ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಬಂದರೆ...
ನಮ್ಮಲ್ಲಿ ಹೆಚ್ಚಿನವರಿಗೆ ಆದಾಯ ತೆರಿಗೆ ಇಲಾಖೆಯ ಜೊತೆ ಸಂಬಂಧವೇ ಇಲ್ಲ. ಆದರೆ ನೋಟು ನಿಷೇಧದ ಬಳಿಕ ಬ್ಯಾಂಕುಗಳಲ್ಲಿ ಹೆಚ್ಚಿನ ಹಣವನ್ನು ಠೇವಣಿಯಿರಿಸಿದವರ ಮೇಲೆ ಇಲಾಖೆಯು ಕಣ್ಣಿರಿಸಿದ್ದು ಅವರಿಗೆ ನೋಟಿಸ್‌ಗಳನ್ನು ಕಳುಹಿಸುತ್ತಿದೆ. ಒಮ್ಮಿಮ್ಮೆ ನೀವು ನಡೆಸುತ್ತಿರುವ ಸಣ್ಣ ಉದ್ಯಮವೂ ಆದಾಯ ತೆರಿಗೆ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಬಹುದು. ಹೀಗಾಗಿ ಇಲಾಖೆಯ ಕಬಂಧ ಬಾಹುಗಳು ನಿಮ್ಮವರೆಗೆ ತಲುಪಿ ನಿಮಗೊಂದು ನೋಟಿಸ್‌ನ್ನು ಜಾರಿಗೊಳಿಸಿದರೆ ನೀವೇನು ಮಾಡುತ್ತೀರಿ...?
ಒಂದು ವೇಳೆ ಇಂತಹುದೊಂದು ನೋಟಿಸ್ ನಿಮಗೆ ಬಂದರೆ ಗಾಬರಿಗೊಳ್ಳಬೇಕಿಲ್ಲ, ಆದರೆ ಅದನ್ನು ಖಂಡಿತ ನಿರ್ಲಕ್ಷಿಸಬೇಡಿ. ನಿಮಗೆ ನೋಟಿಸ್‌ನ್ನು ಯಾಕೆ ಕಳುಹಿಸಲಾಗಿದೆ ಎನ್ನುವುದನ್ನು ಸರಿಯಾಗಿ ತಿಳಿದುಕೊಳ್ಳಿ ಮತ್ತು ಎಚ್ಚರಿಕೆಯಿಂದ ಅದನ್ನು ನಿಭಾಯಿಸಿ. ಇಲ್ಲದಿದ್ದರೆ ನಿಮ್ಮ ತೆರಿಗೆ ಪಾವತಿಗಳ ಜೊತೆಗೆ ಭಾರೀ ದಂಡವನ್ನೂ ನೀವು ತೆರಬೇಕಾಗಬಹುದು.
ನೆನಪಿಡಿ, ನೀವು ಆದಾಯ ತೆರಿಗೆ ನೋಟಿಸ್‌ನ್ನು ಸ್ವೀಕರಿಸಿದ್ದೀರಿ ಎಂದ ಮಾತ್ರಕ್ಕೆ ನೀವು ಅಪರಾಧವನ್ನು ಎಸಗಿದ್ದೀರಿ ಎಂದು ಅರ್ಥವಲ್ಲ. ಹಲವೊಮ್ಮೆ ತೆರಿಗೆ ರಿಟರ್ನ್ ಗಳನ್ನು ಸಲ್ಲಿಸುವಲ್ಲಿ ಆಗಿರುವ ಸಣ್ಣ ತಪ್ಪುಗಳಂತಹ ನಿರುಪದ್ರವಿ ಕಾರಣಗಳಿಗಾಗಿ ಅಥವಾ ಪ್ರಾಥಮಿಕ ಮಾಹಿತಿಗಳ ವಿಚಾರಣೆಗಾಗಿ ಈ ನೋಟಿಸ್‌ಗಳನ್ನು ಕಳುಹಿಸಲಾಗುತ್ತದೆ. ಇಂತಹ ಪ್ರಕರಣಗಳಲ್ಲಿ ಕೋರಲಾಗಿರುವ ಮಾಹಿತಿಗಳನ್ನು ಇಲಾಖೆಗೆ ಸಲ್ಲಿಸಿದರೆ ಸಾಕಾಗುತ್ತದೆ. ಆದರೆ ಕಾರಣ ಅಷ್ಟೊಂದು ಜುಜುಬಿಯಲ್ಲದಿದ್ದರೆ ಮತ್ತು ಅದು ನಿಮ್ಮ ಲೆಕ್ಕಪತ್ರಗಳ ಪರಿಶೀಲನೆಯನ್ನು ಬಯಸಿದ್ದರೆ ನೀವು ವಿವರವಾದ ತಪಾಸಣೆಗೆ ಸಿದ್ಧರಾಗಬೇಕಾಗುತ್ತದೆ.
ಆದಾಯ ತೆರಿಗೆ ಇಲಾಖೆಯ ನೋಟಿಸ್‌ನ್ನು ಸ್ವೀಕರಿಸಿದಾಗ ನೀವು ಮಾಡಬೇಕಾದ ಐದು ಕೆಲಸಗಳಿಲ್ಲಿವೆ....
♦ ನೋಟಿಸ್‌ನ್ನು ನೀವು ಸ್ವೀಕರಿಸಿದ ದಿನಾಂಕ ಮತ್ತು ಸಮಯವನ್ನು ಅದರ ಮೇಲೆ ಅಥವಾ ಬೇರೆ ಕಡೆಗೆ ಬರೆದಿಟ್ಟುಕೊಳ್ಳಿ. ಇದರಿಂದ ನಂತರ ನೀವು ಸಕಾಲದಲ್ಲಿ ಉತ್ತರ ಸಲ್ಲಿಸಿದ್ದೀರಿ ಎನ್ನುವುದನ್ನು ಸಮರ್ಥಿಸಿಕೊಳ್ಳಲು ಸಾಧ್ಯವಾಗುತ್ತದೆ. ನೀವು ಉತ್ತರ ಸಲ್ಲಿಸಬೇಕಾದ ಗಡುವು ನೋಟಿಸ್‌ನಲ್ಲಿ ಉಲ್ಲೇಖಿತವಾಗಿರುತ್ತದೆ ಮತ್ತು ಸಾಮಾನ್ಯವಾಗಿ ಅದು ನೀವು ನೋಟಿಸ್‌ನ್ನು ಸ್ವೀಕರಿಸಿದ ದಿನಾಂಕದಿಂದ ಆರಂಭವಾಗುವುದರಿಂದ ನೀವು ನೋಟಿಸ್ ಸ್ವೀಕಾರದ ದಿನಾಂಕ ಮತ್ತು ಸಮಯವನ್ನು ಬರೆದಿಟ್ಟುಕೊಳ್ಳುವುದು ಮಹತ್ವದ್ದಾಗಿದೆ. ಅಲ್ಲದೆ ನೋಟಿಸ್‌ನ್ನು ಕಳುಹಿಸಲಾದ ಲಕೋಟೆಯನ್ನು ಸರಿಯಾಗಿ ಇಟ್ಟುಕೊಳ್ಳಿ.
♦ ನೋಟಿಸ್‌ನ್ನು ಯಾರಿಗೆ ನೀಡಲಾಗಿದೆ ಎನ್ನುವುದನ್ನು ಸರಿಯಾಗಿ ಪರಿಶೀಲಿಸಿ. ಅದು ನಿಮ್ಮ ಹೆಸರಿನಲ್ಲಿದೆಯೇ ಅಥವಾ ಬೇರೆಯವರ ಹೆಸರಿನಲ್ಲಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ತೆರಿಗೆ ಅಧಿಕಾರಿಗಳು ನಿಮ್ಮ ಪಾನ್ ಸಂಖ್ಯೆ, ಹೆಸರು ಮತ್ತು ವಿಳಾಸಗಳ ಆಧಾರದಲ್ಲಿ ನೋಟಿಸ್‌ಗಳನ್ನು ಕಳುಹಿಸುತ್ತಾರೆ. ಹೀಗಾಗಿ ನೀವು ನೋಟಿಸ್‌ನ್ನು ಸ್ವೀಕರಿಸಿದಾಗ ಈ ಎಲ್ಲ ವಿವರಗಳನ್ನು ಸರಿಯಾಗಿ ಪರಿಶೀಲಿಸಿ.
♦ ನೋಟಿಸ್‌ನ ಸಿಂಧುತ್ವ ಮತ್ತು ಕಳುಹಿಸಿದವರ ವಿವರಗಳನ್ನು ಪರಿಶೀಲಿಸಿ.
