ಮೋದಿ ನೀತಿಗಳನ್ನು ಬಹಿರಂಗವಾಗಿ ಟೀಕಿಸುವ ಅಪರೂಪದ ಬಿಜೆಪಿ ನಾಯಕಿ ಸಾಧ್ವಿ ಸಾವಿತ್ರಿಬಾಯಿ ಫುಲೆ
ಭಾಗ-1
ಮೋದಿ ನೀತಿಯನ್ನು ಸಾರ್ವಜನಿಕವಾಗಿ ಟೀಕಿಸುವ ಎದೆಗಾರಿಕೆ ಇರುವ ಮುಖಂಡರು ಬಿಜೆಪಿಯಲ್ಲಿ ಸಿಗುವುದು ದುರ್ಲಭ. ಅಂಥ ನಿಯಂತ್ರಣವನ್ನು ಅವರು ಪಕ್ಷದ ಮೇಲೆ ಹೊಂದಿದ್ದಾರೆ. ಪಕ್ಷದ ಸಂಸದರಲ್ಲಿ ಅವರ ಭಯ ಅಷ್ಟು ಆಳವಾಗಿ ಬೇರೂರಿದೆ. ಮೋದಿಯವರ ಹೆಸರನ್ನು ಫುಲೆ ಉಲ್ಲೇಖಿಸದಿದ್ದರೂ, ಪಕ್ಷದ ಕಾರ್ಯಯೋಜನೆಗಳ ವಿಚಾರದಲ್ಲಿ ಸಿಟ್ಟು, ಹತಾಶೆ ಮತ್ತು ಕೋಪ ಇದೆ ಎನ್ನುವುದನ್ನು ಪ್ರೇಕ್ಷಕರಿಗೆ ಸ್ಪಷ್ಟವಾಗಿ ತಿಳಿಯುವಂತೆ ಮಾಡಿದ್ದಾರೆ.
ಸಾಧ್ವಿ ಸಾವಿತ್ರಿಬಾಯಿ ಫುಲೆ ಬಿಜೆಪಿ ಸಂಸದೆ. ಪಕ್ಷ ಈಕೆಯನ್ನು ದೇಶಾದ್ಯಂತ ರ್ಯಾಲಿಗಳಲ್ಲಿ ಭಾಷಣ ಮಾಡಲು ಕರೆದೊಯ್ಯುತ್ತದೆ. ಕೇಸರಿ ಉಡುಪಿನಲ್ಲಿ ಕಂಗೊಳಿಸುವ 37 ವರ್ಷದ ಸಾಧ್ವಿ ಅದ್ಭುತ ವಾಕ್ ಕೌಶಲಕ್ಕೆ ಹೆಸರುವಾಸಿ. 2014ರಲ್ಲಿ ಬಹರೀಚ್ ಮೀಸಲು ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿರುವ ಅವರು, ಎಂದೂ ಕ್ಷೇತ್ರಕ್ಕೆ ಸೀಮಿತರಾದವರಲ್ಲ. ಫುಲೆಯವರ ದಲಿತ ಐಡೆಂಟಿಟಿ ಬಿಜೆಪಿಗೆ ವರದಾನವಾಗಿತ್ತು ಹಾಗೂ ಪಕ್ಷ ಮೇಲ್ಜಾತಿಯ ಪಕ್ಷ ಎಂಬ ಮುದ್ರೆಯಿಂದ ಹೊರಬರಲು ಇದು ನೆರವಾಗಿತ್ತು.
ಇಷ್ಟಾಗಿಯೂ, ಪಕ್ಷದ ಚೌಕಟ್ಟಿನಿಂದ ಮುಕ್ತವಾಗಿ ಹಲವು ಸಭೆ ಹಾಗೂ ರ್ಯಾಲಿಗಳನ್ನು ಆಯೋಜಿಸಿ, ಬಹುಜನ ಸಮಾಜದ ಅಂದರೆ ದಲಿತ, ಧಾರ್ಮಿಕ ಅಲ್ಪಸಂಖ್ಯಾತ ಮತ್ತು ಇತರ ಹಿಂದುಳಿದ ವರ್ಗಗಳ ದಮನ ಹಾಗೂ ನರಳಿಕೆಯ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡುತ್ತಿದ್ದರು.
ರಿತಂಬರಾ ಮತ್ತು ಉಮಾಭಾರತಿಯಂಥ ಬಿಜೆಪಿಯ ಇತರ ಸಾಧ್ವಿಗಳ ಮುಖ್ಯ ಗುರಿ ಶತಮಾನಗಳ ಹಿಂದೆ ಮಸೀದಿಯಾಗಿ ಪರಿವರ್ತನೆಯಾಗಿದೆ ಎನ್ನಲಾದ ದೇವಾಲಯಗಳಿಗೆ ವಿಮೋಚನೆ ದೊರಕಿಸುವುದಾದರೆ, ಫುಲೆಯವರ ದೃಷ್ಟಿ ಭಿನ್ನ. ದಿಲ್ಲಿಯಲ್ಲಿ ನಾರ್ಥ್ ಅವೆನ್ಯೂ ಪ್ಲಾಟ್ನ 65 ಸಂಖ್ಯೆಯ ಮನೆಯ ಹಜಾರದಲ್ಲಿ ಸೋಫಾದಲ್ಲಿ ಕಾಯುವ ಪ್ರತಿಯೊಬ್ಬರೂ ಒಂದಲ್ಲ ಒಂದು ಅಹವಾಲಿನೊಂದಿಗೆ ಆಗಮಿಸಿರುತ್ತಾರೆ. ಅವರಿಗೆ ತಮ್ಮ ಧ್ಯೇಯವನ್ನು ಸಾಧ್ವಿ ಸ್ಪಷ್ಟಪಡಿಸುತ್ತಾರೆ: ಬಹುಜನ ಸಮಾಜದ ಮೇಲೆ ದಿನವೂ ನಡೆಯುತ್ತಿರುವ ಅನ್ಯಾಯ ಮತ್ತು ದೌರ್ಜನ್ಯಗಳನ್ನು ಕೊನೆಗಾಣಿಸುವುದು.
ಮೀಸಲಾತಿಗಾಗಿ ಇತರ ಹಿಂದುಳಿದ ವರ್ಗಗಳನ್ನು 27 ಉಪ ವಿಭಾಗಗಳಾಗಿ ವಿಂಗಡಿಸುವ ಸಂಬಂಧ ಪ್ರಧಾನಿ ನರೇಂದ್ರ ಮೋದಿಯವರ ಇಂಗಿತಕ್ಕೆ ಫುಲೆ ಅವರ ಪ್ರತಿಕ್ರಿಯೆ, ಅವರ ಕೇಸರಿ ಜಗತ್ತು ಮತ್ತು ಬಿಜೆಪಿಯ ನಡುವಿನ ಅಭಿಪ್ರಾಯಭೇದವನ್ನು ಸ್ಪಷ್ಟವಾಗಿ ಬಿಂಬಿಸಿದೆ. ‘‘ಇತರ ಹಿಂದುಳಿದ ವರ್ಗವನ್ನು ತೀರಾ ಹಿಂದುಳಿದ ವರ್ಗ ಮತ್ತು ಹಿಂದುಳಿದ ವರ್ಗ, ಪರಿಶಿಷ್ಟ ಜಾತಿಯವರನ್ನು ದಲಿತ ಮತ್ತು ಅತಿದಲಿತ ಎಂದು ವಿಭಜಿಸುವುದನ್ನು ನಾನು ವಿರೋಧಿಸುತ್ತೇನೆ’’ ಎಂದು ಹೇಳಿದ್ದರು. ‘‘ನಮ್ಮನ್ನು ವಿಭಜಿಸುವುದರಿಂದ ಮತ ಪಡೆಯಬಹುದು ಎಂದು ಅವರು ಯೋಚಿಸುತ್ತಿದ್ದಾರೆ. ಇದು ಒಡೆದು ಆಳುವ ನೀತಿ. ಅವರು ಇದನ್ನು ಸ್ವಾತಂತ್ರ್ಯ ಬಂದಾಗಿನಿಂದಲೂ ಅನುಸರಿಸುತ್ತಾ ಬಂದಿದ್ದಾರೆ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಕಟ್ಟಿಕೊಟ್ಟ ಏಕತೆಯನ್ನು ಒಡೆಯುವ ಹುನ್ನಾರವನ್ನು ನಿರಂತರವಾಗಿ ನಡೆಸಿದ್ದಾರೆ.’’
