ಓ ಮೆಣಸೇ...
ಪ್ರಧಾನಿ ಮೋದಿ ಇನ್ನಾದರೂ ‘ಅಚ್ಛೇ ದಿನ್’ ಜಾರಿಗೆ ಮುಂದಾಗಲಿ - ವಿಶ್ವೇಶ್ವರ ತೀರ್ಥ ಸ್ವಾಮೀಜಿ, ಪೇಜಾವರ ಮಠ
ಟಿವಿ, ಪತ್ರಿಕೆಗಳು ಅದನ್ನು ಜಾರಿಗೊಳಿಸಲು ಸಾಕಷ್ಟು ಪ್ರಯತ್ನ ನಡೆಸುತ್ತಿವೆ.
---------------------
ಎಲ್ಲ ಕಡೆ ದೊಡ್ಡ ಮೀನು ಸಣ್ಣ ಮೀನನ್ನು ನುಂಗಿದರೆ ಕರ್ನಾಟಕದಲ್ಲಿ ಸಣ್ಣ ಮೀನು ದೊಡ್ಡ ಮೀನನ್ನು ನುಂಗುತ್ತಿದೆ - ಪ್ರಹ್ಲಾದ್ ಜೋಶಿ, ಸಂಸದ
ಗಂಟಲಲ್ಲಿ ಸಿಕ್ಕಿಕೊಂಡರೆ ಕಷ್ಟ.
---------------------
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅನೈತಿಕ - ನಳಿನ್ ಕುಮಾರ್ ಕಟೀಲು, ಸಂಸದ
ಅನೈತಿಕ ಮೈತ್ರಿ ಬಿಜೆಪಿಯ ಹಕ್ಕಿರಬೇಕು.
---------------------
ತಾಕತ್ತಿದ್ದರೆ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಬನ್ನಿ - ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
ಮೋದಿಯವರ ಶೌಚಾಲಯಗಳು ಪೂರ್ತಿಯಾದ ಬಳಿಕ ವಿಸರ್ಜನೆಯಾದರೆ ಒಳ್ಳೆಯದಲ್ಲವೇ?
---------------------
2019ರ ಚುನಾವಣೆಯಲ್ಲಿ ಮಂದಿರ, ಹಿಂದುತ್ವದಂತಹ ಅಜೆಂಡಾಗಳು ಇರುವುದಿಲ್ಲ - ಮುಖ್ತಾರ್ ಅಬ್ಬಾಸ್ ನಖ್ವಿ, ಕೇಂದ್ರ ಸಚಿವ
ಮೋದಿಯ ಕೊಲೆ ಸಂಚು ಎನ್ನುವ ಏಕೈಕ ಅಜೆಂಡಾದೊಂದಿಗೆ ಚುನಾವಣೆ ಎದುರಿಸುವ ಉದ್ದೇಶ.
---------------------
ಒಂದು ರೀತಿಯಲ್ಲಿ ಇದೊಂದು (ಮೈತ್ರಿ ಸರಕಾರ) ಬಲವಂತದ ಮದುವೆ -ಡಾ. ಜಿ. ಪರಮೇಶ್ವರ್, ಉಪಮುಖ್ಯಮಂತ್ರಿ
ಕಾಂಗ್ರೆಸ್ ನೀಡಿದ ವರದಕ್ಷಿಣೆ ಮಾತ್ರ ಭಾರೀ ದುಬಾರಿ.
---------------------
ಹಸಿದ ಜೆಡಿಎಸ್ ಮತ್ತು ಹಳಸಿದ ಕಾಂಗ್ರೆಸ್ ಮೈತ್ರಿ ಸರಕಾರ ಶೀಘ್ರ ಪತನವಾಗಲಿದೆ -ಸಿ.ಟಿ. ರವಿ, ಶಾಸಕ
ಹಳಸಿದ ಅನ್ನಕ್ಕಾಗಿ ಹಸಿದು ಕೂತವರ ಮಾತು.
