ಮಾರಿಕೊಂಡ ಮಾಧ್ಯಮಗಳು
ಕೋಬ್ರಾಪೋಸ್ಟ್ ಜಾಲತಾಣವು ನಡೆಸಿದ ಕುಟುಕು ಕಾರ್ಯಾಚರಣೆಯು ಭಾರತದ ಮಾಧ್ಯಮಗಳ ಬಗ್ಗೆ ಈಗಾಗಲೇ ಗೊತ್ತಿದ್ದ ವಿಷಯಗಳನ್ನಷ್ಟೇ ಸಾಬೀತುಮಾಡಿದೆ.
ಇಂತಹ ವಿದ್ಯಮಾನವು ಕಣ್ಣೆದುರು ಬಯಲಾದರೂ ಒಂದು ನೈತಿಕ ಆಕ್ರೋಶ ಕಂಡುಬರುತ್ತಿಲ್ಲ. ಕೆಲವು ಮಾಧ್ಯಮ ಸಂಸ್ಥೆಗಳನ್ನು ಹೊರತುಪಡಿಸಿ ಬಹುಪಾಲು ಮಾಧ್ಯಮ ಸಂಸ್ಥೆಗಳು ಯಾರು ಹೆಚ್ಚು ಹಣ ನೀಡುತ್ತಾರೋ- ಅದು ಒಂದು ಕಾರ್ಪೊರೇಟ್ ಸಂಸ್ಥೆಯಾಗಿರಬಹುದು ಅಥವಾ ರಾಜಕೀಯ ಪಕ್ಷವಾಗಿರಬಹುದು ಅಥವಾ ಕಾರ್ಪೊರೇಟ್ ಹಣದಿಂದ ಸ್ಥಾಪಿತವಾದ ಒಂದು ರಾಜಕೀಯ ರಂಗವಾಗಿರಬಹುದು- ಅವರಿಗೆ ಮಾರಿಕೊಳ್ಳಲು ಸಿದ್ಧವಿದ್ದಾವೆ ಎಂಬುದು ಅತ್ಯಂತ ಅಪಮಾನಕಾರಿ ಸಂಗತಿಯಾಗಿದೆ.
ಭಾರತದ ಪ್ರಧಾನ ಧಾರೆಯಲ್ಲಿರುವ ಮಾಧ್ಯಮಗಳು ಬಿಕ್ಕಟ್ಟನ್ನೆದುರಿಸುತ್ತಿವೆ. ಆದರೆ ಅವು ಅದನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಿವೆಯಷ್ಟೆ. ಇತ್ತೀಚೆಗೆ ಕೋಬ್ರಾಪೋಸ್ಟ್ ಎಂಬ ಜಾಲತಾಣವು ಪ್ರಧಾನ ಧಾರೆ ಮಾಧ್ಯಮಕ್ಕೆ ಸಂಬಂಧಪಟ್ಟ ಹಲವು ಸಂಗತಿಗಳನ್ನು ಬಯಲುಮಾಡಿದೆ. ಆದರೆ ಇಂತಹ ಸಂದರ್ಭಗಳನ್ನು ಈ ಮಾಧ್ಯಮಗಳು ತಮ್ಮ ಸ್ವನಿರೀಕ್ಷಣೆಗೆ ಬಳಸಿಕೊಳ್ಳದೆ ಎಲ್ಲವೂ ಸರಿ ಇದೆ ಎಂಬ ರೀತಿ ಉಸುಕಿನಲ್ಲಿ ತಲೆಹಾಕಿ ಕೂತುಬಿಡುತ್ತಿವೆ. ಮೇ 25ರಂದು ತನಿಖಾ ಪತ್ರಿಕೋದ್ಯಮದಲ್ಲಿ ನಿರತವಾಗಿರುವ ಕೋಬ್ರಾಪೋಸ್ಟ್ ಎಂಬ ಜಾಲತಾಣವು ತನ್ನ ‘ಆಪರೇಷನ್ 136’ ಎಂದು ಹೆಸರಿಟ್ಟಿದ್ದ ಕುಟುಕು ಕಾರ್ಯಾಚರಣೆಯ ಎರಡನೆಯ ಕಂತನ್ನು ಸಾರ್ವಜನಿಕಗೊಳಿಸಿತು. ಪತ್ರಿಕಾ ಸ್ವಾತಂತ್ರ್ಯದ ಮಾನದಂಡದಲ್ಲಿ ಪ್ರಪಂಚದ 200 ದೇಶಗಳಲ್ಲಿ ಭಾರತದ ಸ್ಥಾನ 136ನೆಯದು. ಅದಕ್ಕಾಗಿಯೇ ಈ ಕಾರ್ಯಾಚರಣೆಗೆ ಕೋಬ್ರಾಪೋಸ್ಟ್ ‘ಆಪರೇಷನ್ 136’ ಎಂದು ಹೆಸರಿಟ್ಟಿತ್ತು. ಈ ಕಾರ್ಯಾಚರಣೆಯ ಮೊದಲ ಕಂತಿನಲ್ಲಿ ಅದು 17 ಮಾಧ್ಯಮ ಸಂಸ್ಥೆಗಳನ್ನು ಬಯಲುಮಾಡಿತ್ತು. ಈ ಸಂಸ್ಥೆಯ ವರದಿಗಾರನೊಬ್ಬ ‘ಅಟಲ್ ಆಚಾರ್ಯ’ ಎಂಬ ಸುಳ್ಳು ಹೆಸರಿನಲ್ಲಿ ತಾನು ಶ್ರೀಮದ್ ಭಗವದ್ಗೀತಾ ಪ್ರಚಾರ ಸಮಿತಿ ಎಂಬ ಸುಳ್ಳು ಸಂಸ್ಥೆಯ ಪ್ರತಿನಿಧಿ ಎಂದು ಹೇಳಿಕೊಳ್ಳುತ್ತಾ ಮಾಧ್ಯಮ ಸಂಸ್ಥೆಗಳ ಮಾರುಕಟ್ಟೆ ಮತ್ತು ಜಾಹೀರಾತು ಅಧಿಕಾರಿಗಳನ್ನು ಸಂಪರ್ಕಿಸುತ್ತಾನೆ. ತಮ್ಮ ಮಾಧ್ಯಮಗಳಲ್ಲಿ ಹಿಂದುತ್ವವನ್ನು ಪ್ರಚಾರ ಮಾಡುವ ಬಗ್ಗೆ ಅವರೊಡನೆ ಚರ್ಚಿಸುತ್ತಾನೆ. ಪ್ರಾರಂಭದಲ್ಲಿ ಧಾರ್ಮಿಕ ಸಂದೇಶಗಳಿಗೂ, ಆ ನಂತರ ನಿಧಾನವಾಗಿ ವಿರೋಧ ಪಕ್ಷಗಳ ನಾಯಕರ ಲೇವಡಿಗೂ ಹಾಗೂ ಅಂತಿಮವಾಗಿ ಸಮಾಜವನ್ನು ಧಾರ್ಮಿಕವಾಗಿ ಧ್ರುವೀಕರಿಸುವ ರೀತಿಯ ಬಲವಾದ ಹಿಂದುತ್ವವಾದಿ ಅಂಶಗಳಿಗೂ ಅವಕಾಶ ಮಾಡಿಕೊಟ್ಟರೆ ದೊಡ್ಡ ಮೊತ್ತದ ಹಣವನ್ನು ಸಂದಾಯ ಮಾಡುವುದಾಗಿ ಆಚಾರ್ಯ ಅಟಲ್ ಪ್ರಸ್ತಾಪವನ್ನು ಮುಂದಿಡುತಾನೆ. ಅಂತಿಮವಾಗಿ ಯಾವುದೇ ಮಾಧ್ಯಮ ಸಂಸ್ಥೆಯೊಂದಿಗೂ ಯಾವುದೇ ವ್ಯವಹಾರಕ್ಕೆ ಸಹಿ ಬೀಳದಿದ್ದರೂ ಈ ಎಲ್ಲಾ ಮಾಧ್ಯಮ ಸಂಸ್ಥೆಗಳೂ ಇಂತಹ ಒಂದು ವ್ಯವಹಾರವನ್ನು ಕುದುರಿಸಿಕೊಳ್ಳಲು ಚರ್ಚೆಗೆ ಸಿದ್ಧರಿದ್ದರೆಂಬುದೇ ಆಘಾತಕಾರಿಯಾದ ವಿದ್ಯಮಾನವಾಗಿದೆ.
