ಇದುವರೆಗೂ ನಿಮ್ಮ ಅಧಿಕಾರದಡಿಯಲ್ಲಿ ನಮಗೆ ಅಪಮಾನವೇ ಆಗಿದೆ
ಭಾಗ-4
ಯಾರು ನಮ್ಮನ್ನು ದೇಶದ್ರೋಹಿ ಎಂದು ಹೇಳುತ್ತಾರೋ ಅವರು ಮೊದಲು ಈ ಪ್ರಶ್ನೆಗಳಿಗೆ ಉತ್ತರ ನೀಡಲಿ, ಅಮೇಲೆ ಅಸ್ಪಶ್ಯರ ಮೇಲೆ ಸ್ವಾಭಿಮಾನಶೂನ್ಯತೆಯ ಮುದ್ರೆಯನ್ನು ಒತ್ತುವವರು ಮುಂದೆ ಬರಲಿ. ಬ್ರಹ್ಮದ್ವೇಷ, ದೇಶದ್ರೋಹ ಮುಂತಾದ ಖಾಯಂ ಠಸ್ಸೆಯ ಆರೋಪಗಳಿಂದ ಬೆದರಿ ಓಡುವ ನಾಜೂಕು ಪ್ರಕೃತಿಯಲ್ಲಿಲ್ಲ ಈಗ ಅಸ್ಪಶ್ಯರು. ನಮ್ಮ ಇರುವನ್ನು ಮತ್ತು ನಮ್ಮ ವಿಶ್ವಾಸವನ್ನು ನೀವು ಗಳಿಸಿದ ಮೇಲೆ ನಾವು ನಮ್ಮವರಾಗಬಹುದು ಮತ್ತು ನಮಗೆ ಕೊಡಬಹುದು. ಅಲ್ಲಿಯವರೆಗೆ ನಮ್ಮ ಮಾರ್ಗ ನಮ್ಮ ಸ್ವಾತಂತ್ರದ ಕಡೆಗೇ ಇರುತ್ತದೆ. ನಮಗೆ ಯಾರಲ್ಲೂ ದ್ವೇಷ ಇಲ್ಲ. ಆದರೆ ನಮ್ಮ ದ್ವೇಷಿಗಳು ಯಾರು ಎನ್ನುವುದು ಮಾತ್ರ ನಾವು ಗುರುತಿಸಬಲ್ಲವರಾಗಿದ್ದೇವೆ. ಅವರ ಸಾಮಾಜಿಕ ಅತಿಕ್ರಮಣವನ್ನು ಚಾವಡಿಯಲ್ಲಿಟ್ಟರೆ ಆ ಅತಿಕ್ರಮಣದಿಂದ ನಮ್ಮನ್ನು ನಾವು ಸಂರಕ್ಷಿಸಿಕೊಳ್ಳಲು ನಮಗೆ ರಾಜಕೀಯ ಅಧಿಕಾರದ ಸಾಕಷ್ಟು ಅಂಶಗಳನ್ನು ನೀಡಿ, ಎಂದು ಹೇಳಿದರೆ ಅದು ಬ್ರಹ್ಮದ್ವೇಷ, ದೇಶದ್ರೋಹ ಆಗುವುದಾದರೆ ಅದನ್ನು ಮಾಡುವುದೇ ನಮ್ಮ ಪವಿತ್ರ ಕರ್ತವ್ಯವೆಂದು, ನಾವು ತಿಳಿಯುತ್ತೇವೆ.
ಬ್ರಾಹ್ಮಣ್ಯವೆಂದರೆ ಬಹುಜನ ಸಮಾಜದ ಅಜ್ಞಾನದ ಮೇಲೆ ಆಧರಿಸಿದ ಜತಿ ವರ್ಚಸ್ಸು
1. ಹಿಂದಿ ಸ್ವಾತಂತ್ರ ಸಂಘದಲ್ಲಿ ಬಂಗಾಳ ಮತ್ತು ಮಹಾರಾಷ್ಟ್ರದಂತಹ ಎರಡು ಶಾಖೆಗಳ ಘೋಷಣೆಯನ್ನು ನಾವು ಈ ಅಂಕದಲ್ಲಿ ಬೇರೆ ಕಡೆ ಪ್ರಚುರಪಡಿಸಿದ್ದೆವು. ಈ ಘೋಷಣೆ ಯನ್ನು ವಾಚಕರು ತುಲನಾತ್ಮಕ ದೃಷ್ಟಿಯಿಂದ ಓದಿ ನೋಡಿದರೆ ಸಾಕಷ್ಟು ತಿಳುವಳಿಕೆಯುಂಟಾಗುತ್ತದೆ. ಹಿಂದಿ ಸ್ವಾತಂತ್ರ ಸಂಘದ ಮೂಲ ಉತ್ಪಾದಕರು ಪಂಡಿತ ಜವಾಹರಲಾಲ್ ನೆಹರೂ ಅವರು ರಾಜಕೀಯ ಬಾಬ್ತ್ತಿನಲ್ಲಿ ಎಷ್ಟು ಊರ್ಧ್ವಗಾಮಿಯೋ ಅಷ್ಟೇ ಸಾಮಾಜಿಕ ಕ್ಷೇತ್ರದಲ್ಲಿ ಮೂಲಗಾಮಿಯಾಗಿದ್ದಾರೆ. ಆದರೆ ಅವರ ಅನುಯಾಯಿಗಳ ದೃಷ್ಟಿಕೋನದಲ್ಲಿ ಪ್ರತಿಯೊಂದು ಪ್ರಾಂತವೂ ಪರಿಸ್ಥಿತಿಗನುಗುಣವಾಗಿ ಬದಲಾಗುತ್ತದೆ. ಪ್ರಸ್ತುತದಲ್ಲಿ ಘೋಷಣೆಗಳ ಪೈಕಿ ಬಂಗಾಳ ಶಾಖೆಯ ಘೋಷಣೆ ಹೆಚ್ಚಾಗಿ ಪಂಡಿತ್‌ಜೀಯ ತತ್ವಗಳ ಮೇಲೆ ನಿಂತಿದೆ. ಆದರೆ ಮಹಾರಾಷ್ಟ್ರ ಶಾಖೆಯ ಘೋಷಣೆ ಲಕ್ಷಗೊಟ್ಟು ಓದಿ ನೋಡಿದರೆ, ಮಹಾರಾಷ್ಟ್ರದ ತಿಲಕ್-ಚಿಪ್ಳೂಣಕರ್ ಪರಂಪರೆಯ ಮೇಲೆ ಹೋಗಿರುವುದು ಕಂಡುಬರುತ್ತದೆ.
