ಮಹಾರ್ ಭೂಮಾಲಕತ್ವ ಮಸೂದೆಯ ಮೇಲಿನ ಕೆಲವು ಆಕ್ಷೇಪಗಳು
ಭಾಗ -2
ನಾವು ಯಾವ ಅಭಿಪ್ರಾಯದಿಂದ ಮಸೂದೆ ಮುಂದಿಟ್ಟೆವೋ ಅದರ ಮುಖ್ಯ ಆಧಾರ ಅಂದರೆ ಮುಂಬೈ ಸರಕಾರದ 1899 ಇಸವಿಯ ನಂ. 3074ರ ಸರಕಾರಿ ಗೊತ್ತುವಳಿ ಇದೇ ಆಗಿತ್ತು. ಈ ಗೊತ್ತುವಳಿಯಲ್ಲಿ ಸ್ಪಷ್ಟವಾಗಿ ಘೋಷಣೆ ಮಾಡಿದ್ದರು. ‘‘ಮಹಾರ್‌ಗೆ ಕೊಡಮಾಡುವ ಕೂಲಿ ರೈತಾಪಿ ಕೆಲಸಕ್ಕೆ ಮಾತ್ರವೇ ಎಂದು ಹೇಳುವ ಆಧಾರ ಯಾವುದೂ ಇಲ್ಲ. ಭೂಮಾಲಕತ್ವದ ಆ್ಯಕ್ಟ್ ಪ್ರಕಾರ 18ರ ಕಲಮಿನಲ್ಲಿ ಯಾವ ಕೆಲಸದ ಸಲುವಾಗಿ ಮಹಾರ್‌ಗೆ ಕೂಲಿ ಕೊಡಬೇಕೋ, ಅದರಲ್ಲಿ ಸರಕಾರಿ ಕೆಲಸವೂ ಸೇರಿರುತ್ತದೆ’’. ಈ ಗೊತ್ತುವಳಿಯನ್ನು ಕೇವಲ ಮಹಾರ್‌ಗಳಷ್ಟೇ ಮಾಡಿಲ್ಲ, ಆದ್ದರಿಂದ ಆ ಮಹಾರ್‌ರಿಗೆ ಯಾಕೆ ಹೆಚ್ಚಿನ ಹಕ್ಕುಗಳು ಕೊಡಬೇಕೆಂದು ಇದನ್ನು ಮಾಡಿಲ್ಲ. ಅದು ಕೇವಲ ವಸ್ತುಸ್ಥಿತಿಯ ನಿದರ್ಶನವೆಂದು ಮಾಡಲಾಗಿದೆ.
ಈ ಗೊತ್ತುವಳಿ ಮುಂಬೈ ಸರಕಾರದ ವತಿಯಿಂದ ಆಗಿದ್ದರಿಂದ ಮುಂಬೈ ಇಲಾಖೆಗಷ್ಟೇ ಅನ್ವಯವಾಗುವ ಹಾಗೆ ವರ್ಹಾಡ್ ಮತ್ತು ಮಧ್ಯ ಪ್ರಾಂತದ ಮಹಾರ್‌ಗಳ ವೇತನದ ಸುಧಾರಣೆ ಮಾಡುವಾಗ ಯಾವ ಸಮಿತಿ 1920 ಇಸವಿಯಲ್ಲಿ ನೇಮಕವಾಯಿತೋ ಈ ಸಮಿತಿಯವರು ಮಹಾರ್‌ರ ಭೂಕಂದಾಯದ ಪರಿಸ್ಥಿತಿ ಎರಡೂ ಪ್ರಾಂತದಲ್ಲೂ ಒಂದೇ ಆಗಿದ್ದರಿಂದ ಆ ಗೊತ್ತುವಳಿಯ ಆಧಾರದ ಮೇಲೆ ವರ್ಹಾಡದ ಸರಕಾರಿ ಕೆಲಸ ಮಾಡುವ ರೈತರ ಸಲುವಾಗಿ ಕೂಲಿ ಕೊಡುವುದು ಅತ್ಯಂತ ಯೋಗ್ಯ ಎಂದು ನಿರ್ಣಯ ನೀಡಿದರು. ಎಲ್ಲಿಯವರೆಗೆ ಈ ಗೊತ್ತುವಳಿ ಜಾರಿ ಇರುತ್ತದೋ, ಅಲ್ಲಿಯ ತನಕ ನಾವು ಯೋಗ್ಯ ರೀತಿಯಲ್ಲಿದ್ದೇವೆ ಮತ್ತು ‘ರಾಷ್ಟ್ರವೀರ’ರು ಕುಂಟುತ್ತಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಈ ಗೊತ್ತುವಳಿಯ ವಸ್ತುಸ್ಥಿತಿಗಾಗಿ ಅನೇಕ ವೇಳೆ ತಕರಾರು ಮಾಡಿದ್ದೂ ಇದೆ. ಆದರೆ ಆ ಸರಕಾರ ಅದಕ್ಕೆ ಎಳ್ಳಷ್ಟೂ ಬೆಲೆ ಕೊಡಲಿಲ್ಲ. 1922 ಇಸವಿಯಲ್ಲಿ ಇದರ ಸಂಬಂಧವಾಗಿ ಯಾವ ಗೊತ್ತುವಳಿ ಕೊನೆಯದಾಗಿ ಪ್ರಸಿದ್ಧಿ ಪಡೆದಿತೋ ಅದೇ 1899ರ ಗೊತ್ತುವಳಿ ಅತ್ಯಂತ ಯೋಗ್ಯವಾಗಿದೆ ಎಂದು ಸರಕಾರದ ಕಡೆಯಿಂದ ಸ್ಪಷ್ಟವಾಗಿ ಹೇಳಲಾಗಿದೆ. ಈ ಸರಕಾರಿ ಗೊತ್ತುವಳಿಯಲ್ಲಿ ಯಾವ ಅಭಿಪ್ರಾಯ ವ್ಯಕ್ತವಾಗಿದೆಯೋ, ಅದನ್ನು ಎಲ್ಲರೂ ಗೌರವಿಸುವುದು ಆವಶ್ಯಕವೆಂದೇ ನಮಗನ್ನಿಸುತ್ತಿದೆ.
