ಭಾರತದ ಪೊಲೀಸರಿಂದ ‘ಲಾಠಿ ಚಾರ್ಜ್’ನ ದುರ್ಬಳಕೆ
ಬ್ರಿಟಿಷರ ವಸಾಹತುಶಾಹಿಯಿಂದ ಭಾರತ ಇತರ ವಿಭಾಗಗಳು ಹೊರಬಂದಿವೆ ಯಾದರೂ, ಪೊಲೀಸ್ ಪಡೆ ಮಾತ್ರ ಇನ್ನೂ ಓಬಿರಾಯನ ಕಾಲದ ವಿಧಾನದಲ್ಲೇ ಮುಳುಗಿದೆ. ಭಾರತದ ರೂಲ್ ಆಫ್ ಲಾ (ಕಾನೂನು ವ್ಯವಸ್ಥೆ) ರೂಲ್ ಆಫ್ ಪೊಲೀಸ್ ಆಗಿ ಪರಿವರ್ತನೆಯಾಗುವ ಮೊದಲು ತುರ್ತಾಗಿ ಪೊಲೀಸ್ ವ್ಯವಸ್ಥೆಯಲ್ಲಿ ಸುಧಾರಣೆಯಾಗಬೇಕಾಗಿದೆ.
‘‘ಉಪ್ಪಿನ ಸತ್ಯಾಗ್ರಹ, ಆಮರಣ ಉಪವಾಸ ಮತ್ತು ‘‘ಮಾಡು ಇಲ್ಲವೇ ಮಡಿ’’ಯ ದೇಶದಲ್ಲಿ ಒಂದು ನಿಶ್ಯಸ್ತ್ರ, ಶಾಂತಿಯುತ ಪ್ರತಿಭಟನಾ ಮೆರವಣಿಗೆಯು ಕಾನೂನಿನ ಒಂದು ಶಾಪವಲ್ಲ.’’
-ನ್ಯಾಯಮೂರ್ತಿ ಕೆ.ವಿ. ಕೃಷ್ಣ ಅಯ್ಯರ್
ಈ ದಿನಗಳಲ್ಲಿ ‘ಲಾಠಿ ಚಾರ್ಜ್ ಎಂಬುದು ಪ್ರತಿಯೊಬ್ಬ ಪೊಲೀಸ್ ಸಿಬ್ಬಂದಿಯ ಟೂಲ್‌ಕಿಟ್‌ನಲ್ಲಿರುವ ಅವಶ್ಯಕವಾದ ಒಂದು ಸಾಧನ ಅನಿಸುತ್ತದೆ. ಲಾಠಿ ಚಾರ್ಜ್ ಅಥವಾ ಬೇಟನ್ ಚಾರ್ಜ್ ಬ್ರಿಟಿಷ್ ಯುಗದಲ್ಲಿ ಗುಂಪು ನಿಯಂತ್ರಣದ ಒಂದು ಭಾಗವಾಗಿದ್ದರೆ ಸ್ವತಂತ್ರ ಭಾರತದಲ್ಲಿ ಅದನ್ನು ಸಾಮಾನ್ಯವಾಗಿ ಹಿಂಸಾನಿರತ ಗುಂಪನ್ನು ಚದುರಿಸಲು ಹಾಗೂ ದೊಂಬಿಗಳಾಗದಂತೆ ತಡೆಯಲು ಬಳಸಲಾಗುತ್ತಿತ್ತು. ಅದೇನಿದ್ದರೂ, ಇತ್ತೀಚಿನ ದಿನಗಳಲ್ಲಿ ಲೇಖಕರ ಲೇಖನಿಯನ್ನು ಪುಡಿಗಟ್ಟಲು ಮತ್ತು ವಿದ್ಯಾರ್ಥಿ ಪ್ರತಿಭಟನೆಗಳನ್ನು ಹತ್ತಿಕ್ಕಲು ಅದನ್ನು ಬಳಸಲಾಗುತ್ತಿದೆ. 2014ರಿಂದ ಜವಾಹರಲಾಲ್ ನೆಹರೂ ಯೂನಿವರ್ಸಿಟಿ (ಜೆಎನ್‌ಯು), ಬನಾರಸ್ ಹಿಂದೂ ಯೂನಿವರ್ಸಿಟಿ (ಬಿಎಚ್‌ಯು)ಯಂತಹ ಭಾರತದ ಹಲವು ಪ್ರಮುಖ ವಿಶ್ವ ವಿದ್ಯಾನಿಲಯಗಳಲ್ಲಿ ಬಾಹ್ಯ ಹಾಗೂ ಆಂತರಿಕ ಕಾರಣಗಳಿಗಾಗಿ ಸಂಘಟನೆ ಪ್ರತಿಭಟನೆಗಳು ನಡೆದಿವೆ.
ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕಿಗೆ ಸಾಂವಿಧಾನಿಕ ಖಾತರಿ
ಭಾರತದ ಸಂವಿಧಾನವು ನಾಗರಿಕರ ಮೂಲಭೂತಹಕ್ಕುಗಳನ್ನು ರಕ್ಷಿಸುತ್ತದೆ. ಇದರಲ್ಲಿ ವಿದ್ಯಾರ್ಥಿಗಳಿಗೆ ತಮ್ಮ ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಮತ್ತು ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕು ಕೂಡ ಸೇರಿದೆ. ಸಂವಿಧಾನದ 19(1)(ಬಿ)ಪರಿಚ್ಛೇದವು ಎಲ್ಲ ನಾಗರಿಕರಿಗೆ ನಿಶ್ಯಸ್ತ್ರರಾಗಿ, ಶಾಂತಿಯುತವಾಗಿ ಸಭೆಸೇರುವ ಹಕ್ಕನ್ನು ನೀಡಿದರೆ, 19(1)(ಡಿ)ಯ ಪ್ರಕಾರ ಸ್ವತಂತ್ರವಾಗಿ ಮುಕ್ತವಾಗಿ ಸಂಚರಿಸುವ ಹಕ್ಕನ್ನು ನೀಡುತ್ತದೆ. ಈ ನಿಯಮದ ಪ್ರಕಾರ ನಾಗರಿಕರಿಗೆ ಶಾಂತಿಯುತವಾಗಿ ಪ್ರತಿಭಟನೆ ನಡೆಸುವ ಹಕ್ಕನ್ನು ಅಲ್ಲಗಳೆಯುವಂತಿಲ್ಲ, ಸ್ವಾತಂತ್ರ ಹೋರಾಟದಲ್ಲಿ ಸಂಘಟಿತ ಹಾಗೂ ಅಹಿಂಸಾತ್ಮಕ ಪ್ರತಿಭಟನೆಗಳು ವಹಿಸಿದ್ದ ಪಾತ್ರವನ್ನು ಮನಗಂಡು ಸಂವಿಧಾನ ನಿರ್ಮಾತೃಗಳು ಈ ಹಕ್ಕನ್ನು ಸಮರ್ಥನಿಯವಾದ ಒಂದು ಹಕ್ಕನ್ನಾಗಿ ಮಾಡಿದರು. ಭಾರತದ ಸಾರ್ವಭೌಮತೆ ಹಾಗೂ ಏಕತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಯ ಚೌಕಟ್ಟಿನೊಗೆ ಈ ಹಕ್ಕುಗಳನ್ನು ನೀಡಲಾಗಿದೆ.