ಈ ‘ಆಪರೇಷನ್ 136’ನ ಮೊದಲ ಕಂತು ಸಾರ್ವಜನಿಕರ ಮತ್ತು ಮಾಧ್ಯಮಗಳ ಗಮನಕ್ಕೆ ಬರದೇಹೋಯಿತು. ಆದರೆ ಕೋಬ್ರಾಪೋಸ್ಟ್ ಸಂಸ್ಥೆಯ ತನ್ನ ಕಾರ್ಯಾಚರಣೆಯ ಎರಡನೆಯ ಕಂತನ್ನು ಮೇ 25ರಂದು ದಿಲ್ಲಿಯಲ್ಲಿ ಬಿಡುಗಡೆ ಮಾಡುವುದಾಗಿ ಘೋಷಿಸಿದ ನಂತರ ಒಂದು ಸಂಚಲನವೇ ಸೃಷ್ಟಿಯಾಯಿತು. ಹಿಂದಿಯಲ್ಲಿ ಅತಿ ಹೆಚ್ಚು ಪ್ರಸಾರ ಹೊಂದಿರುವ ‘ದೈನಿಕ್ ಜಾಗರಣ್’ ಪತ್ರಿಕೆಯು ನ್ಯಾಯಾಲಯದಿಂದ ಎರಡನೇ ಕಂತಿನ ವೀಡಿಯೊ ಟೇಪುಗಳನ್ನು ಬಿಡುಗಡೆ ಮಾಡದಂತೆ ತಡೆಯಾಜ್ಞೆ ತಂದಿತು. ಆದರೆ ಕೋಬ್ರಾಪೋಸ್ಟ್ ಸಂಸ್ಥೆಯು ‘ದೈನಿಕ್ ಜಾಗರಣ್’ ಪತ್ರಿಕೆಗೆ ಸಂಬಂಧಪಟ್ಟ ಟೇಪುಗಳನ್ನು ಮಾತ್ರ ಬಿಡುಗಡೆ ಮಾಡದೆ ಮಿಕ್ಕೆಲ್ಲಾ ಮಾಧ್ಯಮ ಸಂಸ್ಥೆಗಳಿಗೆ ಸಂಬಂಧಪಟ್ಟ ಟೇಪುಗಳನ್ನು ಅಂತರ್ಜಾಲದಲ್ಲಿ ಲಭ್ಯಗೊಳಿಸಿತು.
ಕೋಬ್ರಾಪೋಸ್ಟಿನ 2ನೇ ಕಂತಿನಲ್ಲಿ ಕೆಲವು ಅತಿದೊಡ್ಡ ಮಾಧ್ಯಮ ಸಂಸ್ಥೆಗಳ ಪ್ರತಿನಿಧಿಗಳ ಜೊತೆ ನಡೆದ ಸಂಭಾಷಣೆಗಳಿವೆ. ಅದರ ಜೊತೆಗೆ ಒಂದು ಮಾಧ್ಯಮ ಸಂಸ್ಥೆಯ ಮಾಲಕ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಜೊತೆಯೂ ಈ ಬಗ್ಗೆ ಸಂಭಾಷಣೆಗಳು ನಡೆದಿರುವುದು ಅಂತರ್ಜಾಲದಲ್ಲಿ ಈಗ ಲಭ್ಯವಿದೆ. ಈ ಸಂಭಾಷಣೆಗಳಲ್ಲಿ ಅಟಲ್ ಆಚಾರ್ಯ ಮುಂದಿಟ್ಟ ಯೋಜನೆಯನ್ನು ಹೇಗೆ ಅನುಷ್ಠಾನಕ್ಕೆ ತರುವುದು ಎಂಬ ಬಗ್ಗೆ ವಿವರವಾದ ಚರ್ಚೆಗಳು ನಡೆದಿವೆಯಲ್ಲದೆ ಹಣವನ್ನು ಹೇಗೆ ಪಾವತಿ ಮಾಡಬೇಕು ಎಂಬವರೆಗೂ ಚರ್ಚೆಗಳು ಮುಂದುವರಿದಿವೆ. ಹಣಪಾವತಿಯಲ್ಲಿ ನಗದಿನ ಪ್ರಮಾಣ ಎಷ್ಟಿರಬೇಕೆಂಬ ಬಗ್ಗೆಯೂ ಚರ್ಚೆಗಳು ನಡೆದಿವೆ. ಈ ಬಾರಿಯೂ ಒಂದೆರಡು ಪತ್ರಿಕೆಗನ್ನು ಬಿಟ್ಟರೆ ಮಿಕ್ಕಂತೆ ಬಹುಪಾಲು ಮಾಧ್ಯಮ ಸಂಸ್ಥೆಗಳು ಈ ಕಾರ್ಯಾಚರಣೆಯನ್ನು ನಿರ್ಲಕ್ಷಿಸಿದವು. ಇನ್ನೊಂದಷ್ಟು ಮಾಧ್ಯಮ ಸಂಸ್ಥೆಗಳು ನ್ಯಾಯಾಲಯಕ್ಕೆ ತೆರಳಿ ಈ ಸಂಭಾಷಣೆಗಳ ಟೇಪುಗಳು ಮತ್ತಷ್ಟು ಪ್ರಚಾರವಾಗದಂತೆ ತಡೆಯಾಜ್ಞೆ ತಂದಿರುವುದಲ್ಲದೆ ಕೋಬ್ರಾಪೋಸ್ಟ್ಗೆ ದಾವೆ ಸಂಬಂಧಿ ನೋಟಿಸನ್ನು ಜಾರಿ ಮಾಡಿವೆ. ಕೆಲವು ಪತ್ರಿಕೆಗಳು ಈ ಕಾರ್ಯಾಚರಣೆಯ ಹಿಂದಿದ್ದ ಪತ್ರಕರ್ತನ ಅನುಮಾನಾಸ್ಪದ ಹಿನ್ನೆಲೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದರೆ ಇನ್ನೂ ಕೆಲವರು ಆ ಧ್ವನಿ ಸುರುಳಿಗಳ ವಿಶ್ವಾಸಾರ್ಹತೆಯನ್ನು ಅನುಮಾನಿಸುತ್ತಿದ್ದಾರೆ.
ಈ ಬಗೆಯ ಕುಟುಕು ಕಾರ್ಯಾಚರಣೆಗಳನ್ನು ಮಾಡುವುದು ನೈತಿಕವಾಗಿ ಸಾಧುವೇ, ಕೋಬ್ರಾಪೋಸ್ಟ್ ಮುಂದಿಟ್ಟಿರುವ ಧ್ವನಿಸುರುಳಿಗಳು ವಿಶ್ವಾಸಾರ್ಹವೇ ಮತ್ತು ಚಿತ್ರೀಕರಣದ ನಂತರದಲ್ಲಿ ಅವನ್ನು ತಮಗೆ ಬೇಕಾದಂತೆ ಎಡಿಟಿಂಗ್ ಮಾಡಿರಬಹುದೇ ಎಂಬೆಲ್ಲಾ ವಿಷಯಗಳ ಬಗ್ಗೆ ಖಂಡಿತಾ ಚರ್ಚೆ ನಡೆಯಬೇಕು. ಆದರೆ ಕುಟುಕು ಕಾರ್ಯಾಚರಣೆಯ ಹಿಂದಿನ ಪ್ರಧಾನ ಉದ್ದೇಶವು ಹೇಗೆ ಮಾಧ್ಯಮ ಸಂಸ್ಥೆಗಳ ಮಾರುಕಟ್ಟೆ ಮತ್ತು ಜಾಹೀರಾತು ಪ್ರತಿನಿಧಿಗಳು ಮತ್ತು ಅದಕ್ಕೆ ಮೇಲ್ಪಟ್ಟವರು ಕೂಡಾ ಹಣಕ್ಕಾಗಿ ಒಂದು ನಿರ್ದಿಷ್ಟ ರಾಜಕೀಯದ ಪರವಾಗಿ ಪ್ರಚಾರವನ್ನು ನಡೆಸುವ ಬಗ್ಗೆ ಚರ್ಚೆ ನಡೆಸಲು ಸಿದ್ಧರಿದ್ದರು ಎಂಬುದನ್ನು ಬಯಲು ಮಾಡುವುದಾಗಿದೆ. ಆದರೆ ಇಂತಹ ವಿದ್ಯಮಾನವು ಕಣ್ಣೆದುರು ಬಯಲಾದರೂ ಒಂದು ನೈತಿಕ ಆಕ್ರೋಶ ಕಂಡುಬರುತ್ತಿಲ್ಲ. ಕೆಲವು ಮಾಧ್ಯಮ ಸಂಸ್ಥೆಗಳನ್ನು ಹೊರತುಪಡಿಸಿ ಬಹುಪಾಲು ಮಾಧ್ಯಮ ಸಂಸ್ಥೆಗಳು ಯಾರು ಹೆಚ್ಚು ಹಣ ನೀಡುತ್ತಾರೋ- ಅದು