ಕಾರಣವೇನೆಂದರೆ ಆ ಅಭಿಪ್ರಾಯವನ್ನು ಅನುಮೋದಿಸದಿದ್ದರೆ ‘ರಾಷ್ಟ್ರವೀರ’ಕಾರರ ಅಭಿಪ್ರಾಯ ಗ್ರಹಿಸಿದರೆ ಎಷ್ಟು ಅನರ್ಥವಾಗುವುದು ಎನ್ನುವುದನ್ನು ಊಹಿಸಲು ಅಸಾಧ್ಯ. ಸರಕಾರಿ ಕೆಲಸಕ್ಕೆ ಜಮೀನು ಮತ್ತು ರೈತರ ಕೆಲಸಕ್ಕೆ ಕೂಲಿ, ಹೀಗೆ ಮಹಾರರ ಭೂಕಂದಾಯ ವ್ಯವಸ್ಥೆ ಇದೆ ಎಂದು ಯಾರು ಆಗ್ರಹಿಸುತ್ತಾರೋ ಅವರಿಗೆ ನಾವು ಹೀಗೆ ಕೇಳುತ್ತೇವೆ. ಸೋಲಾಪುರ ಜಿಲ್ಲೆಯ ಬಾರ್ಶಿ ತಾಲೂಕಿನಲ್ಲಿ, ಸತಾರ ಜಿಲ್ಲೆಯಲ್ಲಿ ಜೋಡಿ ಅಧಿಕಾರದಲ್ಲಿ ಮತ್ತು ಠಾಣ, ಕುಲಾಬಾ ಮತ್ತು ರತ್ನಗಿರಿ ಅಥವಾ ಕೊಂಕಣದಲ್ಲಿನ ಮೂರು ಜಿಲ್ಲೆಗಳಲ್ಲಿಯೂ ಮಹಾರರೂ ಸರಕಾರೀ ಕೆಲಸವನ್ನೇ ಮಾಡುತ್ತಾರೆ. ಆದರೆ ಅವರಿಗೆ ಇನಾಮಿನ ಜಮೀನು ಇಲ್ಲ. ರೈತರು ಕೊಟ್ಟ ಕೂಲಿಯೊಂದನ್ನು ಬಿಟ್ಟು ಅವರಿಗೆ ಯಾವ ಸಂಬಳವೂ ಇಲ್ಲ. ಅಂಥ ಕಡೆ ರೈತಾಪಿ ಕೆಲಸಕ್ಕೆ ಕೂಲಿ ಮತ್ತು ಸರಕಾರಿ ಕೆಲಸಕ್ಕೆ ಜಮೀನು ಎಂದು ರಾಷ್ಟ್ರವೀರಕಾರರು ಹೇಳಿದ ರೀತಿ ಹೊಂದಾಣಿಕೆಯಾಗುವುದು ಸಾಧ್ಯವಿಲ್ಲ. ಅಂಥ ಸ್ಥಳದಲ್ಲಿ ಕೂಲಿ, ರೈತ ಮತ್ತು ಸರಕಾರದ ಈ ಇಬ್ಬರ ಕೆಲಸದ ಸಲುವಾಗಿ ಇದೆ ಎನ್ನುವುದನ್ನು ನಾವು ಒಪ್ಪಬೇಕಾಗಿದೆ. ಇಲ್ಲದಿದ್ದಲ್ಲಿ ಅಂಥ ಸ್ಥಳದಲ್ಲಿ ಸರಕಾರದ ಕೆಲಸದ ಸಲುವಾಗಿ ಮಹಾರ್‌ಗಳಿಗೆ ಯಾವ ಪ್ರತಿಫಲವೂ ಸಿಗುವುದಿಲ್ಲ ಎನ್ನುವ ಹುಚ್ಚು ಅಭಿಪ್ರಾಯವನ್ನು ಹೊಂದಬೇಕಾದೀತು.
