ಏನಿ ಬಂದಿರಿ ಹದುಳಿದ್ದಿರೆ?
ಏನಿ ಬಂದಿರಿ, ಹದುಳಿದ್ದಿರೆ ಎಂದಡೆ
ನಿಮ್ಮೈಸಿರಿ ಹಾರಿ ಹೋಹುದೆ?
ಕುಳ್ಳಿರೆಂದಡೆ ನೆಲ ಕುಳಿಹೋಹುದೆ?
ಒಡನೆ ನುಡಿದಡೆ ಸಿರ, ಹೊಟ್ಟೆಯೊಡೆವುದೆ?
ಕೊಡಲಿಲ್ಲದಿದ್ದಡೊಂದು ಗುಣವಿಲ್ಲದಿದ್ದಡೆ
ಮೂಗ ಕೊಯ್ವುದು ಮಾಬನೆ ಕೂಡಲಸಂಗಮದೇವಯ್ಯ?
-ಬಸವಣ್ಣ
ಬನ್ನಿರಿ, ಎಲ್ಲ ಕ್ಷೇಮವೇ? ಬಂದ ಕಾರಣವೇನು? ಎಂದು ವಿಚಾರಿಸಿದರೆ ನಿಮ್ಮ ಐಶ್ವರ್ಯ ಹಾರಿ ಹೋಗುವುದೇ? ಬನ್ನಿ, ಕೂಡಿ, ನಮಸ್ಕಾರ ಎಂದು ಹೇಳಿದರೆ ನಿಮ್ಮ ಮನೆಯ ನೆಲದಲ್ಲಿ ತಗ್ಗು ಗುಂಡಿಗಳು ಬೀಳುವವೇ? ಶ್ರೀಸಾಮಾನ್ಯರು ಮನೆಗೆ ಬಂದಾಗ ನೀವು ಅವರಿಗೆ ಉದಾಸೀನ ಮಾಡದೆ ಪ್ರೀತಿಯಿಂದ ಮಾತನಾಡಿಸಿದರೆ ನಿಮ್ಮ ತಲೆ ಒಡೆದುಹೋಗುವುದೇ; ನಿಮ್ಮ ಹೊಟ್ಟೆ ಸೀಳಿಹೋಗುವುದೇ? ನೀವು ನಿಮ್ಮ ಬಳಿ ಬರುವ ಅಸಹಾಯಕರಿಗೆ ಕೊಡುವ ಮನಸಿಲ್ಲದಿದ್ದರೂ ಗೌರವದಿಂದ ಕಾಣುವ ಗುಣವೂ ಇಲ್ಲದಿದ್ದರೆ ದೇವರು ಮೂಗುಕುಯ್ದು ಅಪಮಾನಿಸದೆ ಬಿಡುವನೇ ಎಂದು ಬಡವರನ್ನು ಅಸಡ್ಡೆಯಿಂದ ಕಾಣುವ ಶ್ರೀಮಂತರನ್ನು ಬಸವಣ್ಣನವರು ಪ್ರಶ್ನಿಸುತ್ತಾರೆ. ಹೀಗೆ ಪ್ರಶ್ನಿಸುವಲ್ಲಿ ಇಂಥ ಶ್ರೀಮಂತರ ಬಗ್ಗೆ ವ್ಯಕ್ತಪಡಿಸುವ ಸಾತ್ವಿಕ ಕೋಪಕ್ಕಿಂತಲೂ ಬಡವರ ಬಗ್ಗೆ ಅವರಿಗಿುವ ಕಾಳಜಿ ಮುಖ್ಯವಾಗುತ್ತದೆ.
