ಅಯ್ಯ
ಅಯ್ಯ, ಎನ್ನ ಹೃದಯದಲ್ಲಿ ವ್ಯಾಪ್ತವಾಗಿಹ ಪರಮ ಚಿದ್ಬೆಳಗ
ಹಸ್ತಮಸ್ತಕ ಸಂಯೋಗದಿಂದೊಂದುಗೂಡಿ ಮಹಾಬೆಳಗು ಮಾಡಿದಿರಲ್ಲಾ.
ಅಯ್ಯ, ಎನ್ನ ಮಸ್ತಕದೊಳಗೊಂದುಗೂಡಿದ ಮಹಾಬೆಳಗ ತಂದು
ಭಾವದೊಳಗಿಂಬಿಟ್ಟಿರಲ್ಲಾ.
ಅಯ್ಯ ಎನ್ನ ಭಾವದೊಳಗೆ ಕೂಡಿದ ಮಹಾಬೆಳಗ ತಂದು
ಮನಸಿನೊಳಗಿಂಬಿಟ್ಟಿರಲ್ಲಾ.
ಅಯ್ಯ ಎನ್ನ ಮನಸಿನೊಳು ಕೂಡಿದ ಮಹಾಬೆಳಗ ತಂದು
ಕಂಗಳೊಳಗಿಂಬಿಟ್ಟಿರಲ್ಲಾ.
ಅಯ್ಯ, ಎನ್ನ ಕರಸ್ಥಲದಲ್ಲಿ ಥಳಥಳಿಸಿ ಬೆಳಗಿ ಹೊಳೆಯುತ್ತಿಪ್ಪ
ಅಖಂಡ ತೇಜವನೆ ಇಷ್ಟಲಿಂಗವೆಂಬ ದೃಷ್ಟವ ತೋರಿ
ನಿಶ್ಚಯವ ಶ್ರೋತ್ರದಲ್ಲಿ ಸೃಜಿಸಿದಿರಲ್ಲಾ.
ಅಯ್ಯ, ಎನ್ನ ಶ್ರೋತ್ರದಲ್ಲಿ ಸೃಜಿಸಿದ ಸುಮಂತ್ರದೊಳಗೆ
ನೀವು ನಿಮ್ಮ ಮಹತ್ವವ ಹುದುಗಿದಿರಲ್ಲಾ,
ಅಯ್ಯ ಎನ್ನ ಆರಾಧ್ಯ ಕೂಡಲಸಂಗಮದೇವಾ,
ಎನ್ನೊಳಗೆ ನಿಮ್ಮಿರವ ಈ ಪರಿಯಲ್ಲಿ ಕಾಣಿಸುತ್ತಿರ್ದಿರಲ್ಲಾ.
-ಬಸವಣ್ಣ
ದೇವರೇ ಅರಿವಿನ ರೂಪದಲ್ಲಿ ಗುರುವಾಗಿ ಬಂದು, ಹಸ್ತಮಸ್ತಕ ಸಂಯೋಗದಿಂದ (ದೀಕ್ಷಾಗುರು ತನ್ನ ಕೈಯನ್ನು ಶಿಷ್ಯನ ನೆತ್ತಿಯ ಮೇಲಿಟ್ಟು ಅಲ್ಲಿರುವ ಶಿವಾಂಶದ ಚಿತ್ತನ್ನು ತನ್ನ ಕೈಗೆ ವರ್ಗಾಯಿಸಿಕೊಂಡ ನಂತರ ಅದನ್ನು ಇಷ್ಟಲಿಂಗದಲ್ಲಿ ಪ್ರತಿಷ್ಠಾಪಿಸುವ ಕ್ರಮ. ಜ್ಞಾನ ಮತ್ತು ಕ್ರಿಯೆಯ ಸಂಯೋಗದ ಸಂಕೇತ) ಬಸವಣ್ಣನವರ ಹೃದಯದಲ್ಲಿ ತುಂಬಿಕೊಂಡಿರುವ ಶ್ರೇಷ್ಠವಾದ ಚಿತ್ಪ್ರಕಾಶದ ಜೊತೆ ಪರಂಜ್ಯೋತಿಯನ್ನು ಕೂಡಿಸಿ ಮಹಾಬೆಳಗಾಗಿಸಿದನು. ದೇವರು, ಹೀಗೆ ಅವರ ಮಸ್ತಕದಲ್ಲಿ ಒಂದುಗೂಡಿದ ಮಹಾಬೆಳಗನ್ನು ತಂದು ಭಾವದೊಳಗೆ ಇಟ್ಟ. ಭಾವದೊಳಗಿನ ಮಹಾಬೆಳಗನ್ನು ತಂದು ಮನಸ್ಸಿನಲ್ಲಿಟ್ಟ. ಮನಸ್ಸಿನಲ್ಲಿನ ಮಹಾಬೆಳಗನ್ನು ತಂದು ಕಣ್ಣುಗಳಲ್ಲಿ ಇಟ್ಟ. ಕರಸ್ಥಲದಲ್ಲಿ ಫಳಫಳ ಹೊಳೆಯುತ್ತಿದ್ದ ಅಖಂಡ ಪ್ರಕಾಶವನ್ನೇ ಇಷ್ಟಲಿಂಗವೆಂಬ ಕಣ್ಣಿಗೆ ಕಾಣುವ ಲಿಂಗವಾಗಿಸಿ ಸತ್ಯವನ್ನು ಕಿವಿಯಲ್ಲಿ ಸೃಷ್ಟಿಸಿದ. ಕಿವಿಯಲ್ಲಿ ಸೃಷ್ಟಿಸಿದ ‘ಓಂ ನಮಃ ಶಿವಾಯ’ ಎಂಬ ಸುಮಂತ್ರದಲ್ಲಿ ದೇವರು ತನ್ನ ಮಹತ್ವವನ್ನು ಅಡಗಿಸಿಟ್ಟ. ‘‘ದೇವರೇ ನೀನು ನಿನ್ನ ಅಸ್ತಿತ್ವವನ್ನು ಈ ರೀತಿಯಲ್ಲಿ ನನ್ನೊಳಗೆ ತೋರಿಸುತ್ತಿರುವಿಯಲ್ಲಾ’’ ಎಂದು ಬಸವಣ್ಣನವರು ಪರಮಾನಂದ ವ್ಯಕ್ತಪಡಿಸುತ್ತಾರೆ. ಹೀಗೆ ಆತ್ಮನ ಜೊತೆಗಿರುವ ಚಿತ್ತ, ಬುದ್ಧಿ, ಮನಸ್ಸು ಮತ್ತು ಅಹಂಕಾರಗಳೆಂಬ ಕರಣಚತುಷ್ಟಯಗಳು ತಮ್ಮ ದುರ್ಗುಣಗಳನ್ನು ಕಳೆದುಕೊಂಡು ಒಳಗಿನ ಘನದ ಜೊತೆ ಒಂದಾದಾಗ ಮಾನವರು ದೇವಸ್ವರೂಪರೇ ಆಗುವರು.
ದೇವರು ನಮ್ಮಳಗಿದ್ದು ತನ್ನ ರೂಪವನ್ನು ತೋರಿಸುವುದಕ್ಕಾಗಿ ಜಂಗಮಲಿಂಗದ ರೂಪದಲ್ಲಿ ಅಂದರೆ ಸಕಲಜೀವಾತ್ಮರ ರೂಪದಲ್ಲಿ ಕಾಣಿಸಿಕೊಳ್ಳುತ್ತಾನೆ. ಕಿವಿಯಲ್ಲಿ ಸುಮಂತ್ರವನ್ನು ತುಂಬಿಕೊಂಡು, ಮಂಗಳಕರವಾದ ಮನಸ್ಸಿನಿಂದ ಮತ್ತು ಧರ್ಮದ ಮೂಲವಾದಂಥ ದಯಾಪೂರ್ಣವಾದ ಕಣ್ಣುಗಳಿಂದ ನಮ್ಮಿಳಗಿನ ದೇವರನ್ನು ಇಷ್ಟಲಿಂಗ ಮತ್ತು ಸಕಲಜೀವಾತ್ಮರ ರೂಪದಲ್ಲಿ ಕಾಣಬೇಕು ಎಂದು ಬಸವಣ್ಣನವರು ಸೂಚಿಸುತ್ತಾರೆ.