ಹೋರಾಟವೇ ನನ್ನನ್ನು ಉಳಿಸಿದ್ದು ಎಂದ ವೀರಸಂಗಯ್ಯ
ವಾರದ ವ್ಯಕ್ತಿ
ಬೆಂಗಳೂರು ಕೃಷಿ ವಿವಿ ಕ್ಯಾಂಪಸ್ನಲ್ಲೊಂದು ಪ್ರತಿಭಟನಾ ಧರಣಿ. ನೇತೃತ್ವ ವಹಿಸಿದ್ದವರು ರೈತನಾಯಕ ವೀರಸಂಗಯ್ಯನವರು. ಅವರ ಆರೋಗ್ಯ ಹದಗೆಟ್ಟು ಹತ್ತು ವರ್ಷಗಳಾಗಿವೆೆ. ಬಡವರು ಭರಿಸಲಾಗದ ಕಾಯಿಲೆಗೆ ತುತ್ತಾಗಿ ಸಂಸಾರ ತರಗೆಲೆಯಂತಾಗಿದೆ. ದೇಹದಲ್ಲಿ ಕಸುವು, ಜೇಬಿನಲ್ಲಿ ದುಡ್ಡು ಖಾಲಿಯಾಗಿ ಕಂಗಾಲಾಗಿದ್ದಾರೆ. ಇನ್ನೆಲ್ಲಿಯ ಹೋರಾಟ ಎಂಬುದು ಎಲ್ಲರ ಅಭಿಪ್ರಾಯವಾಗಿತ್ತು. ಅಂತಹ ಹೊತ್ತಲ್ಲಿ ಜಿಕೆವಿಕೆಯ ಪ್ರತಿಭಟನಾ ಧರಣಿಯಲ್ಲಿ ವೀರಸಂಗಯ್ಯ ನಿರತರಾಗಿದ್ದಾರೆಂಬ ಸುದ್ದಿ ಕೇಳಿ, ಖುದ್ದು ಅವರಿಗೇ ಫೋನಾಯಿಸಿದರೆ, ‘‘ನನ್ನ ಉಳಿಸಿರುವುದೇ ಈ ಹೋರಾಟ’’ ಎನ್ನುವುದೆ ಬಡಜೀವ.
1964ರಲ್ಲಿ ಹಗರಿಬೊಮ್ಮನಹಳ್ಳಿ ತಾಲೂಕಿನ ಪಿಂಜಾರ ಹೆಗಡಾಳು ಗ್ರಾಮದಲ್ಲಿ ಜನಿಸಿದ ವೀರಸಂಗಯ್ಯನವರು, ತಮ್ಮ ಬದುಕನ್ನೇ ಹೋರಾಟಕ್ಕಾಗಿ ಮುಡಿಪಾಗಿಟ್ಟವರು. ಸಂಘಟನೆ, ಚಳವಳಿ, ಹೋರಾಟ, ಪ್ರತಿಭಟನೆ, ಧರಣಿ, ಜಾಥಾ, ರ್ಯಾಲಿಗಳನ್ನೇ ಉಂಡುಟ್ಟು ಉಸಿರಾಡಿದವರು. ಪ್ರೊ.ಎಂ.ಡಿ.ನಂಜುಂಡ ಸ್ವಾಮಿಯವರ ಬೌದ್ಧಿಕ ಪ್ರಖರತೆಗೆ, ಖಚಿತ ಮಾತಿಗೆ, ವೈಚಾರಿಕ ನಿಲುವಿಗೆ, ರೈತರಲ್ಲಿ ತುಂಬುತ್ತಿದ್ದ ಧೈರ್ಯಕ್ಕೆ ಮಾರುಹೋಗಿ, ಅವರ ಶಿಷ್ಯರಾದವರು. ರೈತ ಸಂಘಟನೆಗಾಗಿ ಮನೆ ಮಠ ಬಿಟ್ಟು ರಾಜ್ಯದಾದ್ಯಂತ ಸುತ್ತಾಡಿದವರು. ರೈತ, ದಲಿತ, ಪ್ರಗತಿಪರ ಸಂಘಟನೆಗಳೊಂದಿಗೆ ಗುರುತಿಸಿಕೊಂಡವರು. ವ್ಯವಸ್ಥೆಯ ವಿರುದ್ಧ ಸೆಟೆದು ನಿಂತವರು. ದುರಂತವೆಂದರೆ, ಆ ಹೋರಾಟದ ಫಲವಾಗಿ ಅವರು ಕಿಡ್ನಿ ಕಳೆದುಕೊಂಡರು. ಆರೋಗ್ಯ ಹದಗೆಟ್ಟು, ಚಿಕಿತ್ಸೆಗೆ ಕಾಸಿಲ್ಲದೆ ಜಮೀನು ಮಾರಿ ಬೀದಿಗೆ ಬಿದ್ದರು. ಸಹಾಯಕ್ಕಾಗಿ ಸಂಘಸಂಸ್ಥೆಗಳನ್ನು, ಸರಕಾರವನ್ನು ಅಂಗಲಾಚಿದರು. ಈಗ ವೀರಸಂಗಯ್ಯನವರ ಮಡದಿ ಬೆಂಗಳೂರಿನ ಶ್ರೀರಾಮಪುರದಲ್ಲಿ ಪುಟ್ಟ ಮನೆಯೊಂದನ್ನು ಬಾಡಿಗೆ ಪಡೆದು, ರೊಟ್ಟಿ ಮಾರಿ ಬದುಕು ನೂಕುತ್ತಿದ್ದಾರೆ. ವಯಸ್ಸಿಗೆ ಬಂದ ಮಗ ಊರಿಗೆ ಹೋಗಿ, ಅಳಿದುಳಿದ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದಾನೆ. ವೀರಸಂಗಯ್ಯನವರು ಯಥಾಪ್ರಕಾರ, ಹೆಗಲ ಮೇಲೆ ಹಸಿರು ಟವೆಲ್ ಹಾಕಿಕೊಂಡು ಹೋರಾಟ ಮುಂದುವರಿಸಿದ್ದಾರೆ. ಬದ್ಧತೆ, ನೈತಿಕತೆ ಮತ್ತು ಪ್ರಾಮಾಣಿಕತೆಯನ್ನೇ ಉಸಿರಾಡಿ, ಹೋರಾಟಕ್ಕೊಂದು ಘನತೆ ತರುತ್ತಿದ್ದಾರೆ. ಇಂತಹವೀರಸಂಗಯ್ಯನವರ ತಂದೆ ಬಡ ಕೃಷಿಕರು. ಬಿಡುವಿನ ವೇಳೆಯಲ್ಲಿ ಪಂಚಾಂಗ ಓದುತ್ತಾ, ಮದುವೆ ಮಾಡಿಸುತ್ತಾ ದುಡಿಮೆಗೊಂದು ದಾರಿ ಹುಡುಕಿಕೊಂಡಿದ್ದರು. ಬಡವರಿಗೆ ಮಕ್ಕಳು ಹೆಚ್ಚು ಎನ್ನುವಂತೆ, ವೀರಸಂಗಯ್ಯನವರ ಪೋಷಕರಿಗೂ ಮನೆ ತುಂಬಾ ಮಕ್ಕಳು. ಮೂರು ಹೆಣ್ಣು, ಏಳು ಗಂಡು. ಕೂತು ಉಣ್ಣುವವರೆ ಎಲ್ಲ, ದುಡಿಯುವವರಿಲ್ಲ. ಜೊತೆಗೆ ಬಾವಿ ಕೊರೆಸಲು ಮಾಡಿದ ಮೂರೂವರೆ ಸಾವಿರ ಸಾಲ, ಬೆಟ್ಟದಂತೆ ಬೆಳೆದು ಸವಾಲಾಗಿತ್ತು. ‘‘1980ರಲ್ಲಿ ಎಸೆಸೆಲ್ಸಿ ಓದುತ್ತಿದ್ದೆ. ಹಾಸ್ಟೆಲ್ನಲ್ಲಿದ್ದೆ. ಅನ್ನ ಕಂಡವನೇ ಅಲ್ಲ. ಒಂದ್ಸಲ, ಹತ್ತಿರದ ಮಠದಲ್ಲಿ ಅಡ್ಡಪಲ್ಲಕ್ಕಿ ಉತ್ಸವ, ಅನ್ನ ದಾಸೋಹವಿದೆ ಎಂಬ ಸುದ್ದಿ ಸಿಕ್ಕಿತು. ಅನ್ನ ಉಣ್ಣಬೇಕೆಂಬ ಆಸೆಯಿಂದ ಹದಿನೈದು ಹುಡುಗರ ತಂಡ ಕಟ್ಟಿಕೊಂಡು, ಇಪ್ಪತ್ನಾಲ್ಕು ಕಿಲೋಮೀಟರ್ ದೂರ ನಡೆದುಕೊಂಡೇ ಹೋಗಿದ್ದೆ. ಊಟದ ಸಮಯಕ್ಕೇ ಹೋದೆವು. ಆದರೆ ಮಠದವರು ನಮ್ಮನ್ನು ನೋಡಿ, ಎಲೆ ಎತ್ತುವ ಕೆಲಸಕ್ಕೆ ಹಚ್ಚಿದರು. ದಾಸೋಹವೆಲ್ಲ ಮುಗಿದು ಕೊನೆಯ ಪಂಕ್ತಿಗೆ ಊಟಕ್ಕೆ ಕೂತಾಗ, ಎಲೆಯ ಮೇಲೆ ಬಿಳಿ ಅನ್ನ, ಇನ್ನೇನು ಕೈ ಹಾಕಬೇಕು ಎನ್ನುವಷ್ಟರಲ್ಲಿ ಭಾರೀ ಬಿರುಗಾಳಿ, ಮಣ್ಣು ಬಂದು ಎಲೆ ಮೇಲೆ ಬಿತ್ತು, ಬಾಯಿಗೇ ಬಿದ್ದಂತಾಯಿತು’’ ಎಂದ ವೀರಸಂಗಯ್ಯನವರು ಅನ್ನದ-ಹಸಿವಿನ ಮಹತ್ವವನ್ನು ವಿವರಿಸುತ್ತಾ, ಮೂಢನಂಬಿಕೆ, ಜಾತ್ಯತೀತತೆ, ತುರ್ತು ಪರಿಸ್ಥಿತಿ, ಭೂಸುಧಾರಣೆ ಕಾಯ್ದೆ ಬಗ್ಗೆ ಅರಿವು ಮೂಡಿಸಿದ ಮಾಸ್ತರನ್ನು ನೆನೆದರು. ವೀರಸಂಗಯ್ಯನವರ ತಂದೆ ಊರಿನ ಧಣಿಗಳಾದ ಶೆಟ್ಟರ ನಲವತ್ತು ಎಕರೆ ಜಮೀನನ್ನು ಗೇಣಿಗೆ ಪಡೆದು ಕೃಷಿ ಮಾಡುತ್ತಿದ್ದರು. ಹೀಗೆ ಹದಿಮೂರು ವರ್ಷ ಮಾಡಿದ ಗೇಣಿಯಿಂದ, ಶೆಟ್ಟರಿಂದ ಒಂದೂವರೆ ಲಕ್ಷ ರೂಪಾಯಿ ಬಾಕಿ ಬರುವುದಿತ್ತು. ‘‘ಒಂದು ದಿನ ನಮ್ಮಪ್ಪಹೋಗಿ ಶೆಟ್ಟರಿಗೆ ಕೇಳಿದ, ‘‘ನಾನ್ಯಾವ ಬಾಕಿನೂ ಕೊಡಾಂಗಿಲ್ರಿ, ನೀವಾ ಕೊಡಬೇಕ್ರಿ’’ ಅಂದರು. ಅಲ್ಲಿಂದ ಬಂದ ನಮ್ಮಪ್ಪಮಕ್ಕಂಡೋನು ಮೇಲೇಳಲಿಲ್ಲ. ನಾನಾಗ ಪಿಯುಸಿ ಓದುತ್ತಿದ್ದೆ, ಗೆಳೆಯರನ್ನು