ಇದುವರೆಗೂ ನಿಮ್ಮ ಅಧಿಕಾರದಡಿಯಲ್ಲಿ ನಮಗೆ ಅಪಮಾನವೇ ಆಗಿದೆ
ಡಾ. ಬಿ.ಆರ್.ಅಂಬೇಡ್ಕರ್ ಅವರ ಆಯ್ದ ಭಾಷಣ-ಬರಹಗಳು
ಭಾಗ-1
ಮಂಗಳವಾರ, ಅಕ್ಟೋಬರ್ 23, 1928ರ ವಿಜಯದಶಮಿಯ ಸುಮೂಹೂರ್ತದಂದು ಅಸ್ಪಶ್ಯ ವರ್ಗದ ವತಿಯಿಂದ ಡಾ. ಅಂಬೇಡ್ಕರ್ ಮತ್ತು ಡಾ. ಸೋಲಂಕಿಯವರು ಸೈಮನ್ ಕಮಿಷನ್ ಎದುರಿಗೆ ಪುರಾವೆ ನೀಡಲು ನಿಂತಿದ್ದರು. ಅಲ್ಲಿ ಅಸ್ಪಶ್ಯ ವರ್ಗದ ವತಿಯಿಂದ ನಾಲ್ಕು ಬೇಡಿಕೆಗಳನ್ನು ಮುಂದಿಡಲಾಗಿತ್ತು.
1. ಮುಂಬೈ ಇಲಾಖೆಯಲ್ಲಿ ಸಂಪೂರ್ಣ ಸ್ವರಾಜ್ಯ ಸ್ಥಾಪನೆಯಾಗ ಬೇಕು.
2. ಅಸ್ಪಶ್ಯ ವರ್ಗ ಹಿಂದೂಗಳಲ್ಲಿ ಸಮಾವೇಶಗೊಳ್ಳಲು ಸಾಧ್ಯವಿಲ್ಲದಿದ್ದರೆ, ಆ ವರ್ಗ ಹಿಂದೂ ಸಮಾಜದಿಂದ ಬೇರೆಯಾಗಿ ಮತ್ತು ಸ್ವತಂತ್ರವಾಗಿ ಇರುವ ಮಾನ್ಯತೆ ಬೇಕು.
3. ಹೊಸದಾಗಿ ಆರಂಭಿಸುವ ಕಾಯ್ದೆ ಕೌನ್ಸಿಲ್‌ನಲ್ಲಿ ಎಷ್ಟು ಮುಸಲ್ಮಾನರ ಪ್ರತಿನಿಧಿಗಳ ಸಂಖ್ಯೆ ಇರುತ್ತದೋ, ಅಷ್ಟೇ ಅಸ್ಪಶ್ಯ ಪ್ರತಿನಿಧಿಗಳ ಸಂಖ್ಯೆಯೂ ಇರಬೇಕು.
4. ಬಹುಜನ ಸಮಾಜದ ಕೈಯಲ್ಲಿ ಎಷ್ಟು ಅವರ ಹಿತಾಸಕ್ತಿಯ ಶೋಷಣೆಯಾಗುತ್ತದೋ ಮತ್ತು ಅತ್ಯಾಚಾರವಾಗುತ್ತದೋ ಅದರಿಂದ ಅವರನ್ನು ರಕ್ಷಿಸುವ ಕಾಯ್ದೆಗೆ ಯಾವ ಹಕ್ಕು ಸಂರಕ್ಷಣೆಯ ಅಡ್ಡಿಯೂ ಬರಬಾರದು.
ಈ ಬೇಡಿಕೆ ಪ್ರಸಿದ್ಧವಾಗುತ್ತಲೇ ಸ್ಪಶ್ಯ ಹಿಂದೂಗಳಿಂದ ಎಂಥ ಟೀಕೆಗಳ ಸುರಿಮಳೆ ಶುರುವಾಯಿತೆಂದರೆ, ಅದನ್ನು ನೋಡಿ ನಮಗೆ ಖಂಡಿತಾ ಆಶ್ಚರ್ಯವಾಯಿತು. ಯಾವ ಒಂದು ವಿಷಯದ ಮೇಲೆ ಅವರ ರೋಷವುಕ್ಕಿತೋ, ಆ ವಿಷಯ ಅಂದರೆ ಅಸ್ಪಶ್ಯ ಸಮಾಜವೂ ಹಿಂದೂ ಸಮಾಜದಿಂದ ಪ್ರತ್ಯೇಕವಾಗಬೇಕು. ಅದು ಆಗಲೇಬೇಕು. ಈ ಬೇಡಿಕೆಯಿಂದ ಯಾರ ಪಿತ್ತ ಇಷ್ಟು ಕೆರಳಿದೆಯೋ ಅವರು, ಹಿಂದೂ ಸಮಾಜಕ್ಕೂ ಮತ್ತು ಅಸ್ಪಶ್ಯ ಸಮಾಜಕ್ಕೂ ಎಂಥ ಸಂಬಂಧವಿದೆ ಅನ್ನುವುದನ್ನು ಹೇಳಲಿ ಎನ್ನುವ ಸವಾಲು ಅವರಿಗೆ ನಾವು ಹಾಕುತ್ತೇವೆ. ಸಮಾಜದ ಏಕೀಕರಣಕ್ಕೆ ಸಹಭೋಜನ ಮತ್ತು ಮಿಶ್ರ ವಿವಾಹ, ಈ ಎರಡೂ ಸಂಸ್ಕಾರ ಕಾರಣೀಭೂತವಾಗುತ್ತದೆ. ಈ ಎರಡೂ ಸಂಸ್ಕಾರ ಎಲ್ಲಿ ಚಾಲನೆಯಲ್ಲಿದೆಯೋ ಅಲ್ಲಿ ಎಲ್ಲರೂ ಒಂದೇ ದಾರದ ಸೂತ್ರದಂತೆ ಒಂದು ಸಮಾಜವಾಗಬಹುದು. ಏಕೀಕರಣದ ಈ ಎರಡು ಮುಖ್ಯ ಸಂಸ್ಕಾರಗಳು ಸ್ಪಶ್ಯ-ಅಸ್ಪಶ್ಯರ ನಡುವೆ ಇಲ್ಲವೇ ಇಲ್ಲ, ಅಷ್ಟೇ ಅಲ್ಲ ಅದನ್ನು ನಡೆಸಿಕೊಡಿ ಎಂದು ಕೇಳಿದರೂ ಕಾಲಿನ ತಿವಿರು ನೆತ್ತಿಗೆ ಏರಿ, ಅಸ್ಪಶ್ಯರು ಆರ್ಯಸ್ತ್ರೀಯರನ್ನು ಬಯಸುತ್ತಾರೆ ಎಂದು ಬಣ್ಣ ಕಟ್ಟುತ್ತಾರೆ. ಸಹಭೋಜನ ಮತ್ತು ಮಿಶ್ರ ವಿವಾಹ ಹಾಗಿರಲಿ, ಆದರೆ ಅವರ ಸಾಮಾನ್ಯ ಸಹವಾಸವೂ ಇಲ್ಲ. ಸ್ಪಶ್ಯ-ಅಸ್ಪಶ್ಯರ ನಡುವೆ ಜೋಡಿಸುವ ಅಂಥ ಯಾವ ಕೊಂಡಿ ಇದೆಯೆಂದು ಇಬ್ಬರ ನಡುವೆ ಹೇಳಲು ಬರುತ್ತದೆ. ಅಸ್ಪಶ್ಯ ಸಮಾಜ ಮತ್ತು ಸ್ಪಶ್ಯ ಸಮಾಜ ಒಂದೇ ಸಂಸ್ಕೃತಿಯಡಿಯಲ್ಲಿ ಅಥವಾ ಒಂದೇ ಧರ್ಮದಡಿಯಲ್ಲಿ ಬೆಳೆದಿರಬಹುದಾಗಿತ್ತು. ಆದರೆ ಕೇವಲ ಒಂದೇ ಸಂಸ್ಕೃತಿಯಡಿಯಲ್ಲಿ ಬೆಳೆದ ಜನರು ಒಂದೇ ಸಮಾಜದ ಘಟಕವೆಂದು