ವಿರೋಧ ಪಕ್ಷಗಳ ಐಕ್ಯತೆಯ ಅಂಕಗಣಿತ
ಉತ್ತರಪ್ರದೇಶದ ಉಪಚುನಾವಣೆಗಳ ಫಲಿತಾಂಶಗಳು ವಿರೋಧ ಪಕ್ಷಗಳು ಮೂಡಿಸುವ ಭರವಸೆ ಮತ್ತು ಸಮಸ್ಯೆಗಳೆರಡನ್ನೂ ಪ್ರತಿಫಲಿಸುತ್ತವೆ.
ಉತ್ತರಪ್ರದೇಶದ ಕೈರಾನಾ ಸಂಸದೀಯ ಕ್ಷೇತ್ರದ ಉಪಚುನಾವಣೆ ಮತ್ತು ನೂರ್ಪುರದ ವಿಧಾನ ಸಭಾ ಕ್ಷೇತ್ರದ ಉಪಚುನಾವಣೆಗಳ ಫಲಿತಾಂಶಗಳು ಮೇ 31ರಂದು ಹೊರಬಿದ್ದಿದ್ದು, ಇದೇ ಮಾರ್ಚ್ ನಲ್ಲಿ ಫೂಲ್ಪುರ್ ಮತ್ತು ಗೋರಖ್ಪುರ್ ಕ್ಷೇತ್ರಗಳ ಸಂಸದೀಯ ಉಪಚುನಾವಣೆಗಳ ಫಲಿತಾಂಶಗಳಲ್ಲಿ ಕಂಡುಬಂದಿದ್ದ ಧೋರಣೆಯೇ ಇಲ್ಲೂ ಮುಂದುವರಿದಿದೆ. ಪಶ್ಚಿಮ, ಮಧ್ಯ ಮತ್ತು ಪೂರ್ವ ಉತ್ತರ ಪ್ರದೇಶದ ನಾಲ್ಕೂ ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಸೋಲಿಸಿದ ನಂತರದಲ್ಲಿ ಸಾಬೀತಾಗಿರುವ ಒಂದು ಅಂಶವೇನೆಂದರೆ ವಿರೋಧ ಪಕ್ಷಗಳು ಒಗ್ಗಟ್ಟಿನಿಂದ ಚುನಾವಣೆಯನ್ನು ಎದುರಿಸಿದರೆ ಬಿಜೆಪಿಯನ್ನು ಹೆಡೆಮುರಿಕಟ್ಟಿ ಸೋಲಿಸಬಹುದು. ಒಂದು ವೇಳೆ ಕೈರಾನಾ ಮತ್ತು ನೂರ್ಪುರ್ ಕ್ಷೇತ್ರದಲ್ಲಿ ವಿರೋಧ ಪಕ್ಷಗಳು ಬೇರೆಬೇರೆಯಾಗಿ ಸ್ಪರ್ಧಿಸಿದ್ದರೆ ಬಿಜೆಪಿಗೆ ಗೆಲ್ಲಲು ಅನುಕೂಲವಾಗಿಬಿಡುತ್ತಿತ್ತು.
ಉತ್ತರಪ್ರದೇಶದಿಂದ 80 ಸಂಸತ್ ಸದಸ್ಯರು ಲೋಕಸಭೆಗೆ ಆಯ್ಕೆಯಾಗುತ್ತಾರೆ. 2014ರಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷವಾದ ಅಪ್ನಾದಲ್ ಸೇರಿ 73 ಸ್ಥಾನಗಳನ್ನು ಗೆದ್ದಿದ್ದವು. ಹೀಗಿರುವಾಗ ಈ ಉಪಚುನಾವಣೆಗಳ ಫಲಿತಾಂಶ 2019ರ ಚುನಾವಣೆಗಳ ಬಗ್ಗೆ ಯಾವ ಮುನ್ಸೂಚನೆಯನ್ನು ನೀಡುತ್ತಿದೆ? ಆರ್ಥಿಕ ಸ್ಥಿತಿಗತಿಗಳು ಧರ್ಮವನ್ನು ಮೀರಿ ನಿಲ್ಲಬಲ್ಲದು ಎಂಬುದು ಇದರ ಅರ್ಥವೇ? ಬದುಕಿನ ಲೌಕಿಕ ಸ್ಥಿತಿಗತಿಗಳು ಮತ್ತು ಧರ್ಮದ ನಡುವೆ ಸದಾ ಒಂದು ಅಸಮತೋಲನದಿಂದ ಕೂಡಿದ ಸೂಕ್ಷ್ಮ ಪರಿಸ್ಥಿತಿಯಿದ್ದು, ಒಂದೇ ಒಂದು ಪ್ರಚೋದನಾತ್ಮಕ ಹೇಳಿಕೆ, ಅಥವಾ ಘಟನೆಗಳು ಕ್ಷಣಾರ್ಧದಲ್ಲಿ ಇಡೀ ಸಂದರ್ಭವನ್ನೇ ಧ್ರುವೀಕರಿಸಿಬಿಡಬಲ್ಲ ಸಾಮರ್ಥ್ಯವನ್ನು ಹೊಂದಿವೆ. ಬಿಜೆಪಿಯನ್ನು ಒಗ್ಗಟ್ಟಿನಿಂದ ಎದುರಿಸಿ ಸೋಲಿಸುವ ದೃಷ್ಟಿಯಿಂದ ಸಮಾಜವಾದಿ ಪಕ್ಷ (ಎಸ್ಪಿ) ಮತ್ತು ಬಹುಜನ ಸಮಾಜ ಪಕ್ಷಗಳು (ಬಿಎಸ್ಪಿ) ತಮ್ಮ ನಡುವಿನ ಹಳೆಯ ವೈಷಮ್ಯಗಳನ್ನು ಮರೆತು ಒಂದಾಗಿ ಚುನಾವಣೆಯನ್ನು ಎದುರಿಸಿದವು. ಅದರಿಂದ ದಕ್ಕಿದ ಈ ಗೆಲುವುಗಳು ಕೇವಲ ಈ ಕ್ಷಣಕ್ಕೆ ಮಾತ್ರ ಸೀಮಿತವಾದದ್ದೇನಲ್ಲ.
ಕೈರಾನಾ ಮತ್ತು ನೂರ್ಪುರ್ಗಳಲ್ಲಿ ಚೌಧರಿ ಚರಣ್ ಸಿಂಗರ ಮಗನಾದ ಅಜಿತ್ ಸಿಂಗ್ನೇತೃತ್ವದ ರಾಷ್ಟ್ರೀಯ ಲೋಕ ದಳ್ (ಆರ್ಎಲ್ಡಿ) ಮತ್ತು ಅಜಿತ್ ಸಿಂಗ್ ಅವರ ಮಗ ಜಯಂತ್ ಚೌಧರಿಯೂ ಸಹ ಸಮಾಜವಾದಿ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಂಡಿದ್ದರು. ಪೂಲ್ಪುರ ಮತ್ತು ಗೋರಖ್ಪುರದಲ್ಲಿ ಮಾಡಿಕೊಂಡಂತೆ ಬಿಜೆಪಿಯನ್ನು ಸೋಲಿಸಬೇಕೆಂಬ ಏಕೈಕ ಉದ್ದೇಶದೊಂದಿಗೆ ಒಂದು ಸಡಿಲವಾದ ಬಿಜೆಪಿ ವಿರೋಧಿ ಮೈತ್ರಿಯು ಏರ್ಪಟ್ಟಿತ್ತು. ಈ ಕೈರಾನಾ ಮತ್ತು ನೂರ್ಪುರಗಳು ಕೋಮುದಳ್ಳುರಿಯಲ್ಲಿ ಹತ್ತಿ ಉರಿದ ಇತಿಹಾಸವುಳ್ಳ ಪಶ್ಚಿಮ ಉತ್ತರಪ್ರದೇಶದಲ್ಲಿದೆ. ಈ ಭಾಗವು 2013ರಲ್ಲಿ ಜಾಟ್ ಮತ್ತು ಮುಸ್ಲಿಮರ ನಡುವಿನ ಕೋಮು ಹಿಂಸಾಚಾರದಲ್ಲಿ ಹೊತ್ತಿ ಉರಿದಿತ್ತು. ಆದರೆ ಈ ಪ್ರದೇಶದ ಆರ್ಥಿಕತೆಯು ಕಂಗೆಟ್ಟಿದ್ದು ಆ ಕಾರಣಕ್ಕಾಗಿಯೇ ಬಿಜೆಪಿಯು ಇಲ್ಲಿ ಸೋಲುಣ್ಣಬೇಕಾಯಿತು. ಆದರೆ ತಾನು ಕಳೆದುಕೊಂಡ ನೆಲೆಯನ್ನು ಮತ್ತೆ ಪಡೆದುಕೊಳ್ಳಲು ಬಿಜೆಪಿಯು ಯಾವಾಗ ಬೇಕಾದರೂ ಮತ್ತೊಂದು ಧಾರ್ಮಿಕ ಧ್ರುವೀಕರಣದ ಪ್ರಯತ್ನಗಳಿಗೆ ಕೈಹಾಕಬಹುದೆಂಬ ಬಗ್ಗೆ ವಿರೋಧ ಪಕ್ಷಗಳು ಸಾಕಷ್ಟು ಜಾಗರೂಕವಾಗಿದ್ದವು.