ತನ್ನದೇ ದಾರಿ
ಮೋದಿ ನೀತಿಯನ್ನು ಸಾರ್ವಜನಿಕವಾಗಿ ಟೀಕಿಸುವ ಎದೆಗಾರಿಕೆ ಇರುವ ಮುಖಂಡರು ಬಿಜೆಪಿಯಲ್ಲಿ ಸಿಗುವುದು ದುರ್ಲಭ. ಅಂಥ ನಿಯಂತ್ರಣವನ್ನು ಅವರು ಪಕ್ಷದ ಮೇಲೆ ಹೊಂದಿದ್ದಾರೆ. ಪಕ್ಷದ ಸಂಸದರಲ್ಲಿ ಅವರ ಭಯ ಅಷ್ಟು ಆಳವಾಗಿ ಬೇರೂರಿದೆ. ಮೋದಿಯವರ ಹೆಸರನ್ನು ಫುಲೆ ಉಲ್ಲೇಖಿಸದಿದ್ದರೂ, ಪಕ್ಷದ ಕಾರ್ಯಯೋಜನೆಗಳ ವಿಚಾರದಲ್ಲಿ ಸಿಟ್ಟು, ಹತಾಶೆ ಮತ್ತು ಕೋಪ ಇದೆ ಎನ್ನುವುದನ್ನು ಪ್ರೇಕ್ಷಕರಿಗೆ ಸ್ಪಷ್ಟವಾಗಿ ತಿಳಿಯುವಂತೆ ಮಾಡಿದ್ದಾರೆ.
ಇಷ್ಟಾಗಿಯೂ ಈ ದಿಟ್ಟ ಮಾತಿನ ಬಗ್ಗೆ ಅವರಿಗೆ ಸ್ವಲ್ಪಅಂಜಿಕೆಯೂ ಇಲ್ಲ. ಹೆದರಿಕೆ? ನಿಮಗೆ ಆಗುತ್ತಿರುವ ಅವಮಾನದ ವಿರುದ್ಧ ಮಾತನಾಡುವುದು ಪಾಪವೇ’’ ಎಂದು ಮರುಪ್ರಶ್ನೆ ಎಸೆಯುತ್ತಾರೆ. ‘‘ಹಲವಾರು ಸಂಸದರು ತಮ್ಮ ಕುಟುಂಬಗಳ ಕಲ್ಯಾಣದ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಾರೆ. ಅವರನ್ನು ಯಾರಾದರೂ ನೆನೆಸಿಕೊಳ್ಳುತ್ತಾರೆಯೇ?’’ ಎಂದು ಫುಲೆ ಪ್ರಶ್ನಿಸುತ್ತಾರೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯನ್ನು ಕಳೆದ ಮಾರ್ಚ್ನಲ್ಲಿ ಸುಪ್ರೀಂಕೋರ್ಟ್ ದುರ್ಬಲಗೊಳಿಸಿದ ಬಳಿಕ, ಬಿಜೆಪಿ ವಿರುದ್ಧದ ಟೀಕೆ ಮೂಲಕ ಅವರು ಗಮನ ಸೆಳೆಯುತ್ತಲೇ ಇದ್ದಾರೆ. ಈ ವಿಚಾರದಲ್ಲಿ ಯಾವ ರಾಜಿಗೂ ಅವರು ಸಿದ್ಧರಿಲ್ಲ. ಎಪ್ರಿಲ್ 1ರಂದು ಲಕ್ನೋದಲ್ಲಿ ನಡೆಸಿದ ರ್ಯಾಲಿಯಲ್ಲಿ ಅವರು, ಕೇಂದ್ರ ಸರಕಾರ ಸುಪ್ರೀಂಕೋರ್ಟ್ ತೀರ್ಪನ್ನು ವ್ಯತಿರಿಕ್ತಗೊಳಿಸಬೇಕು ಎಂದು ಆಗ್ರಹಿಸಿದ್ದರು. ಕಾಯ್ದೆ ದುರ್ಬಲಗೊಳಿಸುವ ಹುನ್ನಾರದ ವಿರುದ್ಧ ದಲಿತ ಸಂಘಟನೆಗಳು ಕರೆನೀಡಿದ ಭಾರತ್ ಬಂದ್ನಲ್ಲಿ ಭಾಗವಹಿಸಿದ್ದ ದಲಿತರನ್ನು ಜೈಲಿಗೆ ಹಾಕಿದ್ದರ ವಿರುದ್ಧ ಧ್ವನಿ ಎತ್ತಿದ್ದರು. ಬಿಜೆಪಿ ಸಂಸದರು ದಲಿತರ ಮನೆಗಳಲ್ಲಿ ಊಟಮಾಡಬೇಕು ಎಂದು ಮೋದಿ ನೀಡಿದ ಸೂಚನೆ ವಿರುದ್ಧ ಕೆಂಡ ಕಾರಿದ್ದರು.
