varthabharthi


ವಾರದ ವ್ಯಕ್ತಿ

ವಾರದ ವ್ಯಕ್ತಿ

ಮಹಿಳೆ, ರಾಜಕಾರಣ ಮತ್ತು ಜಯಮಾಲಾ

ವಾರ್ತಾ ಭಾರತಿ : 10 Jun, 2018
ಬಸು ಮೇಗಲಕೇರಿ

ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದ 25 ಸಚಿವರ ಪ್ರಮಾಣವಚನ ಸಮಾರಂಭದಲ್ಲಿ ಕಟ್ಟ ಕಡೆಯ ವ್ಯಕ್ತಿಯಾಗಿ ಪ್ರಮಾಣವಚನ ಸ್ವೀಕರಿಸಿದವರು ಚಿತ್ರನಟಿ, ವಿಧಾನಪರಿಷತ್ ಸದಸ್ಯೆ ಜಯಮಾಲಾ. 27 ಜನರ ಸಚಿವ ಸಂಪುಟದಲ್ಲಿ ಜಯಮಾಲಾ ಏಕೈಕ ಮಹಿಳೆ. ಮಹಿಳೆಯಾದರೂ, ಒಬ್ಬರೇ ಆಗಿದ್ದರೂ, ಕೊನೆಯವರಾಗಿ ಪ್ರಮಾಣವಚನ ಸ್ವೀಕರಿಸಿದರು. ಸಾಲದೆಂದು, ‘‘ಮಹಿಳಾ ಪ್ರಾತಿನಿಧ್ಯ ಎಂಬ ಕಾರಣಕ್ಕೆ ಅವರಿಗೆ ಮಂತ್ರಿ ಸ್ಥಾನ ನೀಡಿದ್ದಲ್ಲ, ಬಿಲ್ಲವ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಬೇಕು ಎಂಬ ಆಶಯದಿಂದ’’ ಎಂಬ ಕಾಂಗ್ರೆಸ್ ಪಕ್ಷದ ಸಮಜಾಯಿಷಿ ಬೇರೆ.

ಜೊತೆಗೆ ಪ್ರಮಾಣವಚನ ಸಮಾರಂಭ ನಡೆದ ರಾಜಭವನದ ತುಂಬ ಪುರುಷರದೇ ಕಾರುಬಾರು. ಸಡಗರ, ಸಂಭ್ರಮ, ಕೂಗಾಟ, ಓಡಾಟ, ನೂಕಾಟಗಳಲ್ಲೂ ಅವರೇ. ಹಿರಿಯರಾದ ದೇವೇಗೌಡರ ಪತ್ನಿ ಚೆನ್ನಮ್ಮ ನಡೆದುಕೊಂಡೇ ಬಂದರು. ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಾ.ರಾ.ಮಹೇಶ್‌ರ ಮಡದಿ-ಮಕ್ಕಳು ಹೊರಗೆ ನಿಂತೇ ಕಾರ್ಯಕ್ರಮ ವೀಕ್ಷಿಸಿದರು. ಕಾರ್ಯಕ್ರಮ ನಿರೂಪಣೆ ಮಾಡಿದ ಸರಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾರ ಕನ್ನಡ ಕುರಿತು ಲೇವಡಿ ಮಾಡಿದರು. ಸಾಮಾಜಿಕ ಜಾಲತಾಣಗಳಲ್ಲೂ ಮತ್ತದೇ ಹೀಗಳಿಕೆ ಮುಂದುವರಿಸಿದರು.

