ಸುದೀರ್ಘ ಕಾನೂನು ಹೋರಾಟದ ನಂತರ ಮರಳು ಬ್ಲಾಕ್ ಹಂಚಿಕೆಗೆ ಕ್ರಮ ಕೈಗೊಂಡ ಶಿವಮೊಗ್ಗ ಜಿಲ್ಲಾಡಳಿತ
ಶಿವಮೊಗ್ಗ, ಮೇ 24: ಎಲ್ಲ ಅಂದುಕೊಂಡಂತೆ ನಡೆದರೆ, ಮಳೆಗಾಲ ಆರಂಭದ ತಿಂಗಳಾದ ಜೂನ್‍ನಿಂದ ಶಿವಮೊಗ್ಗ ಜಿಲ್ಲೆಯ ನಾಗರೀಕರಿಗೆ ಮರಳು ಲಭ್ಯವಾಗಲಿದೆ. ಹಲವು ತಿಂಗಳ ಕಾನೂನು ಹೋರಾಟದ ನಂತರ, ಸ್ಥಗಿತಗೊಂಡಿದ್ದ ಮರಳು ಬ್ಲಾಕ್‍ಗಳ ಹಂಚಿಕೆ ಪ್ರಕ್ರಿಯೆಯನ್ನು ಪ್ರಸ್ತುತ ಜಿಲ್ಲಾಡಳಿತ ಆರಂಭಿಸಿದೆ. ಆನ್‍ಲೈನ್ ಬಿಡ್ಡಿಂಗ್, ಸಂಬಂಧಿಸಿದ ಗುತ್ತಿಗೆದಾರರ ಜೊತೆ ಒಪ್ಪಂದ ಪೂರ್ಣಗೊಂಡು, ಆಡಳಿತಾತ್ಮಕ ಪ್ರಕ್ರಿಯೆಗಳು ಅಂತ್ಯಗೊಂಡ ನಂತರ ನಾಗರಿಕರಿಗೆ ಮರಳು ಸಿಗಲಿದೆ. ಇದರಿಂದ ಮುಂಗಾರು ಮಳೆ ಆರಂಭವಾಗುವ ಜೂನ್ ಮಧ್ಯಂತರದಿಂದ ನಾಗರಿಕರಿಗೆ ಮರಳು ಲಭ್ಯವಾಗುವ ಸಾಧ್ಯತೆಗಳಿವೆ.
ಪ್ರಸ್ತುತ ವರ್ಷ ಹವಮಾನ ಇಲಾಖೆಯು ಜೂನ್ ಮೊದಲ ವಾರದಲ್ಲಿಯೇ ನೈರುತ್ಯ ಮಾನ್ಸೂನ್ ಮಾರುತಗಳು ರಾಜ್ಯಕ್ಕೆ ಕಾಲಿಡುವ ಭವಿಷ್ಯ ನುಡಿದಿದೆ. ಮುಂಗಾರು ಮಳೆ ಬೀಳಲಾರಂಭಿಸಿದರೆ ನದಿಗಳಲ್ಲಿ ನೀರಿನ ಹರಿವು ಪ್ರಾರಂಭವಾಗಲಿದ್ದು, ಮಳೆಗಾಲ ಪೂರ್ಣಗೊಳ್ಳುವವರೆಗೂ ನದಿ ಪಾತ್ರದಿಂದ ಮರಳು ತೆಗೆಯಲು ಅವಕಾಶವಿರುವುದಿಲ್ಲ. ಇದರಿಂದ ಜಿಲ್ಲಾಡಳಿತ ಅನುಮತಿ ನೀಡಿದರೂ, ನಾಗರಿಕರಿಗೆ ಮರಳು ಲಭ್ಯವಾಗಲಿದೆಯೇ? ಇಲ್ಲವೇ? ಎಂಬುವುದು ಇನ್ನಷ್ಟೆ ಗೊತ್ತಾಗಬೇಕಾಗಿದೆ.
