ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ
ಬಹುಮತ ಸಾಬೀತುಪಡಿಸಲು ಸಾಧ್ಯವಾಗದ ಮುಖ್ಯಮಂತ್ರಿ ಯಡಿಯೂರಪ್ಪನವರು ವಿಶ್ವಾಸಮತ ಯಾಚನೆ ಮಾಡದೆ, ತಾವಾಗಿಯೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಹಿಂದೆ ಸರಿದರು. ಹಾಗಾಗಿ, ಕಾಂಗ್ರೆಸ್-ಜೆಡಿಎಸ್ ಮೈತ್ರಿಯಿಂದಾಗಿ ಕುಮಾರಸ್ವಾಮಿಯವರಿಗೆ ಮುಖ್ಯಮಂತ್ರಿ ಪಟ್ಟ ಅನಿರೀಕ್ಷಿತ ಅದೃಷ್ಟದಂತೆ ಒಲಿದುಬಂದಿದೆ.
ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಎರಡನೆ ಬಾರಿಗೆ ಮುಖ್ಯಮಂತ್ರಿಯಾದವರಲ್ಲಿ ಎಸ್.ನಿಜಲಿಂಗಪ್ಪ, ದೇವರಾಜ ಅರಸು, ವೀರೇಂದ್ರ ಪಾಟೀಲ್, ರಾಮಕೃಷ್ಣ ಹೆಗಡೆ ಪ್ರಮುಖರು. ಈ ಬಾರಿಯ ಚುನಾವಣೆಯಲ್ಲಿ ಎರಡನೆ ಬಾರಿಗೆ ಮುಖ್ಯಮಂತ್ರಿಯಾಗುವವರ ಸಾಲಿಗೆ ಸೇರಲು, ಕಾಂಗ್ರೆಸ್‌ನ ಸಿದ್ದರಾಮಯ್ಯ, ಜೆಡಿಎಸ್‌ನ ಕುಮಾರಸ್ವಾಮಿ ಹಾಗೂ ಬಿಜೆಪಿಯ ಯಡಿಯೂರಪ್ಪ(ಮೂರನೆ ಬಾರಿ) ಮುಂಚೂಣಿಯಲ್ಲಿದ್ದರು.
ಕಾಂಗ್ರೆಸ್ಸಿನ ಸಿದ್ದರಾಮಯ್ಯನವರಿಗೆ ಎರಡನೆ ಸಲ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಲು ಯೋಗ್ಯತೆ ಮತ್ತು ಅರ್ಹತೆ, ಎರಡೂ ಇತ್ತು. ಹೈಕಮಾಂಡ್‌ನ ಗ್ರೀನ್ ಸಿಗ್ನಲ್ ಕೂಡ ಸಿಕ್ಕಿತ್ತು. ಅದೇ ರೀತಿ ಬಿಜೆಪಿಯ ಬಿ.ಎಸ್.ಯಡಿಯೂರಪ್ಪನವರು ಮೂರನೆ ಸಲ ಮುಖ್ಯಮಂತ್ರಿಯಾಗಲು ಮೋದಿ ಅಲೆ ಸಹಕರಿಸಿತ್ತು. ಯಾವ ಅಡೆತಡೆಯೂ ಇಲ್ಲದೆ ಅನುಕೂಲಕರ ವೇದಿಕೆ ಕೂಡ ಸಿದ್ಧವಾಗಿತ್ತು. ಹಾಗೆಯೇ ದೇವೇಗೌಡರೆ ಮುಂದೆ ನಿಂತು, ಕುಮಾರಸ್ವಾಮಿ ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಿದ್ದರು. ಹಾದಿಯೂ ಸುಗಮವಾಗಿತ್ತು. ಆದರೆ ಫಲಿತಾಂಶ ಮೂವರ ಲೆಕ್ಕಾಚಾರಗಳನ್ನು ಪಲ್ಟಿ ಹೊಡೆಸಿತ್ತು. ಯಾರೂ ಮುಖ್ಯಮಂತ್ರಿಯಾಗದ ಅತಂತ್ರ ಸ್ಥಿತಿ ನಿರ್ಮಾಣವಾಗಿತ್ತು. ಇದ್ದಕ್ಕಿದ್ದಂೆ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಯಿತು.
