80,000 ನಕಲಿ ಶಿಕ್ಷಕರು ಮುಂದಿನ ಕ್ರಮ ಏನು?
2017-18ರ ಅಖಿಲ ಭಾರತ ಉನ್ನತ ಶಿಕ್ಷಣದ ಸಮೀಕ್ಷೆ (ಎಐಎಸ್‌ಎಚ್‌ಇ)ಯ ವರದಿಯ ಬಿಡುಗಡೆಯ ವೇಳೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್, ಆಧಾರ್ ಮೂಲಕ 80,000 ನಕಲಿ ಶಿಕ್ಷಕರನ್ನು ಪತ್ತೆಹಚ್ಚಲಾಗಿದೆ ಎಂದು ಹೇಳಿಕೆ ನೀಡಿದ್ದರು. ಆದರೆ ಈ ವಿಷಯದಲ್ಲಿ ಅಪರಾಧಿಗಳನ್ನು ಪತ್ತೆಹಚ್ಚುವ ಅಥವಾ ಅವರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಸರಕಾರವು ಯಾವುದೇ ಆಸಕ್ತಿ ತೋರುತ್ತಿಲ್ಲ ಎಂದು ಮಾಹಿತಿ ಹ್ಕು ಕಾರ್ಯಕರ್ತರು ಆರೋಪಿಸಿದ್ದಾರೆ.
ಜನವರಿ ಐದರಂದು ಎಐಎಸ್‌ಎಚ್‌ಇಯ ವರದಿಯನ್ನು ಬಿಡುಗಡೆ ಮಾಡುವ ಸಂದರ್ಭದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಜಾವಡೇಕರ್, ಈ ಕಾರ್ಯಾಚರಣೆಯನ್ನು ನಕಲಿ ಶಿಕ್ಷಕರನ್ನು ಪತ್ತೆಹಚ್ಚುವ ಉದ್ದೇಶದಿಂದ ನಡೆಸಲಾಗಿದೆ. ಕೆಲವು ಶಿಕ್ಷಕರು ಎರಡು ಕಾಲೇಜುಗಳಲ್ಲಿ ನೋಂದಣಿ ಮಾಡಿಕೊಳ್ಳಲು ನಕಲಿ ದಾಖಲೆಗಳನ್ನು ಬಳಸಿದ್ದರೆ ಇನ್ನು ಕೆಲವು ಶಿಕ್ಷಕರು 3-4 ಕಾಲೇಜುಗಳಲ್ಲಿ ನೋಂದಾಯಿಸಿಕೊಳ್ಳುವ ಮೂಲಕ ಬಹಳ ಸಕ್ರಿಯರಾಗಿದ್ದಾರೆ ಎಂದು ತಿಳಿಸಿದ್ದರು. ಮುಂದಿನ ವರ್ಷದಿಂದ ಸರಕಾರವು ಎಲ್ಲ ಅಂಕಿಅಂಶಗಳನ್ನು ಸರಿಯಾಗಿ ಪರಿಶೀಲಿಸಲಿದ್ದು ಯಾವುದೇ ಸುಳ್ಳು ಮಾಹಿತಿಯನ್ನು ನೀಡದಂತೆ ತಡೆಯಲಾಗುವುದು ಎಂದು ಅವರು ತಿಳಿಸಿದ್ದರು.
ಈ ಸಮಸ್ಯೆಯನ್ನು ಸಮೂಹ ಅಭಿವೃದ್ಧಿಯ ಜೊತೆ ಥಳಕು ಹಾಕಿದ ಸಚಿವರು, ಉನ್ನತ ಶಿಕ್ಷಣಕ್ಕೆ ಬಳಸುವ ಹಣವು ತೆರಿಗೆ ಪಾವತಿದಾರರ ಮತ್ತು ಬಡವರ ಹಣವಾಗಿದೆ. ಬಡವರ ಮಕ್ಕಳೂ ಲಾಭ ಪಡೆಯುವ ಸಲುವಾಗಿ ನಾವು ಕ್ರಮಗಳನ್ನು ಜರುಗಿಸಬೇಕಾಗಿದೆ ಎಂದು ತಿಳಿಸಿದ್ದರು.