2. ಈ ತಿಲಕ್ -ಚಿಪ್ಳೂಣಕರ್ ಅಲೆ ರಾಜಕೀಯ ಸುಧಾರಣೆಯನ್ನು ಪುರಸ್ಕರಿಸಿ, ಸಮಾಜ ಸುಧಾರಣೆಗೆ ವಿರೋಧವಾಗಿ ಪ್ರಸಿದ್ಧಿ ಹೊಂದಿದೆ. ಅಗರ್ಕರ್ ಅಂಥ ಸುಧಾರಕರು ಆರಂಭಿಸಿದ ಸಮಾಜ ಸುಧಾರಣೆಯ ಪ್ರಯತ್ನವನ್ನು ತಿಲಕರು ಬೇಕು ಬೇಡವೆನ್ನುವಂತೆ ತಮಗೆ ಸಾಧ್ಯವಾದಷ್ಟೂ ವಿರೋಧಿಸಿದರು. ಅಗರ್ಕರ್ ಪ್ರಯತ್ನ ತುಂಬಾ ಕಡಿಮೆ ಇತ್ತು. ಅವರ ಕಾರ್ಯಕ್ಷೇತ್ರದ ವ್ಯಾಪ್ತಿ, ಬ್ರಾಹ್ಮಣ ಸಮಾಜದ ಮಟ್ಟಿಗೆ ಮಾತ್ರ ಇತ್ತು. ಸಮಾಜದ ಕೆಳಸ್ತರದ ಸ್ಥಿತಿಗತಿಗಳ ಬಗ್ಗೆ ಅವರು ಪ್ರಯತ್ನವನ್ನೇ ಮಾಡಲಿಲ್ಲ. ಆದರೂ ಸಹ ತಿಲಕರು ಅದರ ಮೇಲೆ ವಿರೋಧಾಸ್ತ್ರವನ್ನು ಎತ್ತಿದರು. ಸಾಮಾಜಿಕ ಪ್ರಶ್ನೆಯ ಮೇಲೆ ಅವರು ಸಹಿ ಮಾಡಲು ಸಿದ್ಧರಿರಲಿಲ್ಲ. ಸಹಭೋಜನದಲ್ಲಿ ಜಾತಿಯ ಜಗಳ ಮುಗಿಯುವುದಾದರೆ, ಒಂದೇ ತಟ್ಟೆಯಲ್ಲಿ ಉಣ್ಣುವ ಒಬ್ಬ ತಾಯಿಯ ಮಕ್ಕಳು ಯಾಕೆ ಜಗಳಾಡಬೇಕು ಎಂದು ವಕೀಲಿ ಶೈಲಿಯಲ್ಲಿ ಅವರು ಕುಚೇಷ್ಟೆಯಿಂದ ಸಹಭೋಜನದ ಬಗ್ಗೆ ಟೀಕೆ ಮಾಡಿದ್ದರು. ಅವರ ಸುದೈವವೋ ಎಂಬಂತೆ ಬ್ರಾಹ್ಮಣೇತರ ವರ್ಗದಲ್ಲಿ ಯಾರೂ ಆ ಸಮಯದಲ್ಲಿ ಹೇಳುವಷ್ಟು ಎಚ್ಚೆತ್ತಿರಲಿಲ್ಲ. ಆದ್ದರಿಂದ ಅವರಿಗೆ ಅಡ್ಡ ಹಾಕುವಂತಹವರು ಯಾರೂ ಅವರನ್ನು ಭೇಟಿಯಾಗಲೇ ಇಲ್ಲ ಮತ್ತು ತಿಲಕರು ಮಾತನಾಡಿದರೆಂದರೆ, ಅಲ್ಲಲ್ಲಿ ಚಪ್ಪಾಳೆ ಗಿಟ್ಟುತ್ತಿತ್ತು. ತಿಲಕರು ಹೇಳಿದ್ದೇ ಬ್ರಹ್ಮವಾಕ್ಯ ಎಂದು ಗೌರವಿಸುವುದು ವಾಡಿಕೆಯಾಗಿ ಹೋಯಿತು. ಅಶಿಕ್ಷಿತ ಜನರ ಮೂಢತೆಯ ಲಾಭ ಪಡೆದು ತಿಲಕರು ಸೇರಿದಂತೆ ಎಲ್ಲರೂ ಅವರಿಗೆ ಬೇಕಾದ ಹಾಗೆ ಬಗ್ಗಿಸಿದರು. ಸಮಾಜ ಸುಧಾರಣೆಯ ಕೆಲಸ ರಾಷ್ಟ್ರೀಯತೆಯಲ್ಲ ಎನ್ನುವ ವಿಚಾರ ಸರಣಿಯನ್ನು ತಿಲಕರಂಥವರೇ ಪ್ರಚಲಿತ ಮಾಡಿದರು. ಯಾರು ತಿಲಕರ ಶಿಷ್ಯರೆನಿಸಿಕೊಳ್ಳ್ಳುವರೋ ಅವರ ವಿಚಾರ ಸರಣಿಯು ಹೀಗೇ ಇದೆ. ಕಾಲ ಬದಲಾದಂತೆ ಮತ್ತು ಹಿಂದುಳಿದ ವರ್ಗದಲ್ಲಿ ಜಾಗೃತಿ ಹೊಂದಿದುದರಿಂದ ಅವರಿಗೆ ತಮ್ಮ ನಿಲುವನ್ನು ಬದಲು ಮಾಡಿಕೊಳ್ಳಬೇಕಾಗಿದೆ. ಆದರೆ ಈ ಪರಂಪರೆಯ ಮೂಲ ಸ್ವಭಾವ ಮಾತ್ರ ಒಂದಿಷ್ಟೂ ಬದಲಾಗಿಲ್ಲ. ಅದು ಸಹಜವಾಗಿ ಬದಲಾಗುತ್ತದೆಂಬ ಆಸೆಯೂ ಇಲ್ಲ.