ಕಟ್ಟಿಕೊಂಡು ಎಸ್ಎಫ್ಐ ಸಂಘಟನೆ ಶುರು ಮಾಡಿದ್ದೆ. ವರ್ಗ ಸಂಘರ್ಷ, ಮಾರ್ಕ್ಸ್ವಾದದ ಪರಿಚಯವಾಗಿತ್ತು. ಪಂಚಾಯ್ತಿ ಸೇರಿತು. ಇಡೀ ಊರು ನಮ್ಮ ಪರವಾಗಿತ್ತು. ಕೊನೆಗೆ ಒಂದಷ್ಟು ದುಡ್ಡು ಕೊಡಲು ಶೆಟ್ಟರು ಒಪ್ಪಿಕೊಂಡರು. ಜಮೀನು ನಮ್ಮದಾಯಿತು. ನಾನು ಮನೆ ಬಿಟ್ಟೆ. ಕರ್ನಾಟಕ ಪ್ರಾಂತ ರೈತ ಸಂಘ ಕಟ್ಟಿ ನೂರಾರು ಗ್ರಾಮಗಳನ್ನು ಸುತ್ತಾಡಿ, ರೈತರನ್ನು ಸಂಘಟಿಸಿದೆ. 17 ವರ್ಷ ಮನೆಯಿಂದ ದೂರವಿದ್ದು ಸಂಘಟನೆಗಾಗಿ ದುಡಿದೆ. 1986-87ರಲ್ಲಿ ಭೀಕರ ಬರಗಾಲ. ಕೂಲಿಗಾಗಿ ಕಾಳು ಯೋಜನೆಗಾಗಿ ಐತಿಹಾಸಿಕ ಹೋರಾಟ ರೂಪಿಸಿದೆ. ಈ ನಡುವೆ ಸಿಪಿಎಂ ಪಕ್ಷದ ಕಾರ್ಯದರ್ಶಿ, ಅಧ್ಯಕ್ಷನಾದೆ. 1994ರಲ್ಲಿ ಕೂಡ್ಲಿಗೆ ಕ್ಷೇತ್ರದಿಂದ ಚುನಾವಣೆಗೂ ಸ್ಪರ್ಧಿಸಿದೆ. 13 ಸಾವಿರ ಮತಗಳನ್ನು ಪಡೆದು ಸೋತೆ. ಆನಂತರ ಆರೋಗ್ಯ ಹದಗೆಟ್ಟು ಸಿಪಿಎಂ ಬಿಟ್ಟು, ಮನೆ ಸೇರಿದೆ. ಸುಮ್ಮನೆ ಕೂರಲಾಗದೆ, 1997-98ರಲ್ಲಿ ಮತ್ತೆ ಪ್ರಾಂತ ರೈತ ಸಂಘ ಸಂಘಟಿಸಿ, ಬೃಹತ್ ಸಮಾವೇಶ ಆಯೋಜಿಸಿದೆ. ಪ್ರಧಾನ ಭಾಷಣಕಾರರನ್ನಾಗಿ ಪ್ರೊ.ನಂಜುಂಡಸ್ವಾಮಿಯವರನ್ನು ಕರೆಸಿದೆ. ಅದೇ ನನ್ನ-ಪ್ರೊಫೆಸರ್ ಅವರ ಮೊದಲ ಭೇಟಿ. ಅಲ್ಲಿಂದ ಅವರ ಹಿಂಬಾಲಕನಾದೆ’’ ಎಂದು ತಮ್ಮ ವೃತ್ತಾಂತವನ್ನೆಲ್ಲ ಬಿಚ್ಚಿಟ್ಟರು. ಇದೆಲ್ಲದಕ್ಕಿಂತಲೂ ಮುಖ್ಯವಾಗಿ, ವೀರಸಂಗಯ್ಯನವರು ರೂಪಿಸಿದ ಐತಿಹಾಸಿಕ ಹೋರಾಟವೆಂದರೆ, ಕೊಪ್ಪಳ ಜಿಲ್ಲೆಯ ರೈತರು ವಿದ್ಯುತ್ ಮೀಟರ್ ಕಿತ್ತು ಸರಕಾರಕ್ಕೆ ಹಿಂದಿರುಗಿಸಿದ ಆಂದೋಲನ. 2004ರಲ್ಲಿ ರಾಜ್ಯದಲ್ಲಿ ಎಸ್.