ಪ್ರತಿಭಟನೆಗಳು ಶಾಂತಿಯುತವಾಗಿರುವಂತೆ ನೋಡಿಕೊಳ್ಳಲು ಪೊಲೀಸರಿಗೂ ವ್ಯಾಪಕವಾದ ಕಾನೂನಾತ್ಮಕ ಅಧಿಕಾರಗಳನ್ನು ನೀಡಲಾಗಿದೆ. ಭಾರತೀಯ ದಂಡ ಸಂಹಿತೆಯ 141ನೇ ಸೆಕ್ಷನ್ ‘ಕಾನೂನುಬಾಹಿರವಾಗಿ ಸಭೆ ಸೇರುವುದನ್ನು’, ಕ್ರಿಮಿನಲ್ ಬಲದ ಶಕ್ತಿಯ ಮೂಲಕ ಕೇಂದ್ರ ಅಥವಾ ರಾಜ್ಯ ಸರಕಾರದ ಯಾವುದೇ ಕಾನೂನನ್ನು ಅನುಷ್ಠಾನಗೊಳಿಸದಂತೆ ತಡೆಯುವ ಪ್ರಯತ್ನವೆಂದು ವ್ಯಾಖ್ಯಾನಿಸುತ್ತದೆ. ಹಾಗೆಯೇ ‘ಸಾರ್ವಜನಿಕ ಉಪಟಳ’, ‘ಸಾರ್ವಜನಿಕ ವ್ಯವಸ್ಥೆ ಮತ್ತು ಶಾಂತಿಯನ್ನು ಕಾಪಾಡುವುದು’ ಇತ್ಯಾದಿಯನ್ನು ಕೂಡ ೂಕ್ತ ಸೆಕ್ಷನ್‌ಗಳಲ್ಲಿ ವಿವರಿಸಲಾಗಿದೆ.
ಶಾಂತಿಗೆ ಭಂಗ ಉಂಟಾಗುವ ಸಂದರ್ಭಗಳಲ್ಲಿ ಶಾಂತಿ ಹಾಗೂ ಸುವ್ಯವಸ್ಥೆಯನ್ನು ಕಾಪಾಡುವುದಕ್ಕಾಗಿ ಪೊಲೀಸರಿಗೆ ಜಿಲ್ಲಾ ನ್ಯಾಯಾಧೀಶರಿಗೆ ನಾಗರಿಕ (ಸಿವಿಲ್) ಬಲ, ಸಶಸ್ತ್ರ ಪಡೆಗಳ ಬಲ ಪ್ರಯೋಗಕ್ಕೂ ಅವಕಾಶ ನೀಡಲಾಗಿದೆ. ಹಾಗೆಯೇ ಕೆಲವು ನಿಷೇಧಗಳನ್ನು ವಿಧಿಸಲಾಗಿದೆ. ಈ ನಿಷೇಧಗಳು ನ್ಯಾಯಯುತ, ರೀಸನಬಲ್ ಎಂಬುದನ್ನು ಹೇಗೆ ಖಾತರಿ ಪಡಿಸಿಕೊಳ್ಳುವುದು? ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ 1979ರಲ್ಲಿ ನೀಡಿದ ಒಂದು ತೀರ್ಪಿನಲ್ಲಿ ಈ ಪ್ರಶ್ನೆಗೆ ಉತ್ತರವಿದೆ.
ಒಂದು ಗುಂಪನ್ನು ಚದುರಿಸಲು ಸಂಬಂಧಿತ ನ್ಯಾಯಾಧೀಶರು ಪೊಲೀಸರಿಗೆ ಬಲಪ್ರಯೋಗಿಸಲು ಅನುಮತಿ ನೀಡುವ ಮೊದಲು ಮೂರು ರತ್ತುಗಳನ್ನು ಗಮನಿಸಬೇಕು:
♦ ಹಿಂಸಾಕೃತ್ಯವನ್ನು ನಡೆಸುವ ಉದ್ದೇಶದಿಂದ ಕಾನೂನು ಬಾಹಿರವಾಗಿ ಜನರು ಗುಂಪು ಕೂಡಿರಬೇಕು ಅಥವಾ ಸಾರ್ವಜನಿಕ ಶಾಂತಿ ಕೆಡಿಸುವ ಸಾಧ್ಯತೆ ಇರುವ ಐದು ಅಥವಾ ಐದಕ್ಕಿಂತ ಹೆಚ್ಚು ಮಂದಿ ಸಭೆ ಸೇರಿರಬೇಕು.