ಭಾವಿಸುವುದಾದರೆ ‘ಸಮಾಜ’ ಎನ್ನುವ ಶಬ್ದ ನಿರರ್ಥಕವಾಗುತ್ತದೆ, ಅದನ್ನು ಅರ್ಥೈಸಲು ದೊಡ್ಡ ಗೊಂದಲವಾಗುತ್ತದೆ. ಕಾರಣವೇನೆಂದರೆ ಸಂಸ್ಕೃತಿ ಮತ್ತು ಸಮಾಜ ಇವೆರಡೂ ಭಿನ್ನವಾದ ವಿಷಯಗಳು. ಒಂದು ಸಮಾಜದ ಸಂಸ್ಕೃತಿ ಒಂದೇ ಆಗಿರುತ್ತದೆ. ಇದು ಸತ್ಯ. ಆದರೆ ಒಂದು ಸಂಸ್ಕೃತಿಯ ಜನರು ಒಂದೇ ಸಮಾಜದ ಘಟಕವಾಗುವ ನಿಯಮ ಎಲ್ಲ ಕಡೆಯೂ ಸಾಧ್ಯವಾಗುವುದಿಲ್ಲ. ಉದಾಹರಣೆಗೆ ಯುರೋಪಿನಲ್ಲಿ ಎಲ್ಲರೂ ಒಂದೇ ಕ್ರಿಶ್ಚಿಯನ್ ಸಂಸ್ಕೃತಿಯಡಿಯಲ್ಲಿ ಬೆಳೆದವರು. ಅವರೆಲ್ಲರೂ ಒಂದೇ ಧರ್ಮ ಪಾಲಿಸುತ್ತಾರೆ. ಒಂದೇ ಏಸುವನ್ನು ಭಜಿಸುತ್ತಾರೆ. ಹುಟ್ಟಿನಿಂದ ಸಾಯುವ ತನಕ ವ್ಯವಹರಿಸುವ ಅವರ ಸಂಸ್ಕಾರ ಒಂದೇ ರೀತಿಯಾಗಿದೆ. ಆದರೆ ಅಷ್ಟರಲ್ಲೇ ಅವರೆಲ್ಲರನ್ನೂ ಒಂದೇ ಸಮಾಜದ ಜನರೆಂದು ಯಾರು ಹೇಳಲು ಸಾಧ್ಯ? ಒಂದೇ ಧರ್ಮವಾದರೂ ಅವರಲ್ಲಿ ಫ್ರೆಂಚ್, ಜರ್ಮನ್, ಇಂಗ್ಲಿಷ್, ಇಟಾಲಿಯನ್, ಬಲ್ಗೇರಿಯನ್, ಸ್ಪಾನಿಷ್, ಪೋರ್ಚುಗೀಸ್ ಮುಂತಾದ ಬೇರೆ ಬೇರೆ ಸಮಾಜದ ಜನರಿದ್ದಾರೆ. ಅದೇ ರೀತಿ ಹಿಂದೂಗಳದ್ದು ಸಹ. ಸ್ಪಶ್ಯ-ಅಸ್ಪಶ್ಯರ ಸಂಸ್ಕೃತಿ ಒಂದೇ ಆದರೂ ಯಾವ ರೀತಿ ಫ್ರೆಂಚ್ ಮತ್ತು ಜರ್ಮನ್ ಸಮಾಜಗಳು ಭಿನ್ನವಾಗಿದೆಯೋ ಅದೇ ರೀತಿ ಸ್ಪಶ್ಯ -ಅಸ್ಪಶ್ಯರ ಸಮಾಜವೂ ಭಿನ್ನವಾಗಿದೆ. ಇಷ್ಟೇ ಅಲ್ಲ ಯುರೋಪಿನಲ್ಲಿ ಯಾರು ವಾಸಿಸುತ್ತಾರೋ ಅವರೆಲ್ಲರೂ ಒಂದೇ ಸಮಾಜಕ್ಕೆ ಸೇರಿದವರು, ಎಂದು ಹೇಳುವುದು ಹೇಗೆ ಒಂದು ಬಗೆಯ ಮೂರ್ಖತನವಾಗುತ್ತದೆಯೋ ಹಾಗೆ ಕೇವಲ ಹಿಂದೂ ಸಂಸ್ಕೃತಿಯಡಿಯಲ್ಲಿ ಬೆಳೆದವರೆಂದು ಸ್ಪಶ್ಯ- ಅಸ್ಪಶ್ಯರದು ಒಂದೇ ಸಮಾಜವೆಂದು ಹೇಳಿದರೆ ನೂರು ಪಟ್ಟು ಮೂರ್ಖತನವಾಗುತ್ತದೆ.