ಮೇಲಿನ ದೃಶ್ಯಗಳು ಶಕ್ತಿರಾಜಕಾರಣದ ಸಂಸ್ಕೃತಿಯನ್ನು ಹಾಗೂ ರಾಜಕಾರಣದಿಂದ ಮಹಿಳೆಯರನ್ನು ಹೊರಗಿಟ್ಟಿರುವುದನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುವಂತಿವೆ. ಆಶ್ಚರ್ಯವೆಂದರೆ, ಈ ಸಮ್ಮಿಶ್ರ ಸರಕಾರ ರಚನೆಯ ಹಿಂದೆ ಮೂವರು ಮಹಿಳೆಯರ ಬಹುಮುಖ್ಯ ಪಾತ್ರವಿದೆ. ಮೇ 15ರಂದು ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದಂತೆ, ಅತಂತ್ರ ವಿಧಾನಸಭೆಯ ಸುಳಿವು ಸಿಗುತ್ತಿದ್ದಂತೆ ಬಿಎಸ್ಪಿಯ ಮಾಯಾವತಿ, ಕಾಂಗ್ರೆಸ್‌ನ ಸೋನಿಯಾ, ತೃಣಮೂಲ ಕಾಂಗ್ರೆಸ್‌ನ ಮಮತಾ ಬ್ಯಾನರ್ಜಿ ಎಚ್ಚೆತ್ತರು. ಒಂದಾಗಿ ಚರ್ಚಿಸಿದರು. ಆ ತಕ್ಷಣವೇ ಸಮ್ಮಿಶ್ರ ಸರಕಾರ ರಚನೆ ಕುರಿತು ದೇವೇಗೌಡರೊಂದಿಗೆ ಮಾತಾಡಿ, ಬಿಜೆಪಿ ಕೆಮ್ಮಲು ಕೂಡ ಸಮಯ ಕೊಡದೆ ಸರಕಾರ ರಚನೆಗೆ ಮುಂದಾದರು. ಹೀಗೆ ಕ್ಷಿಪ್ರ ಕಾರ್ಯಾಚರಣೆಗಿಳಿದದ್ದು ಮತ್ತು ಸರಕಾರ ರಚನೆಯ ಪ್ರತಿಹಂತದಲ್ಲೂ ಭಾಗಿಯಾಗಿದ್ದು ಮಹಿಳೆಯರು. ಈ ಮಹಿಳೆಯರು ಮನಸ್ಸು ಮಾಡದಿದ್ದರೆ ಈ ಸಮ್ಮಿಶ್ರ ಸರಕಾರವೇ ರಚನೆಯಾಗುತ್ತಿರಲಿಲ್ಲ. ಆದರೂ, ಆ ಸಮ್ಮಿಶ್ರ ಸರಕಾರದಲ್ಲಿ ಮಹಿಳೆಗೇ ಸೂಕ್ತ ಸ್ಥಾನಮಾನವಿಲ್ಲ. ದೇಶದ ಒಟ್ಟು ಜನಸಂಖ್ಯೆಯಲ್ಲಿ ಮಹಿಳೆಯರು ಅರ್ಧದಷ್ಟಿದ್ದಾರೆ.

