ಓ ಮೆಣಸೇ...
ದಲಿತ ಎಂಬ ಕಾರಣಕ್ಕೆ ಸಿಎಂ ಹುದ್ದೆ ಬೇಡ - ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ
ವಯಸ್ಸಿನ ಕಾರಣಕ್ಕಾಗಿ ಸಿಎಂ ಹುದ್ದೆ ಸಿಗುವುದು ಕಷ್ಟ.
---------------------
ಭಯೋತ್ಪಾದನೆ ಹತ್ತಿಕ್ಕುವಲ್ಲಿ ವಿಶ್ವ ಸಮುದಾಯ ತನ್ನ ಚಿಂತನಾ ಶೈಲಿಯನ್ನು ಬದಲಾಯಿಸಿಕೊಳ್ಳಬೇಕು - ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ
ಅವರೇನಾದರೂ ತಮ್ಮ ಚಿಂತನಾ ಶೈಲಿ ಬದಲಿಸಿದರೆ, ಅಮೆರಿಕಕ್ಕೆ ಅಪಾಯವಿದೆ.
---------------------
ದೇಶ ಇಬ್ಭಾಗವಾಗುವುದಕ್ಕೆ ಕಾರಣರಾದವರು ಈ ದೇಶಕ್ಕೆ ಮಾದರಿಯಾಗಲು ಸಾಧ್ಯವಿಲ್ಲ - ಬಾಬಾ ರಾಮ್‌ದೇವ್, ಯೋಗಗುರು
ಆರೆಸ್ಸೆಸ್ ದೇಶಕ್ಕೆ ಮಾತ್ರವಲ್ಲ, ನಿಮಗೂ ಮಾದರಿಯಾಗಬಾರದು.
---------------------
ಚಾಮುಂಡೇಶ್ವರಿಯಲ್ಲಿ ಮಹಿಷಾಸುರನ ಮರ್ದನವಾಗಿದೆ - ಎಚ್.ವಿಶ್ವನಾಥ್, ಶಾಸಕ
ಮಹಿಷಾಸುರನನ್ನು ಮೋಸದಿಂದ ಕೊಂದ ಚರಿತ್ರೆಯನ್ನು ಶೋಷಿತರು ಮರೆತಿಲ್ಲ.
---------------------
ಸಿದ್ದರಾಮಯ್ಯ ಅವರಲ್ಲಿ ಕಾಂಗ್ರೆಸ್ ರಕ್ತ ಇಲ್ಲ - ಕೆ.ಬಿ. ಕೋಳಿವಾಡ, ಮಾಜಿ ಸ್ಪೀಕರ್
ಮನುಷ್ಯ ರಕ್ತವಿದ್ದರೆ ಸಾಕಾಗುವುದಿಲ್ಲವೇ?
---------------------
ಆಪರೇಷನ್ ಬಿಜೆಪಿಯ ಸಂಸ್ಕೃತಿಯಲ್ಲ - ಪ್ರಕಾಶ ಜಾವಡೇಕರ್, ಬಿಜೆಪಿ ನಾಯಕ
ಅಬಾರ್ಷನ್ ನಮ್ಮ ಸಂಸ್ಕೃತಿ ಎನ್ನುವುದನ್ನು ಯಡಿಯೂರಪ್ಪ ಸಾಬೀತು ಮಾಡಿದ್ದಾರೆ.
---------------------
ಮಾಧ್ಯಮಗಳು ಸುದ್ದಿ, ಅಭಿಪ್ರಾಯಗಳನ್ನು ಮೇಳೈಸಬಾರದು - ವೆಂಕಯ್ಯ ನಾಯ್ಡು, ಉಪರಾಷ್ಟ್ರಪತಿ
ಹಾಗೆ ಮಾಡಿದ್ದರೆ ಮೋದಿ ಸರಕಾರ ಅಧಿಕಾರಕ್ಕೆಲ್ಲಿ ಬರುತ್ತಿತ್ತು?
---------------------
ನಮ್ಮ ಕುಟುಂಬಕ್ಕೆ ಅಧಿಕಾರ ದಾಹ ಇಲ್ಲ - ಎಚ್.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ಇಲ್ಲ ಎಂದಾಕ್ಷಣ ಇದೆ ಎಂದು ಅರ್ಥಕೊಡುವ ದಾಹ ಅದು.
---------------------
ಅದೆಷ್ಟೋ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಒಳಗೊಳಗೇ ಜಗಳವಾಡುತ್ತಿದ್ದಾರೆ. ನಾವು (ಬಿಜೆಪಿ) ಒಬ್ಬರಿಗೊಬ್ಬರು ಸಹಕಾರ ನೀಡುತ್ತಿದ್ದೇವೆ - ಶೋಭಾ ಕರಂದ್ಲಾಜೆ, ಸಂಸದೆ
ಯಡಿಯೂರಪ್ಪ ಅವರನ್ನು ಮಕಾಡೆ ಮಲಗಿಸಲು ಈ ಬಗೆಯ ಸಹಕಾರವೇ?
