ವಿಧಾನಪರಿಷತ್ ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆ: ಬಿಜೆಪಿ - ಕಾಂಗ್ರೆಸ್ ನಡುವೆ ಬಿಗ್ ಫೈಟ್
ಶಿವಮೊಗ್ಗ, ಜೂ. 8: ಮಲೆನಾಡು-ಕರಾವಳಿ-ಬಯಲು ಸೀಮೆ ಜಿಲ್ಲೆಗಳ ವ್ಯಾಪ್ತಿಯನ್ನೊಳಗೊಂಡ ವಿಧಾನ ಪರಿಷತ್ 'ನೈರುತ್ಯ ಪದವೀಧರ ಕ್ಷೇತ್ರ'ಕ್ಕೆ ಜೂ. 8 ರಂದು ನಡೆಯಲಿರುವ ಚುನಾವಣೆಗೆ ಅಖಾಡ ಸಜ್ಜುಗೊಂಡಿದೆ. ಬಹುತೇಕ ಬಿಜೆಪಿ - ಕಾಂಗ್ರೆಸ್ ಪಕ್ಷದ ನಡುವೆ ಜಿದ್ದಾಜಿದ್ದಿನ ಹೋರಾಟಕ್ಕೆ ವೇದಿಕೆ ನಿರ್ಮಾಣವಾಗಿದ್ದು, ಸಾಕಷ್ಟು ಕುತೂಹಲ ಕೆರಳುವಂತೆ ಮಾಡಿದೆ.
ಈ ಕ್ಷೇತ್ರದಲ್ಲಿ ಬಿಜೆಪಿ ಪಕ್ಷವು ಕಳೆದ ಮೂರು ದಶಕಗಳಿಂದ ಅಧಿಪತ್ಯ ಕಾಯ್ದುಕೊಂಡು ಬಂದಿದ್ದು, ಆ ಪಕ್ಷದ ಭದ್ರ ಕೋಟೆಯಾಗಿದೆ. ಈ ಕೋಟೆ 'ಕೈ' ವಶ ಮಾಡಿಕೊಳ್ಳಲು ಕಾಂಗ್ರೆಸ್ ಭಾರೀ ಕಾರ್ಯತಂತ್ರ ರೂಪಿಸಿದೆ. ಮತ್ತೊಂದೆಡೆ ಕ್ಷೇತ್ರದ ಮೇಲಿರುವ ಅಧಿಪತ್ಯ ಮುಂದುವರಿಸಿಕೊಂಡು ಹೋಗಲು ಬಿಜೆಪಿ ಹೋರಾಟ ನಡೆಸುತ್ತಿದೆ.
ಬಿಜೆಪಿಯಿಂದ ಮಾಜಿ ಸಂಸದ ಆಯನೂರು ಮಂಜುನಾಥ್‍ರವರು ಇದೇ ಮೊದಲ ಬಾರಿಗೆ ಈ ಕ್ಷೇತ್ರದಿಂದ ಕಣಕ್ಕಿಳಿಯುತ್ತಿದ್ದಾರೆ. ಕಾಂಗ್ರೆಸ್‍ನಿಂದ ಎಸ್.ಪಿ.ದಿನೇಶ್‍ರವರು ಸ್ಪರ್ಧಿಸುತ್ತಿದ್ದು, ಈ ಕ್ಷೇತ್ರದಿಂದ ಎರಡನೇ ಬಾರಿ ಅವರು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಉಳಿದಂತೆ ಜೆಡಿಎಸ್‍ನಿಂದ ಮಂಗಳೂರು ಮೂಲದ ಅರುಣ್ ಸ್ಪರ್ಧಿಸುತ್ತಿದ್ದಾರೆ. ಹಾಗೆಯೇ ಇನ್ನೂ ಹಲವರು ಅಭ್ಯರ್ಥಿಗಳಾಗಿದ್ದಾರೆ.