ಕೆಲವು ನೋಟಿಸ್‌ಗಳನ್ನು ನಿಗದಿತ ಸಮಯದಲ್ಲಿ ಕಳುಹಿಸಬೇಕಾಗುತ್ತದೆ, ಇಲ್ಲದಿದ್ದರೆ ಅವು ಸಿಂಧುತ್ವವನ್ನು ಕಳೆದುಕೊಳ್ಳುತ್ತವೆ. ಹೀಗಾಗಿ ಆದಾಯ ತೆರಿಗೆ ಕಾಯ್ದೆಯ ಯಾವ ಕಲಮ್‌ನಡಿ ನೋಟಿಸ್‌ನ್ನು ಕಳುಹಿಸಲಾಗಿದೆ ಎನ್ನುವುದನ್ನು ಮತ್ತು ಅದಕ್ಕೆ ಸಮಯದ ಗಡುವನ್ನು ನೋಡಿಕೊಳ್ಳಿ. ಅಲ್ಲದೆ ನೋಟಿಸ್‌ನ ಮೇಲೆ ನಿಜವಾದ ಮುದ್ರೆಯಿದೆಯೇ ಮತ್ತು ಅದಕ್ಕೆ ಸಹಿ ಅಥವಾ ಡಿಜಿಟಲ್ ಸಹಿಯನ್ನು ಮಾಡಲಾಗಿದೆಯೇ, ಕಳುಹಿಸಿದ ಅಧಿಕಾರಿಯ ಹುದ್ದೆ, ಕಚೇರಿ ವಿಳಾಸ ಇತ್ಯಾದಿಗಳನ್ನೂ ಸರಿಯಾಗಿ ಪರಿಶೀಲಿಸಿಕೊಳ್ಳಿ.
♦ ಯಾವುದೇ ಉತ್ತರವನ್ನು ಸಲ್ಲಿಸುವ ಮುನ್ನ ನೋಟಿಸ್‌ನ ಹಿಂದಿನ ಕಾರಣವೇನು ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಅದು ಸಣ್ಣ ತಪ್ಪಾಗಿರಬಹುದು ಅಥವಾ ಪ್ರಮುಖ ವಿಷಯವಾಗಿರಬಹುದು. ನೀವು ಗುರುತಿಸಿದ ಕಾರಣವನ್ನು ಆಧರಿಸಿ ನೀವು ನಿಮ್ಮ ಮುಂದಿನ ನಡೆಯನ್ನು ಯೋಜಿಸಬಹುದು ಮತ್ತು ತೆರಿಗೆ ಅಧಿಕಾರಿಗಳಿಗೆ ನಿಮ್ಮ ಉತ್ತರವನ್ನು ಹೇಗೆ ಸಲ್ಲಿಸಬಹುದು ಎನ್ನುವುದನ್ನು ನಿರ್ಧರಿಸಬಹುದು.
♦ ನೋಟಿಸ್‌ನ್ನು ನಿಮಗೆ ಏಕೆ ಕಳುಹಿಸಲಾಗಿದೆ ಮತ್ತು ನೀವು ಏನನ್ನು ಸಲ್ಲಿಸಬೇಕು ಎನ್ನುವುದನ್ನು ಸರಿಯಾಗಿ ತಿಳಿದುಕೊಂಡ ಬಳಿಕ ನೀವು ಮಾಹಿತಿಯನ್ನು ಪರಿಶೀಲಿಸಿ ಅದನ್ನು ಸಕಾಲದಲ್ಲಿ ತೆರಿಗೆ ಅಧಿಕಾರಿಗಳಿಗೆ ಸಲ್ಲಿಸುವುದು ಅಗತ್ಯವಾಗುತ್ತದೆ. ತೆರಿಗೆ ಅಧಿಕಾರಿಗಳು ಕೇಳಿರುವ ಎಲ್ಲ ಮಾಹಿತಿಗಳನ್ನು ಸಂಗ್ರಹಿಸಲು ನಿಮಗೆ ಸಾಧ್ಯವಾಗದಿದ್ದರೆ ಅದಕ್ಕೆ ಸೂಕ್ತ ಕಾರಣಗಳನ್ನು ಉಲ್ಲೇಖಿಸಿ ಹೆಚ್ಚುವರಿ ಸಮಯಾವಕಾಶವನ್ನು ಕೋರಿ ಅರ್ಜಿಯನ್ನು ಸಲ್ಲಿಸಿ. ತೆರಿಗೆ ಅಧಿಕಾರಿಗಳ ಎದುರು ಹಾಜರಾಗದಿದ್ದರೆ ಅಥವಾ ಅವರು ಕೇಳಿದ ಮಾಹಿತಿಗಳನ್ನು ಒದಗಿಸದಿದ್ದರೆ ನೀವು ದಂಡವನ್ನು ತೆರಬೇಕಾಗಬಹುದು ಎನ್ನುವುದು ನೆನಪಿರಲಿ.
ನೋಟಿಸ್‌ಗೆ ಉತ್ತರಿಸುವಾಗ
ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶಗಳು
♦ ಹೆಚ್ಚುತ್ತಿರುವ ಡಿಜಿಟಲೀಕರಣ ಮತ್ತು ಇ-ಅಸೆಸ್‌ಮೆಂಟ್‌ನಿಂದಾಗಿ ನಿಮಗೆ ಸ್ಪೀಡ್ ಪೋಸ್ಟ್‌ನ ಬದಲಿಗೆ ಇ-ಮೇಲ್ ಮೂಲಕ ನೋಟಿಸ್ ಬರಬಹುದು. ಇಂದು ಹೆಚ್ಚಿನ ನೋಟಿಸ್‌ಗಳಿಗೆ ಆನ್‌ಲೈನ್ ಅಥವಾ ಆದಾಯ ತೆರಿಗೆ ಇ-ಪೋರ್ಟಲ್ ಮೂಲಕವೇ ಉತ್ತರಿಸಲಾಗುತ್ತದೆ. ಹೀಗಾಗಿ ನೀವು ಸ್ವೀಕರಿಸಿರುವ ನೋಟಿಸ್‌ಗೆ ಹೇಗೆ ಮತ್ತು ಎಲ್ಲಿ ಉತ್ತರ ಸಲ್ಲಿಸಬೇಕು ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳುವುದು ಮುಖ್ಯವಾಗುತ್ತದೆ.
