ವಿಧಾನ ಪರಿಷತ್ ನೈರುತ್ಯ ಕ್ಷೇತ್ರ: ಖಾತೆ ತೆರೆದ ಜೆಡಿಎಸ್; ಮತ್ತೆ 'ಕೈ' ಸುಟ್ಟುಕೊಂಡ ಕಾಂಗ್ರೆಸ್
ಶಿವಮೊಗ್ಗ, ಜೂ. 13: ವಿಧಾನ ಪರಿಷತ್ ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಫಲಿತಾಂಶ ಪ್ರಕಟವಾಗಿದೆ. ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ಎರಡೂ ಕ್ಷೇತ್ರಗಳಲ್ಲಿಯೂ ಮತ್ತೆ 'ಕೈ' ಸುಟ್ಟುಕೊಂಡಿದೆ. ಆ ಪಕ್ಷದ ಸೋಲಿನ ಸರಪಳಿ ಮುಂದುವರಿದಿದೆ.
ಈ ಎರಡೂ ಕ್ಷೇತ್ರಗಳು ಬಿಜೆಪಿಯ ಭದ್ರ ಕೋಟೆಯೆಂದೇ ಬಿಂಬಿತವಾಗಿದ್ದವು. ಮತ್ತೊಂದೆಡೆ ವಿಧಾನಸಭೆ ಚುನಾವಣೆಯಲ್ಲಿ ನೈರುತ್ಯ ಕ್ಷೇತ್ರ ವ್ಯಾಪ್ತಿಯ 30 ಕ್ಷೇತ್ರದಲ್ಲಿ 27 ಕಡೆ ಆ ಪಕ್ಷದ ಅಭ್ಯರ್ಥಿಗಳು ಜಯ ಸಾಧಿಸಿದ್ದರು. ಇದರಿಂದ ಎರಡೂ ಕ್ಷೇತ್ರದಲ್ಲಿ ನಿರಾಯಾಸವಾಗಿ ಜಯ ಸಾಧಿಸುವ ಆತ್ಮವಿಶ್ವಾಸ ಆ ಪಕ್ಷದ ನಾಯಕರಲ್ಲಿತ್ತು. ಆದರೆ ಎರಡೂ ಕಡೆಯೂ ಬಿಜೆಪಿ ಪ್ರಬಲ ಪೈಪೋಟಿ ಎದುರಿಸುವಂತಾಯಿತು. ಕಾಂಗ್ರೆಸ್ ಎದುರು ಭಾರೀ ಹೋರಾಟ ನಡೆಸಿ, ಪದವೀಧರ ಕ್ಷೇತ್ರ ಉಳಿಸಿಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿದೆಯಾದರೂ, ಶಿಕ್ಷಕರ ಕ್ಷೇತ್ರದ ಮೇಲಿದ್ದ ತನ್ನ ಬಿಗಿ ಹಿಡಿತ ಕಳೆದುಕೊಂಡಿದೆ. ಜೆಡಿಎಸ್ ಎದುರು ಪರಾಭವಗೊಂಡಿದೆ. ಇದರಿಂದ ನೈರುತ್ಯ ಕ್ಷೇತ್ರದಲ್ಲಿ ಏಕಕಾಲಕ್ಕೆ ಗೆಲುವು ಸೋಲಿನ ಸಹಿ-ಕಹಿ ಅನುಭವಕ್ಕೆ ಬಿಜೆಪಿ ಸಾಕ್ಷಿಯಾಗಿದೆ.
ಮತ್ತೊಂದೆಡೆ ಕ್ಷೇತ್ರ ವ್ಯಾಪ್ತಿಯ 30 ವಿಧಾನಸಭಾ ಕ್ಷೇತ್ರಗಳಲ್ಲಿ ಎಲ್ಲಿಯೂ ಜೆಡಿಎಸ್ ಪಕ್ಷದ ಶಾಸಕರಿಲ್ಲ. ಸಂಘಟನೆಯ ವಿಷಯದಲ್ಲಿ ಬಿಜೆಪಿ-ಕಾಂಗ್ರೆಸ್‍ಗೆ ಹೋಲಿಸಿದರೆ, ಅತ್ಯಂತ ದುರ್ಬಲ ಸ್ಥಿತಿಯಲ್ಲಿ ಆ ಪಕ್ಷವಿದೆ. ಆದರೆ ಬಿಜೆಪಿ ಭದ್ರ ಕೋಟೆಯಾಗಿದ್ದ ಶಿಕ್ಷಕರ ಕ್ಷೇತ್ರ ಕೈ ವಶ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಗೆಲುವಿನ ನಗೆ ಬೀರಿದೆ.
