ನಿಪಾಹ್ ಸೈಡ್ ಎಫೆಕ್ಟ್ : ಶಿವಮೊಗ್ಗದಲ್ಲಿ ದಿಢೀರ್ ಕುಸಿದ ಹಣ್ಣುಗಳ ಮಾರಾಟ - ವ್ಯಾಪಾರಿಗಳು ತತ್ತರ!
ಶಿವಮೊಗ್ಗ, ಮೇ 25: ಪ್ರಸ್ತುತ ಎಲ್ಲೆಡೆ ನಿಪಾಹ್ ವೈರಸ್ ಬಗ್ಗೆಯೇ ಚರ್ಚೆಯಾಗುತ್ತಿದೆ. ಸಾಮಾಜಿಕ ಜಾಲತಾಣ, ಮಾಧ್ಯಮಗಳಲ್ಲಿ ಈ ವೈರಸ್ ಸಾಕಷ್ಟು ಸದ್ದು ಮಾಡುತ್ತಿದೆ. ಈ ರೋಗ ಹರಡದಂತೆ ವಹಿಸಬೇಕಾದ ಮುನ್ನೆಚ್ಚರಿಕೆಗಳ ಕ್ರಮಗಳ ಕುರಿತಂತೆ ಹಲವು ಮಾಹಿತಿಗಳು ಹರಿದಾಡುತ್ತಿವೆ. ಇದರ ಜೊತೆಜೊತೆಗೆ ವದಂತಿ, ಗೊಂದಲಗಳ ಕಾರುಬಾರು ಕೂಡ ಜೋರಾಗಿದೆ. ಇದು ನಾಗರಿಕರ ಆತಂಕ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.
ಮತ್ತೊಂದೆಡೆ ನಿಪಾಹ್ ವೈರಸ್ ಪ್ರಕರಣ ಬೆಳಕಿಗೆ ಬಂದು ಈ ವಿಷಯ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೀಡಾದ ನಂತರ, ಶಿವಮೊಗ್ಗ ನಗರದಲ್ಲಿ ಹಣ್ಣುಗಳ ಮಾರಾಟ ದಿಢೀರ್ ಆಗಿ ಕುಸಿತಗೊಂಡಿರುವ ಮಾಹಿತಿಗಳು ವರ್ತಕ ವಲಯದಿಂದ ಕೇಳಿಬರುತ್ತಿದೆ.
ಪ್ರಸ್ತುತ ಮಾವು, ಹಲಸು ಸೇರಿದಂತೆ ಹಲವು ಹಣ್ಣುಗಳ ಸೀಸನ್ ಶುರುವಾಗಿದೆ. ಲೋಡ್‍ಗಟ್ಟಲೆ ಹಣ್ಣು ಮಾರುಕಟ್ಟೆಗೆ ಬರುತ್ತಿದೆ. ಇನ್ನೊಂದೆಡೆ ಹಣ್ಣುಗಳ ಮಾರಾಟದಲ್ಲಿ ದಿಢೀರ್ ಇಳಿಕೆ ಕಂಡುಬಂದಿರುವುದು, ಈ ವರ್ಗದ ವರ್ತಕರು ಅಕ್ಷರಶಃ ತತ್ತರಿಸುವಂತೆ ಮಾಡಿದೆ. ಭರ್‍ಪೂರ್ ವಹಿವಾಟು ನಡೆಸುವ ಸಮಯದಲ್ಲಿ ವ್ಯಾಪಾರವಿಲ್ಲದೆ ನಷ್ಟಕ್ಕೀಡಾಗುವಂತಾಗಿಸಿರುವುದು, ಸಗಟು ಹಾಗೂ ಚಿಲ್ಲರೆ ಹಣ್ಣು ಮಾರಾಟ ವಲಯದ ನಿದ್ದೆಗೆಡಿಸಿದೆ.
