ವಿಧಾನಪರಿಷತ್ ಸದಸ್ಯರಾಗಿ ಮಾಜಿ ಶಾಸಕ ಧರ್ಮೇಗೌಡ ಆಯ್ಕೆ: ವೈಟ್‍ವಾಶ್ ನೋವಿನಿಂದ ಹೊರಬಂದ ಜಿಲ್ಲಾ ಜೆಡಿಎಸ್
ಉಸ್ತುವಾರಿ ಸಚಿವರಾಗಲಿದ್ದಾರಾ ಧರ್ಮೇಗೌಡ..?
ಚಿಕ್ಕಮಗಳೂರು, ಜೂ.6: ಜಿಲ್ಲೆಯ ಜೆಡಿಎಸ್ ಮುಖಂಡ ಹಾಗೂ ಮಾಜಿ ಶಾಸಕ ಎಸ್.ಎಲ್.ಧರ್ಮೇಗೌಡ ಅವರು ವಿಧಾನ ಪರಿಷತ್ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದು, ಜಿಲ್ಲೆಯ ಜೆಡಿಎಸ್ ಮುಖಂಡರು, ಕಾರ್ಯಕರ್ತರಲ್ಲಿ ಸಂಭ್ರಮಕ್ಕೆ ಕಾರಣವಾಗಿದೆ. ಧರ್ಮೇಗೌಡ ಅವರು ಎಮ್ಮೆಲ್ಸಿಯಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ವಾಶ್‍ಔಟ್ ಆಗಿದ್ದ ಜೆಡಿಎಸ್‍ಗೆ ಇದೀಗ ಚೇತರಿಸಿಕೊಂಡಂತಿದೆ.
ಜೆಡಿಎಸ್ ಪಕ್ಷದಿಂದ ಮೇಲ್ಮನೆಗೆ ಆಯ್ಕೆಯಾಗಲು ಅವರು ಇತ್ತೀಚೆಗೆ ನಾಮಪತ್ರ ಸಲ್ಲಿಸಿದ್ದರು. ಅವರು ವಿಧಾನ ಪರಿಷತ್ ಸದಸ್ಯರಾಗಿ ಬಹುತೇಕ ಅವಿರೋಧ ಆಯ್ಕೆಯಾಗಲಿದ್ದಾರೆ ಎಂಬ ಸುದ್ದಿಯಿಂದಾಗಿ ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಜಿಲ್ಲೆಯಲ್ಲಿ ನಿಟ್ಟುಸಿರು ಬಿಡುವಂತಾಗಿತ್ತು. ಇದೀಗ ಅವರ ಆಯ್ಕೆ ಖಚಿತಗೊಂಡಿರುವುದರಿಂದ ಜಿಲ್ಲೆಯಾದ್ಯಂತ ಜೆಡಿಎಸ್ ಪಕ್ಷಕ್ಕೆ ಬಲ ಬಂದಂತಾಗಿದೆ.
