದೆ. ರಾಷ್ಟ್ರೀಯತೆಯನ್ನು ಮೀರಿದ, ನೆಲದ ಕುರಿತ ಅಧಮ್ಯ ಭಾವವನ್ನು ಸಂಗೀತ ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ಪಾಕಿಸ್ತಾನದ ಅಂದಿನ ಕಾಲಘಟ್ಟವನ್ನು ಕಟ್ಟಿಕೊಡಲು ನಿರ್ದೇಶಕರು ಗರಿಷ್ಠ ಮಟ್ಟದಲ್ಲಿ ಶ್ರಮಿಸಿದ್ದಾರೆ. ನಿರ್ದೇಶಕರು ಮತ್ತು ಚಿತ್ರ-ಕತೆಗಾರರು ಇನ್ನಷ್ಟು ಶ್ರಮಿಸಿದರೆ ರಾಝಿಯನ್ನು ಒಂದು ಅಪರೂಪದ ಕಲಾತ್ಮಕ ಥ್ರಿಲ್ಲರ್ ಚಿತ್ರವಾಗಿ ಪರಿವರ್ತಿಸಬಹುದಿತ್ತೋ ಏನೋ! ಪಾಕ್-ಬಾಂಗ್ಲಾ ಯುದ್ಧ ಸಂದರ್ಭವನ್ನು ಇನ್ನಷ್ಟು ವಿಸ್ತೃತ ರೂಪದಲ್ಲಿ ಅರ್ಥೈಸಲು ಈ ಚಿತ್ರ ಸಹಾಯ ಮಾಡುತ್ತದೆ ಎನ್ನುವ ಕಾರಣಕ್ಕಾಗಿ ಒಮ್ಮೆ ನೋಡುವುದಕ್ಕೆ ಅಡ್ಡಿಯಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)