ಕಾರ್ನಾಡರ ಎಂಬತ್ತರ ಉತ್ಸವ
ಸಾಹಿತ್ಯ ಕ್ಷೇತ್ರದಲ್ಲಿ ನಾಟಕಕಾರರಾಗಿ ಜ್ಞಾನ ಪೀಠ ಪ್ರಶಸ್ತಿಗೆ ಪುರಸ್ಕೃತರಾದವರಲ್ಲಿ ಮೊದಲಿಗರು ಕಾರ್ನಾಡರು.ಅವರು ವಿದೇಶಗಳಲ್ಲಿ ಅತಿ ಹೆಚ್ಚು ಪ್ರಸಿದ್ಧಿ ಪಡೆದಿರುವ ಕನ್ನಡ ನಾಟಕಕಾರರೂ ಹೌದು. ಕಾರ್ನಾಡರ ನಾಟಕಗಳು ಇಂಗ್ಲಿಷ್ ಸೇರಿದಂತೆ ಹಲವಾರು ಭಾಷೆಗಳಿಗೆ ಅನುವಾದಗೊಂಡಿವೆ. ಜ್ಞಾನಪೀಠ ಪ್ರಶಸ್ತಿಗೆ ಮುಂಚೆಯೇ ನಾಟಕಕಾರರಾಗಿ, ನಟರಾಗಿ ರಾಷ್ಟ್ರೀಯು/ಅಂತರ್‌ರಾಷ್ಟ್ರೀಯ ಖ್ಯಾತಿಯನ್ನು ಗಳಿಸಿದ್ದರು. ಅಲ್ಕಾಜಿ ನಿರ್ದೇಶನದ ‘ತುಘಲಕ್’ ವಿದೇಶಿ ರಂಗಯಾತ್ರೆಯನ್ನೇ ಕೈಗೊಂಡಿತ್ತು.
ಇತ್ತೀಚೆಗಿನ ದಿನಗಳಲ್ಲಿ ಕನ್ನಡ ರಂಗಭೂಮಿಯ ಚಟುವಟಿಕೆಗಳನ್ನು ಗಮನಿಸಿದಾಗ ಅದಕ್ಕೆ ಮತ್ತೊಮ್ಮೆ ಭರಪೂರ ಉತ್ಸಾಹ ಬಂದಂತೆ ತೋರುತ್ತದೆ. ಮೊನ್ನೆಮೊನ್ನೆಯಷ್ಟೇ ಸಿಜಿಕೆ ನಾಟಕೋತ್ಸವವಾಯಿತು. ಈಗ ಗಿರೀಶ್‌ಕಾರ್ನಾಡ್ ನಾಟಕೋತ್ಸವ.ಸಂಭ್ರಮಿಸಬೇಕಾದ ಸಂಗತಿಯೇ ಸರಿ. ಗಿರೀಶರಿಗೆ ಈಗ ಎಂಬತ್ತರ ಪ್ರಾಯ. ಕನ್ನಡ ನೆಲದಲ್ಲಿ ಹುಟ್ಟಿ ಸಾಕಷ್ಟು ದೇಶಾಟನ ಮಾಡಿರುವ ಅವರು ವಿದೇಶಗಳಲ್ಲಿ ಹೆಚ್ಚು ಪ್ರಖ್ಯಾತರಾಗಿರುವ ಭಾರತೀಯ ನಾಟಕಕಾರರು.ಅವರನ್ನು ವಿದೇಶಿ ಮೊಹರಿನ ಕನ್ನಡ ನಾಟಕಕಾರರೆಂದು ಹುಬ್ಬೇರಿಸುವವರೂ ಉಂಟು. ಆಧುನಿಕ ಕನ್ನಡ ನಾಟಕ ಸಾಹಿತ್ಯ ಮತ್ತು ರಂಗಭೂಮಿಗೆ ಮಹತ್ವದ ಕೊಡುಗೆ ನೀಡಿರುವ ಕಾರ್ನಾಡರ ಅಭಿಮಾನಿಗಳಿಗೆ ಅವರ ಎಂಬತ್ತರ ಉತ್ಸವವನ್ನು ಆಚರಿಸುವ ಸಂಭ್ರಮ. ಸೆಲಿಬ್ರೆಟಿಯ ಸೆಲಬ್ರೇಷನ್!
