ತಪ್ಪು ಮಾಹಿತಿ ನೀಡುವ ಲೆಕ್ಕಾಚಾರಗಳು
ಮೋದಿ ಸರಕಾರವು ಉದ್ಯೋಗಗಳ ಬಗ್ಗೆ ಮಾಹಿತಿ ನೀಡಲು ಆಧರಿಸಿರುವ ವಿಧಾನವು ಯಾವುದೇ ಪರೀಕ್ಷೆಗೊಳಪಟ್ಟಿಲ್ಲವಾದ್ದರಿಂದ ತಪ್ಪಾಗಿರುವ ಸಾಧ್ಯತೆಯಿದೆ.
ಒಂದು ವೇಳೆ ಇಪಿಎಫ್ಒ ಮತ್ತು ಎನ್ಪಿಎಸ್ ತೋರುತ್ತಿರುವುದೆಲ್ಲಾ ಹೊಸದಾಗಿ ಸೃಷ್ಟಿಯಾಗುತ್ತಿರುವ ಉದ್ಯೋಗಗಳೇ ಎಂದಿಟ್ಟುಕೊಂಡರೂ ಆರು ತಿಂಗಳಲ್ಲಿ ಸೃಷ್ಟಿಯಾಗಿರುವ ಉದ್ಯೋಗಗಳ ಸಂಖ್ಯೆ 21 ಲಕ್ಷ ಮತ್ತು ಒಂದು ವರ್ಷದಲ್ಲಿ ಸೃಷ್ಟಿಸಲ್ಪಟ್ಟಿರುವುದು 42 ಲಕ್ಷ ಹೊಸ ಉದ್ಯೋಗಗಳು ಮಾತ್ರ. ಇದು ಸರಕಾರ ಕೊಚ್ಚಿಕೊಳ್ಳುತ್ತಿರುವ 70 ಲಕ್ಷಕ್ಕೆ ಹೋಲಿಸಿದರೆ ಬಹಳ ಕಡಿಮೆಯೇ ಆಗಿದೆ.
ಕೇಂದ್ರ ಸರಕಾರವು ದೇಶದ ಔಪಚಾರಿಕ ಕ್ಷೇತ್ರಗಳಲ್ಲಿ ಸೃಷ್ಟಿಯಾಗುತ್ತಿರುವ ಉದ್ಯೋಗಗಳನ್ನು ಅಂದಾಜು ಮಾಡಲು ಯಾವುದೇ ವಿಧಾನದ ಪರೀಕ್ಷೆಗೊಳಪಡದ ಹೊಸ ಪದ್ಧತಿಯೊಂದನ್ನು ಇತ್ತೀಚೆಗೆ ಅಳವಡಿಸಲು ಪ್ರಾರಂಭಿಸಿದೆ. ಹೀಗಾಗಿ ಆ ಮಾಹಿತಿಗಳು ವಿಶ್ವಾಸಾರ್ಹವಾದ ಇತರ ಹಲವಾರು ಮೂಲದಿಂದ ದೊರಕುತ್ತಿರುವ ಉದ್ಯೋಗ ಮಾಹಿತಿಗೆ ವ್ಯತಿರಿಕ್ತವಾಗಿದೆ. ಆದ್ದರಿಂದ ಈ ಹೊಸ ಪದ್ಧತಿಯು ಸರಕಾರವು ತನ್ನ ಹಿತಾಸಕ್ತಿಯನ್ನು ಈಡೇರಿಸಿಕೊಳ್ಳಲು ಕಂಡುಕೊಂಡಿರುವ ಹೊಸ ವಿಧಾನವೇ ಆಗಿದೆ.
