ಘರ್‌ವಾಪ್ಸಿಯನ್ನು ಸಮರ್ಥಿಸಲು ಗೋಳ್ವಲ್ಕರ್, ನೆಹರೂರವರ ಮಾತುಗಳನ್ನು ತಪ್ಪಾಗಿ ಅರ್ಥೈಸಿದ್ದು ಹೇಗೆ?
ಭಾಗ-1
‘ಮುಸ್ಲಿಮರ ತುಷ್ಟೀಕರಣ’ ಮತ್ತು ಘರ್‌ವಾಪ್ಸಿ ಇತ್ಯಾದಿಯಾಗಿ ಇಂದು ಸಿದ್ಧಾಂತ ಮತ್ತು ಆಚರಣೆಗಳಾಗಿ ಅರಳಿರುವ ಹೂವುಗಳ ಬೀಜಗಳು ‘ಬಂಚ್ ಆಫ್ ಥಾಟ್ಸ್’ನಲ್ಲಿವೆ. ಹಿಂದುತ್ವವನ್ನು ಪ್ರತಿಪಾದಿಸುವ ಪ್ರಯತ್ನದಲ್ಲಿ ಅದು ಮಹಾತ್ಮಾಗಾಂಧಿ ಮತ್ತು ಜವಾಹರಲಾಲ್ ನೆಹರೂ ಎಂದೂ ನೀಡದ ಹೇಳಿಕೆಗಳನ್ನು ನೀಡಿದ್ದಾರೆಂದು ಅವರನ್ನು ಆರೋಪಿಸುತ್ತದೆ
ತನ್ನ ಅನುಯಾಯಿಗಳಿಗೆ ಗುರೂಜಿ ಎಂದು ಜನಪ್ರಿಯರಾಗಿರುವ ಮಾಧವ್ ಸದಾಶಿವ್ ಗೋಳ್ವಲ್ಕರ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಎರಡನೆಯ ಸರಸಂಘ ಚಾಲಕರಾಗಿದ್ದರು. 1940ರ ಜುಲೈಯಿಂದ ಅವರು ನಿಧನರಾದ 1973ರ ಜೂನ್ 5ರ ವರೆಗಿನ ತನ್ನ ಅವಧಿಯಲ್ಲಿ ಅವರು ಹೇರಳವಾಗಿ ಮಾತಾಡಿದ್ದರು ಹಾಗೂ ಬರೆದಿದ್ದರು. ಅವರ ವಿಚಾರಗಳನ್ನು ‘ಬಂಚ್ ಆಫ್ ಥಾಟ್ಸ್’ ಎಂಬ ಒಂದು ಪುಸ್ತಕದಲ್ಲಿ ದಾಖಲಿಸಲಾಗಿದೆ. ಈ ಪುಸ್ತಕವನ್ನು ಆರೆಸ್ಸೆಸ್‌ನ ಸೈದ್ಧಾಂತಿಕ ಗ್ರಂಥವೆಂದು ಪರಿಗಣಿಸಲಾಗಿದೆ.
‘ಮುಸ್ಲಿಮರ ತುಷ್ಟೀಕರಣ’ ಮತ್ತು ಘರ್‌ವಾಪ್ಸಿ ಇತ್ಯಾದಿಯಾಗಿ ಇಂದು ಸಿದ್ಧಾಂತ ಮತ್ತು ಆಚರಣೆಗಳಾಗಿ ಅರಳಿರುವ ಹೂವುಗಳ ಬೀಜಗಳು ‘ಬಂಚ್ ಆಫ್ ಥಾಟ್ಸ್’ ನಲ್ಲಿವೆ. ಹಿಂದುತ್ವವನ್ನು ಪ್ರತಿಪಾದಿಸುವ ಪ್ರಯತ್ನದಲ್ಲಿ ಅದು ಮಹಾತ್ಮಾಗಾಂಧಿ ಮತ್ತು ಜವಾಹರಲಾಲ್ ನೆಹರೂ ಎಂದೂ ನೀಡದ ಹೇಳಿಕೆಗಳನ್ನು ನೀಡಿದ್ದಾರೆಂದು ಅವರನ್ನು ಆರೋಪಿಸುತ್ತದೆ.