ಇಪತ್ತನೆಯ ಶತಮಾನದಲ್ಲಿ ಆಧುನಿಕ ಕನ್ನಡ ನಾಟಕ ಸಾಹಿತ್ಯ ಮತ್ತು ರಂಗಭೂಮಿಗೆ ಭದ್ರ ಬುನಾದಿಯನ್ನು ನಿರ್ಮಿಸಿದವರಲ್ಲಿ ಸಂಸ, ಕೈಲಾಸಂ, ಶ್ರೀರಂಗ,ಗಿರೀಶ್ ಕಾರ್ನಾಡ್ ಮತ್ತು ಚಂದ್ರಶೇಖರ ಕಂಬಾರರು ಪ್ರಮುಖರು. ಮೈಸೂರಿನ ರಾಜ ಒಡೆಯರ ಇತಿಹಾಸವನ್ನು ನಿರೂಪಿಸುವ ‘ನಾಟಕ ಚಕ್ರ’ದಿಂದ ಸಂಸರು, ಸಾಮಾಜಿಕ ವಾಸ್ತವತೆಗೆ ರಂಗಭೂಮಿಯನ್ನು ತೆರೆದ ಕೈಲಾಸಂ ಮತ್ತು ಶ್ರೀರಂಗರು, ಇತಿಹಾಸ ಮತ್ತು ವೇದಪುರಾಣಗಳಿಂದ ಆಯ್ದುಕೊಂಡ ವಸ್ತುವನ್ನು ಆಧುನಿಕ ಮನಶ್ಶಾಸ್ತ್ರದ ನಿಕಶಕ್ಕೊಡ್ಡಿ ಹೊಸ ಅರ್ಥ, ವ್ಯಾಖ್ಯಾನಗಳ ಹೊಳಹು ನೀಡಿದ ಗಿರೀಶ್ ಕಾರ್ನಾಡರು ಹಾಗೂ ಆಧುನಿಕ ಜೀವನದ ಸಮಸ್ಯೆಗಳನ್ನು ಜಾನಪದ ರಂಗಭೂಮಿಯ ಮೈಗೆ ಕಸಿಮಾಡಿ ಬದುಕಿನ ಮೂಲಕಾಮನೆಗಳಾದ ಕಾಮ ಮತ್ತು ಭೋಗದ ಹಕ್ಕುಗಳನ್ನು ಅರ್ಥೈಸಲೆತ್ನಿಸುವ ಚಂದ್ರಶೇಖರ ಕಂಬಾರರು -ಈ ಪ್ರಸಿದ್ಧ ನಾಟಕಕಾರರು ಬದುಕಿನ ವೌಲ್ಯಗಳನ್ನು ಪುರಾಣ,ಇತಿಹಾಸ ಮತ್ತು ಜಾನಪದೀಯ ಆಖ್ಯೆಗಳನ್ನು ಆಧುನಿಕ ಬೆಳಕಿನಲ್ಲಿ ನೋಡುವ ಕ್ರಮದ ಮೊದಲಿಗರಾಗಿ ಐತಿಹಾಸಿಕವಾಗಿ ಮುಖ್ಯರಾಗುತ್ತಾರೆ.
ಗಿರೀಶ್ ಕಾರ್ನಾಡರ ಮಾತೃ ಭಾಷೆ ಕೊಂಕಣಿ. ಕಾರ್ನಾಡರು ಹುಟ್ಟಿದ್ದು 1938ರ ಮೇ 19ರಂದು ಮಹಾರಾಷ್ಟ್ರದಲ್ಲಿ. ತಂದೆ ಡಾ.ರಘುನಾಥ ಕಾರ್ನಾಡರು,ತಾಯಿ ಕ್ರಷ್ಣಾ ಭಾಯಿ.ಅವಿಭಕ್ತ ಕುಟುಂಬ. ಮನೆಯಲ್ಲಿ ಕೊಂಕಣಿ, ಕನ್ನಡ ಮರಾಠಿ ಭಾಷೆಗಳು ಬಳಕೆಯಲ್ಲಿದ್ದವು. ಬಾಲ್ಯದಿಂದಲೇ ಬಹುಭಾಷಾ ಒಡನಾಟ.ತಂದೆಯವರ ವರ್ಗಾವಣೆ ವೃತ್ತಿಯಿಂದಾಗಿ ಬಾಲ್ಯದಲ್ಲೇ ಹಲವಾರು ಊರುಗಳ ಸುತ್ತಾಟ. ಹುಡುಗನ ಕುತೂಹಲದ ಕಣ್ಣುಗಳನ್ನು ತಣಿಸಿದ ಸುತ್ತಾಟ. ಬಾಲ್ಯದ ಹೆಚ್ಚುಭಾಗ ಕಳೆದದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ. ಕಾರ್ನಾಡರೊಳಗಿದ್ದ ನಾಟಕ ಆಸಕ್ತಿಗೆ ನೀರೆರದ ಊರು ಶಿರಸಿ. ಇಲ್ಲೇ ಅವರು ಕಂಪೆನಿ ನಾಟಕಗಳನ್ನೂ ಯಕ್ಷಗಾನವನ್ನೂ ಕಂಡು ಬೆರಗಾದದ್ದು. ಧಾರವಾಡ, ಮುಂಬೈಗಳಲ್ಲಿ ಕಾಲೇಜು ಶಿಕ್ಷಣ ಮುಗಿಸಿ ಲಂಡನ್‌ನ ಆಕ್ಸ್ ಫರ್ಡ್ ವಿಶ್ವದ್ಯಾನಿಲಯದಲ್ಲಿ ಎಂ.ಎ. ಸ್ನಾತಕೋತ್ತರ ಪದವಿ ಪಡೆದರು.ಉನ್ನತ ವ್ಯಾಸಂಗದ ಜೊತೆಗೆ ಇಂಗ್ಲೆಂಡ್ ಮೊಕ್ಕಾಮಿನಲ್ಲಿ ಪಾಶ್ಚಾತ್ಯ ರಂಗಭೂಮಿಗೆ ಮನಸ್ಸಿನ ಕದ ತೆರೆದರು.1963ರಲ್ಲಿ ಭಾರತಕ್ಕೆ ಮರಳಿದ ನಂತರ ಸ್ವಲ್ಪ ಕಾಲ ಚೆನ್ನೈನ ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್‌ನಲ್ಲಿ ಮ್ಯಾನೇಜರಾಗಿ ಸೇವೆ ಸಲ್ಲಿಸಿದರು. ಮುಂದೆ ನಾಟಕ ರಚನೆ, ನಟನೆ, ನಿರ್ದೇಶನ ಪೂರ್ಣಾವಧಿ ಕಾಯಕವಾಯಿತು. ಬಹುತೇಕ ಸಾಹಿತಿಗಳಂತೆ ಕಾರ್ನಾಡರು ಮೊದಲ ಸಾಹಿತ್ಯ ಸರಸ ಕಾವ್ಯಕನ್ನಿಕೆಯೊಂದಿಗೇ. ವಿದ್ಯಾರ್ಥಿ ದಿನಗಳಲ್ಲಿ ಕನ್ನಡ, ಇಂಗ್ಲಿಷ್‌ನಲ್ಲಿ ಕವನಗಳನ್ನು ಬರೆದದ್ದುಂಟು.