2018ರ ಎಪ್ರಿಲ್ 25ರಂದು ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ), ಕಾರ್ಮಿಕರ ರಾಜ್ಯ ವಿಮಾ ನಿಗಮ (ಇಎಸ್ಐಸಿ) ಮತ್ತು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರಗಳು (ಪಿಎಫ್ಆರ್ಡಿಎ) ವೇತನ ಪಟ್ಟಿ (ಪೇ ರೋಲ್) ವರದಿಯನ್ನು ಆಧರಿಸಿ ಔಪಚಾರಿಕ ಉದ್ಯೋಗಗಳ ದತ್ತಾಂಶವನ್ನು ಬಿಡುಗಡೆ ಮಾಡಿದವು. ವರದಿಯನ್ನು ಕರ್ನಾಟಕದ ವಿಧಾನ ಸಭಾ ಚುನಾವಣೆಗೆ ಎರಡು ವಾರಗಳ ಮುನ್ನ ಬಿಡುಗಡೆ ಮಾಡಲಾಯಿತು. ಇದೇ ರೀತಿ ಇನ್ನೊಂದು ವರದಿಯನ್ನು ಕೇಂದ್ರ ಬಜೆಟ್ ಮಂಡಿಸುವ ಎರಡು ವಾರಗಳ ಮುನ್ನ ಜನವರಿಯಲ್ಲಿ ಬಿಡುಗಡೆ ಮಾಡಲಾಗಿತ್ತು. ಆ ವರದಿಯು ತನ್ನ ಅಧ್ಯಯನಕ್ಕೆ ಇಪಿಎಫ್ಒ, ಇಎಸ್ಐಸಿ ಮತ್ತು ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್ಪಿಎಸ್)ಗಳ ಆಡಳಿತಾತ್ಮಕ ದಾಖಲೆಗಳನ್ನು ಬಳಸಿಕೊಂಡಿತ್ತು. ಈ ವರದಿಯನ್ನು ಬಳಸಿಕೊಂಡು ಪ್ರಧಾನಮಂತ್ರಿಗಳು ಮತ್ತು ಹಣಕಾಸು ಮಂತ್ರಿಗಳು 2017-18 ರಲ್ಲಿ ಆರ್ಥಿಕತೆಯು 70 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸಿದೆ ಎಂದು ಪ್ರತಿಪಾದಿಸಲು ಮತ್ತು ಆರ್ಥಿಕತೆಯು ತೀವ್ರ ಅಭಿವೃದ್ಧಿಯನ್ನು ಸಾಧಿಸುತ್ತಿದೆಯೆಂದು ಹೇಳಿಕೊಳ್ಳುತ್ತಿದ್ದರೂ ಸಾಕಷ್ಟು ಉದ್ಯೋಗಗಳನ್ನು ಸೃಷ್ಟಿಸದ ವಾಸ್ತವವನ್ನು ಮರೆಮಾಚಲು ಬಳಸಿಕೊಂಡರು.
ಜನವರಿ ವರದಿ ಬಿಡುಗಡೆಯಾದ ಮೇಲೆ ಹೊರಬಂದ ಸಂಗತಿಯನ್ನು ಪುನರುಚ್ಚರಿಸುವುದಾದರೆ: ಆ ಅಂದಾಜುಗಳು ಎಷ್ಟು ಪ್ರಮಾಣದ ಕಾರ್ಮಿಕರು ಹೊಸದಾಗಿ ಸಾಮಾಜಿಕ ಭದ್ರತಾ ಸೌಲಭ್ಯಗಳ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ ಎಂಬ ಪ್ರಮಾಣವನ್ನಷ್ಟೇ ನೀಡುತ್ತಿತ್ತು. ಅದರಲ್ಲಿ ಇಎಸ್ಐಸಿ ಐಚ್ಛಿಕವಾಗಿದ್ದರೆ ಇಪಿಎಫ್ಒ ಕಡ್ಡಾಯವಾದ ಯೋಜನೆಯಾಗಿದೆ. ರಾಷ್ಟ್ರೀಯ ಪಿಂಚಣಿ ಯೋಜನೆಯು ಕೇಂದ್ರ ಸರಕಾರದ ಉದ್ಯೋಗಿಗಳಿಗೆ ಕಡ್ಡಾಯವಾಗಿದ್ದರೆ, ಕೆಲವು ರಾಜ್ಯ ಸರಕಾರಗಳ ಮತ್ತು ಖಾಸಗಿಕ್ಷೇತ್ರದ ಉದ್ಯೋಗಿಗಳಿಗೆ ಐಚ್ಛಿಕವಾಗಿವೆ. ಇಪಿಎಫ್ಒ ನೋಂದಣಿಯೂ ಸಹ ಕೆಲವು ನಿರ್ದಿಷ್ಟ ಮಾನದಂಡಗಳನ್ನು ಪೂರೈಸುವ ಉದ್ದಿಮೆಗಳಿಗೆ ಮಾತ್ರ ಕಡ್ಡಾಯವಾಗಿದೆ. 2017ರ ಸೆಪ್ಟಂಬರ್ ಮತ್ತು 2018ರ ಫೆಬ್ರವರಿಯ ನಡುವೆ ಇಪಿಎಫ್ಒಗೆ 32.7 ಲಕ್ಷ ಹೊಸ ಖಾತೆಗಳು ಮತ್ತು ಎನ್ಪಿಎಸ್ ಗೆ 4.2 ಲಕ್ಷ ಹೊಸಖಾತೆಗಳು ಜಮೆಯಾದವು. ಇದರಲ್ಲಿ 25 ವಯಸ್ಸಿನೊಳಗಿನ ಗುಂಪಿನಲ್ಲಿ 20 ಲಕ್ಷ ಹೊಸ ಖಾತೆಗಳು ಇಪಿಎಫ್ಒ ಅಡಿಯಲ್ಲೂ ಮತ್ತು ಸರಕಾರಿ ಉದ್ಯೋಗಿಗಳ ಎನ್ಪಿಎಸ್ ಅಡಿಯಲ್ಲಿ 84,659 ಹೊಸ ಖಾತೆಗಳು ನೋಂದಣಿಯಾಗಿದ್ದವು. ಆದರೆ ಇಎಸ್ಐಸಿಯಡಿ 2017ರ ಸೆಪ್ಟಂಬರ್ನಲ್ಲಿ 2.9 ಕೋಟಿ ಖಾತೆಗಳಿದ್ದದ್ದು 2018ರ ಫೆಬ್ರವರಿ ವೇಳೆಗೆ 2.7 ಕೋಟಿಗೆ ಇಳಿದಿತ್ತು.
ಇಎಸ್ಐಸಿ ಯೋಜನೆಯು ಐಚ್ಛಿಕವಾಗಿರುವುದರಿಂದ ಅದರ ದತ್ತಾಂಶಗಳನ್ನು ಸರಿಯಾಗಿ ವ್ಯಾಖ್ಯಾನ ಮಾಡುವುದು ಕಷ್ಟ. ಅಷ್ಟು ಮಾತ್ರವಲ್ಲದೆ ತಿಂಗಳಿಂದ ತಿಂಗಳಿಗೆ ಅದು ತರ್ಕರಹಿತ ಏರುಪೇರುಗಳನ್ನು ತೋರಿಸುತ್ತದೆ. ಆದರೆ ಇಪಿಎಫ್ಒ ಖಾತೆಗಳಲ್ಲೂ ಹೊಸದಾಗಿ ಕಾರ್ಮಿಕ ಮಾರುಕಟ್ಟೆಯಲ್ಲಿ ಸೇರಿಕೊಂಡ ಹೊಸ ಉದ್ಯೋಗಗಳು ಯಾವುವು ಮತ್ತು ಉದ್ದಿಮೆಯ ಸ್ವರೂಪ ಬದಲಾದ ಕಾರಣದಿಂದಾಗಿ ಔಪಚಾರಿಕ ವಲಯಕ್ಕೆ ಸೇರ್ಪಡೆಯಾದ ಉದ್ಯೋಗಗಳು ಯಾವುವು ಎಂದು ಗುರುತಿಸುವುದು ಕಷ್ಟ. ಒಂದು ವೇಳೆ ಇಪಿಎಫ್ಒ ಮತ್ತು ಎನ್ಪಿಎಸ್ ತೋರುತ್ತಿರುವುದೆಲ್ಲಾ ಹೊಸದಾಗಿ ಸೃಷ್ಟಿಯಾಗುತ್ತಿರುವ ಉದ್ಯೋಗಗಳೇ ಎಂದಿಟ್ಟುಕೊಂಡರೂ ಆರು ತಿಂಗಳಲ್ಲಿ ಸೃಷ್ಟಿಯಾಗಿರುವ ಉದ್ಯೋಗಗಳ ಸಂಖ್ಯೆ 21 ಲಕ್ಷ ಮತ್ತು ಒಂದು ವರ್ಷದಲ್ಲಿ ಸೃಷ್ಟಿಸಲ್ಪಟ್ಟಿರುವುದು 42 ಲಕ್ಷ ಹೊಸ ಉದ್ಯೋಗಗಳು ಮಾತ್ರ. ಇದು ಸರಕಾರ ಕೊಚ್ಚಿಕೊಳ್ಳುತ್ತಿರುವ 70 ಲಕ್ಷಕ್ಕೆ ಹೋಲಿಸಿದರೆ ಬಹಳ ಕಡಿಮೆಯೇ ಆಗಿದೆ.