ಆದರೆ ಸಚಿವರ ಆಕ್ರೋಶ ಭರಿತ ಭಾಷಣದ ಹೊರತಾಗಿ ಮತ್ತೇನೂ ನಡೆದಿಲ್ಲ. ಈಗ ಈ ವಿಷಯ ತಣ್ಣಗಾಗಿದೆ ಎಂದು ಆರ್‌ಟಿಐ ಕಾರ್ಯಕರ್ತರು ಆರೋಪಿಸಿದ್ದಾರೆ. ತನಿಖೆಯ ಬಗ್ಗೆ ಅಥವಾ ಶಿಸ್ತುಕ್ರಮದ ಬಗ್ಗೆ ಯಾವುದೆೀ ಮಾಹಿತಿಯಿಲ್ಲ ಎಂದವರು ತಿಳಿಸಿದ್ದಾರೆ.
2018ರ ಜನವರಿ 10ರಂದು ಸತರ್ಕ್ ನಾಗರಿಕ್ ಸಂಘಟನೆಯ ಸದಸ್ಯರಾದ ಅಂಜಲಿ ಬಾರಧ್ವ್ವಾಜ್ ಮತ್ತು ಅಮೃತ ಜೊಹ್ರಿ ಹಾಕಿದ್ದ ಆರ್‌ಟಿಐ ಅರ್ಜಿಯು ಮಾನವ ಸಂಪನ್ಮೂಲ ಸಚಿವಾಲಯವು ಈ ವಿಷಯದಲ್ಲಿ ಯಾವುದೇ ಆಸಕ್ತಿ ಹೊಂದದಿರುವುದನ್ನು ಬಹಿರಂಗಪಡಿಸಿದೆ.
ಜಾವಡೇಕರ್ ತಮ್ಮ ಭಾಷಣದಲ್ಲಿ 80,000 ನಕಲಿ ಶಿಕ್ಷಕರ ಬಗ್ಗೆ ಪ್ರಸ್ತಾಪ ಮಾಡಿದ್ದು, ತನಗೆ ಈ ವಿಷಯದಲ್ಲಿ ನಡೆದಿರುವ ತನಿಖೆ ಮತ್ತು ವಂಚನೆಯಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ತೆಗೆದುಕೊಳ್ಳಲಾಗಿರುವ ಶಿಸ್ತುಕ್ರಮದ ವಿವರವನ್ನು ನೀಡುವಂತೆ ಜೊಹ್ರಿ ತಮ್ಮ ಅರ್ಜಿಯಲ್ಲಿ ಮನವಿ ಮಾಡಿದ್ದರು. ಅವರ ಈ ಅರ್ಜಿಗೆ ಮಾನವ ಸಂಪನ್ಮೂಲ ಸಚಿವಾಲಯದಲ್ಲಿ ಸಹಾಯಕ ನಿರ್ದೇಶಕ ಅಥವಾ ಸಿಪಿಐಒ ಆಗಿರುವ ವ್ಯಕ್ತಿ ನೀಡಿರುವ ಉತ್ತರವೆಂದರೆ, ‘‘ನೀವು ಮಾಹಿತಿ ಹಕ್ಕಿನಡಿ ಕೇಳಿರುವ ಮಾಹಿತಿ ಲಭ್ಯವಾಗಿಲ್ಲ!’’. ಅಂದರೆ, 80,000 ನಕಲಿ ಶಿಕ್ಷಕರನ್ನು ಪತ್ತೆಹಚ್ಚಿರುವುದು ತಮ್ಮ ಸಚಿವಾಲಯದ ಸಾಧನೆಯೆಂದು ಬೀಗುತ್ತಿರುವ ಸಚಿವರ ಹೇಳಿಕೆಯನ್ನು ಬೆಂಬಲಿಸುವ ಅಂಕಿಅಂಶಗಳು ಲಭ್ಯವಾಗಿಲ್ಲ ಅಥವಾ ಅಪರಾಧಿಗಳ ವಿರುದ್ಧ ಸೂಕ್ತ ತನಿಖೆ ನಡೆಸಿ ಅವರನ್ನು ಶಿಕ್ಷೆಗೊಳಪಡಿಸುವ ಬಗೆ್ಗ ಸಚಿವಾಲಯ ಆಸಕ್ತಿಯನ್ನು ಹೊಂದಿಲ್ಲ.