ಆ ಸಂಸದ ನಮಗೆ ದಲಿತರಿಗೆ ಅವಮಾನ ಮಾಡಿದ್ದಾರೆ. ಅವರು ದಲಿತರ ಮನೆಯಲ್ಲಿ ಮಾಡಿದ ಅಡುಗೆಯನ್ನು ಊಟ ಮಾಡುವುದಿಲ್ಲ. ನಮ್ಮ ಪಾತ್ರೆಗಳನ್ನು ಬಳಸುವುದಿಲ್ಲ ಅಥವಾ ನಮ್ಮ ಲೋಟಗಳಲ್ಲಿ ನೀರನ್ನೂ ಕುಡಿಯುವುದಿಲ್ಲ. ದಲಿತೇರರು ಮಾಡಿದ ಅಡುಗೆಯನ್ನು ಅವರು ಉಣ್ಣುತ್ತಾರೆ’’ ಎಂದು ಆಕ್ಷೇಪಿಸಿದ್ದರು. ಇಷ್ಟಲ್ಲದೇ ‘‘ದಲಿತರು ಅಸ್ಪಶ್ಯರು ಎನ್ನುವುದನ್ನು ಅವರು ದೃಢಪಡಿಸುತ್ತಿದ್ದಾರೆ’’ ಎಂದು ಸಿಟ್ಟು ಹೊರಹಾಕಿದ್ದರು.
‘‘ದಲಿತರ ಮನೆಯಲ್ಲಿ ತಿನ್ನುವ ಫೋಟೊ ತೆಗೆಸಿಕೊಂಡು, ಅದು ವೈರಲ್ ಆಗುವಂತೆ ಮಾಡುತ್ತಾರೆ. ಇತರ ಜಾತಿಯವವರ ಜತೆ ಅವರು ಊಟ ಮಾಡುವಾಗ ಅದನ್ನು ಕ್ಯಾಮರಾದಲ್ಲಿ ಸೆರೆಹಿಡಿಯಬೇಕು ಎಂದು ಅವರಿಗೆ ಅನಿಸುವುದಿಲ್ಲವೇ?’’ ಎಂದು ಚಾಟಿ ಬೀಸಿದ್ದರು.
ಅವರ ಸಿದ್ಧಾಂತ ಖಂಡಿತವಾಗಿಯೂ ನಿರ್ವಿವಾದ. ಉತ್ತರ ಪ್ರದೇಶದಲ್ಲಿ ಅಂಬೇಡ್ಕರ್ ಪ್ರತಿಮೆಗಳನ್ನು ವಿರೂಪಗೊಳಿಸುವ ಹುನ್ನಾರದ ವಿರುದ್ಧವೂ ಧ್ವನಿ ಎತ್ತಿದ್ದಾರೆ. ಬಹರೀಚ್ನ ಮತಿಯಾಲಾ ಗ್ರಾಮದಲ್ಲಿ ಇಂಥ ಒಂದು ಘಟನೆ ನಡೆದಿತ್ತು. ಎರಡು ತಿಂಗಳ ಬಳಿಕ ಅಂದರೆ ಎಪ್ರಿಲ್ನಲ್ಲಿ, ಮುರಿದ ಅಂಬೇಡ್ಕರ್ ಪ್ರತಿಮೆ ಮೇಲೆ ರಾತ್ರಿ ವಿಸ್ಕಿ ಸುರಿದ ಘಟನೆಯೂ ನಡೆದಿದೆ. ಇದರ ವಿರುದ್ಧ ಫುಲೆ ಧರಣಿ ಮತ್ತು ರ್ಯಾಲಿ ಆಯೋಜಿಸಿದರು. ಆದರೆ ತಪ್ಪಿತಸ್ಥರನ್ನು ಇನ್ನೂ ಹಿಡಿದಿಲ್ಲ. ‘‘ನಾನು ಈ ಬಗ್ಗೆ ಯೋಗಿ ಆದಿತ್ಯನಾಥ್ ಅವರಿಗೆ ಮನವಿಯನ್ನೂ ಸಲ್ಲಿಸಿದ್ದೇನೆ. ಇಷ್ಟಾಗಿಯೂ ಯಾವುದೇ ಕ್ರಮ ಕೈಗೊಂಡಿಲ್ಲ’’