3. ಈ ಪರಂಪರೆಯ ಹಿಡಿತದಲ್ಲಿ ಯಾರು ಸಿಕ್ಕಿದರೂ, ಅವರು ಮನುಷ್ಯತ್ವದಿಂದ ದೂರವಾಗುವ ಅನುಭವ ಮೂಡುತ್ತದೆ. ಅವರು ಬ್ರಾಹ್ಮಣನಾಗಿರಲಿ, ಫಾರ್ಸಿಯಾಗಿರಲಿ, ಕ್ರಿಶ್ಚಿಯನ್ ಆಗಿರಲಿ, ದಲಿತ ಅಸ್ಪಶ್ಯವರ್ಗದವನೇ ಆಗಿರಲಿ, ಅವರು ರಾಜಕೀಯ ಸ್ವಾತಂತ್ರದ ಮೇಲೆ ಉದ್ದುದ್ದ ಮಾತಾಡುತ್ತಾರೆ. ಆದರೆ ಸಮಾಜ ಸುಧಾರಣೆಯ ಕ್ಷೇತ್ರದಲ್ಲಿ ಮಾತ್ರ ಅವರ ಮನಸ್ಸಿನ ವೇಗ ಸಾಗುವುದಿಲ್ಲ. ಉದಾಹರಣೆ ‘ಅ’ ಹೇಗೆ ನಾಲ್ಕು ಮೈಲಿ ಮುಂದೆ ಹೋಗಿ, ಹತ್ತು ಮೈಲಿ ಹಿಂದೆ ಬರುತ್ತಾನೆಯೋ ಅದರಂತೆ ನಡೆಯುತ್ತದೆ. ಸದ್ಯಕ್ಕೆ ಈ ಪರಂಪರೆಯು ಯಾವ ಹಿಂದೂ ಸಂಘಟನೆಯ ಚಳವಳಿ ನಡೆಸುತ್ತಿದೆಯೋ, ಅದರ ಮೇಲೆ ಈ ವಿಷಯ ಮನವರಿಕೆಯಾಗಿದೆ. ಹಿಂದೂ ಸಂಘಟನೆಯ ಕೆಲಸ ವಾಸ್ತವದಲ್ಲಿ ಪ್ರಗತಿಸೂಚಕವಾಗಿದೆ. ಆದರೆ ಈ ಪರಂಪರೆಯಿಂದ ಹಿಂದೂ ಸಂಘಟನೆಯ ನೆವದಲ್ಲಿ ಬ್ರಾಹ್ಮಣ ಧರ್ಮದ ಹಿಡಿತವನ್ನು ಹಿಂದೂ ಸಮಾಜದ ಮೇಲೆ ನಿರಂತರವಾಗಿಡಲು ಈ ಚಳವಳಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಆ ರೀತಿಯಲ್ಲಿ ಪ್ರಗತಿಯ ಬಾಲಂಗೋಚಿಯನ್ನು ಹಿಡಿದು, ಈ ಪರಂಪರೆ ಮಹಾರಾಷ್ಟ್ರದಲ್ಲಿ ಸಮಾಜ ಸುಧಾರಣೆಯ ಕೆಲಸವನ್ನು ಅತ್ಯಂತ ಕಷ್ಟಕರವಾಗಿಸಿದ್ದಾರೆ. ಬೇರೆ ಪ್ರಾಂತಗಳಲ್ಲಿ ಸುಧಾರಕರು ಸರಳವಾಗಿ ಮತ್ತು