ಆದರೆ ಬಿಎಸ್ಪಿ ಪಕ್ಷವು ಈ ಹಿಂದೆ ಫೂಲ್ಪುರ ಮತ್ತು ಗೋರಖ್ಪುರಗಳಲ್ಲಿ ಸಕ್ರಿಯವಾಗಿದ್ದಷ್ಟು ಕೈರಾನಾ ಮತ್ತು ನೂರ್ಪುರಗಳಲ್ಲಿ ಮುಂದೆ ಬಿದ್ದಿರಲಿಲ್ಲ. ಏಕೆಂದರೆ ಈ ಪ್ರದೇಶದಲ್ಲೇ ಮೊದಲು ಬಿಎಸ್ಪಿಯು ತನ್ನ ನೆಲೆಯನ್ನು ಕಂಡುಕೊಂಡಿದ್ದು. ಅದರ ಅಧ್ಯಕ್ಷೆಯಾಗಿರುವ ಮಾಯಾವತಿಯವರ ಪ್ರಮುಖ ಬೆಂಬಲಿಗರಾದ ಜಾತವ್-ದಲಿತರ ಸಂಖ್ಯೆ ಇಲ್ಲಿ ಅಧಿಕವಾಗಿದೆ. ಆದರೂ ಮಾಯಾವತಿಯವರು ತನ್ನ ಕಾರ್ಯಕರ್ತರಿಗೆ ವಿರೋಧಿ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಲು ಕರೆ ನೀಡಿರಲಿಲ್ಲ. ಅಲ್ಲಿ ತನ್ನ ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸದ ಮೂಲಕ ಮಾಯಾವತಿಯವರು ತಾನು ವಿರೋಧ ಪಕ್ಷದ ಅಭ್ಯರ್ಥಿಗೆ ಬೆಂಬಲಿಸುವ ಸಂದೇಶವನ್ನು ಕೊಟ್ಟರೋ ಅಥವಾ ಬಿಜೆಪಿಯ ಬಗ್ಗೆ ತಟಸ್ಥ ಧೋರಣೆಯನ್ನು ತಾಳಿದರೋ? ಈ ವಿಷಯದ ಬಗ್ಗೆ ಮಾಯಾವತಿಯವರು ಈಗಲೂ ಸ್ಪಷ್ಟವಾಗಿಲ್ಲ. ಮತ್ತೊಂದು ಕಡೆ ಸಹರಾನ್ಪುರದ ಯುವ ದಲಿತ ಹೋರಾಟಗಾರ ಚಂದ್ರಶೇಖರ್ ಆಝಾದ್ ರಾವಣ್ ಅವರನ್ನು ಪ್ರಭುತ್ವದ ವಿರುದ್ಧ ಯುದ್ಧ ಸಾರಿದ ಆರೋಪದ ಮೇಲೆ 2017ರ ಮೇ ನಲ್ಲಿ ಸೆರೆಹಿಡಿದು ಜೈಲಿಗೆ ದೂಡಿದ ನಂತರ ಆ ಪ್ರದೇಶದಲ್ಲಿ ಜನ್ಮ ತಾಳಿದ ‘ಭೀಮ್ ಆರ್ಮಿ’ ಸಂಘಟನೆಯು ವಿರೋಧಿ ಅಭ್ಯರ್ಥಿಯ ಪರವಾಗಿ ಸಂಪೂರ್ಣವಾಗಿ ಶ್ರಮಿಸಿತು.