ವ್ಯಾಪ್ತಿ: ಮಲೆನಾಡು ಪ್ರದೇಶವಾದ ಶಿವಮೊಗ್ಗ, ಚಿಕ್ಕಮಗಳೂರು ಕೊಡಗು, ಕರಾವಳಿ ಪ್ರದೇಶಗಳಾದ ಉಡುಪಿ, ಚಿಕ್ಕಮಗಳೂರು ಜಿಲ್ಲೆಯ ಎಲ್ಲ ತಾಲೂಕುಗಳು ಹಾಗೂ ಬಯಲು ಸೀಮೆ ದಾವಣಗೆರೆ ಜಿಲ್ಲೆಯ ಹೊನ್ನಾಳ್ಳಿ ಹಾಗೂ ಚೆನ್ನಗಿರಿ ತಾಲೂಕುಗಳು ನೈರುತ್ಯ ಪದವೀಧರ ಕ್ಷೇತ್ರ ವ್ಯಾಪ್ತಿಗೆ ಸೇರ್ಪಡೆಯಾಗುತ್ತವೆ. ಒಟ್ಟಾರೆ ಆರು ಜಿಲ್ಲೆಗಳ 30 ವಿಧಾನಸಭಾ ಏರಿಯಾಗಳು ಕ್ಷೇತ್ರ ವ್ಯಾಪ್ತಿ ಹೊಂದಿದೆ.
ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಪ್ರಾಬಲ್ಯ ಸಾಧಿಸಿದೆ. 27 ಕ್ಷೇತ್ರಗಳಲ್ಲಿ ಆ ಪಕ್ಷದ ಅಭ್ಯರ್ಥಿಗಳು ಜಯ ಸಂಪಾದಿಸಿದ್ದರೆ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಕೇವಲ ಮೂರು ಕಡೆ (ಭದ್ರಾವತಿ, ಶೃಂಗೇರಿ, ಉಳ್ಳಾಲ) ಗೆಲುವು ಸಾಧಿಸಿದ್ದಾರೆ. ಶಿವಮೊಗ್ಗವೇ ಈ ಕ್ಷೇತ್ರದ ಕೇಂದ್ರ ಸ್ಥಾನವಾಗಿದೆ.
ಎಲೆಕ್ಷನ್ ಹೈಲೈಟ್ಸ್: ಕಳೆದ ಚುನಾವಣೆಯಲ್ಲಿ ನೈರುತ್ಯ ಪದವೀಧರ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಬಿಜೆಪಿ ಮುಖಂಡ ಡಿ.ಹೆಚ್.ಶಂಕರಮೂರ್ತಿಯವರು 13,926 (ಶೇ. 45.31) ಮತ ಪಡೆದು ಆಯ್ಕೆಯಾಗಿದ್ದರು. ಇವರ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಮುಖಂಡ ಎಸ್.ಪಿ.ದಿನೇಶ್‍ರವರು 10,140 (ಶೇ. 32.98) ಮತಗಳಿಸಿದ್ದರು. ಉಳಿದಂತೆ ಜೆಡಿಎಸ್ ಮುಖಂಡ ಭೋಜೇಗೌಡರವರು 6875 (ಶೇ. 22.37) ಮತಗಳಿಸಿದ್ದರು. ಕಳೆದ ಬಾರಿ ಮತದಾರರ ಪಟ್ಟಿಯಲ್ಲಿ ನೊಂದಾಯಿಸಿದ್ದ 57,120 ಮತದಾರರಲ್ಲಿ 30,729 ಜನರು ಮತ ಚಲಾವಣೆ ಮಾಡಿದ್ದರು. 2163 ಮತಗಳು ತಿರಸ್ಕೃತವಾಗಿದ್ದವು.
