ರಾಜೀವ್ ಗಾಂಧಿ ವಸತಿ ಯೋಜನೆ: ರಾಜ್ಯದ ಪಾಲು ಬಿಡುಗಡೆಯಾದರೂ ಲಭ್ಯವಾಗದ ಕೇಂದ್ರ ಸರ್ಕಾರದ ಅನುದಾನ
ಶಿವಮೊಗ್ಗ, ಮೇ 28: ನಗರ-ಪಟ್ಟಣ ವ್ಯಾಪ್ತಿಯ ಬಡ-ಮಧ್ಯಮ ವರ್ಗದ ವಸತಿ ರಹಿತರಿಗೆ ಮನೆ ಕಟ್ಟಿಕೊಳ್ಳಲು ಸಹಾಯಧನದ ನೆರವು ಕಲ್ಪಿಸುವ, ಕೇಂದ್ರ - ರಾಜ್ಯ ಸರ್ಕಾರಗಳ ಸಹಭಾಗಿತ್ವದ ರಾಜೀವ್ ಗಾಂಧಿ ವಸತಿ ಯೋಜನೆಯ ಫಲಾನುಭವಿಗಳಿಗೆ ರಾಜ್ಯ ಸರ್ಕಾರದ ಅನುದಾನ ಬಿಡುಗಡೆಯಾದರೂ, ಸಕಾಲಕ್ಕೆ ಕೇಂದ್ರ ಸರ್ಕಾರದ ಪಾಲು ದೊರಕದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಕಚೇರಿಗಳಿಗೆ ಅಲೆದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಪ್ರಸ್ತುತ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯೊಂದರಲ್ಲಿಯೇ, ರಾಜೀವ್ ಗಾಂಧಿ ವಸತಿ ಯೋಜನೆಯಡಿ ಸುಮಾರು 160 ಫಲಾನುಭವಿಗಳಿಗೆ ಕೇಂದ್ರ ಸರ್ಕಾರದ ಅನುದಾನ ಬಿಡುಗಡೆಯಾಗಬೇಕಾಗಿದೆ. ಈಗಾಗಲೇ ಈ ಫಲಾನುಭವಿಗಳಿಗೆ ರಾಜ್ಯ ಸರ್ಕಾರದಿಂದ ಲಭ್ಯವಾಗಬೇಕಾಗಿದ್ದ ಸಹಾಯಧನದ ಪೂರ್ಣ ಮೊತ್ತ ಲಭ್ಯವಾಗಿದೆ. ಆದರೆ ಕೇಂದ್ರದ ಅನುದಾನಕ್ಕಾಗಿ ಜಾತಕ ಪಕ್ಷಿಗಳಂತೆ ಕಾದು ಕುಳಿತುಕೊಳ್ಳುವಂತಾಗಿದೆ.
ಕೇಂದ್ರದ ಪಾಲು ಬಿಡುಗಡೆಯಲ್ಲಾಗುತ್ತಿರುವ ವಿಳಂಬಕ್ಕೆ ನಗರ ಸ್ಥಳಿಯ ಆಡಳಿತದಿಂದ ಸ್ಪಷ್ಟ ಮಾಹಿತಿಗಳು ಲಭ್ಯವಾಗುತ್ತಿಲ್ಲ. ಇನ್ನೊಂದೆಡೆ ಫಲಾನುಭವಿಗಳು ಸಹಾಯಧನಕ್ಕಾಗಿ ಸ್ಥಳೀಯಾಡಳಿತಗಳಿಗೆ ಅಲೆದಾಡುವಂತಾಗಿದೆ. ಸೂಕ್ತ ಮಾಹಿತಿಯಿಲ್ಲದೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಸಹಭಾಗಿತ್ವ: ಈ ಯೋಜನೆಯಡಿ ನಗರ - ಪಟ್ಟಣ ವ್ಯಾಪ್ತಿಯಲ್ಲಿನ ಬಡ ವಸತಿ ರಹಿತರು, ಸ್ವಂತ ಮನೆ ನಿರ್ಮಾಣಕ್ಕೆ ಮುಂದಾದಾಗ ರಾಜ್ಯ ಸರ್ಕಾರದಿಂದ 1.20 ಹಾಗೂ ಕೇಂದ್ರದಿಂದ 1.50 ಲಕ್ಷ ರೂ. ಸಹಾಯ ಧನ ಲಭ್ಯವಾಗುತ್ತದೆ. ಈ ಯೋಜನೆಯ ಸೌಲಭ್ಯ ಪಡೆಯಲು ಕನಿಷ್ಠ 30*40 ಅಳತೆಯ ಸ್ವಂತ ನಿವೇಶನ ಹೊಂದಿರಬೇಕು. ಆಧಾರ್, ಪಡಿತರ ಚೀಟಿ ಸೇರಿದಂತೆ ಸೂಕ್ತ ದಾಖಲೆಗಳೊಂದಿಗೆ ಸ್ಥಳೀಯ ನಗರಾಡಳಿತಕ್ಕೆ ಅರ್ಜಿ ಸಲ್ಲಿಸಬೇಕು. ಸಂಬಂಧಿಸಿದ ಅಧಿಕಾರಿಗಳು ಅರ್ಜಿದಾರರ ಅರ್ಜಿ ಪರಿಶೀಲಿಸಿ, ಸ್ಥಳ ಪರಿಶೀಲನೆ ನಡೆಸುತ್ತಾರೆ. ನಂತರ ನಿಯಮಾನುಸಾರ ಫಲಾನುಭವಿಗಳ ಆಯ್ಕೆ ನಡೆಸುತ್ತಾರೆ.