ಸ್ಪಶ್ಯ ಮತ್ತು ಅಸ್ಪಶ್ಯ ಈ ಉಭಯ ಸಮಾಜಗಳಲ್ಲಿ ಯಾವ ಹೊಂದಾಣಿಕೆಯೂ ಇಲ್ಲ. ಅಸ್ಪಶ್ಯರು ಹಿಂದೂ ಮತದೊಳಗೆ ಅಂತರ್ಗತ ವಾಗಿರಬಹುದು. ಆದರೆ ವಿಶೇಷವಾಗಿ, ಅದು ಹಿಂದೂ ಸಮಾಜದ ಒಳಗಂತೂ ಇಲ್ಲ. ಅಸ್ಪಶ್ಯ ಸಮಾಜ, ಹಿಂದೂ ಸಮಾಜದಿಂದ ಬೇರೆಯೇ ಆಗಿದೆ. ಈ ಪರಿಸ್ಥಿತಿಯನ್ನು ಅನುಲಕ್ಷಿಸಿ ಸ್ವರಾಜ್ಯ ಘಟನೆಯ ಸಂದರ್ಭದಲ್ಲಿ ಆ ಸಮಾಜಕ್ಕೆ ಹಿಂದೂ ಜಾತಿಯಿಂದ ಬೇರೆಯಾಗುವ ಮಾನ್ಯತೆ ಕೊಡಬೇಕು ಎಂದು ಕೇಳಿದರೆ ಅದರಲ್ಲಿ ತಪ್ಪೇನಿದೆ? ಅದು ಹೇಗಾದರಾಗಲಿ. ಯಾವ ಸ್ಪಶ್ಯರು ಎಂದು ಅಸ್ಪಶ್ಯರನ್ನು ತಮ್ಮವರೆಂದು ಭಾವಿಸಿಲ್ಲವೋ, ಅಂಥವರಿಗೆ ಏಕಾಏಕಿ ಇಷ್ಟು ದಯೆ ಹುಟ್ಟಿದ್ದು ಒಂದು ದೊಡ್ಡ ಆಶ್ಚರ್ಯವೇ ಸರಿ! ‘‘ಹಿಂದೂವಾಗಿರಿ! ಹಿಂದೂವಾಗಿರಿ! ಒಡೆದು ಹೋಗದಿರಿ!’’, ಎಂದು ಯಾರು ಅರಚುತ್ತಿದ್ದಾರೋ ಅವರಿಗೆ ನಾವು ಕೇಳುವುದಿಷ್ಟೇ, ನಿಮ್ಮ ನಮ್ಮ ಸಾಮಾಜಿಕ ಸಂಬಂಧ ಎಳ್ಳಷ್ಟೂ ಇಲ್ಲ! ನೀವು ಬೇರೆ, ನಾವು ಬೇರೆ! ಸಾಮಾಜಿಕ ದೃಷ್ಟಿಯಲ್ಲಿ ಬೇರೆಯಾಗಿರುವವರು, ರಾಜಕೀಯ ದೃಷ್ಟಿಯಲ್ಲಿ ಬೇರೆಯಾದರೆ ನಿಮ್ಮದೇನು ಹೋಗುತ್ತದೆ? ಆದರೆ ನೀವು, ನಾವು ಒಂದೇ ರಕ್ತ ಮಾಂಸದಿಂದ ಹುಟ್ಟಿದವರು ಎಂದು ನೀವು ಹೇಳುವುದಾದರೆ, ಹಿಂದಿನ ಸಾವಿರಾರು ವರ್ಷಗಳಿಂದ ನಿಮ್ಮಿಂದಿಗೆ ಇದ್ದ ಅವಧಿಯಲ್ಲಿ ಸ್ಪಶ್ಯ ಹಿಂದೂಗಳು ನಮಗಾಗಿ ಏನು ಮಾಡಿದರು?