ಸಂವಿಧಾನದ 325, 326 ವಿಧಿಗಳು ಮಹಿಳೆ-ಪುರುಷರಿಗೆ ಸಮಾನ ರಾಜಕೀಯ ಅಧಿಕಾರ ನೀಡಬೇಕೆಂದು ಒತ್ತಿ ಹೇಳುತ್ತವೆ. ವಸ್ತುಸ್ಥಿತಿ ಮತ್ತು ಕಾಯ್ದೆ ಕಾನೂನು- ಎರಡೂ ಮಹಿಳೆಯರ ಪರವಾಗಿದ್ದರೂ; ಗೆಲುವನ್ನೇ ಮಾನದಂಡ ಮಾಡಿಕೊಂಡ ಎಲ್ಲ ರಾಜಕೀಯ ಪಕ್ಷಗಳು; ಸಾರ್ವಜನಿಕ ಬದುಕಿನ ಬಹುಮುಖ್ಯವಾದ ರಾಜಕೀಯ ಕ್ಷೇತ್ರದಿಂದ ಮಹಿಳೆಯರನ್ನು ವ್ಯವಸ್ಥಿತವಾಗಿ ಹೊರಗಿಟ್ಟಿವೆ. 2008ರಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಂದ 31 ಮಹಿಳೆಯರಿಗೆ ಟಿಕೆಟ್ ನೀಡಲಾಗಿತ್ತು. ಗೆದ್ದವರು 5 ಮಂದಿ. 5 ವರ್ಷಗಳ ಕಾಲ ಬಿಜೆಪಿ ಆಡಳಿತದಲ್ಲಿ ಮಂತ್ರಿಯಾಗಿ ಮೆರೆದವರು ಶೋಭಾ ಕರಂದ್ಲಾಜೆಯೊಬ್ಬರೇ. 2013ರಲ್ಲಿ ಮೂರೂ ಪಕ್ಷಗಳಿಂದ 27 ಜನ ಮಹಿಳೆಯರಿಗೆ ಟಿಕೆಟ್ ನೀಡಲಾಗಿದ್ದು, 6 ಮಹಿಳೆಯರು ಗೆದ್ದಿದ್ದರೂ, 5 ವರ್ಷಗಳ ಕಾಲ ಉಮಾಶ್ರೀ ಒಬ್ಬರೇ ಮಂತ್ರಿಯಾದರು. ಹಾಗೆಯೇ ಈಗ, 2018ರಲ್ಲಿ, 7 ಜನ ಮಹಿಳೆಯರು ಗೆದ್ದಿದ್ದಾರೆ. ಆದರೆ ಅವರಾರಿಗೂ ಮಂತ್ರಿಯಾಗುವ ಭಾಗ್ಯ ಸಿಗಲಿಲ್ಲ. ವಿಧಾನ ಪರಿಷತ್ ಸದಸ್ಯೆಯಾದ ಚಿತ್ರನಟಿ ಡಾ.ಜಯಮಾಲಾ ಅವರೊಬ್ಬರಿಗೇ ಮಂತ್ರಿಯಾಗುವ ಅವಕಾಶ ಒದಗಿ ಬಂದಿದೆ. ಅರ್ಹತೆ, ಅನುಭವಗಳ ಅವಲೋಕನದಡಿ ಅದು ಕೂಡ ವಿವಾದಕ್ಕೊಳಗಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪಣಂಬೂರಿನಲ್ಲಿ 1959ರಲ್ಲಿ ಜನಿಸಿದ ಜಯಮಾಲಾ, ಬಿಲ್ಲವ (ಈಡಿಗ) ಸಮುದಾಯಕ್ಕೆ ಸೇರಿದವರು. ಮನೆ ತುಂಬಾ ಮಕ್ಕಳಿದ್ದ ದೊಡ್ಡ ಕುಟುಂಬ, ಹಡುಗುದಾಣದ ನಿರ್ಮಾಣಕ್ಕಾಗಿ ಮನೆ ಕಳೆದುಕೊಂಡು, 1964ರಲ್ಲಿ ಚಿಕ್ಕಮಗಳೂರಿಗೆ ವಲಸೆ ಬರಬೇಕಾಯಿತು. ಸ್ಥಿತಿವಂತರಲ್ಲದ ಕಾರಣ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಆಗ ಜಯಮಾಲಾರಿಗೆ ಕೇವಲ ಮೂರೂವರೆ ವರ್ಷ. ಗೌರಿ ಕಾಲುವೆ ಬಡಾವಣೆಯ ಮನೆಯಲ್ಲಿರುವಾಗಲೇ, ಬಹದ್ದೂರ್ ಶಾಸ್ತ್ರಿ ಸರಕಾರಿ ಪ್ರಾಥಮಿಕ ಶಾಲೆಗೆ ಸೇರಿದರು. 13ನೇ ವಯಸ್ಸಿನಲ್ಲಿಯೇ ಬಣ್ಣದ ಬದುಕಿಗೆ ಪ್ರವೇಶ ಪಡೆದ ಜಯಮಾಲಾ, ಗೀತಪ್ರಿಯರ ‘ಕಾಸ್‌ದಾಯೆ ಕಂಡನಿ’ ಎಂಬ ತುಳು ಚಿತ್ರದಲ್ಲಿ ನಟಿಸಿದರು. ಹತ್ತನೇ ತರಗತಿ ಪೂರ್ಣಗೊಳಿಸುವುದರೊಳಗೆ ನಾಲ್ಕು ತುಳು ಸಿನೆಮಾಗಳಲ್ಲಿ ನಟಿಸಿದ್ದರು. 1975ರಲ್ಲಿ, ಸಿದ್ದಲಿಂಗಯ್ಯನವರ ‘ಬೂತಯ್ಯನ ಮಗ ಅಯ್ಯು’ ಚಿತ್ರದ ಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡ ಜಯಮಾಲಾ ಅವರು, ‘‘ಆ ಸಿನೆಮಾದ ಶತದಿನೋತ್ಸವ ಸಮಾರಂಭಕ್ಕೆಂದು ಜೀವನದಲ್ಲಿ ಮೊದಲಬಾರಿಗೆ ಬೆಂಗಳೂರಿಗೆ ಹೋಗಿದ್ದೆ. ಆಗ ಪಾರ್ವತಮ್ಮ ಭೇಟಿಯಾದ್ದರಿಂದ ಡಾ. ರಾಜಕುಮಾರ್ ಜತೆ ‘ಪ್ರೇಮದ ಕಾಣಿಕೆ’ ಸಿನೆಮಾದಲ್ಲಿ ನಟಿಸಲು ಅವಕಾಶ ಮಾಡಿಕೊಟ್ಟರು. ಅದು ನನ್ನ ಜೀವನದ ಬಹುಮುಖ್ಯ ತಿರುವು. ಕನ್ನಡದಲ್ಲಿ ಆರು ಸಿನೆಮಾಗಳನ್ನು ಮಾಡಿದಾಗಲೂ ಚಿಕ್ಕಮಗಳೂರಿನಲ್ಲಿದ್ದೆವು.

ಸಿನೆಮಾಗಳ ಅವಕಾಶ ಹೆಚ್ಚಾದಾಗ ಓಡಾಡಲು ಕಷ್ಟವಾಗಿ ಬೆಂಗಳೂರಿಗೆ ಸ್ಥಳಾಂತರವಾಗಬೇಕಾಯಿತು’’ ಎಂದು ತಮ್ಮ ಚಿಕ್ಕಮಗಳೂರಿನ ನಂಟನ್ನು ನೆನಪು ಮಾಡಿಕೊಳ್ಳುತ್ತಾರೆ. ಕನ್ನಡ ನಾಡಿನ ಜನಪ್ರಿಯ ನಟರಾದ ರಾಜಕುಮಾರ್ ಅವರ ತ್ರಿಮೂರ್ತಿ, ದಾರಿ ತಪ್ಪಿದ ಮಗ, ಪ್ರೇಮದ ಕಾಣಿಕೆ, ಗಿರಿಕನ್ಯೆ, ಬಡವರ ಬಂಧು, ಬಬ್ರುವಾಹನ, ಶಂಕರ್‌ಗುರುಗಳಂತಹ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸುವ ಮೂಲಕ ನಾಯಕಿಯ ಪಟ್ಟ ಅಲಂಕರಿಸಿದರು. ನಂತರ ನಾಯಕನಟರಾದ ವಿಷ್ಣುವರ್ಧನ್, ಅನಂತನಾಗ್, ಅಂಬರೀಷ್, ಶಂಕರನಾಗ್, ಪ್ರಭಾಕರ್ ಜೊತೆಯಲ್ಲಿಯೂ ನಟಿಸಿ ಸೈ ಎನಿಸಿಕೊಂಡರು. 1975ರಿಂದ 2008ರವರೆಗೆ, ದಕ್ಷಿಣ ಭಾರತದ ಭಾಷೆಗಳ ಚಿತ್ರಗಳು ಸೇರಿ ಸುಮಾರು 75 ಚಿತ್ರಗಳಲ್ಲಿ ಅಭಿನಯಿಸಿದರು. ಏತನ್ಮಧ್ಯೆ ಪಿ.ಲಂಕೇಶರ ‘ಖಂಡವಿದೆಕೋ ಮಾಂಸವಿದೆಕೋ’, ಚಂದ್ರಶೇಖರ ಕಂಬಾರರ ‘ಸಂಗೀತಾ’ ಮತ್ತು ಮಲಯಾಳಂನ ಎಂ.ಟಿ.ವಾಸುದೇವನ್ ನಾಯರ್‌ರ ‘ದೇವಲೋಗಂ’(ಮಮ್ಮುಟ್ಟಿ ಅಭಿನಯದ ಮೊದಲ ಚಿತ್ರ) ಚಿತ್ರಗಳಲ್ಲಿ ನಟಿಸುವ ಮೂಲಕ ಕಲಾತ್ಮಕ ಚಿತ್ರಗಳು ಮತ್ತು ಬುದ್ಧಿಜೀವಿಗಳ ವಲಯದಲ್ಲೂ ಗುರುತಿಸಿಕೊಂಡರು. ಅಭಿನಯದ ಜೊತೆಗೆ ಚಿತ್ರ ನಿರ್ಮಾಣಕ್ಕೂ ಕೈ ಹಾಕಿ, ಪ್ರಶಸ್ತಿ, ಪುರಸ್ಕಾರಗಳಿಗೂ ಭಾಜನರಾದರು. ಇವರ ನಿರ್ಮಾಣದ, ಗಿರೀಶ್ ಕಾಸರವಳ್ಳಿ ನಿರ್ದೇಶನದ ‘ತಾಯಿಸಾಹೇಬ’ ಚಿತ್ರ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿ, ಪ್ರತಿಷ್ಠಿತ ಸ್ವರ್ಣಕಮಲ ಪ್ರಶಸ್ತಿಗೆ, ಅಂತರ್‌ರಾಷ್ಟ್ರೀಯ ಮಟ್ಟದ ಚಿತ್ರೋತ್ಸವಗಳ ಪ್ರದರ್ಶನಕ್ಕೆ, ಪುರಸ್ಕಾರಕ್ಕೆ ಪಾತ್ರವಾಗಿ ಕನ್ನಡಕ್ಕೆ ಕೀರ್ತಿ ತಂದು ದಾಖಲೆ ಬರೆಯಿತು. ನಟನಾ ಬದುಕಿಗೆ ಬಂದು ಬದುಕು ನಿಸೂರಾದ ನಂತರ, ರಾಜ್ಯಶಾಸ್ತ್ರದಲ್ಲಿ ಎಂ.ಎ. ಮಾಡಿದರು.