ದಲಿತರೆಲ್ಲರೂ ಒಟ್ಟಾಗಿ ವಿರೋಧ ಪಕ್ಷದ ಪರವಾಗಿ ಮತ ಚಲಾಯಿಸಬೇಕೆಂದು ಆಝಾದ್ ಅವರೂ ಸಹ ಸೆರೆಮನೆಯಿಂದಲೇ ಕರೆ ನೀಡಿದ್ದರು. ಚಂದ್ರಶೇಖರ್ ಅವರ ತಾಯಿಯಂತೂ ಖುದ್ದಾಗಿ ಕೈರಾನಾದ ಉದ್ದಗಲಕ್ಕೂ ಓಡಾಡಿ ಈ ಸಂದೇಶವನ್ನು ತಲುಪಿಸಿದರು. ಕಾಂಗ್ರೆಸ್ ಪಕ್ಷವೂ ಕಣದಿಂದ ದೂರವುಳಿಯಿತು ಮತ್ತು ಎಸ್ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಸಹ ಆ ಕ್ಷೇತ್ರದಲ್ಲಿ ಪ್ರಚಾರ ಮಾಡಲಿಲ್ಲ. ಏಕೆಂದರೆ 2013ರಲ್ಲಿ ಕೋಮು ಗಲಭೆಗಳು ನಡೆದ ನಂತರದಲ್ಲಿ ತಮ್ಮ ಪರಿಸ್ಥಿತಿಯ ಬಗ್ಗೆ ಆಗ ಮುಖ್ಯಮಂತ್ರಿಯಾಗಿದ್ದ ಅಖಿಲೇಶ್ ಯಾದವ್ ಕಿಂಚಿತ್ತೂ ಸ್ಪಂದಿಸಲಿಲ್ಲವೆಂಬ ಆಕ್ರೋಶ ಮುಸ್ಲಿಮರಲ್ಲಿ ತೀವ್ರವಾಗಿದೆ. ಹೀಗಾಗಿ ಅವರೇನಾದರೂ ಅಲ್ಲಿ ಪ್ರಚಾರಕ್ಕೆ ಬಂದಿದ್ದರೆ ಮುಸ್ಲಿಮರಲ್ಲಿ ಮನೆಮಾಡಿರುವ ಹಳೆಗಾಯಗಳನ್ನು ಕೆದಕಿದಂತಾಗುತ್ತಿತ್ತು. ಕೈರಾನಾ ಕ್ಷೇತ್ರವನ್ನು ಆರ್ಎಲ್ಡಿಗೆ ಬಿಟ್ಟುಕೊಡಲಾಗಿತ್ತು. ಅದರ ವತಿಯಿಂದ ಸ್ಪರ್ಧಿಸಿದ್ದ ತಬಸ್ಸುಮ್ ಬೇಗಂ ಅವರ ಕುಟುಂಬವು ಬಿಜೆಪಿಯನ್ನು ಹೊರತುಪಡಿಸಿ ಮಿಕ್ಕೆಲ್ಲ ಪಕ್ಷಗಳೊಂದಿಗೂ ಸಂಬಂಧವನ್ನು ಹೊಂದಿತ್ತು.
ಆಕೆಯನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡುವ ಮೂಲಕ ವಿರೋಧ ಪಕ್ಷಗಳು ಅದರಲ್ಲೂ ಆರ್ಎಲ್ಡಿ ಪಕ್ಷವು ಎರಡು ಸಂದೇಶಗಳನ್ನು ನೀಡಿತ್ತು: ಒಬ್ಬ ಮುಸ್ಲಿಂ ಅಭ್ಯರ್ಥಿಯನ್ನು ಆಯ್ಕೆ ಮಾಡಿದರೆ ಮುಸ್ಲಿಂ ಮತಗಳನ್ನು ಒಂದೆಡೆಗೆ ಕ್ರೋಡೀಕರಿಸಿದರೂ ಇದಕ್ಕೆ ವಿರುದ್ಧವಾಗಿ ಜಾತಿ-ಉಪಜಾತಿಗಳ ಎಲ್ಲೆಗಳನ್ನೂ ಮೀರಿ ಹಿಂದೂ ಓಟುಗಳು ಪ್ರತಿ ಧ್ರುವೀಕರಣವಾಗಿಬಿಡುತ್ತವೆ ಎಂಬ ತಿಳುವಳಿಕೆಯು ತಪ್ಪೆಂದು ಸವಾಲು ಹಾಕಲು ಸಿದ್ಧರಿದ್ದೇವೆ ಎಂಬುದು ಮೊದಲನೆಯದು. ಎರಡನೆಯದಾಗಿ ತಬಸ್ಸುಮ್ ಅವರು ಹಿಂದುಳಿದ ಗುಜ್ಜಾರ್ ಜಾತಿಗೆ ಸೇರಿದವರಾಗಿದ್ದಾರೆ. ಅವರಿಗೆ ಸ್ಥಾನವನ್ನು ಕೊಡುವ ಮೂಲಕ ತಮ್ಮ ಆರ್ಎಲ್ಡಿ ಪಕ್ಷ ಕೇವಲ ಜಾಟರಿಗೆ ಮಾತ್ರ ಸೇರಿದ್ದಲ್ಲವೆಂಬ ಸಂದೇಶವನ್ನೂ ಸಹ ನೀಡಲಾಗಿದೆ. ಅದೇನೇ ಇರಲಿ, ಚುನಾವಣೆಯಲ್ಲಿ ಸೋತರೂ ಸಹ ಬಿಜೆಪಿಯು ಎರಡು ಕ್ಷೇತ್ರಗಳಲ್ಲಿ ಉತ್ತಮ ಪ್ರಮಾಣದ ಮತಗಳನ್ನೇ ಪಡೆದುಕೊಂಡಿದ್ದು ಪಶ್ಚಿಮ ಉತ್ತರಪ್ರದೇಶದಲ್ಲಿ ಅದಿನ್ನೂ ಶಕ್ತಿಯುತವಾಗಿಯೇ ಇದೆ ಎಂಬುದನ್ನು ಕೂಡಾ ಸಾಬೀತುಪಡಿಸಿದೆ.
