ಆ್ಯಂಟಿಬಯಾಟಿಕ್ಗಳ ಬಗ್ಗೆ ನಿಮಗೆಷ್ಟು ಗೊತ್ತು...?
ಆ್ಯಂಟಿಬಯಾಟಿಕ್ ಅಥವಾ ಪ್ರತಿಜೀವಕ ಔಷಧಿಯ ಹೆಸರನ್ನು ಕೇಳದವರು ವಿರಳ. ಹೆಚ್ಚಿನವರಂತೂ ಆ್ಯಂಟಿಬಯಾಟಿಕ್ ಅಂದರೆ ಸರ್ವರೋಗ ಸಂಜೀವಿನಿ ಎಂದೇ ತಿಳಿದಿದ್ದಾರೆ. ಹೀಗಾಗಿ ಅದು ಜ್ವರವಿರಲಿ,ಶೀತವಿರಲಿ,ಹೊಟ್ಟೆನೋವಿರಲಿ....ಹೀಗೆ ಏನೇ ಆದರೂ ಆ್ಯಂಟಿಬಯಾಟಿಕ್ ಮಾತ್ರೆಗಳನ್ನು ನುಂಗುತ್ತಿರುತ್ತಾರೆ. ಎಷ್ಟೋಬಾರಿ ಅಸ್ವಸ್ಥಗೊಂಡಾಗ ನಾವು ವೈದ್ಯರ ಬಳಿಗೆ ಹೋಗುವುದೇ ಇಲ್ಲ,ಅವರು ಹಿಂದೆ ಯಾವಾಗಲೋ ಸಾಮಾನ್ಯ ಸೋಂಕುಗಳಿಗಾಗಿ ಬರೆದುಕೊಟ್ಟಿದ್ದ ಆ್ಯಂಟಿಬಯಾಟಿಕ್ ಮಾತ್ರೆಗಳನ್ನೇ ತೆಗೆದುಕೊಳ್ಳುತ್ತೇವೆ. ಆದರೆ ಆ್ಯಂಟಿಬಯಾಟಿಕ್ಗಳನ್ನು ಬ್ಯಾಕ್ಟೀರಿಯಾಗಳಿಂದ ಉಂಟಾಗುವ ಸೋಂಕಿಗೆ ಚಿಕಿತ್ಸೆ ನೀಡಲಷ್ಟೇ ಬಳಸುವುದರಿಂದ ಹೀಗೆ ಬೇಕಾಬಿಟ್ಟಿ ಮಾತ್ರೆಗಳನ್ನು ನುಂಗುವುದು ಸರಿಯಲ್ಲ. ನಿಮ್ಮ ವೈದ್ಯರು ಆ್ಯಂಟಿಬಯಾಟಿಕ್ ಬರೆದುಕೊಟ್ಟಿರುವುದಕ್ಕೆ ಅದರದೇ ಆದ ಕಾರಣಗಳಿರುತ್ತವೆ.
ಆ್ಯಂಟಿಬಯಾಟಿಕ್ಗಳ ಬಗ್ಗೆ ಪ್ರತಿಯೊಬ್ಬರಿಗೂ ತಿಳಿದಿರಲೇಬೇಕಾದ ಅಗತ್ಯ ಮಾಹಿತಿಗಳಿಲ್ಲಿವೆ..........
► ಆ್ಯಂಟಿಬಯಾಟಿಕ್ ಎಂದರೇನು?
ಆ್ಯಂಟಿಬಯಾಟಿಕ್ ಅಥವಾ ಪ್ರತಿಜೀವಕವು ಅದರ ಹೆಸರೇ ಸೂಚಿಸುವಂತೆ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ತಡೆಯಲು ಅಥವಾ ಅವುಗಳನ್ನು ಕೊಲ್ಲಲು ಬಳಕೆಯಾಗುತ್ತದೆ. ವಿವಿಧ ಆ್ಯಂಟಿಬಯಾಟಿಕ್ಗಳು ವಿವಿಧ ರೀತಿಗಳಲ್ಲಿ ಕಾರ್ಯಾಚರಿಸುತ್ತವೆ, ಆದರೆ ಹೆಚ್ಚಿನವು ಬ್ಯಾಕ್ಟೀರಿಯಾ ಕೋಶಗಳ ಭಿತ್ತಿಗಳನ್ನು ದುರ್ಬಲಗೊಳಿಸಿ ಅವುಗಳನ್ನು ಛೇದಿಸುವ ಮೂಲಕ ಕೊಂದು ಹಾಕುತ್ತವೆ ಮತ್ತು ತನ್ಮೂಲಕ ಅವುಗಳ ಬೆಳವಣಿಗೆ ಮತ್ತು ಹರಡುವಿಕೆಯನ್ನು ತಡೆಯುತ್ತವೆ.