ಮೇಲಿನ ವಿವೇಚನೆಯಿಂದ ಸ್ಪಷ್ಟವಾಗುವುದೇನೆಂದರೆ ಕೂಲಿ ರೈತಾಪಿ ಕೆಲಸಕ್ಕೆ ಮಾತ್ರ ಇದೆ ಎನ್ನುವ ತಿಳುವಳಿಕೆ ಬರೀ ಸುಳ್ಳು ಮತ್ತು ಯಾರು ಈ ಸುಳ್ಳನ್ನು ಬಿಟ್ಟುಬಿಡುತ್ತಾರೋ ಅವರಿಗೆ ಮಸೂದೆಯ 6ನೆಯ ಕಲಮಿನ ಯಾವ ಅನ್ಯಾಯವೂ ಕಾಣುವುದಿಲ್ಲ. ‘ರಾಷ್ಟ್ರವೀರ’ಕಾರರು ಸ್ವತಃ ನೋಡಿ ಹೇಳಿದರೂ ಸಹ ಕೂಲಿ ಎಲ್ಲ ರೈತಾಪಿ ಕೆಲಸದ ಸಲುವಾಗಿದೆ ಎಂದು, ಅದು ತೆಗೆದು ಹಾಕುವ ಮಾತಲ್ಲ. ಅವರು ಹೇಳಿದ ಹಾಗೆ ಸ್ವಲ್ಪ ಇದ್ದರೂ ಬೇಸಾಯಗಾರರ ಮಸೂದೆಯನ್ನು ವಿರೋಧಿಸೋಣ ಎಂದು ಯಾರು ಹೇಳಿದ್ದರೋ ಅವರು ಹೇಳುವುದರಲ್ಲಿ ವಾಸ್ತವತೆ ಇದೆ ಎಂದು ನಾವು ಒಪ್ಪುತ್ತೇವೆ. ಆದರೆ ಅವರೇ ಸ್ವತ: ಕೂಲಿ ಪ್ರಮುಖವಾಗಿ ರೈತಾಪಿ ನೌಕರಿಗಾಗಿಯೇ ಇದೆ ಎಂದು ಹೇಳುತ್ತಾರೆ. ಅಂದರೆ ಕೂಲಿಯ ಸ್ವಲ್ಪ ಭಾಗ ಸರಕಾರಿ ನೌಕರಿಯ ಸಲುವಾಗಿ ಇದೆ ಎನ್ನುವುದು ಅವರ ಮಾತಿನ ಮೇಲೆಯೇ ತಿಳಿಯತ್ತದೆ. ನಾವೂ ಸಹ ಕೂಲಿ ಸರಕಾರಿ ಕೆಲಸದ ಪ್ರಯುಕ್ತವೇ ಇದೆಯೆಂದು ಯಾವತ್ತೂ ಹೇಳಿಲ್ಲ. ಅದರ ಸ್ವಲ್ಪ ಭಾಗ ಸರಕಾರಿ ಕೆಲಸದಲ್ಲೂ ಇದೆ ಎನ್ನುವುದೇ ನಮ್ಮ ವಾದ. ನಮ್ಮ ಮತ್ತು ರಾಷ್ಟ್ರವೀರಕಾರರಲ್ಲಿ ಉಳಿದಿರುವ ಭೇದವೆಂದರೆ ವಿವರಗಳ ಭೇದ. ಕೂಲಿಯ ಸ್ವಲ್ಪ ಭಾಗ ಹೆಚ್ಚು ಅಥವಾ ಕಡಿಮೆ ಸರಕಾರಿ ಕೆಲಸದ ಸಲುವಾಗಿಯೂ ಇದೆ ಎನ್ನುವುದಕ್ಕೆ ಇಬ್ಬರ ಒಪ್ಪಿಗೆಯೂ ಇದೆ. ಹೀಗಿರುವಾಗ ಆರನೆಯ ನಿಯಮದಲ್ಲಿ ಬೇಸಾಯಗಾರರ ಮೇಲೆ ಹೊಸ ಭಾರ ಬೀಳುತ್ತದೆ ಎಂದು ಬಣ್ಣ ಹಚ್ಚಿ, ಬೇಸಾಯಗಾರರು ಈ ನಿಯಮದ ವಿರೋಧ ಮಾಡಬೇಕು ಎಂದು ಸಲಹೆಯನ್ನು ರಾಷ್ಟ್ರವೀರಕಾರರು ಕೊಟ್ಟರೆ, ಅದರ ಬಗ್ಗೆ ನಮಗೆ ಸಖೇದಾಶ್ಚರ್ಯವಾಗುತ್ತದೆ!
ಮಹಾರ ಭೂಕಂದಾಯದ ಮಸೂದೆ ಮೇಲಿನ ದೋಷ ತೋರಿಸಲು ‘ರಾಷ್ಟ್ರವೀರ’ಕಾರರು ಕೆಲವು ಮಹತ್ವದ ಪ್ರಶ್ನೆಗಳನ್ನು ಜನರ ಮುಂದಿಟ್ಟಿದ್ದಾರೆ. ಅವರ ಹೇಳಿಕೆಯ ಪ್ರಕಾರ, ‘‘ಯಾವ ತತ್ವಾನುರೋಧ ಮಹಾರರ ಕಡೆಗಿದೆಯೆಂದು ಸರಕಾರಿ ಕೆಲಸದ ಸಲುವಾಗಿ ದಂಡವನ್ನು ಸರಕಾರ ಬೇಸಾಯದ ಮೇಲೆ ಹೇರುತ್ತಿದ್ದಾರೆ? ಇವತ್ತು ಬೇಸಾಯಗಾರರು ಏನು ಉತ್ಪನ್ನ ಕೊಡುತ್ತಿದ್ದಾರೋ ಅದರಲ್ಲೇ ಮಹಾರರ ದುಡಿಮೆಯನ್ನು ಯಾಕೆ ಭಾಗ ಮಾಡುತ್ತಿಲ್ಲ? ಮತ್ತು ಮಹಾರರ ಸಂಬಳ ಸ್ವತಂತ್ರವಾಗಿ ಬೇಸಾಯಕ್ಕೆ ಕೊಡಬೇಕೆಂದು ಒಪ್ಪಿಕೊಂಡರೆ, ಪಾಟೀಲ, ಕುಲಕರ್ಣಿ, ಸನದು ಪೊಲೀಸು ಮುಂತಾದ ಹಳ್ಳಿ ಕೆಲಸಗಾರರೆಲ್ಲರ ಸಂಬಳದ ಪ್ರತ್ಯೇಕತೆ ರೈತರ ಮೇಲೆ ಹೇರಲು ಯಾವ ಅಡ್ಡಿ?’’ ಈ ಒಂದು ಪ್ರಶ್ನೆ ರಾಷ್ಟ್ರವೀರಕಾರರು ಚಿಂತಿಸಿದ್ದಾರೋ, ಅದು ಕೇವಲ ಮಸೂದೆಯ ವಿರುದ್ಧ ಜನರ ಚಿತಾವಣೆಯ ಸಲುವಾಗಿ ಯೋಚಿಸಿದ್ದಾರೆ ಎನ್ನುವುದು ನಿರ್ವಿವಾದ. ಯಾರಿಗಾದರೂ ಈ ಪ್ರಶ್ನೆಗೆ ಯೋಗ್ಯ ಉತ್ತರ ಸಿಕ್ಕಿದರೆ ಅವರಿಗೆ ಈ ಪ್ರಶ್ನೆಯು ವಿಚಿತ್ರವೆನಿಸಬಹುದು.