ಪ್ರಾಬಲ್ಯ: ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಈ ಬಾರಿ ಸುಮಾರು 70 ಸಾವಿರ ಮತದಾರರಿದ್ದಾರೆ. ಈಗಾಗಲೇ ಅಭ್ಯರ್ಥಿಗಳು ಬಿರುಸಿನ ಪ್ರಚಾರ ಕಾರ್ಯದಲ್ಲಿ ತಲ್ಲೀನರಾಗಿದ್ದಾರೆ. ಮೇಲ್ನೋಟಕ್ಕೆ ಈ ಕ್ಷೇತ್ರದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಕಂಡುಬರುತ್ತಿದೆ. ಜಿದ್ದಾಜಿದ್ದಿನ ಅಖಾಡಕ್ಕೆ ವೇದಿಕೆ ನಿರ್ಮಾಣವಾಗುತ್ತಿದೆ.
ಈ ಕ್ಷೇತ್ರದಲ್ಲಿ ಬಿಜೆಪಿ ಬಿಗಿ ಹಿಡಿತ ಹೊಂದಿದೆ. ಆ ಮಟ್ಟಕ್ಕೆ ಕ್ಷೇತ್ರದಲ್ಲಿ ಬಿಜೆಪಿ ಪ್ರಾಬಲ್ಯ ಸಾಧಿಸಿಕೊಂಡು ಬಂದಿದೆ. ಕಳೆದ ಐದು ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದುಕೊಂಡು ಬರುತ್ತಿರುವ ಹಾಲಿ ವಿಧಾನ ಪರಿಷತ್ ಸಭಾಪತಿ ಡಿ.ಹೆಚ್.ಶಂಕರಮೂರ್ತಿಯವರು ಸತತ ಗೆಲುವು ಸಾಧಿಸಿಕೊಂಡು ಬಂದಿದ್ದಾರೆ. ಹೊಸ ದಾಖಲೆಯನ್ನೇ ನಿರ್ಮಿಸಿದ್ದಾರೆ. ಈ ಬಾರಿ ಅವರು ಚುನಾವಣಾ ಕಣದಿಂದ ದೂರ ಉಳಿದಿದ್ದಾರೆ. ಮಾಜಿ ಸಂಸದ ಆಯನೂರು ಮಂಜುನಾಥ್ ಅಭ್ಯರ್ಥಿಯಾಗಿದ್ದಾರೆ.
ಆಯನೂರು ಮಂಜುನಾಥ್‍ಗೆ ಈ ಚುನಾವಣೆಯು ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಗೆಲುವು ಸಾಧಿಸಲೇಬೇಕಾದ ಒತ್ತಡ ಅವರ ಮೇಲಿದೆ. ಪಕ್ಷದ ಸಂಘಟನೆಯೇ ಅವರ ಪ್ರಚಾರದ ಪ್ರಮುಖ ಅಸ್ತ್ರವಾಗಿದೆ. ಪಕ್ಷದ ಘಟಾನುಘಟಿ ನಾಯಕರು ಅವರ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ದಿನೇಶ್‍ರವರು ಬಿಜೆಪಿಗೆ ಭಾರೀ ಪೈಪೋಟಿವೊಡ್ಡಿದ್ದಾರೆ. ಕಳೆದ ಚುನಾವಣೆಯಲ್ಲಿ ಡಿ.ಹೆಚ್.ಶಂಕರಮೂರ್ತಿ ವಿರುದ್ದ ಕಣಕ್ಕಿಳಿದಿದ್ದ ಎಸ್.ಪಿ. ದಿನೇಶ್ ಉತ್ತಮ ಮತಗಳಿಕೆ ಮಾಡಿ ಗಮನ ಸೆಳೆದಿದ್ದರು. ಕಳೆದ ಮೂರ್ನಾಲ್ಕು ವರ್ಷಗಳಿಂದ ಅವರು ಕ್ಷೇತ್ರದಾದ್ಯಂತ ಓಡಾಡಿಕೊಂಡು, ಚುನಾವಣಾ ಸಿದ್ದತೆ ಮಾಡಿಕೊಂಡು ಬರುತ್ತಿದ್ದಾರೆ.