ಮಾಜಿ ಶಾಸಕ ದಿವಂಗತ ಎಸ್.ಆರ್.ಲಕ್ಷ್ಮಯ್ಯನವರು ದೇವೇಗೌಡರಿಗೆ ಬಹಳ ಆಪ್ತರಾಗಿದ್ದು, ಜಿಲ್ಲೆಯಲ್ಲಿ ಜನತಾ ಪರಿವಾರವನ್ನು ಗಟ್ಟಿಯಾಗಿ ಬೆಳೆಸುವಲ್ಲಿ ಲಕ್ಷ್ಮಯ್ಯನವರ ಪಾತ್ರ ಅಮೂಲ್ಯವಾಗಿದೆ. ಎಲ್ಲಾ ಸಂದಿಗ್ಧ ಪರಿಸ್ಥಿತಿಯಲ್ಲೂ ದೇವೇಗೌಡರ ಕುಟುಂಬದೊಂದಿಗೆ ಗುರುತಿಸಿಕೊಂಡು ಅವಿಭಜಿತ ಬೀರೂರು ವಿಧಾನಸಭಾ ಕ್ಷೇತ್ರದಿಂದ ಈ ಹಿಂದೆ ಮೂರು ಬಾರಿ ಶಾಸಕರಾಗಿ ಧರ್ಮೇಗೌಡ ಆಯ್ಕೆಯಾಗಿದ್ದರು. ಆದರೆ ಅವರಿಗೆ ಸಚಿವರಾಗುವ ಅದೃಷ್ಟ ದೊರಕಿರಲಿಲ್ಲ. ಕೂದಲೆಳೆಯ ಅಂತರದಲ್ಲಿ ಅವರಿಗೆ ಸಚಿವ ಸ್ಥಾನ ಕೈತಪ್ಪಿದಾಗಲೂ ದಿವಂಗತ ಲಕ್ಷ್ಮಯ್ಯನವರು ಪಕ್ಷ ಬಿಟ್ಟು ಹೋಗುವ ನಿರ್ಧಾರ ತೆಗೆದುಕೊಳ್ಳದೆ ತಮ್ಮ ಪಕ್ಷ ನಿಷ್ಠೆ ತೋರಿಸಿದ್ದರು. ಅವರ ಮಕ್ಕಳಾದ ಎಸ್.ಎಲ್.ಧರ್ಮೇಗೌಡ ಹಾಗೂ ಎಸ್.ಎಲ್.ಭೋಜೇಗೌಡರವರೂ ಇದೇ ಹಾದಿಯಲ್ಲಿ ಬೆಳೆದು ಬಂದವರಾಗಿದ್ದು, ನೇರ ನುಡಿಯ ಧರ್ಮೇಗೌಡ ಸಹಕಾರಿ ಕ್ಷೇತ್ರವನ್ನು ಅರಿತವರು. ಬಿಳೇಕಲ್ಲಹಳ್ಳಿ ಗ್ರಾಮದಿಂದ ತಮ್ಮ ರಾಜಕೀಯ ಜೀವನ ಆರಂಭಿಸಿದ ಧರ್ಮೇಗೌಡರವರು ಉದ್ದೇಬೋರನಹಳ್ಳಿಯಲ್ಲಿ ಸಹಕಾರ ಸಂಘವನ್ನು ಪ್ರಾರಂಭಿಸಿ ಅದರ ಅಧ್ಯಕ್ಷರಾಗಿ ಸಹಕಾರಿ ಕ್ಷೇತ್ರಕ್ಕೆ ದಾಪುಗಾಲಿಟ್ಟರು.
ವಿವಿಧ ಹಂತಗಳ 36ಕ್ಕೂ ಹೆಚ್ಚು ಚುನಾವಣೆಗಳನ್ನು ಎದುರಿಸಿದ ಧರ್ಮೇಗೌಡ ಅವರು ಜಿಲ್ಲೆಯ ಮಟ್ಟಿಗೆ ಅಲಂಕರಿಸದ ಸಹಕಾರಿ ಕ್ಷೇತ್ರದ ಹುದ್ದೆಗಳೇ ಇಲ್ಲ. ಪಿ.ಎಲ್.ಡಿ. ಬ್ಯಾಂಕ್, ಜನತಾ ಬಜಾರ್, ಟಿಎಪಿಸಿಎಂಎಸ್, ಹಾಸನ ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಯ ಹಾಲು ಒಕ್ಕೂಟದ ಅಧ್ಯಕ್ಷರಾಗಿ ಕರ್ನಾಟಕ ರಾಜ್ಯ ಮಾರಾಟ ಮಹಾ ಮಂಡಳಿಯ ನಿರ್ದೇಶಕರಾಗಿ ಹಲವು ಬಾರಿ ಅವರು ಸೇವೆ ಸಲ್ಲಿಸಿದ್ದಾರೆ.