ಅದೇ ಅವಧಿಯಲ್ಲಿ ಕಾಲೇಜು ಪತ್ರಿಕೆಗಾಗಿ ಬರೆದದ್ದು ‘ಮಾನಿಷಾದ’.ಪೂರ್ಣಪ್ರಮಾಣದ ಮೊದಲ ನಾಟಕ ‘ಯಯಾತಿ’ ಬರೆದದ್ದು 1961ರಲ್ಲಿ.‘ಯಯಾತಿ’ನಂತರ ತಮ್ಮ ಅಭಿವ್ಯಕ್ತಿ ಮಾಧ್ಯಮ ನಾಟಕವೆಂದು ಮನವರಿಕೆಯಾಗಿ ನಾಟಕ ಅವರ ಸೃಜನಶೀಲ ಬರವಣಿಗೆಯ ಕ್ಷೇತ್ರವಾಯಿತು. ಯಯಾತಿ(1961), ತುಘಲಕ್ (1964), ಹಯವದನ(1971), ಅಂಜುಮಲ್ಲಿಗೆ (1977), ಹಿಟ್ಟಿನ ಹುಂಜ(1980), ನಾಗಮಂಡಲ(1988), ತಲೆದಂಡ(1990), ಅಗ್ನಿ ಮತ್ತು ಮಳೆ(1995), ಟಿಪ್ಪುವಿನ ಕನಸುಗಳು(1999), ಒಡಕಲು ಬಿಂಬ (2006) ಹಾಗೂ ಇತ್ತೀಚಿನ ‘ಬೆಂದಕಾಳು ಆನ್ ಟೋಸ್ಟ’,‘ಪ್ಲವರ್ಸ್’ ಸೇರಿ ಹನ್ನೆರಡಕ್ಕೂ ಹೆಚ್ಚು ನಾಟಕಗಳನ್ನು ಕಾರ್ನಾಡರು ರಚಿಸಿದ್ದಾರೆ. ಇವುಗಳಲ್ಲಿ ‘ನಾಗ ಮಂಡಲ’ ಹಾಗೂ ‘ಅಗ್ನಿ ಮತ್ತು ಮಳೆ’ -ಅಮೆರಿಕೆಯ ‘ಗಥ್ರಿ’ ಥಿಯೇಟರ್ ಕೋರಿಕೆ ಮೇರೆಗೆೆ ಇಂಗ್ಲಿಷ್‌ನಲ್ಲೂ ಬರೆದ ನಾಟಕಗಳು.‘ಟಿಪ್ಪುವಿನ ಕನಸುಗಳು’ ಭಾರತ ಸ್ವಾತಂತ್ರದ ಸುವರ್ಣ ಮಹೋತ್ಸವ ಸಂದರ್ಭಕ್ಕಾಗಿ ಬಿ.ಬಿ.ಸಿ. ಕೋರಿಕೆಯಂತೆ 1997ರಲ್ಲಿ ಮೊದಲು ಇಂಗ್ಲಷ್‌ನಲ್ಲಿ ಬರೆದ ನಾಟಕ(ಡ್ರೀಮ್ಸ್ ಆಫ್ ಟಿಪ್ಪು ಸುಲ್ತಾನ್).
ನಾಟಕ ರಚನೆಯಲ್ಲಿ ಕಾರ್ನಾಡರ ಸೃಜನಶೀಲ ಪ್ರತಿಭೆೆ, ಆಧುನಿಕತೆ, ಪುರಾಣ, ಇತಿಹಾಸ ಮತ್ತು ಜಾನಪದ ಸತ್ವಗಳನ್ನು ತನ್ನ ತೆಕ್ಕೆಗೊಗ್ಗಿಸಿಕೊಳ್ಳುವ ಪ್ರಯತ್ನ ಮಾಡಿರುವುದುಂಟು. ಪೌರಾಣಿಕ ಮತ್ತು ಚಾರಿತ್ರಿಕ ನಾಟಕಗಳ ರಚನೆ ಅವರಿಗೆ ಪ್ರಿಯವಾಗಿರುವಂತಿದೆ. ಈ ಮಾತಿಗೆ ಉತ್ತಮ ನಿದರ್ಶನಗಳು ‘ಯಯಾತಿ’, ‘ತುಘಲಕ್’, ‘ಅಂಜುಮಲ್ಲಿಗೆ’, ‘ಅಗ್ನಿ ಮತ್ತು ಮಳೆ’ ಹಾಗೂ ‘ತಲೆದಂಡ’. ‘ನಾಗ ಮಂಡಲ’ ಜಾನಪದ ಕಥಯೊಂದನ್ನಾಧರಿಸಿದ ನಾಟಕ. ‘ತುಘಲಕ್’, ‘ಟಿಪ್ಪುವಿನ ಕನಸುಗಳು’ ಮತ್ತು ‘ತಲೆದಂಡ’ ಕನ್ನಡದ ಐತಿಹಾಸಿಕ ನಾಟಕಗಳ ಸಾಲಿನಲ್ಲಿ ಅಗ್ರಸ್ಥಾನ ಪಡೆದಿರುವ ನಾಟಕಗಳು. ಗಿರೀಶರನ್ನು ನಾಟಕಕಾರರಾಗಿ ಸ್ಥಾಪಿಸಿದ ಮಹತ್ವದ ಕೃತಿ ‘ತುಘಲಕ’. ವಿಮರ್ಶಕರು ಗುರುತಿಸಿರುವಂತೆ ಇದು ಅತ್ಯಂತ ಮನೋಜ್ಞ ನಾಟಕವಾಗಿದ್ದು ಶೇಕ್ಸ್‌ಪಿಯರನ ದುರಂತ ನಾಟಕಗಳ ಆಳ-ಎತ್ತರಗಳನ್ನು ಒಳಗೊಂಡಿರುವ ಕೃತಿ. ಹದಿನಾಲ್ಕನೆಯ ಶತಮಾನದಲ್ಲಿ ದಿಲ್ಲಿಯನ್ನಾಳಿದ ತುಘಲಕ್ ವಿಕ್ಷಿಪ್ತ ಮನಸ್ಸಿನ ಐಲುದೊರೆ ಎಂದೇ ಜನಜನಿತ ಅಭಿಪ್ರಾಯ.ಅವನು ಬುದ್ಧಿವಂತ ನೂ ಕಾಲಜ್ಞಾನಿಯೂ ಆಗಿದ್ದನೆಂದು ಇತಿಹಾಸಕಾರರು ಒಪ್ಪುತ್ತಾರೆ.ಕಾರ್ನಾಡರು ತಮ್ಮ ಕೃತಿಯಲ್ಲಿ ತುಘಲಕನ ವಿಭಜಿತ ವ್ಯಕ್ತಿತ್ವವನ್ನು ಚರಿತ್ರೆ ಮತ್ತು ಮನಶ್ಶಾಸ್ತ್ರಗಳ ಮೂಲಕ ಶೋಧಿಸುವ ಪ್ರಯತ್ನ ಮಾಡಿದ್ದಾರೆ. ನಾಟಕದಲ್ಲಿ ಬರುವ ಚದುರಂಗದ ಆಟವಂತೂ ತುಘಲಕ್ ಮತ್ತು ಅವನ ಎದುರಾಳಿಗಳ ನಡೆಯನ್ನು ಬಿಂಬಿಸುವಲ್ಲಿ ಸಾಂಕೇತಿಕ ಮಹತ್ವವನ್ನು ಪಡೆದುಕೊಂಡಿದೆ. ಯು.ಆರ್. ಅನಂತ ಮೂರ್ತಿಯವರು ಹೇಳಿರುವಂತೆ ಕನ್ನಡ ಸಾಹಿತ್ಯದ ಮೇರು ಕೃತಿಗಳಲ್ಲಿ ಇದೊಂದು.