ನಿಮಗೆ ಯಾರು ನೋಟಿಸ್ ಕಳುಹಿಸಿದ್ದಾರೆ ಎನ್ನುವುದನ್ನು ತಿಳಿದುಕೊಂಡ ಬಳಿಕ ಅವರಿಗೇ ನೀವು ಉತ್ತರ ಸಲ್ಲಿಸುತ್ತಿದ್ದೀರಿ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಉದಾಹರಣೆಗೆ ನೀವು ಸೆಂಟ್ರಲೈಸ್ಡ್ ಪ್ರಾಸೆಸಿಂಗ್ ಸೆಂಟರ್(ಸಿಪಿಸಿ)ನ ಬದಲು ನಿಮ್ಮ ವ್ಯಾಪ್ತಿಯ ತೆರಿಗೆ ಅಧಿಕಾರಿಗೆ ಸಲ್ಲಿಸಿದ್ದರೆ ನೀವು ಉತ್ತರಿಸಿಲ್ಲ ಎಂದೇ ಪರಿಗಣಿಸಲಾಗುತ್ತದೆ.
♦ ವ್ಯಕ್ತಿಗಳ ಪ್ರಕರಣಗಳಲ್ಲಿ ಅವರೇ ಉತ್ತರಗಳನ್ನು ಸಲ್ಲಿಸಬೇಕಾಗುತ್ತದೆ. ಕಂಪೆನಿ ಅಥವಾ ಇತರ ಯಾವುದೇ ಕಾನೂನುಬದ್ಧ ಸಂಸ್ಥೆಯಾಗಿದ್ದರೆ ಅಧಿಕೃತ ವ್ಯಕ್ತಿಯು ಉತ್ತರವನ್ನು ಸಲ್ಲಿಸಬೇಕಾಗುತ್ತದೆ. ಪರ್ಯಾಯವಾಗಿ ನಿಮ್ಮ ಪರವಾಗಿ ತೆರಿಗೆ ತಜ್ಞರಿಗೆ ಪವರ್ ಆಫ್ ಅಟಾರ್ನಿಯನ್ನು ನೀಡಿ ಅವರ ಮೂಲಕವೂ ಉತ್ತರವನ್ನು ಸಲ್ಲಿಸಬಹುದು.
♦ ಜಟಿಲ ಪ್ರಕರಣವಾಗಿದ್ದರೆ ನಿಮ್ಮ ಉತ್ತರವನ್ನು ಸಿದ್ಧಗೊಳಿಸಲು ತೆರಿಗೆ ತಜ್ಞರ ನೆರವು ಪಡೆದುಕೊಳ್ಳಿ. ಅದು ಜಟಿಲ ಪ್ರಕರಣವಲ್ಲದಿದ್ದರೆ ತೆರಿಗೆ ಅಧಿಕಾರಿಗೆ ಸಲ್ಲಿಸಬೇಕಾದ ದಾಖಲೆಗಳು ಮತ್ತು ಅದಕ್ಕೆ ಲಗತ್ತಿಸಿರುವ ಪತ್ರಗಳ ಎರಡು ಸೆಟ್‌ಗಳನ್ನು ಮಾಡಿಕೊಳ್ಳಿ ಮತ್ತು ಒಂದನ್ನು ನಿಮ್ಮ ದಾಖಲೆಗಾಗಿ ನಿಮ್ಮ ಬಳಿ ಇಟ್ಟುಕೊಳ್ಳಿ.
♦ ನೀವು ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದೀರಿ ಎನ್ನುವುದಕ್ಕೆ ಸೂಕ್ತ ಹಿಂಬರಹವನ್ನು ಪಡೆದುಕೊಳ್ಳಿ. ಆನ್‌ಲೈನ್ ಮೂಲಕ ದಾಖಲೆಗಳನ್ನು ಸಲ್ಲಿಸಿದ್ದರೆ ನಿಮ್ಮ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುವ ಹಿಂಬರಹ ಸಂದೇಶದ ಸ್ಕ್ರೀನ್ ಶಾಟ್ ತೆಗೆದುಕೊಳ್ಳಿ.