ಬಸವಣ್ಣನವರು ಪ್ರಾಮಾಣಿಕ ಕಾಯಕಜೀವಿಗಳಲ್ಲಿ ಭಕ್ತಿ ಕಾಣುತ್ತಾರೆ. ಧರ್ಮ ಕಾಣುತ್ತಾರೆ. ಈ ಪೃಥ್ವಿಗೆ ಭೂಷಣವಾಗುವಂಥ ಸುಂದರ ಸಮಾಜ ಕಾಣುತ್ತಾರೆ. ಅಂಥವರ ಸಮೂಹದಲ್ಲಿ ದೇವರನ್ನೇ ಕಾಣುತ್ತಾರೆ. ಸರಳ ಮಾನವೀಯ ಬದುಕೇ ಧಾರ್ಮಿಕ ಆಚರಣೆಗಳಾಗಿಬಿಡುತ್ತವೆ. ‘‘ಕಂಡ ಭಕ್ತರಿಗೆ ಕೈಮುಗಿಯುವಾತನೇ ಭಕ್ತ, ಮೃದುವಚನವೆ ಸಕಲ ಜಪಂಗಳಯ್ಯಾ, ಮೃದುವಚನವೆ ಸಕಲ ತಪಂಗಳಯ್ಯಾ, ಸದುವಿನಯವೆ ಸದಾಶಿವನ ಒಲುಮೆಯಯ್ಯಾ. ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ.’’ ಎಂದು ಹೇಳುವುದರ ಮೂಲಕ ಶಿಷ್ಟಾಚಾರವನ್ನು ಎತ್ತಿಹಿಡಿಯುತ್ತಾರೆ. ಮರ್ಯಾದಸ್ಥ ಬಡವರ ಬದುಕೇ ಶ್ರೀಮಂತ ಬದುಕು ಎಂಬುದನ್ನು ಅರಿಯುವಂತೆ ಮಾಡುತ್ತಾರೆ. ಇಂಥ ಬಡತನವನ್ನೇ ಶ್ರೀಮಂತಗೊಳಿಸುತ್ತಾರೆ.
ಸಂಪತ್ತೇ ಶ್ರೀಮಂತಿಕೆ ಎಂದು ತಿಳಿಯುವವರ ಬಗ್ಗೆ ಬಸವಣ್ಣನವರಿಗೆ ಬೇಸರವಿದೆ. ಗುಣಸಂಪತ್ತು ಹಣಸಂಪತ್ತಿಗಿಂತ ಶ್ರೇಷ್ಠವಾದುದು. ಆದರೆ ಕೆಲ ಹಣವಂತರಿಗೆ ಸಿರಿಗರವೆಂಬ ಭೂತ ಬಡಿದಿರುತ್ತದೆ. ಅದು ಮನಸ್ಸನ್ನು ವಿಷಮಯವಾಗಿಸುವುದು. ಮನಸ್ಸಿನಲ್ಲಿ ವಿಷ ತುಂಬುವ ಈ ಸಿರಿಗರ ಎಲ್ಲ ಭೂತಚೇಷ್ಟೆಗಳಿಗಿಂತ ಅಸಹ್ಯವಾದುದು. ಅಲ್ಲದೆ ಸರ್ಪದ ವಿಷಕ್ಕಿಂತಲೂ ಘೋರವಾದುದು. ಈ ಸಿರಿಗರವನ್ನು ಹೋಗಲಾಡಿಸಲು ಬಡತನವೆಂಬ ಮಂತ್ರವಾದಿಯೇ ಅವರ ಬದುಕಿನ ಮೇಲೆ ದಾಳಿ ಮಾಡಬೇಕಾಗುತ್ತದೆ. ಆಗ ಮಾತ್ರ ಅವರು ಎಚ್ಚರಗೊಂಡು, ಸಂಪತ್ತೆಂಬ ವಿಷಭೂತದ ದುಷ್ಪರಿಣಾಮದಿಂದ ಹೊರಬಂದು ಮಾತನಾಡಲು ಸಾಧ್ಯವಾಗುತ್ತದೆ. ಅಂತೆಯೆ ಬಸವಣ್ಣನವರು ಬೇರೊಂದು ವಚನದಲ್ಲಿ ಹೀಗೆ ಹೇಳಿದ್ದಾರೆ: ಹಾವು ತಿಂದವರ ನುಡಿಸಬಹುದು, ಗರ ಹೊಡೆದವರ ನುಡಿಸಬಹುದು, ಸಿರಿಗರ ಹೊಡೆದವರ ನುಡಿಸಲು ಬಾರದು ನೋಡಯ್ಯಾ. ಬಡತನವೆಂಬ ಮಂತ್ರವಾದಿ ಹೊಗಲು ಒಡನೆ ನುಡಿವರಯ್ಯಾ ಕೂಡಲಸಂಗಮದೇವಾ.’’