‘ತುಘಲಕ’ನಂತರದ ಕಾರ್ನಾಡರ ಎರಡನೇ ಐತಿಹಾಸಿಕ ನಾಟಕ ‘ತಲೆದಂಡ. ಶರಣ ಚಳವಳಿ, ಹನ್ನೆರಡನೆಯ ಶತಮಾನ ಕಂಡ ಅತ್ಯಂತ ಪ್ರಗತಿಪರವಾದ ಮಾನವೀಯ-ಧಾರ್ಮಿಕ ಚಳವಳಿ. ಈ ಸಾಮಾಜಿಕ ಆಂದೋಲನದ ನಾಯಕರಾದ ಬಸವಣ್ಣನವರ ಸೋಲು-ಗೆಲುವುಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿಸುವ ನಾಟಕ ‘ತಲೆದಂಡ’. ಬಸವನ್ಣನವರನ್ನು ಕುರಿತು ಕನ್ನಡದಲ್ಲಿ ಸಾಹಿತ್ಯ ರಚನೆಗೆ ಕೊರತೆಯೇನಿಲ್ಲ. ಕಂಪೆನಿ ನಾಟಕಗಳ ‘ಜಗಜ್ಯೋತಿ ಬಸವೇಶ್ವರ’, ಬಿ.ಪುಟ್ಟಸ್ವಾಮಯ್ಯನವರ ‘ಕಲ್ಯಾಣ ಕ್ರಾಂತಿ’ಯಿಂದ ಹಿಡಿದು ಇತ್ತೀಚಿನ, ಲಂಕೇಶರ ‘ಸಂಕ್ರಾಂತಿ’, ಎಚ್.ಎಸ್.ಶಿವಪ್ರಕಾಶರ ‘ಮಹಾಚೈತ್ರ’ದವರೆಗೆ ಹಲವಾರು ಕೃತಿಗಳಿವೆ. ‘ತಲೆ ದಂಡ’ದಲ್ಲಿ ಕಾರ್ನಾಡರ ಮುಖ್ಯ ಕಾಳಜಿ ಇರುವುದು ಸಮಾಜ ಪರಿವರ್ತನೆಯಲ್ಲಿ ಮತ್ತು ಅದಕ್ಕೆ ತೆರ ಬೇಕಾದ ಬೆಲೆಯಲ್ಲಿ.ತುಘಲಕ್ ಮತ್ತು ಬಸವಣ್ಣ ಇಬ್ಬರೂ ತಮ್ಮತಮ್ಮ ಕಾಲಘಟ್ಟಗಳಲ್ಲಿದ್ದ ಸಾಮಾಜಿಕ ವ್ಯವಸ್ಥೆಯನ್ನು ತಿರಸ್ಕರಿಸಿ ಹೊಸ ಸಮಾಜವನ್ನು ಕಟ್ಟಲೆತ್ನಿಸಿದವರು ಮತ್ತು ಅದರಲ್ಲಿ ವಿಫಲರಾದವರು.
ಟಿಪ್ಪುವಿನ ಕನಸು ಕಾರ್ನಾಡರ ಇತರ ನಾಟಕಗಳಿಗಿಂತ ತುಂಬ ಭಿನ್ನವಾದದ್ದು. ಟಿಪ್ಪುವಿನ ಪತನದ ಎಷ್ಟೋ ವರ್ಷಗಳನಂತರ ಇಬ್ಬರು ಇತಿಹಾಸಕಾರರಿಂದ ಆರಂಭವಾಗುವ ನಾಟಕ, ಹಿಮ್ಮಿಂಚಿನಲ್ಲಿ ಟಿಪ್ಪುವಿನ ಆದರ್ಶ, ದೇಶಪ್ರೇಮ, ರಾಜಕೀಯ ಮುತ್ಸದ್ದಿತನ ಹಾಗೂ ಅವನ ಕನಸುಗಳನ್ನು ಕಟ್ಟುತ್ತಾಹೋಗುತ್ತದೆ. ಟಿಪ್ಪುವಿನ ಸರ್ವಧರ್ಮ ಸಹಿಷ್ಣುತೆ,ಅವನ ವೈಜ್ಞಾನಿಕ ದೃಷ್ಟಿಕೋನ, ವ್ಯಾಪಾರ ವ್ಯವಹಾರ ದೃಷ್ಟಿ, ರಾಷ್ಟ್ರಪ್ರಜ್ಞೆಯ ಗ್ರಹಿಕೆ ಈ ನೆಲೆಗಳಲ್ಲಿ ಟಿಪ್ಪವಿನ ಕನಸು ಅರ್ಥಪೂರ್ಣವೆನಿಸುತ್ತದೆ. ಟಿಪ್ಪುವಿನ ಚಿತ್ರಣ ಏಕಮುಖವಾಗಿದೆ, ಅವನ ವ್ಯಕ್ತಿತ್ವದ ಒಂದು ಮುಖವನ್ನು ಮಾತ್ರ ತೋರಿಸುತ್ತದೆ, ತುಘಲಕನ ಬಗ್ಗೆ ಕಾರ್ನಾಡರಲ್ಲಿದ್ದ ವಸ್ತುನಿಷ್ಠತೆ ಟಿಪ್ಪುವಿನ ಬಗ್ಗೆ ಇಲ್ಲ ಎಂದು ವಿಮರ್ಶೆ ಟೀಕಿಸಿರುವುದೂ ಉಂಟು. ‘ಯಯಾತಿ’,‘ಅಗ್ನಿ ಮತ್ತು ಮಳೆ’ ಮತ್ತು ‘ಅಂಜು ಮಲ್ಲಿಗೆ’ ನಾವು ಗಮನಿಸಲೇ ಬೇಕಾದ ವೈಶಿಷ್ಟ್ಯಪೂರ್ಣ ನಾಟಕಗಳು. ಯಯಾತಿ ಹಾಗೂ ಅಗ್ನಿ ಮತ್ತು ಮಳೆ ಮಹಾಭಾರತದ ಕಥೆಯನ್ನು ಹೊಸ ದೃಷ್ಟಿಕೋನದಿಂದ ಪರಾಮರ್ಶಿಸುವ ಪ್ರಯತ್ನವಾದರೆ ‘ಅಂಜುಮಲ್ಲಿಗೆ’ ಋಗ್ವೇದದ ಯಮ-ಯಮಿ ಕಥೆಯನ್ನು ಆಧರಿಸಿದ ನಾಟಕ.