ಕಾನೂನು ಹೋರಾಟ: ಕಳೆದ ವರ್ಷ ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಜಿಲ್ಲಾಡಳಿತ ಮರಳು ಬ್ಲಾಕ್‍ಗಳ ಹಂಚಿಕೆ ಪ್ರಕ್ರಿಯೆ ಆರಂಭಿಸಿತ್ತು. ಜಿಲ್ಲೆಯ ಹೊಸನಗರ, ತೀರ್ಥಹಳ್ಳಿ ಮತ್ತಿತರೆಡೆ 23 ಮರಳು ಬ್ಲಾಕ್‍ಗಳನ್ನು ಹರಾಜುಗೊಳಿಸಲು ಜಿಲ್ಲಾಡಳಿತ ಗುರುತಿಸಿತ್ತು. ಈ ಮರಳು ಬ್ಲಾಕ್‍ಗಳಿಗೆ ಫ್ರೀ ಕ್ವಾಲಿಫಿಕೇಷನ್ ಬಿಡ್ಡಿಂಗ್ ಪ್ರಕ್ರಿಯೆ ನಡೆಸಿ, ಅರ್ಹ ಗುತ್ತಿಗೆದಾರರನ್ನು ಗುರುತಿಸುವ ಪ್ರಕ್ರಿಯೆ ನಡೆಸಿತ್ತು.
23 ಬ್ಲಾಕ್‍ಗಳಿಂದ 306 ಜನ ಅರ್ಜಿ ಸಲ್ಲಿಸಿದ್ದು, ಸಮರ್ಪಕ ದಾಖಲಾತಿ ಸಲ್ಲಿಸದ 34 ಗುತ್ತಿಗೆದಾರರ ಅರ್ಜಿಗಳನ್ನು ಜಿಲ್ಲಾಡಳಿತ ತಿರಸ್ಕರಿಸಿತ್ತು. ಆನ್‍ಲೈನ್ ಬಿಡ್ಡಿಂಗ್ ಮೂಲಕ ಅಂತಿಮ ಹಂತದ ಗುತ್ತಿಗೆದಾರರನ್ನು ಗುರುತಿಸುವ ಪ್ರಕ್ರಿಯೆ ಆರಂಭಿಸಿತ್ತು. ಆದರೆ ಅರ್ಜಿ ತಿರಸ್ಕೃತಗೊಂಡಿದ್ದ ಗುತ್ತಿಗೆದಾರರೊಬ್ಬರು ನ್ಯಾಯಾಲಯದ ಮೊರೆ ಹೋಗಿದ್ದರು. ತಮ್ಮ ಅರ್ಜಿಯನ್ನು ಕೂಡ ಪರಿಗಣಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಬೇಕು ಎಂದು ಕೋರಿದ್ದರು. ಜೊತೆಗೆ ಮರಳು ಬ್ಲಾಕ್‍ಗಳ ಹಂಚಿಕೆ ಪ್ರಕ್ರಿಯೆ ಮೇಲೆ ನ್ಯಾಯಾಲಯದಿಂದ ತಾತ್ಕಾಲಿಕ ತಡೆಯಾಜ್ಞೆ ತಂದಿದ್ದರು.
ಇದರ ವಿರುದ್ದ ಜಿಲ್ಲಾಡಳಿತವು ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸಿತ್ತು. ಅರ್ಜಿ ವಜಾಗೊಳಿಸಿದ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿತ್ತು. ಜೊತೆಗೆ ಮರಳು ಬ್ಲಾಕ್‍ಗಳ ಹಂಚಿಕೆ ಮೇಲೆ ಕೆಳ ನ್ಯಾಯಾಲಯ ವಿಧಿಸಿದ್ದ ತಡೆಯಾಜ್ಞೆ ತೆರವುಗೊಳಿಸುವಲ್ಲಿಯೂ ಯಶಸ್ವಿಯಾಗಿತ್ತು. ಈ ನಡುವೆ ಗುತ್ತಿಗೆದಾರನು ಹೈಕೋರ್ಟ್ ಮೆಟ್ಟಿಲೇರಿದ್ದು, ಅಲ್ಲಿಯೂ ಕೂಡ ಜಿಲ್ಲಾಡಳಿತ ತನ್ನ ವಾದ ಸಮರ್ಥಿಸಿಕೊಂಡಿತ್ತು. ಅಂತಿಮವಾಗಿ ಹೈಕೋರ್ಟ್ ಗುತ್ತಿಗೆದಾರನ ಅರ್ಜಿ ವಜಾಗೊಳಿಸಿತ್ತು.