ಅಷ್ಟೇ! ಯಾರಿಗೆ ಅದರ ಉತ್ತರ ಕೊಡಲು ಬರುವುದಿಲ್ಲವೋ ಅವರ ಮನಸ್ಸು ಈ ಮಸೂದೆಯ ಯಥಾರ್ಥತೆಯ ಕಡೆ ಅನುಮಾನ ಪಡದೆ ಇರಲು ಸಾಧ್ಯವಿಲ್ಲ. ಹಾಗೆ ಸಂಶಯ ಬರಬಾರದೆಂದರೆ ‘ರಾಷ್ಟ್ರವೀರ’ರ ಪ್ರಶ್ನೆಗಳ ಉತ್ತರ ಕೊಡುವ ತನಕ ನಮಗೂ ಗತ್ಯಂತರವಿಲ್ಲ. ಸರಕಾರಿ ನೌಕರರ ಬಂಜರು ಜಮೀನಿನಲ್ಲಿ ತತ್ವಶಃ ಈ ವಿಷಯ ಎಷ್ಟು ಸರಿ ಅಥವಾ ತಪ್ಪು ಇದರ ಬಗ್ಗೆ ‘ರಾಷ್ಟ್ರವೀರ’ಕಾರರ ಅಭಿಪ್ರಾಯವೇನು, ಯಾರು ಬಲ್ಲರು? ಆದರೆ ಯಾವ ದೇಶದಲ್ಲಿ ಬೇಸಾಯಗಾರ ವರ್ಗವನ್ನು ಬಿಟ್ಟು ಬೇರೆ ಹೇಳುವಂತಹ ಉತ್ಪಾದಕ ವರ್ಗ ಇಲ್ಲವೋ ಆ ದೇಶದಲ್ಲಿ ನೌಕರರ ಬಂಜರುಭೂಮಿಯಲ್ಲಿ ಬೀಳಬಾರದೆಂದರೆ, ಯಾವುದರ ಮೇಲೆ ಬೀಳಬೇಕು ಎನ್ನುವುದನ್ನು ‘ರಾಷ್ಟ್ರವೀರ’ಕಾರರು ಹೇಳಿದರೆ ತುಂಬ ಒಳ್ಳೆಯದು. ಬಡವರಾದ ಬೇಸಾಯಗಾರರ ಮೇಲೆ ತೆರಿಗೆಯ ಭಾರ ಬೀಳದಿದ್ದರೆ, ಶ್ರೀಮಂತ ಬೇಸಾಯಗಾರರ ಮೇಲೆ ಬೀಳಬೇಕು ಎನ್ನುವ ತತ್ವಕ್ಕೆ ನಮ್ಮ ಬರೀ ಮಾತಿನ ಮಾನ್ಯತೆ ಇದೆ ಅಷ್ಟೇ ಅಲ್ಲ, ಆ ತತ್ವವನ್ನು ನಾವು ಕಟ್ಟುನಿಟ್ಟಾಗಿ ಬೆಂಬಲಿಸುತ್ತೇವೆ. ಬೇಸಾಯದ ಮೇಲೆ ತೆರಿಗೆ ಭಾರ ಬೀಳುತ್ತದೆ ಎಂದು ಏನೂ ಮಾಡಬೇಡಿ ಎನ್ನುವವರ ಒಂದು ಹೊಸ ಪಕ್ಷ ಅಸ್ತಿತ್ವಕ್ಕೆ ಬಂದಿದೆ ಎಂದರೆ ಅದು ಮೂರ್ಖತನ ಎಂದು ನಮ್ಮ ಅಭಿಪ್ರಾಯ. ಅವರ ಹೇಳಿಕೆಯಲ್ಲಿ ನಮಗೆ ಯಾವ ತತ್ವವೂ ಕಾಣಬರುತ್ತಿಲ್ಲ, ಅಥವಾ ಯಾವ ದೊಡ್ಡ ರಾಜಕಾರಣವೂ ಕಾಣುತ್ತಿಲ್ಲ! ಕಾರಣವೆಂದರೆ ಬೇಸಾಯಗಾರರ ಮೇಲೆ ತೆರಿಗೆ ಹಾಕದಿದ್ದರೆ ಅವರ ಸುಧಾರಣೆ ಮಾಡುವ ಮಾತಿನ ವಿದ್ಯೆ ನಮಗೆ ಗೊತ್ತಿಲ್ಲ. ಬೇಸಾಯಗಾರರಿಗೆ ಸ್ವಲ್ಪ ವ್ಯವಸ್ಥಿತವಾದ ರಾಜಕೀಯ ಬೇಕು ಎಂದರೆ ಅವರು ಅದರ ಖರ್ಚನ್ನು ತಾವೇ ವಹಿಸಿಕೊಳ್ಳಬೇಕು. ಮತ್ತು ಒಳ್ಳೆ ವ್ಯವಸ್ಥಿತವಾದ ರಾಜಕೀಯ ನಡೆಸಲು ಮಹಾರರ ಆವಶ್ಯತೆ ಇದ್ದಲ್ಲಿ ಅವರ ಖರ್ಚನ್ನು ಅವರೇ ಭರಿಸಬೇಕು.