ರಾಜ್ಯ ಸರ್ಕಾರವು ಹಂತಹಂತವಾಗಿ ತನ್ನ ಪಾಲು ಬಿಡುಗಡೆ ಮಾಡುತ್ತದೆ. ಮನೆ ಪೌಂಡೇಷನ್ ಆದ ನಂತರ 30 ಸಾವಿರ ರೂ., ಲಿಂಟಲ್ ಗೆ 30 ಸಾವಿರ ರೂ., ಆರ್‍ಸಿಸಿಗೆ 30 ಹಾಗೂ ಮನೆ ನಿರ್ಮಾಣ ಪೂರ್ಣಗೊಂಡ ನಂತರ 30 ಸಾವಿರ ರೂ. ಬಿಡುಗಡೆ ಮಾಡುತ್ತದೆ. ಆದರೆ ಕೇಂದ್ರ ಸರ್ಕಾರವು ಮನೆ ಪೂರ್ಣಗೊಂಡ ನಂತರ ಏಕಕಾಲಕ್ಕೆ ತನ್ನ ಪಾಲಿನ 1.50 ಲಕ್ಷ ರೂ. ಬಿಡುಗಡೆಗೊಳಿಸುತ್ತದೆ.
ನಿರ್ಮಾಣ: ಕಟ್ಟಡ ಸಾಮಗ್ರಿಗಳ ದುಬಾರಿ ಬೆಲೆ, ನಿರ್ಮಾಣ ವೆಚ್ಚ ಮತ್ತಿತರ ಕಾರಣಗಳಿಂದ ನಗರ ವ್ಯಾಪ್ತಿಯಲ್ಲಿ ಬಡ - ಮಧ್ಯಮ ವರ್ಗದವರು ಮನೆ ನಿರ್ಮಾಣ ಮಾಡುವುದೇ ಅಕ್ಷರಶಃ ದುಸ್ತರವಾಗಿ ಪರಿಣಮಿಸಿದೆ. ಇಂತಹ ಸ್ಥಿತಿಯಲ್ಲಿ ಕೇಂದ್ರ - ರಾಜ್ಯ ಸರ್ಕಾರದಿಂದ ಲಭ್ಯವಾಗುವ 2.70 ಲಕ್ಷ ರೂ. ಸಹಾಯ ಧನದ ನೆರವಿನ ಕಾರಣದಿಂದ, ಹಲವು ವಸತಿರಹಿತರು ಸಾಲ ಮಾಡಿ ಮನೆ ನಿರ್ಮಾಣಕ್ಕೆ ಮುಂದಾಗುತ್ತಾರೆ. ಆದರೆ ಸಕಾಲದಲ್ಲಿ ಸಹಾಯಧನ ಲಭ್ಯವಾಗದಿರುವುದು ಬಡ-ಮಧ್ಯಮ ವರ್ಗದ ವಸತಿರಹಿತರ ಪಾಡು ಹೇಳತೀರದಂತಾಗಿದೆ. ಅದೆಷ್ಟೊ ಬಾರಿ ಮನೆ ನಿರ್ಮಾಣ ಪೂರ್ಣಗೊಂಡು ಹಲವು ತಿಂಗಳುಗಳೇ ಕಳೆದರೂ ಸಹಾಯಧನದ ಮೊತ್ತ ಕೈ ಸೇರದಿರುವುದು ಹೈರಾಣಾಗುವಂತೆ ಮಾಡಿದೆ. ಇನ್ನಾದರೂ ಸರ್ಕಾರಗಳು ಕಾಲಮಿತಿಯಲ್ಲಿ ಸಹಾಯಧನ ತಲುಪಿಸುವ ನಿಟ್ಟಿನಲ್ಲಿ ಗಮನಹರಿಸಬೇಕು ಎಂದು ಫಲಾನುಭವಿಗಳು ಆಗ್ರಹಿಸುತ್ತಾರೆ.