‘ಯಯಾತಿ’ ಕಾರ್ನಾಡರು ರ್ಹೋಡ್ಸ್ ಶಿಷ್ಯವೇತನಪಡೆದು ಲಂಡನ್ನಿಗೆ ಪಯಣಿಸುತ್ತಿದ್ದಾಗ ಹಡಗಿನಲ್ಲಿ ರಚಿತವಾದ ನಾಟಕ. ನಾಟಕದ ಹೆಸರೇ ‘ಯಯಾತಿ’ ಎಂದಾದರೂ ಪುರುವೇ ಇಲ್ಲಿ ನಾಯಕ.ಮುಪ್ಪು ಬರುವ ಮುನ್ನವೇ ಮುಪ್ಪನ್ನು ಸ್ವೀಕರಿಸುವುದು ಹಾಗೂ ಮುಪ್ಪಿನ ಕಾಲದಲ್ಲಿ ಯವ್ವನವನ್ನು ಬಯಸುವುದು ಎರಡೂ ಪ್ರಕೃತಿ ನಿಯಮಕ್ಕೆ ವಿರುದ್ಧವಾದುದು.ಅರ್ಥದ ಹಲವು ಆಯಾಮಗಳನ್ನು ಹೊಂದಿರುವ ಈ ನಾಟಕದಲ್ಲಿ ಮನುಷ್ಯ ತನ್ನ ಹೊಣೆಗಾರಿಕ ಸ್ವೀಕರಿಸದಿದ್ದರೆ ಉಂಟಾಗುವ ದುರಂತವನ್ನು ಪರಿಶೀಲಿಸುವ ಪ್ರಯತ್ನ ಇದಾಗಿದೆ ಎಂಬುದು ಕಾರ್ನಾಡರ ಅಂಬೋಣ. ಜ್ಞಾನಾರ್ಜನೆಯ ಮೂರು ವಿಧಾನಗಳನ್ನೂ ಅವುಗಳ ಮೂರು ವಿಭಿನ್ನ ಪರಿಣಾಮಗಳನ್ನೂ ಬಿಂಬಿಸುವ ‘ಅಗ್ನಿ ಮತ್ತು ಮಳೆ’ ಒಂದು ಸಂಕೀರ್ಣ ರಚನೆ. ‘ಅಂಜು ಮಲ್ಲಿಗೆ’ ಗಂಡು ಹೆಣ್ಣಿನ ಸಂಬಂಧಗಳಲ್ಲಿ ಕಂಡುಬರುವ ಮಾನಸಿಕ ತುಮುಲ ಮತ್ತು ವಿಕ್ಷಿಪ್ತತೆಗಳನ್ನು ವಿಶ್ಲೇಷಿಸುವ ನಾಟಕ. ಜಾನಪದ ರಂಗಭೂಮಿಯ ಸತ್ವದಿಂದ ಆಕರ್ಷಿತವಾದ ಕಾರ್ನಾಡರ ಎರಡು ನಾಟಕಗಳು ‘ಹಯವದನ’ ಮತ್ತು ‘ನಾಗ ಮಂಡಲ’. ಬೇತಾಳ ಪಂಚವಿಂಶತಿ ಕಥೆಗಳಿಂದ ಆಯ್ದುಕೊಂಡ ‘ಹಯವದನ’ ಮಾನವನಲ್ಲಿನ ಪರಿಪೂರ್ಣತೆಯ ಆಕಾಂಕ್ಷೆಯನ್ನು ವಸ್ತುವಾಗುಳ್ಳ ನಾಟಕ.ರಂಗದ ಮೇಲೆ ಅತ್ಯಂತ ಯಶಸ್ವಿಯಾದ ಕಾರ್ನಾಡರ ನಾಟಕಗಳಲ್ಲೊಂದು ಎಂಬುದು ಇದರ ಹೆಗ್ಗಳಿಕೆ.ಅಮೆರಿಕದ ಶಿಕಾಗೊ ವಿಶ್ವ ವಿದ್ಯಾನಿಲಯದಲ್ಲಿ ಅತಿಥಿ ಪ್ರಾಧ್ಯಾಪಕರಾಗಿದ್ದಾಗ ಬರೆದದ್ದು ‘ನಾಗಮಂಡಲ’. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಚಲಿತವಿರುವ ಜಾನಪದಪೂಜಾ ವಿಧಿಯನ್ನು ಆಧರಿಸಿರುವ ನಾಟಕ.‘ನಾಗಮಂಡಲ’ದಲ್ಲಿ ಕಾರ್ನಾಡರು ಜಾನಪದ ಮತ್ತು ಪ್ಯಾಂಟಸಿ ತಂತ್ರಗಳನ್ನು ಯಶಸ್ವಿಯಾಗಿ ಬಳಸಿಕೊಂಡಿರುವುದನ್ನು ಕಾಣಬಹುದು. ರಾತ್ರಿಯ ಹೊತ್ತು ನಾಗರ ಅಪ್ಪಣ್ಣನ ರೂಪದಲ್ಲಿ ಬಂದು ರಾಣಿಯನ್ನು ಕೂಡುವುದು ಒಂದು ಅದ್ಭುತರಮ್ಯ ಕಲ್ಪನೆಯೇ ಸರಿ. ಜನ್ನನ ‘ಯಶೋಧರ ಚರಿತ’ ಆಧರಿಸಿದ ‘ಹಿಟ್ಟಿನ ಹುಂಜ’ದಲ್ಲಿ ಜೈನಧರ್ಮದ ತಾತ್ವಿಕ ನೆಲೆಗಟ್ಟಿಗಿಂತ ಯಶೋಧರೆ ಮತ್ತು ಇತರ ಪಾತ್ರಗಳ ಮನಸ್ಸುಗಳ ಅನಾವರಣವೇ ಕಾರ್ನಾಡರಿಗೆ ಮುಖ್ಯವಾಗಿರುವಂತೆ ತೋರುತ್ತದೆ.