ಎಂ.ಕೃಷ್ಣರ ಸರಕಾರವಿತ್ತು. ವಿ.ಎಸ್.ಕೌಜಲಗಿ ಕೃಷಿ ಮಂತ್ರಿಯಾಗಿದ್ದರು. ಕೃಷ್ಣ-ಕೌಜಲಗಿ, ಇಬ್ಬರೂ ಕೃಷಿಕ ಕುಟುಂಬದಿಂದ ಬಂದವರು. ರೈತರ ಕಷ್ಟ ಕೋಟಲೆಗಳನ್ನು ಅರಿತವರು. ಅಧಿಕಾರಕ್ಕೇರುತ್ತಿದ್ದಂತೆ ರೈತವಿರೋಧಿಗಳಾಗಿದ್ದರು. ಅವರ ವಿರುದ್ಧ ರೈತರನ್ನು ಸಂಘಟಿಸಿ ರೂಪಿಸಿದ ವಿದ್ಯುತ್ ಮೀಟರ್ ಆಂದೋಲನ ರಾಜ್ಯದಲ್ಲಿ ಸಂಚಲನ ಉಂಟುಮಾಡಿತ್ತು. 2002-03ರಲ್ಲಿ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿಯಾಗಿದ್ದೆ. ಪ್ರೊಫೆಸರ್ ನನಗೆ ಕೊಪ್ಪಳ-ಬಳ್ಳಾರಿ ಜಿಲ್ಲೆಗಳ ಉಸ್ತುವಾರಿ ವಹಿಸಿದ್ದರು. ಸಮಾನ ವಿದ್ಯುತ್ ನೀತಿ ರೂಪಿಸಬೇಕು, ಸಂಕಷ್ಟದಲ್ಲಿರುವ ರೈತರ ವಿದ್ಯುತ್ ಬಿಲ್ ಮನ್ನಾ ಮಾಡಬೇಕು, ಮಾಡದಿದ್ದರೆ ಮೀಟರ್ ವಾಪಸ್ ಮಾಡಬೇಕು ಎಂದು ಪ್ರೊಫೆಸರ್ ಕರೆ ಕೊಟ್ಟರು. ಕೊಪ್ಪಳದಲ್ಲಿ ಒಂದೇ ದಿನ 25 ಸಾವಿರ ವಿದ್ಯುತ್ ಮೀಟರ್ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಬಿದ್ದಿದ್ದವು. ರೈತರ ಈ ಹೊಸ ಸವಾಲಿಗೆ ಸರಕಾರ ಬೆಚ್ಚಿಬಿದ್ದಿತ್ತು. ಚಳವಳಿ ದಿನದಿಂದ ದಿನಕ್ಕೆ ಕಾವು ಪಡೆದು ಸರಕಾರಕ್ಕೆ ಸವಾಲಾಯಿತು. ಜುಲೈ 27, 2004ರಂದು ಕೊಪ್ಪಳದಲ್ಲಿ ರೈತರ ಬೃಹತ್ ಸಮಾವೇಶ ಆಯೋಜಿಸಿದ್ದೆವು. ಹಿಂದಿನ ರಾತ್ರಿ ಮಠದಲ್ಲಿ ಸೇರಿ ನಾಳೆಯ ಕಾರ್ಯಕ್ರಮದ ಬಗ್ಗೆ ರೂಪುರೇಷೆ ಸಿದ್ಧಗೊಳಿಸುತ್ತಿದ್ದೆವು. ಬೆಳಗಿನ ಜಾವ ಐದೂವರೆಗೆ ಮಲಗಿದ್ದ ನಮ್ಮ ಮೇಲೆ, ಹೊರ ರಾಜ್ಯದ ಒಂದೂವರೆ ಸಾವಿರ ಪೊಲೀಸರು ದಾಳಿ ಮಾಡಿ ಸಿಕ್ಕಸಿಕ್ಕವರಿಗೆ ಥಳಿಸಿದ್ದರು. ಜನ ದಿಕ್ಕಾಪಾಲಾಗಿ ಓಡಿದ್ದರು. ಹಲವರು ಊರು ಬಿಟ್ಟಿದ್ದರು. ಕೊನೆಗೆ ಸಿಕ್ಕ 89 ಜನರನ್ನು ಹಿಡಿದು ಬಸ್ಸಿಗೆ ತುಂಬಿದರು. ನನ್ನನ್ನು ಮತ್ತು ಎತ್ತಿನಟ್ಟಿ ಪ್ರಭುವನ್ನು ಹೆಸರಿಡಿದು ಕರೆದು, ಕೊಪ್ಪಳದ ಡಿಆರ್ ಮೈದಾನಕ್ಕೆ ಎಳೆದೊಯ್ದು ನಾಯಿಗಳಿಗೆ ಬಡಿದಂತೆ ಬಡಿದರು. ಮುಖಮೂತಿ ನೋಡದೆ ಚಚ್ಚಿದರು. ನಾವು ಪ್ರಜ್ಞೆ ತಪ್ಪಿದ ನಂತರ ತಂದು ಬಸ್ಸಿಗೆ ಹಾಕಿದರು. ನಾನು ಹೆಣವಾಗಿದ್ದೆ. ಪ್ರಭು ಒಂದು ಕಡೆಯ ಕುಂಡೆ ಕಳೆದುಕೊಂಡಿದ್ದ. 13 ದಿನ ಗುಲ್ಬರ್ಗಾ ಜೈಲುವಾಸ. ನೋಡಲು ಬಂದ ಪ್ರೊಫೆಸರ್, ನಮ್ಮನ್ನು ಕಂಡು ಬಿಕ್ಕಿ ಬಿಕ್ಕಿ ಅತ್ತರು. ಪೊಲೀಸ್ನೋರಿಗೆ ಒಂದು ಗತಿ ಕಾಣಿಸುತ್ತೇವೆಂದು ಕೂಗಾಡಿದಾಗ, ಹಿಂಸೆಗೆ ಹಿಂಸೆ ಉತ್ತರವಲ್ಲ, ಅವರೂ ನಮ್ಮವರೇ, ಕೂಲಿಯಾಳುಗಳಷ್ಟೆ ಎಂದು ಪ್ರೊಫೆಸರ್ ಸಮಾಧಾನಿಸಿದರು.
‘‘2004ರ ಆಗಸ್ಟ್ 14ರಂದು ಕೊಪ್ಪಳದಲ್ಲಿ ಬೃಹತ್ ರೈತ ಸಭೆ. ಆ ಸಭೆಗೆ ಬಂದ ಪ್ರೊಫೆಸರ್ ನನ್ನನ್ನು ನೋಡಿ, ‘ಕಿಡ್ನಿಗೆ ಏಟಾಗಿರುವಂತಿದೆ ತೋರಿಸಿಕೋ’ ಎಂದರು. ಉಡಾಫೆ ಮತ್ತು ಆರ್ಥಿಕ ಸ್ಥಿತಿಯಿಂದಾಗಿ ನೋವಿನ ಮಾತ್ರೆ ತಿಂದು ಸುಮ್ಮನಾದೆ. ಅವತ್ತಿನ ಆ ಬೃಹತ್ ಸಾರ್ವಜನಿಕ ಸಭೆಯೇ ಪ್ರೊಫೆಸರ್ ಅವರ ಅಂತಿಮ ಭಾಷಣವಾಗಿತ್ತು. ಕ್ಯಾನ್ಸರ್ ಉಲ್ಬಣಿಸಿತ್ತು. ಅಲ್ಲಿಂದ ನೇರವಾಗಿ ಆಸ್ಪತ್ರೆ ಸೇರಿದರು, ಸಿಡಿಗುಂಡಿನ ಸದ್ದು ನಿಂತಿತು. ನಾವು ಬೀದಿಗೆ ಬಿದ್ದೆವು’’ ಎನ್ನುವ ವೀರಸಂಗಯ್ಯನವರು ಅಕ್ಷರಶಃ ಅನಾಥರಾಗಿದ್ದರು. ಪ್ರೊಫೆಸರ್ ಕಟ್ಟಿದ ರೈತ ಸಂಘ ಹೋಳಾಗಿ, ಹೆಸರು ಕೆಡಿಸಿಕೊಂಡು, ತನ್ನ ಶಕ್ತಿ ಕಳೆದುಕೊಂಡಿತ್ತು. ಒಂದಷ್ಟು ಜನ ಸೇರಿ, ಪುಟ್ಟಣ್ಣಯ್ಯ ಮತ್ತು ಕೋಡಿಹಳ್ಳಿ ಚಂದ್ರಶೇಖರ್ರನ್ನು ಒಂದು ಮಾಡಿದರು. ಅದೇ ಸಮಯಕ್ಕೆ ವೀರಸಂಗಯ್ಯನವರು, ಪೊಲೀಸರ ಹೊಡೆತದಿಂದ ಕಿಡ್ನಿಗೆ ಪೆಟ್ಟಾಗಿರುವುದು ತಪಾಸಣೆಯಿಂದ ತಿಳಿದು, ಆಸ್ಪತ್ರೆ ಸೇರಿದ್ದರು. ಇತ್ತ ಪುಟ್ಟಣ್ಣಯ್ಯ-ಕೋಡಿಹಳ್ಳಿ, ವೀರಸಂಗಯ್ಯ ನಮ್ಮ ಗುಂಪು ತೊರೆದು ಹೋಗಿದ್ದಾರೆಂದು ಭಾವಿಸಿ, ವಿಚಾರಿಸಲೂ ಹೋಗದೆ, ಸುಮ್ಮನಾದರು. ಐದು ಎಕರೆ ಹೊಲ ಮಾರಿ, ಅಣ್ಣನ ಒಂದು ಕಿಡ್ನಿ ಪಡೆದು, ಪೆರಿಟೋರ್ನಿಯಲ್ ಡಯಾಲಿಸಿಸ್ಗೆ ಒಳಗಾಗಿ, ವಾರಕ್ಕೆ ಎರಡು ಸಲ ಡಯಾಲಿಸಿಸ್ ಮಾಡಿಸಿಕೊಂಡು, ಆಸ್ಪತ್ರೆ-ಚಿಕಿತ್ಸೆ-ಗುಳಿಗೆಯ ಲೋಕದಲ್ಲಿ ಹತ್ತು ವರ್ಷ ನೂಕಿದರು. ‘‘ಇಲ್ಲಿಗೆ ಸುಮಾರು 50 ಲಕ್ಷ ಖರ್ಚಾಗಿದೆ. ಅವರಿವರು ಅಲ್ಪಧನಸಹಾಯ ಮಾಡಿದ್ದಾರೆ. ಈ ಪೆರಿಟೋರ್ನಿಯಲ್ ಡಯಾಲಿಸಿಸ್ ಇದೆಯಲ್ಲ, ಇದಕ್ಕೆ ಜೀವನಪರ್ಯಂತ ಗುಳಿಗೆ ನುಂಗುತ್ತಿರಬೇಕು. ಈ ಗುಳಿಗೆ ಎಲ್ಲೆಂದರಲ್ಲಿ ಸಿಗುವುದಿಲ್ಲ, ಕಡಿಮೆಯೂ ಅಲ್ಲ. ಈಗ ನನ್ನಂತೆಯೇ ಕಿಡ್ನಿ ಕಳೆದುಕೊಂಡು ಪರಿತಪಿಸುತ್ತಿರುವ ಬಡವರನ್ನು ಸಂಪರ್ಕಿಸಿ ‘ಕಿಡ್ನಿ ಕ್ಷೇಮಾಭಿವೃದ್ಧಿ ಸಂಘ’ ಕಟ್ಟಿದ್ದೇನೆ. ನಮ್ಮ ಸಂಘದಲ್ಲೀಗ 275 ಜನ ಬಡ ರೋಗಿಗಳಿದ್ದಾರೆ. ಅವರ ಕಷ್ಟವನ್ನು ಗಣ್ಯರಿಗೆ ಮನವರಿಕೆ ಮಾಡಿಸಿದ್ದೇನೆ. ಸಮಸ್ಯೆಯ ಗಂಭೀರತೆ ಅರಿತ ಯು.