ಬಗೆಹರಿಯದ ಸಚಿವ ಸಂಪುಟ ರಚನೆ ಕಗ್ಗಂಟು: ಇಲಾಖೆಗಳ ಕಾರ್ಯನಿರ್ವಹಣೆ ಮೇಲೆ ಬೀರಿದೆ ಪರಿಣಾಮ
ಪಿಡಬ್ಲ್ಯೂಡಿ ಇಲಾಖೆಯಲ್ಲಿ ಆರ್ಥಿಕ ಮುಗ್ಗಟ್ಟು
ಶಿವಮೊಗ್ಗ, ಮೇ 30: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಪೂರ್ಣಗೊಂಡು ಸರ್ಕಾರ ರಚನೆಯ ವೇಳೆ ನಡೆದ ಹೈಡ್ರಾಮಾಗಳು ಅಂತ್ಯಗೊಂಡಿವೆ. ಕಾಂಗ್ರೆಸ್-ಜೆಡಿಎಸ್ ಜೊತೆಗೂಡಿ ಸರ್ಕಾರ ರಚಿಸಿವೆ. ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ, ವಿಧಾನಸಭೆಯಲ್ಲಿ ಬಹುಮತ ಕೂಡ ಸಾಬೀತುಪಡಿಸಿದ್ದಾರೆ.
ಉಳಿದಂತೆ ಉಪ ಮುಖ್ಯಮಂತ್ರಿಯಾಗಿ ಪರಮೇಶ್ವರ್ ನೇಮಕಗೊಂಡಿದ್ದಾರೆ. ಆದರೆ ಇಲ್ಲಿಯವರೆಗೂ ವಿವಿಧ ಇಲಾಖೆಗಳಿಗೆ ಸಚಿವರ ನೇಮಕವಾಗಿಲ್ಲ. ಎರಡೂ ಪಕ್ಷಗಳಲ್ಲಿ ಖಾತೆ ಹಂಚಿಕೆ ವಿಚಾರದಲ್ಲಿ ತಲೆದೋರಿರುವ ಭಿನ್ನಾಭಿಪ್ರಾಯ ಶಮನಗೊಂಡಿಲ್ಲ. ಪೂರ್ಣ ಪ್ರಮಾಣದಲ್ಲಿ ಆಡಳಿತ ಯಂತ್ರ ಟೇಕಾಫ್ ಆಗದಿರುವ ಪರಿಣಾಮ ಇಲಾಖೆಗಳ ಕಾರ್ಯನಿರ್ವಹಣೆಯ ಮೇಲೆ ಬೀರಿದೆ.
ಸಚಿವರ ನೇಮಕವಾಗದ ಕಾರಣದಿಂದ, ಹಲವು ಇಲಾಖೆಗಳಲ್ಲಿ ಕಡತ ವಿಲೇವಾರಿ ಹಾಗೂ ಹಣಕಾಸು ನಿರ್ವಹಣೆ ಏರುಪೇರಾಗುವಂತೆ ಮಾಡಿದೆ. ಇಲಾಖಾಧಿಕಾರಿಗಳು ಪ್ರಮುಖ ನಿರ್ಧಾರ ಕೈಗೊಳ್ಳದಂತಾಗಿದೆ. ಇಲಾಖಾ ಸಚಿವರು ನೇಮಕಗೊಂಡು, ಅವರ ನಿರ್ದೇಶನದಂತೆ ಮುಂದಿನ ನಿರ್ಧಾರ ಕೈಗೊಳ್ಳಲು ಕಾದು ಕುಳಿತ್ತಿದ್ದಾರೆ. ಇದಕ್ಕೆ ತಾಜಾ ನಿರ್ದೇಶನವೆಂಬಂತೆ ಆಡಳಿತದಲ್ಲಿ ಅತ್ಯಂತ ಮಹತ್ವದ ಸ್ಥಾನ ಪಡೆದುಕೊಂಡಿರುವ ಲೋಕೋಪಯೋಗಿ (ಪಿಡಬ್ಲ್ಯೂಡಿ) ಇಲಾಖೆಯಲ್ಲಿ ಆರ್ಥಿಕ ಮುಗ್ಗಟ್ಟು ಕಾಣಿಸಿಕೊಂಡಿರುವ ಅನುಮಾನಗಳು ವ್ಯಕ್ತವಾಗುತ್ತಿವೆ. ಇಲಾಖೆಯಡಿ ಕೈಗೆತ್ತಿಕೊಂಡಿರುವ ಅಭಿವೃದ್ದಿ ಕಾಮಗಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಸಕಾಲದಲ್ಲಿ ಹಣ ಬಿಡುಗಡೆಯಾಗಿದಿರುವ ದೂರುಗಳು, ಅನುಮಾನ ಪುಷ್ಠೀಕರಿಸುವಂತಾಗಿದೆ.