ಗಿರೀಶ್ ಕಾರ್ನಾಡರ ನಾಟಕಗಳಲ್ಲಿ ವಿಮರ್ಶಕರು ಪೌರಾತ್ಯ ಮತ್ತು ಪಾಶ್ಚಾತ್ಯ ಚಿಂತನೆಗಳ ಸಂಯೋಜನೆಯನ್ನು ಕಂಡಿದ್ದಾರೆ. ಇತಿಹಾಸ,ಪುರಾಣ ಮತ್ತು ಆಧುನಿಕ ಮನಶ್ಶಾಸ್ತ್ರದಲ್ಲಿ ಗಾಢ ಆಸಕ್ತಿಯಳ್ಳ ಕಾರ್ನಾಡರು, ತಮ್ಮ ಕೃತಿಗಳಿಗೆ ಪುರಾಣ ಮತ್ತು ಇತಿಹಾಸಗಳಿಗೆ ಮೊರೆಹೋಗಿರುವಂತೆಯೇ ಯುಂಗ್ ಸಿದ್ಧಾಂತದ ಹಿನ್ನೆಲೆಯಲ್ಲಿ ಭಾರತೀಯ(ಪೌರಾತ್ಯ) ಮತು ಗ್ರೀಕ್ (ಪಾಶ್ಚಿಮಾತ್ಯ) ಪುರಾಣಗಳನ್ನು ಲೇಖನವೊಂದರಲ್ಲಿ (ಮನ್ವಂತರ 5-6) ವಿಶ್ಲೇಷಿಸಿರುವುದುಂಟು.ಆಶ್ಚರ್ಯದ ಸಂಗತಿ ಎಂದರೆ ಕಾರ್ನಾಡರು ತಮ್ಮ ಬಹುತೇಕ ಕೃತಿಗಳನ್ನು ವಿದೇಶಿ ನೆಲದಲ್ಲಿ ರಚಿಸಿರುವುದು.‘ಅಂಜು ಮಲ್ಲಿಗೆ’ ಕಥೆ ವೇದಮೂಲದ್ದು, ಪಾತ್ರಗಳು ಭಾರತೀಯ, ಆದರೆ ನಾಟಕ ನಡೆಯುವುದು ಇಂಗ್ಲೆಂಡಿನಲ್ಲಿ. ಪೌರಾತ್ಯ ಮತ್ತು ಪಾಶ್ಚಾತ್ಯ ಸಿದ್ಧಾಂತಗಳ ತಾಕಲಾಟ ಅವರ ವ್ಯಕ್ತಿತ್ವದ ಒಂದು ಭಾಗವಾಗಿರುವಂತೆ ಅವರ ಆಧುನಿಕ ಚಿಂತನೆಯಲ್ಲೂ ಪಾಶ್ಚಾತ್ಯ ಮಿಡಿತವಿದೆ.
ಇಪ್ಪತ್ತನೇ ಶತಮಾನದ ಪ್ರಮುಖ ಪಾಶ್ಚಾತ್ಯ ವೌಲ್ಯವೆನಿಸಿದ ಅಸ್ತಿತ್ವವಾದ, ಬದುಕಿನ ಸರ್ವಸ್ವವನ್ನೂ ಇಂದ್ರಿಯಾನುಭವಗಳ ಮೂಲಕವೇ ಕಾಣುವ ತವಕ ಕಾರ್ನಾಡರನ್ನು ಪ್ರಭಾವಿಸದೇ ಬಿಟ್ಟಿಲ್ಲ. ಅವರೇ ಸಂವಾದವೊಂದರಲ್ಲಿ ಹೇಳಿರುವಂತೆ ಇಂದ್ರಿಯಗಳ ಮುಖಾಂತರ ಅರಿವಾದ ಬಾಳಿನಲ್ಲೇ ತನ್ಮಯನಾಗುವ ಇಚ್ಛ್ಛೆಯಿದೆ ನನಗೆ. ಕಾರ್ನಾಡರ ಬರವಣಿಗೆ ವಾದಗಳ ಮಂಡನೆಗಾಗಿ ಮೈತಳೆದಿಲ್ಲ ಎಂಬುದು ಇಲ್ಲ್ಲಿ ಗಮನಿಸ ಬೇಕಾದ ಅಂಶ. ಬದುಕನ್ನು ಅರ್ಥ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಅವರು ಜೀವಂತ ಪಾತ್ರಗಳನ್ನು ಅರ್ಥಪೂರ್ಣ ಸಂಬಂಧಗಳನ್ನು ಹೇಗೆ ಸೃಷ್ಟಿಸಿದ್ದಾರೆಯೋ ಹಾಗೆಯೇ ಅವುಗಳ ಸಾವಯವ ಕೊಂಡಿಯಾಗಿ, ಅವಿನಾಭಾವ ಸಂಯೋಗಗಳಾಗಿ ಪೂರ್ವ-ಪಶ್ಚಿಮಗಳು ಅವರ ಕೃತಿಗಳಲ್ಲಿ ಮುಖಾಮುಖಿಯಾಗಿವೆ.