ಆನ್‍ಲೈನ್ ಬಿಡ್ಡಿಂಗ್: ವಿವಿಧ ಹಂತದ ನ್ಯಾಯಾಲಯದಲ್ಲಿ ಸುಮಾರು ಆರೇಳು ತಿಂಗಳ ಕಾಲ ನಡೆದ ಕಾನೂನು ಹೋರಾಟದ ಕಾರಣದಿಂದ, ಮರಳು ಬ್ಲಾಕ್‍ಗಳ ಹಂಚಿಕೆ ಪ್ರಕ್ರಿಯೆ ಮೇಲೆ ತಡೆ ಬೀಳುವಂತಾಗಿತ್ತು. ಇದರಿಂದ ನಾಗರಿಕರಿಗೆ ಸುಲಭವಾಗಿ, ಸುಲಲಿತವಾಗಿ ಮರಳು ನೀಡುವ ಜಿಲ್ಲಾಡಳಿತದ ಯೋಜನೆ-ಚಿಂತನೆ ನೆನೆಗುದಿಗೆ ಬೀಳುವಂತಾಗಿತ್ತು. ನಾಗರಿಕರು ಮರಳಿಗೆ ಪರಿತಪಿಸುವಂತಹ ಸ್ಥಿತಿ ಸೃಷ್ಟಿಯಾಗಿತ್ತು.
ಅಂತಿಮವಾಗಿ ಏಪ್ರಿಲ್ ತಿಂಗಳಲ್ಲಿಯೇ ಹೈಕೋರ್ಟ್‍ನಲ್ಲಿ ಜಿಲ್ಲಾಡಳಿತಕ್ಕೆ ಜಯ ಸಿಕ್ಕಿತ್ತು. ಮತ್ತೊಂದೆಡೆ ವಿಧಾನಸಭೆ ಚುನಾವಣಾ ನೀತಿ ಸಂಹಿತೆ ಎದುರಾಗಿದ್ದ ಕಾರಣದಿಂದ ಮರಳು ಬ್ಲಾಕ್ ಹಂಚಿಕೆಯ ಆನ್‍ಲೈನ್ ಬಿಡ್ಡಿಂಗ್ ಪ್ರಕ್ರಿಯೆ ನಡೆಸಲು ಸಾಧ್ಯವಾಗಿರಲಿಲ್ಲ. ಇದೀಗ ಈ ಪ್ರಕ್ರಿಯೆಗೆ ಚಾಲನೆ ನೀಡಿದೆ. ಲಭ್ಯ ಮಾಹಿತಿಯ ಪ್ರಕಾರ, ಮೇ 24, 25, 26 ರಂದು ಆನ್‍ಲೈನ್ ಬಿಡ್ಡಿಂಗ್ ನಡೆಯುವ ಸಾಧ್ಯತೆಯಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಇಡೀ ರಾಜ್ಯದಲ್ಲಿಯೇ ಮುಂಚೂಣಿಯಲ್ಲಿದ್ದ ಜಿಲ್ಲೆ
ಮರಳು ಹಂಚಿಕೆಯ ವೇಳೆ ಉದ್ಭವವಾಗುತ್ತಿದ್ದ ಗೊಂದಲ ಪರಿಹಾರಕ್ಕೆ ಹಾಗೂ 'ಮರಳು ಮಾಫಿಯಾ' ಹಸ್ತಕ್ಷೇಪ ಹತ್ತಿಕ್ಕಲು, ಜಿಲ್ಲಾಧಿಕಾರಿ ಡಾ. ಎಂ. ಲೋಕೇಶ್ ಕ್ರಮ ಕೈಗೊಂಡಿದ್ದರು. ಕಳೆದ ವರ್ಷ ಮಳೆಗಾಲದಲ್ಲಿಯೇ ಮರಳು ಹಂಚಿಕೆಗೆ ಸಂಬಂಧಿಸಿದ ಪೂರ್ವಭಾವಿ ಸಿದ್ದತೆ ಮಾಡಿಕೊಂಡಿದ್ದರು. ನೂತನ ಮರಳು ನೀತಿ ಅನ್ವಯ ಬೇಸಿಗೆ ಆರಂಭದಲ್ಲಿಯೇ ನಾಗರಿಕರಿಗೆ ಮರಳು ಹಂಚಿಕೆ ಮಾಡಲು ನಿರ್ಧರಿಸಿದ್ದರು. ನೂತನ ಮರಳು ನೀತಿ ಅನ್ವಯ ಮರಳು ಹಂಚಿಕೆಗೆ ಮಾಡಿಕೊಂಡಿದ್ದ ಪೂರ್ವಸಿದ್ದತೆಗಳಲ್ಲಿ ಜಿಲ್ಲೆಯು