ಪಾಟೀಲ, ಕುಲಕರ್ಣಿ ಇವರ ಸಂಬಳವನ್ನೂ ಬೇಸಾಯಗಾರರೇ ಕೊಡಬೇಕು ಮತ್ತು ಮಹಾರರ ಅಷ್ಟು ಸಂಬಳ ಪ್ರತ್ಯೇಕವಾಗಿ ಬೇಸಾಯದ ಮೇಲೆಯೇ ಹಾಕುವುದು ಸಾಧ್ಯ ಎನ್ನುವುದು ‘ರಾಷ್ಟ್ರವೀರ’ಕಾರರಿಗೆ ಒಂದು ದೊಡ್ಡ ವಿಚಿತ್ರ ಎನಿಸಿದೆ. 1839 ಇಸವಿಯ ಹಿಂದೆ ಪಾಟೀಲರ ಮತ್ತು ಕುಲಕರ್ಣಿಯ ಸಂಬಳದ ಯಾವ ಪದ್ಧತಿ ಇತ್ತೋ, ಅದನ್ನು ರಾಷ್ಟ್ರವೀರಕಾರರು ಲಕ್ಷಕ್ಕೆ ತಂದರೆ, ಅವರಿಗೆ ಖಂಡಿತಾ ಈ ಪ್ರಶ್ನೆ ಉದ್ಭವಿಸುತ್ತಿರಲಿಲ್ಲ. 1839 ಇಸವಿಯ ಹಿಂದೆ ಪಾಟೀಲ ಮತ್ತು ಕುಲಕರ್ಣಿ ಹಳ್ಳಿಯ ಕೆಲಸಗಾರರ ಸಂಬಳವನ್ನು ಸೇರಿಸುವುದಿದ್ದರೆ, ಮಹಾರರ ಸಲುವಾಗಿ ಕೂಲಿಯ ರೂಪದಲ್ಲಿ ಬೇಸಾಯಗಾರರಿಂದಲೇ ಸಿಗುತ್ತಿತ್ತು. ಈ ವಿಷಯವನ್ನು ಲಕ್ಷಕ್ಕಿಡದಿರುವುದು ಈ ‘ರಾಷ್ಟ್ರವೀರ’ಕಾರರ ಮೊದಲನೆಯ ತಪ್ಪು ಆಗಿದೆ. ಈ ತಪ್ಪು ಘಟಿಸದಿದ್ದರೆ ಮಹಾರರ ಸಂಬಳ ಪ್ರತ್ಯೇಕವಾಗಿ ಕೊಡುವುದು ಅವರಿಗೆ ವಿಚಿತ್ರವೆನಿಸುತ್ತಿರಲಿಲ್ಲ. ಮಧ್ಯವರ್ತಿ ಸರಕಾರದ ಖರ್ಚಿಗಾಗಿ ಭೂಮಿ ಕಂದಾಯ ತೆಗೆದುಕೊಂಡು ಬಾಕಿ ಖರ್ಚನ್ನು ನಿರ್ವಹಿಸಲು ಬೇಸಾಯಗಾರರ ಮೇಲೆ ಬೇರೆ ಬೇರೆ ಪಟ್ಟಿಗಳನ್ನು ರೂಪಿಸಿ ಹೇರುವುದೇ ಈ ದೇಶದ ರಾಜಮಾನ್ಯ ತೆರಿಗೆ ಪದ್ಧತಿಯಾಗಿತ್ತು. ಬ್ರಿಟಿಷ್ ಸರಕಾರ ಬರುವ ತನಕವೂ ಇದು ಚಾಲನೆಯಲ್ಲಿತ್ತು. ಪಾಟೀಲ ಮತ್ತು ಕುಲಕರ್ಣಿ ಇವರುಗಳೇ ಶಾಸನಾಧಿಕಾರಿಗಳಾಗಿ ಪ್ರಭುತ್ವದ ಅಮಲಿನಲ್ಲಿ ಬೇಸಾಯಗಾರರಿಂದ ನ್ಯಾಯಸಮ್ಮತವಾಗಿ ಹೆಚ್ಚಿನ ಕೂಲಿ ಸೆಳೆಯಬಹುದು ಎಂದು ಅನ್ನಿಸಿದಾಗ 1839ನೆಯ ಇಸವಿಯಲ್ಲಿ ಅವರ ಕೂಲಿಯನ್ನು ತೆಗೆದುಕೊಳ್ಳುವ ಹಕ್ಕನ್ನು ನಿಲ್ಲಿಸಿ ಬಿಡಲು ಅವರು ಸರಕಾರಿ ಖಜಾನೆಯಿಂದಲೇ ಸಂಬಳ ನೀಡುವ ಪದ್ಧತಿ ಶುರುವಾಯಿತು.
ಅದೇ ನಿಯಮವನ್ನು ಮಹಾರರು ಶುರು ಮಾಡಿದ್ದರೆ ‘ರಾಷ್ಟ್ರವೀರ’ಕಾರರ ಮಾತಿಗೆ ಆಸ್ಪದವೇ ಇರುತ್ತಿರಲಿಲ್ಲ ಮತ್ತು ಈ ಮಸೂದೆ ತರುವ ಆವಶ್ಯಕತೆಯೇ ಇರುತ್ತಿರಲಿಲ್ಲ. ಆದರೆ ದಯಾಳು ಬ್ರಿಟಿಷ್ ಸರಕಾರಕ್ಕೆ ಅದನ್ನು ಮಾಡಬೇಕೆನಿಸಲಿಲ್ಲ. ಮಹಾರ ನೌಕರನಾದ. ಆಗ ಪಾಟೀಲರಂತೆ ರೈತರಿಂದಲೂ ಹೆಚ್ಚು ಕೂಲಿ ಸಿಗುತ್ತದೆ ಎಂದು ಯಾರಿಗೂ ಅನ್ನಿಸಿರಲಿಲ್ಲ ಅಥವಾ ರೈತ ಮಹಾರರಿಗೆ ಸಕಾಲಕ್ಕೆ ಕೂಲಿ ಕೊಡುತ್ತಿರಲಿಲ್ಲ ಎಂದು ಅವರಿಗೆ ಸರಕಾರದ ಕಡೆಯಿಂದ ಸಂಬಳ ಸಿಗಬೇಕು ಎನ್ನುವ ದಯೆ ಬ್ರಿಟಿಷ್ ಸರಕಾರಕ್ಕೆ ಇರಲಿಲ್ಲ. ಈ ಎರಡೂ ಕಾರಣಗಳಿಂದ ಪಾಟೀಲರ ಕೂಲಿ ಹೇಗೆ ಹೋಯಿತೋ ಹಾಗೆ ಮಹಾರರ ಕೂಲಿ ಹೋಗಲಿಲ್ಲ. ಒಂದೇ ವರ್ಣಪಟಲದ ಬಣ್ಣಹಚ್ಚಿದ ಚಿತ್ರದ ಪೈಕಿ ಅರ್ಧಭಾಗ ಒರೆಸಿ ಹಾಕಿದರೆ, ಮಿಕ್ಕ ಭಾಗ ಹೇಗೆ ವಿಚಿತ್ರವೆನಿಸುವಂತೆ ಅವರ ನ್ಯಾಯದಲ್ಲೇ ಪಾಟೀಲರ ಕೂಲಿ ತಪ್ಪಿ ಹೋದದ್ದರಿಂದ ಮಹಾರರಿಗೆ ಉಳಿದ ಕೂಲಿ ವಿಚಿತ್ರವೆನಿಸುತ್ತದೆ.