'ಕೇಂದ್ರ ಸರ್ಕಾರ ಎಚ್ಚೆತ್ತುಕೊಳ್ಳಲಿ': ಮೇಯರ್ ನಾಗರಾಜ್ ಕಂಕಾರಿ
'ರಾಜೀವ್ ಗಾಂಧಿ ವಸತಿ ಯೋಜನೆಯಡಿ ಶಿವಮೊಗ್ಗ ನಗರದಲ್ಲಿ 160 ಫಲಾನುಭವಿಗಳಿಗೆ ಸುಮಾರು 2.70 ಕೋಟಿ ರೂ.ಗಳಷ್ಟು ಮೊತ್ತ ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗಬೇಕಾಗಿದೆ. ದೇಶದಲ್ಲಿರುವ ವಸತಿರಹಿತರಿಗೆ ಕಾಲಮಿತಿಯಲ್ಲಿ ವಸತಿ ಕಲ್ಪಿಸುವುದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಆದರೆ ರಾಜೀವ್ ಗಾಂಧಿ ವಸತಿ ಯೋಜನೆಯ ಫಲಾನುಭವಿಗಳಿಗೆ ಕೇಂದ್ರದಿಂದ ಕಾಲಮಿತಿಯಲ್ಲಿ ಅನುದಾನ ಬಿಡುಗಡೆ ಮಾಡದಿರುವುದು ಖಂಡನಾರ್ಹವಾದುದಾಗಿದೆ. ತಕ್ಷಣವೇ ಪ್ರಧಾನಮಂತ್ರಿ ಇತ್ತ ಗಮನಹರಿಸಬೇಕು. ಬಡ ಫಲಾನುಭವಿಗಳಿಗೆ ಅಗತ್ಯ ನೆರವು ಕಲ್ಪಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು' ಎಂದು ಮೇಯರ್ ನಾಗರಾಜ್ ಕಂಕಾರಿಯವರು ಹೇಳುತ್ತಾರೆ.
'ಬಡವರು ಕಚೇರಿ ಅಲೆಯುವಂತಾಗಿದೆ' : ಕಾಂಗ್ರೆಸ್ ಸದಸ್ಯ ಹೆಚ್.ಸಿ.ಯೋಗೇಶ್
'ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರಾಜೀವ್ ಗಾಂಧಿ ವಸತಿ ಯೋಜನೆಯಡಿ ಮನೆ ನಿರ್ಮಾಣ ಪೂರ್ಣಗೊಂಡಿರುವ ಫಲಾನುಭವಿಗಳಿಗೆ ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆಯಾಗದಿರುವುದರಿಂದ, ಫಲಾನುಭವಿಗಳೂ ಪಾಲಿಕೆ ಕಚೇರಿಗೆ ಎಡತಾಕುವಂತಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಶಿವಮೊಗ್ಗ ಕ್ಷೇತ್ರದ ಸಂಸದರಾಗಿದ್ದ, ಇತ್ತೀಚೆಗೆ ರಾಜೀನಾಮೆ ನೀಡಿದ್ದ ಬಿ.ಎಸ್.ಯಡಿಯೂರಪ್ಪರವರು ಈ ವಿಷಯದತ್ತ ಸೂಕ್ತ ಗಮನಹರಿಸಿದಂತೆ ಕಾಣುತ್ತಿಲ್ಲ. ಇನ್ನಾದರೂ ಅರ್ಹ ಫಲಾನುಭವಿಗಳಿಗೆ ಕಾಲಮಿತಿಯಲ್ಲಿ ಅನುದಾನ ದೊರಕಿಸಿಕೊಡುವ ನಿಟ್ಟಿನಲ್ಲಿ ಕೇಂದ್ರ ಗಮನಹರಿಸಬೇಕು' ಎಂದು ಮಹಾನಗರ ಪಾಲಿಕೆ ಕಾಂಗ್ರೆಸ್ ಸದಸ್ಯ ಹೆಚ್.ಸಿ.ಯೋಗೇಶ್ ತಿಳಿಸಿದ್ದಾರೆ.