♦ ಎರಡನೆಯದಾಗಿ, ಓರ್ವ ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್ ಜನರ ಗುಂಪಿಗೆ ಚದುರಿ ಹೋಗುವಂತೆ ಆಜ್ಞೆ ಮಾಡಬೇಕು.
ಇಂತಹ ಆಜ್ಞೆಗಳ ಹೊರತಾಗಿಯೂ, ಜನರು ಚದುರುವುದಿಲ್ಲ, ಐಪಿಸಿಯ ಸೆಕ್ಷನ್ 141ರ ಪ್ರಕಾರ ಒಂದು ಅಸೆಂಬ್ಲಿ ‘ಕಾನೂನು ಬಾಹಿರ/ಅಕ್ರಮ’ವಾದಾಗ, ಮೇಲೆ ಉಲ್ಲೇಖಿಸಿದ ಅಧಿಕಾರಗಳು ಪೊಲೀಸರಿಗೆ ದೊರಕುತ್ತವೆ.
‘‘ಗುಂಪು ಸೇರುವ ಜನರ ಸಾಮಾನ್ಯಗಿರಿ(ಕಾಮನ್ ಆಬ್ಜೆಕ್ಟ್)ಯೇ ಅಪರಾಧದ ತಿರುಳು’’ ಎನ್ನುತ್ತಾರೆ ಪ್ರೊ. ಫೈಝಲ್ ಮುಸ್ತಫಾ. ಅಲಿಗಡ ಮುಸ್ಲಿಂ ವಿಶ್ವವಿದ್ಯಾನಿಲಯ ದಲ್ಲಿ ಇತ್ತೀಚೆಗೆ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯ ಪ್ರಕರಣದಲ್ಲಿ ಕಾಮನ್ ಆಬ್ಜೆಕ್ಟ್, ಅತಿಕ್ರಮಣಕಾರರನ್ನು ಬಂಧಿಸಬೇಕು ಮತ್ತು ಅವರ ವಿರುದ್ಧ ಒಂದು ಎಫ್‌ಐಆರ್ ದಾಖಲಿಸಬೇಕು ಎಂಬುದಾಗಿತ್ತೇ ಹೊರತು ಬೇರೇನೂ ಆಗಿರಲಿಲ್ಲ. ಆದರೂ ವಾದಕ್ಕೋಸ್ಕರ, ಅಲ್ಲಿ ಒಂದು ಕಾನೂನು ವಿರೋಧಿ ಅಸೆಂಬ್ಲಿ(ಜನರ ಗುಂಪು) ನೆರೆದಿತ್ತು ಎನ್ನೋಣ.
ಗುಂಪು ನಿಯಂತ್ರಣ ಮತ್ತು ಸಶಸ್ತ್ರ ಪಡೆಗಳ ಬಳಕೆ
ನಾಗರಿಕ ಬಲ ಪ್ರಯೋಗಗಳಿಂದ ಒಂದು ಗುಂಪು ಚದುರದೆ ಇದ್ದಾಗ, ಕ್ರಿಮಿನಲ್ ದಂಡ ಸಂಹಿತೆಯ 130ನೇ ಸೆಕ್ಷನ್ ಪ್ರಕಾರ, ಮ್ಯಾಜಿಸ್ಟ್ರೇಟರಿಗೆ ಬಲ ಪ್ರಯೋಗದ( ಶಸ್ತ್ರ ಬಲದ) ಮೂಲಕ ಗುಂಪು ಚದುರುವಂತೆ ಮಾಡುವ ಅಧಿಕಾರವಿದೆ. ಹೀಗೆ ಮಾಡುವಾಗಲೂ ಅವರು ಅನುಸರಿಸಬೇಕಾದ ನಿಯಮಗಳನ್ನು ರೂಪಿಸಲಾಗಿದೆ.