ಕುಸಿತ: ನಿಪಾಹ್ ವೈರಸ್ ಹರಡುವಿಕೆಗೆ ಬಾವಲಿ ಮೂಲವಾಗಿದೆ. ಬಾವಲಿ ಕಚ್ಚಿ ತಿಂದ ಹಣ್ಣು, ತರಕಾರಿ ಬಳಕೆ ಮಾಡಿದರೆ ನಿಪಾಹ್ ವೈರಸ್ ಸುಲಭವಾಗಿ ಹರಡಲಿದೆ. ಈ ಕಾರಣದಿಂದ ಬಾವಲಿ ತಿಂದ ಹಣ್ಣು, ತರಕಾರಿ ಸೇವಿಸದಂತೆ ನಾಗರೀಕರಿಗೆ ಸಲಹೆ ನೀಡಲಾಗುತ್ತಿದೆ. ಹಣ್ಣು ಸೇವನೆ ಮಾಡುವ ವೇಳೆ ಸೂಕ್ತ ಮುನ್ನೆಚ್ಚರಿಕೆವಹಿಸುವಂತೆ ಸಲಹೆ ಕೊಡಲಾಗುತ್ತಿದೆ. ಇದರ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹತ್ತು ಹಲವು ಸಲಹೆ-ಸೂಚನೆ ಮಾಹಿತಿಯ ಪ್ರವಾಹವೇ ಹರಿದಾಡುತ್ತಿದೆ.
ಇದು ಜನಸಾಮಾನ್ಯರಲ್ಲಿ ಗೊಂದಲ, ಭಯ ಉಂಟು ಮಾಡುತ್ತಿದೆ. ಈ ಕಾರಣದಿಂದ ಸರ್ವ ಪ್ರಿಯವಾದ ಮಾವು, ಹಲಸು ಸೇರಿದಂತೆ ಹಲವು ಹಣ್ಣುಗಳ ಸೇವನೆಗೆ ಕೆಲ ನಾಗರೀಕರು ಹಿಂದೇಟು ಹಾಕುತ್ತಿದ್ದಾರೆ. ಹಣ್ಣು ಖರೀದಿಸಿ ಮನೆಗೆ ಕೊಂಡೊಯ್ಯುವುದನ್ನೇ ನಿಲ್ಲಿಸಿದ್ದಾರೆ!
"ಹಣ್ಣು ಖರೀದಿಸಲು ಆಗಮಿಸುವ ಬಹುತೇಕ ನಾಗರೀಕರು ನಿಪಾಹ್ ವೈರಸ್ ಬಗ್ಗೆ ಮಾತನಾಡುತ್ತಾರೆ. ನಾವು ಹಣ್ಣುಗಳನ್ನು ಸಗಟು ಮಾರಾಟಗಾರರಿಂದ ತಂದು ಮಾರಾಟ ಮಾಡುತ್ತೆವೆ. ಎಲ್ಲದಕ್ಕಿಂತ ಮುಖ್ಯವಾಗಿ ಬಾವಲಿ ಮಾತ್ರವಲ್ಲ ಇತರೆ ಪ್ರಾಣಿಗಳು ಕಚ್ಚಿದ ಅಥವಾ ಹಾಳಾದ ಹಣ್ಣುಗಳನ್ನು ಮಾರಾಟ ಮಾಡುವುದಿಲ್ಲ. ಎಲ್ಲದಕ್ಕಿಂತ ಮುಖ್ಯವಾಗಿ ಈ ರೀತಿಯ ಹಣ್ಣುಗಳನ್ನು ಗ್ರಾಹಕರೇ ಖರೀದಿಸುವುದಿಲ್ಲ.
ಗ್ರಾಹಕರು ಕೇಳುವ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ನೀಡಲಾಗದ ಸ್ಥಿತಿ ತಮ್ಮಗಳದ್ದಾಗಿದೆ. ಕಳೆದೊಂದು ವಾರದಿಂದ ವ್ಯಾಪಾರವೇ ಇಳಿಕೆಯಾಗಿದೆ. ಲಾಭವಿರಲಿ ಹಾಕಿದ ಬಂಡವಾಳವೂ ಕೈಸೇರದಂತಾಗಿದೆ. ವ್ಯಾಪಾರವಾಗದೆ ಹಣ್ಣುಗಳು ಹಾಳಾಗುವಂತಾಗಿದೆ. ನಮ್ಮ ಗೋಳು ಕೇಳುವವರ್ಯಾರು ಇಲ್ಲದಂತಾಗಿದೆ. ನಿಪಾಹ್ ವೈರಸ್ ನಿಂದ ನಮ್ಮ ವ್ಯಾಪಾರವೇ ಹಳ್ಳ ಹಿಡಿಯುವಂತಾಗಿದೆ" ಎಂದು ಶಿವಮೊಗ್ಗ ನಗರದ ಸಾಗರ ರಸ್ತೆಯ ಹಣ್ಣು ವ್ಯಾಪಾರಿ ರಿಯಾಝ್ ಎಂಬುವರು ತಮ್ಮ ಅಳಲು ತೋಡಿಕೊಳ್ಳುತ್ತಾರೆ.