ಮೇಲಾಗಿ, ಒಟ್ಟಾರೆ ಆರ್ಥಿಕತೆಯಲ್ಲಿರುವ ಕಾರ್ಮಿಕರ ಪ್ರಮಾಣಕ್ಕೆ ಹೋಲಿಸಿದಲ್ಲಿ ಔಪಚಾರಿಕ ಕ್ಷೇತ್ರದಲ್ಲಿ ಕೆಲಸ ಮಾಡುವ ಕಾರ್ಮಿಕರ ಸಂಖ್ಯೆ ಹತ್ತನೇ ಒಂದು ಭಾಗಕ್ಕಿಂತ ಕಡಿಮೆ. ಹೀಗಾಗಿ ಇದೇ ಅಂಕಿಅಂಶಗಳನ್ನು ಇಡೀ ಆರ್ಥಿಕತೆಗೆ ವಿಸ್ತರಿಸಿ ಅಂದಾಜು ಮಾಡುವುದಾದರೆ ಉಳಿದ ಶೇ.90ರಷ್ಟು ಕಾರ್ಮಿಕ ಶಕ್ತಿ ಇರುವ ಕ್ಷೇತ್ರದಲ್ಲಿ ಉದ್ಯೋಗಗಳ ಸಂಖ್ಯೆ ಒಂದೋ ಸ್ಥಗಿತಗೊಂಡಿದೆ ಅಥವಾ ಆ ಕ್ಷೇತ್ರದ ಗಾತ್ರವೇ ಹೆಚ್ಚುತ್ತಿದೆ ಎಂದಾಗುತ್ತದೆ. ಆದರೆ ಈ ಯಾವ ಅಂದಾಜುಗಳು ನೈಜವಾದುದಲ್ಲ. ಆದರೆ ರಾಷ್ಟ್ರೀಯ ಸ್ಯಾಂಪಲ್ ಸರ್ವೇ ಕಚೇರಿಯು (ಎನ್ಎಸ್ಎಸ್ಒ) ನಡೆಸಿದ ಉದ್ಯೋಗ-ನಿರುದ್ಯೋಗ ಸರ್ವೇಯ ಪ್ರಕಾರ 2004-05 ಮತ್ತು 2011-12ರ ನಡುವೆ ಕೃಷಿ ಕ್ಷೇತ್ರವೊಂದರಲ್ಲೇ ಪ್ರತಿವರ್ಷ 50 ಲಕ್ಷ ಉದ್ಯೋಗಗಳು ಕಡಿತವಾದವು. ಹೀಗೆ ವೇತನಪಟ್ಟಿ ಆಧರಿಸಿ ಮಾಡಲಾದ ಅಂದಾಜಿನ ಪ್ರಕಾರ ಎಷ್ಟು ಹೆಚ್ಚುವರಿ ಉದ್ಯೋಗಗಳು ಸೃಷ್ಟಿಯಾಗಿದೆ ಎಂದು ಸರಕಾರ ಕೊಚ್ಚಿಕೊಳ್ಳುತ್ತಿದೆಯೋ ಅದಕ್ಕಿಂತ ಕೃಷಿ ಕ್ಷೇತ್ರದಲ್ಲಿ ಆಗಿರುವ ಉದ್ಯೋಗ ನಷ್ಟ ಹೆಚ್ಚು ಎಂದು ತಿಳಿದುಬರುತ್ತದೆ. ಕಾರ್ಮಿಕ ಬ್ಯೂರೋ ಇತ್ತೀಚೆಗೆ ನಡೆಸಿದ ಉದ್ಯೋಗ ಸರ್ವೇಯ ಪ್ರಕಾರ ಕೃಷಿಯಲ್ಲಿ ಕಡಿತವಾಗುತ್ತಿರುವ ಉದ್ಯೋಗದ ದರ ಹೆಚ್ಚೂ ಕಡಿಮೆ ಇದೇ ಪ್ರಮಾಣದಲ್ಲಿ ಮುಂದುವರಿದಿದೆ ಅಥವಾ ನರೇಂದ್ರ ಮೋದಿ ಸರಕಾರದಡಿಯಲ್ಲಿ ಇನ್ನೂ ಹೆಚ್ಚಿನ ಕುಸಿತ ಕಂಡಿದೆ. ನೋಟು ನಿಷೇಧ ಮತ್ತು ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಪದ್ಧತಿಯನ್ನು ತರಾತುರಿಯಲ್ಲಿ ಜಾರಿ ಮಾಡಿದ್ದರಿಂದ ಅನೌಪಚಾರಿಕ ಕ್ಷೇತ್ರದಲ್ಲಿನ ಉದ್ಯೋಗಗಳ ಮೇಲೆ ದೊಡ್ಡ ಪೆಟ್ಟೇ ಬಿದ್ದಿದೆ.