ಕಾರ್ಯಾಚರಣೆಯ ಉದ್ದಕ್ಕೂ ನ್ಯಾಯಾಧೀಶರು(ಹಾಜರಿದ್ದಲ್ಲಿ) ಮತ್ತು ಹಿರಿಯ ಪೊಲೀಸ್ ಅಧಿಕಾರಿ ಪರಸ್ಪರ ಸಹಕಾರದಿಂದ ಕಾರ್ಯಾಚರಿಸಬೇಕು. ಚದುರಿ ಹೋಗುವಂತೆ ಜನರಿಗೆ ಮೊದಲು ಆಜ್ಞಾಪಿಸಬೇಕು. ಆ ಆಜ್ಞೆಯನ್ನು ಜನರು ಉಲ್ಲಂಘಿಸಿ, ಕದಲದೇ ಇದಾ್ದಗ ಬಲಪ್ರಯೋಗ ಮಾಡಲಾಗುತ್ತದೆ.
ನ್ಯಾಯಾಧೀಶರು ಸ್ಥಳದಲ್ಲಿ ಇದ್ದರೆ ಅವರು, ಇಲ್ಲವಾದರೆ ಹಿರಿಯ ಪೊಲೀಸ್ ಅಧಿಕಾರಿ, ಬಲಪ್ರಯೋಗದ ಎಲ್ಲ ಜವಾಬ್ದಾರಿಯನ್ನು ಹೊರಬೇಕು. ಬಲಪ್ರಯೋಗ ಮಾಡುವಾಗಲೂ ಅತ್ಯಂತ ಕಡಿಮೆ ಅಪಾಯಕಾರಿಯಾದ/ ಹಾನಿ ಉಂಟು ಮಾಡುವ ಶಸ್ತ್ರಗಳನ್ನು ಬಳಸಬೇಕು. ಗುಂಪುಚದುರಿದ ತಕ್ಷಣ ಬಲಪ್ರಯೋಗ ನಿಲ್ಲಬೇಕು.
ಅನಿತಾ ಠಾಕೂರ್ ವರ್ಸಸ್ ಸ್ಟೇಟ್ ಆಫ್ ಜಮ್ಮು ಮತ್ತು ಕಾಶ್ಮೀರ (2016) ಪ್ರಕರಣದಲ್ಲಿ ‘‘ಜನರು ಶಾಂತಿಯುತವಾಗಿ ಸೇರುವಲ್ಲಿ ಪೊಲೀಸ್ ಬಲಪ್ರಯೋಗದ ಬಳಕೆಯ ಅಗತ್ಯವೇ ಇಲ್ಲ’’ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಎಎಮ್‌ಯುನಲ್ಲಿ ಇತ್ತೀಚೆಗೆ ನಡೆದ ಘಟನೆ 2018ರ ಮೇ 2ರಂದು ಸುಮಾರು 15ರಿಂದ 20 ಮಂದಿಯಷ್ಟು ಇದ್ದ ಬಲಪಂಥೀಯ ಗೂಂಡಾಗಳ ಗುಂಪೊಂದು ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯ ಮುಖ್ಯದ್ವಾರದ ಕಡೆಗೆ ‘‘ಹಿಂದೂಸ್ಥಾನ್ ಮೆ ರಹನಾ ಹೋಗಾ, ವಂದೇ ಮಾತರಂ ಕಹನಾ ಹೋಗಾ’’ ಎಂದು ಕೂಗುತ್ತಾ ಬಂತು.