ಒಂದು ಕಾರ್ಪೊರೇಟ್ ಸಂಸ್ಥೆಯಾಗಿರಬಹುದು ಅಥವಾ ರಾಜಕೀಯ ಪಕ್ಷವಾಗಿರಬಹುದು ಅಥವಾ ಕಾರ್ಪೊರೇಟ್ ಹಣದಿಂದ ಸ್ಥಾಪಿತವಾದ ಒಂದು ರಾಜಕೀಯ ರಂಗವಾಗಿರಬಹುದು- ಅವರಿಗೆ ಮಾರಿಕೊಳ್ಳಲು ಸಿದ್ಧವಿದ್ದಾವೆ ಎಂಬುದು ಅತ್ಯಂತ ಅಪಮಾನಕಾರಿ ಸಂಗತಿಯಾಗಿದೆ. ಭಾರತದ ಮಾಧ್ಯಮಗಳ ಈ ವಿಶ್ವಾಸಾರ್ಹತೆಯ ಅಧಃಪತನವು ಪ್ರಾರಂಭವಾಗಿ ಎರಡು ದಶಕಗಳೇ ಆಗಿವೆ.
1970ರ ದಶಕದಲ್ಲಿ ಹೇರಲಾದ ತುರ್ತುಸ್ಥಿತಿಯ ಸಂದರ್ಭದಲ್ಲಿ ಬಹುಪಾಲು ಮಾಧ್ಯಮಗಳು ರಾಜಿ ಮಾಡಿಕೊಂಡವು. ಅದನ್ನು ಹೊರತುಪಡಿಸಿದರೆ, ಮಾಧ್ಯಮ ಸಂಸ್ಥೆಗಳ ಕೊಳ್ಳಾಟವು ನಿಜಕ್ಕೂ ಪ್ರಾರಂಭವಾಗಿದ್ದು ಉದಾರೀಕರಣದ ಜೊತೆಜೊತೆಗೆ. ಆಗ ಮಾಧ್ಯಮ ಸಂಸ್ಥೆಗಳಲ್ಲಿನ ವ್ಯಾವಹಾರಿಕ ಮತ್ತು ಸಂಪಾದಕೀಯ ವಿಭಾಗಗಳ ನಡುವಿನ ವಿಭಜನೆಯು ದಿನೇದಿನೇ ಕಿರಿದಾಗುತ್ತಾ ಬಂದು ಕೊನೆಗೆ ಅಂತಹ ಒಂದು ವಿಭಜನೆಯೇ ಇಲ್ಲವಾಯಿತು. ಯಾವುದೇ ಸರಕನ್ನು ಮಾರಬಲ್ಲ ಸಾಮರ್ಥ್ಯ ಉಳ್ಳದ್ದೇ ಸುದ್ದಿಯೆಂದು ಮರು ನಿರ್ವಚನ ಮಾಡಲಾಯಿತು. ಈ ಗ್ರಹಿಕೆಯ ತಾರ್ಕಿಕ ಬೆಳವಣಿಗೆಯೇನೆಂದರೆ ಒಂದು ಸುದ್ದಿಯ ಜಾಗಗಳನ್ನು ನಿರ್ದಿಷ್ಟ ಬೆಲೆಗೆ ಮಾರಿಕೊಳ್ಳುವುದು ಪ್ರಾರಂಭವಾಯಿತು. ಇದಾದ ನಂತರದಲ್ಲಿ ತಮ್ಮ ಕಂಪೆನಿಗಳ ಜಾಹೀರಾತು ಮತ್ತು ಅದರ ಬಗೆಗಿನ ಸುದ್ದಿಗಳನ್ನು ವರದಿ ಮಾಡುವುದಕ್ಕೆ ಪ್ರತಿಯಾಗಿ ಆ ಕಂಪೆನಿಗಳು ಮಾಧ್ಯಮ ಸಂಸ್ಥೆಗಳಿಗೆ ತಮ್ಮ ಕಂಪೆನಿಯ ಶೇರುಗಳನ್ನು ಕೊಡುವ ಪರಿಪಾಠ ಪ್ರಾರಂಭವಾಯಿತು. ಇದರಿಂದ ಕಾರ್ಪೊರೇಟ್ ಕಂಪೆನಿಗೂ ಮತ್ತು ಮಾಧ್ಯಮ ಸಂಸ್ಥೆಗಳೆರಡಕ್ಕೂ ಲಾಭವಾಗಿದ್ದು ನಿಜವಾದರೂ ಮಾಧ್ಯಮಗಳ ವಿಶ್ವಾಸಾರ್ಹತೆ ಮಾತ್ರ ಪಾತಾಳಕ್ಕಿಳಿಯಿತು.