ಚುನಾವಣೆಯಲ್ಲಿ ಅಜಿತ್ ಸಿಂಗ್ ಮತ್ತು ಜಯಂತ್ ಚೌಧರಿಯವರು ಮನೆ-ಮನೆಗೆ ಹೋಗಿ ಮತ ಯಾಚಿಸುವ ಹಳೆಯ ಸಾಂಪ್ರದಾಯಿಕ ಪದ್ಧತಿಗೆ ಮರಳಿದ್ದರು. ತಮ್ಮ ಪ್ರಚಾರದಲ್ಲಿ ಅವರು ರಾಷ್ಟ್ರೀಯ ವಿಷಯಗಳಿಗಿಂತ ಪ್ರಾದೇಶಿಕ ವಿಷಯಗಳಿಗೇ ಹೆಚ್ಚು ಒತ್ತು ಕೊಟ್ಟರು. ಸರಕಾರಿ ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ಕೊಡಬೇಕಿದ್ದ ಹಣವನ್ನು ದೀರ್ಘಕಾಲದಿಂದ ಪಾವತಿಸದೆ ವಿಳಂಬ ಮಾಡುತ್ತಿರುವುದರಿಂದ ರೈತಾಪಿಯಲ್ಲಿ ಹುಟ್ಟಿಕೊಂಡಿರುವ ಆಕ್ರೋಶಕ್ಕೆ ಅವರು ಧ್ವನಿಯಾದರು. 2017ರ ಚುನಾವಣೆಯಲ್ಲಿ ಬಿಜೆಪಿಯು ತನ್ನ ಪ್ರಣಾಳಿಕೆಯಲ್ಲಿ ಕಬ್ಬನ್ನು ಕಾರ್ಖಾನೆಗೆ ಮಾರಿದ 14 ದಿನಗಳ ಒಳಗೆ ಹಣವನ್ನು ಪಾವತಿ ಮಾಡುವುದಾಗಿ ಭರವಸೆ ನೀಡಿತ್ತು. ಇಂಥಾ ಒಂದು ಕಾನೂನು 1953ರ ಉತ್ತರಪ್ರದೇಶ ಕಬ್ಬು ಸರಬರಾಜು ನಿಯಂತ್ರಣ ಮತ್ತು ಖರೀದಿ ಕಾಯ್ದೆಯಲ್ಲೇ ಅಡಕವಾಗಿದ್ದರೂ ಬಿಜೆಪಿಯು ತನ್ನ ಭರವಸೆಯನ್ನು ಕ್ರಾಂತಿಕಾರಕ ಎಂದು ಬಣ್ಣಿಸಿಕೊಂಡಿತ್ತು.