ತಮ್ಮ ಅರ್ಜಿಯಲ್ಲಿ ಬಾರಧ್ವ್ವಾಜ್, ರಾಜ್ಯವಾರು ನಕಲಿ ಶಿಕ್ಷಕರ ಸಂಖ್ಯೆ, ರಾಜ್ಯವಾರು ಪತ್ತೆಹಚ್ಚಲಾಗಿರುವ ನಕಲಿ ಶಿಕ್ಷಕರ ವಿವರ ಮುಖ್ಯವಾಗಿ ಅವರ ಹೆಸರು, ಉದ್ಯೋಗದಲ್ಲಿದ್ದ ಶಾಲೆಗಳು/ವಿಶ್ವವಿದ್ಯಾನಿಲಯಗಳ ಸಂಖ್ಯೆ, ಈ ಶಿಕ್ಷಕರು ಉದ್ಯೋಗದಲ್ಲಿದ್ದ ಕಾಲೇಜುಗಳು/ವಿಶ್ವವಿದ್ಯಾನಿಲಯಗಳ ಹೆಸರನ್ನು ಕೇಳಿದ್ದರು.
ಆಕೆಯ ಅರ್ಜಿಗೆ ಫೆಬ್ರವರಿ 12ರಂದು ಉತ್ತರ ನೀಡಿದ ಸಚಿವಾಲಯ, ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ ಇರುವ ಭಾಗಶಃ ಮಾಹಿತಿಯಂತೆ, ಸಚಿವಾಲಯವು ಇದೇ ಮೊದಲ ಬಾರಿಗೆ ಗುರುಜನ್ ಜಾಲತಾಣಕ್ಕಾಗಿ ನಡೆಸಲಾದ ಅಖಿಲ ಭಾರತ ಉನ್ನತ ಶಿಕ್ಷಣ ಕುರಿತ ಸಮೀಕ್ಷೆ 2016-17ರ ಮೂಲಕ ಉನ್ನತ ಶಿಕ್ಷಣದಲ್ಲಿರುವ ಶಿಕ್ಷಕರ ಮಾಹಿತಿಯನ್ನು ಪಡೆದುಕೊಂಡಿದೆ ಎಂದು ತಿಳಿಸಿತ್ತು.
ಗುರುಜನ್ ಜಾಲತಾಣದ ಪ್ರಕಾರ, ಸಮೀಕ್ಷೆಯ ವೇಳೆ 85,708 ನಕಲಿ ಅಥವಾ ಅಮಾನ್ಯ ಆಧಾರ್ ಸಂಖ್ಯೆಗಳನ್ನು ಪತ್ತೆ ಹಚ್ಚಲಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವುದಕ್ಕೂ ಮೊದಲು ಆಧಾರ್ ಪ್ರಾಧಿಕಾರ ಮತ್ತು ಇತರ ಸಂಬಂಧಿತ ಸಂಸ್ಥೆಗಳ ಜೊತೆಯೂ ಪರಿಶೀಲನೆ ನಡೆಸಲಾಗುವುದು ಎಂದು ಸಚಿವಾಲಯ ತಿಳಿಸಿದೆ. ಆದರೆ ಶಿಕ್ಷಕರ ರಾಜ್ಯವಾರು ಮಾಹಿತಿ ಒದಗಿಸುವಂತೆ ಮಾಡಿದ್ದ ಬಾರಧ್ವ್ವಾಜ್ ಮನವಿಗೆ ಪ್ರತಿಕ್ರಿಯಿಸಿದ ಸಚಿವಾಲಯ, ಈ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ ಎಂದು ಉತ್ತರಿಸಿದೆ. ಇಲ್ಲಿ ಎದ್ದಿರುವ ಪ್ರಶ್ನೆಯೆಂದರೆ, 85,708 ನಕಲಿ ಅಥವಾ ಅಮಾನ್ಯ ಆಧಾರ್ ಸಂಖ್ಯೆಗಳನ್ನು ಮತ್ತು ನಕಲಿ ಶಿಕ್ಷಕರನ್ನು ಪತ್ತೆಹಚ್ಚಲಾಗಿದ್ದರೂ ಈ ವಿಷಯದಲಿ್ಲ ತನಿಖೆಯನ್ನು ಯಾಕೆ ನಡೆಸಲಾಗಿಲ್ಲ?