ಸಾಹಿತ್ಯ ಕ್ಷೇತ್ರದಲ್ಲಿ ನಾಟಕಕಾರರಾಗಿ ಜ್ಞಾನ ಪೀಠ ಪ್ರಶಸ್ತಿಗೆ ಪುರಸ್ಕೃತರಾದವರಲ್ಲಿ ಮೊದಲಿಗರು ಕಾರ್ನಾಡರು.ಅವರು ವಿದೇಶಗಳಲ್ಲಿ ಅತಿ ಹೆಚ್ಚು ಪ್ರಸಿದ್ಧಿ ಪಡೆದಿರುವ ಕನ್ನಡ ನಾಟಕಕಾರರೂ ಹೌದು. ಕಾರ್ನಾಡರ ನಾಟಕಗಳು ಇಂಗ್ಲಿಷ್ ಸೇರಿದಂತೆ ಹಲವಾರು ಭಾಷೆಗಳಿಗೆ ಅನುವಾದಗೊಂಡಿವೆ. ಜ್ಞಾನಪೀಠ ಪ್ರಶಸ್ತಿಗೆ ಮುಂಚೆಯೇ ನಾಟಕಕಾರರಾಗಿ, ನಟರಾಗಿ ರಾಷ್ಟ್ರೀಯ/ಅಂತರ್‌ರಾಷ್ಟ್ರೀಯ ಖ್ಯಾತಿಯನ್ನು ಗಳಿಸಿದ್ದರು. ಅಲ್ಕಾಜಿ ನಿರ್ದೇಶನದ ‘ತುಘಲಕ್’ ವಿದೇಶಿ ರಂಗಯಾತ್ರೆಯನ್ನೇ ಕೈಗೊಂಡಿತ್ತು. ಹಯವದನ ಹಾಗೂ ಇನ್ನಿತರ ನಾಟಕಗಳು ವಿದೇಶಗಳಲ್ಲಿ ಪ್ರದರ್ಶನಗೊಂಡಿವೆ.‘ನಾಗಮಂಡಲ’ ವಿದೇಶಗಳಲ್ಲಿ ಹೆಚ್ಚು ಜನಪ್ರಿಯವಾದ ನಾಟಕ ಎಂದು ವರದಿಯಾಗಿದೆ.
ನಾಟಕಕಾರರಾಗಿ, ರಂಗಭೂಮಿ ಮತ್ತು ಚಲಚಿತ್ರ ನಟರಾಗಿ, ನಿರ್ದೇಶಕರಾಗಿ ಪದ್ಮವಿಭೂಷಣ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿರುವ ಕಾರ್ನಾಡರು ಕರ್ನಾಟಕ ನಾಟಕ ಅಕಾಡಮಿ, ಕೇಂದ್ರ ಸಂಗೀತ ನಾಟಕ ಅಕಾಡಮಿ, ಪುಣೆಯ ಫಿಲ್ಮ್ ಇನ್‌ಸ್ಟಿಟ್ಯೂಟ್, ಲಂಡನ್‌ನ ನಹರೂ ಕೇಂದ್ರ ಹೀಗೆ ಹಲವಾರು ಕಡೆ ಉನ್ನತ ಸ್ಥಾನಗಳಲ್ಲಿ ಕಾರ್ಯನಿರ್ವಹಿಸಿದವರು. ನಾಟಕಕಾರರಾಗಿ ರಂಗ ಭೂಮಿಗೆ, ನಟ-ನಿರ್ದೇಶಕರಾಗಿ ಚಲಚಿತ್ರಕ್ಕೆ ಗಣನೀಯ ಕೊಡುಗೆ ನೀಡಿರುವ ಕಾರ್ನಾಡರ ಮಾರಿ ಮೇಲೆ, ಎಂಬತ್ತು ವಿಶ್ರಾಂತಿಯ ವಯಸ್ಸಲ್ಲ ಎನ್ನುವಂಥ ಮಾಸದ ನಗುವನ್ನು ಅಭಿಮಾನಿಗಳು ಕಾಣುತ್ತಿದ್ದಾರೆ. ಎಂಬತ್ತರ ಉತ್ಸವವಾಗಿ ಅವರ ಚತುರ್ಭಾಷಾ ನಾಟಕೋತ್ಸವ ಈಗ ಬೆಂಗಳೂರಿನಲ್ಲಿ ನಡೆದಿದೆ. ಗಿರೀಶ್ ಕಾರ್ನಾಡರಿಗೆ ಹೇಳೋಣ:
ಸ್ವಸ್ತಿ-ಸ್ವಸ್ತಿ-ಸ್ವಸ್ತಿ.