ಮಕ್ಕಳ ಅಪಹರಣದ ಸುಳ್ಳು ಸುದ್ಧಿ ಹಬ್ಬಿಸುವವರ ವಿರುದ್ದ ಕಠಿಣ ಕ್ರಮ: ಶಿವಮೊಗ್ಗ ಪೊಲೀಸ್ ಇಲಾಖೆ ಎಚ್ಚರಿಕೆ
ಶಿವಮೊಗ್ಗ, ಮೇ 25: ಪ್ರಸ್ತುತ ರಾಜ್ಯದ ವಿವಿಧೆಡೆ ಮಕ್ಕಳ ಅಪಹರಿಸುವ ಗ್ಯಾಂಗ್‍ಗಳು ಕಾರ್ಯಾಚರಿಸುತ್ತಿರುವ ಕುರಿತಾದ ಸುಳ್ಳು ಸುದ್ದಿಗಳು ನಾನಾ ರೀತಿಯ ಅವಾಂತರಗಳು ಉಂಟು ಮಾಡುತ್ತಿವೆ. ನಾಗರೀಕರು ಭಯ ಬೀಳುವಂತಾಗಿದೆ. ಇತ್ತೀಚೆಗೆ ಶಿವಮೊಗ್ಗ ಜಿಲ್ಲೆಯಲ್ಲಿಯೂ ಈ ವದಂತಿಗಳ ಕಾರುಬಾರು ಜೋರಾಗಿದ್ದು, ಕೆಲ ಕಿಡಿಗೇಡಿಗಳು ಸತ್ಯಕ್ಕೆ ದೂರವಾದ ಸುದ್ದಿ ಹರಡುವ ಕುಕೃತ್ಯಗಳಲ್ಲಿ ತೊಡಗಿದ್ದಾರೆ. ಈ ನಡುವೆ ಜಿಲ್ಲಾ ಪೊಲೀಸ್ ಇಲಾಖೆಯು ಎಚ್ಚೆತ್ತುಕೊಂಡಿದ್ದು, ಈ ರೀತಿಯ ಸುಳ್ಳು ಸುದ್ದಿಗಳಿಗೆ ಕಿವಿಗೊಡದಂತೆ ಸಾರ್ವಜನಿಕರಿಗೆ ಮನವಿ ಮಾಡಿದೆ. ಹಾಗೆಯೇ ಸುಳ್ಳು ವದಂತಿ ಹಬ್ಬಿಸುವವರ ವಿರುದ್ದವೂ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಕೆಯ ಸಂದೇಶ ರವಾನಿಸಿದೆ.
ಈ ಕುರಿತಂತೆ ಜಿಲ್ಲಾ ರಕ್ಷಣಾಧಿಕಾರಿ ಅಭಿನವ್ ಖರೆಯವರು ಪತ್ರಿಕಾ ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿದ್ದಾರೆ. 'ನಾಗರೀಕರು ಭಯ ಪಡುವ ಅಗತ್ಯವಿಲ್ಲ. ಶಿವಮೊಗ್ಗ ಜಿಲ್ಲೆಯಲ್ಲಿ ಮಕ್ಕಳ ಅಪಹರಿಸುವ ಯಾವುದೇ ಗ್ಯಾಂಗ್‍ಗಳಿಲ್ಲ. ಮಕ್ಕಳ ಅಪಹರಣದ ಯಾವುದೇ ಪ್ರಕರಣಗಳು ವರದಿಯಾಗಿಲ್ಲ. ಈ ಕುರಿತಾದ ಸುಳ್ಳು ಸುದ್ದಿಗಳನ್ನು ನಂಬಬೇಡಿ' ಎಂದು ಜಿಲ್ಲಾ ರಕ್ಷಣಾಧಿಕಾರಿ ಅಭಿನವ್ ಖರೆಯವರು ಮನವಿ ಮಾಡಿದ್ದಾರೆ.
ಭಯ ಬೇಡ: ಇತ್ತೀಚೆಗೆ ಕೆಲ ಕಿಡಿಗೇಡಿಗಳು ಸಾರ್ವಜನಿಕರಲ್ಲಿ ಭಯ ಉಂಟು ಮಾಡಲು, ಸಾಮಾಜಿಕ ಜಾಲ ತಾಣಗಳಾದ ವ್ಯಾಟ್ಸಾಪ್-ಫೇಸ್‍ಬುಕ್ ಮೂಲಕ ಮಕ್ಕಳ ಅಪಹರಿಸುವ ಗ್ಯಾಂಗ್‍ಗಳು ಆಗಮಿಸಿವೆ, ಮಕ್ಕಳನ್ನು ಅಪಹರಿಸಿ ಕೊಂಡೊಯ್ಯುತ್ತಿವೆ ಎಂಬ ಸುಳ್ಳು ಮಾಹಿತಿಯನ್ನು ಹರಡುತ್ತಿವೆ. ಈ ಸುದ್ದಿಯು ಜಿಲ್ಲೆಯ ಸಾರ್ವಜನಿಕರಲ್ಲಿ ಭಯವನ್ನುಂಟು ಮಾಡುತ್ತಿದೆ. ಆದರೆ ಶಿವಮೊಗ್ಗ ಜಿಲ್ಲೆಯಾದ್ಯಂತ ಯಾವುದೇ ಪ್ರದೇಶಗಳಲ್ಲಿ, ಮಕ್ಕಳನ್ನು ಅಪಹರಿಸುವ ಗ್ಯಾಂಗ್‍ಗಳಿಲ್ಲ. ಜೊತೆಗೆ ಮಕ್ಕಳ ಅಪಹರಣವೂ ನಡೆದಿಲ್ಲ. ಮಕ್ಕಳ ಅಪಹರಣದ ಕುರಿತಾದ ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದೆಂದು ಪೊಲೀಸ್ ಇಲಾಖೆಯು ಸಾರ್ವಜಿನಿಕರಿಗೆ ತಿಳಿಸಿದೆ.
ನಿರಂತರ ಗಸ್ತು: ಜಿಲ್ಲೆಯ ಎಲ್ಲ ಪೊಲೀಸ್ ಠಾಣಾ ಸರಹದ್ದು ವ್ಯಾಪ್ತಿಗಳಲ್ಲಿ ಈಗಾಗಲೇ ಪೊಲೀಸ್ ಅಧಿಕಾರಿಗಳು ಮತ್ತು ಬೀಟ್ ಸಿಬ್ಬಂದಿಗಳು ನಿರಂತರವಾಗಿ ಗಸ್ತು ತಿರುಗುತ್ತಿದ್ದಾರೆ. ಸಾರ್ವಜನಿಕರು ಮಕ್ಕಳ ಅಪಹರಣದ ಗ್ಯಾಂಗ್‍ಗಳ ಬಗ್ಗೆ ಕಿಡಿಗೇಡಿಗಳು ಹಬ್ಬಿಸುತ್ತಿರುವ ಸುಳ್ಳು ಸುದ್ದಿಗಳನ್ನು ನಂಬಬಾರದೆಂದು ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಹೇಳಿದೆ.
ಮಕ್ಕಳ ಅಪಹರಣದ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ಸುದ್ದಿ ಹರಡುವವರ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು. ಸಾರ್ವಜನಿಕರು ತಮ್ಮ ಸರಹದ್ದು ವ್ಯಾಪ್ತಿಗಳಲ್ಲಿ ಅಪರಿಚಿತ ವ್ಯಕ್ತಿಗಳನ್ನು ಹಿಡಿದು ಕಟ್ಟಿ ಹಾಕುವುದಾಗಲಿ, ಅಥವಾ ಹೊಡೆದು ಹಿಂಸಿಸುವುದಾಗಲಿ ಮಾಡುವಂತಿಲ್ಲ. ಅಂತಹವರ ವಿರುದ್ಧ ಕಾನೂನು ರೀತಿಯ ಶಿಕ್ಷೆಗೆ ಗುರಿ ಪಡಿಸಲಾಗುವುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ತಮ್ಮ ಸರಹದ್ದಿನಲ್ಲಿ ಅಪರಿಚಿತ ವ್ಯಕ್ತಿಗಳು ಅಥವಾ ಅನುಮಾನ್ಸಾಪದ ವ್ಯಕ್ತಿಗಳು ಕಂಡು ಬಂದಲ್ಲಿ, ತಮ್ಮ ಸರಹದ್ದಿನ ಪೊಲೀಸರಿಗೆ ಅಥವಾ ಪೊಲೀಸ್ ಕಂಟ್ರೋಲ್ ರೂಂ ಸಂಖ್ಯೆ: 100 ಕ್ಕೆ ತಕ್ಷಣ ಮಾಹಿತಿ ನೀಡಬೇಕು ಎಂದು ಪೊಲೀಸ್ ಇಲಾಖೆ ಮನವಿ ಮಾಡಿಕೊಂಡಿದೆ.
ಹಾಗೆಯೇ ಜಿಲ್ಲಾ ನಿಸ್ತಂತು ಕೇಂದ್ರ ದೂರವಾಣಿ ಸಂಖ್ಯೆ: 08182-261413, ಶಿವಮೊಗ್ಗ ಉಪವಿಭಾಗ ಕಚೇರಿ ಸಂಖ್ಯೆ: 08182-261404, ಭದ್ರಾವತಿ ಉಪವಿಭಾಗ : 08282-274252, ಸಾಗರ ಉಪವಿಭಾಗ : 08183-266033, ಶಿಕಾರಿಪುರ ಉಪವಿಭಾಗ : 08187-222772, ತೀರ್ಥಹಳ್ಳಿ ಉಪವಿಭಾಗ : 08181-220388 ಗೆ ಕರೆ ಮಾಡಿ ತಿಳಿಸುವಂತೆ ಜಿಲ್ಲಾ ರಕ್ಷಣಾಧಿಕಾರಿ ಅಭಿನವ್ ಖರೆ ಮನವಿ ಮಾಡಿಕೊಂಡಿದ್ದಾರೆ.