ಆದರೆ ಈ ಆರೋಪವನ್ನು ತಳ್ಳಿಹಾಕಿರುವ ಸಚಿವಾಲಯ, ನಕಲಿ ಶಿಕ್ಷಕರ ವಿರುದ್ಧ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ ಎಂಬ ಆರೋಪ ಸರಿಯಲ್ಲ ಎಂದು ತಿಳಿಸಿದೆ. ಪತ್ತೆಮಾಡಲಾಗಿರುವ ಎಲ್ಲ ನಕಲಿ ಶಿಕ್ಷಕರ ಹೆಸರುಗಳನ್ನು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಮತ್ತು ಯುಜಿಸಿ ಜೊತೆ ಹಂಚಿಕೊಳ್ಳಲಾಗಿದ್ದು ಸಂಬಂಧಪಟ್ಟ ಸಂಸ್ಥೆಗಳ ಜೊತೆ ಈ ವಿಷಯದ ಬಗ್ಗೆ ಚರ್ಚಿಸಿ ಇಂಥ ಪ್ರಮಾದ ನಡೆಯಲು ಕಾರಣವನ್ನು ತಿಳಿಯುವಂತೆ ಸೂಚಿಸಲಾಗಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ಪತ್ತೆಯಾಗಿರುವ ನಕಲಿ ಶಿಕ್ಷಕರ ಸಂಖ್ಯೆ ಹೆಚ್ಚಾಗಿರುವ ಕಾರಣ ನಿಯಂತ್ರಣ ಮಂಡಳಿಗಳು ಈ ಬಗ್ಗೆ ತನಿಖೆ ನಡೆಸಲು ಸಮಯ ತೆಗೆದುಕೊಳ್ಳುತ್ತಿದೆ. ಅದಲ್ಲದೆ, ಈ ಪ್ರಕರಣದಲ್ಲಿ ಆಧಾರ್ ಸಂಖ್ಯೆಯನ್ನು ನೀಡುವಲ್ಲಿ ನಡೆದಿರುವ ತಪ್ಪುಗಳನ್ನು ಸರಿಪಡಿಸಲು ಸಂಸ್ಥೆಗಳಿಗೆ ಸಮಯಾವಕಾಶವನ್ನು ನೀಡಿರುವ ಕಾರಣದಿಂದಲೂ ತನಿಖೆ ವಿಳಂಬವಾಗುತ್ತಿದೆ. ಎಐಎಸ್‌ಎಸ್‌ಇಯ ಜಾಲತಾಣದಲ್ಲಿ ಆಧಾರ್ ಸಂಬಂಧಿ ಲೋಪಗಳನ್ನು ಸರಿಪಡಿಸಲು ಸಂಸ್ಥೆಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಆದರೆ, ಸಚಿವಾಲಯದ ಸ್ಪಷ್ಟನೆಯು ಈ ವಿಷಯದಲ್ಲಿ ಸ್ಪಷ್ಟತೆಯನ್ನು ನೀಡುವುದಿಲ್ಲ ಎಂದು ಮಾಹಿತಿ ಹಕ್ಕುಗಳ ಕಾರ್ಯಕರ್ತೆ ಬಾರಧ್ವ್ವಾಜ್ ತಿಳಿಸಿದ್ದಾರೆ.
ಆಕೆಯ ಪ್ರಕಾರ ಈ ಪ್ರಕರಣದಲ್ಲಿ ಸಚಿವಾಲಯ ಉತ್ತರಿಸದೆ ಇರುವ ಪ್ರಮುಖ ಮೂರು ವಿಷಯಗಳೆಂದರೆ, ‘‘ಸಚಿವರು ಹೇಳಿರುವಂತೆ ಸರಕಾರವು 80,000 ನಕಲಿ ಶಿಕ್ಷಕರನ್ನು ಪತ್ತೆಹಚ್ಚಿರುವುದಾದರೆ ಅಂಥ ಶಿಕ್ಷಕರ ಮತ್ತು ಸಂಸ್ಥೆಗಳ ಹೆಸರನ್ನು ತಿಳಿಸುವಂತೆ ನಾವು ಕೇಳಿದ್ದೆವು. ಅವರು ನಮಗೆ ಈ ಪ್ರಮುಖ ಮಾಹಿತಿಯನ್ನು ಒದಗಿಸಲಿಲ್ಲ. ಇದರ ಬಗ್ಗೆ ನೀಡಲಾದ ಸ್ಪಷ್ಟನೆಯೂ ಕೇವಲ ವೌನ. ಅದರ ಪಟ್ಟಿಯನ್ನು ಅವರು ನೀಡಬೇಕಿತ್ತು.’’