ಕಾಸಿಗಾಗಿ ಸುದ್ದಿಯನ್ನು ಪ್ರಕಟ ಮಾಡುವುದರಿಂದ ಖಾಸಗಿ ಉದ್ದಿಮೆಗಳು ಮಾತ್ರವಲ್ಲದೆ ರಾಜಕೀಯ ಪಕ್ಷಗಳೂ ಲಾಭ ಮಾಡಿಕೊಂಡಿವೆ. ರಾಜಕೀಯ ಪಕ್ಷಗಳಿಂದ ಹಣವನ್ನು ಪಡೆದುಕೊಂಡು ಅವರ ಪರವಾದ ಸುದ್ದಿಯನ್ನು ಪ್ರಕಟಮಾಡುವ ‘ಕಾಸಿಗಾಗಿ ಸುದ್ದಿ’ಯ ವಿದ್ಯಮಾನವನ್ನು ಮೊದಲು 2004ರಲ್ಲಿ ಆಂಧ್ರಪ್ರದೇಶದ ಕಾರ್ಯನಿರತ ಪತ್ರಕರ್ತರ ಸಂಘ ಬಯಲುಮಾಡಿತು. ಈ ಪ್ರಕರಣದಲ್ಲಿ ಮಾಧ್ಯಮ ಸಂಸ್ಥೆಗಳೇ ರಾಜಕೀಯ ಪಕ್ಷಗಳ ಬಳಿ ಹೋಗಿ ನಿರ್ದಿಷ್ಟ ಮೊತ್ತಕ್ಕಾಗಿ ಆಯಾ ಪಕ್ಷಗಳ ಪರ ಸುದ್ದಿಯನ್ನು ಪ್ರಕಟಮಾಡುವ ವ್ಯವಹಾರವನ್ನು ಕುದುರಿಸಿಕೊಂಡವು. 2009ರ ಸಾರ್ವತ್ರಿಕ ಚುನಾವಣೆಗಳಲ್ಲಿ ಇದೇ ಬಗೆಯ ವಿದ್ಯಮಾನವು ಮಹಾರಾಷ್ಟ್ರ, ಗುಜರಾತ್, ಹರ್ಯಾಣ ಹಾಗೂ ಇನ್ನಿತರ ರಾಜ್ಯಗಳಲ್ಲೂ ಕಂಡುಬಂದವು. ಇಂತಹ ವ್ಯವಹಾರಗಳಲ್ಲಿ ಹಣಕಾಸು ವರ್ಗಾವಣೆಗಳು ರಹಸ್ಯವಾಗಿಯೇ ನಡೆಯುವುದರಿಂದ ಈ ಬಗ್ಗೆ ಸಾಂದರ್ಭಿಕ ಸಾಕ್ಷಿಯನ್ನು ಹೊರತು ಪಡಿಸಿ ಬೇರೆ ಯಾವುದೇ ನೇರವಾದ ಸಾಕ್ಷಿಗಳು ಸಿಗುವುದಿಲ್ಲ. ಆದರೆ ಚುನಾವಣೆ ವೆಚ್ಚದ ಮೇಲೆ ಆಯೋಗವು ವಿಧಿಸಿದ್ದ ಮಿತಿಯನ್ನು ಮೀರಲು ನೈಜ ಸುದ್ದಿಯ ಮುಸುಕಿನಲ್ಲಿ ಕಾಸಿಗಾಗಿ ಸುದ್ದಿಯನ್ನು ಪ್ರಕಟಣೆಗೊಳ್ಳುವಂತೆ ಮಾಡುವ ತಂತ್ರಗಳನ್ನು ರಾಜಕಿಯ ಪಕ್ಷಗಳು ಅನುಸರಿಸಿದ್ದವೆಂಬುದು ಸ್ಪಷ್ಟ.