ಪ್ರಾಮಾಣಿಕತೆಯಿಂದ ಪುರಾಣಮತವಾದಗಳಿಗೆ ಜಗಳವಾಡಿದರೆ, ಮಹಾರಾಷ್ಟ್ರದ ಸುಧಾರಕರು ಪುರಾಣಮತವಾದಕ್ಕೆ ಮುಸುಕು ಹಾಕಿ ಚದುರಿಸುತ್ತಾರೆ. ಇಂಥ ಪರಂಪರೆಗೆ ಧಿಕ್ಕರಿಸುವ ಮಾರ್ಗವನ್ನು ತರಬೇಕಾಗಿದೆ. ಈ ಪರಂಪರೆಯ ದೆವ್ವಬಡಿದ ಜನ ಕಾಂಗ್ರೆಸ್ ಮಧ್ಯೆ ನುಸುಳುತ್ತಾರೆ. ಹಿಂದೂ ಸಭೆಯಲ್ಲಿ ಉಪಸ್ಥಿತರಿರುತ್ತಾರೆ, ಸ್ವಾತಂತ್ರ ಸಂಘದಲ್ಲಿ ನುಗ್ಗುತ್ತಾರೆ, ಅಲ್ಲೆಲ್ಲ ತಮ್ಮ ಬಾಲದ ಡೊಂಕುತನವನ್ನು ತೋರಿಸದೆ ಬಿಡುವುದಿಲ್ಲ. ಹಿಂದಿ ಸ್ವಾತಂತ್ರ ಸಂಘದಲ್ಲಿ ಮಹಾರಾಷ್ಟ್ರೀಯ ಶಾಖೆಯ ಘೋಷಣೆಯ ಮೇಲೆ ಈ ವಿಷಯ ಮನವರಿಕೆಯಾಗುತ್ತದೆ.
4. ಬಂಗಾಳ ಶಾಖೆಯ ಘೋಷಣೆಯಲ್ಲಿ ರಾಜಕೀಯ ಪಾರತಂತ್ರದ ಜೊತೆಗೆ, ಸಾಮಾಜಿಕ ದಾಸ್ಯತ್ವದ ಉಚ್ಚಾಟನೆಯ ಮೇಲೆ ಒತ್ತುಕೊಟ್ಟಿದ್ದರು. ಆದರೆ ಮಹಾರಾಷ್ಟ್ರ ಶಾಖೆಯು ಮಾತ್ರ ಈ ವಿಷಯದ ಮೂಕವಾಗಿದೆ. ಅಸ್ಪಶ್ಯ ಸಮಾಜಕ್ಕೆ ಸಾಮಾಜಿಕ ಹಕ್ಕು ಸಿಗಬೇಕು ಎನ್ನುವ ಒಂದು ಉದ್ದೇಶ ಈ ಸಂಘದ ಕಾರ್ಯಕ್ರಮದಲ್ಲಿ ನಮೂದಿಸಲಾಗಿದೆ. ಆದರೆ ಅಸ್ಪಶ್ಯ ಸಮಾಜ, ಸ್ವಂತಕ್ಕೆ ಸ್ವಲ್ಪ ರಾಜಕೀಯ ಸವಲತ್ತನ್ನು ಕೇಳಿದರೆ, ಆಗ ಮಾತ್ರ ಅವರನ್ನು ಜಾತಿನಿಷ್ಠ ಎಂದು ಹೇಳಿ ಅವರ ರೋಷಕ್ಕೆ ಗುರಿಯಾಗಬೇಕಾಗುತ್ತದೆ! ಕಾರಣವೇನೆಂದರೆ ಜಾತಿನಿಷ್ಠ ಚಳವಳಿಯನ್ನು ವಿರೋಧಿಸುವುದೇ ಈ ಸಂಘದ ಮುಖ್ಯ ಉದ್ದೇಶ. ಸ್ವಾತಂತ್ರ ಸಂಘದ ಪ್ರಣತಿಯನ್ನು ಹಚ್ಚಿದ ಜವಾಹರಲಾಲ್ ನೆಹರೂ ಅವರೇ ಜಾತಿನಿಷ್ಠ ಚಳವಳಿಯನ್ನು ವಿರೋಧಿಸುತ್ತಾರೆ. ಆದರೆ ಜಾತಿನಿಷ್ಠ ಚಳವಳಿಯ ಗುಂಪಿನಲ್ಲಿ ಅವರು ಅಸ್ಪಶ್ಯರ ಮತ್ತು ಬ್ರಾಹ್ಮಣೇತರರ ಚಳವಳಿಯನ್ನು ಸೇರಿಸುವುದಿಲ್ಲ. ಇದು ಸಾಮಾಜಿಕ ಹಕ್ಕಿನ ಚಳವಳಿ ಎಂದು ಅವರು ತಿಳಿದಿದ್ದಾರೆ. ಆದರೆ ತಿಲಕ್ ಪರಂಪರೆಯ ಮಹಾರಾಷ್ಟ್ರೀಯ ಸ್ವಾತಂತ್ರ ಸಂಘದ ಸಭಾಸದರಿಗೆ ಮಾತ್ರ ಇದು ತಿಳಿಯುವುದಿಲ್ಲ ಮತ್ತು ವಿಶೇಷವಾಗಿ ಗಮನಿಸುವ ಅಂಶವೆಂದರೆ ಈ ಸಂಘದ ಕೆಲವು ಸಭಾಸದರು ಬ್ರಾಹ್ಮಣಸಭೆಯ ಸಭಾಸದರೂ ಆಗಿದ್ದಾರೆ! ವಾಸ್ತವತೆಯಲ್ಲಿ ನಿಜವಾಗಿ ಜಾತಿನಿಷ್ಠ ಸಂಸ್ಥೆ ಯಾವುದೆಂದರೆ, ಅದು ಬ್ರಾಹ್ಮಣ ಸಭೆಯೇ ಆಗಿದೆ. ಬ್ರಾಹ್ಮಣೇತರ ಅಥವಾ ಅಸ್ಪಶ್ಯರ ಚಳವಳಿಯಲ್ಲಿ ಸ್ವಲ್ಪ ಜಾತೀಯತೆ ಇದ್ದರೆ ಅದು ಸಂರಕ್ಷಣ ಸ್ವರೂಪದಲ್ಲಿ ಮಾತ್ರ ಇದೆ. ನಮ್ಮ ಮಾನವೀಯ ಹಕ್ಕು ಬ್ರಾಹ್ಮಣೇತರರಿಗೆ ಮತ್ತು ಅಸ್ಪಶ್ಯರಿಗೆ ಸಿಗಬೇಕು. ಬೇರೆಯವರ ಹಕ್ಕನ್ನು ಕಿತ್ತುಕೊಂಡು ಅವರನ್ನು ತಮ್ಮ ದಾಸರನ್ನಾಗಿ ಮಾಡಿಕೊಲ್ಲುವುದು ಸರಿಯಲ್ಲ. ಆದರೆ ತಿಲಕ್ ಪರಂಪರೆಯ ದೃಷ್ಟಿಯಲ್ಲಿ ಈ ಸ್ವಂತ ಹಕ್ಕಿನ ಸಂಪಾದನೆ ಮತ್ತು ಅದರ ಸಂರಕ್ಷಣೆಯ ಚಳವಳಿ ಜಾತಿನಿಷ್ಠವೆಂದು ಹಣೆಪಟ್ಟಿ ಕಟ್ಟುತ್ತಾರೆ. ಮತ್ತು ಅವರ ಜಾತಿಶ್ರೇಷ್ಠತ್ವ ಅಸ್ಥಿರವಾಗಿ ಉರುಳಲು ಸಿದ್ಧವಿರುವುದನ್ನು ಸ್ಥಿರಗೊಳಿಸಲು, ಬ್ರಾಹ್ಮಣರೇ ಸ್ಥಾಪಿಸಿದ ಬ್ರಾಹ್ಮಣ ಸಭೆಯನ್ನು ಮಾತ್ರ ರಾಷ್ಟ್ರೀಯವೆನ್ನುತ್ತಾರೆ ! ಆದ್ದರಿಂದಲೇ ಬ್ರಾಹ್ಮಣ ಸಭೆಯ ಸಭಾಸದರು ಜಾತೀಯತೆಯ ಅಪಥ್ಯದ ಸ್ವಾತಂತ್ರ ಸಂಘದ ಸಭಾಸದರಾಗಬಹುದು! ಈ ಸಂಘದಲ್ಲಿ ತಿಲಕ್, ಚಿಪ್ಳೂಣಕರ್ ಪರಂಪರೆಯ ಮುದ್ರೆ ಇಲ್ಲದಿದ್ದರೆ, ಈ ಪ್ರಕಾರವಾಗುತ್ತಿರಲಿಲ್ಲ. ಡಾ.ರವೀಂದ್ರನಾಥ್ ಠಾಗೋರ್, ದೇಶಬಂಧು ದಾಸ್ ಮುಂತಾದವರು ಬಂಗಾಳ ಪ್ರಾಂತದ ಸ್ವಾತಂತ್ರ ಸಂಘದಲ್ಲಿ ಈ ರೀತಿ ನಡೆದಿಲ್ಲ. ಆ ಸಂಘಗಳು ಜಾತಿಬದ್ಧ ಪೌರೋಹಿತ್ಯದ ಮೇಲೆ ಪ್ರಹಾರ ಮಾಡಿದ್ದಾರೆಯೇ ಹೊರತು ಸಹಭೋಜನ ಮತ್ತು ಮಿಶ್ರ ವಿವಾಹದ ಮೂಲಕ ಸಮಾಜದ ಸಮಾನತೆಯನ್ನು ಪ್ರೋತ್ಸಾಹಿಸಿದ್ದಾರೆ. ಆದರೆ ಮಹಾರಾಷ್ಟ್ರೀಯ ಸ್ವಾತಂತ್ರ ಸಂಘವು ಈ ಪ್ರಶ್ನೆಯನ್ನು ನಾಜೂಕಾಗಿ ಪಕ್ಕಕ್ಕೆ ಸರಿಸಿದ್ದಾರೆ. ಕೆಲವು ಕನ್ನಡಿಗಳು ಹೇಗಿರುತ್ತವೆಂದರೆ ಅದರ ಪ್ರತಿಬಿಂಬ ಕಾಣುವುದಿದ್ದರೆ ಸರಳವಾಗುವುದಿಲ್ಲ, ಅಡ್ಡಾದಿಡ್ಡಿಯಾಗಿರುತ್ತದೆ. ಪಂ.ಜವಾಹರಲಾಲ್ ನೆಹರೂವಿನ ತತ್ವಗಳ ಸ್ಥಿತಿ ಮಹಾರಾಷ್ಟ್ರದಲ್ಲಿ ಹೀಗಾಗಿದೆ.
(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)