ಬಿಕ್ಕಟ್ಟಿನ ಅನುಕೂಲ ಪಡೆದ ಬಿಜೆಪಿ, ಸರಕಾರ ರಚಿಸಲು ಬೇಕಾದ ಸಂಖ್ಯೆ ಇಲ್ಲದಿದ್ದರೂ, ರಾಜ್ಯಪಾಲರನ್ನು ಬಳಸಿಕೊಂಡು ಯಡಿಯೂರಪ್ಪನವರು ಮೂರನೆ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಆದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಒಂದಾಗಿ, ಸುಪ್ರೀಂ ಕೋರ್ಟ್ ಮೊರೆ ಹೋದಾಗ, ಕೋರ್ಟ್ ಬಹುಮತ ಸಾಬೀತುಪಡಿಸಲು ಮೇ 19ರ 4 ಗಂಟೆಗೆ ನಿಗದಿ ಮಾಡಿತು. ಆದರೆ ಬಹುಮತ ಸಾಬೀತುಪಡಿಸಲು ಸಾಧ್ಯವಾಗದ ಮುಖ್ಯಮಂತ್ರಿ ಯಡಿಯೂರಪ್ಪನವರು ವಿಶ್ವಾಸಮತ ಯಾಚನೆ ಮಾಡದೆ, ತಾವಾಗಿಯೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಹಿಂದೆ ಸರಿದರು. ಹಾಗಾಗಿ, ಕಾಂಗ್ರೆಸ್-ಜೆಡಿಎಸ್ ಮೈತ್ರಿಯಿಂದಾಗಿ ಕುಮಾರಸ್ವಾಮಿಯವರಿಗೆ ಮುಖ್ಯಮಂತ್ರಿ ಪಟ್ಟ ಅನಿರೀಕ್ಷಿತ ಅದೃಷ್ಟದಂತೆ ಒಲಿದು ಬಂದಿದೆ.
ಎಚ್.ಡಿ.ದೇವೇಗೌಡ ಮತ್ತು ಚೆನ್ನಮ್ಮನವರ ಮೂರನೇ ಮಗನಾಗಿ ಡಿಸೆಂಬರ್ 19, 1959ರಂದು ಹೊಳೆನರಸೀಪುರ ತಾಲೂಕಿನ ಹರದನಹಳ್ಳಿಯಲ್ಲಿ ಜನಿಸಿದ ಕುಮಾರಸ್ವಾಮಿ, ಪ್ರಾಥಮಿಕ ಶಿಕ್ಷಣವನ್ನು ಹಳ್ಳಿಯಲ್ಲಿಯೇ ಪಡೆದವರು. ಹೈಸ್ಕೂಲ್ ವಿದ್ಯಾಭ್ಯಾಸಕ್ಕೆ ಬೆಂಗಳೂರಿಗೆ ಬಂದು ಪ್ರತಿಷ್ಠಿತ ಎಂಇಎಸ್, ವಿಜಯಾ, ನ್ಯಾಷನಲ್ ಕಾಲೇಜುಗಳಲ್ಲಿ ಓದಿ ಬಿಎಸ್ಸಿ ಪದವಿ ಪಡೆದವರು. ಕುಮಾರಸ್ವಾಮಿಯವರು ಬೆಳೆದು ನಿಂತ ಕಾಲಕ್ಕೆ ಅಪ್ಪನ ಅನಿಶ್ಚಿತ ರಾಜಕಾರಣ ಆಕರ್ಷಣೀಯ ಕ್ಷೇತ್ರವಾಗಿ ಕಾಣಲಿಲ್ಲ. ಕೆಎಎಸ್ ಅಧಿಕಾರಿಯಾದ ಅಣ್ಣ ಬಾಲಕೃಷ್ಣೇಗೌಡರ ಸರಕಾರಿ ನೌಕರಿಯೂ ಸರಿ ಎನಿಸಲಿಲ್ಲ. ಮತ್ತೊಬ್ಬ ಅಣ್ಣ ರೇವಣ್ಣರ ರಾಜಕೀಯ ಪ್ರವೇಶವೂ ಅವರನ್ನು ಅತ್ತ ಪ್ರೇರೇಪಿಸಲಿಲ್ಲ. ಏಕೆಂದರೆ ಕುಮಾರಸ್ವಾಮಿ ಆಗಲೇ ನಗರವಾಸಿಯಾಗಿದ್ದರು. ಹಸಿವು, ಅವಮಾನ, ಬಡತನವನ್ನು ಮೀರಿದ್ದರು. ಭಿನ್ನ ಆದ್ಯತೆ, ಆಸಕ್ತಿ, ಅಭಿರುಚಿಯನ್ನು ಮೈಗೂಡಿಸಿಕೊಂಡಿದ್ದರು. ಅದಕ್ಕೆ ತಕ್ಕಂತೆ ‘ಚೆನ್ನಾಂಬಿಕಾ ಫಿಲ್ಮ್ಸ್’ ಸಂಸ್ಥೆ ಸ್ಥಾಪಿಸಿ ಐದಾರು ಕನ್ನಡ ಚಿತ್ರಗಳನ್ನು ನಿರ್ಮಿಸಿದ್ದರು. ಹೊಳೆನರಸೀಪುರದಲ್ಲಿ ಚೆನ್ನಾಂಬಿಕಾ ಥಿಯೇಟರ್ ಕಟ್ಟಿ ಸಿನೆಮಾ ಪ್ರದರ್ಶಕ, ವಿತರಕರಾಗಿಯೂ ಹೆಸರು ಮಾಡಿದ್ದರು. ಅದರಲ್ಲಿಯೇ ಮುಂದುವರಿಯುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿದ್ದವು. ಏತನ್ಮಧ್ಯೆ 1986ರಲ್ಲಿ ಡಾಕ್ಟರ್‌ರೋರ್ವರ ಮಗಳಾದ ಅನಿತಾರನ್ನು ಮದುವೆಯಾಗಿ, ನಿಖಿಲ್ ಎಂಬ ಪುತ್ರನಿಗೆ ತಂದೆಯಾಗಿ, ಬದುಕಿನ ಮಾರ್ಗವನ್ನು ಕಂಡುಕೊಂಡಿದ್ದರು.
1994ರಲ್ಲಿ ತಂದೆ ಎಚ್.ಡಿ.ದೇವೇಗೌಡ ಮುಖ್ಯಮಂತ್ರಿಯಾದಾಗಲೂ- ಯಾವಾಗಲೂ ಜನರಿಂದ ತುಂಬಿರುತ್ತಿದ್ದ ಮನೆ, ಪ್ರತಿದಿನ ಸುದ್ದಿಮಾಧ್ಯಮಗಳ ಪ್ರಚಾರ, ಜನಪ್ರಿಯತೆ, ಅಪರಿಮಿತ ಅಧಿಕಾರ, ಆಳು-ಕಾಳು ಕೂಡ ಕುಮಾರಸ್ವಾಮಿಯವರನ್ನು ರಾಜಕಾರಣದತ್ತ ಸೆಳೆದಿರಲಿಲ್ಲ. ಆದರೆ ಅಪ್ಪನ ಅಧಿಕಾರ ಬೆನ್ನಿಗಿದ್ದು, ಗೆಳೆಯರ ಒತ್ತಾಯಕ್ಕೆ ಕಟ್ಟುಬಿದ್ದು ಕುಮಾರಸ್ವಾಮಿ 1996ರಲ್ಲಿ ಕನಕಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದರು. ಗೆದ್ದು ಸಂಸದರಾಗುವ ಮೂಲಕ ರಾಜಕಾರಣಿಯಾದರು. ಆಗಲೂ ಅವರು ‘ಪರಿಸ್ಥಿತಿಯ ಶಿಶು’ ಎಂದಿದ್ದರು. ಈಲೂ ಅದನ್ನೇ ಪುನರುಚ್ಚರಿಸಿದ್ದಾರೆ.