ಹಲವಾರು ಬಾರಿ ಪುನುರುಚ್ಚರಿರುವಂತೆ ಈಗ ಆಗಬೇಕಿರುವುದು ನಿಯಮಿತವಾದ ವಾರ್ಷಿಕ ಗೃಹವಾರು ಉದ್ಯೋಗ ಸಮೀಕ್ಷೆ. 2004-11ರ ನಡುವೆ ಎನ್ಎಸ್ಎಸ್ಒ ಸಂಸ್ಥೆಯು ಉದ್ಯೋಗ ಮತ್ತು ನಿರುದ್ಯೋಗದ ಬಗ್ಗೆ ಆರು ವಾರ್ಷಿಕ ಸರ್ವೇಗಳನ್ನು ನಡೆಸಿತ್ತು. ಅವುಗಳಲ್ಲಿ ನಾಲ್ಕು ದೊಡ್ಡ ಮಟ್ಟದ ಸ್ಯಾಂಪಲ್ ಸರ್ವೇ ಸುತ್ತುಗಳಾಗಿದ್ದವು. 6ನೇ ಸುತ್ತು ಅರ್ಧ ವಾರ್ಷಿಕ ಸುತ್ತಾಗಿತ್ತು. ಅವೆಲ್ಲವೂ ಉದ್ಯೋಗಗಳ ಕುರಿತು ಹೆಚ್ಚು ಕಡಿಮೆ ವಾರ್ಷಿಕ ಅಂದಾಜುಗಳನ್ನೇ ಮುಂದಿಟ್ಟಿದ್ದವು. ದುರದೃಷ್ಟವಶಾತ್ 2011-12ರ ನಂತರ ಅಂಥ ಸರ್ವೇಗಳು ಮುಂದುವರಿಯಲಿಲ್ಲ. ಗೃಹವಾರು ನಡೆಯುತ್ತಿದ್ದ ಮತ್ತೊಂದು ಸರ್ವೇ ಎಂದರೆ ಕಾರ್ಮಿಕ ಬ್ಯೂರೋ ನಡೆಸುತ್ತಿದ್ದ ವಾರ್ಷಿಕ ಉದ್ಯೋಗ ಸರ್ವೇ. ಅಂಥ ಒಂದು ಸರ್ವೇಯು ಕೊನೆಯ ಬಾರಿ ನಡೆದದ್ದು 2015-16ರಲ್ಲಿ. ಆ ಸರ್ವೇಯೂ ಸಹ 2014ರ ಮಾರ್ಚ್ ಮತ್ತು 2015ರ ಜುಲೈ ನಡುವೆ 1.6 ಕೋಟಿ ಕಾರ್ಮಿಕರು ಕಡಿಮೆಯಾಗಿರುವುದನ್ನು ತೋರಿಸಿತ್ತು. ಹೀಗಾಗಿ ಆ ಸರ್ವೇಗಳನ್ನು ನಿಲ್ಲಿಸಿಬಿಡಲಾಗಿದೆ.