ಕಳೆದ 40 ವರ್ಷದಿಂದ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಸೇವೆ ಸಲ್ಲಿಸಿರುವ ಧರ್ಮೇ ಗೌಡ ಸಹಕಾರಿ ಕ್ಷೇತ್ರದ ಯಾವುದೇ ಚುನಾವಣೆಗೆ ಸ್ಪರ್ಧಿಸಿದರೂ ಗೆಲುವು ಸಾಧಿಸುತ್ತಿದ್ದರು. ದೇವೇಗೌಡರ ಕುಟುಂಬದೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಎಸ್.ಎಲ್.ಧರ್ಮೇಗೌಡರವರಿಗೆ ಪಕ್ಷದ ವರಿಷ್ಠರು ಕೊಟ್ಟ ಮಾತಿನಂತೆ ವಿಧಾನ ಪರಿಷತ್ ಚುನಾವಣಾ ಸ್ಪರ್ಧೆಗೆ ಇಳಿಸಿದ್ದಾರೆನ್ನಲಾಗುತ್ತಿದೆ. ತಾನು ಸಿಎಂ ಆದಲ್ಲಿ ಲಕ್ಷ್ಮಯ್ಯ ಅವರ ಮಕ್ಕಳನ್ನು ಮರೆಯೊಲ್ಲ ಎಂದು ಸಿಎಂ ಕುಮಾರಸ್ವಾಮಿ ಚಿಕ್ಕಮಗಳೂರಿನಲ್ಲಿ ಬಹಿಂಗರಂಗವಾಗಿ ಕಾರ್ಯಕರ್ತರಿಗೆ ಮಾತು ಕೊಟ್ಟಿದ್ದರು. ಅದರಂತೆ ಅವರು ಧರ್ಮೇಗೌಡರನ್ನು ಸಿಎಂ ಕುಮಾರಸ್ವಾಮಿ ಕೊಟ್ಟ ಮಾತಿಗೆ ತಪ್ಪದಂತೆ ಎಮ್ಮೆಲ್ಸಿಯನ್ನಾಗಿ ಮಾಡಿದ್ದಾರೆ.
ಎಮ್ಮೆಲ್ಸಿ ಆಗಿರುವ ಧರ್ಮೇಗೌಡ ಅವರಿಗೆ ಸಚಿವ ಪದವಿ ದೊರಕುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಇದು ನಿಜವಾದಲ್ಲಿ ಜಿಲ್ಲೆಯಲ್ಲಿ ಧರ್ಮೇಗೌಡ ಅವರೇ ಜಿಲ್ಲಾ ಉಸ್ತುವಾರಿ ಸಚಿವರಾಗುವ ಸಾಧ್ಯತೆ ಹೆಚ್ಚಿದೆ. ಹೀಗಾದಲ್ಲಿ ಜಿಲ್ಲೆಯಲ್ಲಿ ಅಸ್ತಿತ್ವ ಇಲ್ಲದಂತಾಗಿರುವ ಜೆಡಿಎಸ್ ಪಕ್ಷಕ್ಕೆ ಭವಿಷ್ಯದಲ್ಲಿ ಸಂಘಟನಾತ್ಮಕವಾಗಿ ಉತ್ತಮ ಅವಕಾಶ ಸಿಗಲಿದೆ ಎಂದು ಹೇಳಲಾಗುತ್ತಿದೆ.