ಇದೇ ಪ್ರಪ್ರಥಮ ಬಾರಿಗೆ ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್ ತನ್ನ ಖಾತೆ ತೆರೆದಿರುವುದು, ಆ ಪಕ್ಷದಲ್ಲಿ ಹೊಸ ಸಂಚಲನ ಉಂಟು ಮಾಡಿದೆ. ವಿಧಾನಸಭೆ ಚುನಾವಣೆ ಸೋಲಿನ ಸರಪಳಿಯಿಂದ ಹೊರಬರುವಂತಾಗಿಸಿದೆ. ಇನ್ನೊಂದೆಡೆ ಈ ಕ್ಷೇತ್ರದಲ್ಲಿ ಗೆದ್ದೇ ಗೆಲ್ಲುವ ನಿರೀಕ್ಷೆಯಲ್ಲಿದ್ದ ಬಿಜೆಪಿ, ತೀವ್ರ ಮುಖಭಂಗಕ್ಕೀಡಾಗುವಂತಾಗಿದೆ
ಉಳಿದಂತೆ ಕಾಂಗ್ರೆಸ್ ಪಕ್ಷಕ್ಕೆ ಈ ಚುನಾವಣೆಯು ಹೊರೆಯಾಗಿ ಪರಿಣಮಿಸಿದೆ. ವಿಧಾನಸಭೆ ಚುನಾವಣೆಯಲ್ಲಿ ಕೇವಲ 3 ಕಡೆ ಆ ಪಕ್ಷದ ಶಾಸಕರು ಆಯ್ಕೆಯಾಗಿದ್ದರು. ಇದರ ಹೊರತಾಗಿಯೂ ಪದವೀಧರ ಕ್ಷೇತ್ರದಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿತ್ತು. ಈ ಕ್ಷೇತ್ರದಲ್ಲಿನ ಬಿಜೆಪಿಯ ಗೆಲುವಿನ ನಾಗಾಲೋಟಕ್ಕೆ ಕಡಿವಾಣ ಹಾಕುವ ಉಮೇದಿನಲ್ಲಿತ್ತು. ಇದಕ್ಕಾಗಿ ಕಳೆದ ಒಂದು ವರ್ಷದ ಹಿಂದೆಯೇ ಕ್ಷೇತ್ರದ ಅಭ್ಯರ್ಥಿ ಹೆಸರು ಘೋಷಣೆ ಮಾಡಿತ್ತು. ವ್ಯಾಪಕ ತಯಾರಿ ನಡೆಸಿತ್ತು. ಇದೆಲ್ಲದರ ಹೊರತಾಗಿಯೂ ಗೆಲುವು ಸಾಧ್ಯವಾಗದಿರುವುದು ಆ ಪಕ್ಷದ ನಾಯಕರಲ್ಲಿ ತೀವ್ರ ನಿರಾಸೆ ಉಂಟು ಮಾಡಿದೆ. ಉಳಿದಂತೆ ಶಿಕ್ಷಕರ ಕ್ಷೇತ್ರದಲ್ಲಿ ನಿರೀಕ್ಷಿಸಿದಂತೆ ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.
ಪದವೀಧರ ಕ್ಷೇತ್ರ: ಕಳೆದ 5 ಚುನಾವಣೆಗಳಿಂದ ಬಿಜೆಪಿ ಈ ಕ್ಷೇತ್ರದಲ್ಲಿ ಸತತ ಜಯ ಸಾಧಿಸಿಕೊಂಡು ಬಂದಿದೆ. ಹಾಲಿ ವಿಧಾನ ಪರಿಷತ್ ಸಭಾಪತಿ ಡಿ.ಹೆಚ್.ಶಂಕರಮೂರ್ತಿಯವರು ಐದು ಬಾರಿ ಕಣಕ್ಕಿಳಿದು ಗೆಲುವು ಸಾಧಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಈ ಬಾರಿ ಅವರು ಚುನಾವಣಾ ಕಣದಿಂದ ದೂರ ಉಳಿದಿದ್ದರು. ಅವರ ಪುತ್ರ ಡಿ.ಎಸ್.ಅರುಣ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಅಂತಿಮ ಕ್ಷಣದಲ್ಲಿ ಮಾಜಿ ಸಂಸದ ಆಯನೂರು ಮಂಜುನಾಥ್‍ಗೆ ಪಕ್ಷ ಟಿಕೆಟ್ ನೀಡಿತ್ತು.
