ಮಲೆನಾಡಿನಲ್ಲಿ ಮಳೆ ಚುರುಕು: ತುಂಗಾ ಡ್ಯಾಂ ಭರ್ತಿ
ಹೊಸಪೇಟೆ ಟಿ.ಬಿ. ಡ್ಯಾಂಗೆ ನೀರು ಬಿಡುಗಡೆ
ಶಿವಮೊಗ್ಗ, ಜೂ. 10: ಮಲೆನಾಡಿನಲ್ಲಿ ಮಳೆ ಬಿರುಸುಗೊಂಡಿದೆ. ಜಲಾನಯನ ಪ್ರದೇಶದಲ್ಲಿ ವರ್ಷಧಾರೆ ಚುರುಕುಗೊಂಡಿರುವುದರಿಂದ ಪ್ರಮುಖ ನದಿಗಳ ಹರಿವಿನಲ್ಲಿ ಹೆಚ್ಚಳವಾಗಿದ್ದು, ಇದರಿಂದ ಪ್ರಮುಖ ಜಲಾಶಯಗಳ ಒಳಹರಿವಿನಲ್ಲಿ ಕ್ರಮೇಣ ಏರಿಕೆ ಕಂಡುಬರುತ್ತಿದೆ. ಈ ನಡುವೆ ಶಿವಮೊಗ್ಗ ತಾಲೂಕಿನ ತುಂಗಾ ಜಲಾಶಯ ಗರಿಷ್ಠ ಮಟ್ಟ ತಲುಪಿದೆ. ನೀರು ಹೊರ ಬಿಡಲಾಗುತ್ತಿದೆ.
ಭಾನುವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ ಬಿದ್ದ ಮಳೆಯ ವಿವರ ಈ ಮುಂದಿನಂತಿದೆ. ಶಿವಮೊಗ್ಗ 8.6 ಮಿಲಿ ಮೀಟರ್ (ಮಿ.ಮೀ.), ಭದ್ರಾವತಿ 22.6 ಮಿ.ಮೀ., ತೀರ್ಥಹಳ್ಳಿ 67.2 ಮಿ.ಮೀ., ಸಾಗರ 47.2 ಮಿ.ಮೀ., ಹೊಸನಗರದಲ್ಲಿ 41.2 ಮಿ.ಮೀ. ಹಾಗೂ ಸೊರಬದಲ್ಲಿ 16.2 ಮಿ.ಮೀ. ಮಳೆಯಾಗಿದೆ. ಉಳಿದಂತೆ ಜಿಲ್ಲೆಯ ಪಶ್ಚಿಮಘಟ್ಟ ವ್ಯಾಪ್ತಿಯ ಹುಲಿಕಲ್ಲು, ಮಾಣಿ, ಯಡೂರು, ಆಗುಂಬೆ, ನಗರ ಪ್ರದೇಶಗಳಲ್ಲಿ ಧಾರಾಕಾರ ಮಳೆ ಮುಂದುವರಿದಿದೆ.
ಡ್ಯಾಂ ಭರ್ತಿ: ಕಡಿಮೆ ವ್ಯಾಪ್ತಿ - ವಿಸ್ತೀರ್ಣ ಹೊಂದಿರುವ, ತುಂಗಾ ಜಲಾಶಯವು ಮುಂಗಾರಿನ ಮೊದಲ ಮಳೆಗೆ ಭರ್ತಿಯಾಗಿದೆ. ತಡರಾತ್ರಿ ಡ್ಯಾಂನ ಗರಿಷ್ಠ ಮಟ್ಟ 588.24 ಅಡಿಗೆ ನೀರು ತಲುಪುತ್ತಿದ್ದಂತೆ, 5 ಕ್ರಸ್ಟ್ ತೆರೆದು ಹೊಸಪೇಟೆಯ ಟಿ.ಬಿ.ಡ್ಯಾಂಗೆ ನೀರು ಹರಿಬಿಡಲಾಗುತ್ತಿದೆ.
'ಭಾನುವಾರ ಮಧ್ಯಾಹ್ನದ ನಂತರ ಡ್ಯಾಂನ ಒಳಹರಿವು ಹೆಚ್ಚಾದ ಕಾರಣದಿಂದ 15 ಕ್ರಸ್ಟ್ ತೆರೆದು, ಸುಮಾರು 9500 ಕ್ಯೂಸೆಕ್ ನೀರು ಹರಿ ಬಿಡಲಾಗುತ್ತಿದೆ. ಪರಿಸ್ಥಿತಿಯ ಅವಲೋಕನ ನಡೆಸಲಾಗುತ್ತಿದೆ. ಈಗಾಗಲೇ ನದಿ ಪಾತ್ರದ ಜನರಿಗೆ ಸೂಕ್ತ ಮುನ್ನೆಚ್ಚರಿಕೆಯ ಸಂದೇಶ ರವಾನಿಸಲಾಗಿದೆ' ಎಂದು ಡ್ಯಾಂ ವ್ಯಾಪ್ತಿಯ ಅಧೀಕ್ಷಕ ಎಂಜಿನಿಯರ್ ಬಿ.ಎನ್.ಫಣಿರಾಜ್ ಸ್ಪಷ್ಟಪಡಿಸಿದ್ದಾರೆ.
ಜಲಾನಯನ ಪ್ರದೇಶವಾದ ತೀರ್ಥಹಳ್ಳಿಯ ಪಶ್ಚಿಮಘಟ್ಟ ವ್ಯಾಪ್ತಿ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಮತ್ತಿತರೆಡೆ ಉತ್ತಮ ಮಳೆಯಾಗುತ್ತಿರುವುದರಿಂದ ತುಂಗಾ ನದಿ ಮೈದುಂಬಿ ಹರಿಯಲಾರಂಭಿಸಿದೆ. ಜೊತೆಗೆ ಡ್ಯಾಂನ ಒಳಹರಿವು ಹೆಚ್ಚಳವಾಗಿದೆ. ಡ್ಯಾಂ ಗರಿಷ್ಠ ಮಟ್ಟಕ್ಕೆ ತಲುಪಿದ ಕಾರಣದಿಂದ ನೀರು ಹೊರ ಬಿಡಲಾಗುತ್ತಿದೆ. ಇದರಿಂದ ಶಿವಮೊಗ್ಗ ನಗರದಲ್ಲಿ ಹಾದು ಹೋಗಿರುವ ತುಂಗಾ ನದಿಯ ಹರಿವಿನಲ್ಲಿ ಹೆಚ್ಚಳವಾಗಿದೆ.
ತುಂಗಾ ಜಲಾಶಯವು 3.24 ಟಿಎಂಸಿ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದೆ. 21 ಕ್ರಸ್ಟ್ ಗೇಟ್ಗಳಿವೆ. ಕೃಷಿ, ಕುಡಿಯುವ ನೀರು ಪೂರೈಕೆಯ ಜೊತೆಗೆ ವಿದ್ಯುತ್ ಉತ್ಪಾದನೆ ಕೂಡ ಮಾಡಲಾಗುತ್ತಿದೆ. ಒಟ್ಟಾರೆ ಸುಮಾರು 90,500 ಹೆಕ್ಟೇರ್ ಪ್ರದೇಶದಷ್ಟು ಅಚ್ಚುಕಟ್ಟು ವ್ಯಾಪ್ತಿ ಹೊಂದಿದೆ. ಶಿವಮೊಗ್ಗ ನಗರದ ಕುಡಿಯುವ ನೀರು ಪೂರೈಕೆಯ ಮುಖ್ಯ ಕೇಂದ್ರವೂ ಕೂಡ ಆಗಿದೆ.
ತುಂಗಾ ಡ್ಯಾಂನ ತುಂಗಾ ಮೇಲ್ದಂಡೆ ಯೋಜನೆಯಡಿ ನಿರ್ಮಿಸಲಾಗಿರುವ ನಾಲೆಯ ಮೂಲಕ ಹಾವೇರಿ, ದಾವಣಗೆರೆ ಜಿಲ್ಲೆಗಳ ಸಾವಿರಾರು ಹೆಕ್ಟೇರ್ ಪ್ರದೇಶಕ್ಕೆ ನೀರು ಪೂರೈಕೆ ಮಾಡಲಾಗುತ್ತಿದೆ. ಉಳಿದಂತೆ ತುಂಗಾ ಬಲ ಹಾಗೂ ಎಡ ನಾಲೆಗಳ ಮೂಲಕವು ಡ್ಯಾಂನಿಂದ ನೀರು ಹರಿಸಲಾಗುತ್ತದೆ.