ಕಾರ್ಮಿಕ ಬ್ಯೂರೋನ ತ್ರೈಮಾಸಿಕ ವರದಿಗಳು ಮತ್ತು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಇಕಾನಮಿಯಂಥ ಇತರ ಮೂಲಗಳು ನಡೆಸಿದ ಅಧ್ಯಯನಗಳೂ ಸಹ ಹಿಂದಿನ ಸರಕಾರಗಳಡಿಯಲ್ಲಿ ಸೃಷ್ಟಿಯಾದ ಉದ್ಯೋಗಗಳಿಗೆ ಹೋಲಿಸಿದಲ್ಲಿ ಹಾಲಿ ಸರಕಾರದಡಿ ಕಳೆದ ಮೂರುವರ್ಷಗಳಲ್ಲಿ ತುಂಬಾ ಕಡಿಮೆ ಉದ್ಯೋಗಗಳು ಸೃಷ್ಟಿಯಾಗಿವೆ ಎಂಬ ಅಂಶವನ್ನು ಬಯಲುಮಾಡಿವೆ. ಈಗ ಎನ್ಎಸ್ಎಸ್ಒ ಸಂಸ್ಥೆಯು ತನ್ನ ನಗರ ಪ್ರದೇಶದ ತ್ರೈಮಾಸಿಕ ಸರಣಿಯನ್ನು ಮತ್ತು ಗ್ರಾಮೀಣ ಪ್ರದೇಶದ ವಾರ್ಷಿಕ ಸರಣಿ ಸರ್ವೇಯನ್ನು ಬಹಳ ತಡವಾಗಿ ಪ್ರಾರಂಭಿಸಿದೆ. ಆದರೆ 2019ರ ಚುನಾವಣೆಗಳಿಗೆ ಮುನ್ನ ಅದರ ಫಲಿತಾಂಶಗಳು ಬರುವುದು ಕಷ್ಟಸಾಧ್ಯ.
ಕಳೆದ ಒಂದೂವರೆ ದಶಕಗಳಿಂದ ಭಾರತದ ಆರ್ಥಿಕತೆಯು ಶೇ.7ರ ಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿದ್ದರೂ ಸಾಕಷ್ಟು ಉದ್ಯೋಗಗಳನ್ನು ಸೃಷ್ಟಿಸಲಾಗದ ಸಂದರ್ಭವಿದ್ದು ಈ ವೇತನ ಪಟ್ಟಿಯಾಧರಿಸಿದ ಉದ್ಯೋಗ ಪ್ರಮಾಣದ ಅಂದಾಜಿನ ಬಗ್ಗೆಯ ವಾಗ್ವಾದಗಳನ್ನು ಆ ಹಿನ್ನೆಲೆಯಲ್ಲಿ ನೋಡಬೇಕಿದೆ. ಇದು ಈಗಾಗಲೇ ಗ್ರಾಮೀಣ ಮತ್ತು ನಗರದ ದೊಡ್ಡ ಯುವ ಸಮೂಹವು ಉದ್ಯೋಗಗಳನ್ನು ಒತ್ತಾಯಿಸಿ ಬೀದಿಗಿಳಿಯುವಂತೆ ಮಾಡಿದೆ. ಉದಾಹರಣೆಗೆ ಜಾಟ್, ಮರಾಠಾ ಮತ್ತು ಪಟೇಲರಂಥ ಕೃಷಿ ಸಮುದಾಯಗಳ ಯುವಕರು ದೇಶದ ವಿವಿಧೆಡೆಗಳಲ್ಲಿ ಸರಣಿ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಈ ಯುವಕರ ಮಟ್ಟಿಗೆ ವಾಸ್ತವ ಸತ್ಯಗಳು ಸರಕಾರವು ವೇತನಪಟ್ಟಿಯನ್ನು ಆಧರಿಸಿ ಮಾಡುತ್ತಿರುವ ಪ್ರತಿಪಾದನೆಗಿಂತ ತುಂಬಾ ಭಿನ್ನವಾಗಿವೆ. ಅಂಕಿಅಂಶಗಳ ಕಸರತ್ತನ್ನು ನಡೆಸಿ ಸತ್ಯವನ್ನು ಮರೆಮಾಚುವುದರಿಂದ ತತ್ಕ್ಷಣದ ಚುನಾವಣಾ ಪ್ರಯೋಜನಗಳು ಆಗಬಹುದು. ಆದರೆ ಅದರಿಂದ ಉದ್ಯೋಗ ಸೃಷ್ಟಿಯ ಕುರಿತು ಉತ್ತಮ ನೀತಿಗಳನ್ನು ರೂಪಿಸಲಾಗುವುದಿಲ್ಲ.
ಕೃಪೆ: Economic and Political Weekly