‘ಕರ್ನಾಟಕದಲ್ಲಿ ನಿರಾಶ್ರಿತ ಮಹಿಳೆಯರ ಪುನರ್ವಸತಿ- ಒಂದು ಆಡಳಿತಾತ್ಮಕ ಅಧ್ಯಯನ’ ವಿಷಯ ಕುರಿತು ಸಂಶೋಧನಾ ಪ್ರಬಂಧ ಮಂಡಿಸಿ, ಬೆಂಗಳೂರು ವಿವಿಯಿಂದ ಡಾಕ್ಟರೇಟ್ ಪಡೆದರು. ಸಮಾಜಸೇವೆ ಮತ್ತು ಸಂಘಟನೆಗಳತ್ತ ಆಸಕ್ತಿ ತೋರಿ, ಬೀದಿ ಮಹಿಳೆಯರ ಪುನರ್ವಸತಿಗಾಗಿ ಮೈಸೂರಿನಲ್ಲಿ ಸ್ಥಾಪನೆಯಾಗಿರುವ ಶಕ್ತಿಧಾಮ ಸಂಸ್ಥೆಯ ನಿರ್ವಾಹಕ ಧರ್ಮದರ್ಶಿಯಾಗಿ ಸೇವೆ ಸಲ್ಲಿಸಿದರು. ರಾಜ್ಯ ಚಲನಚಿತ್ರ ಸಲಹಾ ಸಮಿತಿ, ಸಹಾಯಧನ ಶಿಫಾರಸ್ಸು ಸಮಿತಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದರು. ಕನ್ನಡ ಚಲನಚಿತ್ರೋದ್ಯಮದ ಪ್ರಾತಿನಿಧಿಕ ಸಂಸ್ಥೆಯಾದ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿ ಉದ್ಯಮದ ನೇತೃತ್ವ ವಹಿಸಿದ ಮೊದಲ ಮಹಿಳೆ ಎಂಬ ಹಿರಿಮೆಗೆ ಪಾತ್ರರಾದ ಜಯಮಾಲಾ, ಕನ್ನಡ ವಾಕ್ಚಿತ್ರ ವಜ್ರಮಹೋತ್ಸವದ ಅದ್ದೂರಿ ಆಚರಣೆಯ ವೇಳೆ ಚುಕ್ಕಾಣಿ ಹಿಡಿದ ಹೆಗ್ಗಳಿಕೆಗೂ ಪಾತ್ರರಾದರು. ಸಾಮಾನ್ಯವಾಗಿ ಚಿತ್ರನಟಿಯರು ನಟನಾ ಬದುಕಿನಿಂದ ನಿವೃತ್ತರಾದ ನಂತರ ಸಮಾಜದಿಂದ ವಿಮುಖರಾಗುತ್ತಾರೆ. ಇಲ್ಲವೇ, ಅಲ್ಲೊಂದು ಇಲ್ಲೊಂದು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡು, ಅಷ್ಟಕ್ಕೇ ತೃಪ್ತಿಪಟ್ಟುಕೊಳ್ಳುತ್ತಾರೆ. ಆದರೆ ಜಯಮಾಲಾ ಅವರು ನಿರ್ಮಾಪಕಿಯಾಗಿ, ಉದ್ಯಮಕ್ಕೆ ಸಂಬಂಧಿಸಿದ ಸಂಸ್ಥೆಗಳ, ಸಮಿತಿಗಳ ಸದಸ್ಯೆಯಾಗಿ, ಸಮಾಜ ಸೇವಕಿಯಾಗಿ, ಸಂಘಟಕಿಯಾಗಿ ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು.

ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಅವುಗಳಿಗೆ ಸಂಬಂಧಿಸಿದ ಪುಸ್ತಕಗಳ ಅಧ್ಯಯನದಲ್ಲಿಯೂ ಅಪಾರ ಆಸಕ್ತಿ ಹೊಂದಿದವರು. ಅದರ ಬಲದಿಂದ ರಾಜಕಾರಣಿಗಳ ನಡುವೆ ಒಂದಷ್ಟು ಸಂಪರ್ಕ ಸಾಧಿಸಿದವರು. ಅಯ್ಯಪ್ಪಸ್ವಾಮಿ ದೇವಳ ಪ್ರವೇಶಿಸಿ ವಿವಾದಕ್ಕೂ ಗುರಿಯಾಗಿದ್ದರು. ನಟ ಪ್ರಭಾಕರ್‌ರೊಂದಿಗಿನ ವೈವಾಹಿಕ ಬದುಕಿನಿಂದ ಹೊರಬಂದು, ಸಿನೆಮಾಟೋಗ್ರಾಫರ್ ರಾಮಚಂದ್ರರನ್ನು ವರಿಸಿ, ಮಗಳು ಐಶ್ವರ್ಯಳನ್ನು ಸಿನೆಮಾನಟಿಯನ್ನಾಗಿ ಮಾಡಲು ಪ್ರಯತ್ನಿಸಿ ಸೋತರು. ಇತ್ತೀಚಿನ ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಅಧಿಕೃತವಾಗಿ ಗುರುತಿಸಿಕೊಂಡ ಜಯಮಾಲಾ, 2014ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ನಾಮಕರಣಗೊಂಡಿದ್ದರು. ಕರ್ನಾಟಕದಲ್ಲಿ ಲೈಂಗಿಕ ಕಾರ್ಯಕರ್ತೆಯರು, ದೇವದಾಸಿಯರು ಮತ್ತು ಲೈಂಗಿಕ ಅಲ್ಪಸಂಖ್ಯಾತರ ಸಮಸ್ಯೆಗಳ ಕುರಿತಂತೆ ತಿಳಿಯಲು ಸರಕಾರ ಸ್ಥಾಪಿಸಿದ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಜಯಮಾಲಾ ಅವರು, ಕಾಲಮಿತಿಯೊಳಗೆ ವರದಿಯನ್ನೂ ನೀಡಿ, ದಕ್ಷತೆ ಮೆರೆದಿದ್ದರು.

