ರೈತರಿಗೆ ಸಿಗಲಿದೆಯೇ ಸಿಹಿ ಸುದ್ದಿ?
ಆಂಧ್ರ-ತೆಲಂಗಾಣ ಮಾದರಿಯಲ್ಲಿ ಸಾಲ ಮನ್ನಾ ಸಾಧ್ಯತೆ
ಬೆಂಗಳೂರು, ಮೇ 29: ರೈತರ ಸಾಲ ಮನ್ನಾ ವಿಚಾರದಲ್ಲಿ ಬುಧವಾರ ನಿರ್ಧಾರ ಪ್ರಕಟಿಸುವ ಕುರಿತು ಘೋಷಿಸಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಆಂಧ್ರಪ್ರದೇಶ-ತೆಲಂಗಾಣ ಮಾದರಿಯಲ್ಲಿ ನಮ್ಮ ರಾಜ್ಯದಲ್ಲಿಯೂ ರೈತರ ಸಾಲ ಮನ್ನಾ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಮಂಗಳವಾರ ಗೃಹ ಕಚೇರಿ ಕೃಷ್ಣಾದಲ್ಲಿ ಆರ್ಥಿಕ ಇಲಾಖೆಯ ಅಧಿಕಾರಿಗಳೊಂದಿಗೆ ಸುದೀರ್ಘ ಸಭೆ ನಡೆಸಿದ ಕುಮಾರಸ್ವಾಮಿ, 53 ಸಾವಿರ ಕೋಟಿ ರೂ.ಸಾಲ ಮನ್ನಾದಿಂದಾಗಿ ರಾಜ್ಯದ ಬೊಕ್ಕಸದ ಮೇಲೆ ಆಗುವ ಹೊರೆ, ಆರ್ಥಿಕ ಅಸಮತೋಲನ, ಸಂಪನ್ಮೂಲ ಕ್ರೋಡೀಕರಣ ಸೇರಿದಂತೆ ಇನ್ನಿತರ ವಿಚಾರಗಳ ಕುರಿತು ಮಾಹಿತಿಯನ್ನು ಪಡೆದುಕೊಂಡರು.
ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಲ್ಲಿಯೂ ರೈತರ ಸಾಲ ಮನ್ನಾ ಆಗಿದೆ. ಇದರಿಂದಾಗಿ, ಆಂಧ್ರಪದೇಶದ ಬೊಕ್ಕಸಕ್ಕೆ 22 ಸಾವಿರ ಕೋಟಿ ರೂ.ಹಾಗೂ ತೆಲಂಗಾಣ ಸರಕಾರದ ಬೊಕ್ಕಸಕ್ಕೆ 17 ಸಾವಿರ ಕೋಟಿ ರೂ.ಗಳ ಹೊರೆಯಾಗಿದೆ. ಇದನ್ನು ಎರಡು ರಾಜ್ಯಗಳ ಸರಕಾರಗಳು ಕಂತುಗಳ ಮೂಲಕ ಸಂಬಂಧಪಟ್ಟ ಬ್ಯಾಂಕುಗಳಿಗೆ ಪಾವತಿಸುತ್ತಿವೆ ಎಂದು ತಿಳಿದು ಬಂದಿದೆ.
ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಿದ ಬಳಿಕ ಆ ಹಣವನ್ನು ಸಂಬಂಧಪಟ್ಟ ಬ್ಯಾಂಕುಗಳಿಗೆ ಸರಕಾರವೇ ನೇರವಾಗಿ ಕಂತುಗಳ ಮೂಲಕ ಪಾವತಿಸುತ್ತದೆ. ಹಣಕಾಸಿನ ವ್ಯವಹಾರಕ್ಕೆ ಸರಕಾರದ ಭದ್ರತೆ ಇರುವ ಕಾರಣದಿಂದ ಬ್ಯಾಂಕುಗಳು ಸಮ್ಮತಿ ನೀಡಿವೆ. ಅದೇ ಮಾದರಿಯನ್ನು ನಮ್ಮ ರಾಜ್ಯದಲ್ಲಿ ಅನುಸರಿಸುವ ಕುರಿತು ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಏಕಕಾಲಕ್ಕೆ 53 ಸಾವಿರ ಕೋಟಿ ರೂ.ಗಳನ್ನು ಬ್ಯಾಂಕುಗಳಿಗೆ ಹಣ ಸಂದಾಯ ಮಾಡುವುದು ಅಸಾಧ್ಯ ಎಂಬುದು ಮುಖ್ಯಮಂತ್ರಿಗೂ ಗೊತ್ತಿದೆ. ಆದುದರಿಂದಲೇ, ಆಂಧ್ರ-ತೆಲಂಗಾಣ ಮಾದರಿಯನ್ನು ಅನುಸರಿಸಲು ಮುಂದಾಗಿದ್ದಾರೆ. ಇದಕ್ಕೆ ಆರ್ಥಿಕ ಇಲಾಖೆಯ ಅಧಿಕಾರಿಗಳು ಸಮ್ಮತಿ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಕಂತುಗಳ ಪಾವತಿ ಮಾಡಲು ಬೇಕಾದ ಹೆಚ್ಚುವರಿ ಹಣವನ್ನು ಯಾವ ರೀತಿಯಲ್ಲಿ ಕ್ರೋಡೀಕರಿಸಿ, ಸರಕಾರದ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿಕೊಳ್ಳಬಹುದು ಎಂಬ ಸಲಹೆಯನ್ನು ಅಧಿಕಾರಿಗಳು ನೀಡಿದ್ದಾರೆ ಎಂದು ಹೇಳಲಾಗಿದೆ. ಈ ಸಂಬಂಧ ನಾಳೆ ರೈತ ಸಂಘಟನೆಗಳ ಮುಖಂಡರೊಂದಿಗೆ ಸಭೆ ನಡೆಸಿದ ಬಳಿಕ ಮುಖ್ಯಮಂತ್ರಿ ತಮ್ಮ ತೀರ್ಮಾನ ಪ್ರಕಟಿಸಲಿದ್ದಾರೆ ಎಂದು ಹೇಳಲಾಗಿದೆ.
ಹಣಕಾಸು ಇಲಾಖೆಗಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಹಗ್ಗಜಗ್ಗಾಟ ಮುಂದುವರೆದಿರುವ ನಡುವೆಯೇ, ಹಣಕಾಸು ಇಲಾಖೆಯನ್ನು ಮುಖ್ಯಮಂತ್ರಿ ಅಧೀನದಲ್ಲೆ ಇರಿಸಲು ಕಾಂಗ್ರೆಸ್ ಹೈಕಮಾಂಡ್ ಸಹಮತ ವ್ಯಕ್ತಪಡಿಸಿದೆ ಎನ್ನಲಾಗಿದೆ.
ಹಣಕಾಸು ಇಲಾಖೆ ಇಲ್ಲದೇ ಮುಖ್ಯಮಂತ್ರಿ ಸ್ಥಾನವನ್ನು ಇಟ್ಟುಕೊಂಡು ನಾನು ಏನು ಮಾಡಲಿ ಎಂದು ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದರಿಂದ, ಎಚ್ಚೆತ್ತುಕೊಂಡಿರುವ ಕಾಂಗ್ರೆಸ್ ಹೈಕಮಾಂಡ್, ಹಣಕಾಸು ಇಲಾಖೆಗಾಗಿ ಹಿಡಿದಿದ್ದ ಪಟ್ಟನ್ನು ಸಡಿಲಗೊಳಿಸಿದೆ ಎಂದು ತಿಳಿದು ಬಂದಿದೆ.