ಇದು ಬಯಲಾಗತೊಡಗಿದೊಡನೆ ಚುನಾವಣಾ ಆಯೋಗವು ಕಾಸಿಗಾಗಿ ಸುದ್ದಿಯ ಬಗ್ಗೆ ತನಿಖೆ ಮಾಡಲು ಭಾರತೀಯ ಪತ್ರಿಕಾ ಪರಿಷತ್ತನ್ನು (ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ- ಪಿಸಿಐ) ಕೇಳಿಕೊಂಡಿತು. ಆದರೆ ತನಿಖೆಯ ಫಲಶ್ರುತಿಯಾಗಿ ತಯಾರಾದ 71 ಪುಟಗಳ ಪೇಯ್ಡಿ ನ್ಯೂಸ್: ಹೌ ಕರಪ್ಷನ್ ಇನ್ ಇಂಡಿಯನ್ ಮೀಡಿಯಾ ಅಂಡರ್ಮೈನ್ಸ್ ಡೆಮಾಕ್ರಸಿ (ಕಾಸಿಗಾಗಿ ಸುದ್ದಿ-ಹೇಗೆ ಭಾರತೀಯ ಮಾಧ್ಯಮಗಳಲ್ಲಿನ ಭ್ರಷ್ಟಾಚಾರವು ಪ್ರಜಾತಂತ್ರವನ್ನು ವಿಫಲಗೊಳಿಸುತ್ತದೆ) ಎಂಬ ವರದಿಯನ್ನು ಪಿಸಿಐನ ಎಲ್ಲಾ ಸದಸ್ಯರು ಒಪ್ಪಿಕೊಳ್ಳದಿದ್ದರಿಂದ ಅದು ಧೂಳು ತಿನ್ನುವಂತಾಯಿತು. ಮಾಧ್ಯಮ ಸಂಸ್ಥೆಗಳು ಕಾರ್ಪೊರೇಟ್ ಸಂಸ್ಥೆಗಳ ಜೊತೆ ಖಾಸಗಿ ವ್ಯವಹಾರಗಳನ್ನು ಕುದುರಿಸಿಕೊಳ್ಳುವ ಮತ್ತು ರಾಜಕೀಯ ಪಕ್ಷಗಳಿಂದ ಹಣವನ್ನು ಪಡೆದುಕೊಂಡು ಅವರಿಗೆ ಬೇಕಾದ ವರದಿಯನ್ನು ಪ್ರಕಟಿಸಲು ಸಿದ್ಧವಾಗುವ ಇತಿಹಾಸವನ್ನು ಹೊಂದಿರುವಾಗ ಕೋಬ್ರಾಪೋಸ್ಟ್ನಲ್ಲಿ ಬಯಲುಗೊಳಿಸಿರುವುದು ಸಾರ್ವಜನಿಕರಿಗೆ ಗೊತ್ತಿಲ್ಲದ ಸಂಗತಿಗಳೇನಲ್ಲ. ಇದು ಭಾರತೀಯ ಮಾಧ್ಯಮಗಳು ಯಾವ ಖಾಯಿಲೆಯಿಂದ ಬಳಲುತ್ತಿವೆಯೆಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ. ಕೋಬ್ರಾ ಪೋಸ್ಟ್ನ ಮಾತುಗಳಲ್ಲೇ ಹೇಳುವುದಾದರೆ ಮಾಧ್ಯಮಗಳು ಸಂಪೂರ್ಣವಾಗಿ ಮಾರಿಕೊಂಡಿವೆ: ಮಾಧ್ಯಮಗಳು ಈ ಸಮಸ್ಯೆಯ ಅಸ್ತಿತ್ವವನ್ನೇ ನಿರಾಕರಿಸುತ್ತಿವೆ. ಆ ಮೂಲಕ ತಾವು ಪ್ರಜಾತಂತ್ರದಲ್ಲಿ ಆಳುವವರ ಸಾಕುನಾಯಿಯಾಗದೆ, ಯಾರೇ ಅಧಿಕಾರದಲ್ಲಿದ್ದರೂ ಒಂದು ಸ್ವತಂತ್ರ ಕಾವಲುನಾಯಿಯ ಪಾತ್ರವನ್ನು ನಿರ್ವಹಿಸಬಹುದಾದ ಸಾಧ್ಯತೆಯನ್ನೇ ನಿರಾಕರಿಸುತ್ತಿವೆ.
ಕೃಪೆ: Economic and Political Weekly