‘‘ಅಂಬೇಡ್ಕರ್ ಪ್ರತಿಮೆಗಳನ್ನು ಏಕೆ ವಿರೂಪಗೊಳಿಸಲಾಗುತ್ತಿದೆ ಹಾಗೂ ಭಾರತ್ ಬಂದ್ನಲ್ಲಿ ಭಾಗವಹಿಸಿದ ದಲಿತರನ್ನು ಏಕೆ ಜೈಲಿಗೆ ಕಳುಹಿಸಲಾಗಿದೆ? ಏಕೆಂದರೆ ನಮ್ಮ ಹಕ್ಕುಗಳಿಗಾಗಿ ಹೋರಾಡುವ ನಮ್ಮ ನೈತಿಕ ಸ್ಥೈರ್ಯವನ್ನು ಒಡೆಯಲು ಅವರು ಬಯಸಿದ್ದಾರೆ. ಮೀಸಲಾತಿ ನೀತಿ ಹಾಗೂ ಸಂವಿಧಾನವನ್ನು ಪರಿಷ್ಕರಿಸಬೇಕು ಎಂದು ಬಹಿರಂಗವಾಗಿ ಹೇಳಲಾಗುತ್ತಿದೆ’’ ಎಂದು ಹೇಳಿದ್ದರು.
‘‘ಇಂಥ ಬೇಡಿಕೆ ಮತ್ತು ಅಂಬೇಡ್ಕರ್ ಪ್ರತಿಮೆ ವಿರೂಪಕ್ಕೂ ಸಂಬಂಧವಿದೆ. ಸಂವಿಧಾನವನ್ನು ರಚಿಸಿದವರು ಅಂಬೇಡ್ಕರ್. ಅವರ ಕಾರಣದಿಂದಾಗಿ ಇಂದು ಮೀಸಲಾತಿ ಇದೆ. ಅವರಿಂದಾಗಿಯೇ ನಾನಿಂದು ಸಂಸದೆಯಾಗಿರುವುದು’’
‘‘ಉದ್ಯೋಗ ಕೋಟಾವನ್ನು ಭರ್ತಿ ಮಾಡಲು ಸಾಧ್ಯವಾಗದಿದ್ದರೂ, ಉದ್ಯೋಗದ ಖಾಸಗೀಕರಣಗೊಳಿಸುತ್ತಿದ್ದರೂ, ಮೀಸಲಾತಿಯನ್ನು ಕೊನೆಗೊಳಿಸುವುದು ಅವರ ಉದ್ದೇಶ. ನಕಲಿ ಜಾತಿ ಪ್ರಮಾಣಪತ್ರಗಳ ಮೂಲಕ ಜನ ಮೀಸಲಾತಿ ಹುದ್ದೆಗಳನ್ನು ಕಬಳಿಸುತ್ತಿದ್ದಾರೆ. ಮೀಸಲಾತಿ ನೀತಿಯ ಅನುಷ್ಠಾನದ ಬಗ್ಗೆ ಸರಕಾರ ತನಿಖೆ ನಡೆಸಬೇಕು ಎಂದು ನಾನು ಒತ್ತಾಯಿಸುತ್ತೇನೆ’’ ಎಂದು ಮೀಸಲಾತಿ ನೀತಿ ಸ್ಥಗಿತಗೊಳಿಸುವ ಹುನ್ನಾರದ ಬಗ್ಗೆ ವಿವರಿಸಿದರು.