ಕಳೆದ ವಿಧಾನಸಭೆ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಬಿಎಸ್ಪಿ ಮೈತ್ರಿಯೊಂದಿಗೆ ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಸ್ಪರ್ಧೆಗಳಿದಿತ್ತು. ಐದೂ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳೇ ಕಣದಲ್ಲಿದ್ದರು. ಐದು ಕ್ಷೇತ್ರಗಳ ಪೈಕಿ ಕಡೂರು ಕ್ಷೇತ್ರದಲ್ಲಿ ಮಾಜಿ ಶಾಸಕ ವೈಎಸ್‍ವಿ ದತ್ತ, ಮೂಡಿಗೆರೆ ಕ್ಷೇತ್ರದಲ್ಲಿ ಬಿ.ಬಿ.ನಿಂಗಯ್ಯ ಅವರ ಗೆಲುವು ನಿಶ್ಚಿತ ಎನ್ನಲಾಗಿತ್ತು. ಈ ನಿಟ್ಟಿನಲ್ಲಿ ಜಿಲ್ಲೆಯ ಜೆಡಿಎಸ್ ವರಿಷ್ಠರಾದ ಎಸ್.ಎಲ್.ಭೋಜೇಗೌಡ ಹಾಗೂ ಧರ್ಮೇಗೌಡ ಸಹೋದರರ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ವ್ಯಾಪಕವಾದ ಚುನಾವಣಾ ಪ್ರಚಾರವೂ ನಡೆದಿತ್ತು. ಆದರೆ ಚುನಾವಣೆ ಬಳಿಕ ನಡೆದ ಮತ ಎಣಿಕೆಯಲ್ಲಿ ಜೆಡಿಎಸ್ ಲೆಕ್ಕಾಚಾರ ಉಲ್ಟಾ ಹೊಡೆದಿದ್ದು, ಐದೂ ಕ್ಷೇತ್ರಗಳ ಪೈಕಿ ಒಂದು ಕ್ಷೇತ್ರಗಳಲ್ಲೂ ಗೆಲುವು ದಾಖಲಿಸಲಾಗದ ಜೆಡಿಎಸ್ ಹೀನಾಯ ಸೋಲು ಕಂಡು ಪ್ರಥಮ ಬಾರಿಗೆ ವೈಟ್‍ವಾಶ್‍ನ ಕಪ್ಪುಚುಕ್ಕಿಗೆ ಗುರಿಯಾಗಿತ್ತು. ಸದ್ಯ ಧರ್ಮೇಗೌಡ ಎಮ್ಮೆಲ್ಸಿಯಾಗಿ ಹೊರ ಬಂದಿರುವುದರಿಂದ ಜಿಲ್ಲಾ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರಿಗೆ ಧರ್ಮೇಗೌಡ ಎಮ್ಮೆಲ್ಸಿಯಾಗಿರುವುದು ವೈಟ್‍ವಾಶ್ ನೋವಿಗೆ ಮದ್ದಾದಂತಾಗಿದೆ.
ದೇವೇಗೌಡ ಮಾನಸ ಪುತ್ರ ಪಕ್ಷ ತೊರೆಯುತ್ತಾರಾ?
ಕ್ಷೇತ್ರದ ಮಾಜಿ ಶಾಸಕ ವೈಎಸ್‍ವಿ ದತ್ತ ಪ್ರೀತಿಯ ರಾಜಕಾರಣಕ್ಕೆ ಹೆಸರಾದವರು. ದೇವೇಗೌಡ ಅವರ ಮಾನಸ ಪುತ್ರ ಎಂದೇ ಖ್ಯಾತರಾಗಿದ್ದ ಅವರು, ಉತ್ತಮ ಸಂಸದೀಯ ಪಟು ಕೂಡ. ಪ್ರತೀ ಚುನಾವಣೆಯಲ್ಲಿ ಜಾತಿ, ಹಣ, ಹೆಂಡದ ರಾಜಕೀಯದಿಂದ ಬಹುದೂರವಿದ್ದ ಅವರು ಕ್ಷೇತ್ರದಲ್ಲಿ ಸತತ ಗೆಲುವು ದಾಖಲಿಸಿದ್ದವರು. ಈ ಬಾರಿಯೂ ಅವರ ಗೆಲವು ಶತಸಿದ್ಧ ಎನ್ನಲಾಗಿತ್ತು. ಆದರೆ ಅವರು ಹೀನಾಯ ಸೋಲು ಕಂಡಿದ್ದರು. ಚುನಾವಣೆ ಬಳಿಕ ಕಡೂರು ಶಾಸಕ ದತ್ತ ಅವರ ಸೋಲಿಗೆ ಕಾರಣ ಮಾಜಿ ಶಾಸಕ ಎಸ್.