‘ದಿ ನೇಶನ್ ಆ್ಯಂಡ್ ಇಟ್ಸ್ ಪ್ರಾಬ್ಲಮ್’ ಎಂಬ ಶೀರ್ಷಿಕೆ ಇರುವ ಬಂಚ್ ಆಫ್ ಥಾಟ್ಸ್‌ನ ಎರಡನೆಯ ಭಾಗದಲ್ಲಿ, ಗೋಳ್ವಲ್ಕರ್ ‘‘ರಾಷ್ಟ್ರೀಯತೆಯ ನಿಜವಾದ ಪರಿಕಲ್ಪನೆ’’ಯನ್ನು ಚರ್ಚಿಸುತ್ತಾರೆ. ಒಂದು ಜನಸಮುದಾಯ ವನ್ನು ಒಂದು ರಾಷ್ಟ್ರವೆಂದು ಕರೆಯಬೇಕಾದರೆ ಮೂರು ಅಂಶಗಳು ಇರಬೇಕು ಎನ್ನುತ್ತಾರೆ. ಜನರು, ‘‘ಸಾಧ್ಯವಾದಷ್ಟು ಮಟ್ಟಿಗೆ, ನೈಸರ್ಗಿಕ ಗಡಿಗಳಿಂದ ಸೀಮಿತವಾದ ಪರಸ್ಪರ ಒಂದಕ್ಕೊಂದು ತಾಗಿಕೊಂಡಿರುವ ಭೂಪ್ರದೇಶದಲ್ಲಿ’’ ವಾಸಿಸುತ್ತಿರಬೇಕು. ಅವರು ಆ ಭೂಪ್ರದೇಶಕ್ಕೆ ‘‘ತಮ್ಮ ಮಾತೃಭೂಮಿಯಾಗಿ ಪ್ರೀತಿ ಮತ್ತು ಪೂಜ್ಯ ಭಾವವನ್ನು ಬೆಳೆಸಿಕೊಂಡಿರಬೇಕು’’ ಮತ್ತು ‘‘ಅವರು ಆ ಮಣ್ಣಿನ ಮಕ್ಕಳೆಂದು ಅನ್ನಿಸಬೇಕು’’. ಆದರೆ, ‘‘ಜೀವನ ಆದರ್ಶಗಳ, ಸಮುದಾಯ, ಸಂಸ್ಕೃತಿ, ಅನಿಸಿಕೆಗಳು, ಭಾವನೆಗಳು, ನಂಬಿಕೆ ಮತ್ತು ಪರಂಪರೆಗಳಿಂದ ಅವರು ಪ್ರಭಾವಿತರಾಗದೆ ಇದ್ದಲ್ಲಿ ಅವರಿಗೆ ಇದು ನನ್ನ ಮಾತೃಭೂಮಿ ಎಂಬ ಭಾವನೆ ಬರುವುದಿಲ್ಲ’’ ಎನ್ನುತ್ತಾರೆ ಗೋಳ್ವಲ್ಕರ್.
‘‘ಭೂಪ್ರದೇಶವೊಂದರ ನಿವಾಸಿಗಳನ್ನು ಆ ಭೂಪ್ರದೇಶದ ಮಕ್ಕಳಾಗಿ, ಮಾತೃಭೂಮಿಯಾಗಿ ರೂಪಾಂತರಿಸುವವುಗಳು ಈ ಮೂರು ಅಂಶಗಳು. ಹಾಗಾಗಿ ಹಿಂದೂ ಸಮಾಜ ಮಾತ್ರ ಭಾರತದ ಶಿಶುವಾಗಲು ಅರ್ಹ. ಇದು ಯಾಕೆಂದರೆ ಈ ಭೂಮಿಗೆ ಧರ್ಮ ಮತ್ತು ಸಂಸ್ಕೃತಿಯನ್ನು ನೀಡಿದವರು ಹಿಂದೂಗಳ ಪೂರ್ವಿಕರು. ಅವರ ಪರಿಶುದ್ಧತೆ ಮತ್ತು ಔನ್ನತ್ಯ, ‘ವಿದೇಶಿಯರ 1,000 ವರ್ಷಗಳ ವಿನಾಶಕಾರಿ ಪ್ರಭಾವವನ್ನು’ ಮೀರಿ, ನಾಶವಾಗದೆ ಉಳಿದಿವೆ. ನಮಗೆ ನಮ್ಮದೇ ಆದ ಒಂದು ಮೈಬಣ್ಣವನ್ನು ನೀಡಿವೆ. ಈ ವಿಶಿಷ್ಟವಾದ ಮೈಬಣ್ಣ ಭಾರತವನ್ನು ‘ಹಿಂದೂ ರಾಷ್ಟ್ರ’ವೆಂದು ಘೋಷಿಸಲು ಕಾರಣವಾಗಿದೆ.’’
ಅವರು ಹೇಳುತ್ತಾರೆ, ‘‘ಈ ಭಾರತ ಭೂಮಿಯಲ್ಲಿ ವಾಸಿಸುತ್ತಿರುವ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರ ಪಾಡೇನು? ಅವರು ತಮ್ಮ ಧರ್ಮವನ್ನು ಬದಲಿಸಿದ್ದಾರೆಂಬ ಒಂದೇ ಕಾರಣಕ್ಕಾಗಿ ಅವರು ಹೇಗೆ ಪರಕೀಯರು (ಏಲಿಯನ್ಸ್) ಆಗಲು ಸಾಧ್ಯ? ಎಂದು ಕೆಲವರು ಕೇಳುತ್ತಾರೆ’’.