ಈಗ ಅವರಿಗೆ ಕಾಂಗ್ರೆಸ್ ಪಕ್ಷ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಖಾತೆ ಮಂತ್ರಿ ಸ್ಥಾನ ನೀಡಿ, ಮತ್ತೊಂದು ಮಹತ್ವದ ಜವಾಬ್ದಾರಿಯನ್ನು ಹೊರಿಸಿದೆ. ಹಾಗೆ ನೋಡಿದರೆ, ಈ ಹಿಂದೆ ಸಿದ್ದರಾಮಯ್ಯನವರ ಸರಕಾರದಲ್ಲಿ ಚಿತ್ರನಟಿ ಉಮಾಶ್ರೀ ಅವರಿಗೆ ಇದೇ ಖಾತೆಯನ್ನು ವಹಿಸಿಕೊಡಲಾಗಿತ್ತು. ಉಮಾಶ್ರೀಯವರು ರಂಗಭೂಮಿಯಲ್ಲಿ, ಚಿತ್ರರಂಗದಲ್ಲಿ ಪೋಷಕ ನಟಿಯಾಗಿ ಕಾಣಿಸಿಕೊಂಡವರು. ಬಡತನ, ಹಸಿವು, ಅವಮಾನವನ್ನು ಅನುಭವಿಸಿದವರು. ಕಷ್ಟ ಕಾರ್ಪಣ್ಯಗಳನ್ನು ಕಂಡುಂಡವರು. ನೋವು ನುಂಗಿ ಬೆಳೆದವರು. ಅಂತಹವರು ರಾಜ್ಯದ ಘನತೆವೆತ್ತ ಸಚಿವ ಸ್ಥಾನ ಅಲಂಕರಿಸಿದಾಗ, ನಾಡಿನ ಜನ ಭಾರೀ ನಿರೀಕ್ಷೆಯನ್ನಿಟ್ಟುಕೊಂಡಿದ್ದರು. ಆದರೆ ನಾಡಿನ ಜನರ ನಿರೀಕ್ಷೆಗಳನ್ನು ಹುಸಿಗೊಳಿಸಿದ ಉಮಾಶ್ರೀಯವರು, ಮಹಿಳೆ-ಮಕ್ಕಳ ಕಲ್ಯಾಣದತ್ತಲೂ ಗಮನ ಹರಿಸಲಿಲ್ಲ, ಕನ್ನಡ ಸಂಸ್ಕೃತಿಯನ್ನೂ ಸಮೃದ್ಧಗೊಳಿಸಲಿಲ್ಲ. ಪ್ರತಿಫಲವಾಗಿ ಚುನಾವಣೆಯಲ್ಲಿ ಜನರೂ ಗೆಲ್ಲಿಸಲಿಲ್ಲ.