ಆದರೆ ಮೂಲದಲ್ಲಿ ನೋಡಿದರೆ ಅದರಲ್ಲಿನ ವಿಚಿತ್ರ ಅಥವಾ ಭೇದ ಯಾವುದೂ ಇಲ್ಲ. ಬೇಸಾಯದಲ್ಲೇ ಪಗಾರ ಸಿಕ್ಕಿದರೆ, ಮಹಾರ್ ಸಲುವಾಗಿ ಬೇಸಾಯದ ಮೇಲೆ ಕೂಲಿಯಂತಹದು ಇಡುವುದು ತಪ್ಪಲ್ಲವೇ? ಹೀಗೆ ಯಾವ ರಾಷ್ಟ್ರವೀರಕಾರರು ಎರಡನೆಯ ಪ್ರಶ್ನೆಯನ್ನು ಎತ್ತಿದ್ದಾರೋ, ಆ ಪ್ರಶ್ನೆಗೆ ಉತ್ತರವೆಂದು ನಾವು ಅವರಿಗೆ ಪ್ರತಿ ಪ್ರಶ್ನೆಯನ್ನು ಹಾಕುತ್ತಿದ್ದೇವೆ. ಪಾಟೀಲರಿಗೆ ಬೇಸಾಯದ ಕಡೆಯಿಂದ ಪಗಾರ ಸಿಗುತ್ತದೆನ್ನುವುದು ನಿಜವೋ ಅಥವಾ ಬರೀ ಭ್ರಮೆಯೋ? ಬೇಸಾಯದಲ್ಲಿ ಯಾವ ಪ್ರಕಾರದ ಹೆಚ್ಚೂ ಇಲ್ಲದೆ ಅಂದರೆ ರೈತರಿಗೆ ಕೂಲಿಯನ್ನು ಮಾಫಿಮಾಡಿ ಪಾಟೀಲರಿಗೆ ಸರಕಾರಿ ಖಜಾನೆಯಿಂದ ಸಂಬಳ ಕೊಡುವ ಜವಾಬ್ದಾರಿಯನ್ನು ಸರಕಾರ ತಮ್ಮ ತಲೆಯ ಮೇಲೆ ತೆಗೆದುಕೊಂಡರೆ, ಆಗ ‘ರಾಷ್ಟ್ರವೀರ’ಕಾರರ ಹೇಳುವಿಕೆ ಹಾಗೇ ಇದ್ದರೆ ಅದು ದೊಡ್ಡ ತಪ್ಪಾಗುತ್ತದೆ. ಬೇಸಾಯಗಾರರ ಮೇಲೆ ಯಾವ ಭೂಕಂದಾಯ ಹಾಕಲ್ಪಟ್ಟಿದೆಯೋ, ಆ ಬೇಸಾಯದ ಮೇಲೆ ಯಾವಯಾವ ಪಟ್ಟಿಯನ್ನು ಸೇರಿಸಿದ್ದಾರೆ ಎನ್ನುವ ವಿಷಯವನ್ನು ರಾಷ್ಟ್ರವೀರಕಾರರು ಸ್ವಲ್ಪ ಯೊಚನೆ ಮಾಡಿದ್ದರೆ, ಅವರ ತಪ್ಪು ಅವರಿಗೆ ಗೊತ್ತಾಗುತ್ತಿದ್ದಿತು. ಯಾವ ಯಾವ ಬಾಬತ್ತಿನಲ್ಲಿ, ಹಿಂದೆ ಬೇರೆ ಬೇರೆ ಘಟಕಗಳ ಪಟ್ಟಿಯನ್ನು ಬೇಸಾಯಗಾರರ ಮೇಲೆ ಹಾಕಿದ್ದರೋ ಅದರಲ್ಲಿ ಆಯಾ ಬಾಬತ್ತಿನ ಬ್ರಿಟಿಷ್ ಸರಕಾರ ರಾಜ್ಯವನ್ನು ನಡೆಸಲು ಆವಶ್ಯಕವೆಂದು ತಿಳಿಸಿದ್ದರೋ ಆಯಾ ಬಾಬತ್ತಿನ ಸಂಬಂಧ ಪಟ್ಟಿಯನ್ನು ಬೇಸಾಯದಲ್ಲಿ ಬ್ರಿಟಿಷ್ ಸರಕಾರ ಸೇರಿಸಿದ್ದಾರೆ.