► ಆ್ಯಂಟಿಬಯಾಟಿಕ್ಗಳಲ್ಲಿ ಎಷ್ಟು ವಿಧಗಳಿವೆ?
ಅವುಗಳನ್ನು ಬ್ರಾಡ್ ಸ್ಪೆಕ್ಟ್ರಂ ಆ್ಯಂಟಿಬಯಾಟಿಕ್ ಮತ್ತು ನ್ಯಾರೊ ಸ್ಪೆಕ್ಟ್ರಂ ಆ್ಯಂಟಿಬಯಾಟಿಕ್ಗಳೆಂದು ವರ್ಗೀಕರಿಸಲಾಗಿದೆ. ಮೊದಲನೆಯದು ವಿವಿಧ ಬ್ಯಾಕ್ಟೀರಿಯಾಗಳ ವಿರುದ್ಧ ಕಾರ್ಯಾಚರಿಸುತ್ತಿದ್ದು, ಕಿವಿ ಸೋಂಕು,ಸೈನಸ್ ಸೋಂಕು ಮತ್ತು ಗಂಟಲಿನ ಸೋಂಕಿನಂತಹ ವಿವಿಧ ಸೋಂಕುಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಎರಡನೆಯದು ನಿರ್ದಿಷ್ಟ ವಿಧಗಳ ಬ್ಯಾಕ್ಟೀರಿಯಾಗಳ ವಿರುದ್ಧ ಕಾರ್ಯಾಚರಿಸುತ್ತದೆ ಮತ್ತು ಇದನ್ನು ಗಂಟಲಿನ ಸೋಂಕಿನಂತಹ ಯಾವುದೇ ಒಂದು ಸೋಂಕಿನ ಚಿಕಿತ್ಸೆಗೆ ಮಾತ್ರ ಬಳಸಲಾಗುತ್ತದೆ.
► ಆ್ಯಂಟಿಬಯಾಟಿಕ್ನಿಂದ ಯಾವುದಕ್ಕೆ ಚಿಕಿತ್ಸೆ ನೀಡಬಹುದು?
ಬ್ಯಾಕ್ಟೀರಿಯಾಗಳಿಂದ ಉಂಟಾಗುವ ಸೋಂಕುಗಳಿಗೆ ಚಿಕಿತ್ಸೆ ನೀಡಲು ಆ್ಯಂಟಿಬಯಾಟಿಕ್ಗಳನ್ನು ಬಳಸಲಾಗುತ್ತದೆ. ಹಲ್ಲಿನ ಸೋಂಕು,ಸೈನಸ್ ಸೋಂಕು,ಕಿವಿ,ಚರ್ಮ,ಮೂತ್ರನಾಳ ಮತ್ತು ಮೂತ್ರಪಿಂಡಗಳ ಸೋಂಕು,ಬ್ಯಾಕ್ಟೀರಿಯಲ್ ನ್ಯುಮೋನಿಯಾ ಮತ್ತು ನಾಯಿಕೆಮ್ಮು ಇವು ಬ್ಯಾಕ್ಟೀರಿಯಾಗಳಿಂದ ಉಂಟಾಗುವ ಸಾಮಾನ್ಯ ಸೋಂಕುಗಳಾಗಿವೆ. ಆ್ಯಂಟಿಬಯಾಟಿಕ್ಗಳು ಸಾಮಾನ್ಯ ಜ್ವರ,ನೆಗಡಿ ಮತ್ತು ಜ್ವರದ ಕೆಮ್ಮು,ಬ್ರಾಂಕೈಟಿಸ್,ಗಂಟಲು ಕೆರೆತ,ಕರುಳಿನ ಸೋಂಕಿನಂತಹ ವೈರಲ್ ಅಥವಾ ಫಂಗಲ್ ಸೋಂಕುಗಳ ವಿರುದ್ಧ ಕೆಲಸ ಮಾಡುವುದಿಲ್ಲ.
► ನೀವು ಏನನ್ನು ಮಾಡಬೇಕು?