ಸಂಸದರಾಗುತ್ತಿದ್ದಂತೆಯೇ ತಂದೆ ದೇವೇಗೌಡರು ದೇಶದ ಪ್ರಧಾನಮಂತ್ರಿಯಾದರು. ರಾಜಕಾರಣಕ್ಕೆ ಪ್ರವೇಶ ಪಡೆದ ಹೊಸತರಲ್ಲಿಯೇ ದಿಲ್ಲಿ ಮಟ್ಟದಲ್ಲಿ ಓಡಾಡುವ, ಹಿರಿಯ ಅನುಭವಿ ರಾಜಕಾರಣಿಗಳೊಂದಿಗೆ ಬೆರೆಯುವ, ರಾಜಕಾರಣದ ದಿಕ್ಕುದೆಸೆಗಳನ್ನು ಅರಿಯುವ ಸದವಕಾಶ ಕುಮಾರಸ್ವಾಮಿಗೆ ತಾನಾಗಿಯೇ ಒದಗಿ ಬಂದಿತ್ತು. ಆದರೆ ಅದು ತುಂಬಾ ದಿನ ಉಳಿಯಲಿಲ್ಲ. 1998 ರಲ್ಲಿ ಮತ್ತೆ ಚುನಾವಣೆ ಎದುರಾಗಿ, ಮತ್ತದೇ ಕನಕಪುರ ಕ್ಷೇತ್ರದಿಂದ ಸ್ಪರ್ಧಿಸಿ ಸೋತರು. 1999ರಲ್ಲಿ ಸಾತನೂರು ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಡಿ.ಕೆ.ಶಿವಕುಮಾರ್ ಎದುರು ಸ್ಪರ್ಧಿಸಿ ಸೋಲು ಕಂಡರು. ಕೇವಲ ನಾಲ್ಕು ವರ್ಷಗಳ ಅಂತರದಲ್ಲಿ ದಿಲ್ಲಿ ರಾಜಕಾರಣ, ಪ್ರಧಾನಮಂತ್ರಿಗಳ ಪರಮಾಧಿಕಾರ, ಸೋಲು ಎಲ್ಲವನ್ನು ಕಂಡ ಕುಮಾರಸ್ವಾಮಿ ಪಳಗಿದ ಪಕ್ವಗೊಂಡ ರಾಜಕಾರಣಿಯಾಗಿದ್ದರು.
2004ರಲ್ಲಿ ರಾಮನಗರ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ಮೊದಲ ಬಾರಿಗೆ ವಿಧಾನಸೌಧ ಪ್ರವೇಶಿಸಿದ್ದರು. ಆಗ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಅಧಿಕಾರದಲ್ಲಿತ್ತು. ಅಣ್ಣ ರೇವಣ್ಣ ಮಂತ್ರಿಯಾಗಿ, ಅಪ್ಪ ದೇವೇಗೌಡರ ಆಜ್ಞೆ-ಆದೇಶಗಳಿಗನುಗುಣವಾಗಿ ಸರಕಾರ ನಡೆಯುತ್ತಲಿತ್ತು. ಪಕ್ಷದ ಕಾರ್ಯಾಧ್ಯಕ್ಷನ ಜವಾಬ್ದಾರಿಯುತ ಸ್ಥಾನ ಕುಮಾರಸ್ವಾಮಿಯವರ ಪಾಲಿಗಿತ್ತು. ಹೀಗಿರುವಾಗಲೇ 2006 ರಲ್ಲಿ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ, ಜೆಡಿಎಸ್-ಬಿಜೆಪಿ ಒಂದಾಗಿ ಮೈತ್ರಿ ಸರಕಾರ ರಚನೆಯಾಗಿತ್ತು. ಜಾತ್ಯತೀತ ಜನತಾದಳ ಕೋಮುವಾದಿ ಪಕ್ಷವಾದ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದು ದೊಡ್ಡಗೌಡರ ಇಚ್ಛೆಗೆ ವಿರುದ್ಧವಾಗಿತ್ತು. ಕ್ಷಿಪ್ರ ಕಾರ್ಯಾಚರಣೆಯಲ್ಲಿ ಮುಖ್ಯಮಂತ್ರಿಯಾದ ಕುಮಾರಸ್ವಾಮಿ ಆಗಲೂ ‘ಪರಿಸ್ಥಿತಿಯ ಶಿಶು’ ಎಂದು ಹೇಳಿದ್ದರು.