ಇನ್ನೊಂದೆಡೆ ಕಾಂಗ್ರೆಸ್‍ನಿಂದ ಕಳೆದ ಬಾರಿ ಸ್ಪರ್ಧಿಸಿದ್ದ ಎಸ್.ಪಿ.ದಿನೇಶ್ ಅಭ್ಯರ್ಥಿಯಾಗಿದ್ದರು. ಬಿಜೆಪಿ-ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು. ಚುನಾವಣೆಗೆ ಸರಿಸುಮಾರು ಇನ್ನೂ ಒಂದು ವರ್ಷವಿರುವಂತೆ ಕಾಂಗ್ರೆಸ್ ಪಕ್ಷ ಎಸ್.ಪಿ.ದಿನೇಶ್ ಹೆಸರನ್ನು ಅಧಿಕೃತವಾಗಿ ಪ್ರಕಟಿಸಿತ್ತು. ಬಿಜೆಪಿಗೆ ಹೋಲಿಸಿದರೆ ಕಾಂಗ್ರೆಸ್ ಪಕ್ಷವು ಹಲವು ತಿಂಗಳ ಹಿಂದಿನಿಂದಲೇ, ಅತ್ಯಂತ ವ್ಯವಸ್ಥಿತವಾಗಿ ಚುನಾವಣಾ ಪೂರ್ವಭಾವಿ ಸಿದ್ದತೆ ಮಾಡಿಕೊಂಡು ಬಂದಿತ್ತು. ಬಿಜೆಪಿ ಭದ್ರ ಕೋಟೆ ಬೇಧಿಸುವ ನಿರೀಕ್ಷೆಯಲ್ಲಿತ್ತು. ಆದರೆ ಕೊನೆಗೂ ಬಿಜೆಪಿಗೆ ಶರಣಾಗಿದೆ.
ಶಿಕ್ಷಕರ ಕ್ಷೇತ್ರ: ಕಳೆದ ಎರಡು ಚುನಾವಣೆಗಳಲ್ಲಿ ಜಯ ಸಾಧಿಸಿದ್ದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್‍ರವರು ಈ ಚುನಾವಣೆಯಲ್ಲಿಯೂ ಬಿಜೆಪಿ ಅಭ್ಯರ್ಥಿಯಾಗಿ ಅಖಾಡಕ್ಕಿಳಿದಿದ್ದರು. ಹ್ಯಾಟ್ರಿಕ್ ಜಯದ ನಿರೀಕ್ಷೆಯಲ್ಲಿದ್ದರು. ಪಕ್ಷದ ಸಂಘಟನೆ ಬಲಿಷ್ಠವಾಗಿರುವ ಕಾರಣದಿಂದ ಈ ಕ್ಷೇತ್ರದಲ್ಲಿ 5 ನೇ ಜಯ ನಿಶ್ಚಿತವೆಂಬ ಆತ್ಮವಿಶ್ವಾಸದಲ್ಲಿ ಬಿಜೆಪಿ ನಾಯಕರಿದ್ದರು.
ಇನ್ನೊಂದೆಡೆ ಕಳೆದ ಬಾರಿಯ ಚುನಾವಣೆಯಲ್ಲಿ ಪದವೀಧರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಅಖಾಡಕ್ಕಿಳಿದಿದ್ದ ಭೋಜೇಗೌಡರವರು, ಈ ಬಾರಿ ಶಿಕ್ಷಕರ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಬಿಜೆಪಿ-ಜೆಡಿಎಸ್ ನಡುವೆ ನೇರ ಪೈಪೋಟಿ ಏರ್ಪಟ್ಟಿತ್ತು. ಕಾಂಗ್ರೆಸ್ ಅಭ್ಯರ್ಥಿ ಅಖಾಡದಲ್ಲಿದ್ದರೂ ಪೈಪೋಟಿಯಿರಲಿಲ್ಲ. ಬಿಜೆಪಿಯ ಎಲ್ಲ ಲೆಕ್ಕಾಚಾರ ತಲೆಕೆಳಗಾಗುವಂತೆ ಮಾಡಿದ ಜೆಡಿಎಸ್ ಪಕ್ಷವು, ಜಯದ ಪತಾಕೆ ಹಾರಿಸುವ ಮೂಲಕ ಶಾಕ್ ನೀಡಿದೆ.