ಜೀವನ ದುಸ್ತರ: "ಕಳೆದ ಹಲವು ವರ್ಷಗಳಿಂದ ಹಣ್ಣು ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದೇನೆ. ಆದರೆ ಪ್ರಸ್ತುತ ಎದುರಾಗಿರುವ ಸ್ಥಿತಿ ಹಿಂದೆಂದೂ ತಮ್ಮ ಅನುಭವಕ್ಕೆ ಬಂದಿಲ್ಲ. ಸೀಸನ್ ಹಣ್ಣುಗಳ ಮಾರಾಟವೂ ಆಗುತ್ತಿಲ್ಲ. ಮಾವು, ಹಲಸು ಕೊಂಡೊಯ್ಯುವವರ ಸಂಖ್ಯೆ ಕುಸಿದಿದೆ. ಅದ್ಯಾವುದೋ ಬಾವಲಿ ರೋಗ ಬಂದಿದೆ ಎಂದು ಜನರು ಮಾತನಾಡುತ್ತಿದ್ದಾರೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಜೀವನ ನಡೆಸುವುದು ದುಸ್ತರವಾಗಿ ಪರಿಣಮಿಸಲಿದೆ' ಎಂದು ನಗರದ ಗಾಂಧಿಬಜಾರ್ ರಸ್ತೆಯಲ್ಲಿ ಹಣ್ಣುಗಳ ಮಾರಾಟ ನಡೆಸುವ ಇರ್ಫಾನ್ ಎಂಬವರು ತಿಳಿಸುತ್ತಾರೆ.
ನಷ್ಟ: ವ್ಯಾಪಾರಿಗಳು ಮಾತ್ರವಲ್ಲದೆ ಗ್ರಾಮೀಣ ಭಾಗದಿಂದಲೂ ಹಣ್ಣು ಮಾರಾಟ ಮಾಡಲು ನಗರಕ್ಕೆ ಹೆಚ್ಚಿನ ಸಂಖ್ಯೆಯ ರೈತರು ಆಗಮಿಸುತ್ತಾರೆ. ಆದರೆ ವ್ಯಾಪಾರದಲ್ಲಿ ಚೇತರಿಕೆ ಕಂಡುಬರುತ್ತಿಲ್ಲ. ನಿಪಾಹ್ ವೈರಸ್ ವಿಷಯವು ಜನಮಾನಸದಿಂದ ದೂರವಾದ ನಂತರವಷ್ಟೆ ವ್ಯಾಪಾರ ವೃದ್ದಿಯಾಗುವ ನಿರೀಕ್ಷೆಯಲ್ಲಿ ವ್ಯಾಪಾರಿಗಳಿದ್ದಾರೆ. ಕೆಲ ವ್ಯಾಪಾರಿಗಳಂತೂ ತಾತ್ಕಾಲಿಕವಾಗಿ ಹಣ್ಣು ವ್ಯಾಪಾರ ನಿಲ್ಲಿಸಿದ್ದಾರೆ. ಒಟ್ಟಾರೆ ನಿಪಾಹ್ ವೈರಸ್, ಹಣ್ಣು ವ್ಯಾಪಾರಿಗಳ ಪಾಲಿಗೆ ಕರಾಳವಾಗಿ ಪರಿಣಮಿಸಿರುವುದಂತೂ ಸತ್ಯವಾಗಿದೆ.