ಫೆಬ್ರವರಿ 3, 2006ರಿಂದ ಅಕ್ಟೋಬರ್ 8, 2007 ರವರೆಗೆ, 610 ದಿನಗಳ ಕಾಲ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ, ಅಧಿಕಾರ ಸಿಕ್ಕ ಅಲ್ಪಅವಧಿಯಲ್ಲಿಯೇ ಹಲವಾರು ಜನಪರ ಕಾರ್ಯಕ್ರಮಗಳನ್ನು, ಯೋಜನೆಗಳನ್ನು ಕೊಟ್ಟು ನಾಡಿನ ಜನತೆಯ ಮನ ಗೆದ್ದಿದ್ದರು. ಸಾರಾಯಿ ನಿಷೇಧ ಲಾಟರಿ ನಿಷೇಧ, ಮಹಿಳಾ ಮೀನುಗಾರರಿಗೆ ಶೇ.4 ರಷ್ಟು ಬಡ್ಡಿದರದಲ್ಲಿ ಸಾಲ, ಕೃಷಿ ಕ್ಷೇತ್ರಕ್ಕೆ 7,000 ಕೋಟಿ ರೂ ಅನುದಾನ, ಯುವಕರಿಗೆ ಕೌಶಲ್ಯ ಅಭಿವೃದ್ಧಿ, ಗ್ರಾಮವಾಸ್ತವ್ಯ, ಸುವರ್ಣ ಗ್ರಾಮೋದಯ ಯೋಜನೆ, ಅಕ್ರಮ ಸರಕಾರಿ ಭೂ ಒತ್ತುವರಿ ತಡೆಗೆ ಸಮಿತಿ ಮತ್ತು ಸೂಕ್ತ ಕ್ರಮ, ಉತ್ತರ ಕರ್ನಾಟಕದಲ್ಲಿ ಸಂಚಾರಿ ಹೈಕೋರ್ಟ್ ಪೀಠ ಸ್ಥಾಪನೆ, ವಿದ್ಯಾರ್ಥಿನಿಯರಿಗೆ ಸೈಕಲ್ ವಿತರಣೆ, ಆಸರೆ-ಅಮೃತ ಯೋಜನೆಗಳನ್ನು ಹೆಸರಿಸಬಹುದು.
ಆದರೆ 20 ತಿಂಗಳ ನಂತರ, ತಂದೆ ದೇವೇಗೌಡರ ಮಾತಿಗೆ ಕಟ್ಟುಬಿದ್ದು ಬಿಜೆಪಿಯೊಂದಿಗಿನ ಮೈತ್ರಿ ಮುರಿದುಕೊಂಡರು. ಜಾತ್ಯತೀತ ನಿಲುವನ್ನು ಬಯಸುವವರ ಪಾಲಿಗೆ ಅದು ಸರಿಯಾದ ಕ್ರಮವಾಗಿ ಕಂಡರೂ, ಮಾತು ಮುರಿದ ಕ್ರಮವೇ ಬಲಪಂಥೀಯ ಪಕ್ಷ ಬಿಜೆಪಿ ಅಧಿಕಾರಕ್ಕೇರಲು ಕಾರಣವಾಯಿತು ಎಂಬುದು ರಾಜಕೀಯ ಪಂಡಿತರ ವಿಶ್ಲೇಷಣೆ. ಅದೇನೆ ಇರಲಿ, ಜೆಡಿಎಸ್ ಪಕ್ಷ ಜನರ ಅವಕೃಪೆಗೊಳಗಾಗಿ ಸುಮಾರು ಹತ್ತು ವರ್ಷಗಳ ಕಾಲ ಅಧಿಕಾರದಿಂದ ದೂರವುಳಿಯಬೇಕಾದ ಶಿಕ್ಷೆಗೆ ಗುರಿಯಾಯಿತು.