ಅಂಥ ಒಂದು ಪ್ರಶ್ನೆಯನ್ನು ಕೇಳಿದರೆ, ನಾನಾ ತರಹದ ಉತ್ತರ ನೀಡಿ, ಹಿಂದೂಗಳು ಅವರನ್ನು ನಿರುತ್ತರನ್ನಾಗಿಸಲು ಪ್ರಯತ್ನಿಸುತ್ತಾರೆ. ಕೆಲವರ ಹೇಳಿಕೆ ಪ್ರಕಾರ ‘ನಾವು ನಮ್ಮ ಮಹಿಳೆಯರ ಸುಧಾರಣೆಗಾಗಿ ಬಿಡುವಿಲ್ಲದೆ ದುಡಿಯುತ್ತಿದ್ದೇವೆ, ಸ್ವಲ್ಪ ತಾಳಿ; ನಮ್ಮ ಮಹಿಳೆಯರು ಸುಧಾರಿಸಿದ ತಕ್ಷಣ ನಾವು ಅವರ ಸಹಾಯದಿಂದ ನಿಮ್ಮ ಪ್ರಶ್ನೆಯನ್ನು ಕೈಗೆತ್ತಿಕೊಳ್ಳುತ್ತೇವೆ. ‘ಅವರ ಮಹಿಳೆಯರು ಎಂದೂ ಸುಧಾರಿಸುವುದಿಲ್ಲ, ನಮ್ಮ ಪ್ರಶ್ನೆಯನ್ನು ಅವರು ಎಂದೂ ಕೈಗೆತ್ತಿಕೊಳ್ಳುವುದಿಲ್ಲ, ಯಾರು ಸುಧಾರಣೆಗೊಂಡಿದ್ದಾರೋ ಅವರು ಅಸ್ಪಶ್ಯತಾ ನಿವಾರಣೆಗಾಗಿ ಏನೂ ಅನುಕೂಲ ಮಾಡಿಕೊಡುವುದಿಲ್ಲ ಎನ್ನುವುದು, ಪುಣೆಯ ಸೇವಾಸದನದ ಒಳವ್ಯವಸ್ಥೆಯಲ್ಲಿ ಕಾಣಬರುತ್ತದೆ. ಒಟ್ಟಿನಲ್ಲಿ ನಮ್ಮ ಪ್ರಶ್ನೆಯನ್ನು ಹಾಗೇ ಇಡಲು ಮಹಿಳೆಯರದು ಒಂದು ನೆಪವಷ್ಟೇ.