ಮತ್ತೊಂದೆಡೆ ಕಾಂಗ್ರೆಸ್ ಪಕ್ಷ ಕೂಡ ಚುನಾವಣಾ ಘೋಷಣೆಗೆ ಇನ್ನೂ ಏಳೆಂಟು ತಿಂಗಳಿರುವಂತೆಯೇ, ಅಧಿಕೃತವಾಗಿ ಎಸ್.ಪಿ.ದಿನೇಶ್ ಹೆಸರು ಘೋಷಿಸಿ ಚುನಾವಣಾ ಸಿದ್ದತೆಗಳಿಗೆ ಚಾಲನೆ ನೀಡಿತ್ತು. ಈ ಮೂಲಕ ಬಿಜೆಪಿ ಕೋಟೆಗೆ ಲಗ್ಗೆಯಿಡಲು ಕಾಂಗ್ರೆಸ್ ಕಾರ್ಯತಂತ್ರ ರೂಪಿಸಿತ್ತು.
ಪದವೀಧರರ ಸಮಸ್ಯೆಗಳ ಅರಿವಿದೆ : ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ದಿನೇಶ್
ವಿಧಾನ ಪರಿಷತ್ ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಜಯ ನಿಶ್ಚಿತವಾಗಿದೆ. ಕಳೆದ ಸುಮಾರು ಒಂದು ವರ್ಷದ ಹಿಂದೆಯೇ ತಮ್ಮನ್ನು ಅಭ್ಯರ್ಥಿಯಾಗಿ ಪಕ್ಷ ಘೋಷಿಸಿತ್ತು. ಈ ಕಾರಣದಿಂದ ಹಲವು ಬಾರಿ ಕ್ಷೇತ್ರ ಸುತ್ತು ಹಾಕಿದ್ದೇನೆ. ಮತದಾರರನ್ನು ವೈಯಕ್ತಿಕವಾಗಿ ಸಂಪರ್ಕಿಸುವ ಕೆಲಸ ಮಾಡಿದ್ದೇನೆ. ಪದವೀಧರ ಸಂಘದ ಅಧ್ಯಕ್ಷನಾಗಿ, ಕುವೆಂಪು ವಿವಿ ಸಿಂಡಿಕೇಟ್ ಸದಸ್ಯನಾಗಿ ಹಾಗೂ ವಿದ್ಯಾರ್ಥಿ ಸಂಘದ ನಾಯಕನಾಗಿ ಕೆಲಸ ಮಾಡಿರುವ ತನಗೆ ಪದವೀಧರರ ಸಮಸ್ಯೆಗಳ ವಾಸ್ತವದ ಪರಿಚಯವಿದೆ. ಈ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ' ಎಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಸ್.ಪಿ.ದಿನೇಶ್ ತಿಳಿಸುತ್ತಾರೆ.
ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ : ಬಿಜೆಪಿ ಅಭ್ಯರ್ಥಿ ಆಯನೂರು ಮಂಜುನಾಥ್
'ನೈರುತ್ಯ ಪದವೀಧರ ಕ್ಷೇತ್ರದ ಮತದಾರರ ವಲಯದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದೆಲ್ಲವನ್ನು ಗಮನಿಸಿದರೆ ಮೊದಲ ಸುತ್ತಿನಲ್ಲಿಯೇ ತನ್ನ ಗೆಲುವು ನಿಶ್ಚಿತವೆಂಬ ವಾತಾವರಣ ಕಂಡುಬರುತ್ತಿದೆ. ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿ ಪಕ್ಷದ 27 ಶಾಸಕರು ಆಯ್ಕೆಯಾಗಿದ್ದು, ಅವರೆಲ್ಲರೂ ತಮ್ಮ ಪರವಾಗಿ ಆಯಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತಯಾಚನೆ ನಡೆಸುತ್ತಿದ್ದಾರೆ. ಪಕ್ಷದ ಕಾರ್ಯಕರ್ತರು ಕೂಡ ಮತದಾರರನ್ನು ವೈಯಕ್ತಿಕವಾಗಿ ಭೇಟಿಯಾಗಿ ಮತ ಕೇಳುತ್ತಿದ್ದಾರೆ. ಪದವೀಧರರ ಸಮಸ್ಯೆಗಳ ಮಾಹಿತಿ ತನಗಿದೆ. ತಾವು ಆಯ್ಕೆಯಾದರೆ ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಕ್ರಮಕೈಗೊಳ್ಳುತ್ತೇನೆ' ಎಂದು ಬಿಜೆಪಿ ಅಭ್ಯರ್ಥಿ ಆಯನೂರು ಮಂಜುನಾಥ್ ಹೇಳುತ್ತಾರೆ.