ಈ ಮಧ್ಯೆ 2008ರ ವಿಧಾನಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ರಾಮನಗರ ವಿಧಾನಸಭಾ ಕ್ಷೇತ್ರದಿಂದ ಗೆದ್ದು ಬಂದರು. 2013ರಲ್ಲಿ ಇಲ್ಲಿಂದ ಮರು ಆಯ್ಕೆಯಾದರು. 2014ರಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಕಾಂಗ್ರೆಸ್‌ನ ಎಂ.ವೀರಪ್ಪ ಮೊಯ್ಲಿ ವಿರುದ್ಧ ಸೋತರು. ಈಗ 2018ರಲ್ಲಿ ರಾಮನಗರ ಮತ್ತು ಚನ್ನಪಟ್ಟಣ- ಎರಡೂ ಕ್ಷೇತ್ರಗಳಿಂದ ಸ್ಪರ್ಧಿಸಿ, ‘‘ಬಿಜೆಪಿ ಮತ್ತು ಕಾಂಗ್ರೆಸ್ ಎಂಬ ಎರಡು ಪಕ್ಷಗಳಿಗೂ ಅವಕಾಶ ಕೊಟ್ಟು ನೋಡಿದ್ದಿೀರಿ, ನಮಗೂ ಒಂದು ಅವಕಾಶ ಕೊಡಿ’’ ಎಂದು ರಾಜ್ಯಾದ್ಯಂತ ಸುತ್ತಾಡಿ ಜನತೆಯಲ್ಲಿ ಮನವಿ ಮಾಡಿಕೊಂಡರು. ದೇವೇಗೌಡರು ವಯಸ್ಸನ್ನೂ ಮರೆತು ಓಡಾಡಿದರು. ಇಷ್ಟಾದರೂ ಕುಮಾರಸ್ವಾಮಿ ಎರಡೂ ಕಡೆ ಗೆದ್ದರೆ, ಜೆಡಿಎಸ್ ಗೆದ್ದದ್ದು 38 ಸ್ಥಾನಗಳಲ್ಲಿ ಮಾತ್ರ.
ಬಿಜೆಪಿ 104, ಕಾಂಗ್ರೆಸ್ 78, ಜೆಡಿಎಸ್ 38 ಸ್ಥಾನಗಳನ್ನು ಗಳಿಸಿ, ಯಾರಿಗೂ ಬಹುಮತ ಬಾರದಿದ್ದ ಈ ಸಂದರ್ಭದಲ್ಲಿ, ಕೋಮುವಾದಿ ಶಕ್ತಿಗಳನ್ನು ಅಧಿಕಾರ ಸ್ಥಾನದಿಂದ ದೂರ ಇಡುವ, ಕರ್ನಾಟಕದ ಅಸ್ಮಿತೆಯನ್ನು ಉಳಿಸುವ ಸಲುವಾಗಿ ಕಾಂಗ್ರೆಸ್ ಪಕ್ಷ, ಜೆಡಿಎಸ್‌ಗೆ ಬೆಂಬಲಿಸಿದೆ. ಜೆಡಿಎಸ್‌ನ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿಯಾಗಿಸಲು ಒಮ್ಮತದ ತೀರ್ಮಾನಕ್ಕೆ ಬಂದಿದೆ. ದೇವೇಗೌಡರ ಸೂಚನೆಯ ಮೇರೆಗೆ ಕುಮಾರಸ್ವಾಮಿಯವರು ಕಾಂಗ್ರೆಸ್ ಬೆಂಬಲಿತ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ. ಮುಖ್ಯಮಂತ್ರಿಯಾಗಲಿರುವ ಕುಮಾರಸ್ವಾಮಿ, ‘ಜಾತ್ಯತೀತ ನಿಲುವಿಗೆ ಬದ್ಧವಾಗಿ, ಜನಪರ ಆಡಳಿ ನೀಡುವುದಾಗಿ ಭರವಸೆ ನೀಡಿದ್ದಾರೆ.