ಎರಡನೆಯವರು ಹೇಳುತ್ತಾರೆ; ಪ್ರಾರ್ಥನಾ ಅಸ್ಪಶ್ಯರಿಗಾಗಿ ಶಾಲೆ ತೆರೆಯಲಿಲ್ಲವೇ! ಪ್ರಾರ್ಥನಾ ಸಮಾಜದವರು ಅಸ್ಪಶ್ಯರಿಗಾಗಿ ತೆರೆದ ಶಾಲೆಯಲ್ಲಿ ಎಷ್ಟು ವಿದ್ಯಾರ್ಥಿ ಶಿಕ್ಷಿತರಾದರು ಎನ್ನುವ ಮಾಹಿತಿ ನಮಗೆ ಖಂಡಿತ ಸಿಕ್ಕಿಲ್ಲ. ಆದರೆ ಆ ಶಾಲೆ ಈಗ ಮುಚ್ಚಿರುವುಂತೂ ಸತ್ಯ. ಆದರೆ ಈ ಪ್ರಾರ್ಥನಾ ಸಮಾಜ ಮಾತ್ರ ಮಾವಂದಿರ, ಅಣ್ಣತಮ್ಮಂದಿರ ಮಕ್ಕಳ ವ್ಯಭಿಚಾರದಿಂದ ಹೊಟ್ಟೆ ಬೆಳೆದ ಸ್ಪಶ್ಯರ ಬೋಡಮ್ಮಗಳ ಬಾಣಂತನವನ್ನು ಸುಖವಾಗಿ ಪಾರು ಮಾಡುವುದಕ್ಕೋಸ್ಕರ ಒಂದು ಅನಾಥಾಶ್ರಮವನ್ನು ಸಾವಿರಾರು ಕಷ್ಟಗಳನ್ನೆದುರಿಸಿ, ಸಾಲಕ್ಕೂ ಹೆದರದೆ ಇಟ್ಟುಕೊಂಡಿದ್ದಾರೆ. ಇದೊಂದೇ ವಿಷಯದಿಂದ ಪ್ರಾರ್ಥನಾ ಸಮಾಜದವರಿಗೆ ಅಸ್ಪಶ್ಯರ ಮೇಲೆ ಜಾಸ್ತಿ ಕಾಳಜಿ ಇದೆಯೋ ಅಥವಾ ಬೋಡಮ್ಮಗಳ ಮೇಲೆ ಜಾಸ್ತಿ ಇದೆಯೋ ಎನ್ನುವುದು ಕಾಣಬರುತ್ತದೆ. ಮೂರನೆಯವರು ಹೇಳುತ್ತಾರೆ; 1923ನೇ ಇಸವಿಯಲ್ಲಿ ನಾವು ಸ್ಪಶ್ಯರು ಅಸ್ಪಶ್ಯರೊಂದಿಗೆ ಸಹಬೋಜನ ಮಾಡಿದ್ದೀವಿ!. ಎಂದರೆ ದೊಡ್ಡ ಪ್ರತಾಪ ತೋರಿಸಿದ ಹಾಗಾಯ್ತು!
ಖಾನಾವಳಿಯ ಹಾಲಿನಲ್ಲಿ 1923ನೇ ಇಸವಿಯಲ್ಲಿ ಸಹಬೋಜನ ಆಯಿತು ಎನ್ನುವ ಒಂದೇ ವಿಷಯದ ಮೇಲೆ ಅಸ್ಪಶ್ಯತೆ ನಿವಾರಣೆಗೆ ಜನ ತಯಾರಾಗಿದ್ದಾರೆ ಅನ್ನುವವರು ಶುದ್ಧ ಬೋಳೆ ಸ್ವಭಾವದವರಾಗಿರಬೇಕು ಅಥವಾ ಲುಚ್ಛರಿರಬೇಕು. ಅಂಥವರಿಗೆ ನಾವು ಸೂಚಿಸುವುದೇನೆಂದರೆ, ಪಶು ಪಕ್ಷಿಗಳು ಹೇಗೆ ಒಂದೇ ಕೊಟ್ಟಿಗೆಯಲ್ಲಿ ಒಟ್ಟಿಗೆ ಕೂತು ಮೇಯುತ್ತದೆಯೋ ಹಾಗೆ ಒಂದು ನಿರ್ಜನ ಪ್ರದೇಶದಲ್ಲಿ ಕೆಲವು ಸ್ಪಶ್ಯರು ಮತ್ತು ಅಸ್ಪಶ್ಯರು ಒಂದೇ ಆಕಾಶದಡಿಯಲ್ಲಿ ಕೂತು ಊಟ ಮಾಡಿರಬಹುದು! ಅದೇನು ದೊಡ್ಡ ವಿಷಯ? ಮನೆಯ ಹೊರಗೆ ಇರಾನಿ ಹೊಟೇಲಿನಲ್ಲಿ ಹೊಲೆಯರು ಮತ್ತು ಬ್ರಾಹ್ಮಣರು ಒಂದೇ ಮೇಜಿನ ಮೇಲೆ ಉಣ್ಣುತ್ತಾರೆ ಎಂದರೆ ಬ್ರಾಹ್ಮಣರು ಹೊಲೆಯರಿಂದ ಮೈಲಿಗೆಯಾಗುವುದಿಲ್ಲ ಅಂದರೆ ಎಷ್ಟು ಹಾಸ್ಯಾಸ್ಪದವಾಗುತ್ತದೋ, ಹಾಗೆ ಆಲದ ಮರದ ಕೆಳಗೆ ಎರಡು ಜಾತಿಯ ಕೆಲವು ಭೂತಗಳು ಒಟ್ಟಿಗೆ ಕುಳಿತು ಅನ್ನದ ಅಗುಳು ತಿಂದರೆ ಅಸ್ಪಶ್ಯತೆ ಹೋಯಿತು ಎನ್ನುವುದೂ ಅಷ್ಟೇ ಹಾಸ್ಯಾಸ್ಪದವಾಗುತ್ತದೆ. ಇಲ್ಲದಿದ್ದರೆ ಮುಂಬೈ ಒಂದರಲ್ಲೇ 1923ರಲ್ಲಿ ಸಹಭೋಜನಕ್ಕೆ ತಯಾರಾದ ಹಿಂದೂ ಸಮಾಜ 1928ರಲ್ಲಿ ಒಂದೇ ಕಡೆ ನೀರು ಕುಡಿಯುವ ಪ್ರಸಂಗ ಬಂದಾಗ ಧರ್ಮ ನಾಶವಾಯಿತು! ಧರ್ಮ ನಾಶವಾಯಿತು! ಎಂದು ಅರಚಬೇಕಾಗಿರಲಿಲ್ಲ.
ಮೇಲೆ ಹೇಳಿದ ಅವ್ಯವಸ್ಥಿತ ಸಹಭೋಜನವೆಂದರೆ ಒಂದು ರೀತಿಯ ತಮಾಷೆಯೇ ಆಗಿತ್ತು. ಅಂಥ ಒಂದು ಸಹಭೋಜನದ ಸಾಕ್ಷಿ ಕೊಟ್ಟು ಅಸ್ಪಶ್ಯತಾ ನಿವಾರಣೆಯ ಬಗ್ಗೆ ತಮ್ಮ ತಿಳಿಗೇಡಿತನವನ್ನು ಪ್ರದರ್ಶಿಸದ್ದಿದ್ದರೆ ಸಾಕು. ನಾಲ್ಕನೆಯವರು ಹೇಳುತ್ತಾರೆ; ನಾವು ಏನೂ ಮಾಡಿಲ್ಲದಿರಬಹುದು. ಆದರೆ ಬ್ರಿಟಿಷರು ಅಸ್ಪಶ್ಯರ ಸಲುವಾಗಿ ಏನು ಮಾಡಿದರು ಹೇಳಿ. ಇಂತಹ ವಿಪರೀತ ಕಾಳಜಿ ಇರುವ ಜನಗಳಿಗೆ ನಾವು ಸ್ಪಷ್ಟವಾಗಿ ಹೇಳಲು ಇಚ್ಛಿಸುವುದೇನೆಂದರೆ ಹಿಂದೂಗಳು ನಮಗೇನು ಮಾಡಿದರು ಎನ್ನುವ ಪ್ರಶ್ನೆಗೆ ಇದು ಉತ್ತರವಾಗುವುದಿಲ್ಲ. ಇದು ಒಣ ಸಮರ್ಥನೆ ಅಷ್ಟೇ. ಬ್ರಿಟಿಷರು ಹೇಳಿ ಕೇಳಿ ಪರಕೀಯರು. ಅವರೇನು ಮಾಡದಿದ್ದರೂ ನಮಗೆ ಅವರ ಮೇಲೆ ಕೋಪಿಸಿಕೊಳ್ಳುವ ಹಕ್ಕಿಲ್ಲ. ಆದರೆ ನೀವು ನಮ್ಮವರೆನ್ನುತ್ತೀರಿ, ನಮ್ಮನ್ನು