‘‘ಎರಡನೆಯ ವಿಷಯವೆಂದರೆ, ಈ ಶಿಕ್ಷಕರನ್ನು ನಕಲಿ ಎಂದು ಕರೆಯುವ ಬದಲಾಗಿ ಸರಕಾರವು ಆಗಿರುವ ತಪ್ಪನ್ನು ಸರಿಪಡಿಸಲು ಸಂಸ್ಥೆಗಳಿಗೆ ಅವಕಾಶವನ್ನು ನೀಡಿದೆ ಎಂದು ಸ್ಪಷ್ಟನೆಯಲ್ಲಿ ತಿಳಿಸಲಾಗಿದೆ.’’
‘‘ಹಾಗಾದರೆ ಈ ನಕಲಿ ದಾಖಲೆಗಳು ತಪ್ಪುಗಳಾದುದು ಯಾವಾಗ? ಜನರನ್ನು ನಕಲಿ ಎಂದು ಕರೆಯುವುದು ಬೇರೆಯೇ ಮತ್ತು ದಾಖಲಾತಿ ಸಮಯದಲ್ಲಿ ನಮ್ಮ ದತ್ತಾಂಶದಲ್ಲಿ ತಪ್ಪುಗಳು ನಡೆದಿವೆ ಎಂದು ಹೇಳುವುದು ಬೇರೆಯೇ. ಎರಡೂ ಪ್ರತ್ಯೇಕವಾಗಿದೆ. ತಪ್ಪುಗಳು ನಡೆದಿದ್ದಲ್ಲಿ ಸಚಿವರು ಅಲ್ಲಿ ಕೆಲವು ತಪ್ಪುಗಳು ಅಥವಾ ಲೋಪ ನಡೆದಿದೆ ಎಂದು ಹೇಳಬೇಕಿತ್ತೇ ಹೊರತು ನಕಲಿ ಶಿಕ್ಷಕರನ್ನು ಪತ್ತೆಹಚ್ಚಲಾಗಿದೆ ಎಂದು ಹೇಳಬಾರದಿತ್ತು’’ ಎಂದು ಬಾರಧ್ವ್ವಾಜ್ ತಿಳಿಸುತ್ತಾರೆ. ಅಂತಿಮವಾಗಿ, ‘‘ಸಚಿವರು ತಿಳಿಸಿರುವಂತೆ ನಕಲಿ ಶಿಕ್ಷಕರ ಅಷ್ಟು ದೊಡ್ಡ ಮಟ್ಟದ ಸಮಸ್ಯೆಯಿದ್ದರೆ ಇದರ ಬಗ್ಗೆ ತನಿಖೆ ನಡೆಸಲು ಮತ್ತು ಅಪರಾಧಿಗಳನ್ನು ಪತ್ತೆಹಚ್ಚಲು ತನಿಖಾ ತಂಡಗಳಿಗೆ ಜವಾಬ್ದಾರಿ ವಹಿಸಬೇಕಿತ್ತು. ಇದರ ತನಿಖೆಯ ಹೊಣೆಯನ್ನು ನೀವು ಯುಜಿಸಿ ಮತ್ತು ಎಐಸಿಟಿಇಗೆ ಬಿಡುವುದು ಸರಿಯಲ್ಲ. ಸಚಿವಾಲಯದ ಸ್ಪಷ್ಟನೆಯು ಕೇವಲ ನಡೆದಿರುವ ಹಾನಿಯನ್ನು ನಿಯಂತ್ರಿಸುವ ಕವಾಯತು ಅಷ್ಟೇ’’ ಎಂದು ಬಾರಧ್ವ್ವಾಜ್ ತಿಳಿಸುತ್ತಾರೆ.
ಕೃಪೆ: thewire.in