---------------------
ಅಧಿಕಾರ ಕಳೆದುಕೊಂಡದ್ದಕ್ಕಾಗಿ ಸಿದ್ದರಾಮಯ್ಯ ಕಣ್ಣೀರು ಹಾಕುತ್ತಿದ್ದಾರೆ - ಸಿ.ಟಿ. ರವಿ, ಶಾಸಕ
ತಮ್ಮನ್ನು ಆರಿಸಿದ್ದಕ್ಕೆ ಮತದಾರರೇ ಕಣ್ಣೀರು ಹಾಕುತ್ತಿದ್ದಾರೆ.
---------------------
ಮುಂಬರುವ ದಿನಗಳಲ್ಲಿ ಮೋದಿ ನೇತೃತ್ವದಲ್ಲಿ ಇನ್ನಷ್ಟು ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ನಡೆಯಲಿವೆ - ಅಮಿತ್ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ
ಯಾರ ಅಭಿವೃದ್ಧಿ ಎನ್ನುವುದನ್ನು ಪ್ರಶ್ನಿಸುವಂತಿಲ್ಲ.
---------------------
ಮುಂದಿನ ಬಾರಿ ವಿಧಾನ ಸಭೆ ಚುನಾವಣೆಗೆ ನಾನು ಸ್ಪರ್ಧಿಸುವುದಿಲ್ಲ - ಶಕುಂತಳಾ ಶೆಟ್ಟಿ, ಮಾಜಿ ಶಾಸಕಿ
ನಿಮ್ಮ ಆಶ್ವಾಸನೆಯಿಂದ ಬಿಜೆಪಿಗೆ ನಿರಾಸೆಯಾಗಿದೆ.
---------------------
ಪಾಕಿಸ್ತಾನ, ಆಫ್ರಿಕನ್ ದೇಶಗಳು ಹಾಗೂ ಸರ್ವಾಧಿಕಾರಿ ಆಳ್ವಿಕೆ ಇರುವ ದೇಶಗಳ ಸ್ಥಿತಿ ಭಾರತದಲ್ಲೂ ನಿರ್ಮಾಣವಾಗಿದೆ. - ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ
ಅದಕ್ಕೆ ಕಾಂಗ್ರೆಸ್ ಎಷ್ಟು ಕಾರಣ ಎನ್ನುವುದನ್ನು ಆತ್ಮವಿಮರ್ಶೆ ಮಾಡಿಕೊಳ್ಳಬೇಕು.
---------------------
ಕಾನೂನು ಎಲ್ಲರಿಗೂ ಒಂದೇ ರೀತಿ ಇರಬೇಕು - ತೇಜಸ್ವಿ ಯಾದವ್, ಬಿಹಾರ ಆರ್‌ಜೆಡಿ ನಾಯಕ
ಅಂದರೆ ಅಮಿತ್ ಶಾಗೆ ಅನ್ವಯವಾದ ಕಾನೂನು ತಮ್ಮ ತಂದೆಗೂ ಅನ್ವಯವಾಗಬೇಕು ಎಂದು ಅರ್ಥವೇ?
---------------------
ರಾಜೀವ್ ಗಾಂಧಿ ಪ್ರಾಮಾಣಿಕ ವ್ಯಕ್ತಿ - ಸತ್ಯಪಾಲ್ ಮಲಿಕ್, ಬಿಹಾರ ರಾಜ್ಯಪಾಲ
ಸೋನಿಯಾ ಗಾಂಧಿಯ ಬಗ್ಗೆ ಈ ಹೇಳಿಕೆ ಹೊರ ಬೀಳಲು ಇನ್ನೂ ಎಷ್ಟು ವರ್ಷ ಬೇಕು?
---------------------
ನಾವು ಇತಿಹಾಸದಲ್ಲಿ ಈ ವರೆಗೂ ಪೂರ್ಣ ಬಹುಮತದಿಂದ ಸರಕಾರ ರಚಿಸಿಲ್ಲ, ಆ ಬಗ್ಗೆ ಬೇಸರವಿದೆ - ದೇವೇಗೌಡ, ಮಾಜಿ ಪ್ರಧಾನಿ
ಆದರೂ ಮಗ ಎರಡೆರಡು ಬಾರಿ ಮುಖ್ಯಮಂತ್ರಿ ಆಗುವುದು ಇತಿಹಾಸದಲ್ಲಿ ದಾಖಲಾಗುತ್ತದೆ ಬಿಡಿ.
---------------------
ವಿಜ್ಞಾನದ ಬೆಳವಣಿಗೆಯಿಂದ ಇಂದು ಜೀವನ ಯಾಂತ್ರಿಕವಾಗಿದೆ - ಡಾ.ಡಿ. ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿ ಧರ್ಮಸ್ಥಳ
ವಿಜ್ಞಾನಕ್ಕೆ ನಿಷೇಧ ಹೇರಿದರೆ ಹೇಗೇ?
---------------------
ಕಾಂಗ್ರೆಸ್-ಜೆಡಿಎಸ್‌ನವರು ಅವರದೇ ಪಕ್ಷದ ಶಾಸಕರನ್ನು ಕುದುರೆಗೆ ಹೋಲಿಸಿದ್ದು ಸರಿಯಲ್ಲ - ಕೆ.ಎಸ್. ಈಶ್ವರಪ್ಪ, ಬಿಜೆಪಿ ನಾಯಕ
ತಮ್ಮನ್ನು ಕತ್ತೆಗೆ ಹೋಲಿಸಿದರೆ ಸಮಾಧಾನವೇ?