ಜಾತಿ ಗಣತಿ ಆಗಲಿ
ಬಿಜೆಪಿಗೆ ಭಯಾನಕ ಎನಿಸಿದ ಅವರ ಇನ್ನೊಂದು ಬೇಡಿಕೆ ಇದೆ. ಭಾರತದ ಜನಸಂಖ್ಯೆಯಲ್ಲಿ ವಿವಿಧ ಸಾಮಾಜಿಕ ಗುಂಪುಗಳ ಶೇಕಡಾವಾರು ಪ್ರಮಾಣ ಮತ್ತು ಸಾಮಾಜಿಕ ಆರ್ಥಿಕ ಚಿತ್ರಣವನ್ನು ನೀಡುವ ಸಲುವಾಗಿ ಜಾತಿ ಗಣತಿ ನಡೆಯಬೇಕು ಎನ್ನುವುದು ಆ ಬೇಡಿಕೆ. ಮೀಸಲಾತಿ ಶೇ. 50ನ್ನು ಮೀರಬಾರದು ಎಂಬ ಸುಪ್ರೀಂಕೋರ್ಟ್ ವಿಧಿಸಿದ ಮಿತಿಯನ್ನೂ ಫುಲೆ ವಿರೋಧಿಸುತ್ತಾರೆ. ‘‘ಶೇ. 50ರ ಮಿತಿಯಿಂದಾಗಿ, ಶೇ. 52ರಷ್ಟಿರುವ ಇತರ ಹಿಂದುಳಿದ ವರ್ಗದವರಿಗೆ ಕೇವಲ ಶೇ. 27ರಷ್ಟು ಮೀಸಲಾತಿ ದೊರಕುತ್ತದೆ. ಯಾಕೆ? ಅಧಿಕಾರದ ಹಂಚಿಕೆ ಕೂಡಾ ಆಯಾ ಜನಸಂಖ್ಯೆಯ ಪಾಲಿಗೆ ಅನುಗುಣವಾಗಿರಲಿ’’ ಎನ್ನುವುದು ಅವರ ಆಗ್ರಹ.
ಆದರೆ ಫುಲೆಯವರ ಎಲ್ಲ ಸೂತ್ರಗಳು ಜಿನ್ನಾ ವಿವಾದದ ಎದುರು ಪೇಲವವಾಗಿವೆ. ಅಲೀಗಡ ಮುಸ್ಲಿಂ ವಿಶ್ವವಿದ್ಯಾನಿಲಯದಲ್ಲಿ ಜಿನ್ನಾ ಅವರ ಭಾವಚಿತ್ರ ಇರುವ ಬಗ್ಗೆ ಎದ್ದ ವಿವಾದದ ವೇಳೆ ಜಿನ್ನಾ ಮಹಾಪುರುಷ ಎಂದು ಅವರು ಬಣ್ಣಿಸಿದ್ದರು. ಜಿನ್ನಾ ಅವರನ್ನು ಹೊಗಳಿದ ಬಿಜೆಪಿಯ ಯಾರಿಗೂ ಉಳಿಗಾಲವಿಲ್ಲ. ಬಿಜೆಪಿಯ ಮಹಾನ್ ನಾಯಕರಾದ ಅಡ್ವಾಣಿಯವರ ಉದಾಹರಣೆಯನ್ನೇ ತೆಗೆದುಕೊಳ್ಳಿ. ಜಿನ್ನಾ ಅವರನ್ನು 2005ರಲ್ಲಿ ಜಾತ್ಯತೀತವಾದಿ ಎಂದು ಹೇಳಿದ ಕಾರಣಕ್ಕೆ ಅವರ ರಾಜಕೀಯ ವೃತ್ತಿ ಬಹುತೇಕ ಅಂತ್ಯವಾಯಿತು. ಇಷ್ಟಾಗಿಯೂ ಫುಲೆ, ‘‘ಇತರ ಹಲವು ನಾಯಕರಂತೆ ಜಿನ್ನಾ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಅವರ ಭಾವಚಿತ್ರ ನೇತುಹಾಕಿದರೆ ಯಾರಿಗೆ ಏನು ಸಮಸ್ಯೆ’’ ಎಂದು ಪ್ರಶ್ನಿಸಿದ್ದರು.
ಕೃಪೆ: scroll.in