ಅಭಿವ್ಯಕ್ತಿ ಸ್ವಾತಂತ್ರದ ಹಕ್ಕಿನಲ್ಲಿ ಅವಹೇಳನಕಾರಿ ಭಾಷೆಯನ್ನು ಬಳಸುವ ಹಕ್ಕು ಸೇರುವುದಿಲ್ಲ. ಗೂಂಡಾಗಳು ಹೀಗೆ ಬಂದಾಗ, ಭಾರತದ ಮಾಜಿ ಉಪರಾಷ್ಟ್ರಪತಿ ಎಂ. ಹಾಮಿದ್ ಅನ್ಸಾರಿಯವರು ಪಕ್ಕದ ಕಟ್ಟಡದಲ್ಲಿದ್ದರು. ಅಲ್ಲಿದ್ದ ಪೊಲೀಸರು ಅವರಿಗೆ ಸೂಕ್ತ ಭದ್ರತೆಯೊದಗಿಸಲು ವಿಫಲರಾದದ್ದಲ್ಲದೇ ಅಂದಿನ ದಿನದ ವೀಡಿಯೊ ಫುಟೇಜ್, ಗೂಂಡಾಗಳಿಗೆ ಪೊಲೀಸರು ಭದ್ರತೆ ನೀಡಿ ಅವರನ್ನು ಕರೆದೊಯ್ಯುವುದನ್ನು ತೋರಿಸುತ್ತದೆ.
ಆ ಗೂಂಡಾಗಳನ್ನು ಬಂಧಿಸಲು ಪೊಲೀಸರು ನಿರಾಕರಿಸಿದಾಗ ಅದನ್ನು ಪ್ರತಿಭಟಿಸಿದ ವಿದ್ಯಾರ್ಥಿಗಳು ಸಮೀಪದ ಪೊಲೀಸ್ ಠಾಣೆಗೆ ಹೋದರು. ಆಗ ಪೊಲೀಸರು ವಿದ್ಯಾರ್ಥಿಗಳ ಮೇಲೆ ಬರ್ಬರ ಲಾಠಿ ಚಾರ್ಚ್ ಮಾಡಿದರು. 30 ವಿದ್ಯಾರ್ಥಿಗಳಿಗೆ ಗಾಯಗಳಾದವು. 2018ರ ಮಾರ್ಚ್‌ನಲ್ಲಿ ಇಂತಹದ್ದೇ ರೀತಿಯ ಲಾಠಿ ಚಾರ್ಚ್ ದಿಲ್ಲಿಯ ಪೊಲೀಸರಿಂದ ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ನಡೆ ದಿತ್ತು. ಪ್ರತಿಭಟನಾನಿರತ ವಿದ್ಯಾರ್ಥಿನಿಯರನ್ನು ಪೊಲೀಸರು ಎಳೆದಾಡಿ ಪದೇ ಪದೇ ಅವರ ತಲೆಗೆ ಹೊಡೆದಿದ್ದರು ಹಾಗೂ ಅರ ಕೂದಲು ಹಿಡಿದು ಎಳೆದಾಡಿದ್ದರು.
ಬ್ರಿಟಿಷರ ವಸಾಹತುಶಾಹಿಯಿಂದ ಭಾರತ ಇತರ ವಿಭಾಗಗಳು ಹೊರಬಂದಿವೆ ಯಾದರೂ, ಪೊಲೀಸ್ ಪಡೆ ಮಾತ್ರ ಇನ್ನೂ ಓಬಿರಾಯನ ಕಾಲದ ವಿಧಾನದಲ್ಲೇ ಮುಳುಗಿದೆ. ಭಾರತದ ರೂಲ್ ಆಫ್ ಲಾ (ಕಾನೂನು ವ್ಯವಸ್ಥೆ) ರೂಲ್ ಆಫ್ ಪೊಲೀಸ್ ಆಗಿ ಪರಿವರ್ತನೆಯಾಗುವ ಮೊದಲು ತುರ್ತಾಗಿ ಪೊಲೀಸ್ ವ್ಯವಸ್ಥೆಯಲ್ಲಿ ಸುಧಾರಣೆಯಾಗಬೇಕಾಗಿದೆ.
ಕೃಪೆ: thewire.in