ಎಲ್.ಧರ್ಮೇಗೌಡ ಕಾರಣ ಎಂಬ ಆರೋಪವನ್ನು ಕಡೂರು ಕ್ಷೇತ್ರದ ದತ್ತ ಬೆಂಬಲಿಗರು ಮಾಡಿದ್ದರು. ಚುನಾವಣಾ ಸಂದರ್ಭದಲ್ಲಿ ಪ್ರಚಾರದ ಜವಬ್ದಾರಿ ಹೊತ್ತಿದ್ದ ಧರ್ಮೇಗೌಡ ಅವರು ಕಡೂರು ಕ್ಷೇತ್ರದಲ್ಲಿ ದತ್ತ ಪರವಾಗಿ ಒಮ್ಮೆಯೂ ಪ್ರಚಾರಕ್ಕೆ ಬಂದಿಲ್ಲ. ಈ ಹಿಂದೆ ಬೀರೂರು ಕ್ಷೇತ್ರದಲ್ಲಿ ಮೂರು ಬಾರಿ ಶಾಸಕರಾಗಿದ್ದ ಧರ್ಮೇಗೌಡ ಅವರ ಬೆಂಬಲಿಗರು ಹೆಚ್ಚಿದ್ದು, ಅವರನ್ನು ಕರೆದು ಒಮ್ಮೆಯೂ ಸಭೆ ಮಾಡಿಲ್ಲ. ದತ್ತ ಗೆಲ್ಲುವುದು ಧರ್ಮೇಗೌಡ ಭೋಜೇಗೌಡ ಸಹೋದರರಿಗೆ ಬೇಕಿರಲಿಲ್ಲ ಎಂಬ ಗಂಭೀರ ಆರೋಪ ವ್ಯಕ್ತವಾಗಿತ್ತು.
ಇತ್ತೀಚೆಗೆ ಸಿಎಂ ಕುಮಾರಸ್ವಾಮಿ ಅವರು ಧರ್ಮೇಗೌಡ ಅವರನ್ನು ಎಮ್ಮೆಲ್ಸಿ ಮಾಡಲು ಮುಂದಾಗಿರುವುದು ಕಡೂರು ಜೆಡಿಎಸ್‍ನಲ್ಲಿ ಹಾಗೂ ದತ್ತ ಅವರಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು. ಕಡೂರು ಜೆಡಿಎಸ್ ಮುಖಂಡರು, ಕಾರ್ಯಕರ್ತರು ದತ್ತ ಬೆಂಬಲಿಗರು ದೇವೇಗೌಡ ಅವರ ಮನೆ ಮುಂದೆ ಧರಣಿ ನಡೆಸಿದ್ದಾರೆ. ಖುದ್ದು ದತ್ತ ಅವರು ಮಾಜಿ ಪ್ರಧಾನಿ ದೇವೇಗೌಡ ಅವರ ನಿವಾಸಕ್ಕೆ ತೆರಳಿ ತನ್ನ ಸೋಲಿಗೆ ಕಾರಣವಾದ ಧರ್ಮೇಗೌಡ ಅವರನ್ನು ಎಮ್ಮೆಲ್ಸಿ ಮಾಡಲು ಮುಂದಾಗಿರುವುದರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಪಕ್ಷ ತೊರೆಯುವ ಸೂಚನೆಯನ್ನೂ ನೀಡಿದ್ದಾರೆ ಎನ್ನಲಾಗಿತ್ತು, ಸದ್ಯ ಧರ್ಮೇಗೌಡ ಎಮ್ಮೆಲ್ಸಿಯಾಗಿದ್ದು, ದತ್ತ ಅವರ ಹಾದಿ ಯಾವುದು ಎಂಬ ಬಗ್ಗೆ ಪಕ್ಷ ಹಾಗೂ ಜಿಲ್ಲೆಯ ಜನರಲ್ಲಿ ಕುತೂಹಲ ಮೂಡಿಸಿದೆ.