ನಯಾಪೈಸೆ ಬಿಡುಗಡೆಯಾಗಿಲ್ಲ: ಲಭ್ಯ ಮಾಹಿತಿಯ ಪ್ರಕಾರ, ಪಿಡಬ್ಲ್ಯೂಡಿ ಇಲಾಖೆಯಿಂದ ಗುತ್ತಿಗೆದಾರರಿಗೆ ನೂರಾರು ಕೋಟಿ ರೂ. ಬಾಕಿ ಬರಬೇಕಾಗಿದೆ. ಹಲವು ಗುತ್ತಿಗೆದಾರರು ತಾವು ನಿಯಮಾನುಸಾರ ಪಡೆದುಕೊಂಡಿದ್ದ ಕೆಲಸ ಕಾರ್ಯ ಪೂರ್ಣಗೊಳಿಸಿ, ಸಮಗ್ರ ವರಿದಯನ್ನು ಇಲಾಖೆಗೆ ಸಲ್ಲಿಸಿದ್ದರೂ ಹಣ ಬಿಡುಗಡೆಯಾಗುತ್ತಿಲ್ಲ. ಕಚೇರಿಗೆ ಅಲೆದಾಡುವಂತಾಗಿದೆ ಎಂದು ಸ್ವತಃ ಗುತ್ತಿಗೆದಾರರು ದೂರುತ್ತಿದ್ದಾರೆ.
'ವಿಧಾನಸಭೆ ಚುನಾವಣೆ ಪೂರ್ವದ ಏಳೆಂಟು ತಿಂಗಳ ಹಿಂದೆ ಪಿಡಬ್ಲ್ಯೂಡಿ ಇಲಾಖೆಯ ಮೂಲಕ ಹಲವು ಕಾಮಗಾರಿಗಳಿಗೆ ಚಾಲನೆ ನೀಡಲಾಗಿತ್ತು. ಇದೀಗ ಇದರಲ್ಲಿ ಹಲವು ಕಾಮಗಾರಿಗಳು ಪೂರ್ಣಗೊಂಡಿವೆ. ಇಲಾಖೆಯ ಎಂಜಿನಿಯರ್‍ಗಳು ಕೂಡ ಕೆಲಸ ಪೂರ್ಣಗೊಂಡಿರುವ ಪ್ರಮಾಣ ಪತ್ರ ಕೂಡ ನೀಡಿದ್ದಾರೆ. ಆದರೆ ಇಲ್ಲಿಯವರೆಗೂ ನಯಾಪೈಸೆ ಬಿಡುಗಡೆಯಾಗಿಲ್ಲ. ಕೆಲಸ ಮಾಡಿ ಹಣಕ್ಕಾಗಿ ಕಚೇರಿಗೆ ಅಲೆದಾಡುವಂತಾಗಿದೆ. ಸ್ಥಳೀಯ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಹಿರಿಯ ಅಧಿಕಾರಿಗಳಿಗೆ ವರದಿ ಕಳುಹಿಸಿದ್ದೇವೆ. ಇನ್ನಷ್ಟೆ ಹಣ ಬಿಡುಗಡೆಯಾಗಬೇಕಾಗಿದೆ ಎಂದು ಹೇಳುತ್ತಾರೆ. ಇಷ್ಟು ದಿನ ವಿಧಾನಸಭೆ ಚುನಾವಣೆಯ ನೆಪ ಹೇಳುತ್ತಿದ್ದರು. ಇದೀಗ ಹೊಸ ಸರ್ಕಾರದ ಮಂತ್ರಿ ಮಂಡಲ ರಚನೆಯತ್ತ ಬೊಟ್ಟು ಮಾಡುತ್ತಿದ್ದಾರೆ. ಇಲಾಖೆಗೆ ಸಚಿವರ ನಿಯೋಜನೆಯಾಗುತ್ತಿದ್ದಂತೆ ಬಾಕಿ ಮೊತ್ತ ಬಿಡುಗಡೆಯಾಗಲಿದೆ ಎಂದು ಕೆಲ ಅಧಿಕಾರಿಗಳು ಹೇಳುತ್ತಾರೆ' ಎಂದು ಹೆಸರು ಬಹಿರಂಪಡಿಸಲಿಚ್ಚಿಸದ ಶಿವಮೊಗ್ಗ ನಗರದ ಪಿಡಬ್ಲ್ಯೂಡಿ ಗುತ್ತಿಗೆದಾರರೋರ್ವರು ತಿಳಿಸುತ್ತಾರೆ.
ಸಂಕಷ್ಟ: 'ಕಾಮಗಾರಿಯ ವಿವಿಧ ಹಂತಗಳಲ್ಲಿ ಹಣ ಬಿಡುಗಡೆಯಾಗುತ್ತದೆ. ಆದರೆ ತಾವು ನಿರ್ವಹಿಸಿದ ಸೇತುವೆ ಕಾಮಗಾರಿಗೆ ನಯಾಪೈಸೆ ಮಂಜೂರಾಗಿಲ್ಲ. ಕಾಮಗಾರಿ ಪೂರ್ಣಗೊಳ್ಳುವ ಹಂತಕ್ಕೆ ಬಂದರೂ ಹಣ ಬಿಡುಗಡೆಯಾಗಿಲ್ಲ. ಇದರಿಂದ ಸಾಲ ಮಾಡುವಂತಾಗಿದೆ. ಆರ್ಥಿಕ ಮುಗ್ಗಟ್ಟಿಗೆ ಸಿಲುಕುವಂತಾಗಿದೆ. ಇದರಿಂದ ಸಣ್ಣಪುಟ್ಟ ಗುತ್ತಿಗೆದಾರರ ಸ್ಥಿತಿ ಶೋಚನೀಯವಾಗಿದೆ. ಇನ್ನಾದರೂ ಪಿಡಬ್ಲ್ಯೂಡಿ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಗುತ್ತಿಗೆದಾರರಿಗೆ ಬಾಕಿ ಮೊತ್ತ ಬಿಡುಗಡೆಯತ್ತ ಗಮನಹರಿಸಬೇಕು' ಎಂದು ಹೆಸರೇಳಲಿಚ್ಚಿಸದ ತೀರ್ಥಹಳ್ಳಿ ತಾಲೂಕಿನ ಗುತ್ತಿಗೆದಾರರೋರ್ವರು ತಿಳಿಸುತ್ತಾರೆ.
ಒಟ್ಟಾರೆ ಸರ್ಕಾರ ರಚನೆಯಾದರೂ ಮಂತ್ರಿಗಳ ರಾಜ್ಯಭಾರ ಶುರುವಾಗದಿರುವುದು ಆಡಳಿತ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರುವಂತಾಗಿದೆ. ಇಲಾಖೆಗಳ ಕಾರ್ಯನಿರ್ವಹಣೆ ಏರುಪೇರಾಗುವಂತಾಗಿದೆ. ಇದಕ್ಕೆ ಪಿಡಬ್ಲ್ಯೂಡಿ ಇಲಾಖೆಯ ಆರ್ಥಿಕ ಸ್ಥಿತಿ ಉತ್ತಮ ನಿದರ್ಶನವಾಗಿದೆ ಎಂದರೆ ತಪ್ಪಾಗಲಾರದು.