‘‘ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಭಾರತದ ಮಣ್ಣಿನ ಮಕ್ಕಳೆಂದು ಅವರಿಗೆ ನೆನಪಾದರೂ ಇದೆಯೇ?’’ ಎಂದು ಗೋಳ್ವಲ್ಕರ್ ಕೇಳುತ್ತಾರೆ. ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರಿಗೆ ಗೋಳ್ವಲ್ಕರ್ ಕೇಳುವ ಪ್ರಶ್ನೆಗಳಿವು: ‘‘ತಮ್ಮನ್ನು ಸಾಕಿ ಸಲಹಿದ ಈ ಭಾರತಕ್ಕೆ ಅವರು ಕೃತಜ್ಞರಾಗಿದ್ದಾರೆಯೇ? ತಾವು ಈ ದೇಶದ ಮತ್ತು ಅದರ ಪರಂಪರೆಯ ಮಕ್ಕಳೆಂಬ ಭಾವನೆ ಮತ್ತು ಈ ದೇಶಕ್ಕೆ ಸೇವೆ ಸಲ್ಲಿಸುವುದು ತಮಗೆ ದೊರೆತ ಶ್ರೇಷ್ಠವಾದ ಅವಕಾಶವೆಂಬ ಭಾವನೆ ಅವರಿಗೆ ಇದೆಯೇ? ಭಾರತಾಂಬೆಗೆ ಸೇವೆ ಸಲ್ಲಿಸುವುದು ಒಂದು ಕರ್ತವ್ಯವೆಂದು ಅವರಿಗೆ ಅನ್ನಿಸುತ್ತದೆಯೇ?’’.
ಈ ಎಲ್ಲಾ ಪ್ರಶ್ನೆಗಳಿಗೆ ಗೋಳ್ವಲ್ಕರ್‌ರವರ ಉತ್ತರ, ‘‘ಇಲ್ಲ’’. ಅವರ ಪ್ರಕಾರ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ತಮ್ಮ ಧರ್ಮವನ್ನು ಬದಲಿಸಿದಾಗ (ಮತಾಂತರಗೊಂಡಾಗ) ಅವರ ರಾಷ್ಟ್ರಪ್ರೇಮ ಮತ್ತು ನಿಷ್ಠೆ ಮಾಯವಾಯಿತು.
ಇಷ್ಟೇ ಅಲ್ಲದೆ ಜನರ ಧರ್ಮವು ಅವರ ಮಾನಸಿಕ ಸ್ಥಿತಿಯನ್ನು ನಿರ್ಧರಿಸುತ್ತದೆ ಎನ್ನುತ್ತಾರೆ ಗೋಳ್ವಲ್ಕರ್. ‘‘ರಾಷ್ಟ್ರೀಯತೆಗೆ ಸಾರ್ವಕಾಲಿಕವಾಗಿ ಅಂಗೀಕೃತವಾದ ಮಾನದಂಡವೆಂದರೆ ಮಾನಸಿಕ ನಿಷ್ಠೆ’’ ಎಂದು ಘೋಷಿಸುತ್ತಾರೆ ಗೋಳ್ವಲ್ಕರ್.
ತನ್ನ ವಾದವನ್ನು ರುಜುವಾತುಪಡಿಸಲು ಅವರು ತನ್ನ ಗುಹೆಗೆ ನರಿಮರಿಯೊಂದನ್ನು ತಂದ ಒಂದು ಸಿಂಹಿಣಿಯ ಕತೆಯನ್ನು ಹೇಳುತ್ತಾರೆ. ಸಿಂಹಿಣಿಯು ನರಿಯ ಒಂದು ಮರಿಯನ್ನು ತಂದು ತನ್ನ ಮರಿಗಳೊಂದಿಗೆ ಅದಕ್ಕೂ ಹಾಲುಣಿಸಿತು. ಒಂದು ದಿನ ನರಿ ಮತ್ತು ಸಿಂಹದ ಮರಿಗಳು ಕಾಡಿನಲ್ಲಿ ತುಂಬ ಒಳಕ್ಕೆ ಹೋದಾಗ ಅವುಗಳಿಗೊಂದು ಆನೆ ಎದುರಾಯಿತು. ಸಿಂಹದ ನರಿಗಳು ಆನೆಯ ಮೇಲೆ ದಾಳಿ ನಡೆಸಿದವು. ಆದರೆ ನರಿಯು ಘಟನೆಯ ಬಗ್ಗೆ ತಿಳಿಸಲು ಸಿಂಹಿಣಿಯ ಬಳಿಗೆ ಓಡಿ ಬಂತು. ಆಗ ಸಿಂಹಿಣಿ ಹೇಳಿತು, ‘‘ನಿಜ. ನೀನು ಇಲ್ಲಿ ನನ್ನ ಹಾಲು ಕುಡಿದು ಬೆಳೆದಿರುವೆ. ಆದರೆ ನೀನು ನಿನ್ನ ಸಹಜ ಸ್ವಭಾವವನ್ನು ಬಿಡಲಾರೆ’’. ಈ ಪ್ರಾಣಿ ಕತೆಯ ಆಧಾರದಲ್ಲಿ ಗೋಳ್ವಲ್ಕರ್ ಹೇಳುತ್ತಾರೆ, ‘‘ರಾಷ್ಟ್ರಗಳ ವಿಷಯದಲ್ಲೂ ಇದೇ ಕತೆ’’.