ಈ ಇಲಾಖೆಯಲ್ಲಿ ಭೂ ಕಂದಾಯದ ಇತಿಹಾಸ ಯಾವುದು ತಿಳಿದಿದೆಯೋ ಅದನ್ನು ಒಪ್ಪಬೇಕು. ಪಾಟೀಲರ ಸಂಬಳದ ಬಗ್ಗೆಯೂ ಇದೇ ಪ್ರಕಾರವಿದೆ. ಪಾಟೀಲರ ಕೂಲಿಯ ಪ್ರಮಾಣದಲ್ಲಿ ಅವರ ಭೂಕಂದಾಯ ಹೆಚ್ಚಿಸದಿದ್ದರೆ ಸರಕಾರವು ಪಾಟೀಲರಿಗೆ ಪಗಾರ ಕೊಡುವ ಜವಾಬ್ದಾರಿಯನ್ನು ಅವರ ತಲೆಯ ಮೇಲೆ ತೆಗೆದುಕೊಂಡಿಲ್ಲ. ಭೇದ ಇಷ್ಟೇ, ಬೇಸಾಯಗಾರರ ಪೈಕಿ ಯಾರಾದರೊಬ್ಬ, ಇಷ್ಟು ಭಾಗ ಪಾಟೀಲನ ಸಂಬಳದ ಸಲುವಾಗಿ ಇದೆಯೆಂದು ಸ್ಪಷ್ಟ ಭಾಷೆಯಲ್ಲಿ ಸರಕಾರ ಹೇಳುವುದಿಲ್ಲ. ಆದ್ದರಿಂದಲೇ ಪಾಟೀಲರಿಗಾಗಿ ಪ್ರತ್ಯೇಕ ಪಟ್ಟಿಯನ್ನು, ಬೇಸಾಯಗಾರರ ಮೇಲೆ ಹಾಕುವುದು ಕಂಡುಬಂದಿಲ್ಲ. ಆದರೆ ಅದರಿಂದ ಪಾಟೀಲರ ಸಂಬಳದ ಭಾರ ಬೇಸಾಯಗಾರರ ಮೇಲೆ ಬೀಳುತ್ತಿಲ್ಲ ಎಂದು ಹೇಳುವುದು ಬರೀ ಸುಳ್ಳು ಮತ್ತು ನಿರಾಧಾರವಾದುದು.
ಈ ಮಸೂದೆಯ ಆರನೆಯ ಕಲಮನ್ನು ವಿರೋಧಮಾಡಬೇಬೇಕು ಎನ್ನುವುದು ‘ರಾಷ್ಟ್ರವೀರ’ಕಾರರ ಮನಸ್ಸಿನ ಇಚ್ಛೆ. ಆದರೆ ಈ ಮಸೂದೆ ಅಸ್ಪಶ್ಯ ವರ್ಗದ ಹಿತದ ದೃಷ್ಟಿಯಿಂದ, ಬ್ರಾಹ್ಮಣೇತರ ಪಕ್ಷದ ಜನ ಸುಳ್ಳು, ವಂಚನೆ ಎಂದು ಅದನ್ನು ವಿರೋಧಿಸಲು ಹಿಂದೆ ಮುಂದೆ ನೋಡುತ್ತಾರೆ ಮತ್ತು ಆದ್ದರಿಂದಲೇ ಬೇಸಾಯವರ್ಗದವರಿಗೆ, ಈ ಕೆಲಸವನ್ನು ಯಾವ ಚಿಂತೆಯೂ ಮಾಡದೆ, ಹೆದರದೆ ವಿರೋಧಿಸಿ ಎಂದು ಆಗ್ರಹಪೂರ್ವಕವಾಗಿ ಸೂಚಿಸುತ್ತಿದ್ದಾರೆ. ಈ ಸವಾಲನ್ನು ಒಡ್ಡುವಾಗ ಬ್ರಾಹ್ಮಣೇತರ ಪಕ್ಷ ದೊಡ್ಡ ನಿಸ್ವಾರ್ಥಿಗಳು ಎಂದು ‘ರಾಷ್ಟ್ರವೀರ’ಕಾರರಿಗೆ ಅನ್ನಿಸುತ್ತಿರಬಹುದು!! ಹಾಗಲ್ಲದೆ ಅವರಿಗೆ ಈ ಸಂದರ್ಭದಲ್ಲಿ ನಿಸ್ವಾರ್ಥ ಬುದ್ಧಿಯನ್ನು ಪಕ್ಕಕ್ಕಿಡುವ ಸಲಹೆಯ ಅವಶ್ಯಕತೆ ‘ರಾಷ್ಟ್ರವೀರ’ಕಾರರ ಸಲಹೆಯಂತೆ, ಬ್ರಾಹ್ಮಣೇತರ ಪಕ್ಷವು ಈ ಮಸೂದೆಯನ್ನು ವಿರೋಧಿಸಿದರೂ ಸಹ ನಾವು ಅಸ್ಪಶ್ಯರೊಂದಿಗೆ ಸಹಕರಿಸಲಿಲ್ಲ ಎಂದು ಅವರನ್ನು ಯಾವತ್ತೂ ದೂಷಿಸುವುದಿಲ್ಲ. ಬ್ರಾಹ್ಮಣೇತರರು ಸನ್ಯಾಸಿಗಳಲ್ಲ ಎನ್ನುವುದು ನಮಗೆ ಗೊತ್ತಿದೆ. ಅದರಿಂದಲೇ ಅಸ್ಪಶ್ಯರ ಹಿತಕ್ಕೆ ಅವರು ತಮ್ಮ ಸ್ವಾರ್ಥದ ಮೇಲೆ ನೀರು ಬಿಡದಿದ್ದರೆ ಮತ್ತೇನು? ಮದ್ರಾಸಿನಲ್ಲಿ ಬ್ರಾಹ್ಮಣೇತರ ಪಕ್ಷಾಧಿಕಾರಕ್ಕೆ ಬರುವ ಮೊದಲು, ಅಲ್ಲಿಯ ಸರಕಾರ ಅಸ್ಪಶ್ಯವರ್ಗದ ಸುಧಾರಣೆ ಮಾಡಲು ಒಂದು ಸ್ವತಂತ್ರ ಖಾತೆಯನ್ನು ತೆಗೆದಿದ್ದರು; ಮತ್ತು ಆ ಖಾತೆಯ ಮುಖಾಂತರ ಅಸ್ಪಶ್ಯರನ್ನು ಸಣ್ಣ ಸಣ್ಣ ತುಕಡಿಗಳಾಗಿ ಮಾಡಿ ಅವರಲ್ಲಿ ಒಂದು ಸ್ವತಂತ್ರ ಬೇಸಾಯಗಾರರ ವರ್ಗ ತಯಾರು ಮಾಡುವ ಕೆಲಸವನ್ನು ಅತ್ಯಂತ ಉತ್ತಮ ರೀತಿಯಲ್ಲಿ ಮಾಡಿದ್ದಾರೆ. ಆದರೆ ಬ್ರಾಹ್ಮಣೇತರ ಪಕ್ಷದ ಕೈಯಲ್ಲಿ ಅಧಿಕಾರ ಬಂದಮೇಲೆ ಈ ಖಾತೆಯ ನಾಶ ಮಾಡಿದರು ಮತ್ತು ಇದನ್ನು ಅವರು ಯಾಕೆ ಮಾಡುವುದಿಲ್ಲ? ದೊಡ್ಡ ದೊಡ್ಡ ಜಮೀನುದಾರರು ಕೂಲಿ ಆಳುಗಳ ಮೇಲೆ ಭಾರ ಹಾಕುತ್ತಾರೆ.