ಶಿಕ್ಷಕರ ಕ್ಷೇತ್ರ : ಬಿಜೆಪಿ - ಜೆಡಿಎಸ್ ನಡುವೆ ಹಣಾಹಣಿ
ನೈರುತ್ಯ ಪದವೀಧರ ಕ್ಷೇತ್ರದ ಜೊತೆಜೊತೆಗೆ ವಿಧಾನಪರಿಷತ್ ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ಕೂಡ ನಡೆಯುತ್ತಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಚುನಾವಣಾ ಪ್ರಚಾರದ ಅಬ್ಬರ ಜೋರಾಗಿದೆ. ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ನಡುವೆ ಜಿದ್ದಾಜಿದ್ದಿನ ಹಣಾಹಣಿ ಕಂಡುಬರುತ್ತಿದೆ.
ಶಿಕ್ಷಕರ ಕ್ಷೇತ್ರದಲ್ಲಿ ಸರಿಸುಮಾರು 20 ಸಾವಿರ ಮತದಾರರಿದ್ದಾರೆ. ಶಿಕ್ಷಕರು ಮತದಾನದ ಹಕ್ಕು ಹೊಂದಿದ್ದಾರೆ. ಕಳೆದ ಎರಡು ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿ ಗಣೇಶ್ ಕಾರ್ಣಿಕ್‍ರವರು ಸತತ ಗೆಲುವು ಸಂಪಾದಿಸಿದ್ದಾರೆ. ಈ ಬಾರಿಯೂ ಅವರು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಪದವೀಧರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಭೋಜೇಗೌಡರವರು, ಈ ಬಾರಿ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಉಳಿದಂತೆ ಕಾಂಗ್ರೆಸ್‍ನಿಂದ ಮಂಜುನಾಥ್ ಎಂಬುವರು ಅಭ್ಯರ್ಥಿಯಾಗಿದ್ದಾರೆ.
ಒಂದೆಡೆ ಕ್ಷೇತ್ರದಲ್ಲಿನ ತನ್ನ ಪ್ರಾಬಲ್ಯ ಮುಂದುವರಿಸಿಕೊಂಡು ಹೋಗಲು ಬಿಜೆಪಿ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಮತ್ತೊಂದೆಡೆ ಕ್ಷೇತ್ರದಲ್ಲಿ ಖಾತೆ ತೆರೆಯಲು ಜೆಡಿಎಸ್ ಭಾರೀ ಹೋರಾಟ ನಡೆಸುತ್ತಿದೆ. ಎರಡೂ ಪಕ್ಷದ ಅಭ್ಯರ್ಥಿಗಳು ಕ್ಷೇತ್ರದಾದ್ಯಂತ ಬಿರುಸಿನ ಓಡಾಟ ನಡೆಸುವ ಮೂಲಕ ಮತದಾರರ ಮನವೊಲಿಕೆಗೆ ನಾನಾ ರೀತಿಯ ಕಸರತ್ತು ನಡೆಸುತ್ತಿದ್ದಾರೆ.