ಈಗ ಅದೇ ಖಾತೆಗೆ, ಅದೇ ಸಿನೆಮಾ ಕ್ಷೇತ್ರದ ಜಯಮಾಲಾರನ್ನು ಮಂತ್ರಿ ಮಾಡಲಾಗಿದೆ. ಕಾಂಗ್ರೆಸ್‌ನ ಹಿರಿಯ ನಾಯಕ ಎಚ್.ಎಂ.ರೇವಣ್ಣ, ‘‘ಇದು ಸಿದ್ದರಾಮಯ್ಯನವರ ಕಾಣಿಕೆ, ಮಂತ್ರಿಯಾಗಿ, ಮೇಲ್ಮನೆಯ ನಾಯಕಿಯಾಗುವ ಜಯಮಾಲಾರ ಕೈಕೆಳಗೆ ನಾವು ಕೆಲಸ ಮಾಡಬೇಕಿದೆ’’ ಎಂದು ಕೊಂಕು ನುಡಿದಿದ್ದಾರೆ. ಹಾಗೆಯೇ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಲಕ್ಷ್ಮೀ ಹೆಬ್ಬಾಳ್ಕರ್, ‘‘ಪಕ್ಷದ ಹಿರಿಯ ನಾಯಕರ ನಿಲುವೇ ಅರ್ಥವಾಗುತ್ತಿಲ್ಲ. ಮೋಟಮ್ಮನವರು ಮಂತ್ರಿ ಮಾಡಿ ಎಂದಾಗ, ಪರಿಷತ್ ಸದಸ್ಯರಿಗೆ ಮಂತ್ರಿ ಸ್ಥಾನವಿಲ್ಲವೆಂದರು, ಈಗ ಜಯಮಾಲಾರನ್ನು ಮಾಡಿದ್ದಾರೆ. ಇದ್ಯಾವ ನ್ಯಾಯ?’’ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಅಂತೂ ಮಹಿಳೆಯರನ್ನು ಕಡೆಗಣಿಸುವ ಪುರುಷಪ್ರಧಾನ ರಾಜಕಾರಣ, ಸಿಕ್ಕ ಅವಕಾಶವನ್ನು ಕಡೆಗಣಿಸಿ ‘ರಾಜಕಾರಣಿ’ಯಾಗಲು ಹವಣಿಸುವ ಮಹಿಳಾಮಣಿಗಳ ನಡುವೆಯೇ, ಸೂಕ್ಷ್ಮ ಸಂವೇದನೆಯ ಜಯಮಾಲಾರಿಗೆ ಮಂತ್ರಿ ಸ್ಥಾನ ಸಿಕ್ಕಿದೆ. ಈ ಹೊತ್ತಿನಲ್ಲಿ, ‘‘ಹೊರಗಿನ ಆಭರಣಗಳು ನಮಗೆ ಎಷ್ಟೇ ಇದ್ದರೂ ನಮ್ಮಿಳಗಿರುವ ತೇಜಸ್ಸು, ಅಂತಃಸತ್ವ, ಆತ್ಮವಿಶ್ವಾಸ, ಇಚ್ಛಾಶಕ್ತಿಗೆ ಧಕ್ಕೆ ಬರದಂತೆ ಮುಕ್ಕಾಗದಂತೆ ಜನಸೇವೆ ಮಾಡಿದರೆ ಯಶಸ್ಸು ಖಂಡಿತ’’ ಎಂದು ಹಿರಿಯ ಚಿಂತಕಿ ಶಶಿಕಲಾ ವಸ್ತ್ರದ ಅವರು ಹೇಳಿದ್ದು ನೆನಪಾಗುತ್ತಿದೆ. ಜಯಮಾಲಾ ಯಶಸ್ವಿ ಮಹಿಳೆಯಾಗಲಿ, ಮಾದರಿಯಾಗಲಿ, ಮತ್ತಷ್ಟು ಮಹಿಳೆಯರು ರಾಜಕಾರಣಕ್ಕೆ ಬರುವಂತಾಗಲಿ ಎಂದು ಆಶಿಸೋಣ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)