2017-18ರ ಕೃಷಿ ಅವಧಿಯಲ್ಲಿ ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ನೀಡಬೇಕಿದ್ದ 23,319 ಕೋಟಿ ರೂ.ಗಳಲ್ಲಿ ಇನ್ನೂ 6691 ಕೋಟಿ ರೂ.ಗಳನ್ನು ಪಾವತಿ ಮಾಡದೆ ಬಾಕಿ ಉಳಿಸಿಕೊಂಡಿವೆ. ಈ ಮಧ್ಯೆ ಬಿಜೆಪಿಯು ಇವೆಲ್ಲವನ್ನು ಬಿಟ್ಟು ಅಲಿಗಡ ಮುಸ್ಲಿಂ ವಿಶ್ವವಿದ್ಯಾನಿಲಯದಲ್ಲಿ ಈಗಲೂ ತೂಗುಹಾಕಲ್ಪಟ್ಟಿರುವ ಮುಹಮ್ಮದ್ ಅಲಿ ಜಿನ್ನಾ ಅವರ ಚಿತ್ರದ ಬಗ್ಗೆ ದೊಡ್ಡ ಘರ್ಷಣೆಯನ್ನೇ ಹುಟ್ಟುಹಾಕಿತು. ಅದನ್ನು ಹಂಗಿಸುತ್ತಾ ಆರ್ಎಲ್ಡಿಯು ತನ್ನ ಇಡೀ ಪ್ರಚಾರದ ಘೋಷಣೆಯನ್ನು ‘ಗನ್ನಾ (ಕಬ್ಬು) ಅಥವಾ ಜಿನ್ನಾ’ ಎಂದು ಪರಿಣಾಮಕಾರಿಯಾಗಿ ಮುಂದಿಟ್ಟಿತು. ಇಂದು ಉತ್ತರಪ್ರದೇಶದಲ್ಲಿ ಸ್ಥಾನಗಳ ಅಂಕಗಣಿತವು ಬಿಜೆಪಿಯೇತರ ಐಕ್ಯರಂಗದ ಪರವಾಗಿದೆ.
ಆದರೆ ವಿರೋಧಪಕ್ಷಗಳು ಕೇಂದ್ರ ಮತ್ತು ಉತ್ತರಪ್ರದೇಶದ ಸರಕಾರಗಳು ಆರ್ಥಿಕತೆಯನ್ನು ಮತ್ತು ಕೃಷಿ ಕ್ಷೇತ್ರವನ್ನು ಹದಗೆಡಿಸಿರುವುದನ್ನು ಆಧರಿಸಿ ಪ್ರಚಾರಾಂದೋಲನ ಮಾಡಬೇಕೆಂದಿದ್ದರೆ ಒಂದು ಪರ್ಯಾಯವಾದ ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನು ರೂಪಿಸಿಕೊಳ್ಳಬೇಕಾಗುತ್ತದೆ. ಇದು ಒಂದೆಡೆ ಭೂ ಒಡೆಯರಾದ ಪ್ರಬಲರಾದ ಜಾಟರು ಹಾಗೂ ಹಿಂದುಳಿದ ಯಾದವ್ ಮತ್ತು ಗುಜ್ಜರ್ಗಳು ಹಾಗೂ ಮತ್ತೊಂದೆಡೆ ಅಷ್ಟೇನೂ ಪ್ರಬಲರಲ್ಲದ ಭೂಹೀನ ದಲಿತರ ನಡುವೆ ಸಾಂಪ್ರದಾಯಿಕವಾಗಿ ಮುಂದುವರಿದುಕೊಂಡು ಬಂದಿರುವ ಭೂ ಒಡೆತನ ಮತ್ತು ಕೃಷಿ ಕೂಲಿಗಳ ನಡುವಿನ ವೈರುಧ್ಯಗಳನ್ನು ಮುನ್ನೆಲೆಗೆ ತರುತ್ತದೆ. ಅಷ್ಟು ಮಾತ್ರವಲ್ಲದೆ ಭವಿಷ್ಯದ ಬೆಳವಣಿಗೆಗಳು ಮಾಯಾವತಿಯವರು ಅಂತಿಮವಾಗಿ ಯಾವ ನಿಲುವನ್ನು ತೆಗೆದುಕೊಳ್ಳುತ್ತಾರೆ ಎಂಬುದನ್ನೂ ಮತ್ತು ಚುನಾವಣಾ ಪೂರ್ವ ಮೈತ್ರಿಗಳು ರೂಪುಗೊಳ್ಳುವಾಗ ಹಿಂದುತ್ವದ ಪ್ರತಿಪಾದಕರನ್ನು ದೂರವಿಡುವಲ್ಲಿ ವಿರೋಧಪಕ್ಷಗಳು ಎಷ್ಟು ಜಾಣ್ಮೆ ಮತ್ತು ಮುತ್ಸದ್ದಿತನವನ್ನು ತೋರಬಲ್ಲವು ಎಂಬುದನ್ನೂ ಸಹ ಅವಲಂಬಿಸಿರುತ್ತದೆ.
ಕೃಪೆ: Economic and Political Weekly