ಒಪ್ಪಿಕೊಳ್ಳುತ್ತೀರಿ, ಪ್ರಸಂಗ ಬಂದರೆ ಆರ್ಯಧರ್ಮದ, ಆರ್ಯಸ್ತ್ರೀಯರ ಸಂರಕ್ಷಣೆಯ ಭಾರ ಹೊರಿಸುತ್ತೀರಿ, ಅಂಥವರು ನೀವೇನು ನಮಗೆ ಮಾಡಿದ್ದೀರಿ ಹೇಳಿ? ಬ್ರಿಟಿಷರು ಪರಕೀಯರು, ಸರಕಾರಿ ರೀತಿಯಲ್ಲಿ ಅಸ್ಪಶ್ಯತಾ ನಿವಾರಣಾ ಕಾರ್ಯದ ವಿಷಯದಲ್ಲಿ ಏನು ಸಹಾಯ ಮಾಡಬೇಕಾಗಿತ್ತೋ ಅದನ್ನು ಮಾಡಿಲ್ಲದಿರಬಹುದು. ಆದರೆ ಯಾವ ವಿಷಯ ಸಂಪೂರ್ಣ ಜನಾಭಿಪ್ರಾಯದ ಮೇಲಿತ್ತೋ ಅದನ್ನು ಕಾರ್ಯರೂಪಕ್ಕೆ ತರಲು ಯಾವ ಕಾಯ್ದೆಯ ಅವಶ್ಯವಿರಲಿಲ್ಲವೋ ಅಂಥ ಯಾವ ಕೆಲಸ ನೀವು ಮಾಡಿದ್ದೀರಿ? ಹಿಂದೂ ದೇವಾಲಯದ ಬಾಗಿಲುಗಳನ್ನು ತೆರೆದಿರಾ? ಶಾಲೆಗಳನ್ನು ಮುಕ್ತವಾಗಿಸಿದಿರಾ? ಯಾಕೆ ಸಾರ್ವಜನಿಕ ಜಲಾಶಯಗಳನ್ನು ತೆರೆದಿಲ್ಲ? ಈ ವಿಷಯದಲ್ಲಿ ಬ್ರಿಟಿಷರ ಕಡೆಯಿಂದ ಯಾವ ಅಡ್ಡಿಯೂ ಇರಲಿಲ್ಲ! ಇದು ಮನಸ್ಸಿನದ್ದೇ ಆಗಿತ್ತು. ಅದನ್ನು ಮಾಡುವುದು ಬಿಡುವುದು ನಿಮ್ಮ ಕೈಲೇ ಇತ್ತು. ಆದರೆ ಇದರಲ್ಲಿ ಒಂದಾದರೂ ಕಾರ್ಯವನ್ನು ನೀವು ಮಾಡಿದ್ದೀರಾ? ಇದರಲ್ಲಿ ಒಂದೂ ಸಹ ನೀವು ಮಾಡಿಲ್ಲ. ಅಷ್ಟೇ ಅಲ್ಲ, ಅದನ್ನು ಕಾರ್ಯರೂಪಕ್ಕೆ ತರಲು, ಜನರ ಮನಸ್ಸನ್ನು ಪರಿವರ್ತಿಸುವ ಅಲ್ಪಸ್ವಲ್ಪವಾದರೂ ಪ್ರಯತ್ನ ಕೂಡ ಕಾಣಬರುತ್ತಿಲ್ಲ. ಸ್ವರಾಜ್ಯಕ್ಕಾಗಿ ಪಣತೊಟ್ಟ ಕಾಂಗ್ರೆಸ್ ಭಕ್ತಾದಿಗಳು 1917ರ ತನಕ, ಮೊದಲು ರಾಜಕೀಯ, ನಂತರ ಸಾಮಾಜಿಕ ಎಂದು ಹೇಳಿ ಸಮುದಾಯದ ಪ್ರಶ್ನೆಯನ್ನು ವಿಭಜಿಸಿ ಬರೀ ರಾಜಕೀಯ ಪ್ರಶ್ನೆಗಾಗಿಯೇ ನಿರರ್ಥಕ ಚರ್ಚೆಯಲ್ಲಿ ಕಳೆದರು. ಅಸ್ಪಶ್ಯತಾ ನಿವಾರಣೆಗೆ ಅಷ್ಟು ಮಹತ್ವ ಕೊಡಲಿಲ್ಲ.
(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)