ಇತರೆ ವಿವರ: ಉಳಿದಂತೆ ಭಾನುವಾರ ಬೆಳಿಗ್ಗೆಯ ಮಾಹಿತಿಯಂತೆ ರಾಜ್ಯದ ಪ್ರಮುಖ ಜಲ ವಿದ್ಯುತ್ ಉತ್ಪಾದನಾ ಕೇಂದ್ರವಾದ ಲಿಂಗನಮಕ್ಕಿ ಡ್ಯಾಂನ ನೀರಿನ ಮಟ್ಟವು 1753 (ಗರಿಷ್ಠ ಮಟ್ಟ: 1819) ಅಡಿಯಿದೆ. 9384 ಕ್ಯೂಸೆಕ್ ಒಳಹರಿವಿದ್ದು, 1602 ಕ್ಯೂಸೆಕ್ ಹೊರಹರಿವಿದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂನ ನೀರಿನ ಮಟ್ಟ 1742 ಕ್ಯೂಸೆಕ್ ಇತ್ತು. ಉಳಿದಂತೆ ಭದ್ರಾ ಡ್ಯಾಂನ ನೀರಿನ ಮಟ್ಟ 115.9 (ಗರಿಷ್ಠ ಮಟ್ಟ: 186) ಅಡಿಯಿದೆ. 7908 ಕ್ಯೂಸೆಕ್ ಒಳಹರಿವಿದ್ದು, 180 ಕ್ಯೂಸೆಕ್ ಹೊರಹರಿವಿದೆ. ಡ್ಯಾಂ ವ್ಯಾಪ್ತಿಯಲ್ಲಿ 22.6 ಮಿ.ಮೀ. ವರ್ಷಧಾರೆಯಾಗಿದೆ.
ನದಿಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗಿದೆ : ಎಂಜಿನಿಯರ್ ಬಿ.ಎನ್.ಫಣಿರಾಜ್
ಜಲಾನಯನ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುವ ಹವಮಾನ ಇಲಾಖೆಯ ಮಾಹಿತಿಯನುಸಾರ ಹಾಗೂ ಡ್ಯಾಂಗೆ ಒಳಹರಿವು ಹೆಚ್ಚಾದ ಸಮಯದಲ್ಲಿಯೇ, ಡ್ಯಾಂನಿಂದ ಯಾವಾಗ ಬೇಕಾದರೂ ನೀರು ಹರಿಸಲಾಗುವುದು ಎಂದು ನದಿ ಪಾತ್ರದ ಜನರಿಗೆ ಎಚ್ಚರಿಕೆಯ ಸಂದೇಶ ರವಾನಿಸಲಾಗಿತ್ತು. ಪ್ರಸ್ತುತ 9500 ಕ್ಯೂಸೆಕ್ ಒಳಹರಿವಿದ್ದು, ಅಷ್ಟೆ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ' ಎಂದು ತುಂಗಾ ಡ್ಯಾಂನ ಅಧೀಕ್ಷಕ ಎಂಜಿನಿಯರ್ ಬಿ.ಎನ್.ಫಣಿರಾಜ್ರವರು ಭಾನುವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.
ಮುಳುಗಡೆಯಾದ ಮಂಡಗದ್ದೆ ಪಕ್ಷಿಧಾಮ
ತುಂಗಾ ನದಿ ಮೈದುಂಬಿ ಹರಿಯಲಾರಂಭಿಸಿರುವುದು ಹಾಗೂ ಗಾಜನೂರಿನ ತುಂಗಾ ನದಿ ಗರಿಷ್ಠ ಮಟ್ಟ ತಲುಪಿರುವುದರಿಂದ, ಡ್ಯಾಂನ ಹಿನ್ನೀರಿನಲ್ಲಿರುವ ತೀರ್ಥಹಳ್ಳಿ ತಾಲೂಕಿನ ಪ್ರಸಿದ್ದ ಮಂಡಗದ್ದೆ ಪಕ್ಷಿಧಾಮ ಮುಳುಗಡೆಯಾಗುವ ಹಂತಕ್ಕೆ ಬಂದಿದೆ. ಇದರಿಂದ ಬಾನಾಡಿಗಳು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಮರಗಳಲ್ಲಿ ಪಕ್ಷಿಗಳು ಕಟ್ಟಿದ ಗೂಡುಗಳು ನೀರಿನಲ್ಲಿ ಕೊಚ್ಚಿ ಹೋಗುತ್ತಿವೆ. ಅದರಲ್ಲಿದ್ದ ಮೊಟ್ಟೆ-ಮರಿ ಪಕ್ಷಿಗಳು ನದಿ ಪಾಲಾಗುತ್ತಿದೆ.
ಸಂತಾನೋತ್ಪತ್ತಿಗಾಗಿ ವಿದೇಶಗಳಿಂದ ನಾನಾ ತಳಿಯ ಪಕ್ಷಿಗಳು ಪ್ರತಿವರ್ಷ ಮಂಡಗದ್ದೆಗೆ ಆಗಮಿಸುತ್ತವೆ. ತುಂಗಾ ಜಲಾಶಯ ಭರ್ತಿಯಾದ ವೇಳೆಯಲ್ಲೆಲ್ಲ ಮಂಡಗದ್ದೆ ಪಕ್ಷಿಧಾಮ ಮುಳುಗಡೆಯಾಗಿ, ಬಾನಾಡಿಗಳು ಅಪಾಯದಂಚಿಗೆ ಸಿಲುಕುವುದು ಸಾಮಾನ್ಯವಾಗಿದೆ.