ಘರ್ ವಾಪ್ಸಿಯ ಮೂಲ
ಆದರೆ ಕಾಡಿನಲ್ಲಿರುವಂತೆ, ಒಂದು ರಾಷ್ಟ್ರದಲ್ಲಿ ನರಿಗಳಿರಲು ಸಾಧ್ಯವಿಲ್ಲ. ನರಿಗಳೆಂದರೆ ಇಲ್ಲಿ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು. ಗೋಳ್ವಲ್ಕರ್ ಪ್ರಕಾರ ಈ ನರಿಗಳನ್ನು ಸಿಂಹಗಳಾಗಿ ಮಾಡಬೇಕು. ಇದನ್ನು ಸರಳವಾಗಿ ಹೇಳುವುದಾದರೆ ಧಾರ್ಮಿಕ ಅಲ್ಪಸಂಖ್ಯಾತರು ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಬೇಕು ಅಥವಾ ಅವರಲ್ಲಿರುವ ‘ಮುಸ್ಲಿಮ್‌ತನ’ ಮತ್ತು ‘ಕ್ರಿಶ್ಚಿಯನ್‌ತನ’ವನ್ನು ಅವರು ತಮ್ಮಿಂದ ಹೊರತಳ್ಳಬೇಕು. ಬಂಚ್ ಆಫ್ ಥಾಟ್ಸ್‌ನಲ್ಲಿ ಗೋಳ್ವಲ್ಕರ್ ಹೇಳುವ ಪ್ರಕಾರ, ‘‘ಭಾರತದಲ್ಲಿರುವ ಬಹುಪಾಲು ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಹೆದರಿಕೆಯಿಂದಾಗಿ ಮತಾಂತರಗೊಂಡ ಹಿಂದೂಗಳು, ಅಧಿಕಾರ ಅಥವಾ ದುಡ್ಡಿಗಾಗಿ ಮತಾಂತರ ಹೊಂದಿದವರು ಅಥವಾ ಮೋಸ ಹೋಗಿ ಮತಾಂತರವಾದವರು. ಇವರಲ್ಲಿ ಮೋಸ ಹೋದವರು ಅಥವಾ ಫೂಲ್ ಆದವರು ಕೆರೆಯೊಂದರಿಂದ ನೀರು ತಂದರು. ಆ ನೀರಿನಲ್ಲಿ ಒಂದು ತುಂಡು ಗೋಮಾಂಸ ಅಥವಾ ಒಂದು ತುಂಡು ಬ್ರೆಡ್ ಎಸೆಯಲಾಗಿತ್ತು. ಮರುದಿನ ಒಬ್ಬ ವೌಲ್ವಿ ಅಥವಾ ಪಾದ್ರಿ ಅವರಿಗೆ ‘‘ನೀವು ಮೈಲಿಗೆಯ/ಮಲಿನಗೊಂಡ ನೀರು ಕುಡಿದಿದ್ದರಿಂದ ನಿಮ್ಮ ಹಿಂದೂ ಧರ್ಮವನ್ನು ಕಳೆದುಕೊಂಡಿರಿ’’ ಎನ್ನುತ್ತಾನೆ. ಇಂತಹ ಮೋಸದಿಂದ ಉತ್ತರ ಮತ್ತು ಪಶ್ಚಿಮ ಕರಾವಳಿಯಲ್ಲಿ ಇಡೀ ಹಳ್ಳಿಗಳನ್ನೇ ಮತಾಂತರಿಸಲಾಯಿತು ’’ಎನ್ನುತ್ತಾರೆ ಗೋಳ್ವಲ್ಕರ್. ಆದರೆ ಇದಕ್ಕೆ ಅವರು ಯಾವುದೇ ಪುರಾವೆ ನೀಡುವುದಿಲ್ಲ.
ಕೃಪೆ: scroll.in