ಪ್ರೊಬಯಾಟಿಕ್(ಅಥವಾ ಮೊಸರು)ಗಳನ್ನು ನಿಮ್ಮ ಊಟದಲ್ಲಿ ಸೇರಿಸಿಕೊಳ್ಳಿ. ವೈದ್ಯರು ಶಿಫಾರಸು ಮಾಡಿದಾಗ ಮಾತ್ರ ಆ್ಯಂಟಿಬಯಾಟಿಕ್ಗಳನ್ನು ತೆಗೆದುಕೊಳ್ಳಿ. ನೀವು ಬಳಸಿ ಉಳಿದ ಔಷಧಗಳಿದ್ದರೆ ಮೊದಲು ಅವುಗಳನ್ನು ಹೊರಗೆಸೆಯಿರಿ. ಲಘುವಾದ, ಸುಲಭವಾಗಿ ಪಚನವಾಗುವ ಆಹಾರಗಳ್ನು ಸೇವಿಸಿ. ಮಸಾಲೆ,ಎಣ್ಣೆ ಮತ್ತು ಉಪ್ಪಿನಂಶ ಹೆಚ್ಚಿರುವ ಆಹಾರಗಳಿಂದ ದೂರವಿರಿ. ಸಮೃದ್ಧ ನೀರನ್ನು ಕುಡಿಯುತ್ತಿರಿ. ವೈದ್ಯರು ಬರೆದುಕೊಟ್ಟಿರುವ ಆ್ಯಂಟಿಬಯಾಟಿಕ್ಗಳ ಕೋರ್ಸ್ನ್ನು ಪೂರ್ಣಗೊಳಿಸಿ ಮತ್ತು ನೀವು ಬೇರೆ ಯಾವುದೇ ಔಷಧಿಗಳನ್ನು ಸೇವಿಸುತ್ತಿದ್ದರೆ ವೈದ್ಯರಿಗೆ ತಿಳಿಸಿ. ನೀವು ತೆಗೆದುಕೊಳ್ಳುತ್ತಿರುವ ಆ್ಯಂಟಿಬಯಾಟಿಕ್ಗಳಿಂದ ಅಡ್ಡಪರಿಣಾಮಗಳು ಕಾಣಿಸಿಕೊಂಡರೆ ನಿಮ್ಮ ವೈದ್ಯರಿಗೆ ತಿಳಿಸಿ.
► ನೀವು ಏನನ್ನು ಮಾಡಬಾರದು?
ನಿಮಗೆ ನೀಡಿರುವ ಆ್ಯಂಟಿಬಯಾಟಿಕ್ಗಳನ್ನು ಇತರರೊಂದಿಗೆ ಹಂಚಿಕೊಳ್ಳಬೇಡಿ. ನಿಮ್ಮ ವೈದ್ಯರ ಬಳಿ ನೀವಾಗಿಯೇ ಆ್ಯಂಟಿಬಯಾಟಿಕ್ ಅನ್ನು ಕೇಳಬೇಡಿ. ವೈದ್ಯರು ಸೂಚಿಸುವವರೆಗೂ ಆ್ಯಂಟಿಬಯಾಟಿಕ್ಗಳ ಸೇವನೆಯನ್ನು ನಿಲ್ಲಿಸಬೇಡಿ. ವೈರಲ್ ಸೋಂಕುಗಳಿಗೆ ಆ್ಯಂಟಿಬಯಾಟಿಕ್ಗಳನ್ನು ತೆಗೆದುಕೊಳ್ಳಬೇಡಿ. ಭವಿಷ್ಯದ ಬಳಕೆಗಾಗಿ ಅವುಗಳನ್ನು ಉಳಿಸಿಕೊಳ್ಳಬೇಡಿ. ಆ್ಯಂಟಿಬಯಾಟಿಕ್ನ ನಿಗದಿತ ಡೋಸ್ನ ಸೇವನೆಯನ್ನು ತಪ್ಪಿಸಬೇಡಿ. ನೀವು ಚೇತರಿಸಿಕೊಂಡಿದ್ದೀರಿ ಎಂದ ಮಾತ್ರಕ್ಕೆ ಅದರ ಸೇವನೆಯನ್ನು ನಿಲ್ಲಿಸಬೇಡಿ. ಹಣ್ಣಿನ ರಸ,ಚಹಾ,ಕಾಫಿ ಅಥವಾ ಇತರ ಯಾವುದೇ ಪಾನೀಯದ ಜೊತೆ ಆ್ಯಂಟಿಬಯಾಟಿಕ್ ಸೇವನೆ ಬೇಡ. ಮಹಿಳೆಯರು ಜನನ ನಿಯಂತ್ರಣ ಮಾತ್ರೆಗಳ ಜೊತೆಗೆ ಆ್ಯಂಟಿಬಯಾಟಿಕ್ಗಳನ್ನು ಸೇವಿಸಕೂಡದು.