ಬಡ ವ್ಯಾಪಾರಿಗಳ ಪಾಡು ಹೇಳತೀರದಾಗಿದೆ
'ಹಣ್ಣು ವ್ಯಾಪಾರವೇ ಜೀವನ ಮೂಲವಾಗಿದೆ. ಸಾಲಸೋಲ ಮಾಡಿ ಈ ವ್ಯವಹಾರ ನಡೆಸುತ್ತಿದ್ದೆನೆ. ಆದರೆ ಕಳೆದ ಕೆಲ ದಿನಗಳಿಂದ ವ್ಯಾಪಾರ ಕಡಿಮೆಯಾಗಿದೆ. ಹಾಕಿದ ಬಂಡವಾಳವೂ ಬರುತ್ತಿಲ್ಲ. ಹಣ್ಣುಗಳು ಹಾಳಾಗಿ ಎಸೆಯುವಂತಾಗಿದೆ. ಇದರಿಂದ ನಮ್ಮಂತಹ ಬಡ ವ್ಯಾಪಾರಿಗಳ ಪಾಡು ಹೇಳತೀರದಾಗಿದೆ. ನಷ್ಟ ಹೆಚ್ಚಾಗುವಂತಾಗಿದೆ. ಜೀವನ ನಡೆಸುವುದೇ ದುಸ್ತರವಾಗಿ ಪರಿಣಮಿಸಿದೆ' ಎಂದು ಶಿವಮೊಗ್ಗ ನಗರದ ಸಾಗರ ರಸ್ತೆಯ ಫುಟ್‍ಪಾತ್‍ನಲ್ಲಿ ಹಣ್ಣು ವ್ಯಾಪಾರ ಮಾಡುವ ಇರ್ಫಾನ್ ಎಂಬುವರು ತಮ್ಮ ಅಳಲು ತೋಡಿಕೊಳ್ಳುತ್ತಾರೆ.
ನಾಗರೀಕರು ಗೊಂದಲಕ್ಕೊಳಗಾಗುವ ಅಗತ್ಯವಿಲ್ಲ : ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಿ.ಎಸ್.ಶಂಕರಪ್ಪ
ಜಿಲ್ಲೆಯ ಯಾವುದೇ ಪ್ರದೇಶದಲ್ಲಿಯೂ ನಿಫಾ ವೈರಸ್ ಕಂಡುಬಂದಿಲ್ಲ. ನಾಗರಿಕರು ಆತಂಕ, ಗೊಂದಲಕ್ಕೊಳಗಾಗುವ ಅಗತ್ಯವಿಲ್ಲ. ಆರೋಗ್ಯಯುತ ಹಣ್ಣುಗಳ ಸೇವನೆ ಮಾಡಬಹುದಾಗಿದೆ. ಹಣ್ಣು ಸೇವನೆ ಮಾಡುವ ಮುನ್ನ ಸೂಕ್ತವಾಗಿ ಸ್ವಚ್ಚಗೊಳಿಸಬೇಕು. ಪಕ್ಷಿ, ಪ್ರಾಣಿ ಕಚ್ಚಿದ, ಹಾಳಾದ ಹಣ್ಣುಗಳನ್ನು ಯಾವುದೇ ಕಾರಣಕ್ಕೂ ಸೇವಿಸಬಾರದು. ಬಾವಲಿಗಳು ಹೆಚ್ಚಾಗಿರುವ ಪ್ರದೇಶಗಳಿಂದ ಸಂಗ್ರಹಿಸಿದ ಸೇಂದಿ, ನೀರಾ ಸೇವಿಸಬಾರದು. ಕೈಗಳನ್ನು ಸಂಪೂರ್ಣವಾಗಿ ಶುದ್ದೀಕರಿಸಬೇಕು ಎಂದು ಜಿಲ್ಲಾ ಸಾಂಕ್ರಾಮಿಕ ರೋಗಗಳ ಕಣ್ಗಾವಲು ಘಟಕದ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಿ.ಎಸ್.ಶಂಕರಪ್ಪರವರು ನಾಗರೀಕರಿಗೆ ಸಲಹೆ ನೀಡುತ್ತಾರೆ.