ಒಟ್ಟಾರೆ ವಿಧಾನ ಪರಿಷತ್ ನೈರುತ್ಯ ಪದವೀಧರ - ಶಿಕ್ಷಕರ ಕ್ಷೇತ್ರಗಳಲ್ಲಿ, ಈ ಹಿಂದೆ ನಡೆದ ಚುನಾವಣೆಗಳಿಗೆ ಹೋಲಿಸಿದರೆ ಈ ಬಾರಿ ನಡೆದ ಚುನಾವಣೆಯು ಸಾಕಷ್ಟು ಪೈಪೋಟಿ ಏರ್ಪಟ್ಟಿತ್ತು. ಜಿದ್ದಾಜಿದ್ದಿನ ಸ್ಪರ್ಧೆಗೆ ಸಾಕ್ಷಿಯಾಗಿತ್ತು. ಮಳೆಗಾಲದಲ್ಲಿಯೂ ಚುನಾವಣಾ ಕಣ ಕಾವೇರುವಂತೆ ಮಾಡಿತ್ತು.
6 ನೇ ಬಾರಿ ಗೆಲುವು.. 5 ನೇ ಬಾರಿ ಸೋಲು..!
ವಿಧಾನ ಪರಿಷತ್ ನೈರುತ್ಯ ಪದವೀಧರ ಕ್ಷೇತ್ರದಲ್ಲಿ, 1987 ರಿಂದ 2011 ರವರೆಗೆ 5 ಚುನಾವಣೆಗಳಲ್ಲಿ ಬಿಜೆಪಿ ಪಕ್ಷದಿಂದ ಡಿ.ಹೆಚ್.ಶಂಕಮೂರ್ತಿ ಕಣಕ್ಕಿಳಿದು ಸತತ ಜಯ ಸಾಧಿಸಿಕೊಂಡು ಬಂದಿದ್ದರು. ಈ ಬಾರಿ ಆ ಪಕ್ಷದಿಂದ ಕಣಕ್ಕಿಳಿದಿದ್ದ ಆಯನೂರು ಮಂಜುನಾಥ್‍ರವರು ಜಯ ಸಂಪಾದಿಸಿದ್ದು, ಇದು ಬಿಜೆಪಿಯ 6 ನೇ ಗೆಲುವಾಗಿದೆ. ಉಳಿದಂತೆ ಕಳೆದ ನಾಲ್ಕು ಚುನಾವಣೆಗಳಲ್ಲಿ ಶಿಕ್ಷಕರ ಕ್ಷೇತ್ರದಲ್ಲಿ ಸತತ ಜಯ ಸಂಪಾದಿಸಿಕೊಂಡು ಬಂದಿದ್ದ ಬಿಜೆಪಿಯು, 5 ನೇ ಬಾರಿ ಮುಗ್ಗರಿಸಿದೆ. ತನ್ನ ಹಿಡಿತ ಕಳೆದುಕೊಂಡಿದೆ.
ಮತ ಲೆಕ್ಕಾಚಾರ
ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿಯ ವಿಜೇತ ಅಭ್ಯರ್ಥಿ ಆಯನೂರು ಮಂಜುನಾಥ್‍ರವರು 22,600 ಮತ ಗಳಿಸಿದ್ದರೆ, ಅವರ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‍ನ ಎಸ್.ಪಿ.ದಿನೇಶ್‍ರವರು 13,102 ಮತ ಪಡೆದಿದ್ದಾರೆ. ಒಟ್ಟಾರೆ ಆಯನೂರು ಮಂಜುನಾಥ್‍ರವರು 9498 ಮತಗಳ ಅಂತರದಲ್ಲಿ ಜಯ ಸಾಧಿಸಿದ್ದಾರೆ. ಉಳಿದಂತೆ ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್‍ನ ವಿಜೇತ ಅಭ್ಯರ್ಥಿ ಎಸ್.ಎಲ್.ಭೋಜೇಗೌಡರವರು 8647 ಮತ ಪಡೆದರೆ, ಅವರ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಗಣೇಶ್ ಕಾರ್ಣಿಕ್‍ರವರು 5812 ಮತ ಗಳಿಸಲಷ್ಟೆ ಶಕ್ತರಾಗಿದ್ದಾರೆ.