ಟಿ.ಖಾದರ್ ಮತ್ತು ಸಿದ್ದರಾಮಯ್ಯನವರ ಸರಕಾರ ಬಡ ರೋಗಿಗಳಿಗೆ ಉಚಿತ ಗುಳಿಗೆಗಳನ್ನು ನೀಡುವ ಆದೇಶ ಹೊರಡಿಸಿದೆ. ನಾನೇ ಬಡವ ಅಂದುಕೊಂಡಿದ್ದೆ, ನನಗಿಂತ ನಿಕೃಷ್ಟ ಸ್ಥಿತಿಯಲ್ಲಿರುವ ಆ ಬಡ ರೋಗಿಗಳನ್ನು ನೋಡಿ, ನಾನೇ ವಾಸಿ ಎನಿಸಿದೆ. ಅವರಿಗಾಗಿನ ಹೋರಾಟವೇ ನನ್ನನ್ನು ಬದುಕಿಸಿದೆ’’ ಎನ್ನುತ್ತಾರೆ ವೀರಸಂಯ್ಯ.
ಸಾಮಾಜಿಕ ಬದಲಾವಣೆಗೆ ಚಳವಳಿಗಳ, ಹೋರಾಟಗಾರರ ಕೊಡುಗೆ ಅಪಾರವಾದದು. ಅದಕ್ಕೊಂದು ಬಹಳ ದೊಡ್ಡ ಇತಿಹಾಸವೇ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ಚಳವಳಿಗಳು, ಹೋರಾಟಗಳು ಅರ್ಥ ಕಳೆದುಕೊಂಡಿವೆ. ಹೋರಾಟಗಾರರು ವ್ಯವಸ್ಥೆಯೊಂದಿಗೆ ರಾಜಿಯಾಗಿ ರಾಜರಂತಾಗಿದ್ದಾರೆ. ಇಂತಹ ವಿಷಮ ಪರಿಸ್ಥಿತಿಯಲ್ಲೂ, ಹೋರಾಟ ಬದುಕನ್ನೇ ಬಲಿ ತೆಗೆದುಕೊಂಡರೂ; ಮಾನಸಿಕವಾಗಿ, ಆರ್ಥಿಕವಾಗಿ, ದೈಹಿಕವಾಗಿ ಜರ್ಜರಿತರಾದರೂ; ಅಲ್ಲೇ ಮರುಹುಟ್ಟು ಪಡೆದು ಮತ್ತೊಂದಷ್ಟು ಜನರಿಗೆ ಮಾದರಿಯಾದವರು-ಈ ನಮ್ಮ ಹೀರೋ ವೀರಸಂಗಯ್ಯನವರು. ಕಷ್ಟದಲ್ಲಿರುವ ವೀರಸಂಗಯ್ಯನವರನ್ನು ಉಳಿಸಿಕೊಳ್ಳಲಿಕ್ಕಾಗಿ, ಸಾಧ್ಯವಾದರೆ ಸಹಕರಿಸಿ. ಬ್ಯಾಂಕ್ ಖಾತೆ ವಿವರ: J.M.Veerasagaiah, SBI, Gandinagara branch, Bangalore, A/c No. 31226667581, IFS CODE: SBINO 013283, M: 9342658829.