ಆ ಕೂಲಿಯಾಳುಗಳು ಸ್ವಲ್ಪ ಬೇಸಾಯಗಾರರಾದರೆ ಇನಾಮುದಾರರ ಜಮೀನನ್ನು ಯಾರು ಮಾಡುವವರು? ಮದ್ರಾಸಿನಲ್ಲಿ ಬ್ರಾಹ್ಮಣೇತರ ಪಕ್ಷ ದೊಡ್ಡ ದೊಡ್ಡ ಇನಾಮುದಾರರ ಪಕ್ಷವೇ ಆಗಿದೆ. ಯಾವ ಅಸ್ಪಶ್ಯ ಕೂಲಿಗಳ ಮೇಲೆ ಅವರ ಪೂರಾ ವಿಶ್ವಾಸವಿದೆಯೋ, ಅವರೇ ಬೇಸಾಯಗಾರರಾದರೆ ಹೇಗೆ ನಿಭಾಯಿಸುತ್ತಾರೆ? ಯಾವುದು ಮದ್ರಾಸು ಇಲಾಖೆಯಲ್ಲಿ ನಡೆದಿದೆಯೋ ಅದು ಮುಂಬೈ ಇಲಾಖೆಯಲ್ಲೂ ನಡೆಯುವಂತೆ ಇದೆ. ಅವರಿಗೆ ‘ರಾಷ್ಟ್ರವೀರ’ರ ಸಲಹೆ ಬೇಡ. ತಮ್ಮ ಬಾಯಿಯ ತುತ್ತನ್ನು ತೆಗೆದು ಬೇರೆಯವರ ಬಾಯಿಗೆ ಯಾರೂ ಹಾಕುವುದಿಲ್ಲ. ಸ್ವಾರ್ಥದ ಜಗಳದಲ್ಲಿ ಅಣ್ಣತಮ್ಮಂದಿರ ಭಾವನೆಗಳನ್ನು ಗಣಿಸುವುದಿಲ್ಲ. ಹಾಗೆ ಬ್ರಾಹ್ಮಣೇತರರು ಅಸ್ಪಶ್ಯರನ್ನು ಗಣಿಸಬೇಕು ಎಂದು ಯಾವ ನ್ಯಾಯ ಹೇಳುತ್ತದೆ? ಬ್ರಾಹ್ಮಣೇತರರು ಮತ್ತು ಅಸ್ಪಶ್ಯರು ಒಂದೇ ಹೆಸರಿನ ಕೆಳಗಿದ್ದಾರೆ ಎಂದು ಅಸ್ಪಶ್ಯರು ತಮಗೆ ಬೇಕಾದ ಹಾಗೆ ಕೇಳಬಹುದು ಮತ್ತು ಬ್ರಾಹ್ಮಣೇತರರು ಪೂರೈಸುವರು, ಅಥವಾ ಬ್ರಾಹ್ಮಣೇತರರಿಗೆ ಏನು ಬೇಕೋ ಅದನ್ನು ಕೇಳಿದಾಗ ಅಸ್ಪಶ್ಯರು ಒಪ್ಪಿಕೊಳ್ಳಬೇಕು ಎನ್ನುವ ಬಾಲಿಶ ಮೂರ್ಖತನದ ನ್ಯಾಯ ನಮಗೂ ಒಪ್ಪಿಗೆ ಇಲ್ಲ. ಆದ್ದರಿಂದಲೇ ನಾವು ‘ರಾಷ್ಟ್ರವೀರ’ಕಾರರ ಮತ್ತು ಆಯಾ ಪ್ರದೇಶದ ಬ್ರಾಹ್ಮಣೇತರರ ಕಠೋರತೆಯನ್ನು ಒಂದಿಷ್ಟೂ ದೂರುವುದಿಲ್ಲ. ನಮಗೆ ಇಷ್ಟೇ ಹೇಳುವುದಿದೆ, ವಿರೋಧಿಸುವುದಿದ್ದರೆ, ಯಾವ ಕಾರಣಕ್ಕಾಗಿ ನೀವು ವಿರೋಧಿಸಬೇಕೆನ್ನುತ್ತೀರೋ ಅದು ಸರಿಯಾಗೇ ಇದೆ ಎನ್ನುವುದನ್ನು ಖಾತ್ರಿಪಡಿಸಿಕೊಂಡು ಮಾಡಿ. ಅಪಾರ್ಥಮಾಡಿಕೊಂಡು ವಿರೋಧಿಸಬೇಡಿ.
(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)