---------------------
ಯೋಗ ಜಾತ್ಯತೀತ ಮತ್ತು ಧರ್ಮಾತೀತ - ಡಾ. ಡಿ. ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿ ಧರ್ಮಸ್ಥಳ
ಆದರೆ ಸಮಸ್ಯೆಯಿರುವುದು ಅದನ್ನು ಜಾರಿಗೊಳಿಸುವವರ ಕುರಿತಂತೆ.
---------------------
ಜೆಡಿಎಸ್ ಪಕ್ಷದೊಳಗೆ ನಾನೀಗ ಅಸ್ಪಶ್ಯನಿದ್ದಂತೆ - ವೈ.ಎಸ್.ವಿ. ದತ್ತಾ, ಮಾಜಿ ಶಾಸಕ
ಅಸ್ಪಶ್ಯ ವಿರೋಧಿ ಕಾನೂನನ್ನು ಬಳಸಿ ಪೊಲೀಸರಿಗೆ ದೂರು ಕೊಡಿ.
---------------------
ನಾನು ಅದೃಷ್ಟದ ರಾಜಕಾರಣಿ - ಎಚ್.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ
ಮತದಾರರ ದುರದೃಷ್ಟ.
---------------------
ಪೇಜಾವರ ವಿಶ್ವೇಶ್ವರ ತೀರ್ಥ ಸ್ವಾಮೀಜಿಯವರಿಗೆ ಗಂಗಾದರ್ಶನ ಮಾಡಿಸುವೆ - ಕೆ.ಎಸ್. ಈಶ್ವರಪ್ಪ, ಶಾಸಕ
ಅದೇನೂ ಬೇಡ, ಸಾರ್ವಜನಿಕವಾಗಿ ಒಂದು ಲೋಟ ಗಂಗಾನದಿ ನೀರನ್ನು ಕುಡಿದರೆ ಸಾಕು, ಎನ್ನುವುದು ಯಡಿಯೂರಪ್ಪ ಸವಾಲು.
---------------------
ಕಾಂಗ್ರೆಸ್-ಜೆಡಿಎಸ್ ಸರಕಾರಕ್ಕೆ ನಿಪಾಹ್ ಸೋಂಕು -ಡಿ.ವಿ. ಸದಾನಂದ ಗೌಡ, ಕೇಂದ್ರ ಸಚಿವ
ಬಿಜೆಪಿಯೆಂಬ ಬಾವಲಿಯಿಂದ ಈ ಸೋಂಕು ಬಂದಿದೆ ಎಂಬುದು ಸಿದ್ದರಾಮಯ್ಯ ಆರೋಪ.
---------------------
ವಿಧಾನಸೌಧದಲ್ಲಿರುವುದಕ್ಕಿಂತ ಹೆಚ್ಚು ರಾಜಕೀಯ ಮಠಾಧೀಶರಲ್ಲಿದೆ -ಬಸವರಾಜ ಹೊರಟ್ಟಿ, ವಿ.ಪ. ಸದಸ್ಯ
ಹಣವೂ ಕೂಡ.
---------------------
ಕಲ್ಲು ಅಥವಾ ಬಂದೂಕು ಸಂಸ್ಕೃತಿಯಿಂದ ಹೊರಬರುವ ದಾರಿಯನ್ನು ನಾವು ಯುವಕರಿಗೆ ತೋರಿಸಬೇಕಿದೆ -ಮೆಹಬೂಬ ಮುಫ್ತಿ, ಜಮ್ಮು ಕಾಶ್ಮೀರ ಮುಖ್ಯಮಂತ್ರಿ
ಮೊದಲು ಕಾಶ್ಮೀರದೊಳಗಿರುವ ಸೇನೆಯ ಕೈಯಲ್ಲಿರುವ ಬಂದೂಕನ್ನು ಕಿತ್ತುಕೊಳ್ಳಿ.
---------------------
ರಾಜಭವನಗಳು ಅಧಿಕಾರದ ಪರ್ಯಾಯ ಕೇಂದ್ರಗಳಲ್ಲ - ವೆಂಕಯ್ಯ ನಾಯ್ಡು, ಉಪರಾಷ್ಟ್ರಪತಿ
ನಾಗಪುರವೇ ನಿಜವಾದ ಕೇಂದ್ರ.