ಇಡೀ ರಾಜ್ಯಕ್ಕೆ ಮೊದಲ ಸ್ಥಾನದಲ್ಲಿತ್ತು. ರಾಜ್ಯ ಸರ್ಕಾರ ಕೂಡ ಮೆಚ್ಚುಗೆ ವ್ಯಕ್ತಪಡಿಸಿತ್ತು. ಜಿಲ್ಲಾಡಳಿತದ ಕ್ರಮದಿಂದ ಕಾಲಮಿತಿಯಲ್ಲಿ ಮರಳು ದೊರಕುವ ನಿರೀಕ್ಷೆಯಲ್ಲಿ ಜಿಲ್ಲೆಯ ನಾಗರಿಕರಿದ್ದರು. ಆದರೆ ಗುತ್ತಿಗೆದಾರರೋರ್ವರು ಮರಳು ಬ್ಲಾಕ್ ಹಂಚಿಕೆಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಕೇಸ್ ದಾಖಲಿಸಿದ್ದು, ಜಿಲ್ಲಾಡಳಿತದ ಎಲ್ಲ ಯೋಜನೆ ತಲೆಕೆಳಗಾಗುವಂತೆ ಮಾಡಿತ್ತು.
'ಕಾನೂನು ರೀತಿಯ ಕ್ರಮ' : ಜಿಲ್ಲಾಧಿಕಾರಿ ಡಾ. ಎಂ. ಲೋಕೇಶ್
'ಮರಳು ಬ್ಲಾಕ್‍ಗಳ ಆನ್‍ಲೈನ್ ಬಿಡ್ಡಿಂಗ್‍ಗೆ ಸಂಬಂಧಿಸಿದಂತೆ ಕಾನೂನು ರೀತಿಯ ಕ್ರಮಕೈಗೊಳ್ಳಲಾಗಿದೆ. ಈ ಪ್ರಕ್ರಿಯೆ ಪೂರ್ಣಗೊಂಡ ನಂತರ ಸಭೆ ನಡೆಸಿ, ನಾಗರಿಕರಿಗೆ ಯಾವಾಗ ಮರಳು ಲಭ್ಯವಾಗಲಿದೆ ಎಂಬುವುದರ ಮಾಹಿತಿ ನೀಡಲಾಗುವುದು' ಎಂದು ಜಿಲ್ಲಾಧಿಕಾರಿ ಡಾ. ಎಂ. ಲೋಕೇಶ್‍ರವರು ಗುರುವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.
ಅಡೆತಡೆ ನಿವಾರಣೆ : ಹಿರಿಯ ಭೂ ವಿಜ್ಞಾನಿ ಸಿ.ಆರ್.ರಶ್ಮಿ
'ಮರಳು ಬ್ಲಾಕ್‍ಗಳ ಹರಾಜು ಪ್ರಕ್ರಿಯೆಗೆ ಸಂಬಂಧಿಸಿದಂತೆ ಇದ್ದ ಅಡೆತಡೆಗಳು ನಿವಾರಣೆಯಾಗಿದೆ. ಈ ಹಿಂದೆ ಗುರುತಿಸಲಾಗಿದ್ದ 23 ಬ್ಲಾಕ್‍ಗಳ ಆನ್‍ಲೈನ್ ಬಿಡ್ಡಿಂಗ್‍ಗೆ ಕ್ರಮಕೈಗೊಳ್ಳಲಾಗಿದೆ. ಮೆಟ್ರಿಕ್ ಟನ್ ಮರಳಿಗೆ 600 ರೂ. ದರ ನಿಗದಿ ಮಾಡಲಾಗಿದೆ. ಹೆಚ್ಚಿನ ದರ ನಿಗದಿ ಮಾಡುವವರಿಗೆ ನಿಯಮಾನುಸಾರ ಬ್ಲಾಕ್‍ಗಳ ಹಂಚಿಕೆ ಮಾಡಲಾಗುವುದು' ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಸಿ.ಆರ್.ರಶ್ಮಿರವರು ಗುರುವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.