---------------------
ನನ್ನನ್ನು ನಾನೇ ಕ್ಷಮಿಸಲು ನನಗೆ ಸಂಪೂರ್ಣ ಅಧಿಕಾರವಿದೆ - ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ
ಆದರೆ ಜಗತ್ತು ಕ್ಷಮಿಸುವುದು ಕಷ್ಟ.
---------------------
ದೇವೇಗೌಡರು ನನಗೆ ರಾಜಕೀಯ ಪುನರ್ಜನ್ಮ ನೀಡಿದ್ದಾರೆ -ಎಚ್. ವಿಶ್ವನಾಥ್, ಶಾಸಕ
ಅಹಿಂದ ಹೋರಾಟವನ್ನು ಮತ್ತೆ ಶುರು ಮಾಡಿ ಆ ಋಣವನ್ನು ತೀರಿಸುವ ಆಲೋಚನೆಯಿದೆಯೇ?
---------------------
ಉಡದಾರ, ಜನಿವಾರ, ಪುಟಗೋಸಿ, ತುಂಡು ಬಟ್ಟೆಗಳಿಗೆ ತಮ್ಮದೇ ಆದ ಮಹತ್ವವಿದೆ - ಮುಖ್ಯಮಂತ್ರಿ ಚಂದ್ರು, ವಿ.ಪ. ಮಾಜಿ ಸದಸ್ಯ
ಅವುಗಳೇ ಅಲ್ಲವೇ ದೇಶವನ್ನು ಆಳುತ್ತಿರುವುದು.
---------------------
ಸ್ಮಾರ್ಟ್‌ಆ್ಯಪ್‌ಗಳು ದೇಶದ ಪ್ರಗತಿಯ ಇಂಜಿನ್‌ಗಳು - ನರೇಂದ್ರ ಮೋದಿ, ಪ್ರಧಾನಿ
ಅಂದರೆ ಈ ಆ್ಯಪ್‌ಗಳನ್ನು ಬಳಸಿಕೊಂಡು ವಾಹನ ಓಡಿಸಲು ಕರೆ ನೀಡುತ್ತಿದ್ದೀರಾ?
---------------------
ಸರಕಾರಿ ಅಧಿಕಾರಿಗಳಿಗಿಂತ ವೇಶ್ಯೆಯರು ಉತ್ತಮ - ಸುರೇಂದ್ರಸಿಂಗ್, ಉ.ಪ್ರ.ಶಾಸಕ
ವೇಶ್ಯೆಯರು ಅವಮಾನಗೊಂಡು ಪ್ರತಿಭಟನೆಗಿಳಿಯುವ ಅಪಾಯವಿದೆ.
---------------------
ಅಸಹಿಷ್ಣುತೆಯಿಂದ ದೇಶದ ಅಸ್ತಿತ್ವವೇ ದುರ್ಬಲ - ಪ್ರಣಬ್ ಮುಖರ್ಜಿ, ಮಾಜಿ ರಾಷ್ಟ್ರಪತಿ
ಆರೆಸ್ಸೆಸ್ ಕುರಿತ ನಿಮ್ಮ ಸಹಿಷ್ಣುತೆಗೆ ಕಾರಣ ಗೊತ್ತಾಯಿತು.
---------------------
ಸಾಲಮನ್ನಾ ವಿಚಾರದಲ್ಲಿ ಮುಖ್ಯಮಂತ್ರಿ ರೈತರ ಕಿವಿಗೆ ಹೂ ಇಡುತ್ತಿದ್ದಾರೆ - ಶ್ರೀರಾಮುಲು, ಶಾಸಕ
ಕಮಲ ಹೂವಿರಬೇಕು, ಸರಿಯಾಗಿ ನೋಡಿ.
---------------------
ಆರೆಸ್ಸೆಸ್ ಕೇವಲ ಹಿಂದೂಗಳಿಗೆ ಮಾತ್ರ ಸೀಮಿತವಲ್ಲ - ಮೋಹನ್ ಭಾಗವತ್, ಆರೆಸ್ಸೆಸ್ ಮುಖ್ಯಸ್ಥ
ದಲಿತರಿಗೂ ಪ್ರವೇಶ ಇದೆಯೇ?